ಕಿರಿಯರನ್ನು ಕಾಡುವ ಹೃದಯ ಸಮಸ್ಯೆ..!
ಅಭಿಮತ
ದುರ್ಗಾ ಭಟ್ ಕೆದುಕೋಡಿ
durgabhat99@.
ಹೃದಯಾಘಾತ ಎನ್ನುವುದು ನಿಜಕ್ಕೂ ಭಯ ಬೀಳಿಸುವ ವಿಷಯವೇ ಸರಿ. ಕಾರಣ ಇದು ಮಾರಣಾಂತಿಕ ಸಮಸ್ಯೆ. ತಕ್ಷಣ ಚಿಕಿತ್ಸೆ ದೊರೆಯದಿದ್ದಲ್ಲಿ ಶೇ 30 ರಷ್ಟು ಜನ ಕೆಲವು ನಿಮಿಷಗಳಲ್ಲಿ ಹಾಗೂ ಶೇ 16ರಷ್ಟು ಮಂದಿ ಕೆಲವು ಗಂಟೆಗಳಲ್ಲಿ ಸಾವನ್ನಪ್ಪುತ್ತಾರೆ. ತಕ್ಷಣದಲ್ಲಿ ಸೌಲಭ್ಯವಿರುವ ಆಸ್ಪತ್ರೆ ತಲುಪಿದಲ್ಲಿ ಬಹಳಷ್ಟು ರೋಗಿಗಳು ಗುಣಮುಖರಾಗುವ ಸಂಭಾವ್ಯತೆ ಕೂಡ ಇದೆ.ವೈದ್ಯ ಜಗತ್ತು ಹೇಳುವಂತೆ ನಮ್ಮ ಆಹಾರದಲ್ಲಿ ಆರೋಗ್ಯ ಅಡಗಿದೆ ಎನ್ನುವುದು ಎಷ್ಟೊಂದು ಸತ್ಯ ಕಾರಣ ಸಾಮಾನ್ಯವಾಗಿ ಜನರನ್ನು ಕಾಡುವ ಬಹುಪಾಲು ರೋಗ ರುಜಿನಗಳಿಗೆ ನಾವು ಸೇವಿಸುವ ಆಹಾರವೇ ಮೂಲ ಕಾರಣವಾಗಿರುತ್ತದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಹುಡುಗಿಯೋರ್ವಳಿಗೆ ಎದೆನೋವು ಕಾಣಿಸಿ ಕೊಂಡು ಬಳಿಕ ಹೃದ್ರೋಗ ತಜ್ಞರನ್ನು ಸಂಪರ್ಕಿಸಿ ದಾಗ ಆಕೆಗೆ ಲಘು ಹೃದಯಾಘಾತ ಉಂಟಾಗಿರುವುದು ತಿಳಿದು ಬರುತ್ತದೆ. ಆದರೆ ಆಕೆಗೆ ಯಾವುದೇ ದುಶ್ಚಟಗಳು ಅಥವಾ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ ಮೇಲಾಗಿ ಆರೋಗ್ಯಯುತ ಜೀವನ ಶೈಲಿಯನ್ನೂ ರೂಢಿಸಿಕೊಂಡಿರುತ್ತಾಳೆ ಇಷ್ಟಾದರೂ ಹೃದಯಾಘಾತ ಯಾಕೆ ಉಂಟಾಯಿತು ಎನ್ನುವುದೇ ಕುತೂಹಲ.
ಇದೊಂದು ಸಣ್ಣ ಉದಾಹರಣೆಯಷ್ಟೇ, ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ವಯಸ್ಸಿಗೆ ಹೃದಯದ ಸಮಸ್ಯೆಗಳನ್ನು ಇಟ್ಟುಕೊಂಡು ಹೃದ್ರೋಗ ತಜ್ಞರ ಬಳಿ ಬರುವ ಬಹಳಷ್ಟು ಕೇಸ್ ಗಳು ಇರುತ್ತವೆ. ಸಿನಿಮಾ ನಟರು, ಕ್ರೀಡಾ ಪಟುಗಳು ಇದಕ್ಕೆ ಹೊರತಾಗಿಲ್ಲ. ಕೆಲ ದಿನಗಳ ಹಿಂದೆ ಬಿಗ್‌ಬಾಸ್ ಖ್ಯಾತಿಯ ಬಾಲಿವುಡ್ ಕಿರುತೆರೆ ನಟಿ ಸಿದ್ಧಾರ್ಥ್ ಶುಕ್ಲ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಕೆಲ ತಿಂಗಳ ಹಿಂದೆ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರಿಗೆ ಎದೆನೋವು ಕಾಣಿಸಿ ಕೊಂಡು, ಎರಡನೇ ಬಾರಿಗೆ ಯಶಸ್ವಿ ಆಂಜಿಯೋಪ್ಲಾಸ್ಟಿ ನಡೆಸಿ ಗುಣಮುಖರಾಗಿದ್ದಾರೆ.
