ಅದಕ್ಷ ಅಧ್ಯಕ್ಷ, ಸ್ವಾಭಿಮಾನಿ ಮಂತ್ರಿ
ನಾಡಿಮಿಡಿತ
ವಸಂತ ನಾಡಿಗೇರ
.@.
ನಮ್ಮ ದೇಶದಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ನಡೆಯುತ್ತಿರುವಾಗ ಅಫ್ಘಾನಿಸ್ತಾನದಲ್ಲಿ ಬೇರೆಯದೇ ಆದ ಬೆಳವಣಿಗೆ ನಡೆದಿತ್ತು. ಅಲ್ಲಿನ ಆಡಳಿತ ತಾಲಿಬಾನಿಗಳ  ಶವಾಗಿತ್ತು. ಇದರಿಂದ ಬೆದರಿದ ಲಕ್ಷಾಂತರ ಜನರು ದೇಶ ಬಿಟ್ಟು ಹೋಗತೊಡಗಿದರು. ತಾಲಿಬಾನಿಗಳ ಆಡತಳಿದಲ್ಲಿ ಅಫ್ಘಾನಿಸ್ತಾನದ ಗತಿ ಏನು ? ಜಗತ್ತಿನ ಮೇಲೆ ಅದರ ಪರಿಣಾಮ ಏನು ಎಂಬಿತ್ಯಾದಿ ಚರ್ಚೆಗಳು ಆರಂಭವಾದವು.
ತಾಲಿಬಾನಿಗಳ ದೌರ್ಜನ್ಯ, ಕ್ರೌರ್ಯ, ಗುಂಡಿನ ದಾಳಿ, ಹಿಂಸಾಚಾರ ಮೊದಲಾದವುಗಳ ಬಗ್ಗೆ ಪುಂಖಾನುಪುಂಖವಾಗಿ ವರದಿಗಳು ಬರತೊಡಗಿದವು. ಇದೆಲ್ಲದರ ಕುರಿತು ನಾನು ಮತ್ತೆ ಇಲ್ಲಿ ಚರ್ವಿತ ಚರ್ವಣ ಡಬಯಸುವುದಿಲ್ಲ. ಆದರೆ ಇಡೀ ಪ್ರಕರಣದಲ್ಲಿ ಮಾನವೀಯತೆಯ ಬಿಕ್ಕಟ್ಟು ಮತ್ತು ಮೌಲ್ಯಗಳು ಹಾಗೂ ಪ್ರಾಮಾಣಿ ಕತೆ, ಅಪ್ರಾಮಾಣಿಕತೆ ಮೊದಲಾದ ವಿಷಯಗಳ ಕುರಿತಾದ ಹಲವಾರು ಅಂಶಗಳನ್ನು ಎದ್ದು ಕಂಡವು. ಇವುಗಳನ್ನು ನಾವು ಬಹುಮುಖ್ಯವಾಗಿ ಗಮನಿಸಬೇಕೆ ನಿಸುತ್ತದೆ.
ಕಳೆದ20ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ತಳವೂರಿ ಅದನ್ನು ತಾಲಿಬಾನಿಗಳ ಉಪಟಳದಿಂದ ಪಾರುಮಾಡಿ ಅಲ್ಲಿನ ಜನತೆಗೆ ಸುಖ ಸಂತಸ ನೆಮ್ಮದಿಗಳನ್ನು ಕೊಟ್ಟಿರುವುದಾಗಿ ಅಮೆರಿಕ ಹೇಳಿಕೊಂಡಿತ್ತು. ನಾಗರಿಕ ಸರಕಾರ ವೊಂದನ್ನು ಸ್ಥಾಪಿಸಿ ಆ ದೇಶದಲ್ಲಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಲೂ ಮುಂದಾಗಿ ಆ ನಿಟ್ಟಿನಲ್ಲಿ ಯಶಸ್ವಿ ಯಾಗಿರುವಂತೆ ಬಿಂಬಿಸಿತ್ತು. ಆದರೆ ಈ ವರ್ಷದ ಆಗಸ್ಟ್31ರೊಳಗೆ ತನ್ನ ಸೇನಾಪಡೆಗಳು ಅಫ್ಘಾನಿ ಸ್ತಾನವನ್ನು ಸಂಪೂರ್ಣವಾಗಿ ತೊರೆಯುವುದಾಗಿ ಘೋಷಿಸಿದ್ದೇ ತಡ ಮತ್ತೆ ಬಿಕ್ಕಟ್ಟು ಆರಂಭವಾಯಿತು.
