ಮಕ್ಕಳಿಗೆ ನಾಗರಿಕತೆ ಅತ್ಯಾಚಾರ, ಅಪಘಾತ : ಪೋಷಕರು ಎಡವಿದ್ದೆಲ್ಲಿ ?
ದೇವಿ ಮಹೇಶ್ವರ ಹಂಪಿನಾಯ್ಡುಹಂಪಿ ಎಕ್ಸ್‌ಪ್ರೆಸ್
ನಮ್ಮ ದೇಶದಲ್ಲಿನ ವಿಚಿತ್ರಗಳನ್ನು ನೋಡಿ. ಒಂದು ಹೆಣ್ಣಿನ ಮೇಲೆ ಪೈಶಾಚಿಕರಿಂದ ಅತ್ಯಾಚಾರ-ಕೊಲೆ ನಡೆಯುತ್ತದೆ. ಆಗ ಇಡೀ ಸಮಾಜ ಆ ಪಾಪಿಗಳನ್ನು ಶಪಿಸುತ್ತದೆ. ಅವರನ್ನು ಕೊಂದುಹಾಕಿ, ಸಾರ್ವಜನಿಕವಾಗಿ ನೇಣುಬಿಗಿಯಿರಿ ಎಂದೆ ಬಯಸುತ್ತದೆ.
ಒಂದೊಮ್ಮೆ ಪೊಲೀಸರು ಆ ಪಾಪಿಗಳನ್ನು ಎನ್ ಕೌಂಟರ್ ಮಾಡಿ ಬಿಸಾಡಿದರೆನ್ನಿ! ಆಗ ಕೆಲ ನಾಲಾಯಕ್ಕು ಮಾನವ ಹಕ್ಕು ಸಂಸ್ಥೆಗಳು ಮೇಲೆದ್ದು ಬರುತ್ತದೆ. ಇದು ನಕಲಿ ಎನ್‌ಕೌಂಟರ್, ಮಾನವ ಹಕ್ಕುಗಳ ಹರಣ, ಅಧಿಕಾರ ದುರುಪಯೋಗ, ಪೊಲೀಸರು ರಾಕ್ಷಸರು ಎಂದು ಟೌನ್‌ಹಾಲ್ ಮುಂದೆ ಪ್ರತಿಭಟಿಸುತ್ತವೆ. ಇನ್ನು ಅಪರಾಧಿಗಳನ್ನು ಬಂಧಿಸಲು ತಡವಾದರೆ ಸಿಕ್ಕಸಿಕ್ಕ ಕಡೆ ಕೂತು ರಾಜಕೀಯ ಪ್ರೇರಿತರಾಗಿ ಸರಕಾರ ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆ ಗಿಳಿಯುತ್ತಾರೆ.
ಆಯ್ತು, ಅವರನ್ನು ಬಂಧಿಸಿ ಸರಿಯಾದ ಶಿಕ್ಷೆಯನ್ನು ವಿಧಿಸಬೇಕೆಂದು ಹೊರಟರೆ, ಮಹಾನ್ ಮಾನವತಾವಾದಿ ಗಳು ಅವನೆಂಥ ಪಾಪಿಯೇ ಆಗಿರಲಿ ಅವನ ಪರನಿಂತು ಆತನನ್ನು ಬಿಡುಗಡೆಗೊಳಿಸುವ ಮಹಾಕಾರ್ಯ ಕ್ಕಿಳಿಯುತ್ತಾರೆ. ಅಲ್ಲಿಗೆ ಮುಗಿಯಿತು ಕಥೆ, ದಶಕಗಳ ಕಾಲ ಕೇಸು ನಡೆಯುತ್ತದೆ. ಕಸಬ್, ಅಫ್ಜಲ್‌ ನಂಥವರು ಮಾಡಿದ್ದು ದೇಶದ್ರೋಹ ಕೆಲಸವೆಂದು ಇಡೀ ಜಗತ್ತಿಗೇ ಅರಿವಾಗಿದ್ದರೂ ಅವರನ್ನು ಕೇವಲ ನ್ಯಾಯಾಲಯದ ದೃಷ್ಟಿಯಲ್ಲಿ ಸಾಚಾಗಳಂತೆ ತೋರಿಸಲು ನಮ್ಮದೇ ದೇಶದಲ್ಲಿ ಅವರನ್ನು ವರ್ಷಾನುಗಟ್ಟಲೆ ಜೈಲಿನಲ್ಲಿ ಸಾಕಿಕೊಂಡು ಅವರಿಗೆ ಹೊತ್ತೊತ್ತಿಗೆ ಬಿರಿಯಾನಿ ತಿನ್ನಿಸಿ ಕೊಬ್ಬಿಸಲಾಗುತ್ತದೆ.
