ರಾಬಿನ್, ರುಕ್ಸಾನಾ ಮತ್ತು ರಚನಾ
ವಿದೇಶ ವಾಸಿ
ಕಿರಣ್ ಉಪಾಧ್ಯಾಯ, ಬಹ್ರೇನ್
@.
ಆತನ ಹೆಸರು ವಿಜಯಂತ್ ಥಾಪರ್. ತನ್ನ ವಲಯದಲ್ಲಿ ರಾಬಿನ್ ಹೂಡ್ ಎಂದೇ ಖ್ಯಾತನಾಗಿದ್ದ ಆತ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದ. ಸೇನೆಯರಜಪೂತಾನಾ ರೈಫಲ್ಸ್ ರೆಜಿಮೆಂಟ್‌ನ ಕಟ್ಟಾಳು ರಾಬಿನ್. ಕಾರ್ಯನಿಮಿತ್ತ ಆತನನ್ನು ಕಾಶ್ಮೀರದ ಕಣಿವೆಯಲ್ಲಿ ನಿಯೋಜಿಸಲಾಗಿತ್ತು.
ಕಣಿವೆ ರಾಜ್ಯದಲ್ಲಿ ಎದ್ದಿದ್ದ ಬಂಡಾಯದ ಶಮನಕ್ಕೆ ನಿಯೋಜಿಸಿದ ತುಕಡಿಯಲ್ಲಿ ಆತ ಕಾರ್ಯನಿರ್ವಹಿಸುತ್ತಿದ್ದ. ಪ್ರತಿನಿತ್ಯ ಆತ ತನ್ನ ಮನೆಯಿಂದ ಕಾರ್ಯ ಕ್ಷೇತ್ರಕ್ಕೆ ಹೋಗಿ ಬರುತ್ತಿದ್ದಾಗ ಆತನನ್ನು ಸೆಳೆದದ್ದು, ಒಂದು ಮೂರು ವರ್ಷದ ಹೆಣ್ಣುಮಗು. ಅವಳ ಹೆಸರು ರುಕ್ಸಾನಾ. ಆಕೆ ಕುಪ್ವಾರಾ ಪ್ರದೇಶದ ಕಾಂಡಿ ಗ್ರಾಮದ ಒಂದುಪುಟ್ಟ ಗುಡಿಸಿಲಿನ ಮುಂದೆ ನಿಂತು, ಪ್ರತಿನಿತ್ಯ ಮಿಲಿಟರಿ ಬೆಟಾಲಿಯನ್ ಓಡಾಡುವುದನ್ನು ನೋಡುತ್ತಿದ್ದಳು. ಅವಳು ಹೇಗೆ ಸೇನೆಯ ತುಕಡಿಯನ್ನು ಗಮನಿಸು ತ್ತಿದ್ದಳೋ, ಹಾಗೆಯೇ ತುಕಡಿಯ ಸದಸ್ಯ ರಾಬಿನ್ ಕೂಡಾ ಆಕೆಯನ್ನು ಗಮನಿಸುತ್ತಿದ್ದ.
