ಮನೆಯೆಂಬ ದೇಗುಲದಲ್ಲಿ ಅಡಿಗೆಯೆಂಬ ನಿತ್ಯಧ್ಯಾನ !
ಯಶೋ ಬೆಳಗು
ಯಶೋಮತಿ ಬೆಳಗೆರೆ
ಭೀಮಸೇನ ನಳಮಹರಾಜರು ಗಂಡಸರಲ್ಲವೇ?
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೆ?
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ… ಮಹರಾಣಿಯ ಹಾಗೆ….
ಎಂದು ಹಾಡುತ್ತಾ ತಾನೇ ಅಡುಗೆಯ ಸೌಟು ಹಿಡಿದು, ತನ್ನ ಮುದ್ದಿನ ಮಡದಿಯನ್ನು ಕುಳ್ಳರಿಸಿ ಪ್ರೀತಿಯಿಂದ ಅಡುಗೆ ಮಾಡುವ ಡಾ.ರಾಜಕುಮಾರ್‌ ರನ್ನು ನೋಡಿದರೆ ಎಂಥವರಿಗೂ ಒಂದು ಕ್ಷಣದ ಮಟ್ಟಿಗೆ ನಮಗೂ ಇಂಥ ಗಂಡ ಇರಬಾರದಿತ್ತಾ? ಎಂದು ಅನಿಸದೇ ಇರದು.
ಅಡುಗೆ ಅಂದರೆ, ಅದು ಒಂದು ಘಳಿಗೆಯ, ಒಂದು ಹೊತ್ತಿನ, ಒಂದು ದಿನದ ಕೆಲಸವಷ್ಟೆ ಅಲ್ಲ. ಅಲ್ಲಿ ಪ್ರತಿ ದಿನ ಭಕ್ಷ್ಯಭೋಜನವೆಂಬ ನಿತ್ಯಾನ್ನ ಬೇಯುತ್ತಲೇ ಇರಬೇಕು. ಚಹಾ, ಕಾಫಿ, ತಿಂಡಿ, ಊಟದ ಅಡುಗೆಗಳು ದಿನನಿತ್ಯವಾದರೆ, ಹಬ್ಬದ ದಿನ ವಿಶೇಷವಾದ ಆಯಾ ಹಬ್ಬಕ್ಕೆ ತಕ್ಕಂತೆ ಹಬ್ಬದಡುಗೆಗಳೂ, ಮಕ್ಕಳಿಗೆ,ವಯಸ್ಕರಿಗೆ, ಅನಾರೋಗ್ಯ ಪೀಡಿತರಿಗೆ ಡಯಟ್ಫುಡ್ಡುಗಳು, ಹಾಗೇ ಪಿತೃಗಳಿಗೆ ಪಿಂಡವೂ, ದೇವರಿಗೆ ನೈವೇದ್ಯವೂ ತಯಾರಾಗುವುದು ಇದೇ ಅಡುಗೆ ಮನೆಯಲ್ಲೇ.
ಇಡೀ ಮನೆಯ ಜೀವರಕ್ಷಣೆ ಮಾಡುವ ಅಡುಗೆ ಮನೆ ಪ್ರತೀ ಮನೆಯ ಜೀವಾಳ. ಇಂಥಾ ಅಡುಗೆ ಮನೆಯೆಂಬ ಅರಮನೆಯ ಒಡತಿಯಾದ ಗೃಹಿಣಿ ಎಲ್ಲರ ಅವಶ್ಯಕತೆಗೆ ತಕ್ಕಂತೆ ಅದೆಷ್ಟು ಜಾಣತನದಿಂದ, ಸ್ವಚ್ಚವಾಗಿ, ಚೊಕ್ಕಟವಾಗಿ, ರುಚಿಕಟ್ಟಾಗಿ ಆಹಾರವನ್ನು ತಯಾರಿಸುತ್ತಾ ಎಲ್ಲರ ಮೆಚ್ಚುಗೆಯನ್ನು ಗಳಿಸುತ್ತಾಳೆಅನ್ನುವುದೇ ಬಹಳ ಮುಖ್ಯ.
ದೂರಬೆಟ್ಟದಲ್ಲಿ ಪುಟ್ಟಮನೆಯಿರಬೇಕು;
ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು…
ತಂಗಾಳಿ ಜೋಗುಳವಾ ಹಾಡಿರಬೇಕು…ಬಂಗಾರದ ಹೂವೆ ನೀನು ನಗುತಿರಬೇಕು
ನನ್ನ ಜೊತೆಯಿರಬೇಕು….
ಅನ್ನುವುದು ಏಕಾಂತ ಬಯಸುವ ಪ್ರತಿಯೊಬ್ಬ ಪ್ರೇಮಿಯ ಕನಸು… ಆದರೆ ಕನಸಿನ ಲೋಕ ಮುಗಿದು ನೈಜತೆಯ ಬದುಕು ತೆರೆದುಕೊಳ್ಳುವುದು ಹಸಿವು ಚುರುಗುಟ್ಟಿ ಅಡುಗೆ ಮನೆ ನೆನಪಾದಾಗಲೇ, ಅಡುಗೆ ಅಂದ ಕೂಡಲೇ ನೆನಪಾಗುವ ದೇವತೆಯೆಂದರೆ ಅನ್ನಪೂರ್ಣೇಶ್ವರಿ.
ಪಂಕ್ತಿ ಭೋಜನದಲ್ಲಿ ಅನ್ನಪೂರ್ಣೇಶ್ವರಿಯ ಧ್ಯಾನದ ನಂತರವೇ ಊಟದ ಆರಂಭ ಕೆಲವು ಕಡೆ. ಸಾಮಾನ್ಯವಾಗಿ ಮನೆಯ ಒಡತಿ, ತಾಯಿಯನ್ನು ಅನ್ನಪೂರ್ಣೇ ಶ್ವರಿಗೆ ಹೋಲಿಸುವುದು ನಮ್ಮ ರೂಢಿಗತ ಸಂಪ್ರದಾಯದ ಒಂದು ಭಾಗ. ಏಕೆಂದರೆ, ಉಣ್ಣುವುದಕ್ಕಿಂತಲೂ ಬಡಿಸುವುದರಲ್ಲೇ ಹೆಚ್ಚು ತೃಪ್ತಿ ತಾಯಂದಿರಿಗೆ. ಅಡುಗೆ ಮಾಡುವುದು ಒಂದು ಕಲೆಯಾದರೆ, ಮಾಡಿದ ಅಡುಗೆಯನ್ನು ಪ್ರೀತಿಯಿಂದ ಬಡಿಸುವುದೂ ಕೂಡ ಅದರಷ್ಟೆ ಮಹತ್ವವನ್ನು ಪಡೆದ ಒಂದು ಅದ್ಭುತ ಕಲೆ. ನಗುಮೊಗದಿಂದ, ಒಳ್ಳೆಯ ಮಾತನಾಡುತ್ತಾ ಬಡಿಸಿದರೆ ಹಸಿವಿಲ್ಲದವರೂ ಕೂಡ ಒಂದು ತುತ್ತು ಹೆಚ್ಚಿಗೆ ತಿನ್ನುವಂತಾಗುತ್ತದೆ.
ಒಲ್ಲದ ಮನಸ್ಸಿನಿಂದ ಸಿಡುಕುತ್ತಾ ಮೃಷ್ಟಾನ್ನ ಬಡಿಸಿದರೂ ಅದನ್ನು ಸವಿಯುವ ಮನಸಾಗುವುದೇ ಇಲ್ಲ. ಇದೆಲ್ಲ ಮನೆ-ಮನೆಯೊಳಗಿರುವ ಅಡುಗೆ ಮನೆಯಕತೆಯಾದರೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರಿಗೆ ಮದುವೆ, ನಾಮಕರಣ, ಉಪನಯನ, ಹುಟ್ಟುಹಬ್ಬದಂಥ ವಿಶೇಷ ದಿನಗಳಲ್ಲಿ ಎಲ್ಲರೂ ಅವಲಂಬಿತರಾಗುವುದು ಅಡುಗೆ ಭಟ್ಟರ ಮೇಲೆಯೇ. ಅದಕ್ಕೆ ಆದರ್ಶ ಪುರುಷರಾಗಿರುವ ನಮ್ಮ ಭೀಮಸೇನ, ನಳಮಹರಾಜರನ್ನು ತೆಗೆದು ಹಾಕುವಂತಿಲ್ಲ. ಯಾರಾದರೂ ತುಂಬ ರುಚಿಯಾದ ತಿಂಡಿಯನ್ನು ತಯಾರಿಸಿದ್ದರೆ ಅದಕ್ಕೆ ಹೊಗಳಿಕೆಯಾಗಿ ನಳಪಾಕ ಎಂದು ಹೇಳುವುದು ಇಂದಿಗೂ ರೂಢಿಗತ.
ನಮ್ಮ ಕಾಲದಲ್ಲೆಲ್ಲ ಹೆಣ್ಣುಮಕ್ಕಳು ಬೆಣ್ಣೆ-ತುಪ್ಪ ತಿನ್ನುತ್ತಾ ಮೈಕೈ ತುಂಬಿಕೊಂಡು ನೋಡೋಕೆ ಅದೆಷ್ಟು ಲಕ್ಷಣವಾಗಿ, ಆರೋಗ್ಯವಾಗಿ ಕಾಣ್ತಿದ್ರು.   ಒಂದು   ಮಕ್ಕಳನ್ನು ಹೆತ್ತರೂ ಅವರಲ್ಲಿ ಆರೋಗ್ಯ ನಳನಳಿಸುತ್ತಿತ್ತು. ಈಗಿನ ಕಾಲದ ಹುಡುಗಿಯರು ಒಂದೊಂದು ಮಗುವಿಗೇ ಬೆಟ್ಟ ತಲೆ ಮೇಲೆ ಬಿದ್ದವರಂತಾಡುತ್ತಾ ಮುಟ್ಟಿದ್ರೆ ಮುರಿದು ಹೋಗೋ ಪೇಷಂಟ್ ಗಳ ಥರಾ ಕಾಣ್ತಾರೆ ಅನ್ನೋದು ನಮ್ಮ ತಲೆಮಾರಿನ ಎಲ್ಲ ಅಮ್ಮಂದಿರ, ಅಜ್ಜಿಯರ ಮಾತು ಗಳು.
‘ಅಮ್ಮಾ ಹಸಿವೂ…’ ಅಂತ ಓಡಿ ಬರುವ ಮಗುವಿಗೆ ‘ದೋ ಮಿನಿಟ್’ ಅಂತ  ಆಗಿ ನಗುತ್ತಾ ಮ್ಯಾಗಿ ತಯಾರಿಸಿ ಮುಂದಿಡುವ  ಮಮ್ಮಿಯರಅಡುಗೆ ಮನೆ ತುಂಬಾ  ,  ,  , ,  cornಗಳೇ ತುಂಬಿ ಹೋಗಿವೆ. ತೆಳ್ಳಗೆ ಬಳುಕುತ್ತಾ ಹರೆಯದ ಹುಡುