ಇದರ ವಿರುದ್ದ ಮಾತಾಡೋಕೆ ಯಾರೂ ಇಲ್ಲವಾ ?
ಪ್ರಚಲಿತ
ನಾಗರಾಜ ನಾಯಕ
ನಮಗೆ ಸಂಬಂಧವಿರದ, ಅನ್ಯ ದೇಶದ ವಿಷಯದಲ್ಲಿ ನಡೆದ ಖಿಲಾಫತ್ ಚಳವಳಿ ಈ ದೇಶದಲ್ಲಿ ನಡೆದಿದ್ದು ಸರಿ ಎಂದು ಹೇಳಿಕೊಳ್ಳುತ್ತಿರುವ ಶಾಂತಿ ಪ್ರಿಯರ ನೆಚ್ಚಿನ ನೀಲಿ ಕಣ್ಣುಗಳು ಈಗಸುಮ್ಮನಿರಬಾರದಿತ್ತಲ್ಲ? ಜರ್ಮನಿಯಲ್ಲಿ ನಡೆದ ಹಿಂಸಾಚಾರವನ್ನು ಈಗಲೂ ಭಾರತದಲ್ಲಿಯೇ ನಡೆದಿದೆ ಎಂಬಂತೆ ಬಿಂಬಿಸುವ, ಇಲ್ಲಿಯ ರಾಷ್ಟ್ರೀಯವಾದಿಗಳನ್ನು ಫ್ಯಾಸಿಸ್ಟ್ ಎಂದು ಜರಿ ಯುವರು. ಕನಿಷ್ಠ ತಾಲಿಬಾನ್ ಉಗ್ರರ ವಿರುದ್ಧ ಟೌನ್ ಹಾಲಿನ ಮುಂದೆ ನಿಂತು ಒಂದು ಪ್ರತಿಭಟನೆ ಮಾಡಬೇಕಿತ್ತಲ್ಲ?
ಸತ್ಯ ಸಾಯುವವನ ತುಟಿಯ ಮೇಲೆ ನರ್ತಿಸುತ್ತದೆ. ಅಫ್ಘಾನಿಸ್ತಾನದಲ್ಲಿ ಸಾಯುತ್ತಿರುವವರ ಆಕ್ರಂದನ ಮುಗಿಲು ಮುಟ್ಟಿದೆ. ಅಸಹಾಯಕರಾಗಿ ಬೇಡುತ್ತಿದ್ದಾರೆ. ಭಾರತದ ಕಡೆಗೆ ದೈನ್ಯದಿಂದ ನೋಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಆಗುತ್ತಿರುವ ಹಿಂಸಾಚಾರಗಳು, ದಬ್ಬಾಳಿಕೆಗಳು, ಗುಂಡಿನ ಮೊರೆತ ಮತ್ತು ಸಾಯುವ ಕೊನೆಗಟ್ಟದಲ್ಲಿ ಅವರ ತುಟಿಯ ಮೇಲೆ ಇಂತಹ ಹೇಯ ಕೃತ್ಯಕ್ಕೂ ಕನಿಷ್ಠ ಸಾಂತ್ವನದ ನುಡಿಗಳಿಲ್ಲವೆ ಎಂಬ ವಿಷಾದದ ನುಡಿಗಳು ಬರುತ್ತಿದೆ.
