ಬೆಲೆ ಏರಿಕೆ: ರಾಜಕಾರಣಿಗಳು ನೋಡುವ ದೃಷ್ಟಿ ಬದಲಾಗಲಿ
ಅಭಿಮತ
ರಮಾನಂದ ಶರ್ಮಾ
ಚುನಾವಣೆ ಮುಗಿದ ತಕ್ಷಣ ಬೆಲೆ ಏರಿಕೆ ಪರ್ವ ಅರಂಭವಾಗುತ್ತದೆ ಎನ್ನುವ ಜನಸಾಮಾನ್ಯರ ನಿರೀಕ್ಷೆ ಸುಳ್ಳಾಗಲಿಲ್ಲ. ಚುನಾವಣಾ ಪರಿಣಾಮ ಪ್ರಕಟವಾದ ಮೂರೇ ದಿನಕ್ಕೆ ಕೆಲವು ಹೆzರಿಗಳಲ್ಲಿ ಟೊಲ್ ಹೆಚ್ಚಳವಾಯಿತು. ಕಳೆದ ನಾಲ್ಕು ವರ್ಷಗಳಿಂದ ಇಂಧನದ ಮೇಲೆ ತೆರಿಗೆ ಹೆಚ್ಚಿಸಲಿಲ್ಲವೆಂದು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಲಾಯಿತು. ನೆರೆರಾಜ್ಯಗಳಲ್ಲಿ ಹಾಲಿನ ದರ ನಮ್ಮರಾಜ್ಯಕ್ಕಿಂತಲೂ ಹೆಚ್ಚಿದೆ ಎಂದು ಸಮತೋಲನ ಸಾಧಿಸಲು ಮತ್ತು ಹಾಲು ಉತ್ಪಾದಕರಿಗೆ ಹೆಚ್ಚಿನ ಧನಸಹಾಯ ನೀಡುವ ಉದ್ದೇಶದ ಹೆಸರಿನಲ್ಲಿ ಹಾಲಿನ ದರವನ್ನು ಏರಿಸಲಾಯಿತು.
ಸಾರಿಗೆ ದರದ ಏರಿಕೆಯ ಸುಳಿವು ನಿಧಾನವಾಗಿ ಹರಿಯುತ್ತಿದೆ. ಇದರ ಸಂಗಡ ವಿದ್ಯುತ್ ದರ ಏರಿದರೆ ಆಶ್ಚರ್ಯವಿಲ್ಲ. ಜನಸಾಮಾನ್ಯರು, ತಿಂಗಳ ಕೊನೆಯನ್ನು ತಂತಿಯ ಮೇಲಿನ ನಡಿಗೆಯಂತೆ ಕಷ್ಟದಲ್ಲಿ ದೂಡುತ್ತಾ ಅಕ್ರೋಶ ವ್ಯಕ್ತ ಮಾಡುತ್ತಿದ್ದಾರೆ. ರಾಜಕಾರಿಣಿಗಳು ತಾವು ಇರುವುದು ಅಡಳಿತ ಪಕ್ಷದ ಅಥವಾ ವಿರೋಧ ಪಕ್ಷದ ಎನ್ನುವುದನ್ನು ದೃಢೀಕರಿಸಿಕೊಂಡು ಪ್ರತಿಕ್ರಿಯಿಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯೊಂದರಲ್ಲಿ ಬೆಲೆ ಏರಿಕೆ ಬಗೆಗೆ ಪ್ರಶ್ನಿಸಿದಾಗ ಇಂದಿರಾಗಾಂಧಿಯವರು, ಇದು ಭಾರತಕ್ಕೆ ಮಾತ್ರ ಸೀಮಿತ ವಾಗಿಲ್ಲ, ಇದು ಅಂತಾ ರಾಷ್ಟ್ರೀಯ ಸಮಸ್ಯೆ ಎಂದು ವಿಶ್ಲೇಷಿಸಿ ಪತ್ರಕರ್ತರ ಬಾಯಿ ಮುಚ್ಚಿಸಿದ್ದರು. ಹಾಗೆಯೇ ಮುಂದುವರೆದು, ದೇಶ ಅಭಿವೃದ್ದಿಯಾಗುತ್ತಿರುವಾಗ ಮತ್ತು ಪ್ರಗತಿಪಥದಲ್ಲಿ ಇರುವಾಗ ಬೆಲೆ ಏರಿಕೆ ಅನಿವಾರ್ಯ ಎಂದು ಸಮಜಾಯಿಸಿ ನೀಡಿದ್ದರು. ಅವರ ಈ ಸಮಜಾಯಿಸಿ ಬಹುಕಾಲ ಲೇವಡಿಗೆ ಒಳಗಾಗಿದ್ದು ಬೇರೆ ಮಾತು.
