ಇಬ್ಬರು ರಾಣಿಯರ ತಲೆಕಡಿಸಿದ ಈ ರಾಜ ನಿಮಗೆ ಗೊತ್ತೇ ?
ಶಶಾಂಕಣಶಶಿಧರ ಹಾಲಾಡಿ
ಸರಿ ಸುಮಾರು ನಮ್ಮ ವಿಜಯನಗರ ರಾಜ ಕೃಷ್ಣದೇವರಾಯನ ಕಾಲದಲ್ಲಿ (ಆಡಳಿತ : 1509-1527) ಇಂಗ್ಲೆಂಡಿನಲ್ಲಿ ರಾಜನಾಗಿದ್ದ ಎಂಟನೇ ಹೆನ್ರಿಯ (ಆಡಳಿತ : 1509-1547) ಜೀವನ ಕಥನ ಗಮನಿಸುತ್ತಿದ್ದಾಗ, ಕೆಲವು ಕುತೂಹಲಕಾರಿ ವಿಚಾರಗಳನ್ನು ಕಂಡು ವಿಸ್ಮಯ ಹುಟ್ಟಿತು. ಆಗಿನ ದಿನಗಳಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಇತ್ತು, ಹಂಪೆಯಲ್ಲಿ ಮುತ್ತು ರತ್ನಗಳನ್ನು ಬೀದಿಯಲ್ಲಿ ಸುರಿದುಕೊಂಡು, ಸೇರುಗಳಲ್ಲಿ ಮಾರುತ್ತಿದ್ದರೆಂದು ಅಧಿಕೃತವಾಗಿ ದಾಖಲಾಗಿದೆ; ಕೃಷ್ಣ ದೇವರಾಯನ ಆಡಳಿತದ ಕುರಿತು ಸಹ ಒಳ್ಳೆಯ ಅಭಿಪ್ರಾಯಗಳನ್ನು ವಿದೇಶಿ ಪ್ರವಾಸಿಗರು ಬರೆದಿಟ್ಟಿದ್ದಾರೆ. ಅದೇ ಸಮಯದಲ್ಲಿ ಇಂಗ್ಲೆಂಡ್‌ನ ರಾಜನಾಗಿದ್ದ ಎಂಟನೇ ಹೆನ್ರಿಯು, ಒಬ್ಬರ ಹಿಂದೆ ಒಬ್ಬರಂತೆ ಮಹಿಳೆಯರನ್ನು ಮದುವೆಯಾಗುತ್ತಾ, ಅವರಲ್ಲಿ ಕೆಲವರನ್ನು ಶಿರಚ್ಛೇದನ ಮಾಡಿಸುತ್ತ, ತನ್ನ ಹಲವು ಅಧಿಕಾರಿ ಗಳನ್ನು ಪರಲೋಕಕ್ಕೆ ಕಳಿಸುತ್ತಾ ಆಡಳಿತ ನಡೆಸುತ್ತಿದ್ದ ಎಂಬ ವಿಚಾರ ಕುತೂಹಲಕಾರಿ.
ದೂರದ ಇಂಗ್ಲೆಂಡ್ ಆಗ ಒಂದು ಸಣ್ಣ ದೇಶ. ಆದರೆ ಎಂಟನೇ ಹೆನ್ರಿಯ ಕಾಲದಲ್ಲಿ, ಅಲ್ಲಿನ ನೌಕಾಪಡೆಯ ಶಕ್ತಿ ವೃದ್ಧಿಸಿ, 50 ಹಡಗುಗಳನ್ನು ಪಡೆಯಿತು ಮತ್ತು ರಾಯಲ್ ನೇವಿ ಎಂದು ಮುಂದೆ ಹೆಸರಾದ ಆ ನೌಕಾಪಡೆಯು ಆತನ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂತು. ಆ ನೌಕಾಪಡೆಯ ಶಕ್ತಿಯಿಂದಲೇ, ಮುಂದಿನ ಕೆಲವು ದಶಕಗಳಲ್ಲಿ (1600ರ ನಂತರ)ಭಾರತದತ್ತ ಸಾಗಿ ಬಂದ ಆ ದೇಶದವರು, ಕ್ರಮೇಣ ಇಲ್ಲಿನ ಇತರ ಯುರೋಪಿಯನ್ ಶಕ್ತಿಗಳನ್ನು ಮಣಿಸಿ, ನಮ್ಮ ದೇಶವನ್ನು ಆಳಲು ತೊಡಗಿದ್ದು ಗೊತ್ತೇ ಇದೆ. ಎಂಟನೇ ಹೆನ್ರಿಯ ಕಾಲದಲ್ಲಿ ಬಲಗೊಂಡ ಇಂಗ್ಲೆಂಡಿನ ನೌಕಾಪಡೆಯು, ಮುಂದೆ ಪೂರ್ವ ದೇಶಗಳ ಸಂಪತ್ತ ನ್ನು ಕೊಳ್ಳೆ ಹೊಡೆಯಲು ಗಂಭೀರ ಅಭಿಯಾನಗಳ್ನು ನಡೆಸಿದ ವಿಚಾರವನ್ನು ಗಮನಿಸಿದರೆ, ನಮ್ಮ ದೇಶವನ್ನು ಅವರು ಆಳಲು ಆ ಮಟ್ಟಿಗೆ ಎಂಟನೇ ಹೆನ್ರಿಯ ಕೊಡುಗೆ ಇದೆ ಎಂದೇ ಗುರುತಿಸಬಹುದು.
ಆದರೆ, ಸಾಕಷ್ಟು ಶಕ್ತಿ ಶಾಲಿ ರಾಜ ಎನಿಸಿದ್ದ, ಸುಮಾರು ನಾಲ್ಕು ದಶಕಗಳ ಕಾಲ ಇಂಗ್ಲೆಂಡ್‌ನ್ನು ಆಳಿದ ಎಂಟನೇ ಹೆನ್ರಿಯ ಆಡಳಿತವು, ವರ್ಣರಂಜಿತ ಮಾತ್ರವಲ್ಲ ರಕ್ತ ರಂಜಿತ ಕೂಡ! ಈತನ ವೈಯಕ್ತಿಕ ತೆವಲುಗಳನ್ನು ಗಮನಿಸಿದರಂತೂ, ಇಂದಿನ ಕಾಲಮಾನದ ನೈತಿಕ ಮೌಲ್ಯಗಳ ದೃಷ್ಟಿಯಲ್ಲಿ, ದಿಗ್ಭ್ರಮೆ ಆಗುತ್ತದೆ. ಹದಿನಾರ ನೆಯ ಶತಮಾನದ ಆ ರಾಜನ ಆರು ಮದುವೆಗಳು, ಅವರಲ್ಲಿ ಇಬ್ಬರ ತಲೆ ಕತ್ತರಿಸಿದ್ದು ಇವೆಲ್ಲಾ ಸಾಕಷ್ಟು ಪ್ರಮುಖ ಎಂದೇ ನಾವು ಗುರುತಿಸಬೇಕು.
ಏಕೆಂದರೆ, ಮುಂದಿನ ಶತಮಾನದಗಳಲ್ಲಿ ನಮ್ಮ ದೇಶವನ್ನು ಆಳಿದ ಅದೇ ಬ್ರಿಟಿಷರು, ನಮ್ಮ ರಾಜರುಗಳ ಹಲವು ವೈಯಕ್ತಿಕ ದೌರ್ಬಲ್ಯಗಳನ್ನು ನೆಪ ಮಾಡಿ ಕೊಂಡು, ಅವರ ಮೇಲೆ ಆಕ್ರಮಣ ಮಾಡಿದ್ದುಂಟು. ಜತೆಗೆ, ಹಲವು ಯುರೋಪಿಯನ್ ಪ್ರವಾಸಿಗರು ಮತ್ತು ಇತಿಹಾಸಕಾರರು, ನಮ್ಮ ದೇಶದ ರಾಜರು ಗಳನ್ನು ಕೆಟ್ಟದಾಗಿ ಚಿತ್ರಿಸಲೆಂದೇ, ಅವರ ಹಲವು ವೈಯಕ್ತಿಕ ವಿಚಾರಗಳನ್ನು ವಿವರವಾಗಿ ದಾಖಲಿಸಿದ್ದಾರೆ. (ಉದಾ: ಚೆನ್ನಭೈರಾದೇವಿಯ ಕುರಿತು ಯುರೋಪಿಯನ್ ಇತಿಹಾಸಕಾರರು ಬರೆದಿಟ್ಟದ್ದು) ಈ ಹಿನ್ನೆಲೆಯಲ್ಲಿ, ಎಂಟನೇ ಹೆನ್ರಿಯ ಲೋಲುಪತೆಗಳ ಮತ್ತು ಕ್ರೌರ್ಯದ ಕುರಿತು ಇಂದು ನಾವು, ಅಂದರೆ ಬ್ರಿಟಿಷರಿಂದ ದುರಾಡಳಿತವನ್ನು ಅನುಭವಿಸಿದವರು, ಚರ್ಚಿಸುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ.
ಎಂಟನೇ ಹೆನ್ರಿಯ ದರ್ಪ, ದೌರ್ಜನ್ಯ ಎಷ್ಟಿತ್ತೆಂದರೆ, ತನ್ನ ಹೆಂಡತಿಯಿಂದ ದೂರವಾಗಬೇಕು ಎಂದು ಅನಿಸಿದಾಗ, ಆತ ಎಂಟನೇ ಪೋಪ್ ಕ್ಲೆಮೆಂಟ್‌ನಅಽಕಾರವನ್ನೇ ಮೊಟಕುಗೊಳಿಸಿ, ಆಕೆಯನ್ನು ದೂರಕಳಿಸುವಷ್ಟು! ಎಂಟನೇ ಹೆನ್ರಿಯು ತನ್ನ ಹದಿನೇಳನೆಯ ವಯಸ್ಸಿಗೇ, 22.4.1509ರಂದು ಇಂಗ್ಲೆಂಡಿನ ರಾಜನಾದ! ಆತನ ತಂದೆ ಆರನೇಹೆನ್ರಿ ಸತ್ತದ್ದರಿಂದ, ಇವನಿಗೆ ರಾಜನಾಗುವ ಅವಕಾಶ. ರಾಜನಾದ ಕೂಡಲೇ ಆತ ಮಾಡಿದ ಮೊದಲ ಕೆಲಸವೆಂದರೆ,ತನಗಿಂತ ಆರು ವರ್ಷ ದೊಡ್ಡವಳಾದ ಕ್ಯಾಥರೀನ್ ಳನ್ನು 11.6.1509ರಂದು ಮದುವೆಯಾಗಿದ್ದು! ಈ ರೀತಿ ತನ್ನ ತಂದೆಯ ಆಸೆಯಾಗಿತ್ತು ಎನ್ನುವ ಕಾರಣ ವನ್ನೂ ಆತ ನೀಡಿದ್ದ. ಈ ಕ್ಯಾಥರೀನಳು ಬೇರಾರೂ ಅಲ್ಲ, ಹೆನ್ರಿಯ ಅಣ್ಣನ ಹೆಂಡತಿ! ಆದರೆ ಆತನ ಅಣ್ಣ ಮದುವೆಯಾಗಿ ಒಂದೇ ವರ್ಷದಲ್ಲಿ ತೀರಿಕೊಂಡಿದ್ದ. ಆದರೆ ಈ ಮದುವೆಯನ್ನು ಎಂಟನೇ ಹೆನ್ರಿಯ ತೆವಲು ಎಂದೇ ಅರ್ಥೈಸಬಹುದು.
ಏಕೆಂದರೆ, ಕ್ಯಾಥರೀನ್ ಇರುವಾಗಲೇ, ಆಕೆಯ ಇಬ್ಬರು ಸಹಾಯಕರನ್ನು ಎಂಟನೇ ಹೆನ್ರಿ ಆಸೆಪಟ್ಟು, ಬಳಸಿಕೊಂಡಿದ್ದ. ಇವರ ಪೈಕಿ, ಎಲಿಜಬೆತ ಬೆಸ್ಸಿಬ್ಲೌಂಟ್ ಎಂಬಾಕೆಯಿಂದ 1519ರಲ್ಲಿ ಆತನಿಗೆ ಒಂದು ಮಗನೂ ಹುಟ್ಟಿದ್ದ. ಎಂಟನೇ ಹೆನ್ರಿಗೆ ಹಲವು ಅನಧಿಕೃತ ಮಕ್ಕಳಿದ್ದರೂ, ಈ ಮಗುವನ್ನು ಮಾತ್ರತನ್ನದು ಎಂದು ಎಂಟನೇ ಹೆನ್ರಿ ಒಪ್ಪಿಕೊಂಡಿದ್ದ. ತನಗಿಂತ ಆರು ವರ್ಷ ದೊಡ್ಡವಳಾದರೂ, ತರಾತುರಿಯಿಂದ ಕ್ಯಾಥರೀನ್ ಜತೆ ಮದುವೆಯಾದರೂ, ಅವಳನ್ನು ಆತ ಸರಿಯಾಗಿ ಬಾಳಿಸಲಿಲ್ಲ. ಆಕೆ ಗರ್ಭಿಣಿಯಾದರೂ, ತನಗಾಗಿ ಗಂಡುಮಕ್ಕಳನ್ನು ಹೆರಲಿಲ್ಲ ಎಂಬ ಕಾರಣವನ್ನು ಮುಂದೆ ಮಾಡಿ, ಆಕೆಯಿಂದ ವಿಚ್ಛೇದನ ಪಡೆದ. ಇದನ್ನು ಪೋಪ್ ಒಪ್ಪದೇ ಇದ್ದಾಗ, ರೋಮನ್ ಕ್ಯಾಥೊಲಿಕ್ ಚರ್ಚ್‌ನ ಅಧಿಕಾರ ಮೊಟಕುಗೊಳಿಸಿ, ಚರ್ಚ್ ಆಫ್ ಇಂಗ್ಲೆಂಡ್‌ನ್ನು ಸ್ಥಾಪಿಸಿ, ಕ್ಯಾಥರೀನ್‌ ಳನ್ನು 23.5.1533 ರಂದು ತೊರೆದ.
ಎಂಟನೇ ಜೇಮ್ಸ್‌ನ ಎರಡನೇ ಹೆಂಡತಿಯ ಕಥನ ಇನ್ನಷ್ಟು ರೋಚಕ ಮತ್ತು ಅದೊಂದು ದುರಂತ. ಮೊದಲ ಹೆಂಡತಿಯಿಂದ ವಿಚ್ಛೇದನ ಪಡೆದ ಐದೇ ದಿನದಲ್ಲಿ, 28.5.1533ರಂದು ಮದುವೆಯಾದ ಆನಿ ಬೋಲಿನ್‌ಳು ಇವನ ಜತೆ ಇದ್ದದ್ದು ಸುಮಾರು ಮೂರುವರ್ಷ. ಅವರ ದಾಂಪತ್ಯದ ಫಲವಾಗಿ 7.9.1533ರಂದು (ಭವಿಷ್ಯದ ರಾಣಿ) ಕ್ವೀನ್ ಎಲಿಜಬೆತ್ ಜನಿಸಿದಳು. ಆದರೆ ಹೆನ್ರಿಗೆ ಕೋಪ – ತನಗೆ ಗಂಡು ಮಗುವನ್ನು ಈಕೆ ಹೆತ್ತುಕೊಡಬೇಕಿತ್ತು ಎಂದು. ಆಕೆಗೆ ಮೂರು ಗರ್ಭಪಾತಗಳಾದವು. ಅಸಹನೆಗೊಂಡ ಹೆನ್ರಿಯು, ಆಕೆಯ ಮೇಲೆ ರಾಜದ್ರೋಹದ ಆಪಾದನೆಯನ್ನು ಹೊರಿಸಿ, ವಿಚಾರಣೆ ನಡೆಸಿದ. ಆಕೆ ತಪ್ಪಿತಸ್ಥಳೆಂದು ಋಜುವಾತಾಗಿ, 19.5.1536ರಂದು ಟವರ್ ಆಫ್ ಲಂಡನ್‌ನಲ್ಲಿ ಆಕೆಯ ತಲೆ ಕಡಿಯಲಾಯಿತು.
ಆಕೆಯ ಮೇಲೆ ಹೊರಿಸಿದ ಆಪಾದನೆಗಳಲ್ಲಿ ಒಂದಾದ, ರಾಜನನ್ನು ಕೊಲ್ಲಿಸುವ ಒಳಸಂಚು, ಕೇಲವ ಕಪೋಲಕಲ್ಪಿತ ಎಂದು ನಂತರದ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಈಕೆಯ ಹಲವು ಸಂಬಂಧಿಗಳು ರಾಜನ ಆಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದು, ಪ್ರಭಾವಶಾಲಿ ಹುದ್ದೆಗಳಲ್ಲಿದ್ದರು. ಆದರೆ ಅಲ್ಲಿನ ರಾಜ ಮನಸ್ಸು ಮಾಡಿದರೆ ಮುಗಿಯಿತು, ಅವರೆಲ್ಲರ ಭವಿಷ್ಯ ಮಸುಕಾಗುತ್ತದೆ. ಈಕೆಯನ್ನು ದೂರ ಮಾಡಲು ಎಂಟನೇ ಹೆನ್ರಿಯು ಅದೆಂತಹಾ ಸಂಚನ್ನು ಮಾಡಿದ್ದ ನೆಂದರೆ, ಎಪ್ರಿಲ್ 30 ಮತ್ತು ಮೇ 2ರ ನಡುವೆ, ಆ ಕುರಿತಾಗಿ ಐವರನ್ನು ಬಂಧಿಸಲಾಗಿತ್ತು. ಅವರೆಲ್ಲರ ಮೇಲೆ ಹಲವು ಆರೋಪಗಳಿದ್ದವು, ಅವುಗಳಲ್ಲಿ ಒಂದೆಂದರೆ ರಾಣಿಯ ಜತೆ ಗುಪ್ತವಾಗಿ ದೈಹಿಕ ಸಂಬಂಧ ಬೆಳೆಸಿದ್ದು! ಆ ಐವರನ್ನೂ ಸಹ 17.5.1536ರಂದು ವಧೆ ಮಾಡಲಾಯಿತು.
ತನ್ನ ಎರಡನೆಯ ರಾಣಿಯ ತಲೆ ಕಡಿಸಿದ ಎರಡು ವಾರದೊಳಗೆ, 30.5.1536ರಂದು ಹೆನ್ರಿಗೆ ಮತ್ತೊಂದು ಮದುವೆ!ತನ್ನ ಬಹುಕಾಲದ ಪ್ರೇಯಸಿ ಜೇನ್ ಜತೆಯಲ್ಲಿ. ಎಂಟನೇ ಹೆನ್ರಿಗೆ ಗಂಡು ಮಗನನ್ನು (ಆರನೇ ಎಡ್ವರ್ಡ್) ಹೆತ್ತುಕೊಟ್ಟ ಈಕೆ 24.10.1537ರಂದು, ಹೆರಿಗೆಯಾಗಿ ಹನ್ನೆರಡನೆಯ ದಿನಕ್ಕೆ ಮೃತ ಳಾದಳು. ಎಂಟನೇ ಹೆನ್ರಿಯು ನಾಲ್ಕನೆಯ ಮದುವೆಯಾಗಿದ್ದು 6.1.1540ರಂದು. ಕೇವಲ ಆರು ತಿಂಗಳುಗಳ ಕಾಲ ಇದು ಊರ್ಜಿತದಲ್ಲಿದ್ದು, 9.7.1540ರಂದು ಆಕೆಯನ್ನು ರಾಜನು ಅಽಕೃತವಾಗಿ ವಿಚ್ಛೇದನ ಪಡೆದು, ತೊರೆದ! ಆಕೆಗೆ ಎರಡು ಮನೆಗಳನ್ನು ಮತ್ತು ಅಪಾರ ಸಂಪತ್ತನ್ನು ನೀಡಲಾಯಿತು. ಇಲ್ಲಿ ಇನ್ನೊಂದು ದುರಂತವೂ ನಡೆಯಿತು. ಈಕೆಯನ್ನು ರಾಜನಿಗೆ ಪರಿಚಯ ಮಾಡಿಸಿ, ಮದುವೆ ಮಾಡಿಸಿದ ಕ್ರೋಮ್‌ವೆಲ್ ಎಂಬಾತನನ್ನು, ಈ ವಿಚ್ಛೇದನಕ್ಕೆ ಕಾರಣ ಎಂಬ ಗುಮಾನಿಯ ಮೇಲೆ ಆತನ ಮೆಲೆ ಮೋಸ, ವಂಚನೆ ಮೊದಲಾದ ಆರೋಪ ಹೊರಿಸಿ, ವಿಚಾರಣೆ ನಡೆಸಿ, ಆತನ ತಲೆಕಡಿಯಲಾಯಿತು.
