ಅರಿವೆಂಬ ಗುರುವಿನ ಗರಡಿಯಲ್ಲಿ ಅನುದಿನವೂ ಅರಳಲಿ ಅಂತರಂಗ…
ಯಶೋ ಬೆಳಗು
ಯಶೋಮತಿ ಬೆಳಗೆರೆ
ಮನೆಯೆ ಮೊದಲ ಪಾಠಶಾಲೆ; ತಾಯಿಯೆ ಮೊದಲ ಗುರು!
ಅನ್ನೋದನ್ನ ನಾವೆಲ್ಲರೂ ಸಣ್ಣ ವಯಸ್ಸಿನಿಂದಲೇ ಕೇಳುತ್ತಾ ಬೆಳೆದಿರ್ತೀವಿ. ವಿದ್ಯೆ- ಬುದ್ಧಿಗೆ ನಮಿಸುವ ನಮ್ಮ ಗೌರೀ ಪುತ್ರ ಗಣಪ ತನ್ನ ಅಪ್ಪ-ಅಮ್ಮನಿಗೇ ಮೂರು ಪ್ರದಕ್ಷಿಣೆ ಹಾಕಿ ನೀವೇ ನನ್ನ ಮೂರು ಲೋಕ ಅಂದು ಶಿವಪ್ಪನ ಮನಸನ್ನು ಗೆದ್ದ ಪೋರನ ಕಥೆ ಕೂಡ ಕೇಳಿಯೇ ಇರ್ತೀವಿ.
ಅದರಲ್ಲಿ ಅದೆಷ್ಟೊಂದು ಸತ್ಯ ಅಡಗಿದೆ ಅನ್ನುವುದನ್ನು ಮಾತ್ರ ಅರಿಯದೇ ಕಥೆ ಕೇಳಿ ಸುಮ್ಮನಾಗಿರ್ತೀವಿ. ಆಗತಾನೆ ಹುಟ್ಟಿದ ಮಗುವಿನ ಜಗತ್ತೆಂದರೆ ಕೇವಲಅಮ್ಮ. ಮೊಲೆಹಾಲ ನೀಡುತ್ತಾ, ತುತ್ತುಣಿಸುತ್ತ ಜೀವ ಬೆಳೆಸುವ ಮಹಾನ್ ಮಾತೆಯ ಸ್ಪರ್ಶ, ನಗು, ಅಳು, ದುಃಖ, ನೋವು, ಆತಂಕ, ಅಸಮಧಾನ, ನೆಮ್ಮದಿಎಲ್ಲವನ್ನೂ ಪ್ರತೀಕ್ಷಣವೂ ತಣ್ಣಗೆ ತಾಯ ಗರ್ಭದಲ್ಲಿ ರುವಾಗಲಿಂದಲೇ ಅರಿಯುತ್ತಾ ಬರುವ ಮಗುವಿಗೆ, ಹೊರಬಂದ ನಂತರವೂ ಉಳಿದೆಲ್ಲರ ನಡುವೆ ಬೆಚ್ಚಗಿನ ಮಮತೆಯ ಅರಿವಾಗುವುದು ತಾಯಿಯ ಸ್ಪರ್ಶದ ಅನುಭವದಲ್ಲೇ.
