ಜಾತಿ ಪೊರೆಗೆ ಆಗಬೇಕಿದೆ ಸರ್ಜರಿ
ಅಭಿಮತ
ದಿಲೀಪ್‌ ಕುಮಾರ್‌
.@.
ಜಾತಿರಹಿತ ಸಮಾಜದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಅನುಷ್ಠಾನಕ್ಕೆ ಒಲವು ತೋರುತ್ತಿಲ್ಲ. ನಾಗರಿಕರು ತಮ್ಮ ಹೆಸರಿನ ಮುಂದೆ ಜಾತಿ ಪದ ಗಳನ್ನು ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಅಂತರ್ ಜಾತಿ ವಿವಾಹವಾಗುವ ಎಲ್ಲಾ ದಂಪತಿಗಳಿಗೆ ಸರಕಾರದಿಂದ ವಿಶೇಷ ಸೌಲಭ್ಯ ಗಳನ್ನು ಒದಗಿಸಬೇಕು. ಸಾಮಾಜಿಕ ಹೋರಾಟಗಾರರು, ಶಿಕ್ಷಣ ತಜ್ಞರು, ರಾಜಕೀಯ ವ್ಯಕ್ತಿಗಳು ಜಾತಿ ಪದ್ದತಿಯ ನಿರ್ಮೂಲನೆ ಬಗ್ಗೆ ಒಲವು ತೋರಿಸಬೇಕು.
ಭಾರತದಲ್ಲಿ ಜಾತಿ ಪದ್ಧತಿ ವ್ಯವಸ್ಥೆ ತನ್ನದೇ ಆದ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಒಂದು ಹಂತದಲ್ಲಿ ಜಾತಿ ವ್ಯವಸ್ಥೆ ಇಲ್ಲದೇ ಭಾರತೀಯ ಸಮಾಜಿಕ ವ್ಯವಸ್ಥೆಗಳನ್ನು ಊಹಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ. ಸ್ವಾತಂತ್ರ್ಯದ ಅಮೃತ ಮಹೊತ್ಸವದಲ್ಲಿದ್ದು, ದೇಶ ಶೈಕ್ಷಣಿಕವಾಗಿ ಸದೃಢವಾದರೂ ಸಹ ಜಾತಿಪದ್ಧತಿ ಇನ್ನೂ ಜೀವಂತವಿದೆ. ಭಾರತೀಯ ಜಾತಿ ವ್ಯವಸ್ಥೆ ಅತ್ಯಂತ ಉಗ್ರವಾದ ಟೀಕೆಗಳಿಗೆ ಹಾಗೂ ವಿರೋಧಗಳಿಗೆ ಒಳಗಾಗುತ್ತಿದೆ.
ಭಾರತದಲ್ಲಿ ಬೇರ‍್ಯಾವ ವಿಷಯಗಳೂ ಇಷ್ಟೊಂದು ಕಟುವಾದ ಟೀಕೆಗಳಿಗೆ ಒಳಗಾಗುವುದಿಲ್ಲ. ಜಾತಿಜನ್ಯವಾದ ಅಸ್ಪೃಶ್ಯತೆಯನ್ನಂತೂ ಜಾತಿಯ ತಿರಸ್ಕಾರ ಯುಕ್ತವಾದ ಅಭಿವ್ಯಕ್ತಿ ಎಂದು ದೂಷಿಸಲಾಗಿದೆ. ಜಾತಿ ಇರುವವ ರೆಗೂ ಅಸಮಾನತೆ, ಶೋಷಣೆ ಹಾಗೂ ಅಸ್ಪೃಶ್ಯತೆ ಇದ್ದೇ ಇರುತ್ತದೆ. ಜಾತಿಯು ಹೇಗೆ ಹುಟ್ಟಿತು? ಯಾವಾಗ ಹುಟ್ಟಿತು ಎಂಬುವುದನ್ನು ಯಾರೂ ಖಚಿತವಾಗಿ ದಾಖಲಿಸಿಲ್ಲ. ಆದರೆ ಕೆಲವು ಸಿದ್ಧಾಂತಗಳ ಆಧಾರದಲ್ಲಿ ಇವು ಗಳನ್ನು ಪರಿಶೀಲಿಸ ಲಾಗುತ್ತಿದೆ.
