ವಿಶ್ವದ ಭಯಾನಕ ದಾಳಿಗೆ ಇಪ್ಪತ್ತು ವರ್ಷ
ಸ್ಮರಣೆ
ಶ್ರೀನಿವಾಸ ಜೋಕಟ್ಟೆ, ಮುಂಬೈ
ವಿಶ್ವದ ಇತಿಹಾಸದಲ್ಲಿ ಭೀಕರ ದಾಳಿಯೆನ್ನಲಾದ 9/11 ರ (2001) ಘಟನೆಗೆ ನಿನ್ನೆಗೆ ಇಪ್ಪತ್ತು ವರ್ಷಗಳು ಸಂದಿತು. ಈ ಇಪ್ಪತ್ತು ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ‘ವಾರ್ ಆನ್ ಟೆರರ್’ ಮಾತನಾಡುತ್ತಿರುವ ಅಮೆರಿಕ ಇಂದು ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಒಪ್ಪಿಸಿ ಅಮೆರಿಕಕ್ಕೆ ಹಿಂತಿರುಗಿದೆ.ಅಮೆರಿಕದ ಈ ನೀತಿಗೆ ಇಂದು ವಿಶ್ವವೇ ಆಶ್ಚರ್ಯ ಪಡುವಂತಾಗಿದೆ.
ಈ ಯುದ್ಧದಲ್ಲಿ ಅಮೆರಿಕದ ಪರವಾಗಿ ಹೋರಾಡಿದ ಮತ್ತು ಜೀವ ಪಣಕ್ಕಿಟ್ಟು ಅಲ್‌ಖೈದಾ, ತಾಲಿಬಾನ್ ನಂತಹ ಆತಂಕಿಗಳ ವಿರುದ್ಧ ಹೋರಾಡಿದ ಅಂದಿನಅಮೆರಿಕದ ಅನೇಕ ಸೈನಿಕರಿಗೂ ಅಮೆರಿಕದ ಇತ್ತೀಚಿನ ನಿರ್ಧಾರಗಳಿಗೆ ತೀವ್ರ ಟೀಕೆಗಳು ಕೇಳಿ ಬರುತ್ತಿವೆ. ಅವರು ಹೇಳುವಂತೆ 2001 ರ ಯುದ್ಧದ ಆರಂಭ ದಿಂದಲೇ ಅಮೆರಿಕದ ಉದ್ದೇಶ ಏನು ಎನ್ನುವುದು ಸ್ಪಷ್ಟವಾಗಿಯೇ ಇರಲಿಲ್ಲ.
ಅಫ್ಘಾನಿಸ್ತಾನದಲ್ಲಿ ಹೋರಾಡುತ್ತಲೇ ನಡುವೆ ಅಮೆರಿಕ ಅನಿರೀಕ್ಷಿತ ಇರಾಕ್‌ನ ಮೇಲೆ ದಾಳಿ ನಡೆಸಿತ್ತು. ಆರಂಭದಲ್ಲಿ ಕೇವಲ ಸ್ಪೆಶಲ್ ಆಪರೇಷನ್ ಮೂಲಕ ತಾಲಿಬಾನ್‌ನ್ನು ಎತ್ತಿ ಬಿಸಾಕಿದ್ದ ಅಮೆರಿಕ ಒಂದು ಲಕ್ಷಕ್ಕಿಂತ ಹೆಚ್ಚು ಸೈನಿಕರನ್ನು ಅಲ್ಲಿ ಇರಿಸಿತ್ತು. ಆದರೆ ಅಮೆರಿಕ ಸೈನಿಕರು ಅಲ್ಲಿ ನಿರಂತರ ಸಾಯುತ್ತಿದ್ದರು. ಆತಂಕದ ವಿರುದ್ಧ ನಿರಂತರಯುದ್ಧ ಎಂದರೆ, ಮತ್ತೊಮ್ಮೆ ಪ್ರಜಾತಂತ್ರ ಉಳಿಸುವುದಕ್ಕೆ ಈ ಯುದ್ಧ ಎಂದಿತು. ಮತ್ತೊಮ್ಮೆ ಅಫ್ಘಾನಿಸ್ತಾನವನ್ನು ರೂಪಿಸುವುದಕ್ಕೆ ಎನ್ನಲಾಯಿತು. ಒಟ್ಟಾರೆ ಅಮೆರಿಕಕ್ಕೆ ಈ ಬಗ್ಗೆ ಸ್ಪಷ್ಟತೆಯೇ ಇರಲಿಲ್ಲ.