ಆಕೆಯ ಮುದ್ದುಮುಖದ ದೊಡ್ಡ ಕಣ್ಣುಗಳಲ್ಲಿ ಒಂದು ರೀತಿಯ ಭಯ ಆವರಿಸಿದ್ದನ್ನು ರಾಬಿನ್ ಗಮನಿಸಿದ್ದ. ತನ್ನ ಸಹೋದ್ಯೋಗಿಗಳಿಂದ ಆಕೆಯ ವಿಷಯ ತಿಳಿದ ರಾಬಿನ್ ಅಂದು ತೀರಾ ಬೇಸರಕ್ಕೆ ಒಳಗಾಗಿದ್ದ. ವೃತ್ತಿಯಲ್ಲಿ ಬಡಗಿಯಾಗಿದ್ದ ರುಕ್ಸಾನಾಳ ತಂದೆಯನ್ನು ಭಾರತೀಯ ಸೇನೆಗೆ ಮಾಹಿತಿ ನೀಡುತ್ತಿದ್ದಾನೆ ಎಂಬ ಅನುಮಾನ ದಿಂದ ಉಗ್ರಗಾಮಿಗಳು ಕೊಂದು ಹಾಕಿದ್ದರು. ಒಂದು ವರ್ಷದ ಹಿಂದೆ, ಅಂದರೆ ತನ್ನ ಎರಡನೆಯ ವಯಸ್ಸಿನಲ್ಲಿ ತನ್ನ ಕಣ್ಣೆದುರಿನಲ್ಲಿಯೇ ತಂದೆಯ ಹತ್ಯೆಯನ್ನು ಕಂಡ ರುಕ್ಸಾನಾಗೆ ಅಂದಿನಿಂದ ಮಾತು ನಿಂತುಹೋಗಿತ್ತು. ಇದನ್ನು ತಿಳಿದ ಮೃದುಹೃದಯಿ ರಾಬಿನ್ ಕರಗಿ ಹೋಗಿದ್ದ.
ರಾಬಿನ್ ಪ್ರತಿನಿತ್ಯ ಕೆಲಸಕ್ಕೆ ಹೋಗುವಾಗ ಆಕೆಯನ್ನು ಕಂಡು, ನಕ್ಕು, ಕೈ ಆಡಿಸುತ್ತಿದ್ದ. ಕ್ರಮೇಣ ಆಕೆಯೂ ಅವನನ್ನು ನೋಡಿ ನಗಲು ಆರಂಭಿಸಿದಳು.   ಸಮಯ ಸಿಕ್ಕಾಗೆಲ್ಲ ಆತ ಆಕೆಗೆ ತನ್ನಜೇಬಿನಲ್ಲಿ ಸದಾ ಕೊಂಡೊ ಯ್ಯುತ್ತಿದ್ದ ಚಾಕಲೇಟ್ ನೀಡುತ್ತಿದ್ದ. ಸಂಸಾರ ನಿರ್ವಹಣೆಗೆಂದು ಪತಿಯನ್ನು ಕಳೆದುಕೊಂಡ ರುಕ್ಸಾನಾಳ ತಾಯಿಗೆ ಪ್ರತಿ ತಿಂಗಳು ಸ್ವಲ್ಪ ಹಣ ನೀಡುತ್ತಿದ್ದ. ರಾಬಿನ್ ಮತ್ತು ರುಕ್ಸಾನಾ ನಡುವೆ ಸ್ನೇಹ ಬೇರೂರಿತ್ತು, ವಿಶ್ವಾಸ ಬೆಳೆದಿತ್ತು, ಬಾಂಧವ್ಯ ಬೆಸೆದಿತ್ತು. ಆಶ್ಚರ್ಯ ವೆಂಬಂತೆ ಮಾತು ಕಳೆದುಕೊಂಡ ಮಗು ಪುನಃ ಮಾತು ಆರಂಭಿಸಿತ್ತು. ಈ ಎಲ್ಲ ವಿಷಯವನ್ನೂ ತನ್ನ ತಾಯಿಗೆ ತಿಳಿಸಿದ್ದ ರಾಬಿನ್, ಮೂರು ವರ್ಷದ ಮಗುವಿಗೆ ಕೆಲವು ಸಲ್ವಾರ್ ಕಮೀಜ್ ಹೊಲಿಸಿ ಇಡಲು ಹೇಳಿದ್ದ.
