ಆತ್ಮಹತ್ಯೆ: ಒಂದು ವೈಜ್ಞಾನಿಕ ಅವಲೋಕನ
ತನ್ನಿಮಿತ್ತ
ಡಾ.ಸರಸ್ವತಿ ಎನ್‌, ತಜ್ಞ ಮನೋವೈದ್ಯರು, ಬೆಳಗಾವಿ
ಡಾ.ವಿಜಯ ಹರಬಿಶೆಟ್ಟರ, ತಜ್ಞ ಮನೋವೈದ್ಯರು, ಬೆಂಗಳೂರು
ಪ್ರತಿಭಾವಂತ ವಿದ್ಯಾರ್ಥಿಯೋರ್ವ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಸಾವಿಗೆ ಶರಣಾಗುತ್ತಾನೆ. ಹೊಟ್ಟೆನೋವಿನಿಂದ ನರಳುತ್ತಿದ್ದ ಗೃಹಿಣಿ ಹೊಟ್ಟೆನೋವುತಾಳಲಾರದೆ ಬದುಕಿನಲ್ಲಿ ಜುಗುಪ್ಸೆ ಹೊಂದುತ್ತಾಳೆ.
ಕಡು ಬಡತನದಿಂದ ಬೇಸತ್ತು ಇಡೀ ಕುಟುಂಬ ಸಾವಿಗೆ ಶರಣಾಗುತ್ತಾರೆ. ಈ ರೀತಿಯ ಉದಾಹರಣೆಗಳು ಪ್ರತಿನಿತ್ಯ ಕೇಳುತ್ತಿರುತ್ತೇವೆ, ನೋಡುತ್ತೇವೆ. ಕಾರಣ ಗಳು ಹಲವಾರು ಇರಬಹುದಾದರೂ ಅಕಾಲಿಕವಾಗಿ, ಉದ್ದೇಶ ಪೂರ್ವಕವಾಗಿ ಜೀವವನ್ನು ತೆಗೆದುಕೊಳ್ಳುವುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ8 ಲಕ್ಷ ಜನರು ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ. ಬಹಳಷ್ಟು ಮಟ್ಟಿಗೆ ಆತ್ಮಹತ್ಯೆಗಳನ್ನು ತಡೆಗಟ್ಟಬ ಹುದು. ಇದರ ಅರಿವಿಗಾಗಿ ಪ್ರತಿ ವರ್ಷ ಸೆಪ್ಟೆಂಬರ್ 10 ರಂದು ಆತ್ಮಹತ್ಯೆ ತಡೆ ದಿನ ಎಂದು ಗುರುತಿಸಲಾಗಿದೆ. ಹೆತ್ತಿರುವ ಆತ್ಮಹತ್ಯೆಗಳಿಂದ ಈ ಬಾರಿಯ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಅಕ್ಟೋಬರ್ 10ರಂದು ಸಹ ಆತ್ಮಹತ್ಯೆ ತಡೆಯ ಅರಿವಿಗಾಗಿ ಮೀಸಲಿಡಲಾಗಿದೆ.
ಯುವ ಜನರಲ್ಲಿ ಆಗುವ ಸಾವುಗಳ ಕಾರಣಗಳಲ್ಲಿ ಆತ್ಮಹತ್ಯೆಯಿಂದಾಗಿ ಆಗುವ ಸಾವು ಎರಡನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿಯ 2019ರ ಸಾಲಿನ ಸಮೀಕ್ಷೆಯ ಪ್ರಕಾರ ಆ ವರ್ಷದಲ್ಲಿ ಭಾರತದಲ್ಲಿ ಸುಮಾರು 1 ಲಕ್ಷ 39 ಸಾವಿರ ಸಾವುಗಳು ಆತ್ಮಹತ್ಯೆಯಿಂದಾಗಿ ಎಂದು ದಾಖಲಾ ಗಿವೆ. ಅಂತಾರಾಷ್ಟ್ರೀಯ ಆತ್ಮ ಹತ್ಯೆ ತಡೆಗಟ್ಟುವ ಸಂಘ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಮಾನಸಿಕ ಆರೋಗ್ಯ ಫೆಡರೇಶನ್, ಜಾಗತಿಕ ಮಟ್ಟದಲ್ಲಿ ಆತ್ಮಹತ್ಯೆ ತಡೆಯುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ೨೦೦೩ರಿಂದ ಪ್ರತಿವರ್ಷ ಸೆಪ್ಟೆಂಬರ್ ೧೦ ಅನ್ನು ವಿಶ್ವ ಆತ್ಮಹತ್ಯೆ ತಡೆಯುವ ದಿನಾಚರಣೆಯನ್ನು ಆಚರಿಸುತ್ತಿದೆ.