ಅದೇ ತಿಂಗಳಿನಲ್ಲಿ, ಅಂದರೆ28.7.1540ರಂದು ಕ್ಯಾಥರೀನ್ ಹೋವರ್ಡ್ ಎಂಬಾಕೆಯನ್ನು ಎಂಟನೇ ಹೆನ್ರಿ ಮದುವೆಯಾದ. ಈಕೆಯ ತಂದೆಯು ಪ್ರಮುಖರಾಜಕೀಯ ನಾಯಕನಾಗಿದ್ದು, ಹೆನ್ರಿಯ ಆಪ್ತ ಎನಿಸಿದ್ದ. ಈ ಮದುವೆ ನಡೆಯುವ ಸಮಯದಲ್ಲಿ ರಾಜನಿಗೆ 49 ವರ್ಷವಾಗಿತ್ತು, ಆಕೆಯ ವಯಸ್ಸು ಕೇವಲ 17. ಆದರೆ, ಕೇವಲ ಒಂದು ವರ್ಷ ಆರುತಿಂಗಳುಗಳ ಕಾಲ ಈ ಮದುವೆ ಊರ್ಜಿತದಲ್ಲಿತ್ತು. ಎಂಟನೇ ಹೆನ್ರಿಗೆ ಇವಳ ಮೇಲೆ ವಿಪರೀತ ಅನುಮಾನ, ಶಂಕೆ, ಅಸಹನೆ, ಕೋಪ ಎಲ್ಲವೂ ಉಂಟಾಯಿತು. ಆಕೆಯು ತನ್ನ ಸಂಬಂಧಿ ಥಾಮಸ್ ಜತೆ ಸೇರಿ, ರಾಜನ ವಿರುದ್ದ ಒಳಸಂಚು ನಡೆಸಿದಳು ಎಂಬ ಆರೋಪ ಹೊರಿಸಿ, ತಪ್ಪಿತಸ್ಥಳನ್ನಾಗಿ ಘೋಷಿಸಲಾಯಿತು. ಜತೆಗೆ, ಎಂಟನೇ ಹೆನ್ರಿಯ ಎರಡನೇ ಹೆಂಡತಿಯ ತಲೆ ಕಡಿದ ಜಾಗದಲ್ಲಿ, ಅಂದರೆ, ಟವರ್ ಆಫ್ ಲಂಡನ್‌ನಲ್ಲಿ, ಈಕೆಯತಲೆಯನ್ನು13.2.1542ರಂದು ಕತ್ತರಿಸಲಾಯಿತು!
ಎಂಟನೇ ಹೆನ್ರಿಯ ಆರನೆಯ ಅಧಿಕೃತ ಹೆಂಡತಿ ಕ್ಯಾಥರೀನ್ ಪಾರ್ ಎಂಬಾಕೆ. ತನ್ನ ಐದನೆಯ ಹೆಂಡತಿಯ ತಲೆ ಕತ್ತರಿಸಿದ ಒಂದು ವರ್ಷದ ನಂತರ,12.7.1543ರಂದು ಈ ಮದುವೆ ನಡೆಯಿತು. ಇವರ ದಾಂಪತ್ಯದಅವಽಮುರು ವರ್ಷ ಆರು ತಿಂಗಳು ಮತ್ತು, ಇದು ಆ ರಾಜನ ಎರಡನೆಯ ಅತಿ ದೀರ್ಘಅವಽಯ ದಾಂಪತ್ಯ. ಈ ಮದುವೆ ನಡೆಯುವ ಸಮಯಕ್ಕೆ, ಎಂಟನೇ ಹೆನ್ರಿಯ ಆರೋಗ್ಯ ಹದಗೆಡಲು ಆರಂಭಿಸಿತ್ತು. ಆತ ವಿಪರೀತ ದಪ್ಪಗಾಗಿ ಬೆಳೆದಿದ್ದ.ಇನ್ನೂ ಅವಕಾಶ ದೊರಕಿದ್ದರೆ, ಆತ ಇನ್ನೊಂದು ಮದುವೆಯಾಗುತ್ತಿದ್ದನೋ ಏನೋ. ಆದರೆ28.1.1547ರಂದು ಎಂಟನೇ ಹೆನ್ರಿ ಸತ್ತುಹೋದ.
