ನಗರಗಳಿಂದ ಪಟ್ಟಣಕ್ಕೆ ಐಟಿ ಕಂಪನಿಗಳು – ಕರೋನೋತ್ತರ ಸಾಧ್ಯತೆಗಳು
ಆಲೋಚನೆ
ವಿನಾಯಕ ಭಟ್ಟ
ಕೆಲಸಕ್ಕೆ ಬೇಕಾದ ಮೂಲ ಸೌಕರ್ಯದ ಕೊರತೆ ಅಂದರೆ ಅತಿ ವೇಗದ ಇಂಟರ್ನೆಟ್, ಉತ್ತಮ ಮೊಬೈಲ್ ನೆಟ್ ವರ್ಕ್, ಉತ್ತಮ ಕೆಲಸದ ಜಾಗ ಮುಂತಾದ ಅವಶ್ಯಕತೆಗಳು ಪೂರೈಸಿದಲ್ಲಿ ತಾವೂ ಹುಟ್ಟು ಊರಿಗೆ ಬಂದು ಕೆಲಸ ಮಾಡುತ್ತೇವೆ ಅನ್ನುವುದು ಹೆಚ್ಚಿನವರ ಅಂಬೋಣ. ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರ ಶೇಖರ್ ಅವರು ಶಿರಸಿಗೆ ಆಗಮಿಸಿದಾಗ, ಇಂಟರ್ನೆಟ್ ಮತ್ತು ಸಂಪರ್ಕ ಸೇವೆಗಳನ್ನು ಮೇಲ್ದರ್ಜೆಗೆ ಏರಿಸುವ ಹಾಗೂ ಟೆಕ್ ಪಾರ್ಕ್ ಸಾಧ್ಯತೆಯನ್ನು ವೇಗಗೊಳಿಸುವ ಮಾತುಗಳನ್ನು ಆಡಿದ್ದಾರೆ.
ಕರೋನ ಕಾಲಘಟ್ಟ ಅನ್ನುವುದು ತಂತ್ರಜ್ಞಾನದ ಬೆಳಕಿನಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಜಗತ್ತಿಗೆ ತೆರೆದಿದ್ದು ಹೆಗ್ಗಳಿಕೆ ಅನ್ನಲೇಬೇಕು. ಆಫೀಸಿಗೆ ಹೋಗಿಯೇ ಕೆಲಸ ಮಾಡಬೇಕು, ಹಾಗಾದರೆ ಮಾತ್ರ ಉತ್ಪನ್ನ ಅನ್ನುತ್ತಿದ್ದ ಅನೇಕ ಕಂಪನಿಗಳು, ಸಂಸ್ಥೆಗಳು ಇಂದಿನ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡುಆಫೀಸಲ್ಲದ ಜಾಗದಿಂದ ಕೂಡ ಉತ್ಪಾದನೆ ಸಾಧ್ಯ ಅನ್ನುವುದನ್ನು ಮನಗಂಡಿದ್ದಾರೆ.
ಇದಕ್ಕೆ ಈ ತ್ರೈಮಾಸಿಕದ ಭಾರತದ ಜಿಡಿಪಿ ಕೂಡ ಸಾಕ್ಷಿ ವಹಿಸಿದೆ. ಮಾಹಿತಿ ತಂತ್ರಜಾನ, ಸಾಫ್ಟ್ ವೇರ್, ಮತ್ತು ಸೇವೆ ಆಧಾರಿತ ಎಲ್ಲ ಕೆಲಸಗಳನ್ನೂ ಎಲ್ಲಿಂದ ಬೇಕಾದರೂ ಮಾಡಬಹುದು ಅನ್ನುವುದನ್ನ ಕರೋನ ತೋರಿಕೊಟ್ಟಿದೆ. ಲಾಕ್ ಡೌನ್ ಕಾಲದಲ್ಲಿ ಕೂಡ ಬಹುತೇಕ ಎಲ್ಲ ಈ ರೀತಿಯ ಸಂಸ್ಥೆಗಳು ಕೆಲಸ ನಿಲ್ಲಿಸದೆ, ನೌಕರರಿಗೆ ಮನೆಯಿಂದಲೇ ಕೆಲಸ ಅನ್ನುವ ಪದ್ದತಿಯನ್ನು ಒದಗಿಸಿಕೊಟ್ಟಿದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಅನುಕೂಲ ಸಂದರ್ಭದಲ್ಲಿ ಅದೆಷ್ಟೋ ಟೆಕ್ಕಿಗಳು, ತಂತ್ರಜ್ಞರು ತಮ್ಮ ಹುಟ್ಟೂರಿಗೆ ಹೋಗಿ, ಅಲ್ಲಿ ಏನೇನೋ ಸರ್ಕಸ್‌ಗಳನ್ನು ಮಾಡಿ, ಗುಡ್ಡ, ಬೆಟ್ಟಗಳ ಮೇಲೆ ಹತ್ತಿ, ನೆಟ್ ವರ್ಕ್ ಪಡೆಯುತ್ತ ಕೆಲಸ ಮಾಡಿದವರೂ ಇದ್ದಾರೆ.
ಅಂದರೆ, ಇಷ್ಟೊಂದು ದೊಡ್ಡ ಸಂಖ್ಯೆಯ ಜನ ಊರು ಬಿಟ್ಟು ದೂರದ ಶಹರಕ್ಕೆ ಹೋಗಿ ಅಲ್ಲಿ ಕೆಲಸ ಮತ್ತು ಜೀವನ ಸಾಗಿಸುತ್ತಿದ್ದಾರಲ್ಲ, ಇವರಿಗೆಲ್ಲ ಊರಲ್ಲಿಯೇ ಅವಕಾಶ ಸಿಕ್ಕಿದ್ದರೆ ಎಷ್ಟು ಚೆಂದವಿತ್ತು ಅನ್ನುವ ಭಾವನೆ ಎಲ್ಲರಲ್ಲೂ ಮನೆ ಮಾಡಲು ಶುರುವಾಯಿತು. ಈ ಸಂಗತಿ ಹೊಸದೊಂದು ವಿಚಾರಕ್ಕೆ ನಾಂದಿ ಆಯಿತು. ಲೋಕ್ ಡೌನ್ ಕಾಲದಲ್ಲಿ , ಹಳ್ಳಿಗಳಿಗೆಲ್ಲ ಮತ್ತೆ ಜೀವ ಕಳೆ ಬಂದಿತ್ತು, ಅನೇಕ ಮಕ್ಕಳು ತಂದೆ ತಾಯಂದಿ ರೊಂದಿಗೆ ಕಾಲ ಕಳೆದರು, ಹೊಲ ಗದ್ದೆಗಳಲ್ಲಿ ಓಡಾಡಿ ದರು, ಕೆಲಸ ಮಾಡಿದರು.
