ರಾಹುಲ್ ಗಾಂಧಿಯನ್ನು ತೊರೆದು ರಾಹುಲ್ ಗಾಂಧಿ ಮುನ್ನಡೆದರೇ ?
ಸಂಗತ
ಡಾ.ವಿಜಯ್ ದರಡಾ
ರಾಹುಲ್ ಗಾಂಧಿ ಈಗ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ. .ಅಲ್ಲಿ ಅವರಿನ್ನು ಪ್ರಮುಖ ಸಭೆಗಳಲ್ಲಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಯನ್ನು ಎದುರಿಸಲಿದ್ದಾರೆ. ಯಾರಿಗೇ ಆದರೂ ತಮ್ಮ ಜೊತೆಗೇ ಬಂದ ನಿರ್ದಿಷ್ಟ ಇಮೇಜನ್ನು ತೊರೆದು ಹೊಸ ಮನುಷ್ಯನಾಗಿ ಹೊರಹೊಮ್ಮುವುದು ಸುಲಭವಲ್ಲ. ರಾಹುಲ್ ಅದನ್ನು ಸಾಧಿಸಿದ್ದಾರೆ!
ಕೆಲ ವರ್ಷಗಳ ಹಿಂದೆ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ದೇಶದ ಜನರ ಕಣ್ಣಿನಲ್ಲಿ ಜೋಕರ್‌ ಗಳನ್ನಾಗಿ ಮಾಡಲು ಬಹಳ ದೀರ್ಘವಾದ ಸೋಷಿಯಲ್ ಮೀಡಿಯಾ ಕ್ಯಾಂಪೇನ್ ನಡೆದಿತ್ತು. ಬಹುಶಃ ನನ್ನ ಪ್ರಕಾರ ಇದು ಸಾಮಾಜಿಕ ಜಾಲತಾಣ ಗಳಲ್ಲಿ ನಡೆದ ಅತ್ಯಂತ ಸುದೀರ್ಘ ಆಂದೋಲನಗಳಲ್ಲಿ ಒಂದು. ಅದನ್ನು ಯಾರು ಮಾಡುತ್ತಿದ್ದರು ಮತ್ತು ಯಾಕಾಗಿ ಮಾಡುತ್ತಿದ್ದರು ಎಂಬಬಗ್ಗೆ ಸಾಕಷ್ಟು ಊಹಾಪೋಹಗಳಿದ್ದವು. ಆದರೆ ಯಾರಿಗೂ ಖಚಿತವಾಗಿ ಗೊತ್ತಿರಲಿಲ್ಲ.
ನಾನೀಗ ಯಾರದ್ದೋ ಹೆಸರೆತ್ತಿ ಬೆರಳು ತೋರಿಸುವುದು ಸರಿಯಾಗುವುದಿಲ್ಲ. ಆದರೆ ಗಮನಿಸಬೇಕಾದ ಸಂಗತಿ ಏನೆಂದರೆ, ಆಲಿಯಾ ಭಟ್ ತನ್ನ ಅದ್ಭುತ ನಟನೆಯಿಂದ ಆ ಅಪನಂಬಿಕೆಯನ್ನು ಮುರಿದುಹಾಕಿ ಪ್ರಬುದ್ಧ ನಟಿಯಾಗಿ ಕೆಲ ವರ್ಷಗಳ ಹಿಂದೆಯೇ ಹೊರಹೊಮ್ಮಿದರು. ಈಗ, ರಾಹುಲ್ ಗಾಂಧಿ  ಸರದಿ. ಅವರೂ ಕೂಡ ತಮ್ಮನ್ನು ಜೋಕರ್ ಮಾಡುವ ಸೋಷಿಯಲ್ ಮೀಡಿಯಾ ಆಂದೋಲನದ ಕಪಿಮುಷ್ಟಿಯಿಂದ ಬಿಡಿಸಿಕೊಂಡು ಎದ್ದು ನಿಂತಿದ್ದಾರೆ. ಆದರೆ, ಅವರ ಮುಂದೆ ಇನ್ನೂ ಸಾಕಷ್ಟು ಸವಾಲುಗಳಿವೆ.