ತಾಲಿಬಾನಿಗಳು ಪುನಃ ಒಗ್ಗೂಡಿ ಒಂದಾದ ಮೇಲೊಂದರಂತೆ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತ, ಆಗಸ್ಟ್15ರ ಹೊತ್ತಿಗೆ ರಾಜಧಾನಿ ಕಾಬೂಲ್ ಪ್ರವೇಶಿಸಿಬಿಟ್ಟರು. ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಂಡುಬಿಟ್ಟರು. ಹಿಂದಿನ ದಿನವಷ್ಟೇ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಅಧ್ಯಕ್ಷ ಅಶ್ರಫ್ ಘನಿ, ದೇಶ ತಮ್ಮ ನಿಯಂತ್ರಣ ದಲ್ಲೇ ಇದೆ, ಭಯ ಬೇಡ ಎಂದಿದ್ದರು. ಆದರೆ ಮರುದಿನ ಯಾವಾಗ ತಾಲಿಬಾನಿಗಳು ಇಡೀ ಕಾಬೂಲ್ ಅನ್ನು ತಮ್ಮ ಕಬ್ಜಾಗೆ ತೆಗೆದುಕೊಂಡರೋ ಆಗ ಘನಿಗೆ ಬಹುಶಃ ಬೇರೆ ದಾರಿ ಇರಲಿಲ್ಲ ಎಂದು ಣುತ್ತದೆ. ಹೀಗಾಗಿ ಅವರು ತಮ್ಮ ಕುಟುಂಬ ಸದಸ್ಯರುಹಾಗೂ ಕೆಲವು ನಿಕಟವರ್ತಿ ಗಳೊಂದಿಗೆ ದೇಶ ತೊರೆದರು.
ಆದರೆ ಎಲ್ಲಿಗೆ ಹೋದರು ಎಂಬುದು ಸ್ಪಷ್ಟವಾಗಲಿಲ್ಲ. ನೆರೆಯ ತಾಜಕಿಸ್ತಾನ್ ಇಲ್ಲವೆ ಉಜ್ಬೇಕಿಸ್ತಾನ್‌ಗೆ ತೆರಳಿರ ಬಹುದು ಎಂದು ಹೇಳಲಾಗಿತ್ತು. ಆದರೆ ಅಂತಿಮವಾಗಿ ಘನಿ ದುಬೈಗೆ ತೆರಳಿದ್ದಾರೆ ಎನ್ನಲಾಗಿದೆ. ಮಾನವೀಯ ನೆಲೆಯಲ್ಲಿ ಅವರಿಗೆ ಆಶ್ರಯ ನೀಡಿರುವುದಾಗಿ ಯುಎಇ ತಿಳಿಸಿದೆ. ಆದರೆ ರಷ್ಯ ಮತ್ತಿತರ ಕೆಲವು ರಾಯಭಾರ ಕಚೇರಿಗಳ ಮೂಲಗಳು ಹೇಳುವ ಕಥೆ ಕೇಳಿದರೆ ಘನಿ ಅವರ ಬಗ್ಗೆ ಬೇರೆಯದೇ ಆದ ಭಾವನೆ ಮೂಡುತ್ತದೆ. ಘನಿಯವರು ಪಲಾಯನ ಮಾಡುವುದಕ್ಕಾಗಿ ವಿಮಾನ ನಿಲ್ದಾಣಕ್ಕೆ ಹೊರಟಾಗ ಅವರ ಹಿಂದೆ ಮುಂದೆ ಹಲವು ಕಾರುಗಳು ಇದ್ದವು. ಅವುಗಳ ತುಂಬ ಹಣವಿತ್ತು.