ವಾಸ್ತವದಲ್ಲಿ ಬೆಲೆ ಏರಿಕೆ ಅನಿವಾರ್ಯ. ಯಾವುದೇ ವಸ್ತುವಿನ ಬೆಲೆ ಮತ್ತು ಸೇವೆಯ ದರ ಸ್ಥಿರವಾಗಿರಲು ಸಾದ್ಯವಿಲ್ಲ. ಮಠ -ಮಂದಿರಗಳಲ್ಲೂ ಅಲ್ಲಿ ನೀಡುವ ಸೇವೆಯ ದರ ಕಾಲಘಟ್ಟದಲ್ಲಿ ಏರುತ್ತಲೇ ಬಂದಿದೆ. ಮೂಲಭೂತ ಪ್ರಶ್ನೆ ಬೆಲೆ ನಿರಂತರವಾಗಿ ಏರುತ್ತಿದೆಯೇ? ಏರಿಕೆಯ ಪ್ರಮಾಣ ಏನು? ಈಏರಿಕೆಯನ್ನು ಜನಸಾಮಾನ್ಯ ತಡೆದುಕೊಳ್ಳುವ ರೀತಿಯಲ್ಲಿ ಮತ್ತು ಪ್ರಮಾಣದಲ್ಲಿ ಇದೆಯೇ? ಇದೇ ಪ್ರಮಾಣದಲ್ಲಿ ಜನಸಾಮಾನ್ಯರ ಅದಾಯಏರಿದೆಯೇ? ಎನ್ನುವುದು. ಉತ್ಪಾದನಾ ಮತ್ತು ಸೇವೆಯ ವೆಚ್ಚ ಏರುತ್ತಿರುವಾಗ ಬೆಲೆ ಏರಿಕೆಯನ್ನು ತಡೆಯುವುದು ಕಷ್ಟ ಸಾದ್ಯ.
ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಹೆಚ್ಚಳ, ಕಾರ್ಮಿಕ ಸಂಬಳದಲ್ಲಿ ಹೆಚ್ಚಳ, ನಿರ್ವಹಣಾ ವೆಚ್ಚದಲ್ಲಿ ಏರಿಕೆ ಮುಂತಾದವುಗಳು ಸ್ಥಿರವಾಗಿರದೆ ನಿರಂತರ ವಾಗಿ ಏರುತ್ತಿರುವಾಗ ಬೆಲೆ ಏರಿಕೆಯನ್ನು ತಡೆಯುವುದು ಕಷ್ಟ. ಹಾಲು ಉತ್ಪಾದಕರಿಂದ ಅದು ಬಳಕೆದಾರರ ಕೈಗೆ ದೊರಕುವವರೆಗೆ ಪ್ರತಿಹಂತದಲ್ಲೂ ಬೆಲೆ ಏರಿಕೆ ಇರುವಾಗ ಅದು ಅಂತಿಮವಾಗಿ ಬಳಕೆದಾರನ ತಲೆಗೆ ತಟ್ಟುವುದು ತೀರಾ ಸಾಮಾನ್ಯ ದೃಶ್ಯಾವಳಿ. ಈ ಬೆಲೆ ಏರಿಕೆಯ ಫಲ ಉತ್ಪಾದಕರ ಕೈಗೆ ದೊರಕುವಂತಾದರೆ ಅದಕ್ಕೊಂದು ಅರ್ಥವಿರುತ್ತದೆ. ಮಧ್ಯವರ್ತಿಗಳ ಅಟದಲ್ಲಿ ಈ ಫಲ ಅವರಿಗೆ ದೊರಕುತ್ತದೆಯೇ ಎನ್ನುವುದು ಚರ್ಚಾಸ್ಪದವಾಗಿರುತ್ತದೆ.