ತಾನು ರಜೆಗೆ ಬಂದಾಗ ಅದು ಸಿದ್ಧವಾಗಿರಬೇಕು, ಹಿಂತಿರುಗಿ ಬಂದ ನಂತರ ರುಕ್ಸಾನಾಗೆ ಅದನ್ನು ನನ್ನ ಕಡೆಯಿಂದ ಉಡುಗೊರೆಯಾಗಿ ನೀಡುತ್ತೇನೆಂದು ರಾಬಿನ್ ತನ್ನ ತಾಯಿಗೆ ಹೇಳಿದ್ದ. ರಾಬಿನ್‌ನ ಅಮ್ಮನೂ ಅದಕ್ಕೆ ಸಂತೋಷದಿಂದ ಒಪ್ಪಿದ್ದರು. ಆತ ತನ್ನ ತಂದೆಗೆ ಒಂದು ಪತ್ರ ಬರೆದಿದ್ದ. ಒಂದು ವೇಳೆ ನನಗೆ ಏನಾದರೂ ಆದರೆ, ಆ ಮಗುವಿಗೆ ಸಹಾಯ ಮಾಡುವಂತೆ, ಅವಳೇನಾದರೂ ಸಂಕಷ್ಟಕ್ಕೆ ಸಿಲುಕಿದರೆ ಆಶ್ರಯ ನೀಡುವಂತೆ ಆ ಪತ್ರದಲ್ಲಿ ಕೇಳಿಕೊಂಡಿದ್ದ. ದುರ್ದೈವ ವಶಾತ್ ಅದೇ ಅವನು ತನ್ನ ತಂದೆ ತಾಯಿಗೆ ಬರೆದ ಕೊನೆಯ ಪತ್ರವಾಯಿತು.
ಆ ಪತ್ರ ಬರೆದ ನಂತರ ಆತ ಕಾರ್ಗಿಲ್ ಯುದ್ಧ ಭೂಮಿಗೆ ತೆರಳಿದ್ದ. ಅದಕ್ಕಿಂತ ಕೆಟ್ಟಸುದ್ದಿಯೆಂದರೆ ಯುದ್ಧದಲ್ಲಿ ಆತ ವೀರ ಮರಣವನ್ನಪ್ಪಿದ್ದ. ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಗಡಿಯಲ್ಲಿರುವ ಸತ್ಲೆಜ್ ನದಿ ತೀರದ ನಯಾನಂಗಲ್ ಊರಿನ ಸೇನಾನಿಯೊಬ್ಬ ಅಂದು ಕಾರ್ಗಿಲ್ ನಲ್ಲಿ ಹೆಣವಾಗಿಬಿದ್ದಿದ್ದ. ಅಂದು ದೇಶ ಒಬ್ಬ ವೀರಸೇನಾನಿಯನ್ನು ಕಳೆದು ಕೊಂಡದ್ದಷ್ಟೇ ಅಲ್ಲ, ರುಕ್ಸಾನಾ ಎಂಬ ಕಂದ ಮತ್ತೊಮ್ಮೆ ಅನಾಥವಾಯಿತು. ಆಗ ರಾಬಿನ್ ಯಾನೆ ವಿಜಯಂತ್ ಥಾಪರ್‌ಗೆ ಕೇವಲ ಇಪ್ಪತ್ತೆರಡು ವರ್ಷ.
ಮಗನ ಅಗಲು ವಿಕೆಯ ನಂತರ ರುಕ್ಸಾನಾಳನ್ನು ಭೇಟಿಯಾಗಲು ಹೋದ ಪಾಲಕರಿಗೆ ಆಘಾತ ಕಾದಿತ್ತು. ರುಕ್ಸಾನಾ ಮನೆಯವರು ತಾವಿದ್ದ ಸ್ಥಳವನ್ನು ಬಿಟ್ಟು ಬೇರೆ ಕಡೆ ಹೋಗಿದ್ದರು. ಅವರನ್ನು ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಮಗನ ಅಂತಿಮ ಆಸೆ ಪೂರೈಸಲು ಹೆತ್ತವರು ಪಣ ತೊಟ್ಟಿದ್ದರು. ರುಕ್ಸಾನಾಳ ಅದೃಷ್ಟವೋ, ರಾಬಿನ್ ಮಾಡಿದ ಪುಣ್ಯವೋ, ಪಾಲಕರು ರುಕ್ಸಾನಾ ಇರುವಿಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಮಗನ ಅಭಿಲಾಷೆಯಂತೆ ಆಕೆಯ ಓದಿಗೆ, ಏಳ್ಗೆಗೆ ಆಧಾರ ಸ್ತಂಭವಾಗಿ ನಿಂತರು. ರುಕ್ಸಾನಾಗೆ ಇಪ್ಪತ್ತೆರಡು ವರ್ಷ. ರುಕ್ಸಾನಾ ಈಗ ಕಾಲೇಜು ವಿದ್ಯಾರ್ಥಿನಿ. ಅವಳಿಗೆ ಬೇಕಾದ ಪುಸ್ತಕ ದಿಂದ ಹಿಡಿದು ಕಂಪ್ಯೂಟರ್‌ವರೆಗೆ ಥಾಪರ್‌ದಂಪತಿಗಳು ಒದಗಿಸಿಕೊಟ್ಟಿದ್ದಾರೆ. ಈ ಸಹಾಯ ಇಂದಿಗೂ ನಿರಂತರ ಮುಂದುವರಿದಿದೆ.
