ಈ ಬಾರಿ ರೋಗ ನಿರೋಧಕ ಅರಿಶಿಣ ಗಣಪತಿ
ಪ್ರಚಲಿತ
ಶ್ರೀನಿವಾಸುಲು, ಐ.ಎಫ್.ಎಸ್
ನಮ್ಮ ಹಿರಿಯರು ಪರಂಪರಾನುಗತವಾಗಿ ಆಚರಿಸಿಕೊಂಡು ಬಂದಿರುವ ಹಬ್ಬ ಹರಿದಿನಗಳು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸಮಾಜದಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳನ್ನುವೃದ್ಧಿಸುವುದಷ್ಟೇ ಅಲ್ಲದೆ, ಪ್ರತಿಯೊಂದು ಹಬ್ಬಗಳಲ್ಲಿ ಬಳಸುವ ಪೂಜಾ ದ್ರವ್ಯಗಳು, ವಸ್ತುಗಳು, ಪುಷ್ಪ ಹಾಗೂ ಪತ್ರೆಗಳಲ್ಲಿ ಮಾತ್ರವಲ್ಲದೆ, ಭಕ್ಷಿಸುವ ಆಹಾರದಲ್ಲಿ ಹಲವಾರು ಉಪಯುಕ್ತತೆಗಳು ಅಡಗಿವೆ.
ಪರಿಸರ ಸಂರಕ್ಷಣೆಯ ಹಾಗೂ ಪ್ರಾಣಿ, ಪಕ್ಷಿಗಳ ರಕ್ಷಣೆಯೂ ಸೇರಿವೆ. ದೇವರನ್ನು ಪೂಜಿಸುವ ಕ್ರಿಯೆ ಪರಿಸರಕ್ಕೆ ಪೂರಕವಾಗಿರುವುದೇ ಹೊರತು ಇದರಿಂದಪರಿಸರಕ್ಕೆ ಹಾನಿಯಾಗುವ ಅಂಶಗಳು ಒಳಗೊಂಡಿಲ್ಲ ಎಂಬುದು ಗಮನಾರ್ಹವಾಗಿದೆ. ದೇವರ ಆರಾಧನೆ ಯಲ್ಲಿ ಬಳಸುವ ಅರರಿ, ಗೋಮೂತ್ರ, ಸಗಣಿ, ಬೇವು, ತುಳಸಿ, ಮುಂತಾದವು ನಮ್ಮ ಮನಸ್ಸು ಮತ್ತು ದೇಹವನ್ನು ಶುಚಿಗೊಳಿಸುವಂತಹ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಪೂಜಾದ್ರವ್ಯಗಳಾದ ಅರಿಶಿಣ, ಗಂಧ, ಕರ್ಪೂರ, ಸಾಮ್ರಾಣಿ ಮುಂತಾದವುಗಳುಕೀಟನಾಶಕಗಳೂ ಹೌದು.
ಅಡುಗೆಯಲ್ಲಿ ನಾವು ಬಳಸುವ ಶುಂಠಿ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಧನಿಯಾ, ಜೀರಿಗೆ, ಮೆಣಸು, ಮೆಂತ್ಯ ಮುಂತಾದ ಪರಿಕರಗಳು ಹಲವಾರು ಚಿಕಿತ್ಸಕ ಗುಣಗಳನ್ನು ಹೊಂದಿದೆ. ಇವುಗಳಲ್ಲಿ ಅರಿಶಿಣ ವೈದ್ಯಕೀಯ ವಾಗಿ ಬಹಳಷ್ಟು ಗುಣಗಳನ್ನು ಹೊಂದಿದ್ದು, ಪ್ರಬಲ ರೋಗನಿರೋಧಕವಾಗಿದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಬಳಸುವ ಇನ್ನೂ ಹಲವು ಸಂಬಾರ ಜಿನಿಸು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಹಾಗೆಯೇ ತರಕಾರಿಗಳಲ್ಲೂ ಉತ್ತಮಔಷಽಯಗುಣಗಳಿವೆ. ನಮ್ಮ ಪರಿಸರದ ಸಕಲ ಜೀವರಾಶಿ ಸೃಷ್ಟಿಗೆ ಪಂಚ ತಗಳೇ ಕಾರಣ ಎಂದು ಹೇಳಲಾಗಿದೆ. ಹಿಂದೂ ಧರ್ಮದ ಆಚರಣೆಗಳಲ್ಲಿನ ಪಂಚಭೂತಗಳ ಪೂಜೆಯು ಪರಿಸರ ಸಂರಕ್ಷಣೆಯ ಪ್ರತಿರೂಪವಾಗಿದೆ.