ವಿಪರ್ಯಾಸ ವೆಂದರೆ ಹಾಲಿನ ದರ ಏರಿಕೆ ವಿರುದ್ಧ ಅಕ್ರೋಶ ವ್ಯಕ್ತಮಾಡುವವರು ದೇಶದ ಇತರ ರಾಜ್ಯಗಳಲ್ಲಿರುವ ಹಾಲಿನ ದರವನ್ನು ಗಮನಿಸಿಯೇ ಇಲ್ಲ. ಬಹುತೇಕ ಎಲ್ಲ ರಾಜ್ಯಗಳಲ್ಲಿ ಹಾಲಿನ ದರ ಲೀಟರ್‌ಗೆ ೫೫ ರೂ. ಗಿಂತ ಹೆಚ್ಚಿದೆ. ಅತಿ ಹೆಚ್ಚು ದರ ೭೩ ರು. ಲಡಾಖ್‌ನಲ್ಲಿ ಇದ್ದರೆ ಕರ್ನಾಟಕದಲ್ಲಿ ಅತಿ ಕಡಿಮೆ ೪೪ ಮತ್ತು ತಮಿಳುನಾಡಿನಲ್ಲಿ ೪೯ ರು.ಇದೆ. ಹಾಲಿನ ದರ ಏರಿಕೆ ಹೋಟೆಲ್ ಉದ್ಯಮದ ಮೇಲೆ ಮತ್ತು ಗೃಹ ಖರ್ಚಿನಮೇಲೆ ಪರಿಣಾಮ ಬೀರಿದರೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಅರ್ಥಿಕ ವ್ಯವಸ್ಥೆಯನ್ನೆ ಅಲುಗಾಡಿಸುತ್ತದೆ. ಈ ಏರಿಕೆಯಿಂದ ಸಾಮಾನು ಸರಂಜಾಮುಗಳ ಸಾಗಾಣಿಕೆ ದರದ ಮೇಲೆ ಪರಿಣಾಮ ಬೀರುತ್ತಿದ್ದು ಅದು ಅಂತಿಮವಾಗಿ ನೇರ ವಾಗಿ ಅಥವಾ ಪರೋಕ್ಷವಾಗಿ ಗ್ರಾಹಕ ಉಪಯೋಗಿ ವಸ್ತುಗಳ ಮೇಲೆ ಪರಿಣಾಮ ಬೀರಿ, ಜನಸಾಮಾನ್ಯರ ಬದುಕು ಹೈರಾಣವಾಗುತ್ತದೆ.
ಇಂಧನ ಬೆಲೆ ಹೆಚ್ಚಾದರೆ ಸ್ವಂತ ವಾಹನ ಉಳ್ಳವರಿಗೆ ಮಾತ್ರ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ, ಇದು ಒಂದು ರೀತಿಯಲ್ಲಿ ಅಣುಬಾಂಬ್ ಬಿದ್ದಂತೆ ಎನ್ನುವ ತಿಳುವಳಿಕೆ ಕಡಿಮೆ. ಬೆಲೆ ಏರಿಕೆ ಸರಿಯೋ ತಪ್ಪೋ ಎನ್ನುವುದು ಬೇರೆ ವಿಷಯ. ಅದರೆ ಬೆಲೆ ಏರಿಕೆ ಅನಿವಾರ್ಯ ಮತ್ತು ಅದು ನಿಂತರ ಪ್ರಕ್ರಿಯೆ ಎನ್ನುವುದು ಮಾತ್ರ ಸತ್ಯ. ಯಾವುದೇ ರಾಜಕೀಯ ಪಕ್ಷ ಆಧಿಕಾರದಲ್ಲಿ ಇರಲಿ, ಈ ಬೆಲೆ ಏರಿಕೆ ಅನಿವಾರ್ಯತೆಯಿಂದ ತಪ್ಪಿಸಿಕೊಳ್ಳಲಾಗದು. ತಮ್ಮ ಅಧಿಕಾರ ಅವಧಿಯಲ್ಲಿ ಒಮ್ಮೆಯಾದರೂ ಈ ಸಂಕಷ್ಟಕ್ಕೆ ಒಳಗಾಗಲೇಬೇಕಾಗುತ್ತದೆ.