ಇವೆಲ್ಲವುಗಳ ನಡುವೆ ಈ ದೇಶದಲ್ಲಿ ಒಣ ಎಲೆ ಬಿದ್ದರೂ ಅದಕ್ಕೆ ಮೋದಿಯೇ ಕಾರಣ ಎಂದು ಬೊಬ್ಬಿಡುವ ಪ್ರಗತಿ ಪರರ, ವೈಚಾರಿಕರು ಎಂದು ಕರೆದುಕೊಳ್ಳುವವರ, ಕೆಲ ಸಾಹಿತಿಗಳ ಮತ್ತು ರಾಜಕಾರಣಿಗಳ ದಿವ್ಯಮೌನ ಮಾತ್ರ ರೇಜಿಗೆ ಹುಟ್ಟಿಸುತ್ತಿದೆ. ಹೀಗೆ ನೀವು ಸುಮ್ಮ ನಿದ್ದರೆ ನಮ್ಮ ದೇಶದಲ್ಲಿ ಆದಂತೆ ನಿಮ್ಮಲ್ಲೂ ಹಾಹಾಕಾರ ಬರಬಹುದು ಎಂದು ಅಫ್ಘಾನಿಗಳ ತುಟಿಯ ಮೇಲೆ ಸತ್ಯ ನರ್ತಿಸುತ್ತಿದ್ದರೂ ನಮ್ಮಲ್ಲೊಂದು ವರ್ಗ ಮಾತ್ರ ಸಂಪೂರ್ಣ ಶಾಂತ. ಅಸಲಿಗೆ ಇವರ ಮೌನ ಹೇಗಿದೆ ಎಂದರೆ ಅಫ್ಘಾನಿಸ್ತಾನದಲ್ಲಿ ಹೊರಬರುತ್ತಿರುವ ಚೀತ್ಕಾರ, ಕೂಗು ಯಾವುದೋ ಸಿನಿಮಾದ ಕ್ಯಾಸೆಟ್ ಹಾಕಿರಬೇಕು ಎಂದು ಭಾವಿಸಿದಂತಿದೆ.
ಯಾರು ನಾಗರಿಕ ಹಕ್ಕುಗಳ ಬಗ್ಗೆ ಕಂಠ ಬೀರಿಯುವಂತೆ ಬೊಬ್ಬೆ ಹೊಡೆಯುತ್ತಿದ್ದರೋ, ಮಹಿಳಾ ಸ್ವಾತಂತ್ರ್ಯದ ಕುರಿತು ಗಂಟೆಗಟ್ಟಲೆ ಭಾಷಣ ಮಾಡುತ್ತಿದ್ದರೋ, ಮಕ್ಕಳ ಹಕ್ಕುಗಳ ಬಗ್ಗೆ ಮಾರುದ್ದದ ಲೇಖನ ಬರೆಯುತ್ತಿದ್ದರೋ ಅವರೆಲ್ಲ ಮಿನಿ ಕುಂಭಕರ್ಣನ ಹಾಗೆ ನಿದ್ರೆ ಮಾಡುತ್ತಿದ್ದಾರೆ , ಇಲ್ಲಾ ಸ್ವಲ್ಪ ದಿನಗಳ ಕಾಲ ಇಹಲೋಕ ತ್ಯಜಿಸಿದಂತಿದ್ದಾರೆ. ಭಾರತದಲ್ಲಿ ನಡೆಯುವ ಅತೀ ಸಣ್ಣ ಘಟನೆಗೂ ದೇಶದ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳಾಗುವಂತೆ ಕೂಗುವ ಮತ್ತು ನಾವು ಜಗತ್ತನ್ನೇ ಬದಲಾಯಿಸಲು ಹೊರಟವರು ಎಂಬಂತೆ ವರ್ತಿಸುವ ಕೂಗುಮಾರಿಗಳೆಲ್ಲ ಬಿಲದಲ್ಲಿ ಸೇರಿಕೊಂಡು ಜಗತ್ತಿನ ಪರಿವೇ ಇಲ್ಲದಂತೆ ಮಲಗಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಹಾಲಿ ನಡೆಯುತ್ತಿರುವ ಹೃದಯ ವಿದ್ರಾವಕ ಘಟನೆಗಳು ಹಿಂದೆ ಜಗತ್ತಿನ ಬೇರೆ ಬೇರೆ ಭಾಗದಲ್ಲಿ ನಡೆದ ಯಾವುದೇ ಘಟನೆಗಳಿಗೂ ಸಹ ಕಡಿಮೆ ಇಲ್ಲ. ಕಳೆದ ಮೂರು ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ ಸುಮಾರು10ಲಕ್ಷಕ್ಕಿಂತ ಹೆಚ್ಚಿನ ಜನ ಅಫ್ಘಾನಿಗಳೇ ಅತಂತ್ರರಾಗಿ ಮನೆಮಠ ಕಳೆದುಕೊಂಡಿದ್ದಾರೆ. ಇಲ್ಲಿಯವರೆಗೆ ಸುಮಾರು88ಸಾವಿರ ವಿದೇಶಿಯರು ಇದ್ದೆವೋ ಸತ್ತೆವೋ ಎಂದು ಅಫ್ಘಾನದಿಂದ ಕಾಲ್ಕಿತ್ತಿದ್ದಾರೆ. ನಮ್ಮ ದೇಶದ ಸುಮಾರು800ಜನರನ್ನು ಕಷ್ಟಪಟ್ಟು ಭಾರತಕ್ಕೆ ಕರೆತರಲಾಗಿದೆ. ಕಾಬೂಲಿನ ವಿಮಾನ ನಿಲ್ದಾಣ ಯಾವುದೇ ಜನನಿಬಿಡ ಸಂತೆಗಿಂತ ಕಡಿಮೆ ಏನಿಲ್ಲ. ಇನ್ನುಳಿದ ಭಾರತೀಯರು ಕೈಯಲ್ಲಿ ಜೀವ ಹಿಡಿದು ಕುಳಿತಿದ್ದಾರೆ. ಅರ್ಧಕ್ಕಿಂತಲೂ ಹೆಚ್ಚಿನ ಅಫ್ಘಾನಿಯರು ದೇಶ ಬಿಟ್ಟು ಪಲಾಯನ ಮಾಡಲುಕಾಯುತ್ತಿದ್ದಾರೆ. ಆದರೆ ಬಂದೂಕಿನ ನಳಿಕೆಯು ಅವರನ್ನು ಕದಲದಂತೆ ಮಾಡಿದೆ.
ಜಗತ್ತು ಇತ್ತೀಚೆಗೆ ಕಂಡು ಕೇಳರಿಯದಂತಹ ದೌರ್ಜನ್ಯ ಮತ್ತು ಹಿಂಸೆಗಳು ಮಹಿಳೆಯರ ಮೇಲೆ ನಡೆಯುತ್ತಿವೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿಯಂತೆ ಕೈ ಬೆರಳಿಗೆ ನೇಲ್ ಪಾಲಿಶ್ ಹಚ್ಚಿದ ಹುಡುಗಿಯ ಕೈಬೆರಳನ್ನು ತಾಲಿಬಾನಿಗಳು ಕತ್ತರಿಸಿದ್ದಾರೆ. ತಾಲಿಬಾನಿಗಳ ದೌರ್ಜನ್ಯ ಎಲ್ಲಿಯವರೆಗೆ ಮುಂದುವರೆದಿದೆ ಎಂದರೆ ಮಹಿಳೆಯೋರ್ವಳು ಬಿಗಿಯಾದ ಬುರ್ಖಾಧರಿಸಿದ್ದಾಳೆ ಎಂದು ಅವಳನ್ನು ಸಹ ಕೊಲ್ಲಲಾಗಿದೆ. ತಾಲಿಬಾನಿಗಳ ಭಯದಿಂದ ಬುರ್ಖಾ ಖರೀದಿಸಿ ಅದರೊಳಗೆ ರಕ್ಷಣೆ ಪಡೆಯೋಣ ಅಂದರೆ ಅಫ್ಘಾನಿಸ್ತಾನದಲ್ಲಿ ಒಂದು ಬುರ್ಖಾ ರೇಟು ಹತ್ತು ಪಟ್ಟು ಹೆಚ್ಚಾಗಿದೆ. ಬಡ ಅಫ್ಘಾನಿ ಮಹಿಳೆಯರು ಹತ್ತು ಪಟ್ಟು ದರ ನೀಡಿ ಬುರ್ಖಾ ಖರೀದಿಸುವ ಪರಿಸ್ಥಿತಿ ಇಲ್ಲ.
ತಾಲಿಬಾನಿ ಉಗ್ರರು ಬುರ್ಕಾ ಧರಿಸದ ಮಹಿಳೆಯರು ಎಲ್ಲೆಲ್ಲಿ ಇದ್ದಾರೆ ಎಂದು ಮನೆ ಮನೆ ಹೊಕ್ಕುತ್ತಿದ್ದಾರೆ. ಬಹುಶಃ ಭಾರತೀಯ ಪ್ರಗತಿಪರರಿಗೆ ಇನ್ನೂ ಈ ದೇಶ ಅರ್ಥ ಆಗಲಿಲ್ಲವೆಂದರೆ ಏನೂ ಮಾಡಲು ಆಗುವುದಿಲ್ಲ. ಕಾಬೂಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಕ್ಷಣಾ ಗೋಡೆಯ ಸುತ್ತಲೂ ನಿಂತುಕೊಂಡ ತಾಯಂದಿರು ಸಣ್ಣ ಸಣ್ಣ ಶಿಶುಗಳನ್ನು ಗೋಡೆಯ ಆಚೆಗೆ ಎಸೆದು ಅಮೆರಿಕ – ಬ್ರಿಟನ್ ಯೋಧರಿಗೆ ತಮ್ಮ ಮಕ್ಕಳನ್ನು ಹೇಗಾದರೂ ಮಾಡಿ ತೆಗೆದುಕೊಂಡು ಹೋಗಿ ಸಲುಹಿ ಎಂದು ಅಂಗಲಾಚುತ್ತಿದ್ದಾರೆ. ಅಲ್ಲಿ ತಂತಿಯ ಮುಳ್ಳಿನ ಬೇಲಿ ಕೂಡ ಇದ್ದು ಅದನ್ನು ಲೆಕ್ಕಿಸದೆ ಮಕ್ಕಳ ಜೀವ ಉಳಿದರೆ ಸಾಕು ಎನ್ನುತ್ತಿದ್ದಾರೆ.
ಸರಿಯಾದ ಅಡುಗೆ ಮಾಡಿಕೊಡಲಿಲ್ಲವೆಂದು ಮಹಿಳೆಗೆ ಬೆಂಕಿ ಹಚ್ಚಿದ ಘಟನೆ ಸಹ ಅಫ್ಘಾನಿಸ್ತಾನದಲ್ಲಿ ನಡೆದಿದೆ. ನಮ್ಮ ಸೈನಿಕರು ಹೆಂಗಸರಿಗೆ ಗೌರವ ಕೊಡುವ ತರಬೇತಿ ಪಡೆಯಲಿಲ್ಲ, ಅದಕ್ಕಾಗಿ ಮನೆಯಲ್ಲಿ ಉಳಿಯಿರಿ ಎಂದು ತಾಲಿಬಾನಿಗಳೇ ಹೇಳುತ್ತಿದ್ದಾರೆ. ಹೆಂಗಸರಿಗೆ ಮರ್ಯಾದೆ ಕೊಡುವುದನ್ನು ತರಬೇತಿ ಪಡೆದು ನೀಡಬೇಕಾ? ಮಹಿಳಾ ಪೈಲಟ್ ಒಬ್ಬಳಿಗೆತಾಲಿಬಾನಿಗಳು ಕಲ್ಲು ಹೊಡೆದು ಕೊಂದಿದ್ದಾರೆ. ಇಡೀ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮುಖದಲ್ಲಿ ಭಯವೇ ತುಂಬಿದೆ.ಇದರ ಹೊರತಾಗಿ ಅಗಸ್ಟ್26ರಂದು ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ನೂರಕ್ಕಿಂತಲೂ ಹೆಚ್ಚಿನ ಜನ ಸತ್ತಿದ್ದಾರೆ. ವಿಮಾನ ನಿಲ್ದಾಣ ಪಕ್ಕದಲ್ಲಿರುವ ಚರಂಡಿಯ ಕೊಳಚೆ ನೀರು ಕ್ಷಣಮಾತ್ರದಲ್ಲಿ ಕೆಂಪಾಗಿದೆ. ಹಸುಳೆ ಹೆಣ್ಣು ಮಕ್ಕಳನ್ನು ತಾಲಿಬಾನಿಗಳ ಕಾಮತೃಷೆಗಾಗಿ ನೀಡಲು ಉಗ್ರರು ಒತ್ತಾಯಿಸುತ್ತಿರುವುದು ಮುಂದಿನ ದಿನಗಳನ್ನು ಇನ್ನೂ ಕಠಿಣಗೊಳಿಸಿದೆ.
