ಘಾನಾ ಗಣೇಶೋತ್ಸವ ಎಂಬ ಘನಕಾರ್ಯ
ಶಶಾಂಕಣ
ಶಶಿಧರ ಹಾಲಾಡಿ
.@.
ಪ್ರತಿ ವರ್ಷ ಗಣೇಶನ ಹಬ್ಬದ ಸಮಯದಲ್ಲಿ ಹರಿದಾಡುವ ಇಂಥದ್ದೊಂದು ವಿಡಿಯೋ ಕ್ಲಿಪ್‌ನ್ನು ನೀವು ನೋಡಿರಬಹುದು. ವಾಟ್ಸಾಪ್‌ನಲ್ಲಿ ಸಾಕಷ್ಟು ಓಡಾಡಿರುವ ವಿಡಿಯೋ ಕ್ಲಿಪ್ ಅದು. ಆಫ್ರಿಕನ್ ಮೂಲದ ಕೆಲವು ಜನರು ಗಣೇಶನ ವಿಗ್ರಹವನ್ನು ಮೆರವಣಿಗೆ ಮಾಡುತ್ತಾ, ‘ಜಯ್ ಗಣೇಶ’ ಎಂದು ಹಾಡುಹೇಳುತ್ತಾ, ಬೀದಿ ಯಲ್ಲಿ ಸಾಗುವ ದೃಶ್ಯ.
ನಮ್ಮಲ್ಲಿಯಂತೆಯೇ, ಮಕ್ಕಳು ಸಹ ಆ ಮೆರವಣಿಗೆಯಲ್ಲಿ ನಡೆಯುತ್ತಾ, ಕುಣಿಯುತ್ತಾ, ಸಣ್ಣಗೆ ನರ್ತಿಸುತ್ತಾ ಸಾಗುವ ಆ ದೃಶ್ಯವು ನಮ್ಮ ದೇಶದ ಗಣೇಶನ ಹಬ್ಬದ ಆಚರಣೆಯ ರೀತಿಯೇ ಇದೆ. ಕೊನೆಗೆ ಸಮುದ್ರ ತಟಕ್ಕೆ ಕೊಂಡೊಯ್ದು, ಗಣೇಶನನ್ನು ವಿಸರ್ಜಿಸುತ್ತಾ, ಆ ಸಮಯದಲ್ಲೂ ಗಣೇಶನನ್ನು ಸ್ತುತಿಸುವುದರೊಂದಿಗೆಆ ವಿಡಿಯೋ ಕ್ಲಿಪ್ ಮುಕ್ತಾಯಗೊಳ್ಳುತ್ತದೆ. ಎಲ್ಲಿಯ ಗಣಪ, ಎಲ್ಲಿಯ ಆಫ್ರಿಕನ್ ಜನ, ಎಲ್ಲಿಯ ವಿಸರ್ಜನೆ ಎಂಬ ಅಚ್ಚರಿ ಹುಟ್ಟಿಸುವಂತಹ ವಿಡಿಯೋ ಕ್ಲಿಪ್ ಅದು. ಅಥವಾ, ಕೆಲವರು ವ್ಯಂಗ್ಯ ಮಾಡುವಂತೆ ‘ವಾಟ್ಸಾಪ್ ಯುನಿ ವರ್ಸಿಟಿಯಲ್ಲಿ’ ಸೃಷ್ಟಿಗೊಂಡ ವಿಡಿಯೋ ಇರಬಹುದೆ ಎಂಬ ಅನುಮಾನವೂ ಕೆಲವರಲ್ಲಿ ಮೂಡಿರ ಬಹುದು. ಆ ಗಣೇಶನ ಮೆರವಣಿಗೆಯ ವಿಡಿಯೋ ಕ್ಲಿಪ್‌ನ ಮೂಲವನ್ನು ಅರಸುತ್ತಾ ಹೊರಟರೆ, ಆಫ್ರಿಕಾದಲ್ಲಿರುವ ಘಾನಾ ಎಂಬ ದೇಶವನ್ನು ತಲುಪುತ್ತೇವೆ!
ನಿಜ, ಸುಮಾರು ಮೂರು ಕೋಟಿ ಜನಸಂಖ್ಯೆ ಇರುವ, ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿರುವ ಘಾನಾ ದೇಶ ದಲ್ಲಿ ಪ್ರತಿ ವರ್ಷ ಸಾರ್ವಜನಿಕವಾಗಿ ಗಣಪತಿ ಪೂಜೆ ನಡೆಯುತ್ತದೆ. ನಮ್ಮ ದೇಶದ ರೀತಿಯೇ ಅಲ್ಲೂ ಸಹ ಗಣೇಶನನ್ನು ಇಟ್ಟು ಪೂಜಿಸಿ, ಮೆರವಣಿಗೆಯಲ್ಲಿ ಕೊಂಡೊಯ್ದು ಕೊನೆಗೆ ನೀರಿನಲ್ಲಿ ವಿಸರ್ಜಿಸುತ್ತಾರೆ. ಮಾತ್ರ ವಲ್ಲ, ಘಾನಾ ದೇಶದಲ್ಲಿ ಸುಮಾರು 250000 ಜನರು ಹಿಂದೂ ಪದ್ಧತಿಯನ್ನು ಆಚರಿಸುತ್ತಾರೆ!
ವಿಶೇಷವೆಂದರೆ, ಇವರಲ್ಲಿ ಶೇ.99ರಷ್ಟು ಜನರು ಸ್ಥಳೀಯರು ಅಂದರೆ ಆಫ್ರಿಕಾ ಮೂಲದವರು. ಇನ್ನೂ ಸ್ಪಷ್ಟ ವಾಗಿ ಹೇಳಬೇಕೆಂದರೆ, ಯುರೋಪಿಯನ್ ವಸಾಹತುಶಾಹಿಯು ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತ ದಿಂದ ಹಿಡಿದು ತಂದ ಕೂಲಿ ಕೆಲಸಗಾರರ ಸಂತತಿ ಇವರಲ್ಲ. ಬದಲಿಗೆ, ಘಾನಾದಲ್ಲೇ ಹುಟ್ಟಿ ಬೆಳೆದ, ಸ್ಥಳೀಯ ಬುಡಕಟ್ಟಿಗೆ ಸೇರಿದ ಮತ್ತು ಕಳೆದ ಕೆಲವು ದಶಕಗಳಲ್ಲಿ ಹಿಂದೂ ಧರ್ಮವನ್ನು ಅಪ್ಪಿಕೊಂಡ ಆಫ್ರಿಕನ್ ಜನಾಂಗ.
ಘಾನಾದಂತಹ ಸುದೂರ ದೇಶವೊಂದರಲ್ಲಿ ‘ಗಣಪತಿ ಬಪ್ಪ ಮೋರ್ಯ’ ಎಂಬ ಘೋಷವನ್ನು ಹೇಳುವ, ತಪ್ಪದೇ ಪ್ರತಿ ವರ್ಷ ಗಣಪತಿ ಹಬ್ಬ ಮತ್ತು ಇತರ ಹಬ್ಬಗಳನ್ನು ಆಚರಿಸುವ ಎರಡೂವರೆ ಲಕ್ಷ ಜನರಿದ್ದಾರೆ ಎಂಬುದೇ ಒಂದು ಪುಟ್ಟ ಅಚ್ಚರಿ. ಘಾನಾ ದೇಶದ ಜನರು ಚೌತಿಯ ಸಮಯದಲ್ಲಿ ಗಣೇಶನನ್ನು ಸಾರ್ವಜನಿಕವಾಗಿ ಕೂರಿಸಿ, ಪ್ರತಿ ದಿನ ಪೂಜೆ ಮಾಡಿ, ನಾಲ್ಕಾರು ದಿನಗಳ ನಂತರ, ಮೆರವಣಿಗೆಯ ಮೂಲಕ ಸಮುದ್ರಕ್ಕೆ ಕೊಂಡೊಯ್ದು ವಿಸರ್ಜನೆ ಮಾಡುವ ಈ ಸಂಪ್ರದಾಯಕ್ಕೆ ಒಂದು ಕುತೂಹಲಕಾರಿ ಹಿನ್ನೆಲೆ ಇದೆ.