ವಿರೋಧ ಪಕ್ಷ ದಲ್ಲಿ ಇರುವಾಗ ಇದನ್ನು ವಿರೋಧಿಸಿ ತನ್ಮೂಲಕ ತಾವು ಜನತೆಯ ಪರ ಮತ್ತು ಅವರ ಸಂಕಷ್ಟದಲ್ಲಿ ತಾವೂ ಭಾಗಿ ಎಂದು ತೋರಿಸಿ ಕೊಳ್ಳಬೇಕಾಗುತ್ತದೆ. ಇದು ಮುಂದಿನ ದಿನಗಳಲ್ಲಿ ನಡೆಯಬಹುದಾದ ಚುನಾವಣೆಯಲ್ಲಿ ತಾವು ಜನಪರ ಹೋರಾಟದಲ್ಲಿ ಹೇಗೆ ತೊಡಗಿಸಿ ಕೊಂಡಿದ್ದೇವೆ ಎನ್ನುವುದನ್ನು ಮತದಾರರಿಗೆ ತೋರಿಸಲು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಅಕಸ್ಮಾತ್ ಇವರೇ ಆಧಿಕಾರದಲ್ಲಿ ಇದ್ದರೂ, ಅವರೂ ಅದನ್ನೇ ಮಾಡುತ್ತಿದ್ದರು. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧಕ್ಕಾಗಿ ವಿರೋಧ ಇರುತ್ತದೆ ವಿನಾಃ ಅದರಲ್ಲಿ ತಾತ್ವಿಕತೆ ಮೇಲು ನೋಟದಲ್ಲಿ ಮಾತ್ರ ಇರುತ್ತದೆ.
ಅದೇ ರೀತಿ ಜನರು ಬೆಲೆ ಏರಿಕೆ ವಿರುದ್ದ ಹೋರಾಡುವುದನ್ನು ನಿಲ್ಲಿಸಿದ್ದಾರೆ. ಹೋರಾಟಗಳಿಂದ ಬೆಲೆ ಇಳಿಯುವದಿಲ್ಲ ಎನ್ನುವ ಸತ್ಯವನ್ನು ಸಾಕಷ್ಟು ನೋಡಿದ್ದಾರೆ. ಸರಕಾರದ ಚರ್ಮ ದಪ್ಪ ಇರುತ್ತದೆ ಮತ್ತು ಸರಕಾರ ತನ್ನ ಕ್ರಮವನ್ನು ಹೇಗಾದರೂ ಸಮರ್ಥಿಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಇದರಿಂದ ತಮ್ಮ ಅಮೂಲ್ಯ ಸಮಯ ಮತ್ತು ಅ ದಿನದ ಅದಾಯಕ್ಕೆ ಕೊಕ್ ಬಿಟ್ಟರೆ ಇನ್ನೆನನ್ನೂ ಸಾಧಿಸಲಾಗು ವುದಿಲ್ಲ ಎನ್ನುವುದನ್ನು ಅವರುತಿಳಿದಿzರೆ. ಬೇರೆ ವಿಷಗಳಲ್ಲಿ ಮೇಲೆ ಏರಿದ್ದು ಕೆಳಗೆ  ಇಳಿಯಬಹುದು. ಆದರೆ, ಬೆಲೆ ಏರಿಕೆ ನಿಟ್ಟಿನಲ್ಲಿ ಅದು ಒಮ್ಮೆ ಏರಿದರೆ ಅದು ಎಂದೂ ಕೆಳಗಿಳಿ ಯುವದಿಲ್ಲ.
