ಅಮೆರಿಕದ ಸೈನಿಕರು ಪಾಕ್‌ನಲ್ಲೇಕೆ ಬಿಡಾರ ಹೂಡಿದ್ದಾರೆ?
ಪ್ರಚಲಿತ
ವಿಜಯ್‌ ದರ್‌ಡ, ಅಧ್ಯಕ್ಷರು, ಲೋಕಮತ್‌ ಪತ್ರಿಕಾ ಸಮೂಹ
ಪಾಕಿಸ್ತಾನದ ಸರ್ಕಾರ ತನ್ನ ಜನರನ್ನು ದಾರಿ ತಪ್ಪಿಸುವುದಕ್ಕೆ ಏನು ಬೇಕಾದರೂ ಹೇಳಬಹುದು. ಆದರೆ, ಅಮೆರಿಕದ ಪಡೆಗಳು ಅಫ್ಘಾನಿಸ್ತಾನವನ್ನು ತೊರೆದ ಮೇಲೆ ಪಾಕಿಸ್ತಾನದಲ್ಲಿ ಬಿಡಾರ ಹೂಡಬೇಕು ಎಂಬುದು ಮೂರು ತಿಂಗಳ ಹಿಂದೆಯೇ ನಿರ್ಧಾರವಾಗಿತ್ತು! ಈಗ ಅದೇ ಆಗಿದೆ. ಇಸ್ಲಾಮಾಬಾದ್‌ನಲ್ಲಿ ಇದ್ದು ಕೊಂಡು ಅಮೆರಿಕದ ಸೈನಿಕರು ಏನು ಮಾಡುತ್ತಾರೆಂಬುದನ್ನು ಕಾದು ನೋಡಬೇಕು. ಇದರ ಮಧ್ಯೆ ಅಮೆರಿಕದ ಚಿನೂಕ್ ಹೆಲಿಕಾಪ್ಟರ್‌ಗಳು ಕರಾಚಿಯ ಮೇಲೂ ಹಾರಾಟ ನಡೆಸುತ್ತಿವೆ.
ಅಮೆರಿಕದ ಸೈನಿಕರು ಅಫ್ಘಾನಿಸ್ತಾನದ ಕಾಬೂಲ್‌ನಿಂದ ಗಡುವು ಮುಗಿಯುವುದಕ್ಕೆ ಒಂದು ದಿನ ಇರುವಾಗಲೇ ಗಂಟುಮೂಟೆ ಕಟ್ಟಿಕೊಂಡು ವಿಮಾನ ಹತ್ತಿದಾಗ ಅವರು ಸ್ವದೇಶಕ್ಕೆ ವಾಪಸಾಗುತ್ತಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಜಗತ್ತಿಗೆ ಗೊತ್ತಾದ ಸತ್ಯವೇನೆಂದರೆ ಆ ಯೋಧರು ಹೋಗಿದ್ದು ಅಮೆರಿಕಕ್ಕಲ್ಲ, ಬದಲಿಗೆ ಪಾಕಿಸ್ತಾನಕ್ಕೆ!
ಇಸ್ಲಾಮಾಬಾದ್ ವಿಮಾನ ನಿಲ್ದಾಣ ಹಾಗೂ ಅಲ್ಲೇ ಪಕ್ಕದಲ್ಲಿ ಅಮೆರಿಕದ ಯೋಧರು ಉಳಿದುಕೊಂಡಿರುವ ವೈಭವೋಪೇತ ಸೆರೆನಾ ಹೋಟೆಲ್‌ನ ಚಿತ್ರಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ. ಅದರೊಂದಿಗೇ, ಅಮೆರಿಕದ ಸೈನಿಕರು ಅಲ್ಲೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಮೊದಲಿಗೆ ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಶೇಖ್ ರಶೀದ್ ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದರು. ನಂತರ ಒತ್ತಡ ಬಂದಾಗ, ಅಮೆರಿಕದ ಸೈನಿಕರು ಮೂರರಿಂದ ನಾಲ್ಕು ವಾರಗಳ ವೀಸಾದ ಮೇಲೆ ಪಾಕಿಸ್ತಾನಕ್ಕೆ ಬಂದಿದ್ದಾ ರೆಂದು ಬಾಯ್ಬಿಟ್ಟರು.
ಆದರೆ, ಪಾಕಿಸ್ತಾನದ ಮೇಲೆ ಅಮೆರಿಕದ ಚಿನೂಕ್ ಹೆಲಿಕಾಪ್ಟರ್‌ಗಳು ಏಕೆ ಹಾರಾಡುತ್ತಿವೆ ಎಂಬುದಕ್ಕೆ ಅವರಲ್ಲಿ ಉತ್ತರವಿರಲಿಲ್ಲ. ಅಮೆರಿಕದ ಸೈನಿಕರು ಪಾಕಿಸ್ತಾನದಲ್ಲಿ ಬಹಳ ದಿನ ಉಳಿದುಕೊಳ್ಳುವುದಿಲ್ಲ ಎಂದು ಶೇಖ್ ರಶೀದ್ ಅವರೇನೋ ಹೇಳಬಹುದು. ಆದರೆ, ಅಫ್ಘಾನಿಸ್ತಾನದಿಂದ ಹೊರಟ ಆ ಸೈನಿಕರು ಅಮೆರಿಕಕ್ಕೆ ಹೋಗದೆ ಸೀದಾ ಪಾಕಿಸ್ತಾನಕ್ಕೆ ಬಂದಿದ್ದೇಕೆ ಎಂಬುದು ನಿಜವಾದ ಪ್ರಶ್ನೆ. ಅವರು ಹಠಾತ್ ಅಲ್ಲಿಗೆ ಬಂದರೇ ಅಥವಾ ಬರುವುದು ಪೂರ್ವನಿರ್ಧರಿತ ಯೋಜನೆಯಾಗಿತ್ತೇ? ಪಾಕಿಸ್ತಾನ ಏನೇ ಹೇಳಲಿ, ಅಮೆರಿಕದ ಸೈನಿಕರು ಅಫ್ಘಾನಿಸ್ತಾನವನ್ನು ತೊರೆದ ಮೇಲೆ ಅಕ್ಕಪಕ್ಕದ ಯಾವುದಾದರೂ ದೇಶದಲ್ಲಿ ಸೇನಾ ನೆಲೆ ರೂಪಿಸಿಕೊಂಡು ಅಫ್ಘಾನಿಸ್ತಾನದ ಮೇಲೆ ಕಣ್ಣಿಡುತ್ತಾರೆ ಎಂಬುದು ಸುಮಾರು ಮೂರು ತಿಂಗಳ ಮೊದಲೇ ನಿರ್ಧಾರವಾಗಿತ್ತು.
ಕೆಲ ಸಮಯದ ಹಿಂದೆ ಅಮೆರಿಕದ ಸೆಂಟ್ರಲ್ ಕಮಾಂಡ್ ಜನರಲ್ ಕೆನೆತ್ ಮೆಸೆಂಜರ್ ಏನು ಹೇಳಿದ್ದರು ಎಂಬುದು ನೆನಪಿದೆಯೇ? ಅಫ್ಘಾನಿಸ್ತಾನದ ಪರಿಸ್ಥಿತಿ ಯನ್ನು ಅವಲೋಕಿಸಲು ಹತ್ತಿರದಲ್ಲೇ ಎಲ್ಲಾದರೂ ಕ್ಯಾಂಪ್ ಹಾಕುವ ಬಗ್ಗೆ ನಾವು ಅಕ್ಕಪಕ್ಕದ ದೇಶಗಳ ಜೊತೆಗೆ ಮಾತನಾಡುತ್ತಿದ್ದೇವೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಅದೇ ವೇಳೆಯಲ್ಲಿ, ಅಮೆರಿಕದ ರಕ್ಷಣಾ ಇಲಾಖೆಯ ಹಂಗಾಮಿ ಸಹಾಯಕ ಸಚಿವ ಡೇವಿಡ್ ಹೆಲ್ವಿ ಕೂಡ ‘ಇಸ್ಲಾಮಿಕ್ ಸ್ಟೇಟ್‌ನಂತಹ ಸಂಘಟನೆಗಳು ಅಮೆರಿಕದ ಮೇಲೆ ದಾಳಿ ನಡೆಸದಂತೆ ನೋಡಿಕೊಳ್ಳಲು ನಾವು ಸೇನಾಪಡೆಗಳನ್ನು ಸ್ಥಳಾಂತರಿಸುತ್ತೇವೆ’ ಎಂದು ಹೇಳಿದ್ದರು. ಆಗಲೇ ಅಮೆರಿಕ ತನ್ನ ನೆಲೆಯನ್ನು ಪಾಕಿಸ್ತಾನಕ್ಕೆ ಸ್ಥಳಾಂತರ ಮಾಡಬಹುದು ಎಂಬ ಹಾಪೋಹಗಳು ಎದ್ದಿದ್ದವು!
