ಅವರವರ ಮನೆ ಸ್ವಚ್ಛವಾಗಿದ್ದರೆ ಸಾಕೆ ?
ಅನಿಸಿಕೆ
ಸಂದೀಪ್ ಶರ್ಮಾ
ಬೆಂಗಳೂರು ವಿಶಾಲವಾಗಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ವಾಹನ ದಟ್ಟಣೆ ಶೇಕಡ 40% ರಷ್ಟು ಹೆಚ್ಚಿದೆ. ಹೊಸ ಬಡಾವಣೆ ಅಣಬೆಗಳಂತೆ ಹೊರವಲಯಗಳಲ್ಲಿ ಏಳುತ್ತಿವೆ. ಕೆಲವೊಂದು ಖಾಲಿ ನಿವೇಶನಗಳು ಅಲ್ಲಲ್ಲಿ ಕಾಣಸಿಗುತ್ತವೆ. ಸುಸಜ್ಜಿತವಾದ ಬಡಾವಣೆ ಹಾಗು ಡಾಂಬರೀಕರಣಗೊಂಡ ವಾಹನಗಳ ನೆಮ್ಮದಿಯಓಡಾಟ, ಕಾಣಸಿಕ್ಕರು ಯಾರ ದೃಷ್ಟಿಯೋ ಏನೋ ಇನ್ನಿತರ ಹೊಸ ಮನೆಗಳನ್ನು ಕಟ್ಟುವ ನೆಪದಲ್ಲಿ ಎಲೆಕ್ಟ್ರಿಕ್ ಲೈನ್ ಎಳೆಯುವ ಭರದಲ್ಲಿ ಒಳ್ಳೆಯ ರಸ್ತೆಯನ್ನು ಅಡ್ಡವಾಗಿ ಅಗೆದು ಹಾಳುಮಾಡುವುದು, ಮರಳು ರಾಶಿ, ಜೆಲ್ಲಿ, ಇಟ್ಟಿಗೆಗಳನ್ನು ತಂದು ಮುಕ್ಕಾಲು ರಸ್ತೆಯನ್ನು ಆಕ್ರಮಿಸಿಬಿಡುವುದು.
ಇವೆಲ್ಲವನ್ನೂ ಗಮನಿಸಿ, ಕೆಲವು ದಿನಗಳಲ್ಲಿ ಆ ರಸ್ತೆಯು ಹದಗೆಟ್ಟು ಧೂಳೆದ್ದು ಬಡಾವಣೆಯ ಪರಿಸರವನ್ನು ಕಲ್ಮಶ ಮಾಡಿಬಿಡುತ್ತದೆ. ಇದಕ್ಕೆಲ್ಲಾ ಕಟ್ಟಿಸುವ ಬಿಲ್ಡರ್ ಹೊಣೆಯಾದರೆ ಅವನನ್ನು ತರಾಟೆಗೆ ತೆಗೆದುಕೊಳ್ಳಲು ಅಲ್ಲಿ ವಾಸಿಸುವ ಜನರು ರೊಚ್ಚಿಗೇಳುವುದಿಲ್ಲ, ಕಾರಣ ಅವರವರ ಮನೆ ಸ್ವಚ್ಛವಾಗಿದ್ದರಾಯಿತು. ಸುತ್ತಮುತ್ತ ಲಿನ ಉಸಾಬರಿ ನಮಗೇಕೆ ಎಂಬುದು ನಾಗರಿಕರ ಉತ್ತರ.
ಹೀಗೆ, ಸುತ್ತಮುತ್ತಲಿನ ಮನೆಗಳಷ್ಟೇ ಅಲ್ಲ, ಪಕ್ಕದ ಬಡಾವಣೆಯವರೂ ರಾತ್ರೋ ರಾತ್ರಿ ಕಸ ಕಡ್ಡಿಗಳನ್ನು ಅಲ್ಲಿ ತಂದು ಖಾಲಿ ನಿವೇಶನಗಳಲ್ಲಿ ತುಂಬುತ್ತಾರೆ. ಮನೆಯ ಮುಂದೆ ಗಿಡ ಮರ ಇದ್ದರಂತೂ ಗಿಡಗಳನ್ನು ಕದಿ ಯುವುದು, ಹೂವುಗಳನ್ನು ಕೀಳುವುದು ಸಾಮಾನ್ಯವಗಿಬಿಟ್ಟಿದೆ. ನಾಗರಿಕತೆ ಎಲ್ಲಿಗೆ ಮುಟ್ಟುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿಬಿಟ್ಟಿದೆ.
ಈಗೀಗ ಹಸಿ ಕಸ ಹಾಗೂ ಒಣ ಕಸ ಎಂದು ವಿಂಗಡಿಸಿ, ಮನೆಯ ಮುಂದೆ ಬರುವ ಕಸದ ಗಾಡಿಗೆ ಕೊಡ ಬೇಕೆನ್ನುವ ಸೂಚನೆಯನ್ನು ಕೊಟ್ಟಾಗಿದೆ. ಆದರೆ, ದೊಡ್ಡ ಗಾತ್ರದ ಕಸವನ್ನು ಕಸದ ಗಾಡಿಯವರು ಗಾಡಿಯಲ್ಲಿ ಸ್ಥಳದ ಅಭಾವದಿಂದಲೋ ಅಥವಾ ಮತ್ಯಾ ವುದೋ ಕಾರಣಗಳಿಂದ ತೆಗೆದುಕೊಂಡು ಹೋಗಲು ನಿರಾಕರಿಸುತ್ತಾರೆ. ಅಂತಹ ಎಲ್ಲ ತ್ಯಾಜ್ಯಗಳೂ ನಾಚಿಕೆಯೇ ಇಲ್ಲದೆ ಹತ್ತಿರದ ಖಾಲಿ ನಿವೇಶನವನ್ನೋ ಅಥವಾ ಅಕ್ಕಪಕ್ಕದ ಬಡಾವಣೆಗಳಲ್ಲಿಯೋ ಸೇರುತ್ತದೆ.
ಹಾಗೆಯೇ ಎಲ್ಲೋ ಒಡೆದು ಹಾಕಿದ ಕಟ್ಟಡದ ಅವಶೇಷಗಳನ್ನು ಸಹ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಅವೈಜ್ಞಾನಿಕ ರೀತಿಯಲ್ಲಿ ತಂದು ಸುರಿದು ಸಣ್ಣ ಗುಡ್ಡಗಳಂತೆ ಮಾಡಿ ಗಾಡಿಗಳು ಪಲ್ಟಿಹೊಡೆಯುವಂತೆ ಮಾಡಿಬಿಡುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ಇನ್ನು ಗುಟ್ಕಾ ತಿನ್ನುವವರ ಹಾವಳಿ, ಅವರಿಗೆ ಕಂಡಲ್ಲಿ ಉಗುಳುವುದೇ ಜನ್ಮ ಸಿದ್ದ ಹಕ್ಕು ಎಂದು ತಿಳಿದಿರುತ್ತಾರೆ, ಗುಟ್ಕಾ ತಿನ್ನದವರ ಗತಿಯು ಇದೆಯೇ, ಸುಮ್ಮನೆ ಕಂಡ ಕಂಡಲ್ಲಿ ಉಗಿಯುತ್ತ ತಮ್ಮ ಜಿಹ್ವಾ ಶಕ್ತಿಯ ಪ್ರದರ್ಶನವನ್ನು ಮೆರೆಯುತ್ತಿರುತ್ತಾರೆ.
ಬಸ್ಸು, ರೈಲು, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗಿದು ಕೊಳಕನ್ನು ನಿರ್ಮಿಸುತ್ತ ಎಬ್ಬಿಸುತ್ತಾರೆ. ನಮ್ಮ ಉಗುಳೇ ಎಲ್ಲರಿಗೂ ಉರುಳು ಎಂಬುದನ್ನು ಜನರು ಅರಿತಂತಿಲ್ಲ. ಚಿಕೂನ್ ಗುನ್ಯ, ಮಲೇರಿಯಾ, ಡೆಂಗ್ಯೂ, ಈಗ ಕರೋನಾ ಮಹಾಮಾರಿ ಮೊದಲಾದ ಕಾಯಿಲೆಗಳಿಗೆ ಮೂಲ ಕಾರಣ, ಕೊಳಕು ತುಂಬಿದ ಈ ಬಗೆಯ ಪರಿಸರವೇ. ನಮ್ಮ ಮನೆಯ ಜೊತೆಯಲ್ಲಿಯೇ ಮನೆಯ ಸುತ್ತಲಿನ ಪರಿಸರವನ್ನು, ಆ ಮೂಲಕ ನಮ್ಮ ಬೀದಿಯನ್ನು, ನಮ್ಮ ಊರನ್ನು, ನಮ್ಮ ದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ ಬಹುತೇಕ ಸಂದರ್ಭಗಳಲ್ಲಿ ಕರ್ತವ್ಯ ಪಾಲಿಸುತ್ತಿಲ್ಲ.
ಎಂತಹ ಒಳ್ಳೆಯ ವ್ಯವಸ್ಥೆಗಳಿದ್ದರೂ ನಮ್ಮ ಮನಸ್ಸು ವಿಶಾಲವಾಗದ ಹೊರತು, ಅವು ಪ್ರಯೋಜನಕ್ಕೆ ಬಾರದಂತಾಗುತ್ತವೆ. ನಾವೆಲ್ಲರೂ ಸ್ವಚ್ಛತಾ ಅಭಿಯಾನಕ್ಕೆ ಗೌರವ ಕೊಡದಿದ್ದರೆ ನಮ್ಮ ಜೀವವನ್ನೇ ಕೊಳಕಿಗೆ ಅರ್ಪಣೆ ಮಾಡಿಕೊಂಡಂತಾಗುತ್ತದೆ. ಸ್ವಚ್ಛತೆಗೆ ಆದ್ಯತೆಕೊಡುವುದರಲ್ಲೇ ನಮ್ಮೆಲ್ಲರ ಏಳಿಗೆಯಿದೆ ಹಾಗು ಎಲ್ಲರೂ ಸಹಕರಿಸಬೇಕಿದೆ.