ಒಂದು ರೀತಿಯ ಭಾವನಾತ್ಮಕ ಚೈತನ್ಯ ಮತ್ತೆ ಬಂದಿತ್ತು. ಅಷ್ಟೆಲ್ಲ ದೂರ ಹೋಗಿ ಕುಳಿತು ಕೆಲಸ ಮಾಡುತ್ತೇವಲ್ಲ, ಅದರ ಬದಲಿಗೆ ಹುಟ್ಟೂರಿನಲ್ಲೇ ತಂತ್ರ ಜ್ಞಾನಕ್ಕೆ ಸಂಬಂಧ ಪಟ್ಟ ಕೆಲಸ ಮಾಡುವಂತಿದ್ದರೆ, ವೃದ್ಧಾಶ್ರಮಗಳ ಲಕ್ಷಣ ಕಾಣುತ್ತಿರುವ ಹಳ್ಳಿಗಳಿಗೆ ಬಂದಿದ್ದ ಚೈತನ್ಯವನ್ನು ಉಳಿಸಿಕೊಳ್ಳಬಹುದಲ್ಲ ಅನ್ನುವ ಆಲೋಚನೆ ಶುರುವಾಗಿದ್ದು. ಈ ವಿಚಾರ ರಾಜ್ಯದ ಅನೇಕ ಪಟ್ಟಣಗಳ ಜನರಲ್ಲಿ ಬಂದಿರಲಿಕ್ಕೂ ಸಾಕು. ಅದರಲ್ಲೂ ಉತ್ತರ ಕನ್ನಡದ ಶಿರಸಿ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ನಡೆದ ಊರಿಗೆ ಪುನರಾಗಮನ ಗಮನ ಸೆಳೆಯುವಂತೆ ಇತ್ತು. ಒಂದು ಲಕ್ಷಕ್ಕೂ ಹೆಚ್ಚು ಜನ ಈ ಭಾಗದಿಂದ ದೂರದ ನಗರಕ್ಕೆ ಹೋಗಿ ಬದುಕನ್ನು ಕಟ್ಟಿಕೊಂಡಿದ್ದಾರೆ ಅನ್ನುವುದು ಒಂದು ಚಿಕ್ಕ ಸಮೀಕ್ಷೆಯಿಂದ ತಿಳಿದಿದ್ದು ಆಶ್ಚರ್ಯವಾದರೂ ಸತ್ಯ.
ಈ ನಿಟ್ಟಿನಲ್ಲಿ, ಸ್ಥಳೀಯ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಂಪರ್ಕಿಸಿ, ಅವರ ಉಪಸ್ಥಿತಿಯಲ್ಲಿ ನಡೆದ ಒಂದು ಗೋಷ್ಠಿಯಲ್ಲಿ ಶಿರಸಿ ಟೆಕ್ ಫಾರಂ ಅನ್ನುವ ಸಂಘಟನೆ ಜನ್ಮ ತಾಳಿತು. ಈ ಗುಂಪು ಸ್ಥಳೀಯರಿಗೆ, ಇಲ್ಲಿಯೇ ಉದ್ಯೋಗ ಅನ್ನುವ ಮೂಲ ಸಿದ್ಧಾಂತದಲ್ಲಿ ನಂಬಿಕೆ ಯಿಟ್ಟು ಜನ ಜಾಗೃತಿಯ ಕಾರ್ಯವನ್ನು ಶುರುಮಾಡಿದೆ. ಮೊಟ್ಟ ಮೊದಲನೆಯದಾಗಿ, ಒನ್ಲೈನ್ ಸರ್ವೇ ಮಾಡಿದಾಗ, ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಇಲ್ಲಿನ ತಂತ್ರಜ್ಞರು ಇಲ್ಲಿಯೇ ಕೆಲಸ ಮಾಡಲು ಹೆಚ್ಚು ಉತ್ಸುಕರಾಗಿದ್ದಾರೆ. ಆದರೆ, ಕೆಲಸಕ್ಕೆ ಬೇಕಾದ ಮೂಲ ಸೌಕರ್ಯದ ಕೊರತೆ ಅಂದರೆ ಅತೀ ವೇಗದ ಇಂಟರ್ನೆಟ್, ಉತ್ತಮ ಮೊಬೈಲ್ ನೆಟ್ ವರ್ಕ್ , ಉತ್ತಮ ಕೆಲಸದ ಜಾಗ ಮುಂತಾದ ಅವಶ್ಯಕತೆಗಳು ಪೂರೈಸಿದಲ್ಲಿ ತಾವೂ ಹುಟ್ಟು ಊರಿಗೆ ಬಂದು ಕೆಲಸ ಮಾಡುತ್ತೇವೆ ಅನ್ನುವುದು ಹೆಚ್ಚಿನವರ ಅಂಬೋಣ.
