ಗಣೇಶನೇನು ಬಾಗಿಲು ಕಾಯುವ ವಾಚ್’ಮನ್‌ ಅಲ್ಲ
ಅಭಿಪ್ರಾಯ
ಎ.ರಾಮಚಂದ್ರ ಜೋಯಿಸ
@.
ನಮ್ಮ ಗಣಪತಿ ಬಾಗಿಲು ಕಾಯುವ ವಾಚ್‌ಮ್ಯಾನ್ ಅಲ್ಲ ಅಥವಾ ತಮಾಷೆಗಿರುವ ವಸ್ತುವೂ ಅಲ್ಲ. ಮೊನ್ನೆ ರಸ್ತೆಯಲ್ಲಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದೆ, ಎದುರಿನಿಂದ ಶಾಮಿಯಾನದವರ ಸಾಗಾಟದ ಲಾರಿ ಹೋಗುತ್ತಿತ್ತು. ಲಾರಿಯನ್ನು ಗಮನಿಸಿದೆ, ಅದರಲ್ಲಿ ಪಾತ್ರೆಗಳು, ಪೀಠೋಪಕರಣಗಳು ಜತೆಗೆ ಕೆಲಸಗಾರರು ಕೂತಿದ್ದರು.
ಸೂಕ್ಷ್ಮವಾಗಿ ಗಮನಿಸಿದಾಗ ಪಾತ್ರೆಗಳ ರಾಶಿಯಲ್ಲಿ ಸಾಕಷ್ಟು ದೊಡ್ಡದಾದ ಲೋಹದ ಗಣಪತಿ ದೇವರ ವಿಗ್ರಹ ವಿತ್ತು ಹಾಗೂ ಕೆಲಸಗಾರನ ಕಾಲುಗಳು ವಿಗ್ರಹದ ಮೇಲಿವೆ. ಆಘಾತವಾಗುವಂತಹ ದೃಶ್ಯ. ಇನ್ನು ಈ ಗಣಪತಿ ಯನ್ನು ಶಾಮಿಯಾನದವರು ಎತ್ತಿಕೊಂಡು ಹೋಗಿ ಮದುವೆ ಹಾಲ್‌ನ ಪ್ರವೇಶ ದ್ವಾರದ ಹತ್ತಿರ ಕೂರಿಸಿ ಬಿಟ್ಟು ಒಂದೆರೆಡು ಹೂವಿನ ಅಂಲಂಕಾರ ಮಾಡುವರು. ಆ ಜಾಗಲ್ಲಿ ಮಳೆ ಬೀಳುತ್ತಿದೆಯೇ, ಬಿಸಿಲು ಇದೆಯೆ ಅಥವಾ ಇನ್ನೇನಾದರೂ ಕೊಳಕಾಗಬಹುದೆ (ಚಪ್ಪಲಿ) ಎಂದು ಕೂಡ ನೋಡುವುದಿಲ್ಲ. ಎಂತಹ ವಿಪರ್ಯಾಸ!
ಪೂಜೆಗೆ ಗರ್ಭಗಡಿಯಲ್ಲಿ ಇರಬೇಕಾದಂತಹ ಗಣಪನು ಇಂತಹ ಜಾಗದಲ್ಲಿ. ಮದುವೆಗೆ ಬರುವ ಅತಿಥಿಗಳಿಗೂ, ಮದುವೆ ಮಾಡುವ ಅತಿಥೇಯರಿಗೂ ಗಣಪತಿಯು ಅನುಗ್ರಹ ಮಾಡಲಿ ಎಂದು ತೋರಿಸಿಕೊಳ್ಳುವ ತವಕದಲ್ಲಿ ಎಂತಹ ಸಂಪ್ರದಾಯ ಅನುಸರಿಸುತ್ತಿದ್ದೇವೆ? ದೇವರು ಅನುಗ್ರಹಿಸುವುದಿರಲಿ, ಈ ತರಹದ ಗಣಪತಿಯ ಪ್ರತಿ ಷ್ಠಾಪನೆಯಿಂದ ನಮಗೆ ಅವನು ಅನುಗ್ರಹವನ್ನು ಬೇಡುವ ಹಕ್ಕಾದರೂ ಸಹ ಎಲ್ಲಿಂದ ಬರುತ್ತದೆ.
ಇನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ, ಆಫೀಸ್‌ಗಳ ಹಾಗೂ ಹೋಟೆಲ್‌ಗಳ ಪ್ರವೇಶ ಜಾಗದಲ್ಲಿ ಎಲ್ಲಾ ಕಡೆ ಸಾರ್ವ ಜನಿಕರು ಪಾದರಕ್ಷೆಯೊಂದಿಗೆ ನಡೆದಾಡುವಲ್ಲಿ ದೊಡ್ಡ ದೊಡ್ಡ ಗಣಪನ ವಿಗ್ರಹಗಳು. ಅವನಿಗೆ ಇರಬೇಕಾದ ಗುಡಿಯೊಂದು ಇರುವುದಿಲ್ಲ. ಸಾಲದುದಕ್ಕೆ ವಾಸದ ಮನೆಗಳಲಿ ಕಾಂಪೌಂಡ್ ಗೋಡೆಗಳಲ್ಲಿ ಇಲ್ಲವೇ ಪ್ರವೇಶ ದ್ವಾರದ ಹೊರಗೆ ಗಣಪತಿಯ ಪ್ರತಿಷ್ಠಾಪನೆ! ಮನೆಯೊಳಗೆ ಪೂಜಾ ರೂಮಿನಲ್ಲಿಟ್ಟು ಪೂಜಿಸುವ ಬದಲು, ಕಾಂಪೌಂಡ್ ಗೋಡೆಯಲ್ಲಿಡಲು (ಪ್ರವೇಶ) ಅವನು ಸೆಕ್ಯೂರಿಟಿಯವನಿರಬಹುದೆನೋ.
ಇವುಗಳೆಲ್ಲಾ ನಮ್ಮ ಬುದ್ದಿಗೆ ತುಕ್ಕು ಹಿಡಿದಿರುವ ಲಕ್ಷಣಗಳು. ದೇವರು ಮತ್ತು ಧರ್ಮದ ಸರಿಯಾದ ಚಿಂತನೆಯಿಲ್ಲದೆ ಮಾಡುವ ಅನುಕರಣೆಗಳು. ಹಿಂದೂ ಧರ್ಮಕ್ಕೆ ಮಾಡುವ ಅಪಮಾನ. ಇನ್ನು ಗಣೇಶನ ಹಬ್ಬ ಬಂದಾಗ (ಗಣೇಶ ಚತುರ್ಥಿ), ಪತ್ರಿಕೆಗಳಲ್ಲಿ ಮ್ಯಾಗಜಿನ್‌ಗಳಲ್ಲಿ ಹಾಗೂ ಮಾಧ್ಯಮ ಗಳಲ್ಲಿ ಗಣೇಶನ ಬಗ್ಗೆ ನಾನಾ ರೀತಿಯ ವ್ಯಂಗ್ಯ ಚಿತ್ರಗಳು, ತಮಾಶೆಯ ವಸ್ತುವಿನಂತೆ ಬಿಂಬಿಸುವುದು ಇತ್ಯಾದಿ.
ಇನ್ನೊಂದು ಸೋಜಿಗದ ವಿಚಾರ, ಇತ್ತೀಚಿನ ಕೆಲವು ವರ್ಷದ ಬೆಳವಣಿಗೆಯಲ್ಲಿ ಚೌತಿಯಂದು ಗಣೇಶನ ಪೂಜೆ ಮಾಡಲು ವಿಗ್ರಹಕ್ಕೆ ಬಣ್ಣ ಕೊಡಬಾರದು ಎನ್ನುವ ಹೋರಾಟ! ಬಣ್ಣಗಳಿಗೆ ರಾಸಾಯನಿಕ ವಸು ಗಳನ್ನು ಬಳಸುವದರಿಂದ ವಾತಾವರಣ ಕಲುಷಿತವಾಗುವುದು ಎನ್ನುವ ಕೂಗು. ಇನ್ನು ಇದನ್ನು ಅನುಸರಿಸದಿದ್ದರೆ ವಿದ್ಯಾವಂತರೆನ್ನಿಸಿದವರಿಗೆ ಭಾರಿ ಅಪರಾಧ ಭಾವನೆ. ಆದರೆ ದೊಡ್ಡ ದೊಡ್ಡ ಕಟ್ಟಡಗಳನ್ನು ಉರುಳಿಸುವಾಗ ಅಥವಾ ರಿಪೇರಿ ಸಮಯದಲ್ಲಿ ಈ ಭೂಮಿ ಮೇಲೆ ಬೀಳುವ ಟನ್‌ಗಟ್ಟಲೆ ರಾಸಾಯನಿಕ ಪೈಂಟ್‌ಗಳು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್‌ಗಳ(ಪಿಒಪಿ)ಬಗ್ಗೆ ನಮಗೆ ಸ್ವಲ್ಪವೂ ಕಾಳಜಿಯಿಲ್ಲ.
ರಾಸಾಯನಿಕವಿಲ್ಲದೆ ಆರ್ಗಾನಿಕ್ ವಸ್ತುಗಳನ್ನು (ಸಸ್ಯ) ಬಳಸಿ ಬಣ್ಣ ತಯಾರಿಸಲು ಸಾಕಷ್ಟು ಅವಕಾಶಗಳಿವೆ. ಹಬ್ಬದ ಆಕರ್ಷಣೆ ಹಾಗೂ ಉತ್ಸಾಹ ಕಡಿಮೆ ಯಾಗಿ ಹಬ್ಬಗಳು ನಶಿಸುತ್ತವೆ. ಜತೆಗೆ ಇದಕ್ಕೆ ನಾಸ್ತಿಕವಾದದವರ ಪ್ರಚೊದನೆಯೂ ಸೇರುವುದು. ಒಟ್ಟು ತಾತ್ಪರ್ಯವೆಂದರೆ ಗಣಪತಿಯು ಹಿಂದುಗಳಿಗೆ ಅತ್ಯಂತ ಶೇಷ್ಠವಾದ ದೇವರು.