ಕಳೆದ ತಿಂಗಳಿನಲ್ಲಿ ಇದೇ ರೀತಿ ಲಘು ಹೃದಯಾಘಾತಕ್ಕೊಳಗಾಗಿ ಆಗಲೂ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಅವರು ಕಾಣಿಸಿ ಕೊಂಡ ಅಡಿಗೆ ಎಣ್ಣೆಯ ಜಾಹೀರಾತಿನಿಂದಲೂ ಅವರನ್ನು ಕೈಬಿಡಲಾಯಿತು. ಕಳೆದ ವರ್ಷ ಲಾಕ್ ಡೌನ್ ಸಂದರ್ಭ ನಟ ಚಿರಂಜೀವಿ ಸರ್ಜಾ ಕೂಡ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಇಂತಹ ಕೇಸ್ ಗಳನ್ನು ನೋಡುವಾಗ ಸಣ್ಣ ವಯಸ್ಸಿಗೆ ಇವರನ್ನು ಹೃದಯ ಸಮಸ್ಯೆಗಳು ಭಾದಿಸಿದ್ದು ಸ್ಪಷ್ಟವಾಗುತ್ತದೆ. ಇಲ್ಲಿರುವ ಪ್ರಶ್ನೆ ಏನಂದ್ರೆ ನಟರಾಗಲಿ ಅಥವಾ ಕ್ರೀಡಾಪಟುಗಳಾಗಲಿ ತಮ್ಮ ದೈನಂದಿನ ಜೀವನದಲ್ಲಿ ಫಿಟ್‌ನೆಸ್‌ಗೆ ಪ್ರಾಮುಖ್ಯತೆ ನೀಡಿಯೇ ಇರುತ್ತಾರೆ. ನಿಯಮಿತ ಆಹಾರ ಹಾಗೂ ವ್ಯಾಯಾಮಗಳನ್ನು ಮಾಡಿಕೊಂಡು ಆರೋಗ್ಯಯುತ ಜೀವನಶೈಲಿ ರೂಢಿಸಿ ಕೊಂಡರು ಯಾಕೆ ಹೃದಯದ ತೊಂದರೆಗೆ ಒಳಗಾದರು ಎನ್ನುವುದು.
ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಸ್ಕ್ಯೂಲರ್ ಸೈನ್ಸ್ ಆಂಡ್ ರಿಸರ್ಚ್ ಅವರ ಅಧ್ಯಯನವೊಂದು ಹೇಳುವಂತೆ, ಹಿಂದಿನ2ವರ್ಷಗಳಲ್ಲಿ ದಾಖಲಾದ 2400ಕ್ಕೂ ಅಧಿಕ ಹಾರ್ಟ್ ಅಟ್ಯಾಕ್ ಕೇಸ್‌ಗಳು 40 ವರ್ಷದ ಒಳಗಿನವರು. ಇವುಗಳಲ್ಲಿ 1250 ಜನರಲ್ಲಿ ಮೊದಲ ಬಾರಿಗೆ ಹಾರ್ಟ್ ಅಟ್ಯಾಕ್ ಕಾಣಿಸಿಕೊಂಡ ವರು 35 ವರ್ಷದ ಕೆಳಗಿನವರು. ಇದರರ್ಥ ಸಣ್ಣ ವಯಸ್ಸಿಗೆ ಹೃದಯದ ತೊಂದರೆ ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಪ್ರೀಮೆಚೂರ್ ಕೊರೊ ನರಿ ಆರ್ಟರಿ ಡಿಸೀಸ್ (ಪಿಸಿಎಡಿ) ಸಮಸ್ಯೆ ಹೆಚ್ಚುತ್ತಿದೆ. ಈ ಹಾರ್ಟ್ ಅಟ್ಯಾಕ್ ಕೇಸ್ ಗಳಲ್ಲಿ 12 – 13 ಶೇಕಡಾ ಜನರಿಗೆ ಮಧುಮೇಹ ಮತ್ತು ಡಯಾಬಿಟಿಸ್ ಕಾರಣ ವಾಗಿರುತ್ತದೆ. ಇನ್ನುಳಿದ ಜನರಲ್ಲಿ ಹೆಚ್ಚಿನವರಿಗೆ ಹಾರ್ಟ್ ಅಟ್ಯಾಕ್ ಹಿಸ್ಟರಿಯೇ ಇಲ್ಲದೇ ಸಂಭವಿಸುತ್ತಿರುವುದು ವಿಪರ್ಯಾಸ.
