ಪಾರಮಾರ್ಥ ಪಥದ ಪುಣ್ಯಜೀವಿ ಪ್ರಭುಪಾದರು
ತನ್ನಿಮಿತ್ತ
ಡಾ.ಗುರುರಾಜ ಪೋಶೆಟ್ಟಿಹಳ್ಳಿ
ಲೋಕದಲ್ಲಿ ನೆಮ್ಮದಿ ಶಾಂತತೆಯನ್ನು ತುಂಬುವ ಅಕ್ಷಯ ಪಾತ್ರೆ, ಮಾನವ ಸಂಬಂಧವನ್ನು ದೇಶಕಾಲಾ ತೀತವಾಗಿ ಬೆಸೆಯುವ ಮಾಧ್ಯಮ. ವ್ಯಕ್ತಿತ್ವವನ್ನು ಬೆಳೆಸುವ, ಅರಿವನ್ನು ವಿಸ್ತರಿಸಿಕೊಳ್ಳಲು ಅನುವು ಮಾಡಿಕೊಡುವ ಭಕ್ತಿಯ ಬಗ್ಗೆ ವಿಶೇಷ ಕೃಷ್ಣಭಕ್ತಿಯ ಬಗ್ಗೆ ಪ್ರಭುಪಾದರಿಗೆ ಅಪಾರ ನಂಬಿಕೆಯಿತ್ತು; ವಿಶ್ವಾಸ ವಿತ್ತು.
ಆ ನಂಬಿಕೆ ವಿಶ್ವಾಸವೇ ಅವರ ಬದುಕಿಗೆ, ಅವರ ಅಸ್ತಿತ್ವಕ್ಕೆ ನೆಲೆ ಬೆಲೆ ತಂದುಕೊಟ್ಟಿತು. ಸಾಧನೆಗೆ ದಾರಿ ತೋರಿತು. ವಿಶ್ವಮಟ್ಟದಲ್ಲಿ ಕೀರ್ತಿ ಸಂಪಾದಿಸಿ ಕೊಟ್ಟಿತು; ಎಲ್ಲ ಕಾಲಕ್ಕೂ ಚಿರಂಜೀವಿಯಾಗಿಸಿತು. ಪ್ರಭುಪಾದರು ಹಿಪ್ಪಿಗಳಿಗೆ ಧಾರ್ಮಿಕವಾಗಿ ಒಂದು ಹೊಸನೆಲೆಯನ್ನು ಕಲ್ಪಿಸುತ್ತಾರೆ. ಅದೇ ಹೊತ್ತಿನಲ್ಲಿಭಾರತದಲ್ಲಿ ನಕ್ಸಲೀಯರ ಚಟುವಟಿಕೆಯ ಬೆಂಕಿ ತೀವ್ರಸ್ವರೂಪದಲ್ಲಿ ಉಗುಳುತ್ತದೆ. ಅದಕ್ಕೆ ಪ್ರಭುಪಾದರು ಭಗವದ್ಗೀತೆಯ ಮೂಲಕ ಉತ್ತರ ಕೊಟ್ಟಿದ್ದನ್ನು ಗಮನಿಸಬೇಕು. ಭಗವದ್ಗೀತೆ ಭಕ್ತಿಯ ಪರಿಕಾಷ್ಠೆಯನ್ನು ಪ್ರಕಟಿಸುವಂತೆ ಸಾಮಾಜಿಕ ಜವಾಬ್ದಾರಿಯನ್ನೂ ಪರಿಚಯಿಸುತ್ತದೆ.