ಪಾಕಿಸ್ತಾನದ ಹೊರತಾಗಿ ಅಫ್ಘಾನಿಸ್ತಾನಕ್ಕೆ ಇರಾನ್, ತುರ್ಕ್‌ಮೆನಿಸ್ತಾನ್, ಉಜ್ಬೆಕಿಸ್ತಾನ್, ತಜಿಕಿಸ್ತಾನ್ ಹಾಗೂ ಚೀನಾ ಜೊತೆಗೂ ಗಡಿಯಿದೆ. ಅಮೆರಿಕದವರು ಇರಾನ್ ಮತ್ತು ಚೀನಾದಲ್ಲಿ ಸೇನಾ ನೆಲೆ ಹೊಂದುವುದು ಅಸಾಧ್ಯದ ಮಾತು. ಇನ್ನು ತುರ್ಕ್‌ಮೆನಿಸ್ತಾನ್, ಉಜ್ಬೆಕಿಸ್ತಾನ್ ಮತ್ತು ತಜಿಕಿಸ್ತಾನ್ ದೇಶಗಳಿಗೆ ರಷ್ಯಾ ಬಹಳ ಹತ್ತಿರದಲ್ಲಿದೆ. ಈ ದೇಶಗಳಲ್ಲಿ ರಷ್ಯಾ ತನ್ನ ಪ್ರಬಲವಾದ ಗುಪ್ತಚರ ಜಾಲ ಹೊಂದಿದೆ. ಹೀಗಾಗಿ ಅಮೆರಿಕದವರಿಗೆ ಸೇನಾನೆಲೆ ಸ್ಥಾಪಿಸಿಕೊಳ್ಳಲು ಪಾಕಿಸ್ತಾನಕ್ಕಿಂತ ಒಳ್ಳೆಯ ಜಾಗ ಇನ್ನಾವುದೂ ಇಲ್ಲ.
ಪಾಕಿಸ್ತಾನ ತನ್ನ ವಾಯುಸೀಮೆಯನ್ನು ಬಳಸಿಕೊಳ್ಳಲು ಈಗಾಗಲೇ ಅಮೆರಿಕಕ್ಕೆ ಒಪ್ಪಿಗೆ ನೀಡಿದೆ. ಇನ್ನು, ಪಾಕಿಸ್ತಾನದ ನಾಸಿರಾಬಾದ್ ಹಾಗೂ ಬಲೂಚಿಸ್ತಾನ ದಲ್ಲಿ ವಾಯುನೆಲೆ ಸ್ಥಾಪಿಸಲು ಅಮೆರಿಕವೇ ಹಣ ನೀಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ವಾಯುನೆಲೆಯ ಮೂಲಕ ಅಮೆರಿಕದವರಿಗೆ ಅಫ್ಘಾನಿಸ್ತಾನದ ಮೇಲೆ ಕಣ್ಣಿಡುವುದು ಸುಲಭವಾಗುತ್ತದೆ. ವಾಸ್ತವವಾಗಿ, ಅಮೆರಿಕದ ಸೇನಾಪಡೆ ಅಫ್ಘಾನಿಸ್ತಾನವನ್ನು ತೊರೆದಿದ್ದರೂ ಅದರ ಕಟ್ಟರ್ ಶತ್ರು ಗಳಾದ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್‌ಖೈದಾ ಭಯೋತ್ಪಾದಕ ಸಂಘಟನೆಗಳು ಇನ್ನೂ ಅಲ್ಲೇ ಬೀಡುಬಿಟ್ಟಿವೆ.
ಅವುಗಳ ಮೇಲೆ ದಾಳಿ ನಡೆಸಲು ಅಮೆರಿಕಕ್ಕೆ ಪಾಕಿಸ್ತಾನದ ನೆಲ ಬೇಕೇಬೇಕು! ಪಾಕಿಸ್ತಾನದವರು ಚೀನಾದ ಕಡೆ ವಾಲುತ್ತಿರುವಾಗ ಅಮೆರಿಕಕ್ಕೇಕೆ ತಮ್ಮ ನೆಲ ಬಳಸಿಕೊಳ್ಳಲು ಕೊಡುತ್ತಾರೆ? ಇದು ತಕ್ಷಣ ಏಳುವ ಪ್ರಶ್ನೆ. ಆದರೆ, ರಾಜತಾಂತ್ರಿಕತೆಯಲ್ಲಿ ಶಾಶ್ವತ ಸ್ನೇಹಿತ ಅಥವಾ ಶಾಶ್ವತ ಶತ್ರು ಎಂಬುವರು ಯಾರೂ ಇಲ್ಲ. ಎಲ್ಲರಿಗೂ ಅವರವರ ಹಿತಾಸಕ್ತಿಗಳಿರುತ್ತವೆ. ಅವುಗಳಿಗೆ ತಕ್ಕಂತೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಅದರ ಜೊತೆಗೆ, ಎಲ್ಲರೂ ದುರ್ಬಲರನ್ನು ಬಳಸಿಕೊಳ್ಳಲು ಯತ್ನಿಸುತ್ತಾರೆ ಮತ್ತು ದುರ್ಬಲರಿಗೆ ಪ್ರಬಲರ ಸ್ನೇಹ ಬೇಕಾಗುತ್ತದೆ.
ಪಾಕಿಸ್ತಾನ ದುರ್ಬಲ ದೇಶ. ಅದು ಚೀನಾದ ಸ್ನೇಹವನ್ನೂ ಬಯಸುತ್ತದೆ, ಅಮೆರಿಕದ ಸ್ನೇಹವನ್ನೂ ಬಯಸುತ್ತದೆ! ಇಬ್ಬರ ನೆರವೂ ಆ ದೇಶಕ್ಕೆ ಬೇಕು.ಅಮೆರಿಕದ ಸೇನೆಗೆ ಪಾಕಿಸ್ತಾನ ತನ್ನ ಬಾಗಿಲು ತೆರೆದಿದ್ದು ಇದೇ ಮೊದಲಲ್ಲ. 1959ರಲ್ಲಿ ಜನರಲ್ ಅಯೂಬ್ ಖಾನ್ ಪೇಶಾವರದ ವಾಯುನೆಲೆಯನ್ನುಅಮೆರಿಕಕ್ಕೆ ಬಳಸಿಕೊಳ್ಳಲು ಬಿಟ್ಟಿದ್ದರು. ಅಲ್ಲಿಂದ ಅಮೆರಿಕದವರು ಸೋವಿಯತ್ ಯೂನಿಯನ್ ಮೇಲೆ ಹುಗಾರಿಕೆ ನಡೆಸಿದ್ದರು. ಜನರಲ್ ಮುಷರ್ರಫ್ಪಾಕಿಸ್ತಾನದ ಐದು ವಾಯುನೆಲೆಗಳನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟಿದ್ದರು. ಅಲ್ಲಿಂದ ಅಮೆರಿಕದವರು ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು.2010ರಲ್ಲಿ ಅಮೆರಿಕದ ಎಲೈಟ್ ಫೋರ್ಸ್‌ನ ರಹಸ್ಯ ತುಕಡಿಗಳು ಪಾಕಿಸ್ತಾನದಲ್ಲಿ ಬೀಡು ಬಿಟ್ಟಿರುವುದು ಬೆಳಕಿಗೆ ಬಂದಿತ್ತು.