ರಾಹುಲ್ ಗಾಂಽಯ ಬಗ್ಗೆ ನಾನಾ ರೂಪದಲ್ಲಿ ನೆಗೆಟಿವ್ ಸುದ್ದಿಗಳನ್ನು ಹರಿಬಿಡಲಾಗುತ್ತಿತ್ತು. ಅವರು ಜವಾಬ್ದಾರಿಯಿಂದ ನುಣುಚಿಕೊಂಡು ಓಡುವ ವ್ಯಕ್ತಿ ಎಂದು ನಿರಂತರವಾಗಿ ಪ್ರಚಾರ ಮಾಡಲಾಯಿತು. ಅವರು ಯಾವ ಕೆಲಸವನ್ನೂ ಪೂರ್ತಿ ಮಾಡುವುದಿಲ್ಲ, ಅವರ ಕೆಲಸದ ಶೈಲಿಯೇ ಹಾಗೆ, ಕೈಗೆತ್ತಿಕೊಂಡ ಕೆಲಸವನ್ನು ದಡ ಸೇರಿಸುವುದಿಲ್ಲ ಎಂದು ಪ್ರಚಾರ ನಡೆದಿತ್ತು. ರಾಹುಲ್ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿ ಲೋಕಸಭೆಯನ್ನುಪ್ರವೇಶಿಸಿದ್ದು ೨೦೦೪ರಲ್ಲಿ. ಉತ್ತರ ಪ್ರದೇಶದ ಅಮೇಠಿಯಲ್ಲಿ ಅವರು ಸ್ಪರ್ಧಿಸಿ ಗೆದ್ದಿದ್ದರು. ಮುಂದಿನ ೧೦ ವರ್ಷಗಳ ಕಾಲ ಅವರ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು.
ಆದರೂ ಅವರು ಸಚಿವ ಸ್ಥಾನ ಪಡೆದುಕೊಳ್ಳಲಿಲ್ಲ. ಮನಸ್ಸು ಮಾಡಿದ್ದರೆ ಕೇಂದ್ರದಲ್ಲಿ ಸಚಿವರಾಗುವುದು ಅವರಿಗೆ ದೊಡ್ಡ ಮಾತಾಗಿರಲಿಲ್ಲ. ಆದರೂ ಸಂಸದನಾಗಿಯೇ ಉಳಿದರು. ತಮ್ಮದೇ ಸರಕಾರ ತಪ್ಪು ಮಾಡಿದಾಗ ಅದನ್ನು ಬಹಿರಂಗವಾಗಿ ಟೀಕಿಸುವುದಕ್ಕೆ ಅವರು ಹಿಂದೆಮುಂದೆ ನೋಡಲಿಲ್ಲ.ಹಲವಾರು ಸಲ ಸ್ವಪಕ್ಷದ ಸರಕಾರದ ವಿರುದ್ಧವೇ ಚಾಟಿ ಬೀಸಿದ್ದರು. ೨೦೧೭ರಲ್ಲಿ ಕೊನೆಗೂ ಅವರು ಪಕ್ಷದಲ್ಲಿ ಮಹತ್ವದ ಹುದ್ದೆ ವಹಿಸಿಕೊಂಡು ಎಐಸಿಸಿಗೆ ರಾಷ್ಟ್ರೀಯ ಅಧ್ಯಕ್ಷರಾದರು. ಆದರೆ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಾಗ ಅದರ ನೈತಿಕ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸೋಲಿನ ಹೊಣೆಯನ್ನು ನಾಯಕನೇ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದರು.
ಇನ್ನು, ಲೋಕಸಭೆಯಲ್ಲಿನ ಸ್ಥಾನದ ಬಗ್ಗೆ ಹೇಳುವುದಾದರೆ, ೨೦೧೪ರ ನಂತರ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹುದ್ದೆ ಪಡೆದುಕೊಳ್ಳುವ ಅವಕಾಶವೇ ಇರಲಿಲ್ಲ. ಒಂದು ರಾಜಕೀಯ ಪಕ್ಷವು ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷವಾಗುವ ಅರ್ಹತೆ ಪಡೆಯಬೇಕು ಅಂದರೆ ಲೋಕಸಭೆಯಲ್ಲಿನ ಒಟ್ಟು ಸ್ಥಾನಗಳ ಪೈಕಿ ಕನಿಷ್ಠ ಶೇ.೧೦ ಸ್ಥಾನಗಳನ್ನಾದರೂ ಗೆದ್ದಿರಬೇಕು. ಅಂದರೆ ೫೪ ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿರಬೇಕು. ೨೦೧೪ರ ಲೋಕಸಭೆಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ ೪೪ ಸೀಟು, ೨೦೧೯ರ ಚುನಾವಣೆಯಲ್ಲಿ ಕೇವಲ ೫೨ ಸೀಟು ಗೆದ್ದಿತ್ತು.
ಹೀಗಾಗಿ ಅದಕ್ಕೆ ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷವಾಗುವ ಅವಕಾಶ ಸತತ ಎರಡು ಬಾರಿಯೂ ಸಿಗಲಿಲ್ಲ. ೨೦೨೪ರಲ್ಲಿ ಈ ಚಿತ್ರಣ ಬದಲಾಯಿತು. ಕಾಂಗ್ರೆಸ್ ಪಕ್ಷ ೯೯ ಸ್ಥಾನಗಳನ್ನು ಗೆದ್ದಿತು. ಅದರೊಂದಿಗೇ ಪಕ್ಷಕ್ಕೆ ಲೋಕಸಭೆಯ ಅಧಿಕೃತ ವಿಪಕ್ಷವಾಗುವ ಅರ್ಹತೆಯೂ ಬಂದಿತು. ಫಲಿತಾಂಶದ ದಿನದಿಂದಲೇ ಎಲ್ಲರೂ ರಾಹುಲ್ ಗಾಂಧಿ ವಿಪಕ್ಷದ ನಾಯಕನಾಗಲು ಒಪ್ಪಿಕೊಳ್ಳುತ್ತಾರೋ ಅಥವಾ ಈ ಬಾರಿಯೂ ಅಧಿಕಾರದಿಂದ ದೂರವೇ ಉಳಿಯುತ್ತಾರೋ ಎಂದು ಕುತೂಹಲಗೊಂಡಿದ್ದರು.
ಆದರೆ ರಾಹುಲ್ ಗಾಂಧಿ ಆ ಸ್ಥಾನವನ್ನು ಒಪ್ಪಿಕೊಂಡಿದ್ದಷ್ಟೇ ಅಲ್ಲ, ಅದರ ಬಗ್ಗೆ ಅವರು ಮಾತನಾಡಿದ ರೀತಿಯನ್ನು ನೋಡಿದರೆ ರಾಹುಲ್ ತಮ್ಮಹಳೆಯ ಇಮೇಜನ್ನು ತೊರೆತು ಹೊಸ ವ್ಯಕ್ತಿಯಾಗಿ ರೂಪಾಂತರಗೊಂಡಿರುವ ಸುಳಿವು ನೀಡಿದ್ದಾರೆ. ಲೋಕಸಭೆಯಲ್ಲಿ ಮಾತನಾಡುವಾಗ ಅವರು, ‘ಸರಕಾರದ ಬಳಿ ರಾಜಕೀಯ ಅಧಿಕಾರ ಇರಬಹುದು, ಆದರೆ ವಿರೋಧ ಪಕ್ಷ ಕೂಡ ಭಾರತದ ಜನರ ಧ್ವನಿಯನ್ನೇ ಪ್ರತಿನಿಧಿಸುತ್ತದೆ. ನಾವು ಸರಕಾರ ಮುನ್ನೆಡೆಸಲು ಸಹಕಾರ ನೀಡುತ್ತೇವೆ, ಆದರೆ ಆ ಬೆಂಬಲ ಪರಸ್ಪರ ನಂಬಿಕೆಯ ಮೇಲೆ ನಿಂತಿರುತ್ತದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಸಂಸತ್ತು ಎಷ್ಟು ಸುಗಮವಾಗಿ ಕಾರ್ಯಕಲಾಪಗಳನ್ನು ನಡೆಸುತ್ತದೆ ಎಂಬುದಕ್ಕಿಂತ ಸಂಸತ್ ಕಲಾಪಗಳಲ್ಲಿ ದೇಶದ ಜನಸಾಮಾನ್ಯರ ಧ್ವನಿಯನ್ನು ಎತ್ತಲುಸಂಸದರಿಗೆ ಎಷ್ಟು ಅವಕಾಶ ಸಿಗುತ್ತದೆ ಎಂಬುದು ಮುಖ್ಯ.
ವಿರೋಧ ಪಕ್ಷಗಳ ಧ್ವನಿಯನ್ನು ಬಲವಂತವಾಗಿ ಹತ್ತಿಕ್ಕಿಯೂ ಆಡಳಿತ ಪಕ್ಷದವರು ಸಂಸತ್ ಕಲಾಪ ನಡೆಸಬಹುದು. ಆದರೆ ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗುತ್ತದೆ. ಸಂಸದರ ಸಾಂವಿಧಾನಿಕ ಹಕ್ಕನ್ನು ರಕ್ಷಿಸುವುದು ಹಾಗೂ ತನ್ಮೂಲಕ ದೇಶದ ಪ್ರಜೆಗಳಿಗೆ ಸಂವಿಧಾನದತ್ತವಾಗಿ ಲಭಿಸಿದ ಮೂಲ ಭೂತ ಹಕ್ಕುಗಳನ್ನು ರಕ್ಷಿಸುವುದು ಸ್ಪೀಕರ್ ಅವರ ಜವಾಬ್ದಾರಿ’ ಎಂದು ಹೇಳಿದ್ದರು. ಪ್ರಬುದ್ಧ ಮಾತುಗಳಿವು.
ರಾಹುಲ್ ಗಾಂಧಿ ಪ್ರತಿಪಕ್ಷದ ನಾಯಕರಾಗಿ ಲೋಕಸಭೆಯಲ್ಲಿ ಮಾಡಿದ ಮೊದಲ ಭಾಷಣವೇ ಭವಿಷ್ಯದ ರಾಹುಲ್ ಗಾಂಧಿ ಹೇಗಿರುತ್ತಾರೆ ಎಂಬುದರ ಸುಳಿವನ್ನೂ ನೀಡಿದೆ. ಮುಖ್ಯವಾಗಿ, ರಾಹುಲ್ ಗಾಂಧಿ ಈಗ ವಿಪಕ್ಷದ ನಾಯಕರಾಗಿರುವುದರಿಂದ ಇನ್ನುಮುಂದೆ ನಡೆಯುವ ಪ್ರಮುಖ ಸಭೆಗಳಲ್ಲಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರ ಎದುರು ಕುಳಿತುಕೊಳ್ಳಲಿದ್ದಾರೆ. ವಿಪಕ್ಷದ ನಾಯಕರಿಗೆ ಕ್ಯಾಬಿನೆಟ್ ರ‍್ಯಾಂಕ್ ಸ್ಥಾನಮಾನವಿರುತ್ತದೆ.ಅವರು ಇಡೀ ವಿರೋಧ ಪಕ್ಷವನ್ನು ಮುನ್ನಡೆಸುತ್ತಾರೆ. ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಸಾರ್ವಜನಿಕ ವ್ಯವಹಾರಗಳ ಸಮಿತಿ, ಅಂದಾಜು ಸಮಿತಿ ಸೇರಿದಂತೆ ಲೋಕಸಭೆಯ ಪ್ರಮುಖ ಸಂಸದೀಯ ಸಮಿತಿಗಳ ಮುಖ್ಯಸ್ಥರಾಗಿರುತ್ತಾರೆ.
ಜಂಟಿ ಸಂಸದೀಯ ಸಮಿತಿಗಳು ಹಾಗೂ ಆಯ್ಕೆ ಸಮಿತಿಗಳಲ್ಲೂ ವಿರೋಧ ಪಕ್ಷದ ನಾಯಕರ ಪಾತ್ರ ಮಹತ್ವದ್ದಾಗಿರುತ್ತದೆ. ಈ ಸಮಿತಿಗಳೇ ಜಾರಿನಿರ್ದೇಶನಾಲಯ (ಇ.ಡಿ.), ಕೇಂದ್ರೀಯ ತನಿಖಾ ದಳ (ಸಿಬಿಐ), ಕೇಂದ್ರ ವಿಚಕ್ಷಣ ಆಯೋಗ, ಕೇಂದ್ರ ಮಾಹಿತಿ ಆಯೋಗ, ಲೋಕಪಾಲ, ಚುನಾವಣಾ ಆಯೋಗ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಂತಹ ಮಹತ್ವದ ಸಂಸ್ಥೆಗಳಿಗೆ ಮುಖ್ಯಸ್ಥರು ಹಾಗೂ ಸದಸ್ಯರನ್ನು ನೇಮಕ ಮಾಡುತ್ತವೆ. ಇಲ್ಲಿಯವರೆಗೆ ಮೋದಿ ಹಾಗೂ ರಾಹುಲ್ ಗಾಂಧಿ ಕೇವಲ ಆರೋಪ ಹಾಗೂ ಪ್ರತ್ಯಾರೋಪಗಳನ್ನು ಮಾತ್ರ ವಿನಿಮಯ ಮಾಡಿಕೊಂಡಿದ್ದರು.
ಚುನಾವಣಾ ಪ್ರಚಾರ ಭಾಷಣಗಳಲ್ಲಿ ಅವರು ಪರಸ್ಪರರ ಮೇಲೆ ಕೆಸರು ಎರಚಿದ್ದೇ ಹೆಚ್ಚು. ಆದರೆ ಇನ್ನುಮುಂದೆ ಅವರು ಒಟ್ಟಿಗೇ ಒಂದೇ ಟೇಬಲ್ ಮುಂದೆ ಕುಳಿತು ನಿರ್ದಿಷ್ಟ ವಿಷಯದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ ಎಂಬುದು ಕುತೂಹಲಕರವಾಗಿದೆ. ಮೊಟ್ಟಮೊದಲ ಬಾರಿ ಇದರಝಲಕ್ ನಮಗೆಲ್ಲ ನೋಡಲು ಸಿಕ್ಕಿದ್ದು ಓಂ ಬಿರ್ಲಾ ಅವರು ಸ್ಪೀಕರ್ ಆಗಿ ಪುನರಾಯ್ಕೆಯಾದಾಗ. ಆಗ ಅವರನ್ನು ಲೋಕಸಭೆಯ ಪೀಠಕ್ಕೆ ಕರೆದು ಕೊಂಡು ಹೋಗಿ ಕೂರಿಸುವಾಗ ಮೋದಿ ಹಾಗೂ ರಾಹುಲ್ ಗಾಂಧಿ ಒಟ್ಟಿಗೇ ಇದ್ದರು.
ಅಲ್ಲೊಂದು ಹೊಸ ಭರವಸೆ ಮೂಡಿತ್ತು. ಆದರೆ ಅದೇ ಕಲಾಪದಲ್ಲಿ ಸ್ಪೀಕರ್ ಅವರು ತುರ್ತುಸ್ಥಿತಿಯ ಪ್ರಸ್ತಾಪ ಮಾಡಿ ಕಾಂಗ್ರೆಸ್ ಪಕ್ಷವನ್ನು ಜರಿದರು. ಹೀಗಾಗಿ ಕೆಲವೇ ಕ್ಷಣಗಳ ಹಿಂದೆ ಅನಾವರಣಗೊಂಡಿದ್ದ ಬಾಂಧವ್ಯಕ್ಕೆ ಮಂಕು ಕವಿದಿತ್ತು. ದೇಶದ ಮೇಲೆ ತುರ್ತುಸ್ಥಿತಿ ಹೇರಿದ್ದಕ್ಕಾಗಿ ಜನರೇ ಇಂದಿರಾ ಗಾಂಧಿಗೆ ಶಿಕ್ಷೆ ನೀಡಿದ್ದಾರೆ. ಅದೇ ಜನ ಮತ್ತೊಮ್ಮೆ ಇಂದಿರಾ ಗಾಂಧಿಯನ್ನೇ ಆಯ್ಕೆ ಮಾಡಿ ಪ್ರಧಾನಿಯನ್ನಾಗಿಯೂ ಮಾಡಿದ್ದಾರೆ. ಆ ವಿಚಾರ ಈಗಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವೈರತ್ವವನ್ನು ಜೀವಂತವಾಗಿಡುವುದಕ್ಕೆ ಬಳಕೆಯಾಗುತ್ತಿದೆ ಎಂಬುದೇ ಸೋಜಿಗ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಆಡಳಿತದಲ್ಲಿ ಸುದೀರ್ಘ ಅನುಭವವಿದೆ. ಅವರು ರಾಜತಾಂತ್ರಿಕ ವ್ಯವಹಾರಗಳಲ್ಲಿ ತುಂಬಾ ನಿಪುಣ. ಹೀಗಾಗಿ ರಾಹುಲ್ ಗಾಂಧಿಯ ಮುಂದಿರುವ ಸವಾಲುಗಳು ಇನ್ನಷ್ಟು ಕಠಿಣವಾಗುತ್ತವೆ. ಅವುಗಳನ್ನು ಅವರು ಯಶಸ್ವಿಯಾಗಿ ಎದುರಿಸಿದರೆ ನಿಸ್ಸಂಶಯವಾಗಿ ಒಬ್ಬ ಪ್ರಬುದ್ಧ ನಾಯಕನಾಗಿ ಹೊರಹೊಮ್ಮಲಿದ್ದಾರೆ. ಆಗ ತಮ್ಮ ಇಮೇಜ್ ಕೆಡಿಸಲು ಇಷ್ಟು ಕಾಲ ಅವಿರತವಾಗಿ ಶ್ರಮಿಸಿದವರ ಮುಖಕ್ಕೆ ಅವರೇಖುದ್ದಾಗಿ ತಪರಾಕಿ ಬಾರಿಸಿದಂತಾಗುತ್ತದೆ.
ನನ್ನ ಪ್ರಕಾರ ರಾಹುಲ್ ಗಾಂಧಿ ಸಾಕಷ್ಟು ಪ್ರಜ್ಞಾವಂತಿಕೆಯಿರುವ ನಾಯಕ. ಅವರು ದೇಶದ ಉದ್ದಗಲಕ್ಕೂ ಪಾದಯಾತ್ರೆ ಮಾಡಿದ್ದಾರೆ. ಆಗ ಭಾರತ ವನ್ನು ತಳಮಟ್ಟದಿಂದ ಅರಿತುಕೊಂಡಿದ್ದಾರೆ. ದೇಶದ ನಾಡಿಮಿಡಿತ ಅವರಿಗೆ ಅರ್ಥವಾಗಿದೆ. ಮಹಾತ್ಮ ಗಾಂಧೀಜಿ ಮತ್ತು ವಿನೋಬಾ ಭಾವೆ ಕೂಡ ಹೀಗೆ ಮಾಡಿದ್ದರು. ರಾಹುಲ್ ಪ್ರಮುಖ ವಿಷಯಗಳಲ್ಲಿ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಹಾಗೆ ಮಾಡುವ ಮೂಲಕ ತಮಗೆ ಅರ್ಥವಾಗದ ವಿಷಯ ಗಳನ್ನು ಕೂಲಂಕಷವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಕ್ಷುಲ್ಲಕ ವಿಷಯಗಳಲ್ಲಿ ಅವರು ಆಸಕ್ತಿ ತೋರಿಸುವುದಿಲ್ಲ. ಅಂತಹ ವಿಷಯಗಳಿಗೆ ಪ್ರತಿಕ್ರಿಯಿಸು ವುದೂ ಇಲ್ಲ.
ಅವರು ವೈಯಕ್ತಿಕ ಲಾಭಕ್ಕಾಗಿ ಸುಳ್ಳುಗಳಿಗೆ ಮೊರೆ ಹೋಗುವುದಿಲ್ಲ. ನಿಜ, ಆಗಾಗ ಅವರ ಕಿಚನ್ ಕ್ಯಾಬಿನೆಟ್ ಬಗ್ಗೆ ಪ್ರಶ್ನೆಗಳು ಏಳುತ್ತಿರುತ್ತವೆ. ಆದರೆಕಾಲ ಕಳೆದ ಹಾಗೆ ಅದನ್ನೂ ಅವರು ಸರಿಪಡಿಸಿಕೊಳ್ಳಲಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅವರು ನಡೆಸಿದ ಐತಿಹಾಸಿಕ ‘ಭಾರತ್ ಜೋಡೋ’ ಪಾದಯಾತ್ರೆ ಬಳಿಕ ರಾಹುಲ್ ಗಾಂಧಿಯವರ ವ್ಯಕ್ತಿತ್ವವೇ ಬದಲಾಗಿದೆ. ಯಾತ್ರೆಯ ಸಮಯದಲ್ಲಿ ಅವರು ಪತ್ರಕರ್ತರಿಗೆ ಒಂದು ಮಾತು ಹೇಳಿದ್ದರು.
‘ನಾನು ರಾಹುಲ್ ಗಾಂಧಿಯನ್ನು ಹಿಂದೆಯೇ ಬಿಟ್ಟು ಬಂದಿದ್ದೇನೆ. ನಾನೀಗ ಆ ರಾಹುಲ್ ಗಾಂಧಿ ಅಲ್ಲ.’ ನೋಡೋಣ. ರಾಹುಲ್ ಗಾಂಧಿ ನಿಜವಾಗಿ ಯೂ ಹಳೆಯ ರಾಹುಲ್ ಗಾಂಧಿಯನ್ನು ಹಿಂದೆ ಬಿಟ್ಟು ಮುನ್ನಡೆಯುತ್ತಿದ್ದಾರೆಯೇ ಎಂಬುದು ಕ್ರಮೇಣ ನಮಗೇ ತಿಳಿಯಲಿದೆ!
(ಲೇಖಕರು : ರಾಜ್ಯಸಭಾ ಮಾಜಿ ಸದಸ್ಯರು, ಹಿರಿಯಪತ್ರಿಕೋದ್ಯಮಿ)