ಅವುಗಳನ್ನೆಲ್ಲ ಹೆಲಿಕಾಪ್ಟರ್‌ಗೆ ತುಂಬಲಾಯಿತು. ಆದರೆ ಜಾಗ ಸಾಕಾಗದೇ ಒಂದಷ್ಟು ಹಣ ಟಾರ್ಮ್ಯಾಕ್‌ನಲ್ಲೇ ಉಳಿದು ಹೋಯಿತು ಎಂಬುದು ಆ ಮೂಲಗಳ ಹೇಳಿಕೆ. ಆದರೆ ಈ ಆರೋಪಗಳನ್ನು ಅಲ್ಲಗಳೆಯುವ ಘನಿ, ‘ಅಂಥ ಘನಂಧಾರಿ ಕೆಲಸವನ್ನೆನೂ ನಾನು ಮಾಡಿಲ್ಲ. ಉಟ್ಟ ಬಟ್ಟೆಯಲ್ಲೇ ನಾನು ದೇಶ ಬಿಟ್ಟು ಬಂದಿದ್ದೇನೆ ಎನ್ನುತ್ತಾರೆ. ಚಪ್ಪಲಿಗಳನ್ನು ಬಿಟ್ಟು ಷೂ ಹಾಕಿಕೊಳ್ಳಲೂ ನನಗೆ ಪುರಸತ್ತಿರಲಿಲ್ಲ. ಅಲ್ಲಿಯೇ ಇದ್ದಿದ್ದರೆ ತಾಲಿಬಾನಿಗಳು ನನ್ನನ್ನು ಗಲ್ಲಿಗೇರಿಸಿ ಬಿಡುತ್ತಿದ್ದರು. ಹಿಂಸೆ, ರಕ್ತಪಾತವನ್ನು ತಪ್ಪಿಸಲು ನಾನು ಅನಿವಾರ್ಯವಾಗಿ ದೇಶಬಿಟ್ಟು ಬಂದೆ ಎಂದು ಹೇಳುತ್ತಾರೆ. ನಿಮ್ಮ ಅಧ್ಯಕ್ಷ ದೇಶವನ್ನು ಮಾರಾಟಮಾಡಿ ನಿಮ್ಮನ್ನೆಲ್ಲ ಬಿಟ್ಟು ತನ್ನ ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ ಎಂಬ ಮಾತುಗಳನ್ನು ನಂಬಬೇಡಿ, ನನಗೆ ಬೇರೆ ದಾರಿ ಇರಲಿಲ್ಲ, ಅಸಹಾಯಕ ನಾಗಿದ್ದೆ’ ಎಂದು ತಿಳಿಸಿದ್ದಾರೆ.
ಘನಿಯವರ ವಿವರಗಳನ್ನು ನೋಡಿದಾಗ ಮತ್ತೊಂದು ಅಭಿಪ್ರಾಯವೂ ಮೂಡುತ್ತದೆ. ಅವರು ಮೂಲತಃ ರಾಜಕಾರಣಿಯಂತೂ ಅಲ್ಲ. ಅವರೊಬ್ಬ ಶಿಕ್ಷಣ ತಜ್ಞ,ತಂತ್ರಜ್ಞ. ಬಹು ಸಮಯ ಅಫ್ಘಾನಿಸ್ತಾನದಿಂದ ಹೊರಗೇ ಕಳೆದವರು. ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದಿರುವ ಘನಿ ಹಲವಾರು ಶಿಕ್ಷಣಸಂಸ್ಥೆಗಳಲ್ಲಿ ಪಾಠ ಮಾಡಿ ಅನಂತರ ವಿಶ್ವಬ್ಯಾಂಕ್ ಮತ್ತು ವಿಶ್ವ ಸಂಸ್ಥೆಗಳಲ್ಲಿ ಕೆಲಸ ಮಾಡಿದವರು.2001ರಲ್ಲಿ ಅಮೆರಿಕ ಪ್ರವೇಶದ ಬಳಿಕ ಘನಿಯವರು ಅಫ್ಘಾನಿಸ್ತಾನಕ್ಕೆ ಬಂದರು. ಹಮೀದ್ ಕರ್ಜಾಯಿ ಸಂಪುಟದಲ್ಲಿ ಹಣಕಾಸು ಸಚಿವರಾದರು. ಆದರೆ ಹರಿತ ನಾಲಿಗೆಯವರಾದ ಅವರು ಎರಡು ವರ್ಷಗಳಲ್ಲೇ ಆಸ್ಥಾನದಿಂದ ಹೊರಬಿದ್ದರು. ಟೆಡ್‌ಟಾಕ್‌ಗಳಲ್ಲಿ ಭಾಗವಹಿಸುತ್ತ, ಪತ್ರಿಕೆಗಳಲ್ಲಿ ಲೇಖನ ಬರೆಯುತ್ತ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಫ್ಘಾನಿಸ್ತಾನದ ಭವಿಷ್ಯಕುರಿತು ದನಿ ಎತ್ತುತ್ತಿದ್ದರು.