ಅದಕ್ಕಾಗಿ ಸಾರ್ವಜನಿಕರ ಕೋಟ್ಯಂತರ ರುಪಾಯಿಗಳನ್ನು ವ್ಯಯಿಸಲಾಗುತ್ತದೆ. ದೆಹಲಿಯ ನಿರ್ಭಯ ಪ್ರಕರಣದ ಆರೋಪಿಗಳನ್ನೂ ಹೀಗೆಯೇ ಸಾಕಿಕೊಂಡು ಬರಲಾಯಿತು. ದುರಂತವೆಂದರೆ ‘ಹತ್ತು ವರ್ಷ ಮೇಲ್ಪಟ್ಟವರಿಗೆ ಪೂರ್ತಿ ಟಿಕೆಟ್ಟು’ ಎನ್ನುವ ಸಮಾಜದಲ್ಲಿ ಅತ್ಯಾಚಾರವೆಸಗಿದ ಚಂಡಾಳನ ವಯಸ್ಸು೧೮ರಆಸುಪಾಸಿನಲ್ಲಿದ್ದರೂ ಆತ ಅಪ್ರಾಪ್ತ ವಯಸ್ಕ ಎನ್ನುವ ಕಾರಣಕ್ಕೆ ಹೊರಬರಬಹುದು!. ಇನ್ನು ಅತ್ಯಾಚಾರಕ್ಕೆ ಒಳಗಾದ ಸಂದರ್ಭ ಸೃಷ್ಠಿಗೆ ಪರೋಕ್ಷವಾಗಿ ಸ್ವಯಂಕೃತ ತಪ್ಪುಗಳು ಸಂತ್ರಸ್ತೆಯಿಂದಲೂ ಆಗಿದ್ದು ಅದನ್ನು ಗುರುತಿಸಿ ತಿಳಿಹೇಳಿದರಂತೂ ಸಮಾಜದಲ್ಲಿ ಭಯಾನಕ ಸ್ತ್ರೀ ಸ್ವಾತಂತ್ರ್ಯ, ಮಹಿಳಾ ಹಕ್ಕು ವಾದಿಗಳು ದಿಢೀರ್  ಪುಟಿದೇಳುತ್ತಾರೆ.
‘ಓ..ಇದು ಸೀಸ್ವಾತಂತ್ರ್ಯ ವಿರೋಧಿ, ಪುರುಷ ಸಮಾಜದ ಅಟ್ಟಹಾಸ’ ಎಂದೆ ಕೂಗಾಡಿ ಮತ್ತದೇ ಟೌನ್‌ಹಾಲ್ ಮುಂದೆ ಬಂದು ಕೂರುತ್ತದೆ. ಇನ್ನು ಕೆಲ ಡೋಂಗಿಮಾನವತಾವಾದಿಗಳಿದ್ದಾರೆ. ಇವರಿಗೆ ಅತ್ಯಾಚಾರಕ್ಕೊಳಗಾದ ಹೆಣ್ಣು ಮಗಳು ಅಲ್ಪಸಂಖ್ಯಾತರಾಗಿರಬೇಕು ಮತ್ತು ಅತ್ಯಾಚಾರ ಎಸಗಿದ ಪಾಪಿ ಹಿಂದೂ ಧರ್ಮವನಾಗಿರಲೇ ಬೇಕು. ಆಗ ಮಾತ್ರ ಇವರುಗಳು ಜಾಗೃತರಾಗಿ ಕೈಯಲ್ಲಿ ಖಂಡನೆಯ ಫಲಕ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಾರೆ.
