ನಾನೇಕೆ ಶಿಕ್ಷಕಿಯಾದೆ…..?
ತನ್ನಿಮಿತ್ತ
ವಿದ್ಯಾ ಶಿವರಾಮ್
ನಾನು ಆಗಷ್ಟೇ ಪ್ರೌಢಶಾಲೆಗೆ ಕಾಲಿಟ್ಟಿದ್ದೆ. ಯಾರಾದರೂ ಮುಂದೇನಾಗಬೇಕೆಂದು ಬಯಸಿದ್ದೀಯ? ಎಂದು ಕೇಳಿದರೆ ಪೊಲೀಸ್ ಅಥವಾ ವಕೀಲೆ ಎನ್ನುತ್ತಿದ್ದೆ. ಆದರೆ ಮುಂದೇನಾಗಬೇಕು ಎಂಬ ಸ್ಪಷ್ಟ ನಿಲುವು ನನಗೆ ಮೂಡಿದ್ದು ೯ನೇ ತರಗತಿಗೆ ಕಾಲಿಟ್ಟಾಗ. ಆಗ ನನಗೆ ಕನ್ನಡ ಪಾಠ ಮಾಡುತ್ತಿದ್ದವರು ಗೋವಿಂದ್ರಾಯ್ ಸರ್. ಅಹ್!
ಆತ ಪಾಠ ಮಾಡುತ್ತಿದ್ದ ಪರಿಯನ್ನು ಪದಗಳಲ್ಲಿ ಬಣ್ಣಿಸಲು ಕಷ್ಟಸಾಧ್ಯ. ಪಠ್ಯಪುಸ್ತಕವನ್ನು ಹಿಡಿದು ಗೋವಿಂದ್ ಸರ್ ವಿವರಿಸ ತೊಡಗಿದರೆಂದರೆ ಅದನ್ನು ಕೇಳುತ್ತಾ ಕೇಳುತ್ತಾ ಬೇರೆಯದೇ ಲೋಕದಲ್ಲಿ ತೇಲಾಡಿದ ಅನುಭವವಾಗುತ್ತಿತ್ತು. ಪ್ರತಿನಿತ್ಯ ಕನ್ನಡ ತರಗತಿಗಾಗಿ ನಾನು ಎದುರು ನೋಡುತ್ತಿದ್ದೆ. ಅವರ ಪಾಠನನ್ನ ಮೇಲೆ ಅದೆಷ್ಟು ಗಾಢವಾದ ಪ್ರಭಾವ ಬೀರಿತ್ತೆಂದರೆ ನಾನು ಮುಂದೆ ಕನ್ನಡ ಶಿಕ್ಷಕಿಯಾಗಬೇಕೆಂಬ ಕನಸು ಅದಾಗಲೇ ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿತ್ತು. ದ್ವಿತೀಯ ಪಿ.ಯು.ಸಿ ಮುಗಿಸಿದ ಮೇಲೆ ಮರು ಯೋಚನೆ ಮಾಡದೆ ಶಿಕ್ಷಕ ತರಬೇತಿಯನ್ನು ಸೇರಿಕೊಂಡೆ ಅಲ್ಲಿಯೂ ನನಗೆ ಮತ್ತೊಬ್ಬ ಮಹಾನ್ ವ್ಯಕ್ತಿ ಗುರುಗಳಾಗಿ ಸಿಕ್ಕರು. ಅವರೇ ಪಿ.ಐ ಹೆಗಡೆ ಸರ್.
ಇಂಗ್ಲೀಷ್ ಉಪನ್ಯಾಸಕರಾಗಿದ್ದ ಅವರು ಅರ್ಧ ಗಂಟೆ ಇಂಗ್ಲೀಷ್ ಬೋಧನೆ ಮಾಡಿದರೆ ಉಳಿದರ್ಧ ಘಂಟೆ ಕನ್ನಡ ಸಾಹಿತ್ಯದ ಬಗ್ಗೆ , ತಾವು ಓದಿದ ಉತ್ತಮ ಪುಸ್ತಕಗಳ ಬಗ್ಗೆ, ಶಿಕ್ಷಕರಾದವರು ಹೇಗಿರಬೇಕೆಂಬ ಬಗ್ಗೆ ವಿವರಿಸುತ್ತಿದ್ದರು. ತರಗತಿ ಮುಗಿದ ಮೇಲೂ ಬಿಡುವಿದ್ದಾಗಲೆಲ್ಲಾ ಅವರೊಂದಿಗೆ ಕನ್ನಡ ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದೆ. ಇಂಗ್ಲೀಷ್ ಉಪನ್ಯಾಸಕರಾದರೂ ನನಗೆ ಕನ್ನಡ ಸಾಹಿತ್ಯದ ಹುಚ್ಚು ಹತ್ತಿಸಿದ ಕೀರ್ತಿ ಪಿ.ಐ. ಹೆಗಡೆ ಸರ್‌ಗೆ ಸಲ್ಲುತ್ತದೆ. ಇಂದಿಗೂ ನನಗೆ ಅರ್ಥವಾಗದ ಕವನಗಳ ವಿವರಣೆಯನ್ನು ಹೇಳುವುದರ ಜೊತೆಗೆ ಯಾವ ಪುಸ್ತಕ ಓದಬೇಕೆಂಬ ಸಲಹೆಯನ್ನು ನೀಡುತ್ತಾರೆ.