2009ರ ಚುನಾವಣೆಯಲ್ಲಿ ಸ್ಪರ್ಧಿಸಿದರಾದರೂ ಸೋಲುಂಡರು. ಛಲಬಿಡದ ತ್ರಿವಿಕ್ರಮನಂತೆ ಮರಳಿ ಯತ್ನವ ಮಾಡಿ2014ರ ಚುನಾವಣೆಯಲ್ಲಿ ಜಯಗಳಿಸಿ ದೇಶದ ಅಧ್ಯಕ್ಷರಾದರು.2019ರ ಚುನಾವಣೆಯಲ್ಲಿ ಮತ್ತೆ ಪ್ರಯಾಸದ ಗೆಲುವು ಸಾಧಿಸಿದರು. ಅವರ ಅಧಿಕಾರಾವಧಿ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ತಾಲಿಬಾನಿಗಳ ಬೆದರಿಕೆಯ ನಡುವೆಯೇ ರಾಜ್ಯಭಾರ ಮಾಡಿದರು. ಇದರ ನಡುವೆಯೇ ಅಫ್ಘಾನಿಸ್ತಾನದ ಮರುನಿರ್ಮಾಣದ ಮಾತನ್ನಾಡುತ್ತಿದ್ದ ಅವರು, ದೇಶವು ಯುದ್ಧದ ನೆರಳಿನಿಂದ ಹೊರಬಂದು ಆಧುನಿಕತೆಯತ್ತ, ಪ್ರಗತಿಯತ್ತ ಮುಖ ಮಾಡುವಂತೆ ಕ್ರಮಕೈಗೊಳ್ಳುವ ವಚನವಿತ್ತಿದ್ದರು.
ಆದರೆ ಇದೀಗ ಏಳು ವರ್ಷಗಳಲ್ಲೇ ಪ್ರಗತಿಯ ಮಾತು ಒತ್ತಟ್ಟಿಗಿರಲಿ, ತನ್ನ ಜನರನ್ನೇ ಅನಾಥರನ್ನಾಗಿಸಿ ದೇಶವನ್ನೇ ತೊರೆದಿದ್ದಾರೆ. ಮತ್ತೆ ಏನನ್ನುಸಾಽಸಿದಂತಾಯಿತು? ಅವರ ಯಾವ ಕನಸುಗಳೂ ಕೈಗೂಡಲಿಲ್ಲ ಎಂಬುದು ಅನೇಕರ ಹೇಳಿಕೆ. ಆದರೆ ಭಾರಿ ರಾಜಕೀಯ ಅಸ್ಥಿರತೆ ಮತ್ತು ಭಯಂಕರವೈರುಧ್ಯಗಳಿಂದ ಕೂಡಿರುವ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುವುದು ಹಾಗೂ ಅಲ್ಲಿ ಬದಲಾವಣೆ ತರುವುದು ಸುಲಭ ಸಾಧ್ಯವಲ್ಲ ಎನ್ನುವುದು ಹಲವರ ಅಭಿಪ್ರಾಯ. ಇಷ್ಟಾಗಿಯೂ, ಏನೇ ಆಗಲಿ, ಘನಿ ಹೀಗೆ ಹೇಡಿಯಂತೆ ಓಡಿಹೋಗಬಾರದಿತ್ತು.