ನಾವು ಕುಡಿಯುವ ನೀರು, ಸೇವಿಸುವ ಗಾಳಿ ಹಾಗು ಭೂಮಿಯನ್ನು ಮಾಲಿನ್ಯ ಮಾಡುವುದು ದೇವರಿಗೆ ಮಾಡುವ ಅಪಚಾರವಾಗುತ್ತದೆ ಎಂದು ಬಣ್ಣಿಸಲಾಗಿದೆ. ಗಣಪತಿ ಹಬ್ಬದಲ್ಲಿ ಬಳಸುವ ಗರಿಕೆ, ಇಪ್ಪತ್ತೊಂದು ವಿಧದ ಪತ್ರೆಗಳು, ಹಬ್ಬದಲ್ಲಿ ವಿಶೇಷವಾಗಿ ನೈವೇದ್ಯ ಕ್ಕೆಂದು ಮಾಡುವ ಕಡುಬಿಗೆ ಬಳಸುವ ಎಳ್ಳು ಎಲ್ಲವೂ ಔಷಧಯುಕ್ತವಾಗಿವೆ. ಮನುಷ್ಯನ ಜೀವ ಉಳಿಸುವಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಈ ನೈಸರ್ಗಿಕ ಉತ್ಪನ್ನ ಗಳು ಅನುಕೂಲಕರವಾಗಿವೆ. ನಮ್ಮ ಹಬ್ಬ ಹರಿದಿನಗಳ ವೈಶಿಷ್ಟ್ಯವೇ ಹಾಗಿದೆ. ಸಂಕ್ರಾಂತಿಗೆ ಪರಸ್ಪರ ವಿನಿಮಯಮಾಡುವ ಎಳ್ಳು ಬೆಲ್ಲ, ಸುಖದುಃಖಗಳ ಸಂಕೇತವಾಗಿ ಯುಗಾದಿಗೆ ಭಕ್ಷಿಸುವ ಬೇವು ಬೆಲ್ಲ, ಹಲವಾರು ಹಬ್ಬಗಳಲ್ಲಿ ಬಳಸುವ ವೈವಿಧ್ಯಮಯ ತರಕಾರಿ, ಹಣ್ಣು ಹಂಪಲು ಎಲ್ಲವೂ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿವೆ.
2019ರ ವರ್ಷ ಮುಗಿಯುತ್ತಿರುವಾಗ ಇಡೀ ವಿಶ್ವ ಕಾರ್ಮೋಡದ ನೆರಳಿಗೆ ಸಿಲುಕಿ ಶಾಪಗ್ರಸ್ತವಾಯಿತು. ವಷಾಂತ್ಯದಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್-19ವೈರಾಣು ಕ್ರಮೇಣ ಇಡೀ ವಿಶ್ವಕ್ಕೆ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿತು. ಈ ಹೊಸ ರೋಗಾಣು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಪಾರ ಸಾವು ನೋವು ತರುವ ಮೂಲಕ ಜನರ ಬದುಕನ್ನು ತಲ್ಲಣಗೊಳಿಸಿತು.2020ರ ಯುಗಾದಿಯ ಆದಿಯಿಂದ ನಮ್ಮ ದೇಶದ ಜನತೆಯಲ್ಲಿ ಆತಂಕದವಾತಾವರಣ ಸೃಷ್ಟಿಸಿತು. ಭಾರತ ದೇಶದ ಇಚ್ಛಾಶಕ್ತಿ ಹಾಗೂ ಬದ್ಧತೆಯ ಪರಿಣಾಮವಾಗಿ ಕೋವಿಡ್ ಚುಚ್ಚುಮದ್ದನ್ನು ತಯಾರಿಸಿ, ಇಡೀ ದೇಶದ ಜನರಿಗೆನೀಡುವ ಆಂದೋಲನ ಯಶಸ್ವಿಯಾಗಿ ನಡೆಯುತ್ತಿದೆಯಾದರೂ, ಕೋವಿಡ್ ಆತಂಕದಿಂದ ನಾವು ದೂರಾಗಿಲ್ಲ.