ಅಮೆರಿಕದ ಸಿಐಎ ಜಾಲ ಪಾಕಿಸ್ತಾನದಲ್ಲಿ ಹರಡಿಕೊಂಡಿದೆ. ಪಾಕಿಸ್ತಾನದ ಆ ಸಹಕಾರದಿಂದಲೇ ಅಮೆರಿಕದ ಸೇನೆಗೆ ಅಬೋಟಾಬಾದ್‌ಗೆ ನುಗ್ಗಿ ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆಗೈಯಲು ಸಾಧ್ಯವಾಯಿತು. ಸದ್ಯ ಪಾಕಿಸ್ತಾನದ ನಾಯಕರು ಚೀನಾವನ್ನು ಹೊಗಳುತ್ತಿರಬಹುದು. ಆದರೆ, ವಾಸ್ತವ ಏನೆಂದರೆ ಪಾಕಿ ಸ್ತಾನದ ಸೇನಾಪಡೆಗಳ ಮುಖ್ಯಸ್ಥರು ಯಾವಾಗಲೂ ಅಮೆರಿಕದ ಪರವಾಗಿಯೇ ಇದ್ದಾರೆ. ಪಾಕಿಸ್ತಾನಿ ಜನರಲ್‌ಗಳ ಸಂಪತ್ತು ಅಮೆರಿಕದಲ್ಲಿ ಕೊಳೆಯುತ್ತಿದೆ, ಅವರ ಮಕ್ಕಳು ಪಾಶ್ಚಾತ್ಯ ದೇಶಗಳಲ್ಲಿ ಓದುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಚೀನಾದ ಜೊತೆ ತಮಗೆ ಕಳ್ಳಾಟ ಆಡಲು ಆಗುವುದಿಲ್ಲ ಎಂಬುದು ಪಾಕಿಸ್ತಾನಿ ಜನರಲ್‌ಗಳಿಗೆ ಗೊತ್ತು. ಏಕೆಂದರೆ ಚೀನಾವೇ ದೊಡ್ಡ ಕಳ್ಳ!
ಅಮೆರಿಕ ಉಚಿತವಾಗಿ ಬೇಕಾದಷ್ಟು ಕೊಡುತ್ತದೆ. ಆದರೆ ಚೀನಾ ಸ್ವಲ್ಪ ಕೊಟ್ಟು, ಅದಕ್ಕೆ ಪ್ರತಿಯಾಗಿ ಏನನ್ನಾದರೂ ಕೇಳುತ್ತದೆ. ಬೇಕಾದರೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರನ್ನೇ ನೋಡಿ. ಸುಮಾರು ಎರಡು ವರ್ಷದಿಂದ ಕೆಲಸ ನಿಂತುಹೋಗಿದೆ. ಏಕೆಂದರೆ ಆ ಯೋಜನೆಯಲ್ಲಿ ಚೀನಾಕ್ಕೆ ಯಾವುದೇ ಲಾಭ ಕಾಣಿ ಸುತ್ತಿಲ್ಲ. ಅಫ್ಘಾನಿಸ್ತಾನದೊಳಗೆ ಚೀನಾಕ್ಕೆ ಪ್ರವೇಶ ಸಿಕ್ಕಿದರೆ ಮತ್ತೆ ಆ ಕಾರಿಡಾರ್‌ನ ಕೆಲಸ ಶುರುವಾಗುತ್ತದೆ. ಆದರೆ, ಅಮೆರಿಕದವರಿಗೆ ಅಫ್ಘಾನಿಸ್ತಾನದೊಳಗೆ ಚೀನಾ ಬರುವುದು ಯಾವತ್ತೂ ಬೇಕಿಲ್ಲ. ಹೀಗಾಗಿ ಪಾಕಿಸ್ತಾನವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಅಮೆರಿಕದವರು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಾರೆ!