ಕ್ಯಾಥರೀನಳಿಗೆ ಇದು ಮೂರನೆಯ ಮದುವೆ. ಆಕೆ ಇನ್ನೂ ಒಂದು ಮದುವೆಯಾದಳು. ಅತಿ ಹೆಚ್ಚು ಬಾರಿ ಮದುವೆಯಾದ ಇಂಗ್ಲೆಂಡಿನ ರಾಣಿ ಎಂಬ ಖ್ಯಾತಿಯೂಈಕೆಗೆ ಇದೆ. ಎಂಟನೇ ಹೆನ್ರಿ ಸತ್ತ ಎರಡು ವರ್ಷಗಳಲ್ಲಿ ಆಕೆಯೂ ತನ್ನ೩೬ನೆಯ ವಯಸ್ಸಿನಲ್ಲಿ ಮೃತಳಾದಳು. ಕೊನೆಕೊನೆಯ ವರ್ಷಗಳಲ್ಲಿ ಎಂಟನೇ ಹೆನ್ರಿಯಆರೋಗ್ಯ ತೀವ್ರವಾಗಿ ಕುಸಿದು, ಆತನ ಸೊಂಟದ ಸುತ್ತಳತೆ೫೪ಇಂಚುಗಳಾಗಿತ್ತು ಎಂದು ಆತನ ವೈದ್ಯರು ಬರೆದಿಟ್ಟಿದ್ದಾರೆ! ಅವನು ಸುಲಭವಾಗಿ ನಡೆಯಲುಆಗುತ್ತಿರಲಿಲ್ಲವಾದ್ದರಿಂದ, ಕೃತಕ ಸಾಧನಗಳ ಸಹಾಯ ಬೇಕಾಗುತ್ತಿತ್ತು.
೧೯೩೬ರಲ್ಲಿ ಆತನ ಕಾಲು ಅಪಘಾತವೊಂದರಲ್ಲಿ ಹಾನಿಗೊಳಗಾದ ನಂತರ, ಆತನ ತೂಕ ಹೆಚ್ಚಲು ಆರಂಭಗೊಂಡಿತ್ತು.೨೮.೧.೧೫೪೭ರಂದು ಆತ ಮರಣಹೊಂದಿದಾಗ, ಆತನ ವಯಸ್ಸು೫೫ವರ್ಷ. ಇಂಗ್ಲಿಷ್ ಇತಿಹಾಸಕಾರರು, ಎಂಟನೇ ಹೆನ್ರಿಯನ್ನು ಹಲವು ಬಾರಿ ಉತ್ತಮ ರಾಜ ಎಂದೂ ಹೇಳಿರುವುದುವಿಸ್ಮಯ ಹುಟ್ಟಿಸುತ್ತದೆ. ಭಾರತದಂತಹ ದೇಶದ ಇತಿಹಾಸವನ್ನು ಬರೆಯಲು ಅವರು ಉಪಯೋಗಿಸಿದ ಮಾನದಂಡವು ಇದಕ್ಕಿಂತ ಭಿನ್ನ ಎಂದು ಇಲ್ಲಿಸ್ಪಷ್ಟವಾಗುತ್ತದೆ. ಆತನ ಸಮಕಾಲೀನ ಇತಿಹಾಸಕಾರರು ಮಾತ್ರವಲ್ಲ, ಈಚಿನ ಇತಿಹಾಸಕಾರನಾದ ಡೇವಿಡ್ ಸ್ಟಾರ್ಕಿ (ಜ.೧೯೪೫) ಸಹ, ಎಂಟನೇ ಹೆನ್ರಿಯುಉತ್ತಮ ಪತಿಯಾಗಿದ್ದ, ಆತನು ಮಹಿಳೆಯರನ್ನು ಇಷ್ಟಪಡುತ್ತಿದ್ದ, ತನ್ನ ಹೆಂಡತಿಯರನ್ನು ಸ್ವೀಟ್‌ಹಾರ್ಟ್ ಎಂದು ಕರೆಯುತ್ತಿದ್ದ, ಮಡದಿಯರನ್ನು ತೊರೆದಾಗಅವರನ್ನು ಅನಾಥರನ್ನಾಗಿ ಮಾಡಲಿಲ್ಲ ಬದಲಿಗೆ, ದೊಡ್ಡ ಮೊತ್ತದ ಸಂಪತ್ತು ನೀಡಿದ್ದ, ಆದರೆ ಕೋಪಬಂದರೆ ಹೆಂಡತಿಯರನ್ನು ತೊರೆಯುತ್ತಿದ್ದ.. ಎಂದೆಲ್ಲಾ ಈತನನ್ನು ಹೊಗಳಿದ್ದಾನೆ!
ಎಂಟನೇ ಹೆನ್ರಿಯ ಮರಣದ ನಂತರ, ಮಗನಾದ ಆರನೇ ಎಡ್ವರ್ಡ್ ರಾಜನಾಗಬೇಕಾಯಿತು. ಆತ ಅಧಿಕಾರ ಸ್ವೀಕರಿಸಿದಾಗ, ಈ ಬಾಲಕನಿಗೆ ಕೇವಲ ಒಂಬತ್ತು ವರ್ಷ ವಯಸ್ಸು! ಆದರೆ ಆರು ವರ್ಷ ಆಳ್ವಿಕೆ ನಡೆಸಿದ ಈತನು೧೫೫೩ರಲ್ಲಿ ಅನಾರೋಗ್ಯದಿಂದ ಮೃತಪಟ್ಟ. ದೂರದ ಇಂಗ್ಲೆಂಡಿನ ಆ ಹದಿನಾರನೆಯಶತಮಾನದ ರಾಜನ ಕುರಿತು ಇಷ್ಟೆಲ್ಲಾ ತಿಳಿದುಕೊಳ್ಳುವ ಅವಶ್ಯಕತೆ ಇದೆಯೆ ಎಂಬ ಪ್ರಶ್ನೆ ನಿಮಗೆ ಎದುರಾದರೆ, ಇದೆ ಎಂದೇ ನನ್ನ ಉತ್ತರ. ಇಬ್ಬರು ರಾಣಿ ಯರನ್ನು ಸುಳ್ಳು ಆಪಾದನೆಗೆ ಸಿಕ್ಕಿಸಿ, ತಲೆಕಡಿಸಿದ, ಒಟ್ಟು ಆರು ಮದುವೆಯಾದ, ಇತರ ಹಲವು ಪ್ರೇಯಸಿರನ್ನು ಇಟ್ಟುಕೊಂಡಿದ್ದ ಈ ರಾಜನು, ಅಲ್ಲಿನ ಇತಿಹಾಸಕಾರರ ದೃಷ್ಟಿಯಲ್ಲಿ ಇಂದಿಗೂ ಸಾಕಷ್ಟು ಗೌರವಯುತ ಸ್ಥಾನ ಪಡೆದಿದ್ದಾನೆ. ಆದರೆ ಅದೇ ಇಂಗ್ಲಿಷ್ ಇತಿಹಾಸಕಾರರು, ನಮ್ಮ ದೇಶದ ರಾಜರುಗಳ ಸಣ್ಣಪುಟ್ಟ ಕೊರತೆಗಳನ್ನು ದೊಡ್ಡದಾಗಿ ಮಾಡಿ, ಅವರ ರಾಜ್ಯಗಳನ್ನು ವಶಪಡಿಸಿಕೊಳ್ಳಲು ಸಹ ಹೇಸಲಿಲ್ಲ ಎಂಬ ಕಟು ಸತ್ಯವನ್ನು ಕಂಡಾಗ, ಇತಿಹಾಸದ ಅರಿವಿನ ಅಗತ್ಯತೆಯ ಹಿನ್ನೆಲೆಯಲ್ಲಿ ಇಂತಹ ಯುರೋಪಿಯನ್ ಚರಿತ್ರೆಯನ್ನು ನಾವು ತಿಳಿದುಕೊಳ್ಳಲೇಬೇಕು ಎಂಬುದು ಸಹಜ ಎನಿಸುತ್ತದೆ.