ಜಂಕ್’ಫುಡ್ ಸೇವಿಸುವ ಮಕ್ಕಳಲ್ಲಿ ಅಪೌಷ್ಠಿಕಾಂಶ ಹೆಚ್ಚು
ತನ್ನಿಮಿತ್ತ
ಡಾ.ಶಾಲಿನಿ ಅರವಿಂದ್
ಹಿಂದೆಲ್ಲಾ ಮಕ್ಕಳಲ್ಲಿ ಆಹಾರದ ಕೊರತೆಯಿಂದ ಅಪೌಷ್ಟಿಕತೆ ಕಾಡುತ್ತಿತ್ತು. ಆದರೀಗ ಜಂಕ್ ಫುಡ್ ಅನ್ನೇ ಆಹಾರದ ರೀತಿ ಸೇವಿಸುವ ಮಕ್ಕಳಲ್ಲಿಯೂ ಅಪೌಷ್ಟಿಕತೆ ಕಾಡುತ್ತಿರುವುದು ಕಂಡು ಬಂದಿದೆ. ಸೆಪ್ಟೆಂಬರ್ ಮೊದಲ ವಾರವನ್ನು ವಿಶ್ವ ನ್ಯೂಟ್ರೀಷಿಯನ್ ವಾರ ಎಂದು ಆಚರಿಸಲಾಗುತ್ತದೆ.
ಈಗಿನ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುವುದಕ್ಕೆ ಹಲವು ಕಾರಣಗಳಿವೆ. ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿ ಕಾಂಶ ಸಿಗದೇ ಹೋದಲ್ಲಿ ಆ ಮಕ್ಕಳಲ್ಲಿ ಅಪೌಷ್ಟಿಕತೆ (ಮಾಲ್ ನ್ಯೂಟ್ರೀಷಿಯನ್) ಕಾಡುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳು ಇಂಥ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಹಸಿವಿನಿಂದ ಮಲಗುವವರ ಪ್ರಮಾಣ ಕಡಿಮೆಯಾಗಿದೆ. ಆದರೆ, ಅಪೌಷ್ಟಿಕತೆ ಸಮಸ್ಯೆ ಈಗಲೂ ಮಕ್ಕಳಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ, ಅತಿಯಾದ ಜಂಕ್ ಫುಡ್ ಸೇವನೆ. ದೇಹಕ್ಕೆ ಪ್ರೋಟಿನ್, ವಿಟಮಿನ್‌ ಗಳು ಹೇರಳವಾಗಿ ಬೇಕು, ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಇದರ ಅವಶ್ಯಕತೆ ಹೆಚ್ಚು. ಆದರೆ, ಪೌಷ್ಟಿಕ ಆಹಾರ ಸೇವನೆ ಕೊರತೆಯಿಂದ ಸಾಮಾನ್ಯ ಕುಟುಂಬದ ಮಕ್ಕಳು ಬಳಲುತ್ತಿದ್ದಾರೆ.
ಕೇವಲ ಒಂದೇ ಮಗುವಿರುವ ಕುಟುಂಬಗಳಲ್ಲಿ, ಆ ಮಗುವನ್ನು ಹೆಚ್ಚು ಮುದ್ದಿನಿಂದ ಬೆಳೆಸಬೇಕು ಎನ್ನುವ ಧಾವಂತಕ್ಕೆ ಬೀಳುವ ಪೋಷಕರು ಆ ಮಕ್ಕಳಿಗೆ ಹೆಚ್ಚು ಚಿಪ್ಸ್, ಚಾಕೋಲೇಟ್, ಪಿಜ್ಜಾ ಬರ್ಗರ್ ನಂತಹ ಆಹಾರಗಳನ್ನೇ ಊಟದ ರೀತಿ ಕೊಡುತ್ತಾರೆ. ಇದನ್ನು ಪ್ರೀತಿ ಎಂದು ಅವರು ಭಾವಿಸಬಹುದು. ಆದರೆ, ತಮ್ಮ ಮಕ್ಕಳ ಆರೋಗ್ಯವನ್ನು ಸ್ವತಃ ಪೋಷಕರೇ ಹಾಳು ಮಾಡುತ್ತಿದ್ದಾರೆ ಎಂಬುದು ಅವರ ಅರಿವಿಗೆ ಇರುವುದಿಲ್ಲ. ಹೆಚ್ಚು ಜಂಕ್ ಫುಡ್ ಸೇವನೆಯಿಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ದೊರೆಯುವುದಿಲ್ಲ.
ಹಿಂದಿನ ಕಾಲದಲ್ಲಿ ಬಾಣಂತಿಯರಿಗೆ ಊಟದ ಪಥ್ಯದ ಹೆಸರಿನಲ್ಲಿ ಸಾಕಷ್ಟು ಅವೈಜ್ಞಾನಿಕ ಆಹಾರ ಕ್ರಮಗಳನ್ನು ಅನುಸರಿಸುವಂತೆ ಮಾಡಿರುವುದು ಸಹ ಮಕ್ಕಳ ಅಪೌಷ್ಟಿಕತೆಗೆ ಕಾರಣವಾಗುತ್ತಿದೆ. ಉದಾಹರಣೆಗೆ ಪ್ರೋಟಿನ್ ಆಹಾರ ಸೇವನೆಗೆ ಮಾಡಬಾರದು, ಹೆಚ್ಚು ನೀರು ಕುಡಿದರೆ ಮಕ್ಕಳಿಗೆ ಶೀತವಾಗುತ್ತದೆ ಎಂಬಿತ್ಯಾ ದಿ ನಂಬಿಕೆಗಳು ಇದಕ್ಕೆ ಕಾರಣವಾಗಿವೆ. ನೀರು ಕುಡಿಯುವುದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೆ. ಮಗು ಜನಿಸಿದ ಅವಧಿಯಿಂದ2ವರ್ಷದವರೆಗೂ ಆ ಮಗುವಿಗೆ ಪೌಷ್ಟಿಕ ಆಹಾರ ಅತಿ ಹೆಚ್ಚು. ಜತೆಗೆ ತಾಯಿಗೂ ಸಹ ಪೌಷ್ಟಿಕ ಆಹಾರ ಸೇವನೆ ಅತ್ಯಂತ ಅವಶ್ಯಕ. ಹೀಗಾಗಿ ಪೌಷ್ಟಿಕ ಆಹಾರ ಸೇವನೆಯನ್ನು ತಡೆಯುವುದು ತಪ್ಪು.
ಸಪ್ಲಿಮೆಂಟ್ಸ್ ಹವ್ಯಾಸ ಒಳ್ಳೆಯದಲ್ಲಕೆಲವರು ಆಹಾರವನ್ನು ಇಷ್ಟ ಪಡದವರು, ಹೆಚ್ಚು ಸಪ್ಲಿಮೆಂಟ್ಸ್ ಮಾತ್ರೆ ಹಾಗೂ ಪ್ರೊಟೀನ್ ಶೇಕ್ ನತ್ತ ಮುಖ ಮಾಡುತ್ತಾರೆ. ಇದು ನಿಯಮಿತ ಸೇವನೆ ಒಳ್ಳೆಯದೇ. ಆದರೆ, ಅವುಗಳಿಗೆ ದಾಸರಾಗಿ ಆಹಾರ ಸೇವನೆ ಮಾಡದಿದ್ದರೆ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆ ಕಾಡುವುದು ಕಟ್ಟಿಟ್ಟ ಬುತ್ತಿ. ಡಯೆಟ್ ಎನ್ನುವುದು ಇಂದಿನ ಕಾಲದಲ್ಲಿ ಟ್ರೆಂಡ್ ಆಗಿದೆ. ಸಾಕಷ್ಟು ಯೂಟ್ಯೂಬ್ ಚಾನಲ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಡಯೆಟೀಷಿಯನ್‌ಗಳೇ ಆಗಿzರೆ. ಇವರ ಸಲಹೆಗಳನ್ನು ನಂಬಿ ಡಯಟ್ ಮಾಡುವುದು ಒಳ್ಳೆಯದಲ್ಲ. ಒಮ್ಮೊಮ್ಮೆ ಇಂಥ ಸಲಹೆಗಳು ಪ್ರಾಣಕ್ಕೆ ಕುತ್ತು ತರಬಹುದು. ಹೀಗಾಗಿ ಸೂಕ್ತ ಡಯೆಟ್ ಮಾಡಬೇಕೆನ್ನುವವರು ಸಂಬಂಧ ಪಟ್ಟ ವೈದ್ಯರ ಸಲಹೆ ಪಡೆಯಿರಿ.