ಘಾನಾದಲ್ಲಿ ಇಂದು ಎರಡೂವರೆ ಲಕ್ಷ ಜನರು ಹಿಂದೂ ಧರ್ಮವನ್ನು ಅನುಸರಿಸುವಂತಾಗಲು ಮುಖ್ಯ ಕಾರಣವೆಂದರೆ, ಸ್ಥಳೀಯರಾದ ಸ್ವಾಮಿ ಘನಾನಂದ ಸರಸ್ವತಿ ಅವರು. ಸ್ವಾಮಿ ಘನಾನಂದ ಸರಸ್ವತಿ ಅವರ ಪೂರ್ವಾಶ್ರಮದ ಹೆಸರು ಗೈಡ್ ಕ್ವೇಸಿ ಎಸೆಲ್. ಘಾನಾದ ಸೆನ್ಯಾ ಬೆರಕು ಪ್ರದೇಶದಲ್ಲಿ 12,9,1937 ರಂದು ಜನನ. ಮೂಲತಃ ಸ್ಥಳೀಯ ಆಫ್ರಿಕನ್ ನಂಬಿಕೆಗಳನ್ನು ಪಾಲಿಸುತ್ತಿದ್ದ ಅವರ ಕುಟುಂಬ ಕ್ರೈಸ್ತರಾಗಿ ಪರಿವರ್ತನೆ ಹೊಂದಿತ್ತು. ಆದರೆ, ಬಾಲ್ಯದಿಂದಲೇ ಇವರಿಗೆ ಅಧ್ಯಾತ್ಮದ ತುಡಿತ. ಆದ್ದರಿಂದ ಭಾರತದ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡುತ್ತಾ, ಇಲ್ಲಿನ ಆಚರಣೆಗಳ ಕುರಿತು ಕುತೂಹಲದಿಂದ ಓದುತ್ತಾ ಬೆಳೆದರು.
ಅಧ್ಯಾತ್ಮ ಕ್ಷೇತ್ರದ ಅವರ ಹುಡುಕಾಟವು ಅವರನ್ನು ನಮ್ಮ ದೇಶದ ಹೃಷಿಕೇಶಕ್ಕೆ ಕರೆತಂದಿತು. ಅಲ್ಲಿ ಸ್ವಾಮಿ ಕೃಷ್ಣಾನಂದ ಸರಸ್ವತಿಯವರ ಶಿಷ್ಯರಾಗಿ, ನಮ್ಮ ದೇಶದ ಪದ್ಧತಿಗಳನ್ನು ಕಲಿತರು, ಇಲ್ಲಿನ ಧರ್ಮಗ್ರಂಥಗಳ ಅಧ್ಯಯನ ಮಾಡಿದರು, ಮಂತ್ರಗಳನ್ನು ಕಲಿತರು, ವಿಶ್ವ ಸಹೋದರತ್ವದ ಪಾಠ ಕಲಿತರು, ತಮ್ಮ ದೇಶಕ್ಕೆ ಹಿಂದಿರುಗಿದರು. 1975ರಲ್ಲಿ ಘಾನಾಕ್ಕೆ ವಾಪಸಾಗುವಾಗ ಅವರ ಹೆಸರು ಸ್ವಾಮಿ ಘನಾನಂದ ಎಂದಾಗಿತ್ತು. ಕೃಷ್ಣಾನಂದ ಸರಸ್ವತಿಯವರು ನೀಡಿದಹೆಸರು ಅದು. 1975ರಿಂದ ಆರಂಭವಾದ ಅವರ ಅಭಿಯಾನವು, ಘಾನಾದ ಕರಾವಳಿ ಪ್ರದೇಶಗಳಲ್ಲಿ ಹರಡಿತು. ರಾಜಧಾನಿ ಅಕ್ರಾದಲ್ಲಿ ಹಿಂದೂ ಮಠವನ್ನುಆರಂಭಿಸಿದ ಸ್ವಾಮಿ ಘನಾನಂದ ಅವರು, ಸ್ಥಳೀಯರಿಗೆ ಹಿಂದೂ ಧರ್ಮದ ಸಾರವನ್ನು ಪ್ರವಚನದ ಮೂಲಕ ತಿಳಿಸಲು ಆರಂಭಿಸಿದರು.