ತನ್ನವರನ್ನು ಅನಾಥರನ್ನಾಗಿ ಮಾಡಿ ಹೀಗೆ ಕಾಲ್ಕೀಳಬಾರದಾಗಿತ್ತು. ‘ಈಸಬೇಕು, ಇದ್ದು ಜಯಿಸಬೇಕು’ ಎಂಬ ದಾಸರ ಪದದಂತೆ, ಇಲ್ಲಿಯೇ ಇದ್ದು ಹೋರಾಡ ಬೇಕಾಗಿತ್ತು ಎಂಬುದು ಬಹು ಜನರ ಹೇಳಿಕೆ. ಅಲ್ಲದೆ ‘ಉಂಡೂ ಹೋದ, ಕೊಂಡೂ ಹೋದ’ ಎಂಬ ಮಾತಿನಂತೆ ಹಣವನ್ನು ಕೂಡ ಲೂಟಿ ಮಾಡಿಕೊಂಡು ಹೋಗಿದ್ದಾರೆ. ಇದು ದೇಶಭಕ್ತನ ಲಕ್ಷಣವಲ್ಲ. ಬದಲಾಗಿ, ದೇಶ ಭಕ್ಷಣೆಯಯಂತೆ ಕಾಣುತ್ತದೆ ಎಂದು ಅನೇಕರು ಹೇಳುತ್ತಾರೆ. ಸದ್ಯ ಭವಿಷ್ಯದಲ್ಲಿ ಘನಿ ದೇಶಕ್ಕೆ ಮರಳಿ ಬರುವ ಸಾಧ್ಯತೆ ಇಲ್ಲ ಎನ್ನುತ್ತಾರೆ ರಾಜಕೀಯ ಪಂಡಿತರು.
ನಾನಿರುವುದೇ ನಿನಗಾಗಿ, ಕಣ್ಣೀರೇಕೆ ಬಿಸಿಯುಸಿರೇಕೆ… ಎಂದು ಮಯೂರವರ್ಮ ತನ್ನ ಪ್ರಜೆಗಳನ್ನು ಉದ್ದೇಶಿಸಿ ಹಾಡು ಹೇಳಿದ್ದು ನೆನಪಿರಬೇಕು. ಆದರೆಇವರು ಹೇಳದೆ ಕೇಳದೆ ಪಲಾಯನ ಮಾಡಿರುವುದು ಸರ್ವಥಾ ಸರಿಯಲ್ಲ ಎಂದವರೇ ಹೆಚ್ಚು. ಇದು ಅಫ್ಘಾನಿಸ್ತಾನದ ಅಧ್ಯಕ್ಷರ ಕಥೆಯಾದರೆ ಇದಕ್ಕೆ ವಿರುದ್ಧ ವಾದ ಮತ್ತೊಂದು ನಿದರ್ಶನವೂ ಇದೆ. ಘನಿ ಪಲಾಯನ ಸುದ್ದಿಯ ಬೆನ್ನಲ್ಲೇ ಒಂದು ವಿಡಿಯೊ ವೈರಲ್ ಆಯಿತು. ಏನದು ಎಂದಿರಾ ? ಜರ್ಮನಿಯ ಲೀಪ್‌ಜಿಗ್ ನಗರದಲ್ಲಿ ವ್ಯಕ್ತಿಯೊಬ್ಬ ಪಿಜ್ಜಾ ಡೆಲಿವರಿ ಮಾಡುತ್ತಿರುವ ವಿಡಿಯೊ ಅದು. ಈ ಡೆಲಿವರಿ ‘ಭಾಯಿ’ ಹೆಸರು ಸೈಯದ್ ಅಹಮದ್ ಶಾ ಸಾದತ್.
ಆದರೆ ಅವರು ಸಾಮಾನ್ಯ ವ್ಯಕ್ತಿಯಲ್ಲ. ಘನಿ ಸಂಪುಟದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದರು.ಆಕ್ಸಫರ್ಡ್ವಿಶ್ವವಿದ್ಯಾಲಯದಿಂದ ಎರಡು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎರಡು ವರ್ಷ ಸಚಿವರಾಗಿ ಕಾರ್ಯ ನಿರ್ವಹಿಸಿದ ಬಳಿಕ2020ರಲ್ಲೇ ತಮ್ಮ ಕುಟುಂಬದೊಂದಿಗೆ ದೇಶದಿಂದ ಹೊರ ಬಿದ್ದಿದ್ದರು. ಅವರು ಆಗ ತಲುಪಿದ್ದು ಲೀಪ್‌ಜಿಗ್ ನಗರವನ್ನು. ಅಫ್ಘಾನಿಸ್ತಾನದಲ್ಲಿ ಮಂತ್ರಿ ಆಗಿದ್ದವರೊಬ್ಬರು ಇಂಥ ಕೆಲಸ ಮಾಡುವುದೇ ಎಂಬ ಪ್ರಶ್ನೆಎದುರಾಗುವುದು ಸಹಜ. ಇದಕ್ಕೆ ಉತ್ತರ ಅವರ ಮಾತಿನಲ್ಲೇ ಸಿಗುತ್ತದೆ.
ಈಗ ಘನಿಯವರು ಮಾಡಿದಂತೆ ಜೀವ ರಕ್ಷಣೆಗೇನೂ ಅವರು ದೇಶ ಬಿಡಲಿಲ್ಲ. ಆದರೆ ದೇಶದಲ್ಲಿ ಕಂಡುಬರುತ್ತಿದ್ದ ಭ್ರಷ್ಟಾಚಾರ, ರಾಜಕೀಯ ಅನಿಶ್ಚಿತ ಪರಿಸ್ಥಿತಿಯನ್ನು ಅರಿತು ಜಾಗ ಖಾಲಿ ಮಾಡುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದವರು. ತಾನೊಬ್ಬ ಮಾಜಿ ಮಂತ್ರಿ ಎಂಬ ಯಾವ ಹಮ್ಮು ಬಿಮ್ಮು, ಪ್ರತಿಷ್ಠೆಯೂ ಸಾದತ್‌ಗೆ ಇಲ್ಲ. ಕೇಸರಿ ಬಣ್ಣದ ಉಡುಪು ಧರಿಸಿ, ಬೆನ್ನಿಗೆ ಭಾರವಾದ ಬ್ಯಾಗ ನೇತು ಹಾಕಿಕೊಂಡು ಸೈಕಲ್ ಏರುತ್ತಾರೆ. ಮನೆ ಮನೆಗೆ ಪಿಜ್ಜಾಡೆಲಿವರಿ ಮಾಡುತ್ತಾರೆ.
ಇದೆಲ್ಲದರ ಬಗ್ಗೆ ಅವರು ಹೇಳುವುದು ಹೀಗೆ : ‘ನಿಮಗೆ ನಿಮ್ಮದೇ ಆದ ಖರ್ಚು ವೆಚ್ಚಗಳಿರುತ್ತವೆ. ಊಟ, ಬಟ್ಟೆಗೆ; ಮನೆ ಬಾಡಿಗೆ ಮತ್ತಿತರ ವೆಚ್ಚಕ್ಕೆ ಹಣ ಬೇಕೇ ಬೇಕು. ಈ ಹಣ ಗಳಿಸಲು ನಾನು ಕೆಲಸ ಮಾಡಲೇಬೇಕು. ಆಗಲೂ ಜನರ ಸೇವೆ ಮಾಡುತ್ತಿದ್ದೆ. ಈಗಲೂ ಮನೆ ಮನೆಗೆ ಹೋಗಿ ಪಿಜ್ಜಾ ವಿತರಿಸುವ ಮೂಲಕ ಒಂದು ರೀತಿಯಲ್ಲಿ ಸೇವೆ ಮಾಡುತ್ತಿದ್ದೇನೆ.’ ‘ನೀವು ಒಂದೊಮ್ಮೆ ಮಂತ್ರಿ ಆದ ಮಾತ್ರಕ್ಕೆ ಮತ್ತೆ ಯಾವ ಕೆಲಸವನ್ನು ಮಾಡಲೇಬಾರದು ಎಂದೇನೂ ಇಲ್ಲ. ನನ್ನ ಬಗ್ಗೆ ಯಾರೂ ಸಹಾನುಭೂತಿ ತೋರಬೇಕಾದ ಅಗತ್ಯ ಇಲ್ಲ. ನನಗೆ ಇದರ ಬಗ್ಗೆ ಹೆಮ್ಮೆ ಇದೆ. ಆತ್ಮಸಂತಸ, ತೃಪ್ತಿ ಇದೆ. ಅಪರಾಧ ಅಥವಾ ಪಾಪ ಪ್ರಜ್ಞೆ ಇಲ್ಲ.