ಹೀಗಾಗಿ ಅದು ಅಮ್ಮನನ್ನು ಕಚ್ಚಿ ಕೊಂಡೇ ಬೆಳೆಯುತ್ತದೆ. ಅಮ್ಮ ಹೇಳಿದ್ದೆಲ್ಲ ಕೇಳುತ್ತಾ, ಕಲಿಯುತ್ತಾ, ತಿಳಿ ಯುತ್ತಾ ಬೆಳೆಯುತ್ತದೆ. ಹೀಗಾಗಿ ನಿಸ್ಸಂಶಯವಾಗಿ ತನ್ನೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುವ ಅಮ್ಮನೇ ಮಗುವಿನ ಮೊದಲ ಗುರು. ಆದರೆ ಕಲಿಕೆ ಅನ್ನುವುದು ನಿರಂತರ ನದಿಯಂತೆ. ಅದು ಬೃಹತ್ ಸಾಗರ ವಾಗುವವರೆಗೂ, ನಂತರವೂ ಹರಿಯುತ್ತಲೇ ಇರುತ್ತದೆ… ಅದಕ್ಕೆ ಕೊನೆಯೇ ಇಲ್ಲ. ಆದರೆ ಅರಿಯುವ ತಾಕತ್ತು ನಮಗೆಷ್ಟಿದೆ ಅನ್ನುವುದರ ಮೇಲೆ ನಮ್ಮ ಕಲಿಕೆ ಸದಾ ಅವಲಂಬಿತವಾಗಿರುತ್ತದೆ.
ಕುತೂಹಲದ ನೆರಳಾಗಿ ಕಲಿಕೆ ನಿರಂತರವಾಗಿ ಹಿಂಬಾಲಿಸುತ್ತಲೇ ಇರುತ್ತದೆ. ಯಾಕೆ? ಮತ್ತು ಹೇಗೆ? ಅನ್ನುವ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಪರಿಹಾರವನ್ನು ಕಂಡುಕೊಳ್ಳುವ ವಿಶೇಷವಾದ ಜ್ಞಾನವೇ ವಿಜ್ಞಾನ. ಕಲಿಕೆಗೆ ಒಳ್ಳೆಯದ್ದು-ಕೆಟ್ಟದ್ದು ಅನ್ನುವ ಬೇಧಭಾವವಿಲ್ಲ. ಹೀಗಾಗಿ ಆರಿಸಿಕೊಳ್ಳುವ ವಿಷಯ ಮಾತ್ರ ನಮ್ಮ ಮೇಲೆಯೇ ಅವಲಂಬಿತ ವಾಗಿರುತ್ತದೆ. ಬಗೆದಷ್ಟೂ ತೆರೆದುಕೊಳ್ಳುವ ಈ ವಿಸ್ಮಯ ಜಗತ್ತಿನಲ್ಲಿ ನಮ್ಮ ಗ್ರಹಿಕೆಗೆ ನಿಲುಕುವುದು ಕೇವಲ ಹಿಡಿಯಷ್ಟು ಮಾತ್ರ. ಅದನ್ನ ತುಂಬಿಸಿಕೊಳ್ಳುವ ಪ್ರಯತ್ನದಲ್ಲೇ ಈ ಬದುಕು ಮುಗಿದು ಹೋಗಿರುತ್ತದೆ. ಜೀವನ ನಿರ್ವಹಣೆಗಾಗಿ ಹಣ ಅತಿ ಅವಶ್ಯಕ. ಹೀಗಾಗಿ ಅದನ್ನು ಹೆಚ್ಚೆಚ್ಚು ಗಳಿಸಲು ಬೇಕಾದ ವಿದ್ಯೆಗಳನ್ನು ಕಲಿಸಲು ದೇಶ-ವಿದೇಶಗಳಲ್ಲಿ ಸಾಕಷ್ಟು ಶಾಲಾ ಕಾಲೇಜುಗಳಿವೆ ಇಂದು.
ಕೊಡುವ ಸರ್ಟಿಫಿಕೇಟು ಉತ್ತಮ ಕಂಪೆನಿ ಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಬೇಕಾದ ಅರ್ಹತಾ ಪತ್ರ. ಹೀಗಾಗಿ ಅದರೆಡೆಗೆ ನಿರ್ಲಕ್ಷ್ಯ ಮಾಡದೆ ಕಲಿಯುವಕಾಲದಲ್ಲಿ, ಕಲಿಕೆಯಿಂದ ವಿಮುಖರಾಗದೆ ವಿದ್ಯಾರ್ಥಿ ಗಳು ಬಹಳ ಶ್ರದ್ಧೆಯಿಂದ ಕಲಿತರೆ, ತಮ್ಮ ಮುಂದಿನ ಜೀವನದಲ್ಲಿ ಉತ್ತಮ ಸ್ಥಾನದಲ್ಲಿ ನಿಲ್ಲಲು ಸಾಧ್ಯವಾಗುತ್ತದೆ. ಇಡೀ ಜೀವನದಲ್ಲಿ ವಿದ್ಯಾರ್ಥಿ ದೆಸೆ ಅನ್ನು ವುದು ಬಹಳ ಅಮೂಲ್ಯವಾದದ್ದು.