ಕ್ರಮೇಣ ಘಾನಾದಲ್ಲಿ ಹಿಂದೂ ಧರ್ಮ ಪಸರಿಸಿತು ಎಂದೇ ಹೇಳಬಹುದು. ಘಾನಾದಲ್ಲಿ ಐದು ದೇವಾಲಯಗಳನ್ನು ಸ್ಥಾಪಿಸುವಲ್ಲಿ, ಹಲವು ಶಿಷ್ಯರನ್ನುತಯಾರಿಸುವಲ್ಲಿ ಸ್ವಾಮಿ ಘನಾನಂದರ ಕೊಡುಗೆ ಬಹುದೊಡ್ಡದು. ಅಲ್ಲಿನ ಹಿಂದೂ ಮಠದಲ್ಲಿ ಪ್ರತಿದಿನ ಬೆಳಗಿನ ಪೂಜೆ ಸಹ ನಡೆಯುತ್ತದೆ! ಕಳೆದ ನಾಲ್ಕುದಶಕಗಳಲ್ಲಿ ಘಾನಾದ ಹಿಂದೂಗಳ ಸಂಖ್ಯೆ ಎರಡೂವರೆ ಲಕ್ಷಕ್ಕೆ ಏರಿದೆ. ಸ್ವಾಮಿ ಘನಾನಂದರಿಗೂ ಮುಂಚೆ, 1947ರ ಸಮಯದಲ್ಲಿ ಕೆಲವು ನೂರುಸಿಂಽಕುಟುಂಬಗಳು ಘಾನಾ ದೇಶಕ್ಕೆ ವಲಸೆ ಹೋಗಿದ್ದುಂಟು. ಆದರೂ ಅವರ ಅಸ್ತಿತ್ವ ಎದ್ದು ಕಾಣುತ್ತಿರಲಿಲ್ಲ.
1975ರಲ್ಲಿ ಭಾರತದಿಂದ ಹಿಂದಿರುಗಿದ ಸ್ವಾಮಿ ಘನಾನಂದರು, ಸ್ಥಳೀಯ ಆಫ್ರಿಕನ್ ಜನರನ್ನೇ ಹಿಂದೂ ಧರ್ಮಕ್ಕೆ ಸೇರಿಸಿಕೊಂಡ ಅಭಿಯಾನವೂ ಇಪ್ಪತ್ತನೆಯ ಶತಮಾನದ ಬಹು ವಿಶಿಷ್ಟ ವಿದ್ಯಮಾನ ಎನ್ನಲೇಬೇಕು. ಸಣ್ಣಗೆ ಆರಂಭವಾದ ಅವರ ಈ ಅಭಿಯಾನವು ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ವಿಶ್ವದ ಗಮನ ಸೆಳೆಯಿತು. ಇದಕ್ಕೆ ಮುಖ್ಯ ಕಾರಣವೆಂದರೆ, ಬಿಬಿಸಿ ವರದಿಗಾರರು, ಘಾನಾಕ್ಕೆ ಭೇಟಿ ನೀಡಿ ಅವರ ಸಂದರ್ಶನ ನಡೆಸಿ 29.6.2010ರಂದು ಪ್ರಕಟಿಸಿದ ವರದಿ. ಘಾನಾದ ವಿಶಿಷ್ಟ ಆಫ್ರಿಕನ್-ಹಿಂದು ದೇಗುಲ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ಆ ಲೇಖನವು, ಮೊದಲ ಬಾರಿಗೆ ಸ್ವಾಮಿ ಘನಾನಂದ ಸರಸ್ವತಿಯವರ ಪರಿಚಯವನ್ನು ವಿಶ್ವದ ಓದುಗರಿಗೆ ಮಾಡಿಕೊಟ್ಟಿದ್ದಂತೂ ನಿಜ.