ಜೊತೆಗೆ ಈ ರೀತಿಯ ಸೇವೆಗಳ ಉದ್ಯಮಿಗಳು ಕೂಡ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಮಧ್ಯದಲ್ಲಿ, ಕೇಂದ್ರ ಸಚಿವ ಶ್ರೀ ರಾಜೀವ್ಚಂದ್ರಶೇಖರ್ ಅವರು ಶಿರಸಿಗೆ ಆಗಮಿಸಿದಾಗ, ಅವರಲ್ಲೂ ಕೂಡ ಈ ವಿಷಯ ಪ್ರಸ್ತಾಪಿಸಲಾಗಿ, ಅವರೂ ಕೂಡ ಇಂಟರ್ನೆಟ್ ಮತ್ತು ಸಂಪರ್ಕ ಸೇವೆಗಳನ್ನು ಮೇಲ್ದರ್ಜೆಗೆ ಏರಿಸುವ ಹಾಗೂ ಟೆಕ್ ಪಾರ್ಕ್ ಸಾಧ್ಯತೆಯನ್ನು ವೇಗಗೊಳಿಸುವ ಮಾತುಗಳನ್ನು ಆಡಿದ್ದಾರೆ. ಅಂದರೆ, ಅವಕಾಶಗಳು ಸೃಷ್ಟಿಯಾದಲ್ಲಿ, ಉತ್ತರ ಕನ್ನಡದ ಹೃದಯ ಭಾಗವಾದ ಶಿರಸಿಯನ್ನು ಮತ್ತೊಂದು ಐಟಿ ಹಬ್ ಮಾಡುವ ಆಲೋಚನೆ ಈ ಶಿರಸಿ ಟೆಕ್  ಫಾರಂ ಗುಂಪಿನ ಉತ್ಸಾಹಿಗಳ ಮೂಲ ಮಂತ್ರ.ಆ ದಿಕ್ಕಿನಲ್ಲಿ ವಿಚಾರಿಸಲಾಗಿ, ಈಗಾಗಲೇ ದೂರದ ನಗರಗಳಲ್ಲಿ ಲಕ್ಷಾಂತರ ಜನ ಇಲ್ಲಿಯ ಭಾಗಗಳಿಂದ ಹೋಗಿ ಕೆಲಸ ಮಾಡುತ್ತಿದ್ದಾರೆ.
ಕೋವಿಡ್ ಕಾಲದಲ್ಲಿ ಇಲ್ಲಿಂದಲೇ ಕೆಲಸ ಮಾಡಿದ್ದಾರೆ, ಇನ್ನೂ ಸಾವಿರಾರು ಜನ ಮಾಡುತ್ತಿದ್ದಾರೆ ಕೂಡ. ಅಂದಮೇಲೆ ಇಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಅನ್ನುವುದು ಸ್ಪಷ್ಟ. ಇವುಗಳ ಮಧ್ಯದಲ್ಲಿ ಈಗಾಗಲೇ ಉತ್ತರ ಕನ್ನಡದ ಮುಖ್ಯ ಪಟ್ಟಣ ಶಿರಸಿಯಲ್ಲಿ ಕೋ ವರ್ಕಿಂಗ್ ಜಾಗಗಳು ಸೃಷ್ಟಿಯಾಗಿವೆ. ವಿವಿಧ ಕಂಪನಿ ಗಳ ನೂರಾರು ತಂತ್ರಜ್ಞರು ಶಿರಸಿಯಿಂದ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈಗಾಗಲೇ ಈ ಪಟ್ಟಣ ಬೇಕಾದಷ್ಟು ನೆಟ್ ವರ್ಕ್ ಮೂಲ ಸೌಲಭ್ಯವನ್ನುಹೊಂದಿದೆ ಅಂತಲೇ ಅರ್ಥ. ಇವುಗಳ ಜೊತೆಗೆ, ಶಿರಸಿ ಟೆಕ್ ಫಾರಂ ಕೂಡ ಮತ್ತೊಂದು ದೊಡ್ಡ ಕೋ ವರ್ಕಿಂಗ್ ಪ್ಲೇಸ್ ಸ್ಥಾಪಿಸಲು ಕೆಲಸ ನಡೆಸುತ್ತಿದೆ. ಬಹುಶಃ ಅಕ್ಟೋಬರ್ ನವೆಂಬರ್ ವೇಳೆಗೆ ಸುಸಜ್ಜಿತವಾದ, ನಗರಗಳ ಕೋ ವರ್ಕಿಂಗ್ ಪ್ಲೇಸ್‌ಗಳನ್ನೂ ಮೀರಿಸುವ ಒಂದು ಜಾಗ ಶಿರಸಿಯಲ್ಲಿ ಸೃಷ್ಟಿಯಾಗಲಿದೆ.