ಆತ್ಮಹತ್ಯೆ ತಡೆಯುವ ಕಾರ್ಯ ಪರಿಣಾಮಕಾರಿಯಾಗಿ ಆಗ ಬೇಕಾದರೆ ಆತ್ಮಹತ್ಯೆಗಳು ಯಾಕೆ ಮತ್ತು ಹೇಗೆ ಆಗುತ್ತವೆ ಎನ್ನುವುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಹೃದಯ ಸಂಬಂಽ ಕಾಯಿಲೆ ಗಳು ಇತರೆ ಪ್ರಾಣಾಂತಿಕ ಕಾಯಿಲೆಗಳ ಬಗ್ಗೆ ಇರುವ ಜ್ಞಾನ ಆತ್ಮಹತ್ಯೆಯ ಬಗ್ಗೆ ತಿಳಿದುಬಂದಿಲ್ಲ. ಸಾಮಾಜಿಕ ಕಳಂಕ ದಿಂದಾಗಿ ಇದರ ಬಗ್ಗೆ ಸಂಶೋಧನೆ ಗಳು ಕಡಿಮೆ. ವೈಜ್ಞಾನಿಕವಾಗಿ, ಸಾಮಾಜಿಕವಾಗಿ, ಆರ್ಥಿಕ ವಾಗಿ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ.
ಸಂಶೋಧನೆಗಳಿಂದ ತಿಳಿದು ಬಂದ ಕೆಲವು ಕಾರಣಗಳು೧. ಮಾನಸಿಕ ಕಾಯಿಲೆಗಳು:ಎಲ್ಲಾ ಮಾನಸಿಕ ಕಾಯಿಲೆಗಳು, ಆತ್ಮಹತ್ಯೆಗೆ ಕಾರಣವಾಗ ಬಹುದಾದರೂ, ಮುಖ್ಯವಾಗಿ ಖಿನ್ನತೆ, ಮಾದಕ ವಸ್ತು ವ್ಯಸನ,ಸ್ಕಿಜೋಫೆನಿಯಾ, ವ್ಯಕ್ತಿತ್ವ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಅಪಾಯ ಹೆಚ್ಚು. ಸಂಶೋಧನೆಗಳಿಂದ ತಿಳಿದುಬರುವುದೇನೆಂದರೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇಕಡ ೯೦ರಷ್ಟು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಆದರೆ ಈ ಕಾಯಿಲೆಗಳನ್ನು ಗುರುತಿಸುವುದಾಗಲಿ, ಕಂಡುಹಿಡಿದು ಸೂಕ್ತ ಚಿಕಿತ್ಸೆಯಾಗಲಿ ಲಭ್ಯವಾಗಿರುವುದಿಲ್ಲ. ಆತ್ಮಹತ್ಯೆ ತಡೆಯುವಲ್ಲಿ ಮಾನಸಿಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಮುಖ್ಯ. ಜನಸಾಮಾನ್ಯರು ಕೂಡ ಮಾನಸಿಕ ರೋಗದ ಲಕ್ಷಣಗಳನ್ನು ಗುರುತಿಸುವಂತೆ ಆಗಬೇಕು.
೨. ಹಿಂದಿನ ಆತ್ಮಹತ್ಯೆ ಪ್ರಯತ್ನ :ಆತ್ಮಹತ್ಯೆಗೆ ಶರಣಾದವರಲ್ಲಿ ಶೇ.೨೦ರಷ್ಟು ಈ ಮೊದಲೇ ಪ್ರಯತ್ನ ಮಾಡಿರುತ್ತಾರೆ. ಇಂತಹವರಲ್ಲಿ ಆತ್ಮಹತ್ಯೆಪುನರಾವರ್ತನೆಯಾಗಬಹುದು. ಮೊದಲೇ ಪ್ರಯತ್ನ ಮಾಡಿದವರನ್ನು ಗುರುತಿಸಿ ಸಲಹೆ ಸೂಚನೆ ನೀಡುವುದರಿಂದ ಮುಂದಾಗುವ ಅಪಾಯ ತಡೆಗಟ್ಟಬಹುದು.೩. ಕೌಟುಂಬಿಕ ಹಿನ್ನೆಲೆ :ಕುಟುಂಬದಲ್ಲಿ ಈಗಾಗಲೇ ಅಕಾಲಿಕ ಮತ್ತು ಉದ್ದೇಶಪೂರ್ವಕವಾಗಿ ಸಾವಿಗೆ ಶರಣಾದವರಿದ್ದರೆ. ಅಂತಹ ಕುಟುಂಬ ಸದಸ್ಯರಲ್ಲಿ ಈರೀತಿಯ ಸ್ವಯಂ ಹಾನಿ ನಡವಳಿಕೆ ಹೆಚ್ಚಾಗಿ ಕಂಡುಬರುತ್ತದೆ.