ಇಂಥವರಿಗೆ ಹಿಂದೂ ಹೆಣ್ಣುಮಕ್ಕಳು ಲವ್ ಜಿಹಾದ್ ಅಥವಾ ಇನ್ನಿತರ ಅನ್ಯಾಯಕ್ಕೆ ಒಳಗಾದರೆ ಏನೂ ಅನಿಸುವುದಿಲ್ಲ. ನೋಡಿ, ನಮ್ಮ ಸಮಾಜದಲ್ಲಿ ಮನೆಯಲ್ಲಿ ಬೆಳೆದ ಹೆಣ್ಣುಮಗಳೊಬ್ಬಳು ‘ಒಬ್ಬ ಯುವಕನ್ನು ಪ್ರೀತಿಸುತ್ತಿದ್ದೇನೆ, ನಾಳೆ ಅವನೊಂದಿಗೆ ಸಂಭ್ರಮಿಸುತ್ತೇನೆ’ ಎಂದು ಕೇಳಲಾಗದ ಮತ್ತು ಪೋಷಕರು ಒಪ್ಪಿ ಕೊಳ್ಳಲಾಗದ ಬದ್ಧತೆಗಳಿವೆ. ಇದು ಮಗನಿಗೂ ಅನ್ವಯಿಸುತ್ತದೆ. ಅಷ್ಟರಮಟ್ಟಿಗೆ ಹೆತ್ತವರ ಮತ್ತು ಮಕ್ಕಳ ನಡುವೆ ಬಲವಾದ ನೈತಿಕತೆ, ಗೌರವಯುತ ಸಂಬಂಧ ಗಳಿರುತ್ತದೆ. ಹಾಗೊಮ್ಮೆ ಮಕ್ಕಳು ಇಂಥ ಪ್ರಯತ್ನಕ್ಕಿಳಿದು ಪ್ರೀತಿಪ್ರೇಮ ಎಂದೆ ಮುಂದುವರೆದರೆ ಯಾವ ಸುಸಂಸ್ಕೃತ ಮನೆತನವೂ ಅದನ್ನು ಸಹಿಸುವುದಿಲ್ಲ. ಇಂಥ, ನಮ್ಮ ಸಂಸ್ಕೃತಿ ಮತ್ತು ನಮ್ಮ ದೇಶದ ನಾಗರಿಕತೆಗೆ ಅನ್ವಯಿಸದ ಪ್ರೇಮಿಗಳ ದಿನವನ್ನು ಆಚರಿಸಿಕೊಳ್ಳಲು ಇಲ್ಲಿನ ಮಹಿಳಾ ಶಿರೋಮಣಿಗಳೇ ಸೀಸ್ವಾತಂತ್ರ್ಯ, ಯುವಕರ ಹಕ್ಕು ಎಂದು ಪ್ರಚೋದಿಸುತ್ತಾರೆ.
ಭಾರತದ ಸುಸಂಸ್ಕೃತ ಕುಟುಂಬದಲ್ಲಿ ಯಾವುದೇ ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯ ರೂಪಿಸುವುದೇ ಬದುಕಿನ ಸಾರ್ಥಕತೆಯಾಗಿರುತ್ತದೆ. ತಮ್ಮ ಮಕ್ಕಳನ್ನುಚೆನ್ನಾಗಿ ಓದಿಸಿ ಅವರನ್ನು ದುಡಿಯುವವರನ್ನಾಗಿಸಿ ಸಮರ್ಥ ಜೋಡಿಯನ್ನು ಹುಡುಕಿ ಮದುವೆ ಮಾಡಿ ಅವರ ಉಜ್ವಲ ಬದುಕನ್ನು ರೂಪಿಸುವ ಗುರಿ ಹೊಣೆ ಗಾರಿಕೆ ಸಹಜವಾಗಿ ಬಂದಿರುತ್ತದೆ. ಮತ್ತದನ್ನು ಮಾಡಿಯೇ ತೀರುತ್ತಾರೆ. ಹೀಗಾಗಿ ಮಕ್ಕಳು ಗೆಳೆತನದ ಹೆಸರಿನ ಪ್ರೇಮದ ಹೆಸರಿನ ಪಾರ್ಟಿ ಪಾರ್ಕು ಕ್ಲಬ್ ಹೋಟೆಲ್‌ಗಳಲ್ಲಿ, ನಿರ್ಜನ ಪ್ರದೇಶ ಪೊದೆ ಹಳ್ಳಕೊಳ್ಳ ಅರಣ್ಯದಲ್ಲಿ ಸಂಭ್ರಮ ರೋಮಾಂಚನ ಪಡೆಯುವುದನ್ನು ಯಾವ ಸಂಭಾವಿತ ಕುಟುಂಬವೂ ಸಹಿಸುವು ದಿಲ್ಲ.