ಪ್ರಭುಪಾದರಿಗೆ ತಮ್ಮ ಕಾರ್ಯಚಟುವಟಿಕೆಯ ಬಗ್ಗೆ ಮತ್ತು ತಮ್ಮ ಅಸ್ತಿತ್ವದ ಬಗ್ಗೆ ಖಚಿತತೆ ಇತ್ತು; ದೃಢ ಸಂಕಲ್ಪವಿತ್ತು. ಮಾನವಸೇವೆ ಎಂಬುದು ಅವರಿಗೆ ಲೌಕಿಕ ಅನುಕೂಲತೆಗಳನ್ನು ಕಲ್ಪಿಸಿಕೊಡುವುದರಲ್ಲಿ ಅಲ್ಲ. ಶ್ರದ್ಧೆ ಭಕ್ತಿ ಉಂಟುಮಾಡುವುದರಲ್ಲಿ ಎಂದು ಭಾವಿಸಿದ್ದರು. ಏಕೆಂದರೆ ಶ್ರದ್ಧೆ ಮತ್ತು ಭಕ್ತಿ ಪರ್ಯಾಯ ವಾದುವು ಗಳು. ಹೊರನೋಟದಲ್ಲಿ ಅಂತರವಿದ್ದರೂ ಗುರಿತಲುಪುವುದು ಒಂದರಲ್ಲೇ. ಶ್ರದ್ಧೆಯೇ ಭಕ್ತಿಯ ಮಾಧ್ಯಮ; ಸಾಧನ. ಆ ಕಾರಣಕ್ಕೆ ಭಗವದ್ಗೀತೆ ಅವರ ಪಾಲಿಗೆ ಸಮಾಜ ಸೇವೆಯ ಕೈಪಿಡಿಯಾಗಿರಲಿಲ್ಲ… ಮಾನವನ ಸಮಗ್ರ ಜೀವನವನ್ನು ಉತ್ತಮಪಡಿಸಿಕೊಳ್ಳಲು ಕೃಷ್ಣ ನೀಡಿದ ಉಪದೇಶದ ಸಾರಸರ್ವಸ್ವ ಪ್ರಭುಪಾದರ ವಿಶೇಷತೆ ಎಂದರೆ ವರ್ತಮಾನದ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಪ್ರತಿಕ್ರಿಯಿ ಸುತ್ತಿದ್ದುದು.
ಆಧ್ಯಾತ್ಮಿಕತೆ ಎನ್ನುವುದು ಅವರ ದೃಷ್ಟಿಯಲ್ಲಿ ಕೇವಲ ಅಧ್ಯಯನ ಅಧ್ಯಾಪನ, ವ್ಯಕ್ತಿಗತ ಸಿದ್ಧಿಯಾಗಿರಲಿಲ್ಲ. ವರ್ತಮಾನ ಎಂಬುದನ್ನು ಪ್ರಭುಪಾದರು ರಾಷ್ಟ್ರೀಯತೆಯ ಮೂಲಕ ಗ್ರಹಿಸಿದವರು. ಹೀಗಾಗಿ ಭಾರತದ ಹದಗೆಟ್ಟ ರಾಜಕಾರಣ, ಶಿಕ್ಷಣ ವ್ಯವಸ್ಥೆ, ತುರ್ತುಪರಿಸ್ಥಿತಿ, ಬ್ರಿಟಿಷರ ಕುತಂತ್ರ, ಯುದ್ಧಸಂದರ್ಭ ಬಂಗಾಳ ವಿಭಜನೆ ಮುಂತಾದವುಗಳನ್ನೂ ಪ್ರಶ್ನಿಸುತ್ತಿದ್ದರು. ಅವರ ಪ್ರಶ್ನಿಸುವ ಮನೋಭಾವ ಎಷ್ಟೋ ಬಾರಿ ರಾಜಕೀಯ ಧುರೀಣರನ್ನು ಕಂಗೆಡಿಸುತ್ತಿತ್ತು. ಮುಜುಗರಕ್ಕೆ ಈಡುಮಾಡುತ್ತಿತ್ತು. ಏಕೆಂದರೆ ಅವರ ಎದುರು ಇಡೀ ಭಾರತದ ಮುನ್ನೋಟವಿತ್ತು.
ಕೊಲ್ಕೊತ್ತಾದ ಹೊರವಲಯದ ಟಾಲಿಗಂಜ್‌ನಲ್ಲಿ1896ಸೆಪ್ಟೆಂಬರ್ ೧ರಂದು ಜನಿಸಿದ ಶಿಶುವಿಗೆ ರಜನಿ-ಗೌರವಮೋಹನ್ ರು ಇಟ್ಟ ಹೆಸರು ಅಭಯ ಚರಣ. ಅದರೊಂದಿಗೆ ಮನೆತನದ ಹೆಸರಾದ ‘ಡೇ’ ಕೂಡ ಸೇರಿಕೊಂಡಿತು. ಚರಣನ ಜಾತಕ ನೋಡಿದ ಜ್ಯೋತಿಷಿ ಹೇಳಿದ: ‘ಮಗುವಿನ ಅತ್ಯದ್ಭುತ ದೆಶೆ ಶುರು ವಾಗುವುದು ಇವನ ಎಪ್ಪತ್ತನೇ ವಯಸ್ಸಿನ ನಂತರ. ಆ ವಯಸ್ಸಿನಲ್ಲೇ ಇವನು ಸಮುದ್ರಯಾನ ಮಾಡುತ್ತಾನೆ.
