ನಿಷ್ಕ್ರಿಯ ಪ್ರಜೆಗಳು ಪ್ರಜಾಪ್ರಭುತ್ವಕ್ಕೆ ಮಾರಕ !
ಅವಲೋಕನ
ಹೃತಿಕ್‌ ಕುಲಕರ್ಣಿ
ಬೆಳಗಾವಿ, ಧಾರವಾಡ-ಹುಬ್ಬಳ್ಳಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತದೆ. ಎಂದಿನಂತೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಅಂತ ಮುಖ ಮುದುಡಿಕೊಂಡು ಹೇಳುತ್ತದೆ. ಅದರ ಜೊತೆ ಅಧಿಕಾರ ದುರ್ಬಳಕೆ, ಹಣ ಬಲ, ಆ ಬಲ, ಈ ಬಲ ಅಂತ ಹೇಳಿ ಮತ್ತೆ ನಿದ್ರೆಗೆ ಜಾರುತ್ತದೆ. ಜೆಡಿಎಸ್ ಒಮ್ಮೊಮ್ಮೆ ಕಿಂಗ್ ಮೇಕರ್ ಆಗಿಯೂ, ಕೆಲವೊಮ್ಮೆ ಠೇವಣಿ ಕಳೆದುಕೊಂಡವರಾಗಿಯೂ ಸುದ್ದಿಯಲ್ಲಿರುತ್ತಾರೆ.
ಇದೆಲ್ಲಾ ರಾಜಕೀಯ. ಪ್ರಜಾಪ್ರಭುತ್ವವೆಂಬ ಅಮೋಘ ಕಟ್ಟಡಕ್ಕೆ ರಾಜ್ಯಾಂಗವೇ(ರಾಜಕೀಯ) ತಳಪಾಯ. ಆದರೆ ಈ ತಳಪಾಯ ಹಲವಾರು ಬಾರಿ ನಶಿಸಿ ದುರ್ಬಲವಾಗಿ ಪ್ರಜಾಪ್ರಭುತ್ವದ ಕಟ್ಟಡವನ್ನು ಕೆಡವಿದ್ದಿದೆ. ಹಲವಾರು ಬಾರಿ ಬೇಕೆಂದೇ ತಳಪಾಯವನ್ನು ಅಧಿಕಾರ ದಾಹವುಳ್ಳ ರಾಜಕಾರಣಿಗಳು ಹಾಳು ಮಾಡಲು ಪ್ರಯತ್ನ ಪಟ್ಟು ಯಶಸ್ವಿಯೂ ಆಗಿದ್ದಾರೆ. ಇನ್ನೂ ಕೆಲವು ಬಾರಿ ಅನಿರೀಕ್ಷಿತವಾಗಿ ತಳಪಾಯ ತ್ರಾಸಿನಲ್ಲಿರುವು ದರಿಂದ ಕಟ್ಟಡ ಕುಸಿದಿದೆ. ಅದೇನೇ ಇರಲಿ ರಾಜ್ಯಾಂಗವೆಂಬ ಈ ತಳಪಾಯಕ್ಕೆ ಕಾಲಕಾಲಕ್ಕೆ ಪುಷ್ಠಿ ನೀಡಿತ್ತಾ, ಶಕ್ತಿ ಕೊಡುತ್ತಾ ಪ್ರಜಾಪ್ರಭುತ್ವದ ಕಟ್ಟಡವನ್ನು ಗಟ್ಟಾಗಿರಿಸಿರುವುದು ಪ್ರಜೆಗಳು, ಚುನಾವಣೆಗಳ ಮೂಲಕ.