ವೈದ್ಯರ ಪ್ರಕಾರ ಯುವಕರಲ್ಲಿ ಧೂಮಪಾನದ ಹೆಚ್ಚಳವು ಪ್ರಮುಖ ಕಾರಣವಾಗಿದೆ. ಎರಡನೆಯದಾಗಿ, ಎಲ್ಲ ವೃತ್ತಿಪರರು ಅನುಭವಿಸುತ್ತಿರುವ ಹೆಚ್ಚಿನ ಮಾನಸಿಕ ಒತ್ತಡ. ಮೂರನೆಯ ಅಂಶವೆಂದರೆ ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು. ಕೆಲವು ಯುವಕರು ಗಟ್ಟಿ ಮುಟ್ಟಾಗಿ ಕಾಣುವ ಉದ್ದೇಶದಿಂದ ಸ್ಟೀರಾಯ್ಡ್‌ಗಳನ್ನು ಸೇವಿಸುತ್ತಾರೆ, ಆದರೆ ಅದು ಹೃದಯಾಘಾತಕ್ಕೆ ಕಾರಣವಾಗಬಹುದು. ಸ್ಟೀರಾಯ್ಡ್ ಸೇವನೆಯಿಂದ ಉಂಟಾಗುವ ಹೃದಯಾಘಾತದ ಹೆಚ್ಚು ಪ್ರಕರಣಗಳು ಕಂಡು ಬಂದಿಲ್ಲ.
ಹೃದಯಾಘಾತ ಎನ್ನುವುದು ನಿಜಕ್ಕೂ ಭಯ ಬೀಳಿಸುವ ವಿಷಯವೇ ಸರಿ. ಕಾರಣ ಇದು ಮಾರಣಾಂತಿಕ ಸಮಸ್ಯೆ. ತಕ್ಷಣ ಚಿಕಿತ್ಸೆ ದೊರೆಯದಿದ್ದಲ್ಲಿ ಶೇ 30 ರಷ್ಟು ಜನ ಕೆಲವು ನಿಮಿಷಗಳಲ್ಲಿ ಹಾಗೂ ಶೇ 16ರಷ್ಟು ಮಂದಿ ಕೆಲವು ಗಂಟೆಗಳಲ್ಲಿ ಸಾವನ್ನಪ್ಪುತ್ತಾರೆ. ತಕ್ಷಣದಲ್ಲಿ ಸೌಲಭ್ಯ ವಿರುವ ಆಸ್ಪತ್ರೆ ತಲುಪಿದಲ್ಲಿ ಬಹಳಷ್ಟು ರೋಗಿಗಳು ಗುಣಮುಖರಾಗುವ ಸಂಭಾವ್ಯತೆ ಕೂಡ ಇದೆ. ಸಾಮಾನ್ಯವಾಗಿ ಎಲ್ಲರೂ ತಿಳಿದಿರುವಂತೆ, ಹೃದಯ ಒಂದು ಸದಾ ಮಿಡಿಯುತ್ತಿರುವ ಶರೀರದ ಎಲ್ಲಾ ಅಂಗಾಂಗಗಳಿಗೂ ರಕ್ತ ಸಂಚಲನೆಯನ್ನು ಪೂರೈಸುವ ಸ್ನಾಯು ಅಥವಾ ಮಾಂಸಖಂಡದಿಂದ ಮಾಡಲ್ಪಟ್ಟಿರುವ ಒಂದು ತಳ್ಳುವ ಯಂತ್ರ ಅಥವಾ ಪಂಪ್. ಈ ಯಂತ್ರದ ಚಟುವಟಿಕೆ ನಿರಾಯಾಸವಾಗಬೇಕಾದರೆ ದೇಹದ ಫಿಟ್‌ನೆಸ್ ಬಹಳ ಅಗತ್ಯ. ಆದರೆ ಫಿಟ್ ಆಗಿರುವವರಿಗೆ ಹೃದಯ ಸಮಸ್ಯೆ ಎಂದಾದರೆ ನಿಜವಾದ ಫಿಟ್‌ನೆಸ್ ಯಾವುದು? ಫಿಟ್‌ನೆಸ್ ಯಾವ ರೀತಿಯಲ್ಲಿ ಪಡೆಯಬಹುದು? ಈ ಎಲ್ಲಾ ಪ್ರಶ್ನೆಗಳು ಮೂಡುವುದು ಸಹಜ.