ಈ ವರ್ಷಎರಡನೆಯ ಅಲೆಯನ್ನು ಎದುರಿಸಿ, ಸಾವು ನೋವುಗಳನ್ನು ಎದುರಿಸಿದ ಭಾರತಕ್ಕೆ ಮೂರನೆಯ ಅಲೆಯ ಭೀತಿಯೂ ಕಾಡುತ್ತಿದೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ವಿಘ್ನನಿವಾರಕ ಗಣಪತಿ ಹಬ್ಬ ಮರಳಿ ಬಂದಿದೆ. ಈ ಬಾರಿ ಗಣೇಶ ಚೌತಿಯನ್ನು ಪರಿಸರ ಸ್ನೇಹಿಯಾಗಿ, ಕೋವಿಡ್-19 ಸೋಂಕಿನ ವಿರುದ್ಧ ಹೋರಾಟ ಮಾಡುವಂತೆ ವಿಭಿನ್ನವಾಗಿ ಆಚರಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಅರಿಶಿಣ ಭಾರತೀಯ ಸಂಸ್ಕೃತಿ ಜೊತೆಗೆ ಬಹು ಹಿಂದಿನಿಂದಲೂ ಗುರುತಿಸಿ ಕೊಂಡು ಬಂದಿರುವ ವಿಶೇಷ ದ್ರವ್ಯ. ನಮ್ಮ ಪೂಜೆ ಪುನಸ್ಕಾರಗಳಲ್ಲಿ, ಹೆಣ್ಣು ಮಕ್ಕಳ ಅಲಂಕಾರದಲ್ಲಿ ಅರಿಶಿಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಪ್ರಾಚೀನ ಕಾಲ ದಿಂದಲೂ ಅರಿಶಿಣವನ್ನು ಕೇವಲ ಹುಡಿಯಾಗಿ ಕಂಡಿದ್ದಿಲ್ಲ. ಅದೊಂದು ಮಂಗಳಕರ ಸಂಕೇತ. ಅರಿಶಿಣ ಇಷ್ಟು ಪ್ರಾಮುಖ್ಯತೆ ಪಡೆದಿರಲು ಅದರಲ್ಲಿರುವ ರೋಗನಿರೋಧಕ ಶಕ್ತಿಯ ಬಗ್ಗೆ ನಮ್ಮ ಪೂರ್ವಿಕರು ಅರಿತುಕೊಂಡಿದ್ದರು.
ಇಂತಹ ಬಹುಪಯೋಗಿ ಅರಿಶಿಣ ಈ ಬಾರಿ ಗಣೇಶನ ರೂಪದಲ್ಲಿ ಮನೆಮನೆಗೂ ಆಗಮಿಸಬೇಕೆಂಬ ಸದಾಶಯವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊತ್ತಿದ್ದು, ಈ ವರ್ಷ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ. ರಾಜ್ಯದಲ್ಲಿ ಈ ಬಾರಿ ಗಣಪತಿ ಹಬ್ಬಕ್ಕೆ 10 ಲಕ್ಷ ಅರಿಶಿನ ಗಣಪತಿ ತಯಾರು ಮಾಡುವ ಮೂಲಕ ವಿಶ್ವ ದಾಖಲೆ ಸೃಷ್ಟಿಸುವ ಸಂಕಲ್ಪ ಹೊತ್ತು ಮಂಡಳಿ ಅಭಿಯಾನವನ್ನು ಹಮ್ಮಿಕೊಂಡಿದೆ. ಪರಿಸರಸ್ನೇಹಿ ಹಾಗೂ ಸಂಸ್ಕೃತಿಗೆ ಹತ್ತಿರವಾದ ಅರಿಶಿಣ ಗಣಪತಿಯನ್ನು ಮನೆ ಮನೆಯಲ್ಲಿ ಪೂಜಿಸುವ ಮೂಲಕ ಪರಿಸರವನ್ನೂ ಉಳಿಸಿ, ಕೋವಿಡ್ ಸಮಯದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೊಂದಬಹುದೆಂಬ ಆಶಯದಿಂದ ಅರಿಶಿನ ಗಣೇಶನ ಅಭಿಯಾನವನ್ನು ರಾಜ್ಯ ಪರಿಸರ ಇಲಾಖೆ ಪರಿಚಯಿಸುತ್ತಿದೆ.
ಮನೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ರಚನಾತ್ಮಕವಾಗಿ ಹಾಗೂ ಭಾವನಾತ್ಮಕವಾಗಿ ನಮ್ಮ ಹಬ್ಬಗಳ ಬಗ್ಗೆ ಮತ್ತಷ್ಟು ಬಾಂಧವ್ಯ ಬೆಳೆಸಿಕೊಳ್ಳಲುಇದು ಅವಕಾಶವನ್ನೂ ನೀಡಬಲ್ಲದು. ಹಬ್ಬದ ದಿನ ತಮ್ಮ ಮನೆಯ ಅರಿಶಿಣ ಗಣಪತಿಯ ಚಿತ್ರವನ್ನು ಮಂಡಳಿಗೆ ಕಳುಹಿಸಿಕೊಡಬೇಕು. ....  ತಾಣಕ್ಕೆ ಹೋಗಿ ವಿವರಗಳನ್ನು ಪಡೆಯಬಹದು. ವಾಟ್ಸಾಪ್ ಮೂಲಕವೂ ಅರಿಶಿಣ ಗಣಪತಿ ಬಿಂಬಗಳನ್ನು ಮಂಡಳಿಗೆ ಕಳುಹಿಸ ಬಹುದು. ಆಕರ್ಷಕವಾಗಿ ಅರಿಶಿಣ ಗಣಪತಿ ರೂಪಿಸುವವರಿಗೆ ಮಂಡಳಿ ಬಹುಮಾನ ನೀಡಲಿದೆ. ೧೦ ಲಕ್ಷ ಅರಿಶಿಣ ಗಣಪತಿ ರೂಪಿಸುವ ಮಂಡಳಿಯ ಈ ಪರಿಸರ ಜಾಗೃತಿ ಅಭಿಯಾನಕ್ಕೆ ರಾಜ್ಯದ ಪರಿಸರ ಪ್ರೇಮಿಗಳೆಲ್ಲರೂ ಕೈ ಜೋಡಿಸುವ ಮೂಲಕ ಮಂಡಳಿಯ ಸಂಕಲ್ಪವನ್ನು ಯಶಸ್ವಿಗೊಳಿಸಲು ಕೋರಿದೆ.ಪುರಾತನ ಕಾಲದಿಂದಲೂ ಅರಿಶಿಣವನ್ನು ಮನೆಮದ್ದಾಗಿ, ಅಡುಗೆಗೆ ಹಾಗೂ ರೋಗನಿರೋಧಕವಾಗಿ ಬಳಸಲಾಗುತ್ತಿದೆ.