ಧರ್ಮಪ್ರಸಾರ ಮಾಡುತ್ತ ಜಗತ್ತಿನಲ್ಲಿ ನೂರೆಂಟು ದೇವಮಂದಿರಗಳನ್ನು ನಿರ್ಮಿಸುತ್ತಾನೆ. ಸುತ್ತಲಿದ್ದವರಿಗೆ ಈ ಮಾತುಗಳು ಹಾಸ್ಯಾಸ್ಪದ ಎನಿಸಿದವು. ಜನ ಮಾತ್ರ ಇವನೊಬ್ಬ ಅಪೂರ್ವ ವ್ಯಕ್ತಿಯಾಗುತ್ತಾನೆಂದು ಮಾತಾಡಿಕೊಂಡರು. ಜ್ಯೋತಿಷ್ಯ ನಿಜವೋ ಸುಳ್ಳೋ? ಜ್ಯೋತಿಷಿಯ ಬಾಯಿಂದ ಆ ಮಾತುಗಳು ಬಂದವೆಂದು ನಂಬಬೇಕೋ ಬಿಡಬೇಕೋ? ಅಂತೂ ಅಭಯ ಚರಣ ಚಿಕ್ಕಂದಿನಲ್ಲೇ ಧಾರ್ಮಿಕಪ್ರಜ್ಞೆಯನ್ನು, ಶ್ರೀ ಕೃಷ್ಣಭಕ್ತಿಯನ್ನೂ ತನ್ನೊಳಗೆ ಆವಾಹಿಸಿ ಕೊಳ್ಳುತ್ತ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧವಾದ ನಿಲುವನ್ನು ಪ್ರಕಟಿಸಿ ಬಿ.ಎ. ಪದವಿಯನ್ನು ನಿರಾಕರಿಸಿ, ದಾಂಪತ್ಯ ಜೀವನದ ಬಗೆಗೆ ಆಸಕ್ತಿಯಿಲ್ಲದೆಯೇ ವಿವಾಹವನ್ನೂ ಮಾಡಿಕೊಂಡು ಸಂಸಾರ ವ್ಯವಹಾರ ಆಧ್ಯಾತ್ಮಗಳ ಸೆಳೆವಿನಲ್ಲಿ ಸಿಲುಕಿಕೊಂಡು ಒದ್ದಾಡುತ್ತ, ಎಲ್ಲ ಕಷ್ಟ ನಿಷ್ಠುರಗಳನ್ನು ಸತ್ವಪರೀಕ್ಷೆಯೆಂದೇ ಭಾವಿಸಿ, ಶ್ರೀ ಕೃಷ್ಣನೇ ಸಕಾಲದಲ್ಲಿ ಎಲ್ಲವನ್ನೂ ಪರಿಹರಿಸುತ್ತಾನೆಂದು ಬಲವಾಗಿ ನಂಬಿ, ಭಕ್ತಿಸಿದ್ಧಾಂತ ಪ್ರಭು ಪಾದರನ್ನು ಗುರುವಾಗಿಸಿಕೊಂಡು ಸನ್ಯಾಸ ದೀಕ್ಷೆಯನ್ನೂ ಪಡೆದು, ಗುರುವಿನ ಹಂಬಲ ದಂತೆ ವ್ಯಾಸಮಹರ್ಷಿ ವಿರಚಿತ ಶ್ರೀಮದ್ಭಾಗವತವನ್ನು ಇಂಗ್ಲಿಷಿಗೆ ಭಾಷಾಂತರಿಸಿ ಅವುಗಳನ್ನು ಕೈಯಲ್ಲಿ ಹಿಡಿದುಕೊಂಡು ಪಾಶ್ಚಾತ್ಯ ಜಗತ್ತಿನಲ್ಲಿ ದಿಗ್ವಿಜಯ ಯಾತ್ರೆಯನ್ನು ಯಶಸ್ವಿಯಾಗಿ ಮಾಡಬೇಕನ್ನುವ ಧೀರಸಂಕಲ್ಪವಿರಿಸಿಕೊಂಡು, ಎದುರಾದ ಅಡೆತಡೆ ಗಳನ್ನೆಲ್ಲ ಆತ್ಮಬಲದಿಂದಲೇ ನಿವಾರಿಸಿಕೊಂಡು ‘ಭವಿಷ್ಯವಾಣಿಯನ್ನು ಸತ್ಯಸ್ಯ ಸತ್ಯವಾಗಿಸಿ, ಮಹಾಸಾಧಕ ಎನಿಸಿದ್ದು ಒಂದು ರೋಚಕಕಥಾನಕ.
