ಕರೋನಾ ತಂದ ಸಾಮಾಜಿಕ ಪರಿವರ್ತನೆ
ಅಭಿಮತ
ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ
ಕರೋನಾ ಎಂಬ ಸಾಂಕ್ರಾಮಿಕ ರೋಗ ಮನುಷ್ಯನ ದೈನಂದಿನ ಚಟುವಟಿಕೆಗಳ ಹಾಗೂ ಸಾಮಾಜಿಕ ಬದುಕಿನ ಜತೆ ಆಡಳಿತ ವ್ಯವಸ್ಥೆಗಳ ಬದಲಾವಣೆಗೂ ನಾಂದಿ ಹಾಡಿದೆ.
ಗಿಡಮೂಲಿಕೆಗಳ ಸೇವನೆ, ಯೋಗ, ಪ್ರಾಣಾಯಾಮ, ಸೂರ್ಯನಮಸ್ಕಾರ, ಬಿಸಿನೀರಿನ ಸೇವನೆ ಸೇರಿದಂತೆ ತನ್ನ ಆರೋಗ್ಯದ ಕಡೆಗೆ ಒಂದಷ್ಟು ಕಾಳಜಿ, ಸದಾ ವ್ಯಾಪಾರ-ವಹಿವಾಟು, ವ್ಯವಹಾರದ ಜಂಜಾಟ, ಆಧುನಿ ಕತೆಯ ಸೋಗಿನಲ್ಲಿ ಕುಟುಂಬ ಸಂಸಾರದೊಂದಿಗೆ ಬೆರೆಯದ ವ್ಯಕ್ತಿಗಳೂ ಲಾಕ್‌ಡೌನ್ ಸಂದರ್ಭ ತಮ್ಮ ಕುಟುಂಬ, ಬಂಧು ಬಳಗದೊಂದಿಗೆ ಬೆರೆಯುವ ಮಾನಸಿಕತೆ, ಸಾಮಾಜಿಕ ವ್ಯವಸ್ಥೆಯಲ್ಲಿ ಕರೋನಾ ಪೀಡಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಸಮಾಜ ಹಿಂದೇಟು ಹಾಕುವ ಸ್ಥಿತಿಯಲ್ಲಿ ಆಯಾಯ ಧರ್ಮ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆಯುವ ಸಂಘಟನೆ, ಸಂಘ-ಸಂಸ್ಥೆಗಳು, ಆಯಾಯ ಬೂತ್‌ಗಳಲ್ಲಿ ವ್ಯಾಕ್ಸೀನೇಷನ್ ಜತೆಗೆ ಆರೋಗ್ಯದ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಕಾರ್ಯಗಾರ, ಅಶಕ್ತ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯ ಜತೆ ಸ್ವಚ್ಛತೆ, ರಕ್ತದಾನ ಸೇರಿದಂತೆ ಸಮಾಜಮುಖಿ ಕಾರ್ಯಗಳು ಮನುಷ್ಯನ ನಡುವಣ ಬಾಂಧವ್ಯ ವೃದ್ಧಿಗೂ ಮುನ್ನುಡಿ ಬರೆದಿದೆ.
ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ಶಿಕ್ಷಣ ವ್ಯವಸ್ಥೆಗಳ ದಿಕ್ಕು ಬದಲಾಗಿ ಆನ್‌ಲೈನ್ ಎಂಬ ಮಾಯಾ ಪೆಟ್ಟಿಗೆಯಲ್ಲಿ ಪ್ರಸ್ತುತ ನಡೆಯುತ್ತಿದೆ. ಧಾರ್ಮಿಕ ಆಚರಣೆ, ಹಬ್ಬಹರಿದಿನಗಳು ಸಡಗರಗಳಿಲ್ಲದೆ ಎರಡು ವರ್ಷಗಳು ಕಳೆದು ಸೂತಕದ ಛಾಯೆ ಆವರಿಸಿದೆ. ಆಯಾಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಆಕ್ಸಿಜನ್ ವೆಂಟಿಲೇಟರ್ ವ್ಯವಸ್ಥೆಗಳ ಕೊರತೆ ತಕ್ಕಮಟ್ಟಿಗೆ ನೀಗಿರುವುದು, ವಿವಿಧ ಸಂಘ-ಸಂಸ್ಥೆಗಳಿಂದ ಆಯಾಯ ಸರಕಾರಿ ಆಸ್ಪತ್ರೆಗಳಿಗೆ ಮಾ, ಸ್ಯಾನಿಟೈಸರ್ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊಡುಗೆಯ ಹಸ್ತಾಂತರ, ರೋಗಿಗಳನ್ನು ತುರ್ತು ಆಸ್ಪತ್ರೆಗೆ ಸಾಗಿಸಲು ಬೇಕಾದ ಆಂಬ್ಯುಲೆ ಕೊಡುಗೆ, ಸರಕಾರಿ ಆಸ್ಪತ್ರೆಗಳ ಮೇಲ್ದರ್ಜೆಗೇರಿಕೆ, ಸಮಾಜದ ಮಧ್ಯೆ ಕರೋನಾ ಸಂಕಷ್ಟದ ಮಧ್ಯೆ ಮುಂಚೂಣಿ ಯೋಧರೆಂದು ಕರೆಯಲ್ಪಡುವ ಆಶಾ ಕಾರ್ಯಕರ್ತೆ ಯರು, ದಾದಿಯರಿಗೆ ಗೌರವ ಸಮರ್ಪಣೆ, ಸರಕಾರಿ ಆಸ್ಪತ್ರೆಗಳಲ್ಲಿ ಕೋವೀಡ್ ನೆಪದಲ್ಲಿ ಹೊಸ ಬೆಡ್‌ಗಳ ಸಂಖ್ಯೆ ಏರಿಕೆ, ಇದರೊಂದಿಗೆ ಕೆಲ ಭಾಗಗಳಲ್ಲಿ ಕೋವಿಡ್ ಸಂಕಷ್ಟ ಸಂದರ್ಭದಲ್ಲೂ ಕೆಲ ಆಸ್ಪತ್ರೆಗಳಲ್ಲಿ ಬೆಡ್ ದಂಧೆ, ಕಮೀಷನ್ ದಂಧೆ, ಹಗರಣಗಳು, ಹಣ ಕೊಳ್ಳೆ ಹೊಡೆಯುವ ಅಮಾನವೀಯ ಮುಖಗಳು ಅನಾವರಣಗೊಂಡಿದೆ.
ಕರೋನಾ ಎಂಬ ಪ್ರಕೃತಿದತ್ತವಾಗಿ ಅಪ್ಪಳಿಸಿದ ಸಾಂಕ್ರಾಮಿಕ ವೈರಸ್ ಒಂದು ಮತ್ತು ಎರಡನೆಯ ಅಲೆಯನ್ನು ದಾಟಿ ಮೂರನೇಯ ಹೊಸ್ತಿಲಲ್ಲಿದೆ. ಕರೋನಾ ಬಗ್ಗೆ ಒಂದನೇ ಅಲೆಯಲ್ಲಿದ್ದ ಭಯ ಭೀತಿಗಳು ತಕ್ಕಮಟ್ಟಿಗೆ ಪ್ರಸ್ತುತ ನೀಗಿದೆ. ಇಲ್ಲಿ ಕರೋನಾ ಬಾಽತರಿಗೆ ಒಂದಷ್ಟು ಆತ್ಮಸ್ಥೈರ್ಯ, ಧೈರ್ಯದ ಜತೆ ನೈತಿಕ ಸ್ಥೈರ್ಯ ತುಂಬುವ ಕಾರ್ಯಗಳು ಆಗಬೇಕಿದೆ. ದಿನ ನಿತ್ಯದ ದೃಶ್ಯಮಾಧ್ಯಮಗಳಲ್ಲಿ ಜಾಗೃತಿ ಮೂಡಿಸುವ ಬದಲು ಮಾರಕ ಚಿತ್ರಣಗಳನ್ನೇ ಬಿಂಬಿಸುತ್ತಿರುವುದುಕೂಡ ಮನುಷ್ಯನ ಹಿಂಜರಿಕೆಗೆ ಕಾರಣವಾಗುತ್ತಿದೆ.
ಪ್ರಕೃತಿಯನ್ನು ನಾವು ತಾಯಿಯ ರೂಪದಲ್ಲಿ ಪೂಜಿಸುವಂತಾಗಬೇಕು. ಪ್ರಕೃತಿಯ ಮೇಲೆ ಅತ್ಯಾಚಾರಗಳು ಮಿತಿ ಮೀರಿದಾಗ ಮನುಷ್ಯನು ಕೂಡ ಇದರ ದುಪ್ಪಟ್ಟು ಪರಿಣಾಮವನ್ನು ಭೀಕರ ಕ್ಷಾಮ, ಪ್ರಕೃತಿ ವಿಕೋಪಗಳ ಮೂಲಕ ಅನುಭವಿಸಿದ್ದಾನೆ. ಮನುಷ್ಯನ ಹಣ,ಸಂಪತ್ತಿನ ದಾಹದ ಜತೆಗೆ ಸ್ವಾರ್ಥದ ಮನೋಭಾವನೆಯ ಪ್ರತಿಫಲವೇ ಇಂದು ಕರೋನಾ ಎಂಬ ಮಾರಕ ಸಾಂಕ್ರಾಮಿಕ ರೋಗ ಅಪ್ಪಳಿಸಲು ಮೂಲ ಕಾರಣ.