ಏರಿಕೆ ಸದಾ ಉತ್ತರಮುಖಿ ಮತ್ತು ಒನ್ ವೇ ಜರ್ನಿ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರುದ್ಧ ಭಾಜಪ ಭಾರೀ ಹೋರಾಟದ ಕರೆ ನೀಡಿತ್ತು. ಸರಕಾರದ ಬಿಪಿ ಯನ್ನು ಹೆಚ್ಚಿಸಬಹುದು ಎನ್ನುವ ನಿರೀಕ್ಷೆ ಮೂಡಿತ್ತು. ಈ ಹೋರಾಟ ಥರ್ಡ್ ಗೇರ್ ಗೂ ಹೋಗಲಿಲ್ಲ. ಒಂದೆರಡು ದಿನ ಅಲ್ಲಲ್ಲಿ ಹೋರಾಟದ ಮಾತು ಕೇಳಿದ್ದು ಬಿಟ್ಟರೆ ಮಾಧ್ಯಮದಲ್ಲೂ ಮಿಂಚಲಿಲ್ಲ. ಜನ ಸಾಮಾನ್ಯರು ಇತ್ತೀಚೆಗೆ ಇಂಥಹ ಹೋರಾಟಗಳಿಗೆ ಸ್ಪಂದಿಸುವುದನ್ನು ನಿಲ್ಲಿಸಿzರೆ. ತಿಂ ಗಳಾಂತ್ಯವನ್ನು ಹೇಗೆ ನಿಭಾಯಿಸಬೇಕು ಎನ್ನುವ ದಿನನಿತ್ಯದ ಜಂಜಾಟದಲ್ಲಿ ಅವರಿಗೆ ಇಂತಹ ಹೋರಾಟದಲ್ಲಿ ಭಾಗವಹಿಸುವಸಮಯವಾಗಲಿ, ವ್ಯವಧಾನವಾಗಲಿ ಇರುವುದಿಲ್ಲ. ಅದಕ್ಕೂ ಮೇಲಾಗಿ ಇಂಥಹ ಹೋರಾಟಗಳ ನಕಾರಾತ್ಮಕ ಫಲಶ್ರುತಿಯನ್ನು ಅವರು ಮೊದಲೇ ಅಂದಾಜಿಸಿರುತ್ತಾರೆ.
ಬೆಲೆ ಏರಿಕೆಗಿಂತ ಈ ನಿಟ್ಟಿನಲ್ಲಿ ಬಗೆಗೆ ನಮ್ಮ ರಾಜಕೀಯ ಪಕ್ಷಗಳ ಮತ್ತು ರಾಜಕಾರಣಿಗಳ ಪ್ರತಿಕ್ರಿಯೆಯು ಜನರನ್ನು ಹೆಚ್ಚು ಹಿಂಸಿಸುತ್ತದೆ. ೨೦೧೪ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರವಾಗಿ ಏರುತ್ತಲೇ ಇದೆ. ಅದೇ ರೀತಿ ಅಡುಗೆ ಅನಿಲದ ದರ ಕೂಡಾ. ಅಡುಗೆ ಅನಿಲ ದರ ೪೫೦ ರು. ರಿಂದ ೧೧೦೦ ರು. ವರೆಗೂ ಏರಿದೆ. ಜಾಗತಿಕ ಮಟ್ಟದಲ್ಲಿ ಕರೋನಾ-ಕೋವಿಡ್ ಸಮಯದಲ್ಲಿ ಕಚ್ಛಾ ಎಣ್ಣೆ ಬೆಲೆ ತಳ ಹಿಡಿದಾಗಲೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಯಲಿಲ್ಲ. ಕೇಂದ್ರ ಸರಕಾರವು ಜನತೆಗೆ ನೀಡುತ್ತಿದ್ದ ನಾನಾ ರೀತಿಯ ವಿನಾಯಿತಿಗಳನ್ನು ರದ್ದು ಪಡಿಸಿತು. ಈ ರದ್ದು ಪಡಿಸುವಿಕೆ ಮತ್ತು ದರ ಏರಿಕೆ ವಿರುದ್ಧ ಭಾಜಪವು ಮೌನ ವಹಿಸಿತೇ ವಿನಃ ಅಕ್ರೋಶ ವ್ಯಕ್ತ ಮಾಡಲಿಲ್ಲ. ಹೋರಾಟ ನಡೆಸಲಿಲ್ಲ.
