ಅರಸು, ಅಧಿಕಾರ ಮತ್ತು ವರ್ತಮಾನದ ಕ್ರೂರತೆ
ಅಭಿಪ್ರಾಯ
ಡಾ.ಮಲ್ಲಿಕಾರ್ಜುನ ಗುಮ್ಮಗೋಳ
ಒಬ್ಬ ರಾಜಕಾರಣಿಗೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳು ಕೂಡ ಬಹಳ ಅಪಾಯಕಾರಿ. ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿಯಾದ ಯಡಿಯೂ ರಪ್ಪ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂತಹದೇ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ.
ಇದು ಕೇವಲ ಇವರಿಬ್ಬರ ಕತೆಯಲ್ಲ ಅಧಿಕಾರದ ಕುರ್ಚಿಗೆ ಏರುವ ಪ್ರತಿಯೊಬ್ಬ ರಾಜಕಾರಣಿಯೂ ಇದನ್ನು ಅನುಭವಿಸುತ್ತಾನೆ. ರಾಜಕಾರಣ ಎಂದರೆ ಅಧಿಕಾರ ಕ್ಕಾಗಿ ನಡೆಯುವ ನಿರಂತರ ತಂತ್ರ. ಅದು ಹಣ ಮತ್ತು ಅಧಿಕಾರಕ್ಕಾಗಿ ನಡೆಯುವ ಧಂದೆ ಎಂಬ ಕೆಟ್ಟ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಆದರೆ ರಾಜಕಾರಣಿ ಗಳೆಲ್ಲರು ಕೆಟ್ಟವರು ಎಂದು ನೋಡುವುದು ತಪ್ಪಾಗುತ್ತದೆ. ಜೇನು ಬಿಡಿಸುವವನು ಬೆರಳು ಚೀಪದೆ ಇರುತ್ತಾನೆಯೇ? ದೇವರಾಜ ಅರಸು ಅವರು ಮೇಲ್ವರ್ಗದ ಭೂ ಹಿಡುವಳಿದಾರರು ಅದರಲ್ಲೂ ಕರ್ನಾಟಕದ ಎರಡು ಪ್ರಬಲ ಸಮುದಾಯಗಳ ಬೆಂಬಲವಿಲ್ಲದೆ, ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿ ಅಧಿಕಾರಕ್ಕೆ ಬಂದುಭೂಸುಧಾರಣೆ, ಭೂ ಒಡೆತನ, ನೀರಾವರಿ ಮುಂತಾದ ಯೋಜನೆಗಳ ಮೂಲಕ ದಲಿತ ಹಿಂದುಳಿದ ವರ್ಗದ ಜನರನ್ನು ಮೇಲಕ್ಕೆತ್ತುವ ಕೆಲಸ ಮಾಡಿದರು.
ತನ್ನ ಸಮಯ, ಸಂಪಾದನೆಯನ್ನು ಅದುವರೆಗೂ ನಿರ್ಲಕ್ಷ್ಯಕ್ಕೆ ಒಳಗಾದ ಹಿಂದುಳಿದ ಜನರ ಕಲ್ಯಾಣಕ್ಕಾಗಿ ಬಳಸಿದರು. ತುರ್ತು ಪರಿಸ್ಥಿತಿಯ ಕರಾಳತೆ ಜನರ ಮೇಲೆ ಅಷ್ಟಾಗಿ ಕ್ರೂರವಾಗದಂತೆ ನೋಡಿಕೊಂಡರು. ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿಯವರನ್ನು ಗೆಲ್ಲಿಸಿ ಕಳಿಸಿದ್ದರು. ‘ಇಂದಿರಾ ಅವರನ್ನು ನಾನು ಗೆಲ್ಲಿಸಿಕೊಟ್ಟೆ ಎಂದು, ಜನ ಹೇಳುತ್ತಿರುವುದು ಇಂದಿರಾ ಅವರಿಗೆ ಸಹಿಸಲಾಗಲಿಲ್ಲ.
ಸಂಜಯ್ ಗಾಂಧಿ ಅವರು ರಾಜಕೀಯಕ್ಕೆ ಬರುವುದನ್ನು ನಾನು ವಿರೋಽಸಿದ್ದೆ. ಅದು ಇಂದಿರಾ ಅವರಿಗೆ ಸಿಟ್ಟು ತರಿಸಿತ್ತು. ನನ್ನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಸಂಜಯ್ ಗಾಂಧಿ ತನಗೆ ಪರಮಾತ್ಮನಾದ ಗುಂಡೂರಾವ್ ಅವರನ್ನು ಮಂತ್ರಿ ಮಾಡುವಂತೆ ಒತ್ತಡ ಹಾಕಿದ್ದರು.