ಅರಿಶಿನ ಗಣೇಶ ಪರಿಕಲ್ಪನೆಯನ್ನು ಕಳೆದ ವರ್ಷವೇ ಮಾಡಲಾಗಿದ್ದು, ಇದು ಪರಿಸರ ರಕ್ಷಣೆಗೆ ಸಹಕಾರಿಯಾಗಲಿದೆ. ಹಿಂದೆಯೂ ಅರಿಶಿಣ ಗೌರಿ, ಸಗಣಿಯಪಿಳ್ಳಾರಾಯನನ್ನು ಪೂಜಿಸುವ ಪರಿಪಾಠವಿತ್ತು. ಗೋಧಿಹಿಟ್ಟು, ಮೈದಾಹಿಟ್ಟು, ರಾಗಿಹಿಟ್ಟು ಅಥವಾ ಅಕ್ಕಿಹಿಟ್ಟಿಗೆ ಅರಿಶಿಣ ಸೇರಿಸಿ ಚಿಕ್ಕ ಗಣಪತಿ ಮೂರ್ತಿಯನ್ನು ತಯಾರಿಸಿಕೊಳ್ಳಬಹುದು. ಮೊದಲು ಅರಿಶಿಣ ಹಾಗೂ ಹಿಟ್ಟಿಗೆ ನೀರು ಮಿಶ್ರ ಮಾಡಿ ಹದವಾಗಿ ಕಲಿಸಿಕೊಳ್ಳಬೇಕು. ಕಲಿಸಿ ಹದ ಮಾಡಿದ ಹಿಟ್ಟಿಗೆ ಗಣೇಶನ ಆಕಾರ ನೀಡಬೇಕು. ಸೊಂಡಿಲನ್ನು ಮಾಡಿದ ಬಳಿಕ ಮೆಣಸಿನ ಕಾಳನ್ನು ಬಳಸಿ ಮೂರ್ತಿಗೆ ಕಣ್ಣು ಮಾಡಬಹುದು. ಬಳಿಕ ಹೂವಿನ ಅಲಂಕಾರ ಮಾಡಿ ಮೂರ್ತಿ ಪ್ರತಿಷ್ಟಾಪಿಸ ಬೇಕು. ಪ್ಲಾಸ್ಟಿಕ್ ಹೂವುಗಳ ಅಲಂಕಾರ ಕಂಡಿತಾ ಮಾಡಬಾರದು. ಅರಿ ಶಿಣ ಗಣಪತಿ ತಯಾರಿಸುವ ಪೂರ್ಣ ವಿಧಾನವನ್ನು ಮಂಡಳಿಯ ವೆಬ್ ಸೈಟ್‌ನಲ್ಲಿ ತೋರಿಸಿಕೊಡಲಾಗಿದೆ.
ಪಿ.ಒ.ಪಿ ಮತ್ತು ಬಣ್ಣದ ಗಣೇಶನಮೂರ್ತಿ ಬಳಕೆಯಿಂದ ಪರಿಸರಕ್ಕೆ ಅಪಾರ ಹಾನಿಯುಂಟಾಗುತ್ತದೆ. ಇದು ಪ್ರಕೃತಿಗೆ ಎಸಗುವ ದ್ರೋಹ ಮತ್ತು ಅಪರಾಧವೂ ಆಗುತ್ತದೆ. ನೀರಿನಲ್ಲಿ ಕರಗದ, ಮಣ್ಣಿನಲ್ಲಿ ಮಣ್ಣಾಗದ ಪಿಒಪಿ ಪರಿಸರವನ್ನು ಹಾಳುಗೆ ಡುಹುತ್ತದೆ. ಪಿಒಪಿ ಗಣೇಶ ಮೂರ್ತಿಗಳಲ್ಲಿ ಕ್ಯಾಲ್ಸಿಯಂ ಸಲೇಟ್ ಅಂಶವಿರುತ್ತದೆ. ಅದಲ್ಲದೆ ವಿಗ್ರಹ ತಯಾರಿಸಲು ಬಳಸುವ ರಾಸಾಯನಿಕ ಬಣ್ಣಗಳು, ಪಾದರಸ, ಕ್ರೋಮಿಯಂ, ಸೀಸದಂಥ ಭಾರ ಲೋಹದ ಅಂಶಗಳು ಪಿಒಪಿ ಮೂರ್ತಿಗಳಲ್ಲಿ ಇರುತ್ತವೆ. ಈ ಅಂಶ ಹೊಂದಿರುವ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಿದಾಗ ಕ್ಯಾಲ್ಸಿಯಂ ಸಲ್ಫೇಟ್ ಮತ್ತು ಭಾರದ ಲೋಹಗಳು ನೀರಿನ ತಳವನ್ನು ಸೇರುತ್ತವೆ. ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದ ನೀರಿನಲ್ಲಿ ಕಬ್ಬಿಣದ ಅಂಶ 10 ಪಟ್ಟು ಮತ್ತು ತಾಮ್ರದ ಅಂಶವೂ 20 ಪಟ್ಟು ಜಾಸ್ತಿಯಾಗುತ್ತದೆ ಹೀಗಾಗಿಯೇ ನೀರು ಕಲುಷಿತಗೊಂಡು ನೀರಿನಲ್ಲಿ ಇರುವ ಜಲಚರಗಳಿಗೆ ಅಪಾಯ ಉಂಟಾಗುತ್ತದೆ.