ಹೀಗೆ ಗೋವಿಂದ್ ಸರ್ ಮತ್ತು ಪಿ.ಐ.ಹೆಗಡೆ ಸರ್ ಪ್ರಭಾವದಿಂದಾಗಿ ನಾನು ಶಿಕ್ಷಕಿಯಾಗಿ ವೃತ್ತಿ ಬದುಕನ್ನು ಆರಂಭಿಸಿದೆ. ಈಗಲೂ ನನ್ನ ಶಾಲಾ ಸ್ನೇಹಿತರು ಸಿಕ್ಕಾಗ ನೀನು ಶಿಕ್ಷಕಿಯಾಗುತ್ತೀಯಾ ಎಂದು ಮೊದಲೇ ತಿಳಿದಿತ್ತು ಎಂದಾಗಲೆಲ್ಲಾ ಮನಸ್ಸಿಗೆ ಹೇಳಲಾಗದ ಸಂತೋಷ ಮೂಡುತ್ತದೆ. ಅದಾಗಲೇ ಶಿಕ್ಷಕ ವೃತ್ತಿಯನ್ನು ಆರಂಭಿಸಿ ಹನ್ನೊಂದು ವರ್ಷಗಳನ್ನು ಯಶಸ್ವಿಯಾಗಿ ಕಳೆದು ಹನ್ನರಡನೇ ವರ್ಷಕ್ಕೆ ಕಾಲಿರಿಸಿದ್ದೇನೆ. ಒಮ್ಮೆಯೂ ನನ್ನ ವೃತ್ತಿಯ ಬಗ್ಗೆ ಬೇಸರ ಮೂಡಿಲ್ಲ. ಯಾಕಾದರೂ ಈ ವೃತ್ತಿಯನ್ನು ಆಯ್ದುಕೊಂಡೆನೋ ಎಂದು ಕನಸಿನಲ್ಲೂ ಅನಿಸಿಲ್ಲ. ಪ್ರತಿನಿತ್ಯವೂ ಸಂಭ್ರಮಿಸಿದ್ದೇನೆ. ಪ್ರತಿಕ್ಷಣವನ್ನೂ ಜೀವಿಸು ತ್ತಿದ್ದೇನೆ. ನನ್ನ ವಿದ್ಯಾರ್ಥಿಗಳಿಂದ ಅದೆಷ್ಟೋ ವಿಷಯಗಳನ್ನು ಕಲಿತಿದ್ದೇನೆ. ಕಲಿಯುತ್ತಿದ್ದೇನೆ.
ನಿನ್ನೆಗಿಂತ ಇಂದು ಇನ್ನಷ್ಟು ಪರಿಪಕ್ವಗೊಂಡಿದ್ದೇನೆ. ಯಾರದ್ದೋ ಬಲವಂತಕ್ಕೋ, ಪರಿಸ್ಥಿತಿಯ ಒತ್ತಡಕ್ಕೆ ಕಟ್ಟು ಬಿದ್ದೋ ನಾನೀ ವೃತ್ತಿಯನ್ನು ಆಯ್ದು ಕೊಂಡವ ಳಲ್ಲ. ಬಹುವಿನಮ್ರತೆಯಿಂದ ಬಹಳ ಗೌರವದಿಂದ ಈ ವೃತ್ತಿಯನ್ನು ಆಯ್ದುಕೊಂಡವಳು. ನಾನೆಂದೂ ಪಾಠಮಾಡುವುದು ನನ್ನ ಫ್ಯಾಷನ್ ಎನ್ನಲಿಲ್ಲ ಏಕೆಂದರೆ ಅದು ನನ್ನ ಉಸಿರಾಗಿದೆ. ನಾನು ಶಿಕ್ಷಕಿ ಎಂಬುವುದನ್ನು ಅತ್ಯಂತ ಹೆಮ್ಮೆಯಿಂದ ಮತ್ತು ಗೌರವದಿಂದ ಹೇಳಿಕೊಳ್ಳುತ್ತೇನೆ. ಶಿಕ್ಷಕ ದಿನಾಚರಣೆಯ ಈ ಶುಭ ಮಾಸದಲ್ಲಿ ನನ್ನ ಕಳಕಳಿಯ ವಿನಂತಿ ಇಷ್ಟೇ. ನಿಮ್ಮ ಮಕ್ಕಳ ಮುಂದೆ ಶಿಕ್ಷಕರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಶಿಕ್ಷಕರಾಗುತ್ತೇನೆನ್ನುವವರ ಆಸೆಗೆತಣ್ಣೀರೆರಚಬೇಡಿ. ಶಿಕ್ಷಕರಾದವರನ್ನು ನಿಕೃಷ್ಟದಿಂದ ನೋಡಬೇಡಿ. ಪ್ರತಿಯೊಬ್ಬರ ಬದುಕಿನಲ್ಲೂ ಅತ್ಯಂತ ಮಹತ್ವದ ಪಾತ್ರ ವಹಿಸುವವರು ಶಿಕ್ಷಕರು ಎಂಬುವು ದನ್ನು ಮರೆಯದಿರೋಣ.