ನಾನು ಮಂತ್ರಿಯಾಗಿಯೇ  ಮುದುವರಿಯಬಹುದಿತ್ತು. ಪರಮ ಭ್ರಷ್ಟನಾಗಿ ಕೋಟಿಗಟ್ಟಲೆ ಹಣ ಸಂಪಾದಿಸಬಹುದಿತ್ತು. ಆ ಹಣದಲ್ಲಿ ವಿದೇಶಗಳಲ್ಲಿ ಬಂಗಲೆಗಳನ್ನು ಖರೀದಿಸಬಹುದಿತ್ತು. ಹೋಟೆಲ್‌ಗಳ ಒಡೆಯನಾಗಬಹುದಿತ್ತು. ರಿಯಲ್ ಎಸ್ಟೇಟ್ ಮತ್ತಿತರ ಉದ್ಯಮ ಮಾಡಿಕೊಂಡು ಹಾಯಾಗಿ ಜೀವನ ಸಾಗಿಸಬಹುದಿತ್ತು. ಆದರೆ ಅಂಥ ಇರಾದೆ ನನಗಿಲ್ಲ. ಆ ರೀತಿ ಕಳಂಕಿತ ಜೀವನ ನಡೆಸುವ ಇಷ್ಟ ನನಗಿಲ್ಲ. ಆಗಲೂ ದುಡಿಯುತ್ತಿದ್ದೆ, ಈಗಲೂ ದುಡಿಯುತ್ತೇನೆ. ನನಗೆ ನೆಮ್ಮದಿ ಇದೆ. ನಾನು ನನ್ನಂಥ ಉನ್ನತ ಸ್ಥಾನದಲ್ಲಿರುವವರಿಗೆ ಮಾದರಿ ಆಗಬಯಸುತ್ತೇನೆ.
ಸಚಿವನೋ, ಮತ್ತೊಂದೋ ಹುದ್ದೆಯಲ್ಲಿದ್ದಾಗ ಅದಕ್ಕೆ ತಕ್ಕಹಾಗೆ ಹಾಗೆ ಬದುಕಬೆಕಾಗುತ್ತದೆ. ಆದರೆ ಒಮ್ಮೆ ಸಾರ್ವಜನಿಕ ಜೀವನದಿಂದ ನಿವೃತ್ತರಾದ ಬಳಿಕಸಾಮಾನ್ಯವಾದ ಜೀವನ ನಡೆಸಬೆಕು. ಸಾರ್ವಜನಿಕರ ಸೇವೆಯಲ್ಲಿ ತೊಡಗಬೇಕು. ಯಾವುದೇ ದಿಮಾಕು, ಒಣ ಪ್ರತಿಷ್ಠೆ ಇಲ್ಲದೆ ಎಲ್ಲರಂತೆ ಬಾಳಬೇಕು’ ಎಂಬುದು ಸಾದತ್ ಮಾತು. ಅವರ ಮಾತಿನಲ್ಲಿ ಸತ್ಯವಿದೆ. ಆದರೆ ಈ ಭ್ರಷ್ಟರ ಸಂತೆಯಲ್ಲಿ, ಪ್ರಚಾರದ ಹಪಹಪಿ ಇರುವ ಜನರ ಸಂಖ್ಯೆಯೇ ಹೆಚ್ಚಾಗಿರುವ ಈ ಸಮಾಜದಲ್ಲಿ, ಅವರ ಮಾತು ಕೇಳಿಸಿಕೊಳ್ಳುವವರು ಯಾರು? ಆದರೆ ಇಲ್ಲೊಂದು ವಿಷಯವನ್ನು ನಾವು ಗಮನಿಸಬೇಕು.
ಸಾದತ್, ಆಚಾರ ಹೇಳಿ ಬದನೆಕಾಯಿ ತಿನ್ನುವ ಕೆಲಸ ಮಾಡಿಲ್ಲ. ಸ್ವತಃ ಭ್ರಷ್ಟನಾಗಿ ಹಣ ಗಳಿಸುವ ಅವಕಾಶ ಇದ್ದರೂ ಅದು ಬೇಡವೆಂದೇ ಅಲ್ಲಿಂದ ಹೊರಬಂದುಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಮಾಡಿ ತೋರಿಸಿ ಬಳಿಕ ಆಡಿದ್ದಾರೆ. ಹೀಗಾಗಿ ರಾಜಕಾರಣಿಗಳು ಮೇಲ್ಪಂಕ್ತಿ ಹಾಕಬೇಕೆಂಬ ಅವರ ಮಾತಿನಲ್ಲಿ ಹುರುಳಿದೆ. ಅಫ್ಘಾನಿಸ್ತಾನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಘನಿ ಮತ್ತು ಸಾದತ್ ಅವರು ತುಳಿದ ಎರಡು ವಿಭಿನ್ನ ದಾರಿ ಹಾಗೇ ಏಕೋ ನೆನಪಾಯಿತು. ಅನೇಕ ದಾರಿಗಳಿರುತ್ತವೆ. ಆಯ್ಕೆ ನಮ್ಮ ಕೈಲಿರುತ್ತದೆ. ಆದರೆ ಬಹುತೇಕರು ಸುಲಭದ ಹಾಗೂ ಅಡ್ಡ ದಾರಿ ಹಿಡಿಯುವುದೇ ಹೆಚ್ಚು. ಸಾದತ್ ಅವರಂತೆ ಕೆಚ್ಚು ಹಾಗು ಕಿಚ್ಚು ಇರುವವರ ಸಂಖ್ಯೆ ಕಡಿಮೆ.