ರುಕ್ಸಾನಾ ಮದುವೆಯ ಸಂದರ್ಭದಲ್ಲಿ ಉಡುಗೊರೆ ನೀಡಲು ದಂಪತಿಗಳು ಸಿದ್ಧವಾಗಿದ್ದಾರೆ. ಅದು ಮರಣೋತ್ತರ ವೀರ ಚಕ್ರ ಪ್ರಶಸ್ತಿ ಪಡೆದ ರಾಬಿನ್ ಕಡೆಯಿಂದ ರುಕ್ಸಾನಾಗೆ ಕೊಡಲಾಗುವ ಅತ್ಯುತ್ತಮ ಉಡುಗೊರೆಯಾಗಲಿದೆ ಎನ್ನುತ್ತಾರೆ ಮೇಜರ್ ವೀರೇಂದ್ರ ಥಾಪರ್. ಸದಾ ಜಯಶಾಲಿಯಾಗಿರುವವ ಅಥವಾ ಕೊನೆತನಕವೂ ವಿಜಯಿಯಾಗಿರುವವ ಎಂಬ ಅರ್ಥ ಕೊಡುವ ಕಾರಣಕ್ಕೆ ಮೇಜರ್ ವೀರೇಂದ್ರ ಥಾಪರ್ ತಮ್ಮ ಮಗನಿಗೆ ವಿಜಯಂತ್ ಎಂದು ಹೆಸರಿಟ್ಟಿದ್ದರು. ಮಗು ಹುಟ್ಟಿ ಒಂದು ತಿಂಗಳಾದರೂ ಥಾಪರ್ ದಂಪತಿಗಳು ತಮ್ಮ ಮಗನಿಗೆ ಹೆಸರಿಟ್ಟಿರಲಿಲ್ಲ. ಕಾರಣ, ಮಗ ಹುಟ್ಟಿದ ಕೆಲವೇ ದಿನಗಳಲ್ಲಿ ಮೇಜರ್ ಥಾಪರ್ ಕಾರ್ಯ ನಿಮಿತ್ತ ಪಠಾಣ್ ಕೋಟ್‌ಗೆ ಹೊರಟು ಬರಬೇಕಾಯಿತು. ಥಾಪರ್ ಒಂದು ದಿನ ಪಠಾಣ್ ಕೋಟ್‌ನ ಕಂಟೋನ್ಮೆಂಟ್‌ನಲ್ಲಿ ಓಡಾಡುತ್ತಿರುವಾಗ ಅವರ ಕಣ್ಣಿಗೆ ಭಾರತದ ಸೇನೆಯ ವಿಜಯಂತ ಯುದ್ಧ ಟ್ಯಾಂಕ್‌ಗಳು ಕಣ್ಣಿಗೆ ಬಿದ್ದವು.