೪. ವೈದ್ಯಕೀಯ ಕಾಯಿಲೆಗಳು ಮತ್ತು ನೋವು :ಬಹಳ ವರ್ಷಗಳಿಂದ ಕಾಯಿಲೆಗಳಿಂದ ಬಳಲುತ್ತಿದ್ದರೆ, ದೀರ್ಘಕಾಲದತೀವ್ರ ನೋವುಗಳು,ಅಡ್ಡ ಪರಿಣಾಮಗಳಿಂದ ಜೀವನದಲ್ಲಿ ಜುಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ.
೫. ಆತ್ಮಹತ್ಯೆ ಸೋಂಕು :ಆತ್ಮಹತ್ಯೆಯಲ್ಲಿ ಅನುಕರಣೆ ಮಾಡುವ ನಡವಳಿಕೆಯು ಸಾಮಾನ್ಯ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದ ಅಂಶ.ಮಾಧ್ಯಮದಲ್ಲಿ ಕಂಡು ಬಂದ ಸುದ್ದಿಗಳಿಂದ ಹೆಚ್ಚು ಅಥವಾ ಕಡಿಮೆಯಾಗಬಹುದು. ಸುದ್ದಿ ಪದೇ ಪದೇ ಪುನಾರವರ್ತನೆಯಾಗುವುದು, ಪ್ರಾಮುಖ್ಯತೆ ಎದ್ದುಕಾಣುವಂತೆ ಕೊಂಡಾಡುವುದು, ಭಾವೋದ್ರೇಕ ಗೊಳಿಸುವುದು ಮುಂತಾದವು. ದೃಶ್ಯ ಮಾಧ್ಯಮಗಳು ವಿವರವಾಗಿ ವಿಧಾನಗಳ ಬಗ್ಗೆ ವಿವರಣೆ ನೀಡುವುದುಇವುಗಳಿಂದ ಪ್ರಕರಣಗಳು ಹೆಚ್ಚಾಗಬಹುದು. ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಮಾಧ್ಯಮಗಳು ವರದಿ ನೀಡುವ ಪ್ರಕ್ರಿಯೆಯನ್ನು ಮಾರ್ಪಾಡು ಮಾಡುವುದರಿಂದ ಆತ್ಮಹತ್ಯೆ ಸೋಂಕನ್ನು ಕಡಿಮೆ ಮಾಡಬಹುದು.
೬. ಮಾರಣಾಂತಿಕ ವಿಧಾನಗಳು ಸುಲಭವಾಗಿಗೆಟುಕುವುದು :ವಿಧಾನಗಳು ಸುಲಭವಾಗಿ ಲಭ್ಯವಾದರೆ ಪ್ರಕರಣಗಳು ಹೆಚ್ಚಾಗುವ ಸಂಭವವಿದೆ. ಗ್ರಾಮೀಣ ಭಾಗಗಳಲ್ಲಿ ಕೀಟನಾಶಕಗಳು ಸುಲಭವಾಗಿ ಲಭ್ಯವಾಗುವುದರಿಂದ ಅದನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುವವರ ಸಂಖ್ಯೆಯು ಹೆಚ್ಚು. ನಿರ್ಬಂಧನೆಮಾಡುವುದರಿಂದ ಪ್ರಕರಣಗಳನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.