ಅದುವರೆಗೆ ಘಾನಾದಲ್ಲಿನ ಆಫ್ರಿಕನ್ ಹಿಂದೂ ಜನರ ಕುರಿತು ಅಲ್ಲಲ್ಲಿ ವರದಿಗಳು ಬಂದಿದ್ದರೂ, ಬಿಬಿಸಿಯ ಈ ವಿಸ್ತೃತ ವರದಿಯು, ಘನಾನಂದರ ಅಭಿಯಾನಕ್ಕೆ ಅಧಿಕೃತ ಖಚಿತತೆಯನ್ನು ನೀಡಿತು. ಇಂತಹ, ತುಸು ಸೂಕ್ಷ್ಮ ಎನಿಸುವ ವಿದ್ಯಮಾನಗಳನ್ನು ಬೇರೆಯವರು ವರದಿ ಮಾಡಿದ್ದರೂ, ಅದನ್ನು ಬಿಬಿಸಿ ಹೇಳಿದೆ ಎಂದರೆ, ಹೆಚ್ಚು ಮಾನ್ಯ ಮಾಡುವ ಮನಸ್ಥಿತಿ ನಮ್ಮಲ್ಲಿದೆ ತಾನೆ! ಆದ್ದರಿಂದ, ಬಿಬಿಸಿಯು ಘಾನಾದ ಹಿಂದೂ ದೇಗುಲಗಳ ಕುರಿತು ವರದಿ ಮಾಡಿದಾಗ, ಹಲವರಕುತೂಹಲ ಕೆರಳಿದ್ದು ನಿಜ.
ಭಾರತದಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ಅವರ‍್ಯಾರೂ ಇದುವರೆಗೂ ಭಾರತಕ್ಕೆ ಭೇಟಿ ನೀಡದೇ ಇದ್ದರೂ, ಆ ಆಫ್ರಿಕನ್ ಜನರು ಧೂಪ ಹಚ್ಚಿ, ದೀಪ ಬೆಳಗಿ ದೇವಾಲಯದಲ್ಲಿ ಪೂಜೆ ಮಾಡುತ್ತಾರೆ, ಹಬ್ಬಗಳನ್ನು ಆಚರಿಸುತ್ತಾರೆ. ಅವರೆಲ್ಲರೂ ಹಿಂದೂ ಪದ್ಧತಿಗಳನ್ನು ಪಾಲಿಸುತ್ತಿದ್ದರೂ, ಕೆಲವರು ಕ್ರಿಶ್ಚಿಯನ್ ಹೆಸರನ್ನು ಈಗಲೂ ಹೊಂದಿದ್ದಾರೆ, ತಮ್ಮ ಮಕ್ಕಳಿಗೆ ರಾಮ ಮತ್ತು ಕೃಷ್ಣ ಎಂಬ ಹೆಸರನ್ನು ಇಡುತ್ತಿದ್ದಾರೆ, ಅವರ ದೇಗುಲದಲ್ಲಿ, ಹಿಂದೂ ದೇವತೆಗಳ ನಡುವೆ ಕ್ರಿಸ್ತನ ಫೋಟೋ ಸಹ ಇದೆ ಎಂದು ಬಿಬಿಸಿ 2010ರಲ್ಲಿ ವರದಿ ಮಾಡಿತ್ತು. ಘಾನಾ ಇಂದು ಕ್ರಿಶ್ಚಿಯನ್ ಬಾಹುಳ್ಯ ಇರುವ ದೇಶ. ಶೇ.71 ಕ್ರಿಶ್ಚಿಯನ್, ಶೇ.18 ಇಸ್ಲಾಂ ಧರ್ಮಸ್ಥರಿರುವ ಈ ದೇಶದಲ್ಲಿ ಹಿಂದೂಗಳ ಸಂಖ್ಯೆ ಶೇ.1ಕ್ಕಿಂತ ಕಡಿಮೆ.