ವಿಶ್ವ 21ನೇ ಶತಮಾನಕ್ಕೆ ಹೆಜ್ಜೆ ಇರಿಸುತ್ತಿದ್ದ ದಿನಗಳು. ಅದು ವರ್ಷ 2001. ಇದಕ್ಕಿಂತ ಹತ್ತು ವರ್ಷಗಳ ಮೊದಲು 26 ಡಿಸೆಂಬರ್ 1991 ರಂದು ಸೋವಿಯತ್ ಸಂಘ ಛಿದ್ರ ಗೊಂಡಿತ್ತು. ಇದರ ಔಪಚಾರಿಕ ಘೋಷಣೆಯ ಜೊತೆ ಅಮೆರಿಕವು ಶೀತಲ ಯುದ್ಧವನ್ನು ಜಯಿಸಿ ವಿಶ್ವದ ಮಹಾಶಕ್ತಿ ಎನಿಸಿಕೊಂಡಿತ್ತು. 1991 ರ ಮೊದಲು ಗಲ್ಫ್ ಯುದ್ಧ ಅಥವಾ ಯುಗೋಸ್ಲಾವಿಯಾದಲ್ಲಿ ನಡೆದ ಯುದ್ಧದಲ್ಲಿ ಅಮೆರಿಕ ತನ್ನ ಅದ್ವಿತೀಯ ಸೈನ್ಯ ಶಕ್ತಿಯೊಂದಿಗೆ ‘ನ್ಯೂ ವರ್ಲ್ಡ್ ಆರ್ಡರ್’ ಘೋಷಿಸಲು ಮುಂದಾಗಿತ್ತು. ಆವಾಗಲೇ ಒಂದು ಕರಾಳ ದಿನ ಬಂದಿತು. ಅದು ೯ ಸೆಪ್ಟೆಂಬರ್ ೨೦೦೧.
ಅಮೆರಿಕವೇ ಬೆಳೆಸಿ ಪೋಷಿಸಿದ್ದ ಮುಜಾಹಿದೀನ್ ಒಸಾಮಾ ಬಿನ್ ಲಾಡೆನ್‌ನ ಸಹಚರರು ಅಮೆರಿಕದ ಮೇಲೆ ವಿಶ್ವದ ಅತಿದೊಡ್ಡ ಆತಂಕವಾದ ದಾಳಿಯನ್ನುನಡೆಸಿದರು. ಅದು 09/11 ರ ಹೆಸರಲ್ಲಿ ಅಮೆರಿಕದ ಜನರ ಮನದಲ್ಲಿ ಇಂದಿಗೂ ಶಾಶ್ವತವಾಗಿ ಉಳಿದುಕೊಂಡಿದೆ. ಅಂದಿನ 19 ಆತಂಕವಾದಿಗಳಲ್ಲಿ 15 ಜನ ಆತಂಕವಾದಿಗಳು ಸೌದಿ ಅರಬ್ ನಾಗರಿಕರಾಗಿದ್ದರು. ಇಂದು ಅಮೆರಿಕದ ಬೈಡೆನ್ ಅದೇ ಸೌದಿ ವಿಷಯದಲ್ಲಿ ಮರು ಚಿಂತನೆ ನಡೆಸುತ್ತಿದ್ದಾರೆ. ಅತ್ತ ಸೌದಿ ಕೂಡಾ ತನ್ನಲ್ಲಿ ಆತಂಕವಾದಿಗಳನ್ನು ಇರಿಸಲು ಬಿಡಲಾರೆ, ತಾನು ಮಹಿಳೆಯರಿಗೂ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ.
ಅಲ್ ಖೈಯ್ದಾ, ಅಥವಾ ತಾಲಿಬಾನ್ ನಲ್ಲಿ ಆವಾಗ ಸೌದಿ ನಾಗರಿಕರೇ ಹೆಚ್ಚು ಸದಸ್ಯರಿದ್ದರು. ಈ ಘಟನೆಯ ನಂತರ ಇಸ್ಲಾಂನ ಮೇಲೆ ವಿಶ್ವದ ಜನರಿಗೆಅಪನಂಬಿಕೆ ಬರಲು ಆರಂಭವಾಯ್ತು. 11, ಸೆಪ್ಟೆಂಬರ್ 2001. ಎಂದಿನಂತೆ ಅಂದೂ ಅಮೆರಿಕದಲ್ಲಿ ಜನಜೀವನ ತೆರೆದು ಕೊಂಡಿತ್ತು. ಆದರೆ 10 ಗಂಟೆ ಆಗುತ್ತಲೇ ವಿಶ್ವದ ಇತಿಹಾಸದಲ್ಲಿ ಅತ್ಯಂತ ಅಪಾಯಕಾರಿ ಆತಂಕವಾದಿ ದಾಳಿಯ ದಿನವಾಗಿ ಗುರುತಿಸಿ ಕೊಂಡಿತು. ಅಮೆರಿಕದ ಮೇಲೆ ನಡೆಸಿದ ಈತನಕದ ಭಯಾನಕ ದಾಳಿ ಎಂದು ದಾಖಲಾಯಿತು.
ನ್ಯೂಯಾರ್ಕ್ ನ ವರ್ಲ್ಡ್ ಟ್ರೇಡ್ ಸೆಂಟರ್‌ನ ಎರಡು ಟವರ್‌ಗಳಿಗೆ ಎರಡು ವಿಮಾನಗಳು ಬಂದು ಡಿಕ್ಕಿ ಹೊಡೆಯಿತು. ಈ ದಾಳಿಯಲ್ಲಿ 2606 ಜನರುಸಾವನ್ನಪ್ಪಿದರು. ವಿವಿಧೆಡೆ ನಡೆಸಿದ ಆತಂಕವಾದಿ ದಾಳಿಯಲ್ಲಿ ಒಟ್ಟು 2983 ಜನರ ಸಾವು ಸಂಭವಿಸಿತು. 3000 ಕ್ಕೂ ಅಧಿಕ ಮಕ್ಕಳು ತಂದೆತಾಯಿಯನ್ನುಕಳೆದುಕೊಂಡರು. ಈ ಘಟನೆಯನ್ನು ಇಂದಿಗೂ ಅಮೆರಿಕದ ಜನರಿಗೆ ಮರೆಯಲು ಆಗುತ್ತಿಲ್ಲ. ವಿಶ್ವದ ಅತ್ಯಂತ ಸುರಕ್ಷಿತ ಸ್ಥಳ ಎನ್ನುವ ಜಾಗದಲ್ಲೇ ಈ ದಾಳಿನಡೆದದ್ದು ನಂಬಲು ಕಷ್ಟವಾಗಿತ್ತು.
ದಾಳಿಯ ರೂವಾರಿ ಮೊಹ್ಮದ್ ಅತಾ:ಈ ಆತಂಕವಾದ ಷಡ್ಯಂತ್ರವನ್ನು ರೂಪಿಸಿದವ ಮೊಹ್ಮದ್ ಅತಾ. 11 ಸೆಪ್ಟೆಂಬರ್ 2001 ರಂದು ಪೋರ್ಟ್ ಲ್ಯಾಂಡ್, ಮೈನ್ ನ ಕಂಫರ್ಟ್ ಇನ್ ಹೋಟೆಲ್ ನಲ್ಲಿ ಕೋಣೆ ಸಂಖ್ಯೆ 233 ರಲ್ಲಿ ಬೆಳಗ್ಗೆ ನಾಲ್ಕು ಗಂಟೆಗೆ ಮೊಹ್ಮದ್ ಅತಾ ಎದ್ದು ಕೂತ. ಅದೇ ಹೋಟೆಲ್‌ನಲ್ಲಿದ್ದ ಜೊತೆಗಾರ ಅಬ್ದುಲ್ ಅಜೀಜ್ ಅಲ್ ಓಮಾರೀಗೆ ಫೋನ್ ತಾಗಿಸಿದ. ಸ್ನಾನದ ನಂತರ ನೀಲಿ ಬಣ್ಣದ ಕಮೀಜ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ. ಲೇಖಕ ವಿಲಿಯಮ್ ಆರ್ಕಿನ್ ತನ್ನ ಕೃತಿಯಲ್ಲಿ ಬರೆದಂತೆ ಅಂದು ಬೆಳಗ್ಗೆ 5 ಗಂಟೆ 33 ನಿಮಿಷಕ್ಕೆ ಅತಾ ಮತ್ತು ಆತನ ಜೊತೆಗಾರ ಹೋಟೆಲ್‌ನಿಂದ ಚೆಕ್ ಔಟ್ಆದರು. ಕೋಣೆಯ ಬಿಲ್ ಅತಾ ನ ವೀಸಾ ಡೆಬಿಟ್ ಕಾರ್ಡ್ ನಿಂದ ಸಲ್ಲಿಸಿದ. ಎಸ್ಬಿಐ ಹೇಳುವಂತೆ ಹಿಂದಿನ ದಿನ ವರ್ಲ್ಡ್ ಟ್ರೇಡ್ ಸೆಂಟರ್‌ಗೂ ತೆರಳಿ ಅವರು ಸ್ಥಳದ ಪರಿಶೀಲನೆ ನಡೆಸಿದ್ದರು.
ಹೋಟೆಲ್ ನಿಂದ ಹೊರಬಂದ ಅತಾ ಮತ್ತು ಅಬ್ದುಲ್ ಜೀಜ್ ಅಲ್ ಒಮಾರೀ ಜೊತೆಗೆ ನೀಲಿಬಣ್ಣದ ಕಾರಲ್ಲಿ ಏಳು ನಿಮಿಷದಲ್ಲಿ ಏರ್ ಪೋರ್ಟ್ ಗೆ ಬಂದರು. 5.45 ಕ್ಕೆ ಸುರಕ್ಷಾ ತಪಾಸಣೆ ನಡೆಯಿತು. ಅವರ ಬಳಿ ಒಂದು ಕಪ್ಪು ಬ್ಯಾಗ್ ಇತ್ತು.ಕ್ಯಾಮರಾ ಇತ್ತು. ಮೆಟಲ್ ಡಿಟೆಕ್ಟರ್‌ಗೆ ಇವರ ಬಳಿ ಏನೂ ಅಪಾಯದ ವಸ್ತು ಸಿಗಲಿಲ್ಲ. 6 ಗಂಟೆಗೆ ಯು ಎಸ್ ಏರವೇಸ್ ನ ವಿಮಾನ ಸಂಖ್ಯೆ 5930 ರಲ್ಲಿ ಕೂತರು. 19 ಪ್ರಯಾಣಿಕರ ಈ ವಿಮಾನದಲ್ಲಿ 8 ಪ್ರಯಾಣಿಕರು ಮಾತ್ರ ಇದ್ದರು. 45 ನಿಮಿಷದಲ್ಲಿ ಬೋಸ್ಟನ್ ಲೋಗನ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ತಲುಪಿದರು. ಅಲ್ಲಿ ಲಾಸ್ ಏಂಜಲಿಸ್‌ಗೆ ತೆರಳುವ ಎಎ ವಿಮಾನ ಸಂಖ್ಯೆ 11 ರಲ್ಲಿ ಪ್ರಯಾಣಿಸಬೇಕಿತ್ತು. 81 ಪ್ರಯಾಣಿಕರು, 9 ಸಿಬ್ಬಂದಿಗಳು ಇದ್ದರು. 7.59 ಕ್ಕೆ ಈ 767 ಬೋಯಿಂಗ್ ವಿಮಾನ ಹೊರಡಲು ರೆಡಿ ಆಯ್ತು.
ಭಯಾನಕ ದೃಶ್ಯ:8 ಗಂಟೆ 18 ನಿಮಿಷಕ್ಕೆ ವಿಮಾನ ಅಪಹರಣದ ಸೂಚನೆ ಸಿಕ್ಕಿತು. 8.26 ಕ್ಕೆ ವಿಮಾನ ನ್ಯೂಯಾರ್ಕ್ ದಿಕ್ಕಿಗೆ ಮುಖಮಾಡಿತು. 8.46 ಕ್ಕೆ ವರ್ಲ್ಡ್ ಟ್ರೇಡ್ ಸೆಂಟರ್‌ನ 93 ಮತ್ತು 99 ನೇ ಮಾಳಿಗೆಗೆ ಡಿಕ್ಕಿ ಹೊಡೆಯಿತು. ವಿಮಾನದಲ್ಲಿದ್ದ 10 ಸಾವಿರ ಗ್ಯಾಲನ್ ಇಂಧನ ಆ ಮಾಳಿಗೆಯ ಆಫೀಸ್‌ಗಳಿಗೆ ಚೆಲ್ಲಿ ಬೆಂಕಿ ಹತ್ತಿತು.
17 ನಿಮಿಷದ ನಂತರ 9.03 ನಿಮಿಷಕ್ಕೆ ಅಪಹರಿಸಿದ್ದ ಇನ್ನೊಂದು ವಿಮಾನ 175 ವರ್ಲ್ಡ್ ಟ್ರೇಡ್ ಸೆಂಟರ್‌ನ ದಕ್ಷಿಣ ಟವರ್‌ಗೆ ಡಿಕ್ಕಿ ಹೊಡೆಯಿತು. ಹೀಗೆ 1 ಗಂಟೆ 42 ನಿಮಿಷದಲ್ಲಿ 110 ಮಾಳಿಗೆಯ ಎರಡೂ ಕಟ್ಟಡಗಳು ಧ್ವಂಸಗೊಂಡಿತು. ಇನ್ನೊಂದು ವಿಮಾನ ಪೆಂಟಾಗನ್‌ನ ಪಶ್ಚಿಮ ದಿಕ್ಕಿಗೆ ದಾಳಿ ನಡೆಸಿತು. ವಿಮಾನ ಸಂಖ್ಯೆ 93 ನ್ನು ಕೂಡಾ ಅಪಹರಣದ ಪ್ರಯತ್ನ ನಡೆದು ಪ್ರಯಾಣಿಕರು ವಿಫಲಗೊಳಿಸಿದರೂ ದುರ್ಘಟನೆ ಸಂಭವಿಸಿ ಅದರಲ್ಲಿದ್ದ ಎಲ್ಲರೂ ಸತ್ತರು. ಆ ಸಮಯ ಆಕಾಶದಲ್ಲಿ ಹೊಗೆಯೇ ಹೊಗೆ.
ಆತಂಕವಾದಿ ಅತಾ:1968 ರಲ್ಲಿ ಅತಾ ಈಜಿಪ್ಟ್ ನಲ್ಲಿ ಜನಿಸಿದ್ದ. ಬಾಲ್ಯದಲ್ಲಿ ನಾಚಿಗೆ ಸ್ವಭಾವದವನಾಗಿದ್ದ ಎನ್ನುತ್ತಾರೆ ಆತನ ಊರಿನವರು. ಅತಾಕಾಹಿರಾವಿಶ್ವವಿದ್ಯಾಲಯಿಂದ ಎಂಜಿನಿಯರಿಂಗ್‌ನಲ್ಲಿ ಸ್ನಾತಕ ಡಿಗ್ರಿ ಪಡೆದ ನಂತರ ಜರ್ಮನಿಗೆ ತೆರಳಿದ್ದ. ಅನಂತರ ಆತ ಹ್ಯಾಂಬರ್ಗ್‌ನಲ್ಲಿ ವಿವಿ ಯಲ್ಲಿದ್ದಾಗ ದೀರ್ಘ ಕಾಲನಾಪತ್ತೆ ಆಗಿದ್ದ. ತಾನು ಹಜ್ ಯಾತ್ರೆಗೆ ಸೌದಿಗೆ ಹೋಗಿದ್ದೆ ಅಂತ ಸುಳ್ಳು ಹೇಳಿದ್ದ. ಜರ್ಮನ್ ಗುಪ್ತಚರ ಮೂಲಗಳ ಪ್ರಕಾರ ಆವಾಗ ಅತಾ ಆತಂಕವಾದಿ ಸಂಘಟನೆಯ ಜನರ ಸಂಪರ್ಕಕ್ಕೆ ಬಂದಿದ್ದ.
ವಾಪಸ್ ಬಂದ ನಂತರ ಹೊಸ ಪಾಸ್ ಪೋರ್ಟ್ ಮಾಡಿಸಿದ್ದ. ಯಾಕೆಂದರೆ ಹಳೆ ಪಾಸ್ ಪೋರ್ಟ್ ನಲ್ಲಿ ಎಲ್ಲೆಲ್ಲಿ ಹೋಗಿದ್ದ ಎಂದು ತಿಳಿಯುವುದರಿಂದ ಅದನ್ನುನಾಶ ಮಾಡಿದ್ದ. 3 ಜೂನ್ 2000 ದಂದು ಟೂರಿಸ್ಟ್ ವೀಸಾದಲ್ಲಿ ನ್ಯೂಯಾರ್ಕ್ ಬಂದಿದ್ದ. ವೇನಿಸ್‌ನಲ್ಲಿ ಸಹಚರರ ಜೊತೆ ವಿಮಾನ ಪೈಲಟ್ ಟ್ರೇನಿಂಗ್ ಪಡೆದ. ನಾಲ್ಕು ತಿಂಗಳ ಟ್ರೇನಿಂಗ್‌ಗೆ ಇವರೆಲ್ಲ 40 ಸಾವಿರ ಡಾಲರ್ ನೀಡಿದ್ದರು. 21 ಡಿಸೆಂಬರ್ 2000 ಕ್ಕೆ ಪೈಲಟ್ ಲೈಸನ್ಸ್ ಸಿಕ್ಕಿತು. ಅಲ್ಲಿಂದ ಭಯೋತ್ಪಾದನೆಯ ಕೃತ್ಯಕ್ಕೆ ಷಡ್ಯಂತ್ರ ರಚಿಸಲಾಯ್ತು.
ವಿಶ್ವ ಇದಕ್ಕಿಂತ ಮೊದಲು ಎಂದೂ ಈ ರೀತಿಯ ಆತಂಕವಾದ ದಾಳಿಯನ್ನು ನೋಡಿರಲಿಲ್ಲ. ಅಮೆರಿಕದ ಮೂರು ವಿಮಾನ ನಿಲ್ದಾಣಗಳಿಂದ ಹೊರಟ 4ವಿಮಾನಗಳನ್ನು ಒಸಮಾ ಬಿನ್ ಲಾಡೆನ್‌ನ ಆತಂಕವಾದಿ ಸಹಚರರು ಅಪಹರಿಸಿ ಈ ದಾಳಿ ನಡೆಸಿದರು. ಇದರಲ್ಲಿ ಬೋಸ್ಟನ್‌ನಿಂದ ಹೊರಟ ಎರಡು ವಿಮಾನ ಗಳನ್ನು ಮಿಸೈಲ್ ರೂಪದಲ್ಲಿ ಬಳಸಿ 18 ನಿಮಿಷಗಳ ಅಂತರದಲ್ಲಿ ಮ್ಯಾನ್ ಹಟನ್ ನಲ್ಲಿ ವರ್ಲ್ಡ್ ಟ್ರೇಡ್ ಟಾವರ್‌ಅನ್ನು ಧ್ವಂಸಗೊಳಿಸಿದರು.
ವಾಷಿಂಗ್ಟನ್ ಡಿಸಿಯ ಸಮೀಪ ಅವಳಿ ಏರ್‌ಪೋರ್ಟ್ ನಿಂದ ಹೊರಟ ವಿಮಾನಗಳನ್ನು ಪೆಂಟಾಗನ್ ಬಿಲ್ಡಿಂಗ್ ನ ದಕ್ಷಿಣ ಪಶ್ಚಿಮ ಭಾಗದಲ್ಲಿ ಡಿಕ್ಕಿ ಹೊಡೆಸ ಲಾಯಿತು. ನ್ಯೂಜೆರ್ಸಿಯ ನ್ಯೂಯಾರ್ಕಿನಿಂದ ಹೊರಟ ನಾಲ್ಕನೇ ವಿಮಾನ ಪೆನ್ಸಿಲ್ವೇನಿಯಾದ ಸಮೀಪ ಮೈದಾನದಲ್ಲಿ ಧ್ವಂಸಗೊಳಿಸಲಾಯಿತು.ಆತಂಕವಾದಿಗಳು ಈ ವಿಮಾನವನ್ನು ಹೈಜಾಕ್ ಮಾಡಿದ್ದರು. ಆದರೆ ಪ್ರಯಾಣಿಕರು ಮತ್ತು ಆತಂಕವಾದಿಗಳ ನಡುವಿನ ಹೋರಾಟದಲ್ಲಿ ವಿಮಾನ ಉರಿಯಿತು.ಈ ದಾಳಿಗಳ ದೃಶ್ಯಗಳು ಇಷ್ಟೊಂದು ಭಯಾನಕವಾಗಿತ್ತು ಎಂದರೆ ಅಮೆರಿಕ ರಾಷ್ಟ್ರಪತಿಯ ಸುರಕ್ಷೆ ನೀಡುತ್ತಿರುವ ಸೀಕ್ರೆಟ್ ಸರ್ವಿಸ್‌ನ ಏಜೆಂಟ್ ಜಾರ್ಜ್ ಬುಶ್ ಅವರನ್ನು ಅನೇಕ ಗಂಟೆಗಳ ಕಾಲ ಏರ್ ಫೋರ್ಸ್ ಒನ್ ಇದರ ಒಳಗೆ ಒಯ್ದು ಆಕಾಶದಲ್ಲಿ ಹಾರುತ್ತಲೇ ಇದ್ದರು. ಆ ಸಮಯ ಅವರ ರಕ್ಷಣೆಗಾಗಿ ಎಫ್ 16 ಯುದ್ಧ ವಿಮಾನವನ್ನು ಇರಿಸಿದ್ದರು.
ನಿನ್ನೆಗೆ ಆ ಭಯಾನಕ ಆತಂಕವಾದಿ ದಾಳಿಗೆ 20 ವರ್ಷ ತುಂಬಿತು. ಈ ಸಂದರ್ಭದಲ್ಲಿ ಸೀಕ್ರೆಟ್ ಸರ್ವಿಸ್ ತನ್ನ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಅಂದಿನ ದಾಳಿಯ ಅನೇಕ ಚಿತ್ರಗಳನ್ನು ಜಾರಿಗೊಳಿಸಿದೆ. ಇದು ದಾಳಿಯ ನಂತರ ಸೀಕ್ರೆಟ್ ಸರ್ವಿಸ್‌ನ ಸಿಬ್ಬಂದಿಗಳು ಕ್ಲಿಕ್ಕಿಸಿದ ಚಿತ್ರಗಳಾಗಿದ್ದವು. ಮುಂದೆ ಅಕ್ಟೋಬರ್ 7 ರಿಂದ ಅಫ್ಘಾನಿಸ್ತಾನದಲ್ಲಿ ಅಮೆರಿಕದ 20 ವರ್ಷಗಳ ದೀರ್ಘ ಹೋರಾಟ ಆರಂಭವಾಯಿತು. ಅದು ಆಗಸ್ಟ್ 15, 2021 ಕ್ಕೆ ಕೊನೆಗೊಂಡು ಅಮೆರಿಕ ಸೇನೆ ಅಫ್ಘನ್ ತ್ಯಜಿಸಿತು. ಈ ದಾಳಿಯ ಮಾಸ್ಟರ್ ಮೈಂಡ್, ಅಲ್ ಖೈಯ್ದಾ ನಾಯಕ ಒಸಾಮಾ ಬಿನ್ ಲಾಡೆನ್ ನನ್ನು ಪಾಕಿಸ್ತಾನದ ಎಬ್ಟಾಬಾದ್ ಪ್ರದೇಶದಲ್ಲಿ ಅಮೆರಿಕದ ನೇವಿ ಸೀಲ್ ಕಮಾಂಡೋಗಳು 2 ಮೇ,2011 ರಂದು ಕೊಂದುಹಾಕಿತು.