೭. ಜೈವಿಕ ಕಾರಣಗಳು:ಸಂಶೋಧನೆಗಳಿಂದ ತಿಳಿದುಬಂದ ಆಂಶಗಳೆಂದರೆ ಜೀನುಗಳು, ಮಿದುಳಿನ ರಚನೆ, ಸೆರೊಟೊನಿನ್, ಮುಂತಾದವುಗಳು ಆತ್ಮಹತ್ಯೆಯಿಂದ ಮರಣ ಹೊಂದಿದವರಲ್ಲೂ ಮತ್ತು ಇತರೆ ಕಾರಣಗಳಿಂದ ಮರಣ ಹೊಂದಿದವರಲ್ಲೂ ಭಿನ್ನವಾಗಿರುತ್ತದೆ. ಸಮಸ್ಯೆ ಇರುವ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ರಕ್ಷಿಸುವ ಅಂಶಗಳು ಆತ್ಮಹತ್ಯೆಯ ಯೋಚನೆಗಳನ್ನು, ನಡವಳಿಕೆಗಳನ್ನು ದೂರಮಾಡುತ್ತವೆ. ರಕ್ಷಣಾತ್ಮಕ ಅಂಶಗಳನ್ನು ಗುರುತಿಸುವುದು ಮತ್ತು ಬೆಂಬಲ ನೀಡುವುದರಿಂದ ಪ್ರಕರಣಗಳು ಕಡಿಮೆಯಾಗಬಹುದು.
೧.ಮಾನಸಿಕ, ದೈಹಿಕ ಮತ್ತು ಮಾದಕದ್ರವ್ಯ ಸಂಬಂಧಿ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆ.೨.ವೈದ್ಯಕೀಯ ಸೌಲಭ್ಯಗಳು ಸುಲಭವಾಗಿ ದೊರಕುವಂತೆ ಮಾಡುವುದು.೩.ಕುಟುಂಬ ಮತ್ತು ಸಮಾಜದ ಬೆಂಬಲ.೪.ಸಮಸ್ಯೆಗಳನ್ನು ಬಗೆಹರಿಸುವುದು, ವಿವಾದಗಳನ್ನು ಅಹಿಂಸಾತ್ಮಕವಾಗಿ ನಿರ್ವಹಿಸುವುದು೫.ಉದ್ವೇಗ, ಪ್ರಚೋದನೆ, ಕೋಪವನ್ನು ನಿಯಂತ್ರಿಸುವ ಕೌಶಲ್ಯಗಳನ್ನು ಕಲಿಸುವುದು.೬.ಮಾರಣಾಂತಿಕ ವಿಧಾನಗಳು ಸುಲಭವಾಗಿ ಕೈಗೆಟುಕದಂತೆ ನಿರ್ಭಂದಿಸುವುದು.೭. ಅರಿವಿನ ವರ್ತನೆಯ ಆಪ್ತ ಸಮಾಲೋಚನೆಯ ಒಂದು ರೀತಿಯ ಉತ್ತಮ ಚಿಕಿತ್ಸೆ ಇದರಲ್ಲಿ, ಮುಖ್ಯವಾಗಿ ತಮ್ಮ ಮನಸ್ಸಿನಲ್ಲಿ ಬರುತ್ತಿರುವ ನಕರಾತ್ಮಕ, ನಿರಾಶಾವಾದದ ಯೋಚನೆಗಳನ್ನು ಅರಿತುಕೊಂಡು ಇದನ್ನು ಬೇರೆ ದೃಷ್ಟಿಕೋನದಿಂದ ಯೋಚಿಸಬಹುದಾ? ಎಂದು ಯೋಚನೆಗಳನ್ನೇ ಮಾರ್ಪಡು ಮಾಡಿಕೊಳ್ಳುವುದೇ, ಈ ಚಿಕಿತ್ಸೆಯ ಮುಖ್ಯ ಉದ್ದೇಶ. ಈ ರೀತಿ ಮಾಡಿದಾಗ ತಮ್ಮ ಭಾವನೆಗಳ ಮತ್ತು ನಡವಳಿಕೆಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಹೀಗೆ ಬಹುಕಾಲದ ಒತ್ತಡದಿಂದ ಪರಿಹಾರವು ಕಂಡುಕೊಳ್ಳಬಹುದು.
೮.ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಮನೋವೈದ್ಯರಿದ್ದು, ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿಪ್ರತಿ ಜಿಲ್ಲೆಯಲ್ಲೂ ಮನೋವೈದ್ಯರ ತಂಡ ಅಂದರೆ ಮನೋಶಾಸ್ತ್ರಜ್ಞರು, ಸಮಾಜ ಕಾರ್ಯಕರ್ತ ರು ಹಾಗೂ ನರ್ಸ್‌ಗಳು ಇದ್ದಾರೆ. ಕೆಲವು ಸಹಾಯವಾಣಿಗಳು ಕೂಡ ಇವೆ.