ಅದೇನೇ ಇದ್ದರೂ, 1975ರಲ್ಲಿ ಸ್ವಾಮಿ ಘನಾನಂದ ಸರಸ್ವತಿಯವರು ಆರಂಭಿಸಿದ ಈ ಅಭಿಯಾನಕ್ಕೆ, ಅಲ್ಲಿನ ಸರಕಾರವು ಅಡ್ಡಿ ಉಂಟುಮಾಡಲಿಲ್ಲ ಎಂಬುದುವಿಶೇಷ. ಬಹು ಸಂಸ್ಕೃತಿ ಹೊಂದಿದ ಘಾನಾವು 1957ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ ಮತ್ತು ಎಲ್ಲಾ ಧರ್ಮಗಳ ಪಾಲನೆಗೆ ಅವಕಾಶ ನೀಡುವ ದೇಶ ಎನಿಸಿದೆ. ೧೯೫೦ರ ದಶಕದ ತನಕ ಸಾಕಷ್ಟು ಹಿಂದುಳಿದಿದ್ದ, ವಿದೇಶೀ ಆಡಳಿತಗಾರರ ವಸಾಹತು ಎನಿಸಿದ್ದ ಘಾನಾ ದೇಶದಲ್ಲಿ ಗಣೇಶನ ಹಬ್ಬವನ್ನು ಆಚರಿಸುತ್ತಿದ್ದಾರೆ ಎಂಬ ವಿಚಾರವೇ ಇಂದು ವಿಸ್ಮಯ ಹುಟ್ಟಿಸುತ್ತದೆ. ಪೌರಾತ್ಯ ಅಧ್ಯಾತ್ಮದಲ್ಲಿ ಕುತೂಹಲ, ಅಸಕ್ತಿ ಹೊಂದಿದ್ದ ಸ್ವಾಮಿ ಘನಾನಂದರು ತಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ಐದು ವರ್ಷಗಳಲ್ಲಿ ಅಂದರೆ, 24.11.1962ರಲ್ಲಿ ಡಿವೈನ್ ಮಿಸ್ಟಿಕ್ ಪಾತ್ ಸೊಸೈಟಿಯನ್ನು ಸ್ಥಾಪಿಸುತ್ತಾರೆ.
ಈ ನಡುವೆ ಹೃಷಿಕೇಶದ ಡಿವೈನ್ ಲೈಫ್ ಸೊಸೈಟಿಯೊಂದಿಗೆ ಪತ್ರವ್ಯವಹಾರ ನಡೆಸಿ ನಮ್ಮ ದೇಶದ ಅಧ್ಯಾತ್ಮ ಪಥದ ಪರಿಚಯ ಮಾಡಿಕೊಂಡರು. ನಂತರದ ದಿನಗಳಲ್ಲಿ ಭಾರತಕ್ಕೆ ಬಂದು ಸ್ವಾಮಿ ಕೃಷ್ಣಾನಂದರ ಶಿಷ್ಯತ್ವವನ್ನು ಕರಿಸಿ, ಘಾನಾ ದೇಶಕ್ಕೆ ವಾಪಸಾಗಿ, ಹಿಂದೂ ಧರ್ಮವನ್ನು ಅಲ್ಲಿನ ಜನರಿಗೆ ಪರಿಚಯಿಸಲುಆರಂಭಿಸಿದರು. ತಾವು ಮತಪರಿವರ್ತನೆ ಮಾಡುವುದಕ್ಕೆ ಆದ್ಯತೆ ನೀಡುವುದಿಲ್ಲ, ಹಿಂದೂ ಧರ್ಮದ ಸಾರವನ್ನು ಜನರಿಗೆ ತಿಳಿಸುತ್ತೇವೆ ಎಂಬುದೇ ಅವರ ಮಠದಪ್ರಮುಖ ಆಶಯ. ಆ ಪ್ರದೇಶಕ್ಕೆ ತೀರ ಹೊಸದು ಎನಿಸುವ ಒಂದು ಧರ್ಮವನ್ನು ಅಲ್ಲಿ ಪರಿಚಯಿಸುವ ಅವರ ಪ್ರಯತ್ನಕ್ಕೆ ಮೊದಲಿಗೆ ಅಂತಹ ಸ್ವಾಗತವೇನೂ ಇರಲಿಲ್ಲ.