ಆ ಕ್ಷಣವೇ ಅವರ ಮನಸ್ಸಿನಲ್ಲಿ ತನ್ನ ಮಗನಿಗೆ ವಿಜಯಂತ್ ಎಂದು ಹೆಸರಿಟ್ಟರೆ ಹೇಗೆ ಎಂಬ ಆಲೋಚನೆ ಬಂತು. ಕೂಡಲೇ ಅವರು ತಮ ಪತ್ನಿಗೆ ಹೇಳಿದಾಗ ಆಕೆಗೂ ಆ ಹೆಸರು ಇಷ್ಟವಾಯಿತು.ಕೂಡಲೇ ನಾಮಕರಣ ಸಮಾರಂಭ ಮಾಡಿ ಮಗನಿಗೆ ಹೆಸರಿಟ್ಟದ್ದೂ ಆಯಿತು. ವಿಜಯಂತ್ ನಾಮಕರಣವಾದದ್ದು ಹೀಗೆ.ವಿಜಯಂತ್ ಮೊದಲಿನಿಂದಲೂ ಕರುಣಾ ಹೃದಯಿ. ಆತ ಆಗಿನ್ನೂ ಹೈಸ್ಕೂಲ್ ವಿದ್ಯಾರ್ಥಿ. ಸಣ್ಣ ಪುಟ್ಟ ಖರ್ಚಿ ಗೆಂದು ತಂದೆ ಆತನಿಗೆ ಪಾಕೆಟ್ ಮನಿ ಕೊಡುತ್ತಿದ್ದರು. ಒಮ್ಮೆ ಮನೆಯ ಮುಂದೆ ಬೇಡಲು ಬಂದ ಭಿಕ್ಷುಕನಿಗೆ ತನ್ನ ಕಿಸೆಯಲ್ಲಿದ್ದ ಆ ತಿಂಗಳ ಸಂಪೂರ್ಣ ಕೈ ಖರ್ಚಿಗೆಂದು ಕೊಟ್ಟಿದ್ದ ಐವತ್ತು ರುಪಾಯಿ ಯನ್ನೂ ಭಿಕ್ಷುಕನಿಗೆ ನೀಡಿದ್ದ ವಿಜಯಂತ್. ಕೇಳಲಾಗಿ, ಅದು ನೀವು ನನ್ನ ಖರ್ಚಿಗೆ ಎಂದು ಕೊಟ್ಟ ಮೇಲೆ ಅದು ನನ್ನದು ತಾನೆ? ನನ್ನ ದುಡ್ಡನ್ನು ನನಗೆ ಬೇಕಾದಂತೆ ಖರ್ಚು ಮಾಡುವ ಹಕ್ಕು ನನಗೆ ಇದೆಯಲ್ಲ.
ನಾನು ಬೇಡದಿದ್ದುದಕ್ಕೆ ಖರ್ಚು ಮಾಡಿಲ್ಲ. ಹೆಚ್ಚು ಹಣ ಬೇಕೆಂದಾಗಲೀ, ಪುನಃ ಕೈ ಖರ್ಚಿಗೆ ಕೊಡುವಂತೆಯಾಗಲಿ ನಿಮ್ಮನ್ನು ಕೇಳುವುದಿಲ್ಲ. ನೀವು ನಿಶ್ಚಿಂತ ರಾಗಿರಿ ಎಂದಿದ್ದ ಎನ್ನುವುದನ್ನು ಥಾಪರ್ ನೆನಪಿಸಿಕೊಳ್ಳುತ್ತಾರೆ. ತನ್ನ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ದೇಶಕ್ಕೋಸ್ಕರ ಹೋರಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದವ ಲೆಫ್ಟಿನೆಂಟಿ ವಿಜಯಂತ್ ಥಾಪರ್‌ನ ಹೆಮ್ಮೆಯ ತಂದೆ ನಾನು. ಚಿಕ್ಕ ಪ್ರಾಯದಲ್ಲೇ ನಮ್ಮನ್ನು ಅಗಲಿದ ಆತ ಇನ್ನೂ ಬದುಕ ಬೇಕಿತ್ತು. ಆತ ಭವ್ಯವಾದ ಬದುಕನ್ನು ಸಾಗಿಸ ಬೇಕಿತ್ತು ಎಂಬ ಆಸೆ ಇತರ ತಂದೆ ತಾಯಂದಿರಂತೆ ನಮ್ಮಲ್ಲೂ ಇತ್ತು. ಆತನ ಅಗಲುವಿಕೆ ನಮ್ಮ ಹೃದಯವನ್ನುಛಿದ್ರಗೊಳಿಸಿದೆ ಎನ್ನುವುದು ಸತ್ಯ. ಅದು ನಾವು ಅನುಭವಿಸುತ್ತಿರುವ ಭಯಾನಕ ನಷ್ಟ. ಆದರೆ ನಾನು ಕೇವಲ ತಂದೆಮಾತ್ರ ಅಲ್ಲ, ಒಬ್ಬ ಸೇನಾನಿಯೂ ಹೌದು. ಆ ನಿಟ್ಟಿನಲ್ಲಿ ನನ್ನ ಮಗನ ವಿಷಯದಲ್ಲಿ ನನಗೆ ಹೆಮ್ಮೆಯಿದೆ.