ನೆಲೆ ಕಳೆದುಕೊಂಡ ಅಫ್ಘಾನಿಗಳ ಪೈಕಿ ಎಂಬತ್ತು ಪ್ರತಿಶತ ಜನ ಹೆಂಗಸರು ಮತ್ತು ಮಕ್ಕಳೇ ಆಗಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟೆಲ್ಲ ಇದ್ದರೂ ಸಹ ನಮ್ಮಲ್ಲಿಯ ಕೆಲ ಹೋರಾಟಗಾರರು, ಮಾನವ ಹಕ್ಕುಗಳ ಕುರಿತು ಬೊಬ್ಬೆ ಹೊಡೆಯುವವರು , ಶಾಂತಿ ಪ್ರತಿಪಾದಕರು ಎಂದು ಹೇಳಿಕೊಳ್ಳುವವರು ಬಾಯಿಗೆ ಬೀಗ ಹಾಕಿಕೊಂಡಿರುವುದು ಏಕೆ? ಈ ಕುರಿತು ಟೀಕೆಗಳಿಂದ ತಪ್ಪಿಸಿಕೊಳ್ಳಬೇಕೆನ್ನುವ ಕೆಲ ಆಷಾಡಭೂತಿಗಳು ಕಾಟಾಚಾರಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಒಂದೆರಡು ಸಾಲು ಬರೆದು ಮೌನವಾಗಿದ್ದಾರೆ. ಇನ್ನೂ ಕೆಲವು ದಗಲ್ಬಾಜಿಗಳು ತಮ್ಮ ಬಾಯಿ ತೆರೆದು ತಾಲಿಬಾನಿಗಳು ಮತ್ತು ಭಾರತದ ರಾಷ್ಟ್ರಪ್ರೇಮಿ ಸಂಘಟನೆಯ ಹೆಸರು ಬಳಸಿ ಅವೆರಡೂ ಒಂದೇ ಎಂದು ಹಿಟ್ಟು ಮತ್ತು ಬೂದಿ ಎರಡು ಸಹ ಸಮ ಎಂದು ಪ್ರತಿಪಾದಿಸುತ್ತಿದ್ದಾರೆ. ಇನ್ನು ಕೆಲವು ನೌಟಂಕಿಗಳು ಬೇರೆ ದೇಶದ ಸುದ್ದಿ ನಮಗ್ಯಾಕೆ ಎಂದು ತಾಂತ್ರಿಕ ಕಾರಣ ಕೊಡುತ್ತಿದ್ದಾರೆ.
ನಮಗೆ ಸಂಬಂಧವಿರದ, ಅನ್ಯ ದೇಶದ ವಿಷಯದಲ್ಲಿ ನಡೆದ ಖಿಲಾಫತ್ ಚಳವಳಿ ಈ ದೇಶದಲ್ಲಿ ನಡೆದಿದ್ದು ಸರಿ ಎಂದು ಹೇಳಿಕೊಳ್ಳುತ್ತಿರುವ ಶಾಂತಿ ಪ್ರಿಯರ ನೆಚ್ಚಿನ ನೀಲಿ ಕಣ್ಣುಗಳು ಈಗ ಸುಮ್ಮನಿರಬಾರದಿತ್ತಲ್ಲ? ಜರ್ಮನಿಯಲ್ಲಿ ನಡೆದ ಹಿಂಸಾಚಾರವನ್ನು ಈಗಲೂ ಭಾರತದಲ್ಲಿಯೇ ನಡೆದಿದೆ ಎಂಬಂತೆ ಬಿಂಬಿಸುವ, ಇಲ್ಲಿಯ ರಾಷ್ಟ್ರೀಯವಾದಿಗಳನ್ನು ಫ್ಯಾಸಿಸ್ಟ್ ಎಂದುಜರಿಯುವರು. ಕನಿಷ್ಟ ತಾಲಿಬಾನ್ ಉಗ್ರರ ವಿರುದ್ಧ ಟೌನ್ ಹಾಲಿನ ಮುಂದೆ ನಿಂತು ಒಂದು ಪ್ರತಿಭಟನೆ ಮಾಡಬೇಕಿತ್ತಲ್ಲ? ಅಮೆರಿಕಾದಲ್ಲಿ ಜಾರ್ಜ್ ಫಾಯ್ಡ್ ಅಲ್ಲಿಯ ಪೊಲೀಸನಿಂದ ಸತ್ತಾಗ ಇಲ್ಲಿ ಉದುದ್ದ ಕವನ ಬರೆದ ಕೆಲ ಸಾಹಿತಿಗಳು ಅಫ್ಘಾನಿ ತಾಯಿಂದಿರ ಬವಣೆಯ ಕುರಿತು ಒಂದಿಷ್ಟು ಹಾಡು ಬರೆದು ಜನ ಜಾಗೃತಿ ಮೂಡಿಸಬಹುದಿತ್ತು.