ಅಭಯ ಚರಣ ಸಂನ್ಯಾಸ ದೀಕ್ಷೆ ಸ್ವೀಕರಿಸಿ ಭಕ್ತಿವೇದಾಂತ ಪ್ರಭುಪಾದರಾದಾಗ ಕೈಯಲ್ಲಿ ಒಂದು ಚಿಕ್ಕಾಸೂ ಇರಲಿಲ್ಲ. ಜೋಗಳಿಯೊಂದೇ ಆಸ್ತಿಯಾಗಿದ್ದರೂ ಮನಸ್ಸಿನಲ್ಲಿ ಮಾತ್ರ ಹೊಸಹೊಸ ಉನ್ನತ ಸಾಧನೆಗಳ ಹುಮ್ಮಸ್ಸಿತ್ತು. ಹದಿನೆಂಟು ಸಾವಿರ ಶ್ಲೋಕಗಳ ಹನ್ನೆರಡು ಸ್ಕಂದಗಳು. ಹಗಲಿರುಳು ವಿರಾಮವಿಲ್ಲದೆ ದುಡಿದರೂ ಯೋಜನೆಯನ್ನು ಪೂರ್ಣಗೊಳಿಸಲು ಕನಿಷ್ಠ ಐದರಿಂದ ಏಳು ವರ್ಷಗಳು ಬೇಕು. ಆಗ ಭಕ್ತಿ ವೇದಾಂತರಿಗೆ ಅರವತ್ತೈದು ವರ್ಷದ ಇಳಿವಯಸ್ಸು. ಹೆಜ್ಜೆಹೆಜ್ಜೆಗೂ ಪರೀಕ್ಷೆಗಳು, ಸವಾಲುಗಳು ಬೇರೆ. ಆದರೆ ಕೈಗೆತ್ತಿಕೊಂಡ ಯೋಜನೆ ಯನ್ನು ಪೂರೈಸಿಯೇ ತೀರುವೆನೆಂಬ ಆತ್ಮವಿಶ್ವಾಸಕ್ಕೆ ಅವರಲ್ಲಿ ಕೊರತೆಯಿರಲಿಲ್ಲ.
ಅದನ್ನುಸಾಧಿಸಿಯೇತೀರಿದರು, ಮಹಾಸಾಧಕರೆನಿಸಿಕೊಂಡರು. ಶ್ರೀಲ ಭಕ್ತಿವೇದಾಂತ ಪ್ರಭುಪಾದರು ತಮ್ಮ 69ನೇ ವಯಸ್ಸಿನಲ್ಲಿ ನ್ಯೂಯಾರ್ಕ್‌ಗೆ ಹೊರಟರು. ಅವರು ಒಂದು ಕೈಯಲ್ಲಿ ಭಗವದ್ಗೀತೆಯನ್ನೂ ಮತ್ತೊಂದು ಕೈಯಲ್ಲಿ ಶ್ರೀಮದ್ಭಾಗವತವನ್ನು ಹಿಡಿದು,ಕೃಷ್ಣಪ್ರಜ್ಞೆಯನ್ನು ಅಮೆರಿಕ ದೇಶದ ಜನರಿಗೆ ಕೃಷ್ಣನ ಹುಚ್ಚನ್ನು ಹಿಡಿಸಿ, ಆಧ್ಯಾತ್ಮಿಕ ಹಸಿವನ್ನು ತುಂಬಿಸಲು ಹೊರಟರು. ಮಹಾಸಾಧಕರೆನಿಸಿದ ಶ್ರೀಲ ಪ್ರಭುಪಾದರು ನಿಜಕ್ಕೂ ಒಬ್ಬ ಪವಾಡಪುರುಷರು. ಅವರು ಇತರ ಕೆಲವರಂತೆ ಇಂದ್ರಜಾಲವನ್ನು ಮಾಡಿದವರಲ್ಲವೆಂಬುದು ನಿಜ.