ಯುದ್ಧ ಭೂಮಿಯಲ್ಲಿ ಪ್ರಾಣತ್ಯಾಗ ಮಾಡುವುದಕ್ಕೆ ಸೌಭಾಗ್ಯಬೇಕು ಎಂದು ನಂಬಿದವನು ನಾನು. ಸೈನಿಕನ ಸಮವಸ್ತ್ರ ಧರಿಸಿದವರೆಲ್ಲರೂ ಬಯಸುವುದು ಇದನ್ನೇ. ಅದರಲ್ಲಿ ಕೆಲವರ ಬಯಕೆ ಮಾತ್ರ ಈಡೇರುತ್ತದೆ. ನನ್ನ ಮಗ ಖಂಡಿತವಾಗಿಯೂ ಅಂತಹ ಅದೃಷ್ಟಶಾಲಿಗಳಲ್ಲಿ ಒಬ್ಬ. ವಿಜಯಂತ್ ತಂದೆ ವೀರೇಂದ್ರ ಥಾಪರ್ ಮಾತು ಇದು. ಈ ಮಾತನ್ನು ಒಬ್ಬ ಸೈನಿಕ ಮಾತ್ರ ಹೇಳಬಲ್ಲ. ವಿಜಯಂತ್ ಥಾಪರ್ ಪ್ರತಿನಿತ್ಯ ಡೈರಿ ಬರೆಯುತ್ತಿದ್ದ. ಡೈರಿಯಲ್ಲಿ ಬೇರೆ ಬೇರೆ ವಿಷಯ ಗಳಿರುತ್ತಿದ್ದರೂ, ಸಣ್ಣ ಸಣ್ಣ ಮೂರು ಸಾಲುಗಳನ್ನು ಆತ ಆಗಾಗ ಬರೆಯುತ್ತಿದ್ದ. ನಾನು ಮುನ್ನಡೆದರೆ ನನ್ನನ್ನು ಅನುಸರಿಸಿ, ನಾನು ಹೇಡಿಯಾಗಿ ಹಿಂತಿರುಗಿ ಬಂದರೆ ನನ್ನನ್ನು ಗುಂಡು ಹೊಡೆದು ಸಾಯಿಸಿ, ನಾನು ಸತ್ತರೆ ಸೇಡು ತೀರಿಸಿ ಕೊಳ್ಳಿ.
