ಗುರು-ಶಿಷ್ಯರೆಂಬ ಭಾವಬಂಧ
ತನ್ನಿಮಿತ್ತ
ಭಾರತಿ ಎ.ಕೊಪ್ಪ
bharathikoppa101@.
ಗುರು ಸ್ಥಾನದಲ್ಲಿ ವಂದನೀಯರಾಗುತ್ತಾರೆ. ಶಿಷ್ಯನೂ ಕೂಡ ತಾನು ಎಂತಹ ಉನ್ನತ ಸ್ಥಾನಕ್ಕೆ ಏರಿದರೂ, ಗುರುವಿಗೆ ವಂದಿಸುವ ಪರಿಪಾಠ ಇಟ್ಟುಕೊಂಡರೆ ಅದು ಗುರು-ಶಿಷ್ಯರ ಬಾಂಧವ್ಯದ ದ್ಯೋತಕವೆನಿಸುತ್ತದೆ. ಒಬ್ಬ ನೈಜ ಶಿಕ್ಷಕನು ಯಾವುದೇ ಅತ್ಯುನ್ನತ ಸ್ಥಾನ ಅಲಂಕರಿಸಿದರೂ, ತನ್ನಲ್ಲಿ ರಕ್ತಗತವಾಗಿರುವ ‘ಶಿಕ್ಷಕ’ನೆಂಬ ಅದಮ್ಯ ಶಕ್ತಿಯನ್ನು ಮರೆಯಲಾರ. ಗುರು-ಶಿಷ್ಯರ ಪರಂಪರೆಯಿಂದ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯವರೆಗೂ ಶಿಕ್ಷಕ ವೃತ್ತಿಯು ಹಲವು ಸವಾಲುಗಳ ಜತೆಗೆ ತನ್ನ ಗೌರವವನ್ನು ಕಾಪಾಡಿಕೊಂಡು ಬಂದಿದೆ. ಕರೋನಾದಂತಹ ಸಂದಿಗ್ಧತೆಯಲ್ಲಿಯೂ ತಮ್ಮ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಶಿಕ್ಷಕರು ಹಲವಾರು ಪರಿಹಾರೋಪಾಯಗಳನ್ನು ಕಂಡುಕೊಳ್ಳುತ್ತಾ, ಶಿಕ್ಷಣದ ನಿರಂತರತೆಯನ್ನು ಕಾಪಾಡಿಕೊಳ್ಳುವಲ್ಲಿ ಯತ್ನಿಸಿದ್ದಾರೆ. ಕಾಡುಮೇಡುಗಳಲ್ಲಿರುವ ವಿದ್ಯಾರ್ಥಿಗಳ ಮನೆಗೂ ಹೋಗಿ, ವಿದ್ಯಾಗಮದ ಮೂಲಕ ಕಲಿಕೆಗೆ ಪ್ರೇರೇಪಿಸಿ, ಶಿಕ್ಷಕ ವೃತ್ತಿಯಲ್ಲಿ ಸಾರ್ಥಕತೆಯನ್ನು ಕಂಡಿದ್ದಾರೆ.
ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ ಎಂದು ಶಿಕ್ಷಣವನ್ನು ಪರಿಪೂರ್ಣತೆಯತ್ತ ಕೊಂಡೊಯ್ಯಬೇಕೆಂದು, ಶಿಕ್ಷಣ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಹಾಕಿದ ರಾಷ್ಟ್ರದ ಹೆಮ್ಮೆಯ ಶಿಕ್ಷಕ ಡಾ.ಎಸ್.ರಾಧಾಕೃಷ್ಣನ್ ಸದಾ ಸರ್ವೋತ್ತಮ ಶಿಕ್ಷಕರ ಸಾಲಿನಲ್ಲಿ ನಿಲ್ಲುವಂತಹವರು. ಓರ್ವ ಅಧ್ಯಾಪಕ, ಶಿಕ್ಷಣ ತಜ್ಞ ಹಾಗೂ ರಾಷ್ಟ್ರಪತಿಯಾಗಿದ್ದ ಡಾ.ಎಸ್.ರಾಧಾಕೃಷ್ಣನ್ ರವರ ಜನ್ಮದಿನವನ್ನು ಸೆಪ್ಟೆಂಬರ್೫ರಂದು ಅವರ ಆಶಯದಂತೆಯೇ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ನಿಜಕ್ಕೂ ಹೆಮ್ಮೆ ಮತ್ತು ಅರ್ಥ ಪೂರ್ಣ ಆಚರಣೆ ಎಂದರೆ ತಪ್ಪಾಗಲಾರದು.