ಆತ್ಮಹತ್ಯೆ ತಡೆಗೆ ಬೇಕಾದ ಕೆಲವು ಜೀವನಶೈಲಿಯಬದಲಾವಣೆಗಳು:೧.ಉತ್ತಮ ಹವ್ಯಾಸದಲ್ಲಿ ತೊಡಗಿರುವುದು೨.ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವುದು೩.ಒಂಟಿತನವನ್ನು ಕಡಿಮೆ ಮಾಡಿಕೊಳ್ಳುವುದು೪.ವೃತ್ತಿಯಲ್ಲಿನ ಒತ್ತಡದ ಬಗ್ಗೆ ಅರಿವು ಇಟ್ಟುಕೊಳ್ಳುವುದು.೫.ಮಾನಸಿಕ ಒತ್ತಡದ ಆರಂಭಿಕ ಲಕ್ಷಣಗಳನ್ನು ಗುರುತಿಸಿಕೊಳ್ಳುವುದು೬.ಬಹುಕಾಲದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು೭.ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು೮.ಚೇತರಿಕ ಸಮರ್ಥ್ಯ ಅಂದರೆ ‘ಬಿದ್ದರೆ ಎದ್ದು ನಿಲ್ಲುವ’ ಆಲೋಚನೆಗಳನ್ನು ಬೆಳಿಸಿಕೊಳ್ಳುವುದು.೯.ತಮ್ಮ ಗುರಿಯು ತಮಗೆ ಅತಿಯಾದ ಒತ್ತಡ ನೀಡಿದರೇ ಅದರ ಅಗತ್ಯವನ್ನು ಪುನಃ ಪರಿಶೀಲಿಸಿಕೊಳ್ಳುವುದು.
ಆತ್ಮಹತ್ಯೆ ಒಂದು ಸಾಮಾಜಿಕ ಆರೋಗ್ಯ ಸಮಸ್ಯೆ. ಆತ್ಮಹತ್ಯೆ ಮತ್ತು ಮಾನಸಿಕ ರೋಗಗಳ ನಡುವೆ ನಿಕಟವಾದ ಸಂಬಂಧವಿರುವುದರಿಂದ ಮಾನಸಿಕ ರೋಗ ತಜ್ಞರು ಪರಿಣಾಮಕಾರಿಯಾದ ಆತ್ಮಹತ್ಯೆ ತಡೆಯುವ ಕಾರ್ಯಕ್ರಮದಲ್ಲಿ ಮುಖ್ಯವಾದ ಪಾತ್ರ ನಿರ್ವಹಿಸಬೇಕಾಗಿದೆ.
ಜೀವನದ ಉತ್ತಮ ಆರಂಭಗಳಲ್ಲಿ ಪ್ರಥಮವಾಗಿ ಪೂಜಿಸಲ್ಪಡುವ ಗಣೇಶ ಬುದ್ಧಿವಂತಿಕೆಯ ಪ್ರತೀಕ ಕೂಡ. ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅಡೆತಡೆ ಗಳನ್ನು ತೆಗೆದುಹಾಕುವ ಸಾಮರ್ಥ್ಯವಿರುವವ ದೇವತೆ. ಈ ವಿಶೇಷ ಸಂದರ್ಭದಲ್ಲಿ ಗಣೇಶನಿಂದ ನಾವು ತಿಳಿದುಕೊಳ್ಳುವ ಜೀವನ ಕೌಶಲ್ಯಗಳು ಹಲವಾರು. ಸಾಮಾನ್ಯವಾಗಿ ಜನರು ಯಾವುದೇ ಮಹತ್ವದ ಪ್ರಯತ್ನಗಳು ಕೆಲಸ, ಪರೀಕ್ಷೆ, ಸಮಸ್ಯೆ ಯಾವುದಿದ್ದರೂ ಕೂಡ ಮೊದಲ ಪೂಜೆ ಗಣೇಶನಿಗೆ ಮೀಸಲು.
ಗಣೇಶನ ಆಚರಣೆಯಿಂದ ಮಾನಸಿಕ ಸ್ವಾಸ್ಥ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು.
ಗಣೇಶನ ದೊಡ್ಡ ತಲೆ-ವಿಶಾಲ ಚಿಂತನೆ ಮತ್ತು ಬುದ್ಧಿವಂತಿಕೆಯಿಂದ ಕೂಡಿದ ಪ್ರಬುದ್ಧ ಮನಸ್ಸನ್ನು ಪ್ರತಿನಿಧಿಸುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕಾದರೆ ವಿಶಾಲ ಮನಸ್ಸಿನವ ರಾಗಿರಬೇಕು. ಯಾರನ್ನೂ ಕೂಡ ಹೀಯಾಳಿಸದೆ ಎಲ್ಲರಿಗೂ ಗೌರವ ನೀಡುವಂತವರಾಗಿರಬೇಕು.