ಕೃಷ್ಣನಂತೆ ಗೋವರ್ಧನಗಿರಿಯನ್ನು ಎತ್ತಲಿಲ್ಲ. ಬಾಯಲ್ಲಿ ಬ್ರಹ್ಮಾಂಡವನ್ನು ತೋರಲಿಲ್ಲ. ಅವರ ಸ್ಪರ್ಶದಿಂದ ಕುರುಡನಿಗೆ ಕಣ್ಣು ಬರಲಿಲ್ಲ. ಕುಂಟನಿಗೆ ಕಾಲು ಬರಲಿಲ್ಲ. ಆದರೂ ಅವರೊಂದು ಅದ್ಭುತ ವೆಂಬುದರಲ್ಲಿ ಸಂಶಯವಿಲ್ಲ. ಅವರ ಸಾಹಸಗಾಥೆ ಪ್ರಾರಂಭವಾಗುವುದು69ನೆಯ ವಯಸ್ಸಿನಲ್ಲಿ. ಅಮೇರಿಕಾಗೆಹಡಗಿನಲ್ಲಿ ಪ್ರವಾಸ. ಟಿಕೆಟ್ಟಿಗೆ ಹಣವಿಲ್ಲ. ಬೇರೊಬ್ಬರ ಸಹಾಯ. ಕಿಸೆಯಲ್ಲಿ ಇದ್ದದ್ದು ಕೇವಲ40ರೂಪಾಯಿ. ಪ್ರಯಾಣದ ನಡುವೆ ಎರಡು ಬಾರಿ ಹೃದಯಾ ಘಾತ. ಅಲ್ಲಿ ಆಶ್ರಯ ಕೊಡುವುದಕ್ಕೆ ಸಿದ್ಧನಾದ ವ್ಯಕ್ತಿಯ ಪರಿಚಯವೂ ಇಲ್ಲ.
ಅವನಿಂದ ನಿರೀಕ್ಷಿತ ಸಹಾಯ ಸಿಗಲಿಲ್ಲ. ವೀಸಾದಅವಧಿಒಂದು ತಿಂಗಳು ಮಾತ್ರ. ಅನಂತರ ಸಿಕ್ಕಿದ ವಸತಿ ಸ್ಥಳ ಜಗತ್ತಿನಲ್ಲಿಯೇ ಅತ್ಯಂತ ಕೆಟ್ಟ ಜಾಗವೆಂಬ ಕುಖ್ಯಾತಿ ಪಡೆದ ಸ್ಥಳ. ಅಲ್ಲಿರುವವರು ಹಿಪ್ಪಿಗಳು, ಕುಡುಕರು, ಸಕಲ ವಿಧವಾದ ಅನೈತಿಕ ವ್ಯವಹಾರ ಪರಿಣತರು. ಸಂನ್ಯಾಸಿಯಿರಲಿ ಮರ್ಯಾ ದಸ್ಥರೂ ಕಾಲಿಡಲು ಅಂಜುವ ಪ್ರದೇಶ. ಆದರೆ, ಪ್ರಭುಪಾದರು ಹಿಂಜರಿಯಲಿಲ್ಲ. ಬದುಕಿನ ಮಹತ್ವವನ್ನೇ ತಿಳಿಯದ ಆ ಜನರಿಗೆ ಕೃಷ್ಣಪ್ರಜ್ಞೆಯಅವಶ್ಯಕತೆಯನ್ನು ಮನಗಂಡರು. ಅವರ ಮಧ್ಯದಲ್ಲಿ ಅವರಂತಾಗದೆ ಅವರನ್ನು ಮನುಷ್ಯರನ್ನಾಗಿಸಲು ಹೆಣಗಿದರು.
