ಲಡಾಕ್‌ನಲ್ಲಿ ನೀರಿನ ಕ್ರಾಂತಿ ಮಾಡಿದ ಐಸ್‌ ಮ್ಯಾನ್‌
ಪರಿಚಯ
ಮಂಜುಳಾ ಡಿ.
ಲೇಹ್ ಲಡಾಕ್ ಹೆಸರಿನೊಂದಿಗೆ ಮನದ ತುಂಬಾ ಆವರಿಸುವುದು ಹಿಮಾಚ್ಛಾದಿತ ಶಿಖರಗಳ ಕಂಪು, ರಸ್ತೆಯ ಮಲ್ಲಿಗೆ ಚಲ್ಲಿದಂತೆ ಹರಡಿದ ಹಿಮ. ಕುಡಿಯಲುನೀರು ಲೋಟಕ್ಕೆ ಹಾಕುವಷ್ಟರಲ್ಲಿ ನೀರು ಮಂಜುಗಡ್ಡೆಯಾಗುವಂಥ ಮೂಳೆ ಕೊರೆಯುವ ಚಳಿ.
ಅತಿ ಆಕರ್ಷಿಸುವ ಲಡಾಖ್ ತುಂಬೆ ಹರಿಯುವ ಸಿಂಧೂ ನದಿ. ಜತೆಗೆ ಗಡಿ ವಿವಾದ. ಹಿಮಾಲಯದ ಪ್ರಸ್ಥಭೂಮಿಯಾದ ಲಡಾಖ್, ಈ ಹೊಸ ಶೋಧದಿಂದ ಹಸಿರೊದ್ದು ನಿಂತದ್ದು ಒಬ್ಬ ವ್ಯಕ್ತಿಯಿಂದ ಎನ್ನುವುದು ಇನ್ನೂ ಚಕಿತಗೊಳಿಸುವ ಸಂಗತಿ. ಚೀನಾ-ಪಾಕಿಸ್ತಾನ -ಟಿಬೆಟ್ ನಡುವೆ ಇರುವ ಲಡಾಖ್ ಒಂದು ನೈಸರ್ಗಿಕ ರೆಫ್ರಿಜಿರೇಟರ್ ಆಗಿದೆ.
ಇದು ಭಾರತದ ಅತಿ ಎತ್ತರದ ಚೆಕ್ ಪೋ. ಇಲ್ಲಿ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ಮೇ ಜೂನ್‌ನಲ್ಲಿ ತಾಪಮಾನ10ರಿಂದ20ಡಿಗಿ ಸೆಲ್ಸಿಯಸ್ ಇದ್ದರೆ, ಜುಲೈ ನಿಂದ 6 ತಿಂಗಳು ಚಳಿಗಾಲದ ತಾಪಮಾನ -40 ಡಿಗಿ ಸೆಲ್ಸಿಯಸ್ ಆಗಿರುತ್ತದೆ. ರಕ್ತ ಹೆಪ್ಪುಗಟ್ಟುವಂತ ಚಳಿಯಲ್ಲೂ ಜನವಸತಿ ಇದೆ. ಇದು ಜಗತ್ತಿನ ಅತಿ ಎತ್ತರದಲ್ಲಿರುವ ಜನವಸತಿ ಪ್ರದೇಶ.
ವರ್ಷದಲ್ಲಿ ಆರು ತಿಂಗಳು ಹಿಮಪಾತದಿಂದಾಗಿ ಪೂರ್ಣ ಪ್ರದೇಶ ಹಿಮಾಚ್ಛಾದಿತ. ವ್ಯವಸಾಯ ಮಾಡಬೇಕೆಂದರೆ ಅದು ಬೇಸಿಗೆಯಲ್ಲಿ ಮಾತ್ರ. ಏಪ್ರಿಲ್‌ನಿಂದ ಜೂನ್‌ವರೆಗೂ ಇಲ್ಲಿ ಬೇಸಿಗೆಯ ಕಾಲ. ನೀರಿನ ಪ್ರಮಾಣ ಅತೀ ಕಡಿಮೆ ಇರುವ ಇಲ್ಲಿಯ ಜನರ ನೀರಿನ ಆಧಾರ ಸರೋವರಗಳು. ಲಡಾಖ್‌ನ ಜನಸಂಖ್ಯೆಯ ಶೇ80ರಷ್ಟು ಜನ ಕೃಷಿಯನ್ನೇ ಆಧರಿಸಿದೆ. ಲಡಾಖ್‌ನ ಮಳೆಯ ಪ್ರಮಾಣ 50 ರಿಂದ100ಮಿ.ಮೀ ಮಾತ್ರವಾಗಿದೆ. ಆದರೆ ಸರೋವರಗಳು ಏಪ್ರಿಲ್‌ನಲ್ಲಿ ಇನ್ನೂ ಮಂಜುಗಡ್ಡೆಯ ಹಾಳೆಯಂತೆ ಇದ್ದು, ಕರಗಿ ಹರಿಯಲು ಜೂನ್‌ವರೆಗೂ ರೈತರು ಕಾಯಬೇಕಾದ ಸ್ಥಿತಿ. ಇದರಿಂದಾಗಿ ಸರಿಯಾಗಿ ನೀರು ಸಿಗದೇ ಬೆಳೆ ದುಸ್ತರವಾಗಿತ್ತು.