ಗಣೇಶನ ಸಣ್ಣ ಕಣ್ಣುಗಳು – ಕೇಂದ್ರೀಕೃತ ದೃಷ್ಠಿಯನ್ನು ಪ್ರತಿನಿಽಸುತ್ತದೆ. ಕೈಯಲ್ಲಿರುವ ಕೆಲಸ ಗಳನ್ನು ಪೂರ್ಣಗೊಳಿಸುವಲ್ಲಿ ಗಮನ ಹರಿಸಬೇಕು ಎಂದು ಸೂಚಿಸುತ್ತದೆ. ಸೂಕ್ಷ್ಮವಾಗಿ ಗಮನಿಸುವ ಸಾಮರ್ಥ್ಯ, ಸರಿಯಾದ ಗಮನ ಮತ್ತು ನಿಶ್ಚಿತ ವಿಧಾನಗಳು ಯಶಸ್ಸಿನ ಪ್ರಮುಖ ಸ್ತಂಭಗಳಾಗಿವೆ.
ಗಣೇಶನ ದೊಡ್ಡಕಿವಿಗಳು – ಪ್ರತಿಯೊಬ್ಬರೂ ಉತ್ತಮ ಕೇಳುಗರಾಗಿರಬೇಕು ಎಂದು ತಿಳಿಸುತ್ತದೆ. ಹಲವಾರು ಸಮಸ್ಯೆಗಳಿಗೆ ಪರಿಹಾರವೆಂದರೆ ಗಮನವಿಟ್ಟು ಕೇಳಿಸಿಕೊಳ್ಳುವುದು.
ಉದ್ದ ಮೂಗು – ಸುತ್ತಮುತ್ತಲಿನೊಂದಿಗೆ ಯಾವಾಗಲೂ ಸೂಕ್ಷ್ಮಗ್ರಾಹಿಯಾಗಿರುವುದು. ಭವಿಷ್ಯದ ವಾಸನೆಯನ್ನು ಪಡೆಯುವುದು ಮತ್ತು ಅದಕ್ಕೆ ಸಿದ್ಧರಾಗಿರುವುದು.
ದೊಡ್ಡಹೊಟ್ಟೆ – ಎಲ್ಲವನ್ನೂ ತೆಗೆದುಕೊಳ್ಳವುದು ಮತ್ತು ಜೀರ್ಣಿಸಿಕೊಳ್ಳವುದು. ಜೀವನವೆಂದರೆ ಸುಖ ಮತ್ತು ದುಃಖದ ಮಿಶ್ರಣ. ಯಶಸ್ಸು ಮತ್ತು ವೈಫಲ್ಯಗಳು ಕೂಡ ಉಂಟು. ವೈಫಲ್ಯಗಳಿಂದ ಬೇಸರಗೊಳ್ಳಬಾರದು ಅದೇ ರೀತಿ ಯಶಸ್ಸಿನಿಂದ ಮೈ ಮರೆಯಬಾರದು. ಎಲ್ಲವನ್ನು ಸಮನಾಗಿ ಸ್ವೀಕರಿಸುವಸಾಮರ್ಥ್ಯವಿರಬೇಕು. ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
ಬಲವಾದ ಇಚ್ಛಾಶಕ್ತಿಯನ್ನು ಹೊಂದಿರಬೇಕು. ಸಮಸ್ಯೆಗಳಿಗೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಬಾರದು. ಮುರಿದ ದಂತವು ತ್ಯಾಗದ ಶಕ್ತಿಯನ್ನು ಸಂಕೇತಿಸುತ್ತದೆ. ಸಾಧನೆಯನ್ನು ಮಾಡಬೇಕಾದರೆ/ ಯಶಸ್ಸು ನಮ್ಮದಾಗಬೇಕಾದರೆ ನಾವು ಕೆಲವು ಆಕರ್ಷಣೆಗಳನ್ನು ತ್ಯಾಗ ಮಾಡಬೇಕು. ನಮ್ಮ ಭಾವನೆಗಳನ್ನು ನ್ಯೂನ್ಯತೆಗಳನ್ನು ಜಯಿಸಿ ಬುದ್ದಿವಂತಿಕೆಯಿಂದ ವರ್ತಿಸಬೇಕು.