ವಿವಿಧ ನಗರಗಳ10ಕಂಪನಿಗಳನ್ನು ತೆಗೆದುಕೊಂಡರೆ, ಕನಿಷ್ಠ8ಕಂಪೆನಿಗಳಲ್ಲಿ ಒಬ್ಬರಾದರೂ ಶಿರಸಿ ಭಾಗದ ಜನ ಸಿಕ್ಕಿಯೇ ಸಿಕ್ಕುತ್ತಾರೆ., ಅಂತಹ ಪ್ರತಿಭೆ ಗಳನ್ನು ಹೊಂದಿರುವ ಈ ಭಾಗದಲ್ಲಿ ಕಂಪನಿಗಳು ತಮ್ಮ ಶಾಖೆಗಳನ್ನು ಆರಂಭಿಸಿದಲ್ಲಿ ಬಹಳಷ್ಟು ವಿಷಯಗಳಲ್ಲಿ ನಗರಗಳಿಗಿಂತ ಅನುಕೂಲತೆಗಳು ಹೆಚ್ಚಲಿವೆ. ಅವುಗಳಲ್ಲಿ ಕೆಲವೊಂದಿಷ್ಟನ್ನು ಮಾತ್ರ ಉಲ್ಲೇಖಿಸುವುದಾದರೆ, ಉದ್ಯೋಗಿಗಳ ಸಂಚಾರ ವ್ಯವಸ್ಥೆ. ಟ್ರಾಫಿಕ್ ಜಾಮ್ ಇಲ್ಲದ ರಸ್ತೆಗಳಾಗಿದ್ದರಿಂದ ಉದ್ಯೋಗಿ ಗಳಿಗೆ ಸಾರಿಗೆ ವ್ಯವಸ್ಥೆ ಮಾಡುವುದು ಸುಲಭ ಸಾಧ್ಯ.
ಪ್ರತಿಭೆಗಳ ಮಹಾಪೂರವೇ ಇಲ್ಲಿ ಇರುವುದರಿಂದ ಯಾವುದೇ ರೀತಿಯ ಮಾನವ ಸಂಪನ್ಮೂಲಕ್ಕೆ ಯಾವಾಗಲೂ ಕೊರತೆ ಅನ್ನುವುದೇ ಆಗುವುದಿಲ್ಲ. ವಿವಿಧಶ್ರೇಣಿಯ, ವಿದ್ಯಾರ್ಹತೆಯ, ಅನುಭವದ ಇಲ್ಲಿನ ಜನ, ದೂರದ ನಗರಗಳಿಂದ ಇಲ್ಲಿಗೆ ಬರಲು ಹಾತೊರೆಯುತ್ತಿದ್ದಾರೆ. ಸಂಬಳದ ಮಾತು ಬಂದಾಗ ಕೂಡ, ದೊಡ್ಡ ನಗರಗಳಿಗೆ ಹೋಲಿಸಿದಲ್ಲಿ ಕಡಿಮೆಯೇ ನಿರೀಕ್ಷೆ ಇಟ್ಟುಕೊಳ್ಳಬಹುದು. ಯಾಕೆಂದರೆ ಇಲ್ಲಿನ ಜೀವನ ಮಟ್ಟಕ್ಕೆ ನಗರಗಳಷ್ಟು ಖರ್ಚು ಇಲ್ಲವಾದ್ದರಿಂದ ಕಡಿಮೆ ಸಂಬಳ ಕೂಡ ಸ್ಥಳೀಯರಿಗೆ ಉತ್ತಮ ಉಳಿತಾಯವನ್ನೇ ಕೊಡಬಲ್ಲುದು. ಹೊರಗಿಂದ ಬರಬಹುದಾದ ಯಾವುದೇ ದೊಡ್ಡ ಕಂಪೆನಿಯನ್ನೋ, ಶಾಖೆಯನ್ನೋ, ಹೊಸ ಉದ್ಯಮವನ್ನೂ ಸ್ಥಾಪಿಸಲು ಶಿರಸಿ ಒಂದು ಒಳ್ಳೆಯ ಆಲೋಚನೆ ಅನ್ನುವುದು ಸ್ಪಷ್ಟ.