ಸೋಶಿಯಲ್ ಮೀಡಿಯಾಗಳಲ್ಲಿ ಕವನ ಪ್ರಕಟಿಸಿ ಜಾಗತಿಕ ಪ್ರತಿಭಟನೆಗೆ ಕೊಡುಗೆ ನೀಡಬಹುದಿತ್ತು?’  ’ಎಂದ ಬುದ್ಧಿ ಜೀವಿಗಳಿಗೆ ಅಫ್ಘಾನಿ ಮಹಿಳೆಯರ ಬಗ್ಗೆ ಯಾಕಿಷ್ಟು ದ್ವೇಷ ? ಆಫ್ಘಾನಿ ಕಂದಮ್ಮಗಳ ಬಗ್ಗೆ ಯಾಕಿಷ್ಟು ತಾತ್ಸಾರ? ದುಷ್ಕೃತ್ಯ ಎಸಗುವವರಿಂದ ಜಗತ್ತು ನಾಶವಾಗುವುದಿಲ್ಲ, ಬದಲಿಗೆ ಅದನ್ನು ನೋಡಿ ಸುಮ್ಮನೆ ಕುಳಿತವರಿಂದ ನಾಶ ಖಂಡೀತವಾಗುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿ ಅನ್ಯಾಯವಾಗುತ್ತಿದ್ದರೆ ಅದು ವಿಶ್ವದ ಎಲ್ಲಾ ಭಾಗಗಳಲ್ಲಿ ಇರುವ ನ್ಯಾಯಕ್ಕೆ ಆಗುವ ಬೆದರಿಕೆ ಆಗಿರುತ್ತದೆ. ಒಂದು ವೇಳೆ ಈ ಅವಕಾಶ ವಾದಿಗಳ ವಾದ ದೇಶದ ಎಲ್ಲೆಗೆ ಮಾತ್ರ ಸೀಮಿತವಾಗಿದ್ದರೆ, ಅಫ್ಘಾನದಲ್ಲಿ ಸಿಲುಕಿಕೊಂಡಿರುವ ಭಾರತೀಯರು ಈ ದೇಶದವರಲ್ಲವೇ ? ಈ ದೇಶದಲ್ಲಿಯೂ ಸಹ ಕೆಲವು ತಾಲಿಬಾನಿ ಮನೋ ಭಾವದವರು ತಾಲಿಬಾನಿಗಳನ್ನು ಬೆಂಬಲಿಸುವ ಹೇಳಿಕೆಗಳು ಬಂದಿವೆ.
ಅದನ್ನೆಲ್ಲ ಖಂಡಿಸುವುದು ಬೇಡವೇ ? ದೇಶದ ಮಾನ ತೆಗೆಯಲು ಸಣ್ಣ ಅವಕಾಶಕ್ಕೂ ಕಾಯುತ್ತಿರುವ ಈ ಕೂಗು ಮಾರಿಗಳನ್ನು ಅವರು ಈಗ ಧರಿಸಿರುವ ಬುರ್ಕಾದಿಂದ ಹೊರತರಬೇಕಾಗಿದೆ. ಅವರ ಅಸಲಿ ರೂಪವನ್ನು ಜನರಿಗೆ ತೋರಿಸಬೇಕಿದೆ.