ವೈದ್ಯ ಜಗತ್ತು ಹೇಳುವಂತೆ ನಮ್ಮ ಆಹಾರದಲ್ಲಿ ಆರೋಗ್ಯ ಅಡಗಿದೆ ಎನ್ನುವುದು ಎಷ್ಟೊಂದು ಸತ್ಯ ಕಾರಣ ಸಾಮಾನ್ಯವಾಗಿ ಜನರನ್ನು ಕಾಡುವ ಬಹುಪಾಲು ರೋಗ ರುಜಿನಗಳಿಗೆ ನಾವು ಸೇವಿಸುವ ಆಹಾರವೇ ಮೂಲ ಕಾರಣವಾಗಿರುತ್ತದೆ. ಹೇಳಿ ಕೇಳಿ ಮಾರ್ಡನ್ ಯುಗದ ಹುಡುಗರಿಗೆ ಮನೆಯಲ್ಲಿ ಮಾಡಿದ ತಿಳಿ ಸಾರು ರುಚಿಯಾಗುವುದು ವಿರಳ. ಆದ್ರೂ ಕಷ್ಟಪಟ್ಟು ವಾರ ಪೂರ್ತಿ ಮನೆ ಊಟ ಮಾಡಿ ವಾರದ ಕೊನೆಯಲ್ಲಿ ಒಂದಷ್ಟು ಜಂಕ್ ಫುಡ್ ಕಡೆ ಮುಖ ಮಾಡದೇ ಇದ್ದರೆ ಹೊಟ್ಟೆ ಕೇಳಬೇಕಲ್ವಾ..! ವಾರದ ಕೊನೆಯ ಈ ಕಥೆ ಮುಂದೊಂದು ದಿನ ಆರೋಗ್ಯವನ್ನು ದೊಡ್ಡ ರಿಸ್ಕ್ ಗೆ ಒಡ್ಡುತ್ತದೆ ಅನ್ನುವ ಪರಿವೇ ಇಲ್ಲ ನಮ್ಮ ಜನಕ್ಕೆ.
ಜಂಕ್ ಫುಡ್ ಗಳಲ್ಲಿರುವ ಅಧಿಕ ಕೊಬ್ಬಿನಾಂಶಗಳು ಹೃದಯದ ಪರಿಧಮನಿಯಲ್ಲಿ ತೆಳುವಾದ ಪದರವನ್ನು ನಿರ್ಮಿಸಿ ರಕ್ತ ಹಾಗೂ ಆಮ್ಲಜನಕದ ಪೂರೈಕೆಗೆ ತಡೆಯುಂಟು ಮಾಡುತ್ತದೆ. ಇದೇ ಕಾರಣಕ್ಕೆ ಹೃದಯಾಘಾತ ಉಂಟಾಗುತ್ತದೆ. ಸೌರವ್ ಗಂಗೂಲಿಯವರ ಹೃದಯಾಘಾತಕ್ಕೆ ಮಾಂಸಾಹಾರ ಸೇವನೆ, ಅಽಕ ಕೊಬ್ಬಿನ ಪದಾರ್ಥಗಳು ಹಾಗೂ ಅನುವಂಶೀಯತೆ ಕಾರಣ ವಾಗಿರಬಹುದು. ಜೈಪುರದ ಹಾರ್ಟ್ ಹೆಲ್ತ್ ಕೇರ್ ನ ನಿರ್ದೇಶಕರಾಗಿರುವ ಡಾ. ಹರ್ಷ ಶರ್ಮಾಅವರು ಹೇಳುವಂತೆ, ಗಂಗೂಲಿಯವರ ತಂದೆ ಚಾಂದಿದಾಸ್ ಅವರು 2008ರಲ್ಲಿ ಲಂಡನ್‌ಅಲ್ಲಿ ಹೃದಯದಶಸಚಿಕಿತ್ಸೆಗೆ ಒಳಗಾಗಿದ್ದರು. ತಮ್ಮ 75ನೇ ವಯಸ್ಸಿನಲ್ಲಿ ನಿಧನ ಹೊಂದಿದ ಅವರು ಹಲವು ಬಾರಿ ಕೋಲ್ಕತ್ತಾದ ಆಸ್ಪತ್ರೆಗಳಲ್ಲಿ ಹೃದಯ ಸಮಸ್ಯೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಹೀಗಾಗಿ ಅನುವಂಶೀಯವಾಗಿ ಗಂಗೂಲಿ ಕುಟುಂಬಕ್ಕೆ ಹೃದಯದ ಅಸ್ವಸ್ಥತೆ ಇರುವುದು ಸ್ಪಷ್ಟವಾಗುತ್ತದೆ. ಅನುವಂಶೀಯವಾಗಿ ಹೃದಯದ ತೊಂದರೆ ಇದ್ದವರು ತಮ್ಮ ಜೀವನ ಶೈಲಿಯನ್ನು ಜಾಗರೂಕತೆ ಯಿಂದ ನಿಭಾಯಿಸಬೇಕು. ಅನುವಂಶೀಯತೆಯ ಜತೆಗೆ ಸಾಮಾನ್ಯವಾಗಿ ದೊಡ್ಡ ಹುದ್ದೆಯಲ್ಲಿರುವವರಿಗೆ ಜವಾಬ್ದಾರಿ ಗಳನ್ನು ನಿಭಾಯಿಸುವ ತಲೆ ಹೊರೆ ಅರ್ಥಾತ್ ಸ್ಟ್ರೆಸ್ ಇರುತ್ತದೆ. ಹೀಗಾಗಿ ನಮ್ಮ ನಿತ್ಯದ ಜಂಜಾಟಗಳಿಂದ ಸ್ಟ್ರೆಸ್ ಆಗದೇ ಇರುವುದು ಉತ್ತಮ. ಸಾಧ್ಯವಾದಷ್ಟು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ದೇಹ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಅಗತ್ಯ.
ಇನ್ನು ಆಹಾರದ ವಿಚಾರವಾಗಿ ನೋಡುವುದಾದರೆ ಮಾಂಸಾಹಾರದಲ್ಲಿ ಅತಿಯಾದ ಎಣ್ಣೆಯ ಅಂಶ ಗಳಿರುತ್ತದೆ. ಈ ಎಣ್ಣೆಯ ಅಂಶಗಳು ಹೃದಯಕ್ಕೆ ಕೊಬ್ಬಾಗಿ ಪರಿಣಮಿಸುತ್ತದೆ. ಡಾ. ಬಿ ಎಂ ಹೆಗಡೆ ಯವರು ಸಸ್ಯಾಹಾರ ಹಾಗೂ ಮಾಂಸಾಹಾರ ಕುರಿತ ಚರ್ಚೆಯೊಂದರಲ್ಲಿ ನಮ್ಮ ದೇಹವು ಮಾಂಸಾಹಾರವನ್ನು ಜೀರ್ಣಿ ಸುವ ರಚನೆ ಹೊಂದಿಲ್ಲ ಎಂದು ಹೇಳಿದರು. ಹೀಗಾಗಿ ಅತಿಯಾದ ಮಾಂಸ ಸೇವನೆ ಹೃದಯಕ್ಕೆ ಕುತ್ತು ತರಬಹುದು. ನಿಯಮಿತವಾದ ವ್ಯಾಯಾಮ ದೇಹದ ಫಿಟ್‌ನೆಸ್ ಕಾಪಾಡಿದರೆ, ಸ್ಟ್ರೆಸ್ ಫ್ರೀಯಾಗಿರುವುದು ಹೃದಯಕ್ಕೆ ಉತ್ತಮ. ಬಹುಶಃ ಬಾಲ್ಯದಿಂದಲೇ ಇಂತಹ ಆರೋಗ್ಯಯುತ ಅಭ್ಯಾಸಗಳು ರೂಢಿಯಲ್ಲಿದ್ದರೆ ಮುಂದೊಂದು ದಿನ ಪುಟ್ಟ ಹೃದಯಕ್ಕಾಗುವ ನೋವನ್ನು ತಡೆಯಬಹುದು.