ಹಬ್ಬದ ಸಮಯದಲ್ಲಿ ಹಚ್ಚುವ ಪಟಾಕಿಗಳಿಂದ ಬರುವ ಇಂಗಾಲದ ಡೈ ಆಕ್ಸೈಡ್ ಹಾಗೂ ಇತರ ವಿಷಾನಿಲಗಳು ಗಾಳಿಗೆ ಸೇರಿ ವಾಯುಮಾಲಿನ್ಯ ಉಂಟು ಮಾಡುತ್ತವೆ. ಪ್ರಕೃತಿಯಲ್ಲಿ ನಾವು ನೈಸರ್ಗಿಕವಾದ ಮಣ್ಣನ್ನು ಅಲಕ್ಷ ಮಾಡುವಂತಿಲ್ಲ. ಒಂದು ಇಂಚು ಮಣ್ಣು ರೂಪುಗೊಳ್ಳಲು ಸುಮಾರು ಒಂದು ಸಾವಿರ ವರ್ಷ ಬೇಕಾಗುತ್ತದೆ. ಇಂತಹ ಮಹತ್ವ ಯುತ ಮೃತ್ತಿಕೆಯನ್ನು ಗಣೇಶನ ವಿಗ್ರಹಕ್ಕೆ ಬಳಕೆ ಮಾಡಿದರೆ ಫಲವತ್ತಾದ ಮಣ್ಣನ್ನು ಪ್ರಕೃತಿ ಕಳೆದು ಕೊಳ್ಳುತ್ತದೆ. ಗಣಪತಿ ಪ್ರತಿಮೆ ಮಾಡಲು ಬಳಸುವ ಜೇಡಿಮಣ್ಣು ನಮ್ಮ ಕೃಷಿಗೆ ಹಾಗೂ ಜೀವರಾಶಿಗೆ ಬಹಳ ಮುಖ್ಯ.
ಪೂಜೆಯ ನಂತರ ಗಣೇಶನ ಮೂರ್ತಿಗಳನ್ನು ಬಾವಿ, ಕೆರೆ, ನದಿಗಳಲ್ಲಿ ವಿಸರ್ಜನೆ ಮಾಡಬಾರದು, ಇದರಿಂದ ಅಂತರ್ಜಲ ಹಾಗೂ ಕುಡಿಯುವ ನೀರಿನ ಸೆಲೆ ಬತ್ತಿ ಹೋಗುವ ಸಾಧ್ಯತೆಗಳಿರುತ್ತವೆ. ಬದಲಿಗೆ ಬಕೆಟ್‌ನಲ್ಲಿ ಅಥವಾ ನಗರ ಪಾಲಿಕೆ ಅಥವಾ ಪುರಸಭೆ ನಿಗದಿಪಡಿಸುವ ಸಂಚಾರಿ ವಿಸರ್ಜನಾ ವಾಹನದಲ್ಲಿ ಬಿಡಬೇಕು. ಮಹಾ ನಗರ ಪಾಲಿಕೆ ಸೂಚಿತ ಕೆರೆಗಳಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ತೆಗೆಯಬೇಕು. ಪ್ಲಾಸ್ಟಿಕ್ ಹಾರ ಬಳಸಲೇಬಾರದು, ಬಳಸಿದ್ದಲ್ಲಿ ಅವುಗಳನ್ನು ನೀರಿಗೆ ಹಾಕುವದು ಸ್ಸಾಹಸಕ್ಕೆ ಕೈ ಹಾಕಲೇಬೇಡಿ.