ನೆಸ್‌ಫೀಲ್ಡ್‌ಅವರು ಕಾರ್ಯ ಮತ್ತು ಕೆಲಸಗಳಷ್ಟೇ ಜಾತಿಯ ಮೂಲಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಐತಿಹಾಸಿಕವಾಗಿ ಅವಲೋಕಿಸಿ ದಾಗ ಒಪ್ಪಿಕೊಳ್ಳಲೇಬೇಕಾದ ವಿಚಾರವಾಗಿದೆ. ಆದರೆ, ಆಧುನಿಕ ಯುಗದಲ್ಲಿ ಮನುಷ್ಯ ತನಗೆ ಇಷ್ಟ ಬಂದ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ವನ್ನು ಹೊಂದಿರುವಾಗ ಈಗಲೂ ಜಾತಿ ಪದ್ಧತಿಯ ಹಣೆಪಟ್ಟಿಯನ್ನು ಮನುಷ್ಯ ಜನಾಂಗಕ್ಕೆ ಹಚ್ಚಿ ಬಂಧಿಸುವುದು ಎಷ್ಟು ಸರಿ? ಈಗಲೂ ಜಾತಿಯ ಗಿಡಕ್ಕೆ ನೀರೆರೆದು ಅದನ್ನು ಬೆಳೆಸುವುದು ವಿಪರ್ಯಾಸವಲ್ಲವೇ? ಮನುಷ್ಯನಿಗೆ ಜಾತಿ ಆಕಸ್ಮಿಕವಾಗಿ ನಿರ್ಧಾರವಾಗುವ ಪ್ರಕ್ರಿಯೆ.
ಅವನಿಗೆ ಜಾತಿ ನಿರ್ಧಾರವಾಗಲು ಯಾವುದೇ ವೈಜಾನಿಕ ಅಂಶಗಳ ಬೆಂಬಲವಿಲ್ಲ. ಒಬ್ಬ ವ್ಯಕ್ತಿಯನ್ನು ವೈದ್ಯ ಕೀಯ ಪರೀಕ್ಷೆಗೆ ಒಳಪಡಿಸಿ ಇವನು ಇಂತಹ ಜಾತಿಯವನು ಎಂಬುವುದನ್ನು ರುಜುವಾತು ಮಾಡಲು ಸಾಧ್ಯವೇ ಇಲ್ಲ. ತನ್ನ ತಂದೆ ತಾಯಿ ಯಾವ ಜಾತಿಯ ಕಟ್ಟಿನಲ್ಲಿ ಇರುತ್ತಾರೋ ಆ ಚೌಕಟ್ಟಿನಲ್ಲಿ ಆತನು ಅನಿವಾರ್ಯವಾಗಿ ಸಿಲುಕಿಕೊಳ್ಳುತ್ತಾನೆ. ಇದೆಂತಹ ವಿಚಿತ್ರ ಸಾಮಾಜಿಕ ಪ್ರಕ್ರಿಯೆ! ನಮ್ಮ ಸಂವಿಧಾನದಲ್ಲಿ ಜಾತ್ಯತೀತದ ಉಲ್ಲೇಖವಿದ್ದರೂ ಸಹ ಜಾತಿ ಪದ್ಧತಿ ಇನ್ನೂ ನಮ್ಮ ರಾಷ್ಟ್ರದಲ್ಲಿ ಅಸ್ತಿತ್ವದಲ್ಲಿ ಇರುವುದು ನಮ್ಮ ದೇಶಕ್ಕೆ ಅಂಟಿದ ಶಾಪವೆಂದೇ ಹೇಳಬಹುದು.