ಗುಂಡೂರಾವ್ ಹಗರಣಗಳನ್ನು ಮಾಡಿದ್ದರಿಂದ ನಾನು ಅವರನ್ನು ಮಂತ್ರಿ ಖಾತೆಯಿಂದ ತೆಗೆದು ಹಾಕಿದೆ. ಇದರಿಂದ ಸಂಜಯ ಕುಪಿತರಾಗಿದ್ದರು. ಮಾತಿನ ಚಕಮಕಿಯೂ ನಡೆಯಿತು. ಇಂದಿರಾ ಅವರನ್ನು ಭೇಟಿ ಮಾಡಿದೆ. ಗುಂಡೂರಾವ್‌ಗೆ ಅನ್ಯಾಯ ಮಾಡಿದ್ದೇನೆ ಎಂದು ನನ್ನ ಮೇಲೆ ಕಿಡಿಕಾರಿದರು. ನನ್ನ ಹೇಳಿಕೆ ಯನ್ನು ಕೇಳದೆ ಹೋದರು. ಒಂದೇ ದಿನದಲ್ಲಿ ಗುಂಡೂರಾವ್ ಅವರನ್ನು ಮತ್ತೆ ಮಂತ್ರಿ ಮಾಡಿದೆ. ಮುಂದೆ ನಾನು ಅಧಿಕಾರದಿಂದ ಪದಚ್ಯುತನಾದೆ. ಗುಂಡೂ ರಾವ್ ಮುಖ್ಯಮಂತ್ರಿಯಾದರು’ ಎಂದು ಖ್ಯಾತ ಪತ್ರಕರ್ತ ಡಿ.ವಿ. ರಾಜಶೇಖರ ಅವರಿಗೆ ನೀಡಿದ ಕೊನೆಯ ಸಂದರ್ಶನದಲ್ಲಿ ಅರಸು ಹೇಳಿದ ಮಾತುಗಳು ರಾಜಕಾರಣದ ಕಠೋರ ವ್ಯಂಗ್ಯವನ್ನು ಪ್ರತಿನಿಧಿಸುತ್ತವೆ.
ಇದೇ ರೀತಿ ಜೀವಮಾನವೆಲ್ಲ ಹೋರಾಡಿದರೂ ಅಧಿಕಾರದ ಸವಿಯನ್ನು ಅನುಭವಿಸದ ದುರಂತ ನಾಯಕ ಯಡಿಯೂರಪ್ಪ. ಅವರು ತಮ್ಮ ಶಕ್ತಿಮೀರಿ ಜನೋಪ ಯೋಗಿ ಕೆಲಸ ಮಾಡಿದ್ದಾರೆ. ಆದರೆ ಅವರ ದುರಾದೃಷ್ಟ ಎಂದರೆ ಅವರು ಅಽಕಾರಕ್ಕೆ ಬಂದಾಗಲೆಲ್ಲ ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕ ಕಾಯಿಲೆ ಬಂದು ಅವರನ್ನು ಪೇಚಾಡುವಂತೆ ಮಾಡಿದವು. ಅದಕ್ಕಿಂತ ದೊಡ್ಡ ವಿಕೋಪವೆಂದರೆ ಪಕ್ಷದೊಳಗಿನ ಸಾಂಕ್ರಾಮಿಕತೆ. ಅವರು ಒಮ್ಮೆ ಮಾತುಕೊಟ್ಟರೆ ಆ ಭರವಸೆ ಇಡೇರಿಸುತ್ತಾರೆ. ಪಕ್ಷಾತೀತವಾಗಿ ಅವರಿಗೆ ಅಪಾರ ರಾಜಕೀಯ ಸ್ನೇಹಿತರು, ಸಮುದಾಯ, ಸ್ವಾಮಿಜಿಗಳು ಮತ್ತು ದೊಡ್ಡ ಜನ ಬೆಂಬಲವಿದೆ. ಇದನ್ನು ಅರಿತ ಹೈಕಮಾಂಡ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೂ ಅವರೇ ಕಿಂಗ್ ಮೇಕರ್ ಎಂದು ಒಪ್ಪಕೊಂಡಿದೆ. ಆದರೂ ವರ್ತಮಾನ ಅವರನ್ನು ಕ್ರೂರವಾಗಿ ನಡೆಸಿಕೊಂಡಿತು.
ಒಬ್ಬ ರಾಜಕಾರಣಿಯ ಒಳ್ಳೆಯತನವನ್ನು ಆತನ ವಿರೋಽಗಳು ಸಹ ಪಕ್ಷಾತೀತವಾಗಿ ಗುಣಗಾನ ಮಾಡುವುದು ಆ ರಾಜಕಾರಣಿ ತೀರಿಕೊಂಡಾಗ ಮಾತ್ರ! ಅದೇ ಒಳ್ಳೆಯ ಮಾತುಗಳನ್ನು ಆ ರಾಜಕಾರಣಿ ಸಕ್ರಿಯನಾಗಿದ್ದಾಗ ಆಡುವುದಿಲ್ಲ. ಇದು ರಾಜಕೀಯ ಅಸೂಯೇ ಅಥವಾ ಸ್ವಾರ್ಥ. ಒಳ್ಳೆಯ ಕೆಲಸ ಮಾಡಿದವರ ಬಗ್ಗೆ ವರ್ತಮಾನದಲ್ಲಿ ಈ ಸಮಾಜ ನಿರ್ಲಕ್ಷತೆಯಿಂದ ನಡೆದುಕೊಂಡರೂ, ಇತಿಹಾಸದಲ್ಲಿ ಮಾತ್ರ ಅವರನ್ನು ಎಂದಿಗೂ ಸ್ಮರಿಸುತ್ತದೆ.