ಸದ್ಯಕ್ಕೆ ಪಾಕಿಸ್ತಾನ ದಿವಾಳಿಯ ಹಂತದಲ್ಲಿದೆ. ಅದಕ್ಕೆ ಹಣ ಬೇಕು. ಹೀಗಾಗಿ ಅಮೆರಿಕದವರು ಕೈಯಲ್ಲಿ ಕ್ಯಾರೆಟ್ ಹಿಡಿದುಕೊಂಡು ಬಂದರೆ ಪಾಕಿಸ್ತಾನದವರು ಫಟಾಫಟ್ ಖೆಡ್ಡಾಕ್ಕೆ ಬೀಳುತ್ತಾರೆ! ಅಮೆರಿಕದವರು ಪಾಕಿಸ್ತಾನಕ್ಕೆ ಕೊಟ್ಟಿರುವ ಹಳೆಯ ಸಾಲ ಎಷ್ಟಿದೆಯೆಂದರೆ ಪಾಕಿಸ್ತಾನ ತನ್ನ ಜನ್ಮದುದ್ದಕ್ಕೂ ಅದನ್ನು ತೀರಿಸಲು ಸಾಧ್ಯವಿಲ್ಲ. ಮೇಲಾಗಿ ಅದಕ್ಕೀಗ ಹೊಸ ಸಾಲ ಬೇಕು. ಹೀಗಾಗಿ ಅಮೆರಿಕ ಈ ಪರಿಸ್ಥಿತಿಯ ಗರಿಷ್ಠ ಲಾಭ ಪಡೆಯುತ್ತದೆ! ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಬೇಕಾದಷ್ಟು ಹಣ ಚೆಲ್ಲಲು ಸಿದ್ಧವಿದೆ. ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ತಡೆಹಿಡಿದಿದ್ದ300ಮಿಲಿಯನ್ ಡಾಲರ್ ನೆರವನ್ನು ಅಮೆರಿಕ ಬಿಡುಗಡೆ ಮಾಡಿದರೂ ಅಚ್ಚರಿಯಿಲ್ಲ!
ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ತರಾತುರಿಯಲ್ಲಿ ಹಿಂದಕ್ಕೆ ಕರೆಸಿಕೊಂಡು ಅಮೆರಿಕವೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆ ಎದುರಿಸುತ್ತಿದೆ. ಸ್ವತಃ ಅಮೆರಿಕನ್ನರೇ ತಮ್ಮ ಸರ್ಕಾರವನ್ನು ಬೈಯುತ್ತಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ಮುಖ ಉಳಿಸಿಕೊಳ್ಳಲು ಅಮೆರಿಕ ಪ್ರಯತ್ನಿಸುತ್ತದೆ. ಕಳೆದುಕೊಂಡ ವಿಶ್ವಾಸ ಮತ್ತೆ ಗಳಿಸಿಕೊಳ್ಳಲು ಇಸ್ಲಾಮಿಕ್ ಸ್ಟೇಟ್ ಉಗ್ರರ ಮೇಲೆ ದಾಳಿ ನಡೆಸುವುದಕ್ಕೆ ಆ ಪ್ರದೇಶದಲ್ಲಿ ಎಲ್ಲಾದರೂ ಒಂದು ಕಡೆ ಅದು ತನ್ನ ಸೇನೆಯನ್ನು ಉಳಿಸಿಯೇ ತೀರುತ್ತದೆ. ಅಮೆರಿಕನ್ ಸೇನಾಪಡೆಗಳು ಪಾಕಿಸ್ತಾನದಲ್ಲಿ ಉಳಿದುಕೊಂಡರೆ ‘ಅಮೆರಿಕದವರು ಅಫ್ಘಾನಿಸ್ತಾನವನ್ನು ತೊರೆದಿದ್ದಾರೆ, ಆದರೆ ಯುದ್ಧಭೂಮಿಯನ್ನು ತೊರೆದಿಲ್ಲ’ ಎಂದು ನಿಸ್ಸಂಶಯವಾಗಿ ಹೇಳಬಹುದು!
ಹಾಗಿದ್ದರೆ ಭಾರತ ಈ ಹಂತದಲ್ಲಿ ಏನು ಮಾಡಬೇಕು? ನಾವು ಕಾದು ನೋಡುವ ತಂತ್ರವನ್ನೇ ಇನ್ನಷ್ಟು ಕಾಲ ಮುಂದುವರೆಸಬೇಕು. ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ತಾಲಿಬಾನ್ ಹಾಗೂ ಹಕ್ಕಾನಿ ಬಣದ ಉಗ್ರರ ನಡುವೆ ತೀಕ್ಷ್ಣ ಕಾದಾಟ ನಡೆಯುತ್ತಿದೆ. ಪರಿಸ್ಥಿತಿ ಎಷ್ಟು ವೇಗವಾಗಿ ಬದಲಾಗುತ್ತಿದೆ ಅಂದರೆಮುಂದೇನಾಗುತ್ತದೆ ಎಂದು ಊಹಿಸುವುದು ಕೂಡ ಕಷ್ಟ.