ಆಧುನಿಕತೆಯಲ್ಲಿ ಜನರು ಮೊದಲು ಜಾತಿಯಿಂದ ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಜಾತಿಗಳು ಮತ ಬ್ಯಾಂಕ್ ಗಳಾಗಿ ಪರಿವರ್ತನೆ ಯಾಗಿದೆ. ಜಾತಿ ಗೊಂದು ಮಠಗಳು ಹುಟ್ಟಿಕೊಳ್ಳುತ್ತಿವೆ. ಚುನಾವಣೆ ಅಭ್ಯರ್ಥಿಗಳನ್ನು ಜಾತಿ ಲೆಕ್ಕಚಾರದ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಗೆದ್ದ ಅಭ್ಯರ್ಥಿಗಳಿಗೆ ಮಂತ್ರಿ ಪದವಿಗಳ ಪ್ರಾಪ್ತಿಗೂ ಇದೇ ಮಾನದಂಡ. ಜಾತಿಯ ಮೂಲ ಇರುವುದು ಶಾಲೆಯ ವಾತಾವರಣದಲ್ಲಿಯೇ ಅನ್ನುವುದಂತೂ ನೂರಕ್ಕೆ ನೂರರಷ್ಟು ಸತ್ಯ ಎಂಬುದನ್ನು ಒಪ್ಪಿಕೊಳ್ಳಲೇಬೇಕಾದ ಕಟು ಸತ್ಯವಾಗಿದೆ. ಈ ವಿಚಾರಕ್ಕೆ ಪೂರಕವಾಗಿ ಕಳೆದ ವರ್ಷ ನಡೆದ ಒಂದು ಘಟನೆ ನಮ್ಮನೆಲ್ಲ ಜಾತಿಯ ವಿಚಾರದಲ್ಲಿ ಬಡಿದೆಬ್ಬಿಸುವಂತೆ ಮಾಡಿದೆ.
ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ಕಲಬುರಗಿಯಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಚಿವರಿಗೆ ಭ್ರಷ್ಟಾಚಾರ ನಿರ್ಮೂಲನೆ, ಶಿಕ್ಷಣ ಸುಧಾರಣೆ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದರು. ಎಲ್ಲರಿಗೂ ಸಮಾಧಾನದಿಂದ ಸಚಿವರು ಉತ್ತರಿಸಿದರು. ಆದರೆ, ಈ ಸಂವಾದಕಾರ್ಯಕ್ರಮದಲ್ಲಿ ಸಾಕ್ಷಿ ಎಂಬ ವಿದ್ಯಾರ್ಥಿನಿ ಕೇಳಿದ ಪ್ರಶ್ನೆ ಮಾತ್ರ ಸಚಿವರನ್ನು ಮಾತ್ರವಲ್ಲದೇ ಇಡೀ ದೇಶದ ಜನರನ್ನು ಪೇಚಿಗೆ ಸಿಕ್ಕಿಸಿದೆ. ಅಲ್ಲದೇ, ಇಂದು ಈ ಪ್ರಶ್ನೆ ಶಿಕ್ಷಿತರಾದ ನಮ್ಮನ್ನು ಯೋಚನೆಗೆ ಒರೆ ಹಚ್ಚುವಂತೆ ಮಾಡಿದೆ. ವಿದ್ಯಾರ್ಥಿನಿಯು ಸಚಿವರಿಗೆ, ‘ಜಾತಿ ವ್ಯವಸ್ಥೆ ಸರಿಯಲ್ಲ, ಅದರ ನಿರ್ಮೂಲನೆ ಮಾಡಬೇಕು ಎಂದು ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುತ್ತಾರೆ.
ಆದರೆ, ಮಾರನೇ ದಿನವೇ ಜಾತಿ ಪ್ರಮಾಣ ಪತ್ರ ತರುವಂತೆ ಹೇಳುತ್ತಾರೆ. ನಾವು ಏನನ್ನು ನಂಬಬೇಕು?’ ಎಂಬ ಪ್ರಶ್ನೆ ತೂರಿದಾಗ, ಈ ಪ್ರಶ್ನೆಗೆ ಚುಟುಕಾಗಿಉತ್ತರಿಸಿದ ಸಚಿವರು, ‘ದೊಡ್ಡವರಿಗೂ ಇದುವರೆಗೆ ಹೊಳೆಯದ ವಿಚಾರವನ್ನು ಕೇಳಿದ್ದೀರಿ. ವೆರಿಗುಡ್. ಇದಕ್ಕೆ ನಾನೂ ಉತ್ತರಿಸಲು ಅಸಾಧ್ಯವೆನಿಸುತ್ತದೆ.ಇದು ಸರಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಾದ ಸಂಗತಿ’ ಎನ್ನುತ್ತ ವಿದ್ಯಾರ್ಥಿನಿಯ ಬೆನ್ನುತಟ್ಟಿದರು. ಆದರೆ ಇಲ್ಲಿ ಮಗುವಿನ ಪ್ರಶ್ನೆಗೆ ಉತ್ತರ ಸಿಗಲಿಲ್ಲ.ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ ಶಾಲಾ ಮುಗ್ಧ ಮಕ್ಕಳಲ್ಲಿ ಜಾತಿ ಪದ್ಧತಿ ಎಂಬ ಪರಿಕಲ್ಪನೆ ಗಾಢವಾಗಿ ಮೂಡುತ್ತಿದೆ.
ಅದಕ್ಕೆ ಹಲವು ಬಾರಿ ಮಗುವಿನ ಪರಿಸರ, ಶಾಲಾ ವಾತಾವರಣ ಕೂಡ ಕಾರಣವಾಗಿದೆ. ಶಿಕ್ಷಕರಿಗೂ ಸಹ ಈ ಪ್ರಶ್ನೆಗಳಿಗೆ ಉತ್ತರ ನೀಡಲು ಅಸಾಧ್ಯವಾಗಿದೆ. ಈವಿಚಾರದಲ್ಲಿ ಶಿಕ್ಷಕರು ಪಾಠ ಮಾಡುವುದೇ ಒಂದು, ನಿಜ ಜೀವನದಲ್ಲಿ ನಡೆಯುವುದೇ ಮತ್ತೊಂದು ಎಂಬಂತಾಗಿದೆ. ಶಿಕ್ಷಕ ಸಮಾಜ ಪಾಠ ಮಾಡುವಾಗಉತ್ತರ ವೇದಗಳ ಕಾಲದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣ ವ್ಯವಸ್ಥೆ ಸಮಾಜದಲ್ಲಿ ತಲೆ ಎತ್ತಿತು ಎಂಬುದನ್ನು, ಕನಕದಾಸರು ತಮ್ಮ ಕೀರ್ತನೆಯಲ್ಲಿ ಜಾತಿ ಪದ್ಧತಿಯನ್ನು ವಿಡಂಬನೆ ಮಾಡಿರುವುದನ್ನು, ಸಾಮಾಜಿಕ ಸುಧಾರಕರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ ವಿವರಗಳನ್ನು, ಬಸವೇಶ್ವರರು ಜಾತಿರಹಿತ ಮತ್ತು ವರ್ಗರಹಿತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟ ವಿಧಾನದ ಬಗ್ಗೆ, ಅದರಲ್ಲೂ ಮುಖ್ಯವಾಗಿ ರಾಜಾರಾಮ್ ಮೋಹನ್ ರಾಯ್, ಡಾ.ಅಬೇಡ್ಕರಅವರು ಜಾತಿ ಪದ್ಧತಿಯ ವಿರುದ್ಧ ಹೋರಾಟ ಮಾಡಿರುವುದನ್ನು, ಭಾರತವು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಜಾತಿ ಪದ್ಧತಿಯೂ ಒಂದು, ಜಾತಿ ಪದ್ಧತಿಯೂ ಭಾರತದ ಏಕತೆಗೆ ಮಾರಕವಾಗಿದೆ ಹೀಗೆ ಹತ್ತು ಹಲವು ವಿಚಾರಗಳನ್ನು ಬೋಧಿಸುತ್ತಾರೆ.
ಖಂಡಿತವಾಗಿಯೂ ಮಕ್ಕಳಲ್ಲಿ ಜಾತಿ ಪದ್ಧತಿ ಎಂಬುವುದು ಸಮಾಜಕ್ಕೆ ಕಳಂಕ, ಇದು ನಿರ್ಮೂಲನೆಯಾಗಲೇಬೇಕು ಎಂಬ ಆಲೋಚನೆ ಮೂಡುವುದು ಸಹಜ. ಅದೇ ಶಾಲೆಯಲ್ಲಿ ಸ್ಕಾಲರ್ ಶಿಪ್‌ಗೆ ಜಾತಿವಾರು ಅರ್ಜಿ ಸಲ್ಲಿಸಲು ಮಾಹಿತಿ ನೀಡಿದಾಗ, ವಿದ್ಯಾರ್ಥಿಗಳ ಜಾತಿ ಪ್ರಮಾಣ ಪತ್ರಗಳನ್ನು ಶಾಲೆಗೆ ತಂದು ಸಲ್ಲಿಸುವಾಗ ಮಕ್ಕಳಲ್ಲಿ ತಾವು ಬೇರೆ ಬೇರೆ ಜಾತಿಗೆ ಸೇರಿದ್ದೇವೆ ಎಂಬ ಕಲ್ಪನೆ ಮೂಡುವುದು ಸಹಜ ಪ್ರಕಿಯೆ. ಇನ್ನೂ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಯನ್ನು ಮಾಹಿತಿ ಬರೆಯುವಾಗ ಜಾತಿವಾರು ಅಂಕೆ ಸಂಖ್ಯೆಗಳನ್ನು ಬರೆಯುವುದು, ಸರಕಾರದಿಂದ ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಸ್ವೀಕರಿಸಿದವರಮಾಹಿತಿಯಲ್ಲೂ ಜಾತಿವಾರು ಸಂಖ್ಯೆಗಳನ್ನು ಪಡೆಯುವುದು, ಪರೀಕ್ಷೆಗಳ ಫಲಿತಾಂಶವನ್ನು ಜಾತಿವಾರು ಆಧಾರಲ್ಲಿ ವಿಶ್ಲೇಷಣೆ ಮಾಡುವುದರಿಂದ ಒಂದು ಲೆಕ್ಕದಲ್ಲಿ ಜಾತಿ ಪದ್ಧತಿಯೂ ಇನ್ನೂ ಶಾಲಾ ವಾತವರಣದಯಲ್ಲಿಯೇ ಬೇರೂರಿದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.
ಜಾತಿ ಹುಟ್ಟಿನಲ್ಲಿ ಪ್ರಾರಂಭವಾಗಿ ಹಾಗೇ ಬೆಳೆಯುತ್ತಾ ಹೋಗಿ ಒಂದು ಜನಾಂಗದಿಂದ ಮತ್ತೊಂದು ಜನಾಂಗಕ್ಕೆ ವರ್ಗಾವಣೆಯಾಗುತ್ತ ಹೋಗುತ್ತದೆ. ಜಾತಿ ರಹಿತ ಸಮಾಜದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಅನುಷ್ಠಾನಕ್ಕೆ ಒಲವು ತೋರುತ್ತಿಲ್ಲ. ಜಾತಿ ಪದ್ಧತಿಯನ್ನು ತಡೆಯಬೇಕಾದರೆ ನಾವು ಮಾಡ ಬೇಕಾದ್ದು ಏನು? ಎಂಬುವುದನ್ನು ನೋಡುವುದಾದರೆ, ಒಬ್ಬ ದೇಶದ ಪ್ರಜೆಗೆ ಇವನು ಇಂತಹ ಜಾತಿಯವನು ಎಂಬ ಪ್ರಮಾಣ ಪತ್ರ ನೀಡುವ ಪದ್ಧತಿಯುರದ್ದಾಗಬೇಕು.
ಇದಕ್ಕೆ ಪೂರಕವಾಗಿ ಹೇಳುವುದಾದರೆ ತಮಿಳುನಾಡಿನ ವೆಲ್ಲೂರಿನ ವಕೀಲೆ ಸ್ನೇಹ ಪಾರ್ಥಿಬರಾಜ ಎಂಬುವವರು ಒಂಬತ್ತು ವರ್ಷಗಳ ನ್ಯಾಯಾಲಯದಹೋರಾಟದ ನಂತರ ನೋ ಕ್ಯಾಸ್ಟ್, ನೋ ರಿಲಿಜನ್ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಈ ಗುರುತಿನೊಂದಿಗೆ ಯಾವುದೇ ಜಾತಿ ಅಥವಾ ಧರ್ಮವನ್ನು ಹೊಂದಿಲ್ಲದ ಹಕ್ಕನ್ನು ಗೆದ್ದ ದೇಶದ ಮೊದಲ ವ್ಯಕ್ತಿಯಾಗಿದ್ದಾರೆ.
ನಾಗರಿಕರು ತಮ್ಮ ಹೆಸರಿನ ಮುಂದೆ ಜಾತಿ  ದಗಳನ್ನು ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಏಕೆಂದರೆ ಇದೊಂದು ರೀತಿಯಲ್ಲಿ ಪರೋಕ್ಷ ವಾಗಿ ಜಾತಿ ಪದ್ಧತಿಯನ್ನು ಆಚರಣೆ ಮಾಡಿದ್ದಾಗುತ್ತದೆ. ಅಂತರ್ ಜಾತಿ ವಿವಾಹವಾಗುವ ಎಲ್ಲಾ ದಂಪತಿಗಳಿಗೆ ಸರಕಾರದಿಂದ ವಿಶೇಷ ಸೌಲಭ್ಯ ಗಳನ್ನು ಒದಗಿಸಬೇಕು. ಇವರು ನಿಜವಾದ ಜಾತಿ ಪದ್ಧತಿಯನ್ನು ನಿಷೇಧಿಸುವ ಹೋರಾಟಗಾರರು. ಇಲ್ಲಿ ಇನ್ನೊಂದು ವಿಚಾರವನ್ನು ಅತಿ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಏನೆಂದರೆ ಜಾತಿ ಇಲ್ಲ ಎಂದ ಮೇಲೆ ಮೀಸಲಾತಿಗಳನ್ನು ಹೇಗೆ ಜಾರಿಗೊಳಿಸುವುದು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಈ ಸಂದಿಗ್ಧತೆಗೆಪರಿಹಾರ ಎಂದರೆ ನಾಗರಿಕನ ಅರ್ಥಿಕ ಸ್ಥಿತಿಯ ಹಿನ್ನೆಲೆಯ ಮೇಲೆ ವಿದ್ಯಾರ್ಥಿ ವೇತನಗಳನ್ನು ನೀಡಿ ಅವರಿಗೆ ಶಿಕ್ಷಣ ಒದಗಿಸಬೇಕು.