ಇದನ್ನು ಒಬ್ಬ ಯೋಧ ಮಾತ್ರ ಬರೆಯಬಲ್ಲ. ಆಕೆಯ ಹೆಸರು ರಚನಾ. ಪೂರ್ತಿ ಹೆಸರು ರಚನಾ ಬಿಶ್ತ್ ರಾವತ್. ಆಕೆಯ ತಂದೆ, ಗಂಡ, ಸಹೋದರ ಎಲ್ಲರೂ ಸೈನಿಕರು. ಹಾಗಿರುವಾಗ, ಸೈನ್ಯ, ಸೈನಿಕ, ದೇಶಭಕ್ತಿಯ ಹೊರತಾಗಿ ಇನ್ನೇನು ಯೋಚಿಸಲು ಸಾಧ್ಯ? ಆಕೆಯ ನಿತ್ಯದ ಬದುಕು, ಅಕ್ಷರದ ಬದುಕು ಎಲ್ಲವೂ ಅದರ ಸುತ್ತಲೇ ಸುತ್ತುತ್ತಿರುತ್ತದೆ. ಆಕೆ ಬರೆಯಲು ಆರಂಭಿಸಿ ಎರಡು ದಶಕಕ್ಕೂ ಹೆಚ್ಚಾಯಿತು. ಸಾಕಷ್ಟು ಲೇಖನಗಳನ್ನು ಬರೆದ ಆಕೆಯ ಮೊದಲ ಕಥೆ ‘ಮುನ್ಸಿ ಮೌಸಿ’ 2008-09ರ     ನಲ್ಲಿ ಪ್ರಥಮ ಬಹುಮಾನ ಪಡೆಯಿತು.
ಇದುವರೆಗೆ ಬರೆದದ್ದು ಏಳು ಪುಸ್ತಕ. ಬರೆದದ್ದೆಲ್ಲವೂ ಬಂಗಾರ. ’’ –     ’ ಆಕೆಯ ಅತ್ಯುತ್ತಮ ರಚನೆಗಳಲ್ಲಿ ಒಂದು. ಮೇಲೆ ಹೇಳಿದ ರಾಬಿನ್ ಮತ್ತು ರುಕ್ಸಾನಾ ಕುರಿತ ಸತ್ಯ ಘಟನೆ2019ರಲ್ಲಿ ಲೋಕಾರ್ಪಣೆಗೊಂಡ ಇದೇ ಪುಸ್ತಕದ ತುಣುಕು. ಹೆಸರೇ ಹೇಳುವಂತೆ ಕಾರ್ಗಿಲ್ಕದನದ ಹೇಳಲಾಗದ ಅಥವಾ ಕೇಳಲಾಗದ ಕಥೆಗಳ ಸರಪಳಿ ಈ ಪುಸ್ತಕ. ರಚನಾ ರಚಿಸಿದ ಇತರ ಕೃತಿಗಳು, ’’ ’, “1965′, ‘  ’, ‘’, ,    ಇದರಲ್ಲಿ ಬಹುತೇಕ     ಪ್ರಕಾಶನದ ಪುಸ್ತಕಗಳು. ಅವರ ಪುಸ್ತಕಗಳು ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಲಭ್ಯವಿದೆ.
ಕಾರ್ಗಿಲ್ ಪುಸ್ತಕದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ವಿವರಗಳಿವೆ, ಅವರ ಪಾಲಕರೊಂದಿಗೆ ನಡೆಸಿದ ಸಂದರ್ಶನ ವಿದೆ, ಯೋಧರು ಬರೆದ ಪತ್ರವಿದೆ,ಯೋಧರ ಅಪರೂಪದ ಭಾವ ಚಿತ್ರವಿದೆ. ಭಾಷೆ, ಬರವಣಿಗೆಯ ಶೈಲಿಯೂ ಚೆನ್ನಾಗಿದೆ. ಘಟನೆಗಳು ನಡೆದ ದಿನಾಂಕ, ಸಮಯದ ಮಾಹಿತಿಯಿದೆ. ಇತ್ತೀಚಿನದಿನಗಳಲ್ಲಿ ನಾನು ಓದಿದ ಒಂದು ಒಳ್ಳೆಯ ಪುಸ್ತಕ ಇದು. ಸಾಧ್ಯವಾದರೆ ನೀವೂ ಓದಿ. ಓದುವಾಗ ನಿಮ್ಮ ಹೃದಯ ಭಾರವಾಗದಿದ್ದರೆ, ಗಂಟಲು ಉಬ್ಬದಿದ್ದರೆ, ಕಣ್ಣು ಮಂಜಾಗದಿದ್ದರೆ ಹೇಳಿ.