ಸುಮಾರು ಶೇ.71ರಷ್ಟು ಇರುವ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರೆಲ್ಲರೂ ಆಫ್ರಿಕನ್ ಮೂಲದವರೇ ಆಗಿದ್ದು, ಕೆಲವು ಪುರಾತನ ಆಚರಣೆಗಳನ್ನು ಇರಿಸಿ ಕೊಂಡಿದ್ದರೂ, ಘನಾನಂದರ ಪ್ರಯತ್ನಕ್ಕೆ ಸಾಕಷ್ಟು ತಣ್ಣೀರೆರಚುವ ಕೆಲಸ ನಡೆದಿತ್ತು, ಇಂದಿಗೂ ನಡೆದಿದೆ. ಇವರು ಬೋಧಿಸುವ ಧರ್ಮ ಸೇರಿದರೆ ಸ್ವರ್ಗ ಸಿಗುವುದಿಲ್ಲ, ಬದಲಿಗೆ ನರಕಕ್ಕೆ ಹೋಗುತ್ತೀರಿ ಎಂದು ಪ್ರಚಾರ ನಡೆದಿತ್ತು, ಈಗಲೂ ನಡೆದಿದೆ. ಅದರ ನಡುವೆಯೇ, ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣುವ ಹಿಂದೂ ಧರ್ಮಕ್ಕೆ ಸಾಕಷ್ಟು ಜನರಿಂದ ಬೆಂಬಲ ದೊರೆತು, ಇವರು ನಡೆಸುವ ಪೂಜೆ, ಗಣೇಶೋತ್ಸವ, ದೀಪಾವಳಿ, ಹೋಳೀ ಹಬ್ಬಗಳನ್ನು ಸ್ಥಳೀಯರು ಸ್ವೀಕರಿಸಿದರು.
ಘಾನಾದ ಬೀದಿಗಳಲ್ಲಿ ಸ್ಥಳೀಯರೇ ರಥೋತ್ಸವ ನಡೆಸುವ ದೃಶ್ಯಗಳ ವಿಡಿಯೋಗಳು ಸಹ ಇಂದು ಯುಟ್ಯೂಬ್‌ಗಳಲ್ಲಿ ಕಾಣಸಿಗುತ್ತವೆ. ಘನಾನಂದರು 18.1.2016ರಂದು ದೈವಾಧೀನರಾದ ನಂತರ, ಅವರ ಆಫ್ರಿಕನ್ ಶಿಷ್ಯರು ಅವರ ಹೆಜ್ಜೆಯನ್ನು ಅನುಸರಿಸುತ್ತಿದ್ದಾರೆ, ಸ್ಥಳೀಯರಲ್ಲೇ ನಾಲ್ಕಾರು ಶಿಷ್ಯರನ್ನು ಘನಾನಂದರು ತಯಾರಿಸಿ ಹೋಗಿದ್ದಾರೆ. ಕ್ರಮೇಣ ಜನಪ್ರಿಯತೆ ಮತ್ತು ಮನ್ನಣೆ ಗಳಿಸಿದ ಘನಾನಂದ ಸರಸ್ವತಿಯವರ ಅಭಿಯಾನದಿಂದಾಗಿ, ಇಂದು ಎರಡೂವರೆ ಲಕ್ಷ ಸ್ಥಳೀಯರು ಅಲ್ಲಿನ ಹಿಂದೂ ಮಠ ಮತ್ತು ಹರೇಕೃಷ್ಣ ಪಂಥವನ್ನು ಅನುಸರಿಸುತ್ತಿದ್ದಾರೆ.
