ನಿರುದ್ಯೋಗದ ಬವಣೆಗೆ ಸ್ವಯಂ ಉದ್ಯೋಗವೆಂಬ ಅಸ್ತ್ರ
ಅಭಿಮತ
ಭಾರತಿ ಎ ಕೊಪ್ಪ
ನಮ್ಮ ಕರ್ನಾಟಕದ ಯಾವುದೇ ಸಣ್ಣಪುಟ್ಟ ಪಟ್ಟಣಗಳು,ದೊಡ್ಡಡೊಡ್ಡ ಮಹಾನಗರಗಳಿಗೆ ಹೋದರೂ ಪರಭಾಷಿಕರ ಅನೇಕ ಅಂಗಡಿಗಳು ಕಾಣಸಿಗುತ್ತವೆ.
ಹಿಂದಿ,ಮರಾಠಿ, ರಾಜಸ್ಥಾನಿ, ತೆಲುಗು, ತಮಿಳು ಮತ್ತಿತ್ಯಾದಿ ಭಾಷಿಕರು ನಮ್ಮ ರಾಜ್ಯಕ್ಕೆ ಬಂದು, ನಮ್ಮ ಭಾಷೆ ಯನ್ನು ಕಲಿತು, ಗ್ರಾಹಕರನ್ನು ಸೆಳೆದು, ಉತ್ತಮ ಸೇವೆಯನ್ನು ನೀಡಿ, ವ್ಯಾಪಾರದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೊರರಾಜ್ಯಗಳ ಬಹಳಷ್ಟು ಜನರು ಹತ್ತಾರು ವರ್ಷಗಳಿಂದ ನಮ್ಮ ಕರ್ನಾಟಕದ ಮೂಲೆ ಮೂಲೆಗಳಲ್ಲಿ ವ್ಯಾಪಾರ ನಡೆಸುತ್ತಿರುವುದಲ್ಲದೆಯೇ, ಇಲ್ಲಿಯೇ ಆಸ್ತಿ, ಮನೆಯನ್ನು ಮಾಡಿಕೊಂಡು, ಬದುಕು ಕಟ್ಟಿಕೊಂಡಿದ್ದಾರೆ. ವ್ಯಾಪಾರ ದಲ್ಲಿನ ಚಾಕಚಕ್ಯತೆ ಮತ್ತು ಸೇವಾ ಮನೋಭಾವ ಇದ್ದರೆ ಮಾತ್ರ,ಆತ ಯಶಸ್ವಿ ವ್ಯಾಪಾರಿಯಾಗಬಲ್ಲ. ದುಡಿಮೆಯಲ್ಲಿ ಪ್ರಗತಿ ಸಾಧಿಸಬಲ್ಲ.
ನಮ್ಮೂರಿನ ಯುವಕರು, ವ್ಯಾಪಾರ ವ್ಯವಹಾರ ಮಾಡಿ ಕೈ ಸುಟ್ಟುಕೊಳ್ಳುವುದು ಏಕೆ? ಎಂದು ಬೇರೆ ಉದ್ಯೋಗ ವನ್ನರಸುತ್ತಾ ನಗರಗಳತ್ತ ವಲಸೆ ಹೋಗುತ್ತಿರು ವಾಗ, ಈ ಹೊರ ರಾಜ್ಯದ ಜನರು ನಮ್ಮ ನಡುವೆಯೇ ಹೇಗೆ ವ್ಯಾಪಾರದಲ್ಲಿ ಪ್ರಾವೀಣ್ಯತೆಯನ್ನು ಮೆರೆಯುತ್ತಿದ್ದಾರೆ? ನಮ್ಮೂರಿನ ಜನರಿಗೆ ನಮ್ಮೂರಿನ ಗ್ರಾಹಕರನ್ನೇ ಸೆಳೆಯುವ ಶಕ್ತಿ ಇಲ್ಲವೇ!? ಅಥವಾ ತನ್ನೂರಿನಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವ ಬಗ್ಗೆ ಅಸಡ್ಡೆಯೇ? ಎಂಬೆಲ್ಲಾ ಪ್ರಶ್ನಾರ್ಥಕ ಗಳಿಗೆ ನಿರುದ್ಯೋಗ ವೆಂಬ ವಿಷವರ್ತುಲವು ಕಾಡುತ್ತಿರುವುದು ನಿಜಕ್ಕೂ ಖೇದಕರ ವಿಚಾರ.
ಗ್ರಾಮೀಣ ಪ್ರದೇಶ ಮತ್ತು ಸಣ್ಣಪುಟ್ಟ ಪಟ್ಟಣಗಳಲ್ಲಿನ ಯುವಕರು ಮಹಾನಗರಗಳತ್ತ ಉದ್ಯೋಗ ವನ್ನು ಹುಡುಕಿಕೊಂಡು ಹೋಗಿ, ಅಲ್ಲಿನ ಸ್ಪರ್ಧಾತ್ಮಕ ಉದ್ಯೋಗದ ಬೇಟೆಯಲ್ಲಿ ಕಡಿಮೆ ಸಂಬಳಕ್ಕೆ ಜೀವನವನ್ನು ಹೊಂದಾಣಿಕೆ ಮಾಡಿಕೊಳ್ಳುವ ಬದಲು,ತಮ್ಮದೇ ಊರಿನಲ್ಲಿ ಪ್ರಸ್ತುತ ಸಮಾಜಕ್ಕೆ, ಕಾಲ ಮಾನಕ್ಕೆ ತಕ್ಕಂತಹ ವ್ಯಾಪಾರ ವ್ಯವಹಾರಗಳನ್ನು ನಡೆಸುವಂತೆ ಸಜ್ಜಾಗಬೇಕಿದೆ. ಯಾವ ಉದ್ಯೋಗವೂ ಕೀಳಲ್ಲ. ಆತ್ಮವಿಶ್ವಾಸ, ಪರಿಶ್ರಮ, ಸೌಜನ್ಯಯುತ ವೃತ್ತಿಧರ್ಮ ದಿಂದ ಯಶಸ್ಸು ನಮ್ಮದಾಗುತ್ತದೆ ಎಂಬುದನ್ನು ಯುವಜನತೆಗೆ ಮನದಟ್ಟು ಮಾಡಬೇಕಿದೆ.
ವಿಶ್ವಸಂಸ್ಥೆಯ ಒಂದು ಘಟಕವಾದ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ(ಐಎಲ್‌ಓ) ಪ್ರಕಾರ, ಭಾರತದಲ್ಲಿನ ನಿರುದ್ಯೋಗದ ದರವು 2018 ಮತ್ತು 2019 ರಲ್ಲಿ ಶೇ.3.5 ರಷ್ಟು ಇತ್ತು. ರಾಜ್ಯದಲ್ಲಿನ ನಿರುದ್ಯೋಗದ ವಸ್ತುಸ್ಥಿತಿಯನ್ನು ಅವಲೋಕಿಸಿದಾಗ, ಲಭ್ಯ ಮಾಹಿತಿಯನ್ವಯ, ಮೇ ತಿಂಗಳಿನಿಂದ ಜಾರಿಯಲ್ಲಿದ್ದ ಲಾಕ್‌ಡೌನ್‌ನಿಂದಾಗಿ ನೇರ ಹೊಡೆತ ಬಿದ್ದಿರುವುದು ಅಸಂಘಟಿತ ವಲಯಗಳ ಮೇಲೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಶೇ.2 ಇತ್ತು. 2021 ರ ಮೇ ತಿಂಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರಿದ್ದಂತಹ ಹಿನ್ನೆಲೆಯಲ್ಲಿ ನಿರುದ್ಯೋಗದ ಪ್ರಮಾಣವು ಶೇ. 5.3 ಗೆ ಏರಿಕೆಯಾಗಿತ್ತು.
ಕಳೆದ ವರ್ಷ ಅನ್‌ಲಾಕ್ ಆದ ಬಳಿಕ ರಾಜ್ಯದ ನಿರುದ್ಯೋಗ ಪ್ರಮಾಣ ಅಕ್ಟೋಬರ್‌ನಲ್ಲಿ ಶೇ.1.6 ರಷ್ಟಿತ್ತು. ಬಳಿಕ ನವೆಂಬರ್ ಶೇ.1.9 ಡಿಸೆಂಬರ್ ಶೇ.1.4 ರಷ್ಟಿತ್ತು. ಹೀಗೆ ನಿರುದ್ಯೋಗದ ಬವಣೆಯನ್ನು ನೀಗಿಸಲು, ಸ್ಥಳೀಯರು ತಮ್ಮ ಸ್ಥಳೀಯ ನೆಲೆಗಟ್ಟಿನಲ್ಲಿಯೇ ಹೆಚ್ಚು ಲಾಭ ತರುವಂತಹ ವ್ಯಾಪಾರ ವ್ಯವಹಾರ ದತ್ತ ಚಿತ್ತ ಬೆಳೆಸಬೇಕಿದೆ. ಸ್ವಾಲಂಬನೆಯ ಉದ್ಯೋಗದತ್ತ ಮುಖಮಾಡಲು ಯುವಜನತೆಯನ್ನು ತರಬೇತುಗೊಳಿಸಬೇಕಿದೆ.
ಕೌಶಲ್ಯಾಧಾರಿತವಾಗಿ ಯುವಜನತೆಯನ್ನು ತರಬೇತುಗೊಳಿಸಿದರೆ,ತಮ್ಮದೇ ಊರಿನಲ್ಲಿ ಅವರು ವ್ಯಾಪಾರ ಮಾಡಿ, ಉದ್ಯೋಗ ಸೃಷ್ಟಿಸಿಕೊಳ್ಳಲು ಸಹಕಾರಿ ಯಾಗುತ್ತದೆ. ಇದರಿಂದ ವೈಯಕ್ತಿಕವಾಗಿ ಆರ್ಥಿಕಾಭಿವೃದ್ಧಿಯನ್ನು ಉದ್ಯೋಗಸ್ಥರು ಸಾಽಸುವುದರ ಜೊತೆಗೆ, ಗ್ರಾಮೀಣ ಭಾಗಗಳ ಅಭಿವೃದ್ಧಿಯೂ ಆದಂತಾ ಗುತ್ತದೆ. ಹೆಚ್ಚುತ್ತಿರುವ ನಗರದತ್ತ ವಲಸೆಯನ್ನು ಕಡಿಮೆ ಮಾಡಲು ಸ್ಥಳೀಯವಾಗಿ ಉದ್ಯೋಗ ಕಂಡುಕೊಳ್ಳುವತ್ತ ಇಂದಿನ ತಲೆಮಾರನ್ನು ಅಣಿಗೊಳಿಸಬೇಕಿದೆ. ನಿರುದ್ಯೋಗವೆಂಬ ಬವಣೆಯನ್ನು ಸ್ವಯಂ ಉದ್ಯೋಗ ಎಂಬ ಅಸದ ಮೂಲಕ ತೊಡೆದು ಹಾಕಬೇಕಿದೆ.