ಗಣಪತಿ ಹಬ್ಬದಲ್ಲಿ ರಸ್ತೆ, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಎಸೆಯಬಾರದು. ನಗರ ಪಾಲಿಕಾ ಸಂಸ್ಥೆಗಳು ನದಿಗಳ ದಡದಲ್ಲಿ ಮಣ್ಣಿನ ತಡೆಗೋಡೆಗಳನ್ನು ಹಾಕಿ ಕೃತಕ ಕೊಳಗಳನ್ನು ನಿರ್ಮಿಸ ಬೇಕು. ವಿಸರ್ಜನೆಗೆ ಮೊದಲು ಕೊಳದ ತಳದಲ್ಲಿ ತೆಗೆಯ ಬಹುದಾದ ಸಿಂಥೆಟಿಕ್ ಹಾಳೆಯನ್ನು ಹಾಕಬೇಕು. ಮೂರ್ತಿಗಳ ವಿಸರ್ಜನೆ ಪೂರ್ಣಗೊಂಡ ೪೮ ಗಂಟೆಗಳ ಒಳಗೆ ವಿಸರ್ಜನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯದ ಸಮೇತವಾಗಿ ಸಿಂಥೆಟಿಕ್ ಹಾಳೆಯನ್ನು ಹೊರ ತಗೆಯಬೇಕು. ಸಮುದ್ರದಲ್ಲಿ ಮೂರ್ತಿಗಳ ವಿಸರ್ಜನೆ ಮಾಡುವುದಾದರೆ ಎತ್ತರದ ಅಲೆಗಳು ಮತ್ತು ಸಣ್ಣ ಅಲೆಗಳ ನಡುವಿನ ಸ್ಥಳವನ್ನು ಆಯ್ಕೆ ಮಾಡಿಕೊಳ್ಳ ಬೇಕು.
ಸ್ಥಳದ ಆಯ್ಕೆಗೆ ಪೂರ್ವಭಾವಿಯಾಗಿ ಕಡಿಮೆ ಅಲೆಗಳು ಮತ್ತು ಎತ್ತರದ ಅಲೆಗಳನ್ನು ಗುರುತಿಸಿಕೊಳ್ಳ ಬೇಕು. ಸಮುದ್ರದಲ್ಲಿ ವಿಸರ್ಜನಾ ಕಾರ್ಯದ ಮೇಲ್ವಿ ಚಾರಣೆಗೆ ಯಂತ್ರ ಚಾಲಿತ ಬೋಟ್‌ಗಳು, ರಕ್ಷಣಾ ಸಿಬ್ಬಂದಿ, ಗೃಹ ರಕ್ಷಕ ದಳ ಮುಂತಾದವರನ್ನು ಸಾಕಷ್ಟು ಪ್ರಮಾಣದ ಸುರಕ್ಷಿತ ಸಾಮಾಗ್ರಿಗಳೊಂದಿಗೆ ನಿಯೋಜಿಸಬೇಕು ನಮ್ಮ ಹಬ್ಬ ಹರಿದಿನಗಳ ಆಚರಣೆಯಲ್ಲಿ ಕ್ರಮೇಣ ಬಹಳಷ್ಟು ಸುಧಾರಣೆಗಳಾಗಿರುವುದನ್ನು ಗಮನಿಸಬಹುದು. ಗಣೇಶನ ಹಬ್ಬ ನಮ್ಮ ಸಂಸ್ಕೃತಿಯ ಮಹತ್ವದ ಹಬ್ಬವಾಗಿದ್ದು. ಸ್ವಾತಂತ್ರ ಸಂಗ್ರಾಮದಲ್ಲಿ ಬಾಲ ಗಂಗಾಧರ ತಿಲಕರು ನಮ್ಮಲ್ಲಿನ ರಾಷ್ಟ್ರೀಯ ಅಭಿಮಾನ ವನ್ನು ಜಾಗೃತಗೊಳಿಸಲು ಸಾಮೂಹಿಕ ಗಣಪತಿ ಉತ್ಸವಗಳ ಪದ್ಧತಿಯನ್ನು ಬಳಕೆಗೆ ತಂದದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ನೂರು ವರ್ಷದ ಹಿಂದೆ ದೇಶಕ್ಕೆ ಸ್ವಾತಂತ್ರ್ಯ ಪಡೆಯುವ ವಿಷಯವೇ ಅಂದಿನ ಆದ್ಯತೆಯಾಗಿತ್ತು. ಆದರೆ ಇಂದು ಪರಿಸರ ಮಾಲಿನ್ಯ ತಡೆ ಮತ್ತು ಪರಿಸರ ಅಸಮತೋಲನದಿಂದ ಜಗತ್ತಿನ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. 2040ಕ್ಕಿಂತ ಮೊದಲೇಜಗತ್ತಿನ ಸರಾಸರಿ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ನಷ್ಟು ಏರಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಬದಲಾವಣೆ ಕುರಿತ ಅಂತರ್‌ಸರಕಾರೀ ಸಮಿತಿ(ಐಪಿಸಿಸಿ) ಈಗಾಗಲೆ ತನ್ನ ವರದಿಯಲ್ಲಿ ನೀಡಿದೆ.
ಭೂಮಿಯ ಮೇಲೆ ಎಲ್ಲ ಕಡೆಯೂ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆ ಯಾದರೆ, ಪ್ರಕೃತಿಯಲ್ಲಿ ಗಣನೀಯ ಬದಲಾವಣೆ, ಹಿಮಪ್ರದೇಶಗಳು ಹೆಚ್ಚು ಪ್ರಮಾಣದಲ್ಲಿ ಕರಗಿನದಿ ಗಳಲ್ಲಿ ಪ್ರವಾಹ, ಸಮುದ್ರ ಮಟ್ಟದಲ್ಲಿಏರಿಕೆ, ಕರಾವಳಿ ಪ್ರದೇಶ ಹಾಗೂ ತಗ್ಗಿನಲ್ಲಿರುವ ದ್ವೀಪಗಳ ಮುಳುಗಡೆ, ಮಳೆ ಹಾಗೂಬಿಸಿಲಿನ ಚಕ್ರದಲ್ಲಿ ಏರುಪೇರು, ಕೃಷಿಗೆ ಭಾರಿ ಹಾನಿ, ಆಹಾರ ಉತ್ಪದನೆಯಲ್ಲಿ ಅಲ್ಲೋಲ ಕಲ್ಲೋಲ ಹಾಗೂ ಬರ, ಅಕಾಲಿಕ ಚಂಡಮಾರುತ, ಜೀವಿ ಲೋಕದಲ್ಲಿ ವ್ಯತ್ಯಾಸವುಂಟಾಗಿ ಸಾಂಕ್ರಾಮಿಕಗಳ ಹೆಚ್ಚಳ, ಕೃತಕ ಪ್ರವಾಹಗಳಿಂದ ವಸತಿ ಪ್ರದೇಶಗಳ ಮುಳುಗಡೆ, ಕಾಡ್ಗಿಚ್ಚುಗಳ ಪ್ರಮಾಣ ಹೆಚ್ಚಳ ಮುಂತಾದ ಅನಾಹುತಗಳು ಸಂಭವಿಸಬಹುದೆಂದು ನಿರೀಕ್ಷಿಸಲಾಗಿದೆ.
ಇಂತಹ ಸಂದಿಗ್ಧ ಕಾಲದಲ್ಲಿ ಮನೆ ಮನೆಗಳಲ್ಲಿ ರೋಗನಿರೋಧಕ ಶಕ್ತಿಯುಳ್ಳ ಅರಿಶಿಣದಿಂದ ಮಾಡಿದ ಪುಟ್ಟ ಗಣೇಶ ವಿಗ್ರಹಗಳನ್ನು ಪೂಜೆ ಮಾಡಿದಲ್ಲಿ ನಮ್ಮಹಾಗೂ ಕುಟುಂಬದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ಹೊಸತನವನ್ನು ನಾವು ತಂದುಕೊಳ್ಳಬೇಕಾಗಿದೆ. ಮನೆಯಲ್ಲಿ ಗಣೇಶನ ವಿಗ್ರಹ ಮಾಡಿ ಮನೆಯಲ್ಲೇ ವಿಸರ್ಜಸಿದರೆ ಹೊರಗಿನ ಸಂಪರ್ಕ ಹೂಂದುವ ಅವಶ್ಯಕತೆ ಬರುವುದಿಲ್ಲ ಹಾಗೂ ಸಾಮಾಜಿಕ ಅಂತರ ಕಾಪಾಡಿ ಕೊಂಡಂತಾಗುತ್ತದೆ. ವಿಸರ್ಜಿತ ನೀರನ್ನು ಗಿಡಗಳಿಗೆ ಹಾಕಿದ್ದಲ್ಲಿ ಕ್ರಿಮಿನಾಶಕವಾಗಿಯೂ ಬಳಕೆಗೆ ಬರುತ್ತದೆ.