ಆದರೆ ಇಂದು ಲಡಾಖ್‌ನಲ್ಲಿ ಇಂದು ಸುಲಭವಾಗಿ ಏಪ್ರಿಲ್ ನ ಬಿತ್ತನೆ ಸಾಧ್ಯವಾಗಿದೆ. ೧೮ ಸಾವಿರ ಅಡಿ ಎತ್ತರದಲ್ಲಿ ಹಿಮಾಲಯದ ಸಹಜ ಸರೋವರಗಳಲ್ಲಿ ಮಂಜುಗಡ್ಡೆಯ ಹಾಳೆಯಂತಾದ ನೀರಿನಿಂದ 13 ಸಾವಿರ ಅಡಿಯಷ್ಟು ಕೆಳಗೆ ಇರುವ ಹಳ್ಳಿಗಳಿಗೆ ಬಿತ್ತನೆಗೆ ನೀರು ಒದಗಿಸುವುದು ಸಾಧಾರಣ ಮಾತಾಗಿರಲಿಲ್ಲ.ಇದಲ್ಲದೇ ಜೂನ್ ಮಧ್ಯದಲ್ಲಿ ಕರಗುವ ಸರೋವರದ ನೀರು ನೇರವಾಗಿ ಸಿಂಧೂ ನದಿ ಸೇರುವುದೂ ಸಹ ನೀರಿನ ಶೇಖರಣೆಗೆ ದೊಡ್ಡ ತೊಡಕಾಗಿತ್ತು.
ಇದೆಲ್ಲವನ್ನೂ ಮೀರಿ ಇಂದು ಲಡಾಖ್ ನಲ್ಲಿ ಏಪ್ರಿಲ್ ನಲ್ಲಿ ಬಿತ್ತನೆ ಸಾಧ್ಯವಾಗಿದೆ. ಕೃಷಿ ಇಂದು ಉತ್ತಮವಾಗಿದೆ. ಇಂಥ ಅಸಾಧಾರಣ ಕಾರ್ಯ ಸಾಧ್ಯವಾದದ್ದುಭಾರತದ ಐಸ್‌ಮ್ಯಾನ್ ಎಂದು ಖ್ಯಾತರಾದ ಚೀವ್ಯಾಂಗ್ ನೋರ್ಫೇಲ್ ಇವರಿಂದ. ಲಡಾಖ್ ಮೂಲಕ ಅವರಿಗೆ, ರೈತರ ಸಮಸ್ಯೆ ಅರಿವಿತ್ತು. ಮೂಲತಃ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿವಿಲ್ ಎಂಜಿನಿಯರ್ ಆದ ಇವರು ಲಡಾಖ್ ನ ಪ್ರತಿ ಹಳ್ಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳ ಆಳ ಅಗಲ ಅರಿತಿದ್ದರು.ನವೆಂಬರ್ ಡಿಸೆಂಬರ್‌ನಲ್ಲಿ ಪರ್ವತ ಶ್ರೇಣಿಗಳಿಂದ ಹರಿಯುವ ಮಂಜುಗಡ್ಡೆಯಂತ ನೀರನ್ನು ಹಳ್ಳಿಗಳಿಂದ ನಾಲ್ಕೈದು ಕಿ ಮಿ ದೂರದ ಕಣಿವೆಗಳಿಗೆ ತಿರುಗಿಸಿ ಕಲ್ಲಿನ ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ.
ಇದರಲ್ಲಿ ಮೆಟ್ಟಿಲುಗಳನ್ನು ಹೊಂದಿರುವಂತೆ ಕೃತಕ ಸರೋವರ ನಿರ್ಮಿಸಿ ಹರಿವ ಘನೀಭವಿಸಿದ ನೀರನ್ನು ಶೇಖರಿಸುವುದು. ಈ ಕೃತಕ ಸರೋವರಗಳಲ್ಲಿ ಶೇಖರಣೆಯಾದ ಘನೀಭವಿಸಿದ ನೀರು ಆಳ ಕಡಿಮೆ ಇರುವ ಕಾರಣ ಏಪ್ರಿಲ್‌ನಲ್ಲಿ ಕರಗತೊಡಗುತ್ತದೆ. ಒಂದು ಕೃತಕ ಸರೋವರಕ್ಕೆ ಅಂದಾಜು ೧೫ ಲಕ್ಷ ವ್ಯಯವಾಗುತ್ತದೆ, ಆದರೆ 380 ಹೆಕ್ಟೇರ್ ನಿಂದ ಒಂದು ಚದರ ಮೈಲಿವರೆಗೆ ಜಮೀನುಗಳಿಗೆ ನೀರುಣಿಸಬಹುದಾಗಿದ್ದು, ಇವುಗಳನ್ನು ಲಡಾಖ್ ಪ್ರಸ್ಥಭೂಮಿಯ ಓಯಸಿಸ್‌ಗಳೆಂದು ಕರೆಯುತ್ತಾರೆ. ಇದುವರೆಗೂ 17 ಕೃತಕ ಸರೋವರಗಳನ್ನ ನಿರ್ಮಿಸಲಾಗಿದ್ದು, ಸರಕಾರ ಹಾಗೂ ಎನ್‌ಜಿಒಗಳಿಂದ ಪೂರಕ ಅನುದಾನ ದೊರೆತಿದೆ.
ಮರುಭೂಮಿಯೊಂದಕ್ಕೆ ನೀರುಣಿಸಿ ಹಸಿರಾಗಿಸಿದ ಚೀವ್ಯಾಂಗ್ ನೋರ್ಫೇಲ್ ಇವರು 1994ರಲ್ಲಿ ನಿವೃತ್ತರಾದರೂ ಸದಾ ಇದೇ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದು, ಅವರ ಕೊಡುಗೆ ಎಂದಿಗೂ ಸ್ಮರಣೀಯ.