ಅದನ್ನು ಉಡಾಫೆಯಿಂದ ನಿರ್ಲಕ್ಷ್ಯ ಮಾಡಿದರೆ ಮುಂದೆ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ. ಹಣ, ಆಸ್ತಿ ಎಂಬುದನ್ನು ಬೇರೆ ಯಾರು ಬೇಕಾದರೂ ಕದ್ದು ಒಯ್ಯಬಹುದು. ಆದರೆ ವಿದ್ಯೆಯಿಂದ ಸಿಗುವ ಜ್ಞಾನ ವನ್ನು ಮಾತ್ರ ಯಾರಿಂದಲೂ ಕದಿಯಲಾಗದು. ಅದು ನಮ್ಮೊಡನೆ ಶಾಶ್ವತವಾಗಿರುತ್ತದೆ. ವಿದ್ಯೆ ಅನ್ನುವುದು ಹುಟ್ಟಿದ ಪ್ರತಿಯೊಂದು ಮಗುವಿನ ಹಕ್ಕು. ಅದನ್ನು ಪ್ರತಿಯೊಂದು ಮಗುವಿಗೆ ತಲುಪಿಸಲು ಸರಕಾರದ ಜತೆ ಜತೆಗೆ ಸಾಕಷ್ಟು  ಸಂಸ್ಥೆಗಳೂ ಸಹ ಕಾರ್ಯ ನಿರತವಾಗಿದೆ. ನಾವು ಮಾತ್ರ ಕಲಿತರೆ ಸಾಲದು, ನಮ್ಮ ಸುತ್ತಮುತ್ತ ಲಲ್ಲಿ ಕಾಣುವ ಅನಕ್ಷರಸ್ಥ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡುವ ಹೊಣೆ ನಮ್ಮೆಲ್ಲರದ್ದೂ ಆಗಿರುವಂತಾಗಲಿ. ನಮ್ಮ ಪಕ್ಕದ ನಾಡಾದ ಕೇರಳದಂತೆ ಮುಂದೆ ನಮ್ಮ ಭಾರತ ದೇಶವೂ ಕೂಡ ಸಂಪೂರ್ಣ ಅಕ್ಷರಸ್ಥ ದೇಶವಾಗಿ ಹೊರದೇಶಗಳೆದುರುಹೆಮ್ಮೆಯಿಂದ ಬೀಗುವಂತಾಗಲಿ.