ಸ್ವಾಮಿ ಘನಾನಂದ ಸರಸ್ವತಿಯವರ ಎಲ್ಲಾ ಬೋಧನೆ, ಆಚರಣೆ ಮತ್ತು ಪೂಜಾ ಪದ್ಧತಿಗಳಿಗೆ ಹೃಷಿಕೇಶದಲ್ಲಿ ಅವರು ಪಡೆದ ಮಾರ್ಗದರ್ಶನವೇ ಮೂಲಎಂಬುದರಲ್ಲಿ ಎರಡು ಮಾತಿಲ್ಲ. ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಹಲವು ಹಬ್ಬಗಳನ್ನು ಅದೇ ರೀತಿಯಲ್ಲಿ ದೂರದ ಘಾನಾ ದೇಶದಲ್ಲೂ ಇಂದಿಗೂ ಆಚರಿಸು ತ್ತಿದ್ದಾರೆ. ಆದ್ದರಿಂದ, ಆಫ್ರಿಕನ್ ಜನರು ಗಣೇಶನ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ಆ ಒಂದು ವಿಡಿಯೋ ಕ್ಲಿಪ್ ಅಸಲಿಯಾಗಿದ್ದು, ಇದೊಂದು ಸುಳ್ಳುಸುದ್ದಿ ಅಲ್ಲ ಎಂದು ಧೈರ್ಯವಾಗಿ ಹೇಳಬಹುದು.
ಆಫ್ರಿಕಾ ದೇಶದ ಘಾನಾ ದೇಶಕ್ಕೆ ನಮ್ಮ ರಾಜ್ಯದಿಂದ ಸುಮಾರು 8500 ಕಿಮೀ ದೂರ. ಈ ಬರೆಹದಲ್ಲಿ ಅಲ್ಲಿನ ಗಣೇಶೋತ್ಸವದ ಕುರಿತು ಇಷ್ಟೆಲ್ಲಾ ಬರೆದಿದ್ದೀರಲ್ಲಾ, ಅಲ್ಲಿಗೆ ನೀವು ಹೋಗಿ ನೋಡಿದ್ದೀರಾ ಎಂದು ಪ್ರಶ್ನಿಸಿದರೆ, ನನ್ನ ಉತ್ತರ, ಇನ್ನೂ ನಾನು ಘಾನಾ ದೇಶವನ್ನು ನೋಡಿಲ್ಲ ಎಂಬುದೇ ಆಗಿದೆ. ಸ್ವಾಮಿ ಘನಾನಂದ ಸರಸ್ವತಿಯವರ ಮಾಹಿತಿ, ಆ ದೇಶದಲ್ಲಿರುವ ಹಿಂದೂ ಧರ್ಮದ ಸ್ಥಳೀಯರ ಕುರಿತ ಮಾಹಿತಿಯನ್ನು ಅಂತರ್ಜಾಲದಲ್ಲಿ ಸಂಗ್ರಹಿಸಿ, ಕನ್ನಡದ ಓದುಗರಿಗೆ ಇಲ್ಲಿ ಕೊಟ್ಟಿದ್ದೇನೆ ಎಂದಷ್ಟೇ ಹೇಳಬಲ್ಲೆ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಅಭಿಯಾನದಲ್ಲಿ ಗಣೇಶೋತ್ಸವದ ಆಚರಣೆಯನ್ನು 1893ರ ಸಮಯದಲ್ಲಿ ಯಶಸ್ವಿಯಾಗಿ ತಿಲಕರು ಬಳಸಿ ಕೊಂಡ ಹಿನ್ನೆಲೆಯಲ್ಲಿ, ನಮ್ಮ ನಾಡಿನ ಸಾರ್ವಜನಿಕ ಹಬ್ಬವೊಂದು ದೂರದ ಘಾನಾದಲ್ಲಿ ಆಚರಣೆಗೊಳ್ಳುತ್ತಿರುವ ಅಚ್ಚರಿಯನ್ನು ನಿಮ್ಮೊಂದು ಹಂಚಿ ಕೊಳ್ಳಲು ಈ ಕೆಲಸ ಮಾಡಿದ್ದೇನೆ, ಅಷ್ಟೆ.