ಮಕ್ಕಳು ಇಂಥ ‘ಮನೆಹಾಳು’ ಕೆಲಸಕ್ಕಿಳಿದು ಅವರ ಕನಸು ಮನಸು ಛಿದ್ರವಾಗಿ ಕುಟುಂಬದ ಮಾನಮರ್ಯಾದೆ ಹಾಳಾದಾಗ ಅವರು ಅನುಭವಿಸುವ ಯಾತನೆಅವರಿಗಷ್ಟೇ ಗೊತ್ತು. ಹೊರತು ಪ್ರೇಮಿಗಳ ದಿನಾಚರಣೆಯನ್ನು ಬೆಂಬಲಿಸುವ ಪ್ರಚೋದಿಸುವ ಮಾನಗೇಡಿ ಮಂದಿಗಳಿಗೇನು ಗೊತ್ತು ಹೇಳಿ?. ಬಹುಶ: ಅವರು ಗಳೂ ಮನೆಯ ಮಕ್ಕಳಿಗೆ ಇಂಥದ್ದೇ ಕಲಿಸುತ್ತಾರೆಯೇ?. ಮೈಸೂರಿನಲ್ಲಿ ಅನಾಗರಿಕ ಪಿಶಾಚಿಗಳಿಂದ ಹೆಣ್ಣುಮಗಳೊಬ್ಬಳ ಮೇಲೆ ಅತ್ಯಾಚಾರವಾಗಿದೆ.ಪಾಪಿಗಳನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನೆಗಳಾದವು. ಅವರನ್ನು ಎಡೆಮುರಿ ಕಟ್ಟಿದ್ದೂ ಆಯಿತು.
ಆದರೆ ಅತ್ಯಾಚಾರ ಸಂತ್ರಸ್ತೆ ಮಾತ್ರ ತನಿಖೆಗೆ ಸಹಕರಿಸದೇ ಊರು ಬಿಟ್ಟಿದ್ದಾಳೆ. ಈಗ ಪೊಲೀಸರಿಗೆ ಈ ಪ್ರಕರಣ ದೊಡ್ಡ ತಲೆನೋವಾದರೆ ಆಶ್ಚರ್ಯವಿಲ್ಲ. ಏಕೆಂದರೆ ಸಂತ್ರಸ್ತೆಯ ಸಹಕಾರವಿಲ್ಲದೆ ಈ ಪಾಪಿಗಳಿಗೆ ಸರಿಯಾದ ಶಿಕ್ಷೆ ಕೊಡಿಸಲು ದುಸ್ತರವಾಗುತ್ತದೆ. ಅದರಲ್ಲೂ ಆ ಪಾಪಿಗಳ ಪರವಾಗಿ ವಾದಿಸುವ ವಕೀಲ ರನ್ನು ಸೋಲಿಸಿ ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಒದಗಿಸಿ ನ್ಯಾಯಾಲಯಕ್ಕೆ ಅಲೆಯುವುದೇ ಒಂದು ಹರಸಾಹಸ. ಈ ಪ್ರಕರಣದಲ್ಲಿ ಸಂತ್ರಸ್ತೆಯು ತನ್ನಮೇಲಾದ ಆಕ್ರಮಣ ಆಘಾತದಿಂದ ಹೊರಬರಲಾಗದೇ ಇದ್ದರೆ ನಿಜಕ್ಕೂ ಆಕೆಗೆ ಕಾಲಾವಕಾಶ ನೀಡಬೇಕಿದೆ. ಒಂದೊಮ್ಮೆ ಆಕೆಯ ಪೋಷಕರು ಈ ಅವಮಾನ ದಿಂದ ಕಂಗಾಲಾಗಿ ಇದೆಲ್ಲದರ ಸಹವಾಸವೇ ಬೇಡವೆಂದು, ಹೆದರಿ ತಲೆಮರೆಸಿಕೊಂಡಿದ್ದರೇ ಒಳ್ಳೆಯದೆಂದು ಭಾವಿಸಿದ್ದರೆ ಈ ಪ್ರಕರಣ ಹಳ್ಳಹಿಡಿದು ಆ ಪಾಪಿ ಗಳು ಬಿಡುಗಡೆಯಾಗುವುದು ನಿಶ್ಚಿತ.