ಇದೆಲ್ಲವೂ ವ್ಯಾವಹಾರಿಕ ಪ್ರಪಂಚದ ವಿದ್ಯೆಯ ಮೂಲಕ ಅರಿಯುವ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಾದರೆ, ಇರುವ ಕೋಟ್ಯಂತರ ಜನರ ನಡುವೆ ಕೇವಲ ಕೆಲವರಿಗೆ ಮಾತ್ರ ದಕ್ಕುವಂಥ ಆಧ್ಯಾತ್ಮದ ಅರಿವು. ಹಾಗಾದರೆ ಏನು ಈ ಆಧ್ಯಾತ್ಮ ಎಂದರೆ? ಧಾರ್ಮಿಕ ಸ್ಥಳಗಳಲ್ಲಿ ಮಾಡುವ ಪೂಜೆಯಾ? ದಿನಾ ಬೆಳಗೆದ್ದು ಗುಡಿಗುಂಡಾರ ಸುತ್ತುವುದಾ? ಸಂಪ್ರದಾಯ, ಆಚಾರ-ವಿಚಾರಗಳನ್ನೆಲ್ಲ ಮಡಿವಂತಿಕೆಯಿಂದ ಚಾಚೂ ತಪ್ಪದೆ ಪಾಲಿಸಿಕೊಂಡು ಬರುವುದಾ? ಭಕ್ತಿಯ ಉನ್ಮಾ ದವಾ? ನೀರಿನ ಮೇಲೆ ಪಾದ ಒದ್ದೆಯಾಗದಂತೆ ನಡೆಯುವುದಾ? ಪರಕಾಯ ಪ್ರವೇಶ ಮಾಡುವುದಾ? ಕೂಡಿ ಕಳೆದು ಲೆಕ್ಕಾಚಾರ ಹಾಕಿ ಭವಿಷ್ಯದ ದಿನಗಳನ್ನು ಊಹಿಸುವ ಜ್ಯೋತಿಷ್ಯವಾ? ದೂರದಲ್ಲೆಲ್ಲೋ ಇರುವ ನಮ್ಮಂಥ ಮನುಷ್ಯರ ನಡುವೆ ಒಂದೇ ಸಮಯದಲ್ಲಿ ಮೂಡಿ ನಿಲ್ಲುವ ಆಲೋಚನೆಯನ್ನು ಗ್ರಹಿಸುವ ಟೆಲಿಪತಿಯಾ? ಅಥವಾ ಅತೀಂದ್ರಿಯ ಶಕ್ತಿಗಳಾ? ಅನ್ನುವ ಪ್ರಶ್ನೆ ಉದ್ಭವವಾಗುತ್ತದೆ.
ಆಧ್ಯಾತ್ಮ ಎಂದರೆ ಇದ್ಯಾವುದೂ ಅಲ್ಲ. ಸರಳವಾಗಿ ಹೇಳಬೇಕೆಂದರೆ ಅದು ತನ್ನನ್ನು ತಾನು ಅರಿಯುವ ಕ್ರಿಯೆ. ಅದು ನಮ್ಮ ಅಂತರಂಗದಲ್ಲಿ ನಡೆಯುವ ಬದಲಾವಣೆ. ನಮ್ಮ ಅಂತರಂಗದಲ್ಲಿಯ ನಮ್ಮ ಅನುಭವ, ಅಂತರ್ಮುಖಿ ಅನ್ವೇಷಣೆ ಹಾಗೂ ಪರಿಶೋಧನೆಗಳು. ಉಸಿರಾಡುವ ತನಕ ನಾನು ನನದೆಂಬ ಮಮಕಾರ ನಿಂತ ಮರುಗಳಿಗೆ ಮಸಣದೆ ಸಂಸ್ಕಾರ ಮಣ್ಣಲಿ ಬೆರೆತು ಮೆಲ್ಲಗೆ ಕೊಳೆತು ಮುಗಿಯುವ ದೇಹಕೆ ವ್ಯಾಮೋಹವೇಕೆ? ಮಾನವ ಮೂಳೆ ಮಾಂಸದ ತಡಿಕೆ ಇದರ ಮೇಲಿದೆ ತೊಗಲಿನ ಹೊದಿಕೆ ತುಂಬಿದೆ ಒಳಗೆ ಕಾಮಾದಿ ಬಯಕೆ… ಎಂದು ವಿಠ್ಠಲನ ಧ್ಯಾನ ಮಾಡುತ್ತ ತನ್ಮಯನಾಗಿ ಹಾಡುವ ಕಾಯಕ ಯೋಗಿ ಕುಂಬಾರನ ಭಕ್ತಿಯಲ್ಲಿ ಕಾಣಬಹುದು ಆಧ್ಯಾತ್ಮದ ಹೊಳಪು.