ದೇಶಕ್ಕಾಗಿ ಮತ್ತು ರಾಷ್ಟ್ರಕ್ಕಾಗಿ ಈ ಏರಿಕೆ ಮತ್ತು ವಿನಾಯಿತಿ ರದ್ಧತಿ ಎನ್ನುವ ಪಕ್ಷದ ಹಿರಿಯರ ನಿಲುವಿಗ ಅಂಟಿಕೊಡಿತು ಮತ್ತು ಅದನ್ನು ಸಮರ್ಥಿಸಿ ಕೊಂಡಿತು. ಈ ಧಾವಂತದಲ್ಲಿ ಈ ಏರಿಕೆಗೆ ಹಿಂದಿನ ಸರಕಾರಗಳು ಕಾರಣ ಎಂದು ಹೇಳಿತು. ಈಗ ನಾಲ್ಕು ವರ್ಷಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರಕಾರವು ತೆರಿಗೆ ವಿಧಿಸಲು ಭಾಜಪ ಅದರ ವಿರುದ್ದ ಭಾರೀ ಅಕ್ರೋಶ ವ್ಯಕ್ತ ಮಾಡುತ್ತಿದೆ.
ತಾನು ಮಾಡಿದರೆ ಸರಿ. ಅದನ್ನೇ ಇನ್ನೊಂದು ಪಕ್ಷದವರು ಮಾಡಿದರೆ ತಪ್ಪು ಎನ್ನುವ ರಾಜಕೀಯ ಪಕ್ಷಗಳ ಈ ಹಾಸ್ಯಾಸ್ಪದ ನಿಲುವನ್ನು ನೋಡಿದಾಗ ನನಗೆ ನಗೆಯು ಬರುತ್ತಿದೆ. ಈ ಧೀಮುಖ ನೀತಿಯ ಹಿಂದಿನ ಕಾರಣವೇನು? ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಪಾಲೂ ಇದೆ. ಜನಸಾಮಾನ್ಯರಿಗೆ ತೊಂದರೆ ಯಾದರೆ ಪಕ್ಷ ಬೇಧ ಬಿಟ್ಟು ದೃಢವಾದ ನಿಲುವನ್ನು ತೋರಿಸಬೇಕು. ಕ್ಷುಲ್ಲಕ ರಾಜಕೀಯವನ್ನು ಎಳೆದು ತರಬಾರದು. ರಾಜಕೀಯ ಪಕ್ಷಗಳಿಗೆ ಜನತೆಯ ಹಿತಕ್ಕಿಂತ ಪಕ್ಷದ ಮತ್ತು ತಮ್ಮ ನಾಯಕರ ಹಿತವೇ ಮುಖ್ಯವಾಗಿರುವುದು ಒಂದು ದುರಂತ. ಮುಂದಿನ ತಿಂಗಳು ಕೇಂದ್ರದ ಬಜೆಟ್ ಇದ್ದು, ಜನತೆ ದುಬಾರಿ ದುನಿಯಾವನ್ನು ಅನುಭವಿಸುವ ಸಾದ್ಯತೆ ಇದೆ. ಸರಕಾರಕ್ಕೆ ಸಪೋರ್ಟ್ ನೀಡುವ ಪಕ್ಷಗಳು ಎಂದಿನಂತೆ, ವಾಡಿಕೆಯಂತೆ ಮತ್ತು ಅಲಿಖಿತ ನಿಯಾವಳಿಯಂತೆ ಅದನ್ನು ಸ್ವಾಗತಿಸುತ್ತವೆ ಮತ್ತು ಪ್ರತಿ ಪಕ್ಷಗಳು ಇದೇ ಜಾಡಿನಲ್ಲಿ ನಖ ಶಿಖಾಂತ ಪ್ರತಿಭಟಿಸುತ್ತವೆ. ಈ ಪ್ರಹಸನವನ್ನು ನೋಡುತ್ತಾ ಜನ ಸಾಮಾನ್ಯರು ತಮ್ಮ ದುರ್ಭಾಗ್ಯವನ್ನು ಹಳಿಯುತ್ತಾರೆ.
(ಲೇಖಕರು: ಆರ್ಥಿಕ ಮತ್ತು ರಾಜಕೀಯವಿಶ್ಲೇಷಕರು)