ನೋಡಿ, ಆಕೆಯ ಪೋಷಕರು ಈಗ ಆಕೆಯನ್ನು ಬಹಳ ಎಚ್ಚರಿಕೆಯಿಂದ ಎಲ್ಲಿಲ್ಲದ ಮುತುವರ್ಜಿ ಕಾಳಜಿಯಿಂದ ಸಂರಕ್ಷಿಸುತ್ತಿದ್ದಾರೆ. ಆದರೆ ಅಂದು ಆಕೆ ಸ್ನೇಹವೋ ಪ್ರೀತಿಯೋ ಒಬ್ಬ ಯುವಕನೊಂದಿಗೆ ಅಂಥ ಹೊತ್ತಿನಲ್ಲಿ ನಿರ್ಜನ ಪ್ರದೇಶದಲ್ಲಿ (ಸೀಸ್ವಾತಂತ್ರ ಮಹಿಳಾ ಹಕ್ಕು ಪ್ರತಿಪಾದಿತರ ಕ್ಷಮೆ ಕೋರಿ) ಕೂತು ಅದ್ಯಾವ ಮಹತ್ವದ ವಿಚಾರದ ಬಗ್ಗೆ ಚರ್ಚಿಸಲು ಹೋಗದಂಥ ನೈತಿಕ ಎಚ್ಚರಿಕೆ, ಪರಿಜ್ಞಾನವನ್ನೂ ಅವರೊಳಗೆ ಸ್ಥಾಪಿಸಬಹುದಿತ್ತಲ್ಲವೇ. ಸಮಾಜದಲ್ಲಿ ಮಕ್ಕಳು ತಪ್ಪು ಮಾಡಿದರೆ ಅದೆಂಥಾ ಮಕ್ಕಳನ್ನು ಹೆತ್ತಿದ್ದಾರೆ ಎಂದು ದೂಷಿಸಲಾಗುತ್ತದೆ.
ಹಾಗೆಯೇ ಗೆದ್ದುಬಂದರೂ ‘ಮಕ್ಕಳನ್ನು ಎಷ್ಟು ಚೆನ್ನಾಗಿ ಬೆಳೆಸಿದ್ದಾರೆ’ ಎಂದು ಹೊಗಳುತ್ತದೆ. ಇನ್ನು ಕೆಲ ಮಕ್ಕಳಿರುತ್ತಾರೆ ಅವರನ್ನು ಸ್ನೇಹಿತರು ಎಷ್ಟೇಪ್ರಚೋದಿಸಿದರೂ ಯಾವುದೇ ಪಾತಾಳಕ್ಕೆ ಕರೆದೊಯ್ದರೂ ಯಾವ ಚಟಕ್ಕೂ ಒಳಗಾಗುವುದಿಲ್ಲ. ಹೀಗಿರುವಾಗ ದೂರದಲ್ಲಿರುವ ಮಕ್ಕಳು ನಿರ್ಜನ ಪೊದೆ ಯೊಳಗೆ ಹೋಗದಂತೆ ತಡೆಯುವ ತಾಕತ್ತೂ ಪೋಷಕರಿಗಿರಬೇಕಲ್ಲವೇ?.
ಜಾತಿರಹಿತ ಸಮಾಜದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಅನುಷ್ಠಾನಕ್ಕೆ ಒಲವು ತೋರುತ್ತಿಲ್ಲ. ನಾಗರಿಕರು ತಮ್ಮ ಹೆಸರಿನ ಮುಂದೆ ಜಾತಿ ಪದಗಳನ್ನು ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಅಂತರ್ ಜಾತಿ ವಿವಾಹವಾಗುವ ಎಲ್ಲಾ ದಂಪತಿಗಳಿಗೆ ಸರಕಾರದಿಂದ ವಿಶೇಷ ಸೌಲಭ್ಯಗಳನ್ನು ಒದಗಿಸಬೇಕು. ಸಾಮಾಜಿಕ ಹೋರಾಟಗಾರರು, ಶಿಕ್ಷಣ ತಜ್ಞರು, ರಾಜಕೀಯ ವ್ಯಕ್ತಿಗಳು ಜಾತಿ ಪದ್ದತಿಯ ನಿರ್ಮೂಲನೆ ಬಗ್ಗೆ ಒಲವು ತೋರಿಸಬೇಕು.ಸಾಮಾಜಿಕತೆ ಸಂಸ್ಕಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಷ್ಟು ಅಥವಾ ಕನಿಷ್ಠ ತಮ್ಮೊಂದಿಗಿನ ಕರುಳು ಸಂಬಂಧದ ಸೆಳೆತವನ್ನಾದರೂ ಗೌರವಿಸಿ ಕಾಪಾಡಿಕೊಳ್ಳುವಷ್ಟು ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಪೋಷಕರ ಪರಮ ಕರ್ತವ್ಯವಾಗಿರುತ್ತದೆ.
ಪೋಷಕರು ಮಕ್ಕಳನ್ನು ಪ್ರಾಥಮಿಕ ತರಗತಿಯವರೆಗೂ ಸ್ವತಃ ಶಾಲೆಗೆ ಬಿಟ್ಟು ಕರೆದೊಯ್ಯುತ್ತಾರೆ. ಪ್ರೌಢ ತರಗತಿಗೆ ಬಂದಮೇಲೆ ಮಕ್ಕಳೇ ಸೈಕಲ್ಲಿನ ಬಸ್ಸಿನ ಹೋಗಿಬರಲು ಸ್ವಾತಂತ್ರ ನೀಡುತ್ತಾರೆ. ಆದರೆ ಕಾಲೇಜು ಸೇರಿದ ಕೂಡಲೇ ಮುಂದಿನದ್ದೇ ಅವರಿಗೇ ಬಿಟ್ಟಿದ್ದು ಎಂಬಂತ್ತೆ ನಿರ್ಲಕ್ಷ್ಯವಹಿಸುತ್ತಾರೆ. ಆದರೆ ಮಕ್ಕಳು ಎಲ್ ಕೆಜಿಯಿಂದ ಕಾಲೇಜಿನ ಮಿತಿಮೀರಿ ಅಪ್‌ಡೇಟ್ ಆಗುತ್ತಾರೆ. ಆದರೆ ಪೋಷಕರು ಔಟ್‌ಡೇಟ್ ಆಗಿ ಮಕ್ಕಳೊಂದಿಗೆ ಒಂದು ಹಂತದ ಸೆಳೆತವನ್ನು ಕಡಿದು ಕೊಂಡಿರುತ್ತಾರೆ.
ಶಾಲೆಯಲ್ಲಿ ತಮ್ಮ ಮಕ್ಕಳನ್ನು ಶಿಕ್ಷಕರು ದಂಡಿಸಿದಾಗ ಸಹಿಸಿಕೊಳ್ಳಲಾಗದ ಪೋಷಕರು ಕಾಲೇಜಿನಲ್ಲಿ ಎಂಥವರ ಸಹವಾಸ ಮಾಡುತ್ತಿದ್ದಾರೆ, ಯಾರೊಂದಿಗೆ ಬೆರೆಯುತ್ತಾರೆ, ಅವರ ಮೇಲೆ ಸಮಾಜ ಎಂತೆಂಥ ಪರಿಣಾಮ ಬೀರುತ್ತಿದೆ, ಅವರು ನಡೆಯುತ್ತಿರುವ ದಾರಿ ಹೇಗಿದೆ, ಆ ದಾರಿಯಲ್ಲಿ ಹೇಗೆ ಅಪಾಯಗಳು ಸಂಭವಿಸಬಹುದು ಎಂದೆ ಕಾಳಜಿವಹಿಸುವ ಗೋಜಿಗೇ ಹೋಗುವುದಿಲ್ಲ. ಇಂಥ ಮುಂದುವರೆದ ಮಕ್ಕಳಿಂದ ಮೊನ್ನೆ ಕೋರಮಂಗಲದಲ್ಲಿ ಭೀಕರ ಕಾರಿನ ಅಪಘಾತವಾಗಿ ಏಳು ಮಂದಿ ಯುವಕ ಯುವತಿಯರು ಬದುಕನ್ನು ಮುಗಿಸಿಕೊಂಡರು. ಇವರೆಲ್ಲರೂ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದವರು ಮಿತಿ ಮೀರಿದ ‘ಐಷಾರಾಮಿ’ ಸಾವನ್ನು ತಂದುಕೊಂಡರು. ಇಷ್ಟಕ್ಕೂ ಸತ್ತವನ ತಂದೆ ಒಬ್ಬ ಎಂಎಲಎ ಆಗಿರಬಹುದು.
ಹಾಗಂತ ಮಕ್ಕಳಿಗೆ ಈ ಮಟ್ಟದ ದುಬಾರಿ ಮೋಜಿನ ಸ್ವಾತಂತ್ರ್ಯ ಬೇಜವಾಬ್ದಾರಿ ಸುಖಗಳನ್ನು ಅನುಭವಿಸಲು ಅವಕಾಶ ನೀಡುವುದು ಯಾವ ಸೀಮೆಯ ದೊಡ್ಡಸ್ತಿಕೆ?. ನಲಪಾಡ್ ರೌಡಿತನ, ಲಾಕ್ ಡೌನ್ ಕಾಲದಲ್ಲಿನ ಚಿತ್ರನಟಿಯರ ಕಾರಿನ ಮತ್ತಿನ ಅಪಘಾತಗಳು, ಡ್ರಗ್ಸ್ ದಂಧೆಯ ನಟಿಮಣಿಗಳ ಸಮಾಜಗೇಡಿ ಕೃತ್ಯಗಳು ಇವುಗಳೆಲ್ಲದರ ಹಿಂದೆ ಸಾಮಾಜಿಕ ನಿರ್ಲಕ್ಷ್ಯತನ ಉನ್ಮಾದಗೊಂಡಿರುತ್ತದೆ.
ಮತ್ತು ಇದಕ್ಕೆ ಪೂರಕವಾಗಿ ಪೋಷಕರ ಬೇಜವಾಬ್ದಾರಿಗಳ ಪಾಲೂ ಇರುತ್ತದೆ. ದೆತಾಯಿಗಳಿಲ್ಲದೆ ತಬ್ಬಲಿಗಳಾಗಿ, ಹುಟ್ಟು ಬಡತನದಲ್ಲಿ ಬೆಳೆದ ಮಕ್ಕಳೂ ಸಹ ಸಮಾಜದಲ್ಲಿ ಆದರ್ಶರಾಗಿ ಬೆಳೆಯುತ್ತಾರೆ. ಆದರೆ ಕೆಲ ಪೋಷಕರು ಮಕ್ಕಳಿಗೆ ಹೀಗೆ ಅಗತ್ಯಕಿಂತ ಹೆಚ್ಚು ಸಲುಗೆ ದುಬಾರಿ ವಸ್ತುಗಳು ಐಷಾರಾಮಿ ಮಜಾ ಬೇಜವಾಬ್ದಾರಿ ಸುಖ ಸ್ವಾತಂತ್ರ ನೀಡಿ ಮನೆ ಮತ್ತು ಸಮಾಜವನ್ನು ಹಾಳು ಮಾಡಿಕೊಳ್ಳುತ್ತಾರೆ. ಮೊನ್ನೆಯ ಅಪಘಾತ ಮಧ್ಯರಾತ್ರಿ ನಡೆದದ್ದರಿಂದ ಮಜಾ ಮಾಡಿದವರು ಮಾತ್ರ ಸತ್ತಿzರೆ. ಒಂದೊಮ್ಮೆ ಜನನಿಬಿಡ ವೇಳೆಯಲ್ಲಿ ಸಂಭವಿಸಿದ್ದರೆ ಇವರುಗಳಿಂದ ಇನ್ನೆಷ್ಟು ಮಂದಿ ಅಮಾಯಕರು ಹೆಣವಾಗಬೇಕಿತ್ತೋ? ಇಂಥ ಅಪಘಾತಗಳಾಗಲೀ, ಅತ್ಯಾಚಾರವಾಗಲೀ ನಡೆದಾಗ ಅದರಲ್ಲಿ ಸಂತ್ರಸ್ತರಷ್ಟೇ ಅವರ ಪೋಷಕರ ಪಾಲೂ ಪ್ರಶ್ನಾರ್ಹ.