ಉದ್ಯೋಗದಲ್ಲಿ ಅಭ್ಯರ್ಥಿಗಳು ನಿಗದಿಪಡಿಸಿರುವ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳನ್ನು ಜಾತಿ ಬದಲಿಗೆ ಬಳಸಬಹುದು. ಉದಾಹರಣೆಗೆ:100ಹುದ್ದೆಗಳುನೇಮಕಾತಿ ಮಾಡುವುದಾದರೆ ಶೇ.35ರಿಂದ49ಅಂಕ ಪಡೆದಿರುವ ಅಭ್ಯರ್ಥಿಗಳಿಗೆ34ಹುದ್ದೆಗಳು, ಶೇ.50ರಿಂದ74ಅಂಕ ಪಡೆದಿರುವ ಅಭ್ಯರ್ಥಿಗಳಿಗೆ33 ಹುದ್ದೆಗಳು ಮತ್ತು ಶೇ.75ರಿಂದ ಶೇ.100 ಅಂಕ ಪಡೆದಿರುವ ಅಭ್ಯರ್ಥಿಗಳಿಗೆ 33 ಹುದ್ದೆಗಳನ್ನು ಮೀಸಲಾಗಿಡಬೇಕು. ಅವರ ನೇಮಕಾತಿ ಪರೀಕ್ಷೆಆಧಾರದಲ್ಲಿ ತಯಾರಿಸಿದ ನೇಮಕಾತಿ ಜ್ಯೆಷ್ಠತೆ ಪಟ್ಟಿಯಲ್ಲಿ ಈ ಮೂರು ಹಂತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅಂಕ ಮಿಸಲಾತಿ ಕಲ್ಪಿಸಬಹುದು. ಇದರಿಂದ ಉದ್ಯೋಗದಲ್ಲಿ ಜಾತಿ ಹಣೆಪಟ್ಟಿ ಮೇಲೆ ಬಡಿದಾಡುವುದು ತಪ್ಪುತ್ತದೆ.
ಜಾತಿ ಪದ್ಧತಿ ತಮ್ಮ ದೇಶದಲ್ಲಿ ಇನ್ನೂ ಕೂಡ ಹೆಮ್ಮರವಾಗಿ ಬೆಳೆದಿರುವುದು ನಮ್ಮ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಜನರ ಮನಸ್ಥಿತಿಗಳು ಬದಲಾಗ ಬೇಕು. ಜಾತಿ ವಿಚಾರವನ್ನು ಅತೀ ಲಘುವಾಗಿ ಕಾಣದೇ ಸಾಮಾಜಿಕ ಹೋರಾಟಗಾರರು, ಶಿಕ್ಷಣ ತಜ್ಞರು, ರಾಜಕೀಯ ವ್ಯಕ್ತಿಗಳು ಜಾತಿ ಪದ್ದತಿಯ ನಿರ್ಮೂಲನೆ ಬಗ್ಗೆ ಒಲವು ತೋರಿಸಬೇಕು. ಒಂದು ವೇಳೆ ಜಾತಿ ಪದ್ಧತಿ ನಿರ್ಮೂಲನೆಯಾಗದಿದ್ದರೆ, ಈಗಿನ ತೀವ್ರತೆಯನ್ನು ಅವಲೋಕಿಸಿದಾಗ ಜಾತಿ ವ್ಯಸನದಿಂದ ಒಬ್ಬರ ನ್ನೊಬ್ಬರು ಕೊಲ್ಲುತ್ತ ಹೋಗುವ ಸಂಪ್ರದಾಯ ಬೆಳೆಯಬಹುದು.
ಆದರಿಂದ, ಬಸವ, ಬುದ್ಧ, ಅಂಬೇಡ್ಕರ್ ಆಶಯದಂತೆ ಪ್ರೀತಿ, ಕರುಣೆ, ಸಮಾನತೆಯಿಂದ ಕೂಡಿದ ಜಾತಿ ರಹಿತ ಪ್ರಬುದ್ಧ ಭಾರತವನ್ನು ಕಟ್ಟಲು ನಾವೆಲ್ಲರೂ ಪಣ ತೊಡಬೇಕಾಗಿದೆ. ಭಾರತವು ಜಾತಿರಹಿತ ರಾಷ್ಟ್ರವಾಗಿ ಆದಷ್ಟು ಬೇಗ ಬದಲಾಗಲಿ ಎಂದು ಬಯಸೋಣ.