ರಾಜ್ಯಾಂಗ ಮತ್ತು ಚುನಾವಣೆಗಳು ಇವೇ ಪ್ರಜಾಪ್ರಭುತ್ವದ ಉಳಿವಿಗೆ, ಬೆಳವಿಗೆ ಕಾರಣ. ಆದರೆ ಮೊನ್ನೆ ನಡೆದ3ಮಹಾನಗರ ಪಾಲಿಕೆಗಳ ಚುನಾವಣೆಗಳಲ್ಲಿ ಪ್ರಜೆಗಳ ನಿರಾಸಕ್ತಿ, ನಿಷ್ಕ್ರೀಯತೆ, ನಿಶ್ಚೇಷ್ಟತೆ ಎದ್ದು ಕುಣಿದಿದೆ. ವಿದ್ಯಾಕಾಶಿ ಎಂದು ಬಿರುದು ಪಡೆದು, ‘ವಿದ್ಯಾಂತರ ಚಾವಡಿ ರೀ ನಮ್ಮ ಧಾರವಾಡ’ ಎಂದು ಬೀಗುವ ಧಾರವಾಡಿಗರು ಎದ್ದು ಬಂದರೇ ಮತದಾನಕ್ಕೆ?53%ಮತದಾನ ಧಾರವಾಡದ್ದು. ಅದರಲ್ಲೂ ಸಾಹಿತಿಗಳು, ಬರಹಗಾರರು, ವಿದ್ಯಾವಂತರು ವಾಸಿಸಿರುವ ಪ್ರಬುದ್ಧ ಪ್ರದೇಶ ಎಂದು ಕರೆಸಿಕೊಳ್ಳುವ ಒಂದೆರೆಡು ವಾರ್ಡ್ ಗಳ ಮತದಾನ45%ಗೂ ಕಡಿಮೆ!! ಯಾವುದು ಧಾರವಾಡಿಗರನ್ನು ಮತ‘ದಾನ’ ದಿಂದ ತಡೆದದ್ದು? ಅರಿತವರೇ ಪ್ರಜಾಪ್ರಭುತ್ವದಲ್ಲಿ ಮತಚಲಾಯಿಸುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಹೋದರೆ- ಹೆಂಡಕ್ಕೆ ಹಣಕ್ಕೆ ಹುಚ್ಚಾಗಿರುವ ಕೆಲವು ಜನ ಎದ್ದು ಬಂದು ಮತ ಚಲಾಯಿಸಿ ಕಾನೂನಿನ ತಳಬುಡವೂ ಅರಿಯದ, ಜನಾಭಿವೃದ್ಧಿಯನ್ನೂ ಬಯಸದ ನಾಯಕರುಗಳನ್ನು ಗೆಲ್ಲಿಸಿ ನಿಮ್ಮ(ಅರಿತವರ) ಮೇಲೇ ಪ್ರಭುತ್ವ ಸಾಧಿಸುವಂತೆ ಮಾಡಿಬಿಡುತ್ತಾರೆ, ಇಲ್ಲವೋ ಅತಂತ್ರ ಸ್ಥಿತಿಯನ್ನು ನಿರ್ಮಿಸಿ ಸಿದ್ಧಾಂತ ಮತ್ತು ವಿಚಾರ ವಿಷಯ ಗಳಲ್ಲಿ ಉತ್ತರ ದಕ್ಷಿಣದಂತಿರುವ ಎರಡು ಪಕ್ಷಗಳ ಮೈತ್ರಿಗೆ ಕಾರಣಿಕರ್ತರಾಗುತ್ತಾರೆ.
ಹಾಗಾದಾಗ ಹಿಂದೆ ಏನಾಗೆದ ಮುಂದೆ ಏನಾಗ್ತದ ಅಂತ ನೀವು(ಅರಿತವರು)ಊಹಿಸಲಾರದಷ್ಟು ಮುಗ್ಧರಲ್ಲ. ಅಲ್ಲವೇ!!
ಇದು ಬರೀ ಧಾರವಾಡದ್ದಷ್ಟೇ ಕಥೆ ಅಲ್ಲ. ಕಲಬುರ್ಗಿ, ಬೆಳಗಾವಿಯಲ್ಲೂ ಇದೇ ರಾಗ ಇದೇ ಹಾಡು. ಕಲಬುರ್ಗಿಯಲ್ಲಿ 58% ಮತದಾನವಾದರೆ ಬಿಜೆಪಿ ಗೆದ್ದು ಬೀಗಿರುವ ಬೆಳಗಾವಿ ಇನ್ನೂ ಹೀನ ಸ್ಥಿತಿಗಿಳಿದ ಕಾರಣ50%ಮತದಾನವಾಗಿದೆ.
ಪ್ರಜಾಪ್ರಭುತ್ವದ ಶಕ್ತಿಯಿರುವುದೇ ಚುನಾವಣೆಗಳಲ್ಲಿ. ಇಲ್ಲೇ ಪ್ರಜೆಗಳು ತಮ್ಮ ನಿಷ್ಕ್ರೀಯತೆಯನ್ನು ಪ್ರದರ್ಶಿಸಿದರೆ ರಾಜ್ಯ, ದೇಶ, ನಗರಗಳು ಸುದಿನಗಳನ್ನುಎಂದು ಕಂಡಾವು? ಮತದಾನ ನಮ್ಮ ಜವಾಬ್ದಾರಿ. ಮತದಾನ ಮಾಡುವುದು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಧರ್ಮ. ಧರ್ಮಬಿಟ್ಟ ಮನುಷ್ಯ ಏನಾಗುತ್ತಾನೆ ಎನ್ನುವುದಕ್ಕೆ ಲೋಕಸಾಕ್ಷಿಯಾಗಿ ನಿಂತಿರುವ ದುರ್ಯೋಧನ ನಮ್ಮ ಮುಂದಿದ್ದಾನೆ. ಮತದಾನ ಮಾಡದೆ ಇರುವುದು ವ್ಯವಸ್ಥೆಯ ವಿರುದ್ಧ ಪ್ರತಿಭಟಿಸುವ ಒಂದು ವಿಧಾನ ಎಂದು ಯಾರಾದರೂ ತಿಳಿದಿದ್ದರೆ, ಬದಲಾಯಿಸಿಕೊಳ್ಳಿ ನಿಮ್ಮ ಆಲೋಚನೆಯನ್ನು.      .     ಎಂಬಮಾತನ್ನು ನೆನಪಿಸಿಕೊಳ್ಳಿ.