ಯಾವುದೇ ಸುಖ ಮೋಜು ಪ್ರೀತಿ ಪ್ರಣಯಗಳು ಸ್ವಾತಂತ್ರ್ಯವನ್ನು ಹೊಂದಲಿ. ಆದರೆ ಅದು ಒಂದು ಕುಟುಂಬ ಮತ್ತು ಸಮಾಜದ ನೆಮ್ಮದಿ ಹಾಳು ಮಾಡುವಷ್ಟು ಅತಿರೇಕಕ್ಕೆ ಹೋಗಬಾರದಲ್ಲವೇ? ಇಂಥ ಯಮವೇಗಿ ‘ಐಷರಾಮಿ’ ಅಪಘಾತಗಳನ್ನು ತಡೆಯಲು ಪೊಲೀಸ್ ಇಲಾಖೆ ಎಲ್ಲಾ ಸಮಯದಲ್ಲೂ ಕಟ್ಟುನಿಟ್ಟಿನ ವೇಗ ನಿಯಂತ್ರಣ ಮತ್ತು ಮಾದಕ-ಮದ್ಯಸೇವನೆ ಪರೀಕ್ಷಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹಾಗೆಯೇ ನಿರ್ಜನ ಪ್ರದೇಶಗಳಲ್ಲಿ ಪಿಶಾಚಿಗಳಂತೆ ಸಂಚರಿಸುವ ಕುಡುಕರು, ಕಾಮುಕರನ್ನು ಪುಡಿರೌಡಿಗಳು ಪುಂಡರುಗಳನ್ನು ಗಮನಿಸುವ ಒಂದು ಪೊಲೀಸ್ ಗಸ್ತು ಪಡೆಯನ್ನು ಸದಾ ಜಾಗೃತದಲ್ಲಿಡಬೇಕಾದ ಅವಶ್ಯಕತೆಯಿದೆ.
ನಗರಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಗಮನನೀಡಬೇಕಿದೆ. ಇಲ್ಲದಿದ್ದರೆ ಗೃಹಮಂತ್ರಿಯೇ ಪೊದೆಯೊಳಗೆ ಕಾವಲು ನಿಲ್ಲಬೇಕಾಗುತ್ತದೆ. ಜತೆಗೆ ಇಂಥ ನಿರ್ಜನ ಪ್ರದೇಶಗಳಲ್ಲಿ ಯುವಕ ಯುವತಿಯರು ತಮಗಿರುವ ‘ಸ್ವಾತಂತ್ರ, ಹಕ್ಕು ಅನುಭವಿಸಲೇ ಬೇಕೆಂದೆನಿಸಿದಾಗ ಪೊಲೀಸ್ ಪಡೆಯ ಗಮನಕ್ಕೆ ತಂದು ಹೋಗುವಂಥ ಬದ್ಧತೆಯನ್ನು ತೋರಬೇಕಿದೆ. ಜನ ಈಗ ಮೊದಲಿನಂತಿಲ್ಲ. ಅಪಘಾತವಾಗಲಿ ಅತ್ಯಾಚಾರವಾಗಲಿ ಬೇಗ ಗುರುತಿಸಿ ಯಾರದ್ದು ಸರಿತಪ್ಪು ಎಂದು ಗ್ರಹಿಸಿ ಇದೆ ಬೇಕಿತ್ತಾ ಎಂದು ಪ್ರಶ್ನಿಸುತ್ತಾರೆ.
ಜತೆಗೆ ಇಂಥ ಅತ್ಯಾಚಾರಿ ದುರ್ಜನರನ್ನು ನಿಭಾಯಿಸಲು ತೆಲಂಗಾಣದ ದಿಟ್ಟ ಐಪಿಎಸ್ ಅಧಿಕಾರಿಯಾದ ನಮ್ಮ ಹುಬ್ಬಳ್ಳಿಯ ವಿಶ್ವನಾಥ ಚನ್ನಪ್ಪ ಸಜ್ಜನರನ್ನು ನಿರೀಕ್ಷಿಸುತ್ತಾರೆ. ಒಟ್ಟಿನಲ್ಲಿ ಎಲ್ಲಾ ದುರ್ಘಟನೆಗಳಿಗೂ ಸರಕಾರ ಮತ್ತು ಪೊಲೀಸರನ್ನು ದೂರುವುದಕ್ಕಿಂತ ಮೊದಲು ಪೋಷಕರು ಮಕ್ಕಳನ್ನು ಹಿಡಿತದಲ್ಲಿಟ್ಟು ಕೊಳ್ಳುವುದು ಕೌಟುಂಬಿಕ ಮತ್ತು ಸಾಮಾಜಿಕ ಬದ್ಧತೆಯಲ್ಲವೇ?