ಇಷ್ಟೆಲ್ಲಾ ಅನುಕೂಲತೆಗಳು ಇರುವಾಗ ,ಶಿರಸಿಗೆ ದೂರದಿಂದ ಕೆಲಸ ಸಾಧ್ಯವಾಗುವ ಐಟಿ ಕಂಪನಿಗಳು ಬರುವ ಸಾಧ್ಯತೆಗಳು ನಿಚ್ಚಳವಾಗುತ್ತಿವೆ. ಶಿರಸಿ ಟೆಕ್ ಫಾರಂ ಈಗಾಗಲೇ ಅನೇಕ ಕಂಪನಿಗಳ ಜೊತೆಗೆ ಕೂಡ ಸಂಪರ್ಕ ಸಾಧಿಸಿದೆ. ೫ಕ್ಕೂ ಹೆಚ್ಚು ಕಂಪನಿಗಳು ಸಂಪರ್ಕದಲ್ಲಿದ್ದು, ಬರಲಿರುವ ಕಂಪನಿಗಳಿಗೆ ಅವಶ್ಯಕ ತಂತ್ರಜ್ಞರ ಪಟ್ಟಿ ಕೂಡ ತಯಾರಿದೆ. ದೂರದ ನಗರಗಳಿಗೆ ಅವಕಾಶ ಹುಡುಕಿ ಹೋಗಿರುವ, ಊರಿನಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವ ಸಾವಿರಾರು ತಂತ್ರಜ್ಞರು ತುದಿಗಾಲಲ್ಲಿ ನಿಂತಿದ್ದಾರೆ. ಬರಲಿರುವ ದಿನಗಳಲ್ಲಿ, ರಾಜಕೀಯ ಇಚ್ಛಾಶಕ್ತಿಯಿಂದ ಮೂಲ ಸೌಕರ್ಯ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ. ಎಲ್ಲ ರೀತಿಯಪ್ರತಿಭೆಗಳ ಮಹಾಪೂರವೇ ಇಲ್ಲಿದೆ. ಇಲ್ಲಿರುವ ಈ ಎಲ್ಲ ಸೌಕರ್ಯವನ್ನು ಉಪಯೋಗಿಸಿಕೊಂಡು, ಕಡಿಮೆ ಖರ್ಚಿನಲ್ಲಿ, ಹೆಚ್ಚಿನ ಲಾಭದಾಯಕತೆಯನ್ನುಹೊಂದಲು ಹೆಚ್ಚಿನ ಕಂಪನಿಗಳು ಇಲ್ಲಿ ಬರಬಹುದಾಗಿದೆ.
ಉನ್ನತ ಹುದ್ದೆಯಲ್ಲಿರುವ ಇಲ್ಲಿನ ಪ್ರತಿಭೆಗಳು ಕೂಡ ತಮ್ಮ ಕಂಪೆನಿಗಳಲ್ಲಿ ಇಂಥ ಪಟ್ಟಣ . ಮುಂದಿನ ದಿನಗಳಲ್ಲಿ ಶಿರಸಿ ಭಾಗ ಕೂಡ ಮತ್ತೊಂದು ಐಟಿ ಹಬ್ ಆಗುವ ಎಲ್ಲ ಸಾಧ್ಯತೆಗಳು ದೂರವಿಲ್ಲ.