ದಾರಿತಪ್ಪಿ ತೊಳಲಾಡುತ್ತಿರುವವರಿಗೆ ದಾರಿದೀಪವಾದರು. ಅವರು ನಿಜವಾದ ಆನಂದದ ಮಾರ್ಗವನ್ನು ಕಂಡುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಗಳಾದರು. ಎಲ್.ಎಸ್.ಡಿ. ಮರಿಜುವಾನ, ಹಶಿಶ್‌ಗಳ ಅಮಲಿನಲ್ಲಿದ್ದವರಿಗೆ ಭಕ್ತಿಯ ಅಮಲೇರುವಂತೆ ಮಾಡಿದರು. ಅಮೆರಿಕದಂಥ ದೇಶದಲ್ಲಿ ಕೃಷ್ಣನಿಗಾಗಿ ಭವ್ಯಮಂದಿರ ಗಳನ್ನು ನಿರ್ಮಿಸಿದರು; ರಥಯಾತ್ರೆ ನಡೆಸಿದರು. ತಮ್ಮ ಜೀವಿತಕಾಲದಲ್ಲಿ108ಮಂದಿರಗಳ ನಿರ್ಮಾಣಕ್ಕೆ ಕಾರಣರಾದರು. ಪ್ರಪಂಚದ ಹಲವಾರು ದೇಶ ಗಳಲ್ಲಿ ಕೃಷ್ಣಪ್ರeಯನ್ನು ಬೆಳೆಸಿದರು. ದಿನದಲ್ಲಿ ಕೇವಲ ಒಂದೂವರೆ ತಾಸಿನಷ್ಟು ನಿದ್ರೆ ಮಾಡುತ್ತ ಹಲವಾರು ಕೃತಿಗಳನ್ನು ರಚಿಸಿದರು.
ಇವುಗಳನ್ನು ಪವಾಡವೆಂದು ಕರೆಯಬೇಕಲ್ಲವೇ? ಪ್ರಭುಪಾದರು ಆಧ್ಯಾತ್ಮಿಕ ಗುರು ಮಾತ್ರವಲ್ಲ, ವ್ಯಾವಹಾರಿಕ ಕ್ಷೇತ್ರದಲ್ಲಿಯೂ ನಿಪುಣರಾಗಿದ್ದರು. ಅವರು ವ್ಯಾಪಾರದಲ್ಲಿ ಸೋಲನ್ನು ಕಂಡರು. ಅದಕ್ಕೆ ಕಾರಣ ಅವರ ವ್ಯವಹಾರಜ್ಞಾನದ ಕೊರತೆಯಲ್ಲ; ಆಧ್ಯಾತ್ಮಿಕ ಕ್ಷೇತ್ರದಲ್ಲಿದ್ದ ಆಸಕ್ತಿಯೆನಿಸುತ್ತದೆ. ಅಥವಾ ಅದು ಭಗವಂತನ ಇಚ್ಛೆಯೂ ಆಗಿರಬಹುದು. ಲೌಕಿಕ ಬದುಕಿನ ಯಶಸ್ಸಿನಿಂದಾಗಿ ವ್ಯಾಮೋಹ ಹೆಚ್ಚ ಬಹುದಿತ್ತು. ಹಾಗಾಗಬಾರದೆಂಬುದು ಭಗವಂತನ ಆಶಯ ವಿರಬೇಕು.
ದೇವಾಲಯಗಳ ನಿರ್ಮಾಣದ ಸಮಯದಲ್ಲಿ ಅವರು ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ತೋರುವ ಜಾಣ್ಮೆ ಪ್ರಶಂಸನೀಯ. ಮುಂಬಯಿಯಲ್ಲಿ ದೇವಸ್ಥಾನ ಕ್ಕಾಗಿ ಜಮೀನು ಖರೀದಿ ಸುವಾಗ ನಾಯರ್‌ರಂತಹ ನಯವಂಚಕನನ್ನು ಬಗ್ಗಿಸಿದ್ದು, ಶ್ರೀಮತಿ ನಾಯರಳನ್ನು ಪಳಗಿಸಿದ್ದು, ಅಮೆರಿಕದ ವಂಚಕರನ್ನುಎದುರಿಸಿದ್ದೇ ಮುಂತಾದ ಘಟನೆಗಳು ಅವರು ತಮ್ಮ ಆರಾಧ್ಯ ದೈವವಾದ ಕೃಷ್ಣನಿಂದ ಈ ಜಾಣ್ಮೆಯನ್ನು ಕಲಿತರೋ ಎನ್ನುವಂತಿದೆ. ಯಾರನ್ನು ಹೇಗೆ ಪಳಗಿಸಬೇಕೆಂಬುದನ್ನು ಅವರು ಚೆನ್ನಾಗಿ ತಿಳಿದಿದ್ದರೆಂಬು ದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಅವರು ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ – ವಜ್ರಕ್ಕಿಂತ ಕಠೋರ ಕುಸುಮಕ್ಕಿಂತ ಮೃದು ಎಂಬ ಮಾತಿಗೆ ನಿದರ್ಶನ. ಅವರು ಶಿಷ್ಯರನ್ನು ನೋಡಿಕೊಂಡ ರೀತಿ ಯನ್ನು ಗಮನಿಸಿದರೆ ಇದು ಸ್ಪಷ್ಟ.
ಶಿಷ್ಯರು ಆಲಸ್ಯ ತೋರಿದರೆ ಕೆಂಡಾಮಂಡಲವಾಗುತ್ತಿದ್ದರು. ಅಂತೆಯೇ ಅವರು ಮಾಡಿದ ಒಳ್ಳೆಯ ಕಾರ್ಯಗಳನ್ನು ಮೆಚ್ಚುತ್ತಿದ್ದರು. ಅವರ ಮುಗ್ಧತೆ ಯನ್ನು ಇತರರು ದುರುಪಯೋಗ ಮಾಡಿಕೊಂಡಿದ್ದು ತಿಳಿದಾಗ ಸರಿಪಡಿಸುತ್ತಿದ್ದ ರು. ಅವರು ಶಿಷ್ಯರನ್ನು ನಡೆಸಿಕೊಂಡ ರೀತಿಯು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಯಾಗಿದೆ.ಅಧ್ಯಯನಾರ್ಹವಾಗಿದೆ. ಅವರ ಸಾಂಸಾರಿಕ ಜೀವನ ಸಂತಸದಾಯಕವಾಗಿರಲಿಲ್ಲ. ಪತ್ನಿಯಾದ ರಾಧಾರಾಣಿ ಅನುಕೂಲೆಯಾಗಿರಲಿಲ್ಲ. ಅದರಿಂದ ಬೇಸರ ಗೊಂಡ ಪ್ರಭುಪಾದರು ಮತ್ತೊಂದು ಮದುವೆಯಾಗುವ ವಿಚಾರ ಮಾಡುತ್ತಾರೆ. ಅದು ಆ ಕಾಲದಲ್ಲಿ ನಿಷಿದ್ಧವಾಗಿರಲಿಲ್ಲ.
ಆದರೆ ತಂದೆ ಗೌರಮೋಹನರು ಅದನ್ನು ತಡೆಯುತ್ತಾರೆ. ಅನುಕೂಲೆಯಾದ ಮಡದಿಯಿಂದ ಸಾಂಸಾರಿಕ ಸುಖ ದೊರೆಯಬಹುದಾದರೂ ಭಗವಂತನ ಸೇವೆಯ ಅವಕಾಶವನ್ನು ಕಸಿದೀತೆಂಬುದು ಉಪದೇಶ. ಅದು ಅಭಯಚರಣರ ಮನಸ್ಸನ್ನು ಬದಲಾಯಿಸಿತು. ಹರೇ ಕೃಷ್ಣ ಚಳವಳಿಯ ಅಭೂತಪೂರ್ವ ಯಶಸ್ಸಿನ ಜೊತೆಗೆ, ಶ್ರೀ ಪ್ರಭುಪಾದರ ಮತ್ತೊಂದು ವಿಶಿಷ್ಟ ಸಾಧನೆ ಅವರ ಪುಸ್ತಕಗಳ ಅದ್ಭುತ ಯಶಸ್ಸು. ಅವರ ಶ್ರೀಮದ್-ಭಾಗವತದ ಇಂಗ್ಲಿಷ್ ಅನುವಾದವು ಆ ಭಾಷೆಗೆ ಸಂಸ್ಕೃತ ಮೂಲದಿಂದ ಆದ ಮೊಟ್ಟ ಮೊದಲ ತರ್ಜುಮೆ ಮತ್ತು ವಿಸ್ತೃತ ವ್ಯಾಖ್ಯಾನವನ್ನೂ ಒಳಗೊಂಡಿದೆ ಎನ್ನುವುದು ಪಾಶ್ಚಾತ್ಯ ವಿದ್ವಾಂಸರಲ್ಲಿ ಸಾಕಷ್ಟು ಆಸಕ್ತಿಯನ್ನು ಸೃಷ್ಟಿಸಿತು. ಅವರೆಲ್ಲರ ಮಾತುಗಳ ಸಾರವೆಂದರೆ ಭಾರತದ ಪ್ರಾಚೀನ ವೈದಿಕ ಸಂಸ್ಕೃತಿ, ಧರ್ಮ ಮತ್ತು ತತ್ವಶಾಸ್ತ್ರದ ಬಗ್ಗೆ ಮಾನವ ಕುಲದ ತಿಳುವಳಿಕೆಗೆ ಮಹತ್ವದ ಕೊಡುಗೆ ಈ ಕೃತಿ ಎನ್ನುವುದು.
ಸಾಟಿಯಿಲ್ಲದ ಶ್ರೇಷ್ಠತೆಯ ಆಧ್ಯಾತ್ಮಿಕ ಮೇರುಕೃತಿ ಎಂಬ ಸಾರ್ವತ್ರಿಕ ಮೆಚ್ಚುಗೆ ಈ ಅನುವಾದದ ಹೆಗ್ಗಳಿಕೆಯಾಗುಳಿದಿದೆ. ಅಲ್ಪಾವಽಯಲ್ಲಿಯೇ, ಶ್ರೀಲ ಪ್ರಭು ಪಾದರ ಪುಸ್ತಕಗಳು ಬಹುತೇಕ ಎಲ್ಲಾ ಪ್ರಮುಖ ಗ್ರಂಥಾಲಯಗಳಲ್ಲಿ ಲಭ್ಯವಾದವು ಮತ್ತು ಅವು ಅಮೆರಿಕ, ಯುರೋಪ್ ಮತ್ತು ಏಷ್ಯಾದಾದ್ಯಂತ ವಿಶ್ವವಿದ್ಯಾ ಲಯಗಳು ಮತ್ತು ಕಾಲೇಜುಗಳಲ್ಲಿ ಧಾರ್ಮಿಕ ಅಧ್ಯಯನದ ಕ್ಷೇತ್ರದಲ್ಲಿ ನಿಯಮಿತ ಪಠ್ಯಕ್ರಮದ ಭಾಗವಾಯಿತು ಎನ್ನುವುದು ಪ್ರಭುಪಾದರ ಜೀವಿತದ ಸಾಧನೆಗೆ ಅವರ ಜೀವಿತ ಕಾಲದಿಂದ ಸಿಕ್ಕ ಅತಿ ದೊಡ್ಡ ಗೌರವವಾಗಿದೆ.
ಇರುವುದೊಂದೇ ಧರ್ಮ, ಅದು ಭಾಗವತ ಧರ್ಮ; ಇರುವುದೊಂದೇ ದೈವ, ಅದು ಶ್ರೀಕೃಷ್ಣ ಎಂಬ ತತ್ವವನ್ನು, ಶ್ರೀಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಬೇಕೆನ್ನುವ ಮಹತ್ವಾಕಾಂಕ್ಷೆಯನ್ನಿರಿಸಿಕೊಂಡು, ತಮ್ಮ ಜೀವಿತಾವಧಿಯನ್ನು ಅದಕ್ಕಾಗಿಯೇ ಮೀಸಲಾ ಗಿರಿಸಿ, ಚಿಂತನೆ-ಯೋಜನೆಗಳನ್ನು ಶಿಸ್ತುಬದ್ಧ ವಾಗಿ ಅನುಷ್ಠಾನಗೊಳಿಸುವುದಕ್ಕಾಗಿಯೇ ಶ್ರೀಕೃಷ್ಣಪ್ರಜ್ಞೆಯನ್ನು ಪ್ರಚಾರಪಡಿಸುವ ‘ಇಸ್ಕಾನ್ ಸಂಸ್ಥೆಯನ್ನು ಪ್ರಾರಂಭಿಸಿ, ಅದು ಯಶಸ್ಸಿನ ಹೆಜ್ಜೆಗಳನ್ನು ಇಡಲು ಪ್ರೇರಕರೂ ಕಾರಣೀಭೂತರೂ ಆದ ಶ್ರೀಲ ಪ್ರಭುಪಾದರ ಹೋರಾಟ ಮತ್ತು ಪ್ರವಾಹದ ವಿರುದ್ಧ ಈಜಿ ಗೆಲ್ಲುವ, ಸಾಹಸಮಯ ಬದುಕು ಎಲ್ಲರಿಗೂ ಮಾದರಿ.