ಕುಳಿತುಕೊಳ್ಳುವ ಹಕ್ಕು ಅಂಗಡಿಯ ಕೆಲಸಗಾರರಿಗೂ ಸಿಗಲಿ !
ಅಭಿಮತ
ಕೀರ್ತನ ಶೆಟ್ಟಿ
ಓರ್ವ ಗ್ರಾಹಕನಾಗಿ ನೀವು ಅಂಗಡಿಗೆ ಹೋದಾಗ, ಅಲ್ಲಿಯ ಕೆಲಸಗಾರರು ಆರಾಮದಾಯಕವಾಗಿ, ಸ್ಟೂಲ್‌ನಲ್ಲಿ ಕುಳಿತುಕೊಂಡಿರುವುದನ್ನು ಕಂಡಾಗ, ಹೇಗನಿಸುತ್ತದೆ? ಅವರನ್ನು ನಿಂತಿರುವುದನ್ನು ಕಂಡಾಗಲೇ ಗೌರವಾನ್ವಿತರಾಗಿ ಕಾಣುತ್ತಾರೆ. ಆದರೆ ಈಗ ತಮಿಳುನಾಡು ಸರ್ಕಾರ ಅಂಗಡಿಯ ಕೆಲಸಗಾರರಿಗೂ ಒಂದು ಆಸನ ಸೌಲಭ್ಯ ಒದಗಿಸಲು ಮುಂದಾಗಿದೆ.
ಕೇರಳದಲ್ಲಿ ಈಗಾಗಲೇ ಜಾರಿಯಲ್ಲಿರುವಂತೆ, ಕೆಲಸದ ಸಮಯದಲ್ಲಿ ಮಾರಾಟಗಾರರಿಗೆ ಕಡ್ಡಾಯವಾಗಿ ಆಸನ ಸೌಲಭ್ಯಗಳನ್ನು ಒದಗಿಸಲು ತಮಿಳುನಾಡುಸರ್ಕಾರ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿದೆ. ತಮಿಳುನಾಡು ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆ, 1947 ರ ತಿದ್ದುಪಡಿಯನ್ನು ಕೋರುವ ವಿಧೇಯಕವು ಒಂದು ಹೊಸ ವಿಭಾಗವನ್ನು ಪ್ರಸ್ತಾಪಿಸುತ್ತದೆ: ಪ್ರತಿಯೊಂದು ಸಂಸ್ಥೆಯ ಆವರಣವು ಎಲ್ಲಾ ಉದ್ಯೋಗಿಗಳಿಗೆ ಸೂಕ್ತ ಆಸನ ವ್ಯವಸ್ಥೆಯನ್ನು ಹೊಂದಿರಬೇಕು. ಇದರಿಂದ ಅವರ ಕೆಲಸದ ಸಮಯದಲ್ಲಿ, ಅವರು ಕುಳಿತುಕೊಳ್ಳುವ ಯಾವುದೇ ಅವಕಾಶವನ್ನು ಬಳಸಿಕೊಳ್ಳ ಬಹುದು. ಮತ್ತು ಆ ಮೂಲಕ ಅವರು ಇಡೀ ದಿನ ನಿಲ್ಲುವುದನ್ನು ತಪ್ಪಿಸಿ, ಕೆಲಸದ ಸಮಯದಲ್ಲಿ, ಗ್ರಾಹಕರು ಇಲ್ಲದ ವೇಳೆ ಕುಳಿತುಕೊಳ್ಳುವ ಅವಕಾಶ ಸಿಗಲಿದೆ.
ಆದರೆ, ಈ ಮಸೂದೆಯು ನಿಯಮ ಉಲ್ಲಂಸುವ ಅಂಗಡಿ ಮಾಲೀಕರಿಗೆ ಶಿಕ್ಷೆಯ ಷರತ್ತಿನ ಬಗ್ಗೆ ಉಲ್ಲೇಖಿಸಿಲ್ಲ. ಹೀಗಿದ್ದರೂ, ಲಕ್ಷಾಂತರ ಅಂಗಡಿ ಕೆಲಸಗಾರರು ಅನುಭವಿಸುತ್ತಿರುವ ಕಷ್ಟಗಳಿಗೆ ಪರಿಹಾರ ನೀಡುವ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದು ಎಲ್ಲಾ ಕಡೆ ಜಾರಿಗೊಳ್ಳುವ ಸಾಧ್ಯತೆ ಇದೆ. 2018 ರಕೊನೆಯಲ್ಲಿ, ಕೇರಳವು ಮಹಿಳಾ ಕಾರ್ಮಿಕರ ಸಂಘಟನೆಯಾದ ಅಸಂಘಡಿದ ಮೇಖಲಾತೊಝಿಲಾಲಿ ಯೂನಿಯನ್, ಕೆಲಸಗಾರರ ನೈತಿಕತೆಯ ಭಾಗವಾಗಿ ಕುಳಿತುಕೊಳ್ಳುವ ಹಕ್ಕನ್ನು ಬೇಡಿ, ಒಂದು ಆಂದೋಲನ ವನ್ನು ಆರಂಭಿಸಿದ ನಂತರ ಇದೇ ರೀತಿಯ ಕಾನೂನನ್ನು ಸರ್ಕಾರವು ತಂದಿತು.
ಇದರ ಪರಿಣಾಮ, ಇಂದು ಕೇರಳದಲ್ಲಿ ಅಂಗಡಿಯಲ್ಲಿ ಗ್ರಾಹಕರು ಇಲ್ಲದ ವೇಳೆ, ಕೆಲಸಗಾರರು ಕುಳಿತುಕೊಳ್ಳಲು ಸ್ಟೂಲ್ ಅಥವಾ ಕುರ್ಚಿಗಳ ವ್ಯವಸ್ಥೆ ಇದೆ. ಸರಾಸರಿ, ಮಾರಾಟಗಾರರು ಅಂಗಡಿಗಳಲ್ಲಿ ಒಂಬತ್ತರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ಎಲ್ಲಾ ಸಮಯದಲ್ಲೂ ನಿಲ್ಲುತ್ತಾರೆ. ಅವರಲ್ಲಿ ಹೆಚ್ಚಿನವರು ಸಂಽವಾತ, ಮೊಣಕಾಲಿನ ಸಮಸ್ಯೆಗಳು, ಉಬ್ಬಿರುವ ರಕ್ತನಾಳಗಳು, ಕೆಳಗಿನ ಅಂಗಗಳಲ್ಲಿ ನೀರಿನ ಧಾರಣ ಮತ್ತು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಾರೆ.ಆಸನ ವ್ಯವಸ್ಥೆ ಇಲ್ಲದಿರುವುದು ಒಂದು ಸಮಸ್ಯೆ ಮಾತ್ರ. ಹೆಚ್ಚಿನ ಅಂಗಡಿಗಳು ಶೌಚಾಲಯ ಸೌಲಭ್ಯಗಳನ್ನೂ ಹೊಂದಿಲ್ಲ ಮತ್ತು ಇವುಗಳು ಇರುವಲ್ಲಿಯೂ ಸಹ ಅವು ಕೊಳಕು ಅಥವಾ ಮಹಿಳಾ ಉದ್ಯೋಗಿಗಳಿಗೆ ಸೂಕ್ತವಲ್ಲ.
ತಮಿಳುನಾಡಿನ ವಿಧೇಯಕದ ವಿರುದ್ಧ ಈಗಾಗಲೇ ಕೆಲ ಅಂಗಡಿ ಮಾಲಿಕರು ದೂರುಗಳನ್ನು ಸಲ್ಲಿಸಿದ್ದಾರೆ. ಕುಳಿತುಕೊಳ್ಳುವ ಹಕ್ಕನ್ನು ಸಾರ್ವತ್ರಿಕವಾಗಿ ಮಾಡಲಾಗದು ಎಂಬ ವಾದಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಏಕೆಂದರೆ ಅಸೆಂಬ್ಲಿ ಚೈನ್ ಪ್ರಕ್ರಿಯೆಗಳಂತಹ ಕೆಲವು ರೀತಿಯ ಕೆಲಸಗಳಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಪ್ರಮುಖ ಅಂಶವೆಂದರೆ ಕೆಲಸಗಾರರನ್ನು ಘನತೆಯಿಂದ ನಿರ್ವಹಿಸಬೇಕು ಮತ್ತು ಅವರಿಗೂ ಆರಾಮದಾಯಕವಾದ ಕೆಲಸದ ವಾತಾವರಣಬೇಕು. ಗ್ರಾಹಕರು ಇಲ್ಲದಿರುವಾಗ ಹೇಗೆ ಮಾರಾಟಗಾರರು ಕುಳಿತುಕೊಳ್ಳುತ್ತಾರೋ, ಹಾಗೆಯೇ ಕೆಲಸಗಾರರಿಗೂ ವಿಶ್ರಾಂತಿ ಸಿಗಬೇಕು. ಈ ಎರಡು ರಾಜ್ಯ ಗಳಲ್ಲಿನ ಪ್ರಗತಿಪರ ತಿದ್ದುಪಡಿಗಳು ಕೆಲಸದ ಸ್ಥಳದಲ್ಲಿನ ನೈತಿಕತೆಯ ಕುರಿತು ರಾಷ್ಟ್ರೀಯ ಕಾನೂನುಗಳನ್ನು ಪ್ರೋತ್ಸಾಹಿಸುತ್ತದೆ.
ಯುಕೆ ಪ್ರಪಂಚದಲ್ಲಿ ಅತ್ಯಂತ ವಿಸ್ತೃತವಾದ ಇಂತಹ ಕಾನೂನುಗಳು ಹೊಂದಿದೆ, ಇದನ್ನು ಕೆಲಸದ ಸ್ಥಳ (ಆರೋಗ್ಯ, ಸುರಕ್ಷತೆ ಮತ್ತು ಕಲ್ಯಾಣ) ನಿಯಮಗಳು, 1992 ಎಂದು ಕರೆಯುತ್ತಾರೆ. ಒಂದು ಪ್ರಾಥಮಿಕ ನಿಯಮವೆಂದರೆ ಉದ್ಯೋಗದಾತರು ತಮ್ಮ ಕೆಲಸ ನಿರ್ವಹಿಸಲು ನಿಲ್ಲಬೇಕಾದ ಕೆಲಸಗಾರರಿಗೆ ಸೀಟು ಗಳನ್ನು ಒದಗಿಸಬೇಕು, ಕೆಲಸದ ಸಮಯದಲ್ಲಿ ಅವರಿಗೆ ಕಾಲಕಾಲಕ್ಕೆ ಕುಳಿತುಕೊಳ್ಳುವ ಅವಕಾಶವನ್ನು ನೀಡಬೇಕು. ಇಂತಹ ನಿಯಮಗಳು ಪರಿಣಾಮ ಕಾರಿಯಾಗುತ್ತವೆ ಏಕೆಂದರೆ ಅವರು ಎದುರಿಸುತ್ತಿರುವ ಕೆಲಸ, ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿದಿರುವ ಕೆಲಸಗಾರರನ್ನು ಸಮಾಲೋಚಿಸುವ ಮೂಲಕ ಅವರ ನೋವಿಗೂ ಸ್ಪಂದಿಸಿದಂತಾಗುತ್ತದೆ.