ಆಂಥವರ ಸಂತತಿ ಹೆಚ್ಚಾಗಲಿ. ಇವೆರಡು ಮಾತ್ರವಲ್ಲದೆ ಅಫ್ಘಾನಿಸ್ತಾನದಲ್ಲಿ ಈ ರೀತಿಯ ಮಾನವೀಯತೆಗೆ ಸಂಬಂಽಸಿದ ಹತ್ತು ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವರದಿಯಾಗುತ್ತಿವೆ. ತಾಲಿಬಾನ್ ಆಡಳಿತದಲ್ಲಿ ಇರಲಾಗದೇ ದೇಶದಿಂದ ಹೊರಬೀಳ ಬಯಸುವವರ ಸಂಖ್ಯೆ ಸಾಕಷ್ಟಿದೆ. ಆದರೆ ಅವರು ಅಲ್ಲಿಂದ ಹೊರಬರಲಾರದೆ ತೊಳಲಾಡುತ್ತಿದ್ದರೆ. ಒಂದೊಮ್ಮೆ ಅವಕಾಶ ಸಿಕ್ಕರೂ ಹೋಗುವುದೆಲ್ಲಿಗೆ ಎಂಬ ಪ್ರಶ್ನೆ ಅವರನ್ನು ಭೂತಾಕಾರವಾಗಿ ಕಾಡುತ್ತದೆ. ಅವರನ್ನುಹೊರೆ ಎಂದು ಭಾವಿಸುವವರೇ ಹೆಚ್ಚು. ಕರೆದುಕೊಳ್ಳಲು ವಿರೋಧಿಸುವವರೇ ಹೆಚ್ಚು. ಈ ರೀತಿ ತನ್ನ ನೆಲದಲ್ಲಿ ಬಂದಿಳಿದಿರುವ ನಿರಾಶ್ರಿತರಿಗೆ ವೀಸಾ ನೀಡಿ ಆಶ್ರಯ ಕೊಡಲು ಆಸ್ಟ್ರೇಲಿಯ ಮುಂದಾಗಿದೆಯಂತೆ.
ಇತರ ಕೆಲವು ದೇಶಗಳೂ ಸಿದ್ಧವಾಗಿವೆ. ಇದರ ಜತೆಗೆ ಅಫ್ಘಾನಿಸ್ತಾನದಲ್ಲೇ ಉಳಿದು ಕೊಂಡಿರುವವರಿಗೆ ಹಸಿವಿನ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಗಂಡಸರು ತಮ್ಮ ಪಾಡಿಗೆ ತಾವು ಎದ್ದು ಹೋಗಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಮಾತ್ರ ದಿಕ್ಕೆಟ್ಟು ಕುಳಿತಿದ್ದಾರೆ. ಅವರ ಗತಿ ಏನು ಎಂಬುದರ ಕುರಿತು ಯೋಚಿಸ ಬೇಕಾಗಿದೆ. ಅಫ್ಘಾನಿಸ್ತಾನ ಎಂದರೆ ಬರಿ ತಾಲಿಬಾನ್ ಎಂದಲ್ಲ. ಈ ರೀತಿಯ ಮಾನವೀಯತೆಯ ಮುಖಗಳ ಬಗ್ಗೆಯೂ ಚಿಂತಿಸೋಣ.
ನಾಡಿಶಾಸ್ತ್ರಎಷ್ಟು ಇದ್ದರೇನು ದಾರಿಸ್ಪಷ್ಟವಾಗಿದ್ದರೆ ಗುರಿಹಿಡಿಯಬೇಕು ಸರಿದಾರಿಸಿಕ್ಕೀತು ನೆಮ್ಮದಿಯ ಸಿರಿ