ಭಾರತ ಪುರಾಣ, ಇತಿಹಾಸದ ಕಾಲದಿಂದಲೂ ಗುರುಪರಂಪರೆಯ ಹೆಗ್ಗುರುತನ್ನು ಹೊಂದಿದೆ. ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಗುರುವಿಗೆ ಸಂಪೂರ್ಣವಾಗಿ ಶರಣಾಗಿ, ಶಿಷ್ಯನು ವಿದ್ಯೆಯನ್ನು ಗುರುವಿನಿಂದ ಧಾರೆಯೆರೆಸಿಕೊಂಡು ಬೆಳೆದ ಪರಂಪರೆ ನಮ್ಮದು. ಓರ್ವ ಗುರು, ಕೇವಲ ಅಕ್ಷರ ಜ್ಞಾನವನ್ನು ಮಾತ್ರ ನೀಡದೇ, ವಿದ್ಯಾರ್ಥಿಯ ಜೀವನವನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯುವ, ಸಂಪೂರ್ಣ ಶಿಕ್ಷಣ ನೀಡುವ ಗುರುಕುಲ ಪದ್ಧತಿಯ ಶಿಕ್ಷಣವನ್ನು ಕಂಡಂತಹ ಗುರು-ಶಿಷ್ಯರ ಪರಂಪರೆ ನಮ್ಮದಾಗಿದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಗುರು, ಶಿಕ್ಷಕನಾಗಿ ಬದಲಾಗಿದ್ದಾನೆ. ಶಿಕ್ಷಣ ಎಂಬ ನಿರ್ದಿಷ್ಟ ಚೌಕಟ್ಟಿನಲ್ಲಿ ಆತ, ವಿದ್ಯಾರ್ಥಿಗಳನ್ನು ಅನುಕೂಲಿಸುವವನಾಗಿ, ಶಿಕ್ಷಕನಾಗಿ ಮುನ್ನಡೆಯುತ್ತಿದ್ದಾನೆ.
ಗುರು-ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ದೇಶ ಕಂಡ ಅತ್ಯದ್ಭುತ ಗುರು-ಶಿಷ್ಯರಾದ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ಬಾಂಧವ್ಯವೇ ವಿಶಿಷ್ಟವಾದದ್ದು. ಸ್ವತಃ ತಾನು ತಲುಪಿಸಲು ಅಸಾಧ್ಯವಾದ ತನ್ನ ಸಂದೇಶಗಳನ್ನು ಜಗತ್ತಿಗೆ ತಲುಪಿಸಬಲ್ಲ ಸೂಕ್ತವಾದ ವ್ಯಕ್ತಿಯೇ ವಿವೇಕಾನಂದ ಎಂಬ ಸಂಪೂರ್ಣ ಅರಿವು ಪರಮಹಂಸರಿಗಿತ್ತು. ವಿವೇಕಾನಂದರು ಗುರುವನ್ನು ನೋಡಲು ಬರದಿದ್ದರೂ, ಸ್ವತಃ ತಾವೇ ಶಿಷ್ಯನನ್ನರಸಿ, ಪರಮಹಂಸರು ಹೋಗುತ್ತಿದ್ದರು. ಸ್ವತಃ ವಿವೇಕಾನಂದರು ರಾಮಕೃಷ್ಣರ ಕುರಿತು ಅಷ್ಟೇ ಆಕರ್ಷಿತರಾಗಿದ್ದರು.
ಇವರೀರ್ವರ ನಡುವಿನ ಈ ಬಾಂಧವ್ಯವೇ ಅವರನ್ನು ಸರ್ವಮಾನ್ಯ ಗುರು-ಶಿಷ್ಯರನ್ನಾಗಿ ರೂಪಿಸಿತು ಎಂಬುದರಲ್ಲಿ ಎರಡು ಮಾತಿಲ್ಲ. ಶಿಕ್ಷಕ ಎಂದರೆ ಕೇವಲ ತರಗತಿಯ ಅವಧಿಯಲ್ಲಿ ಮಾತ್ರ ಪಾಠದ ವಿಷಯವನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸುವವರಲ್ಲ. ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಹೊರಗೆಳೆದು, ಪ್ರತಿಭೆ ಯನ್ನು ಪೋಷಿಸುವ, ಆತನನ್ನು ಸಾಧನೆಯತ್ತ ಪ್ರೇರೇಪಿಸುವವರು ಕೂಡ ಗುರು ಸ್ಥಾನದಲ್ಲಿ ಸ್ಥಾನದಲ್ಲಿ ವಂದನೀಯರಾಗುತ್ತಾರೆ. ಶಿಷ್ಯನೂ ಕೂಡ ತಾನು ಎಂತಹ ಉನ್ನತ ಸ್ಥಾನಕ್ಕೆ ಏರಿದರೂ, ಗುರುವಿಗೆ ವಂದಿಸುವ ಪರಿಪಾಠ ಇಟ್ಟುಕೊಂಡರೆ ಅದು ಗುರು-ಶಿಷ್ಯರ ಬಾಂಧವ್ಯದ ದ್ಯೋತಕವೆನಿಸುತ್ತದೆ.
ಇದಕ್ಕೊಂದು ಉತ್ತಮವಾದ ಇತ್ತೀಚಿನ ಉದಾಹರಣೆಯೆಂದರೆ ಟೋಕಿಯೋ ಒಲಿಂಪಿಕ್ಸ್’ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್ ಛೋಪ್ರಾ. ಅವರು ಭಾರತಕ್ಕೆ ಮರಳಿದ ಮೇಲೆ ತಮ್ಮ ಮಾಜಿ ಕೋಚ್ ಕರ್ನಾಟಕದವರೇ ಆದ ಕಾಶೀನಾಥ್ ನಾಯ್ಕ ಅವರ ಮನೆಗೆ ಭೇಟಿ ನೀಡಿ ವಂದಿಸಿದ್ದರು. ಸಾಧನೆಯ ಉತ್ತುಂಗಕ್ಕೆ ಏರಿದರೂ ಕೋಚ್‌ಗೆ ವಂದಿಸುವುದು ಶಿಷ್ಯನಾದವನ ಕರ್ತವ್ಯ ಎಂಬುದನ್ನು ಚಿನ್ನದ ಹುಡುಗ ತೋರಿಸಿಕೊಟ್ಟಿದ್ದಾರೆ.
ಒಬ್ಬ ನೈಜ ಶಿಕ್ಷಕ ತಾನು ಯಾವುದೇ ಅತ್ಯುನ್ನತ ಸ್ಥಾನ ಅಲಂಕರಿಸಿದರೂ, ತನ್ನಲ್ಲಿ ರಕ್ತಗತವಾಗಿರುವ ‘ಶಿಕ್ಷಕ’ನೆಂಬ ಅದಮ್ಯ ಶಕ್ತಿಯನ್ನು ಮರೆಯಲಾರ. ಇಡೀ ಜಗತ್ತಿಗೆ ಮಿಸೈಲ್ ಮ್ಯಾನ್ ಎಂದೇ ಪರಿಚಿತರಾದ, ರಾಷ್ಟ್ರಪತಿ ಹುದ್ದೆಯನ್ನೂ ಅಲಂಕರಿಸಿದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರು ಕೂಡ ಸರ್ವಶ್ರೇಷ್ಠಶಿಕ್ಷಕರಬ್ಬರಾಗಿದ್ದರು. ಕಲಾಂ ರವರು ತಮ್ಮ ಜೀವನದ ಅಂತಿಮ ಕ್ಷಣವನ್ನು ಶಿಂಗ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ ವಿದ್ಯಾರ್ಥಿಗಳಿಗೆಬೋಧಿಸುತ್ತಲೇ ಕೊನೆಯುಸಿರೆಳೆದರು. ಅತ್ಯುನ್ನತ ಸ್ಥಾನಕ್ಕೇರಿದರೂ ಒಬ್ಬ ಶಿಕ್ಷಕರೆಂದು ಅವರನ್ನು ನೆನಪಿಸಿಕೊಳ್ಳಬೇಕೆಂಬುದು ಅವರ ಆಸೆಯಾಗಿತ್ತು. ಅವರಈ ಗುಣ ಒಬ್ಬ ನೈಜ ಶಿಕ್ಷಕ ನಿರಂತರ ಶಿಕ್ಷಕನಾಗಿರಬೇಕೆಂದು ಬಯಸುತ್ತಾನೆ ಎಂಬುದರ ನಿದರ್ಶನವಾಗಿದೆ ಎಂದರೆ ತಪ್ಪಾಗಲಾರದು.
ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ, ಅದರಲ್ಲೂ ಪ್ರಾಥಮಿಕ ಶಾಲಾ ಹಂತದಲ್ಲಿ ಮಹಿಳಾ ಶಿಕ್ಷಕರು ಅಧಿಕವಾಗಿದ್ದಾರೆ. ಆದರೆ ಮಹಿಳಾ ಶಿಕ್ಷಕರಾಗಿ ಕಾರ್ಯ ನಿರ್ವಹಿ ಸುವುದು ನಮ್ಮ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಅಷ್ಟು ಸುಲಭದ ಮಾತಾಗಿರಲಿಲ್ಲ. ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರು ಹಲವು ಸವಾಲುಗಳನ್ನು ಎದುರಿಸಿ, ಶಿಕ್ಷಕಿಯಾಗಿದ್ದರು. ಆ ಕಾಲದಲ್ಲಿ ಸೀಯೋರ್ವಳು ಶಿಕ್ಷಕಿಯಾಗುವುದು ಆಕೆಯ ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಧೋರಣೆ ಇದ್ದಿತು. ಅವರು ಪಾಠಶಾಲೆಗೆ ಹೊರಟಾಗ, ಕೆಲವರು ಕೇಕೆ ಹಾಕಿ ನಗುತ್ತಿದ್ದರು. ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನ್ನೂ ತೂರುತ್ತಿದ್ದರು. ಇದಾವುದಕ್ಕೂ ಕಂಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ತಮ್ಮ ಬ್ಯಾಗಿನಲ್ಲಿ ಇನ್ನೊಂದು ಸೀರೆಯನ್ನು ಇಟ್ಟುಕೊಳ್ಳುತ್ತಿದ್ದರು.
ಕೆಲವರ ಕುಕೃತ್ಯಗಳಿಗೆ ಬೇಸರಗೊಳ್ಳದೆಯೇ, ಎರಚುವ ಸಗಣಿ, ತೂರುವ ಕಲ್ಲುಗಳನ್ನೇ ಹೂಗಳೆಂದು ಭಾವಿಸಿ, ಶಾಲೆಗೆ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿಇಟ್ಟುಕೊಂಡಿರುತ್ತಿದ್ದ ಇನ್ನೊಂದು ಸೀರೆಯನ್ನು ಉಟ್ಟುಕೊಂಡು, ಪಾಠಕ್ಕೆ ಅಣಿಯಾಗುತ್ತಿದ್ದರು. ಇಂತಹ ಅದ್ಭುತ ಶಿಕ್ಷಕಿಗೆ ಸಲಾಂ ಹೇಳಲೇಬೇಕಲ್ಲವೇ!?ಗುರು-ಶಿಷ್ಯರ ಪರಂಪರೆಯಿಂದ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯವರೆಗೂ ಶಿಕ್ಷಕ ವೃತ್ತಿಯು ಹಲವು ಸವಾಲುಗಳ ಜತೆಗೆ ತನ್ನ ಗೌರವವನ್ನು ಕಾಪಾಡಿಕೊಂಡು ಬಂದಿದೆ.
ಕರೋನಾದಂತಹ ಸಂದಿಗ್ಧತೆಯಲ್ಲಿಯೂ ತಮ್ಮ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಶಿಕ್ಷಕರು ಹಲವಾರು ಪರಿಹಾರೋಪಾಯಗಳನ್ನು ಕಂಡುಕೊಳ್ಳುತ್ತಾ, ಶಿಕ್ಷಣದನಿರಂತರತೆಯನ್ನು ಕಾಪಾಡಿಕೊಳ್ಳುವಲ್ಲಿ ನಿರಂತರವಾಗಿ ಯತ್ನಿಸಿದ್ದಾರೆ. ಕಾಡುಮೇಡುಗಳಲ್ಲಿರುವ ವಿದ್ಯಾರ್ಥಿಗಳ ಮನೆಗೂ ಹೋಗಿ, ವಿದ್ಯಾಗಮದ ಮೂಲಕ ಕಲಿಕೆಗೆ ಪ್ರೇರೇಪಿಸಿ, ಶಿಕ್ಷಕ ವೃತ್ತಿಯಲ್ಲಿ ಸಾರ್ಥಕತೆಯನ್ನು ಕಂಡಿದ್ದಾರೆ. ತಂತ್ರಜ್ಞಾನದ ಆಧಾರದಲ್ಲಿ ಕಲಿಕಾ ಅಂಶಗಳನ್ನು ಕರೋನಾದ ಕಷ್ಟಕರವಾದ ಕಾಲ ದಲ್ಲಿಯೂ ವಿದ್ಯಾರ್ಥಿಗಳಿಗೆ ತಲುಪಿಸಿ,ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದೊಂದಿಗಿನ ಕಲಿಕೆಗೆ ಪ್ರೇರೇಪಿಸಿದ್ದಾರೆ. ಡಾ.ರಾಧಾಕೃಷ್ಣನ್ ರವರ ಜನ್ಮದಿನದ ಸುದಿನವು ಸದಾ ಶಿಕ್ಷಕರ ಪಾಲಿಗೆ ವಿಶೇಷ ಹಬ್ಬವಾಗಿ ಮೂಡಿಬರಲಿ ಎಂಬ ಆಶಯ ಸರ್ವರದ್ದಾಗಿದೆ.