ಹಾಗೆಯೇ ನಮ್ಮ ತೀರ್ಥಹಳ್ಳಿಯ ಆರಗದಲ್ಲಿ ಜನಿಸಿದ ಶ್ರೀನಿವಾಸ ನಾಯಕನೆಂಬ ಅತ್ಯಂತ ಜಿಪುಣಾ ಗ್ರೇಸರನು ತನ್ನ ಹೆಂಡತಿಯ ಮೂಗುತಿಯ ಕಥೆಯಿಂದಾಗಿ ತನ್ನಲ್ಲಿ ಉಂಟಾದ ಮನಃಪರಿವರ್ತನೆಯಿಂದಾಗಿ ಇದ್ದ ಶ್ರೀಮಂತಿಕೆಯನ್ನೆಲ್ಲ ತೊರೆದು ಹರಿಯ ಧ್ಯಾನದಲ್ಲಿ ಪುರಂದರ ದಾಸರಾಗಿ,
ದಂಡಿಗೆ ಬೆತ್ತ ಹಿಡಿಯೊದಕ್ಕೆ
ಮಂಡೆ ಮಾಚಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿದಂಡಿಗೆ ಬೆತ್ತ ಹಿಡಿಸಿದಳಯ್ಯಆದದ್ದೆಲ್ಲ ಒಳಿತೆ ಆಯಿತು ನಮ್ಮಶ್ರೀಧರ ಸೇವೆ ಮಾಡಲು ಸಾಧನಸಂಪತ್ತಾಯಿತು…
ಎಂದು ಹಾಡುತ್ತ ದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿ ಕರ್ನಾಟಕ ಸಂಗೀತದ ಪಿತಾಮಹನೆನೆಸಿಕೊಂಡು ಇಂದು ಎಲ್ಲರ ಮನದಲ್ಲಿ ನಲಿದಾಡುತ್ತಿದ್ದಾರೆ.ಅಷ್ಟೇ ಅಲ್ಲ, ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೊ, ನೀ ದೇಹದೊಳಗೊ, ನಿನ್ನೊಳು ದೇಹವೋ ಎಂದು ಹಾಡಿದ ಕನಕದಾಸರು, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದ ಕಾಳಿಯ ಆರಾಧಕರಾಗಿದ್ದ ನಮ್ಮ ರಾಮಕೃಷ್ಣ ಪರಮ ಹಂಸರು, ನಾನು ಯಾರು? ಎಂಬ ಆತ್ಮಾನ್ವೇ ಷಣಾ ವಿಧಾನ ಆತ್ಮಜ್ಞಾನ ಪ್ರಾಪ್ತಿಗೆ ಮುಖ್ಯ ಸಾಧನವೆಂದು ಬೋಧಿಸಿದ ರಮಣ ಮಹರ್ಷಿಗಳು, ಸಬ್ ಕಾ ಮಾಲಿಕ್ ಏಕ್ ಎನ್ನುತ್ತಾ ಜಾತಿ, ಧರ್ಮಗಳನ್ನು ಮೀರಿ ಸಮರ್ಪಣಾ ಮನೋಭಾವ, ಸೇವಾ ಮನೋಭಾವ, ಪರೋಪ ಕಾರ, ದಯಾಪರತೆ, ಕರ್ತವ್ಯ ನಿಷ್ಠೆಯಂಥ ಮಾನವೀಯ ಗುಣಗಳ ಬಗ್ಗೆ ಜಾಗೃತಿ ಮೂಡಿಸಿದ ಶ್ರೇಷ್ಠ ಗುರುವಾದ ಶಿರಡಿಯ ಸಾಯಿನಾಥರು, ವಿಜಯ ನಗರದ ಅರಸನಾದ ಕೃಷ್ಣದೇವರಾಯನಿಗೆ ವೀಣೆ ಕಲಿಸಿಕೊಟ್ಟ ಮಾಧ್ವ ಸಂಪ್ರ ದಾಯದ ಪಂಡಿತ ಕೃಷ್ಣಭಟ್ಟರ ಮರಿಮೊಮ್ಮಗನಾದ ವೆಂಕಟನಾಥನು ಸನ್ಯಾಸವನ್ನು ಸ್ವೀಕರಿಸಿ ಶ್ರೀ ಪೂಜ್ಯ ಗುರು ರಾಘವೇಂದ್ರ ರಾಯರಾಗಿ ಬದಲಾಗಿದ್ದು, ನಗರ ಸಂಚಾರಕ್ಕೆ ಹೊರಟಿದ್ದ ಸಿದ್ಧಾರ್ಥನು ಹಾದಿಯಲ್ಲಿ ಕಂಡ ರೋಗ ಹಾಗೂ ಸಾವನ್ನು ಕಂಡು ಮನಕಲುಕಿ, ದುಃಖದ ಮೂಲವನ್ನು ಅರಿತು ಅದನ್ನು ಮೀರುವ ಪ್ರಯತ್ನದಲ್ಲಿ ಗೌತಮ ಬುದ್ಧನಾಗಿ ಪರಿವರ್ತಿತ ನಾದದ್ದು…. ಎಲ್ಲರೂ ಈ ಜಗತ್ತಿಗೆ ಅಗಾಧವಾದ ಜ್ಞಾನದ ಸಂಪತ್ತನ್ನು ಬಳುವಳಿಯಾಗಿ ಕೊಟ್ಟು ಹೋದವರೇ.
ಹಾಗೆಯೇ ಆಧ್ಯಾತ್ಮ ಅಂದರೆ ಎಲ್ಲವನ್ನೂ ಸಂಪೂರ್ಣವಾಗಿ ತೊರೆದು ಹೋಗುವುದೂ ಅಲ್ಲ. ಮೀರಾಳಿಗೆ ಕೃಷ್ಣನೆಡೆಗಿದ್ದ ನಿರಂತರ ಭಕ್ತಿ ತುಂಬಿದ ಪ್ರೀತಿ, ರಾಧೆಗೆ ಕೃಷ್ಣನೆಡೆಗಿದ್ದ ಉತ್ಕಟವಾದ ಪ್ರೇಮ, ಅಕ್ಕಮಹಾದೇವಿಗೆ ಚೆನ್ನ ಮಲ್ಲಿಕಾರ್ಜುನನೆಡೆಗಿದ್ದ ಪ್ರಶ್ನಾತೀತ ಒಲವು ಎಲ್ಲವೂ ಸಹ ಆಧ್ಯಾತ್ಮದ ಪ್ರಕಾರವೇ. ನಿಸ್ವಾರ್ಥದಿಂದ ಮಗುವನ್ನು ಕಾಣುವ ತಾಯಿಯ ಮಮತೆಯಲ್ಲೂ ಸಹ ನಾವು ಆಧ್ಯಾತ್ಮವನ್ನು ಕಾಣಬಹುದು. ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಆಧ್ಯಾತ್ಮಚಿಂತಕರು ಭವಬಂಧನದ ಮೋಹ ತೊರೆದು, ನಿಷ್ಠೆಯ ಕಾಯಕದಲ್ಲಿ, ಪರಧ್ಯಾನದಲ್ಲಿ, ನಿಷ್ಕಲ್ಮಶ ಪ್ರೀತಿಯಲ್ಲಿ, ನಿಸ್ವಾರ್ಥದ ಮಮತೆಯಲ್ಲಿ ತಮ್ಮನ್ನು ತಾವುಹುಡುಕಿಕೊಂಡಿದ್ದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಹೇಗೆ ಒಬ್ಬ ಶಿಷ್ಯನಿಗೆ ಉತ್ತಮ ಗುರುವಿನ ಹುಡುಕಾಟವಿರುತ್ತದೋ ಹಾಗೆಯೇ ಒಬ್ಬ ಗುರುವಿಗೂ ಸಹ ಉತ್ತಮ ಶಿಷ್ಯನ ಹುಡುಕಾಟ ವಿರುತ್ತದಂತೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಮುಸಲ್ಮಾನ ಕುಟುಂಬದಲ್ಲಿ ಜನಿಸಿದ ಶರೀಫರನ್ನು ಕಳಸದಿಂದ ಹುಡುಕಿಕೊಂಡು ಬಂದ ಗೋವಿಂದ ಭಟ್ಟರು ಒಮ್ಮೆ ಎಲ್ಲರೆದುರು ನಿಲ್ಲಿಸಿ ನಿಮ್ಮ ಅಪ್ಪ ಯಾರೋ? ಅಂತ ಕೇಳಿದಾಗ, ಅವರು ತಡವರಿಸದೇ, ಗಾಬರಿಗೊಳ್ಳದೆ ದೇವಾ, ನೀವು ಯಾವ ಅಪ್ಪನನ್ನು ಕೇಳುತ್ತಿರುವಿರಿ? ಒಂದು ಜೀವ84ಲಕ್ಷ ಯೋನಿಗಳಲ್ಲಿ ಹುಟ್ಟಿ ಹುಟ್ಟಿ ಬರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ.
ನಾನೂ ಈ ಹಿಂದೆ ನೂರಾರು ಸಲ ಹುಟ್ಟಿದ್ದೇನೆ, ಸತ್ತಿದ್ದೇನೆ. ಹುಟ್ಟಿದಾಗೊಮ್ಮೆ ನನ್ನ ಅಪ್ಪ ಇದ್ದೇ ಇದ್ದ. ಇಂಥ ಹಲವಾರು ಅಪ್ಪಂದಿರಲ್ಲಿ ನೀವು ಯಾವ ಅಪ್ಪನನ್ನುಕೇಳುತ್ತಿದ್ದೀರಿ ಅನ್ನುವುದು ಸ್ಪಷ್ಟವಾದರೆ ನಾನು ಇಂಥ ಜನ್ಮದಲ್ಲಿ ಇಂಥವನೇ ನನ್ನ ಅಪ್ಪ ಆಗಿದ್ದನು ಎಂದು ಹೇಳುತ್ತೇನೆ. ಎಂದಾಗ ಗುರುಗಳು ಹಸನ್ಮುಖರಾಗಿ,ಶರೀ- ಒಂದು ಜೀವಕ್ಕೆ ಎಷ್ಟು ಮಂದಿ ಅಪ್ಪಂದಿರೋ? ಎಂದು ಪ್ರಶ್ನಿಸಿದಾಗ, ಗುರುವೇ ಒಂದು ಜೀವಕ್ಕೆ ಇಬ್ಬರು ಅಪ್ಪಂದಿರು. ಒಬ್ಬ ಹಡೆದಪ್ಪ, ಇನ್ನೊಬ್ಬ ಪಡೆದಪ್ಪ… ಈ ಜನ್ಮದಲ್ಲಿ ಈ ದೇಹ ಕೊಟ್ಟವನು ಹಡೆದಪ್ಪ ಇಮಾಮ ಸಾಹೇಬರಾದರೆ, ಗುರುವಾಗಿ ಮೋಕ್ಷದ ಹಾದಿಯನ್ನು ತೋರಿಸಿ ಕೊಡುವವನೇ ಪಡೆದಪ್ಪ. ಅದು ನೀವೇ ಗುರುದೇವಾ!
ಅಂದಾಗ ಅವರ ಅಭಿಮಾನದ ಮಾತುಗಳಿಗೆ ಮನತುಂಬಿ ಬಂದು, ಭೂಮಿ ಹದವಾಗಿದೆ ನಾನು ಬೀಜ ಬಿತ್ತಿದರೆ ತಕ್ಕ ಫಲ ಸಿಗುತ್ತದೆ. ನನ್ನ ವಸ್ತು ನಾನುಒಯ್ಯುತ್ತೇನೆ ಎಂದು ಇಮಾಮ ಸಾಹೇಬರಿಗೆ ಹೇಳಿ, ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ತಮ್ಮ ಮನದಲ್ಲಿ, ಮನೆಯಲ್ಲಿ ಸ್ಥಳ ನೀಡಿದರು. ತಮ್ಮ ಅನ್ನದಲ್ಲಿ ಅವರಿಗೆಅನ್ನ ನೀಡಿದರು. ಅವರ ಪಾರಮಾರ್ಥಿಕ ತಂದೆಯಾದರು. ತಮ್ಮ ಇಡೀ ಆಧ್ಯಾತ್ಮ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿಯಾಗಿಸಲು ಬೇಕಾದ ಸಂಸ್ಕಾರ ನೀಡಿ ದೀಕ್ಷೆಕೊಟ್ಟು ಬ್ರಹ್ಮಜ್ಞಾನದ ಸಲುವಾಗಿ ಜನಿವಾರ ಹಾಕಿದರು. ಮುಸಲ್ಮಾನರ ಹುಡುಗನಿಗೆ ಬ್ರಾಹ್ಮಣ ಸಂಸ್ಕಾರ ನೀಡುತ್ತಿರುವುದನ್ನು ಕಂಡು ಮಡಿವಂತ ಸಮಾಜಸಹಿಸದಾದಾಗ ಅವರ ವರ್ತನೆಯನ್ನು ಕಂಡು ಮುರುಕು ತೊಲೆಯು ಹುಳುಕು ಜಂತಿ ಕೊರೆದು ಸರಿದು ಕೀಲ ಸಡಲಿ ಹರುಕು ಚಪ್ಪರ ಜೇರುಗಿಂಡಿ ಮೇಲಕೇರಿ ಹೋಗಲಾರೆ ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ…. ಎಂದು ಹಾಡುತ್ತಾ ತಮ್ಮ ಅರಿವನ್ನು ಗೀತೆಗಳ ಮೂಲಕ ಹಂಚಿಕೊಳ್ಳುತ್ತಾ ಇಂದು ಮನೆಮಾತಾಗಿದ್ದಾರೆ.
ಇದೆಲ್ಲ ಒಂದು ಕಾಲವಾದರೆ ಈಗಿನ ಕಾಲದ ಮಕ್ಕಳಿಗೆ ಬೇಕೆನಿಸಿದ್ದೆಲ್ಲ ಬೆರಳಂಚಿನಲ್ಲೇ ಸಿಗುತ್ತದೆ. ಎಲ್ಲದಕ್ಕೂ  ಅನ್ನುವ ಮಹಾಗುರುವಿದ್ದೇ ಇದೆ. ಆದರೂ ಗುರುವಿನ ಅಗತ್ಯವಿದೆಯಾ? ಖಂಡಿತಾ ಇದೆ. ಯಾಕೆಂದರೆ ನಾವು ನೋಡಿದ್ದು, ಕಲಿತದ್ದು ಎಲ್ಲವೂ ಯಾವಾಗಲೂ ಸರಿಯೆನಿಸುತ್ತಲೇ ಇರುತ್ತದೆ. ಆದರೆ ಕೇವಲ ಗುರು ಮಾತ್ರ ನಾವು ಎಲ್ಲಿ ತಪ್ಪುತ್ತಿದ್ದೇವೆ ಅನ್ನುವ ಅರಿವು ಮೂಡಿಸಿ ನಮ್ಮನ್ನು ತಿದ್ದುತ್ತಾ ಸರಿಯಾದ ಮಾರ್ಗದಲ್ಲಿ ನಡೆಸಲು ಸಾಧ್ಯ. ಹೀಗಾಗಿ ಎಲ್ಲ ಕಾಲಕ್ಕೂ ಗುರುವಿನ ಅಗತ್ಯವಿದ್ದೇ ಇದೆ. ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ….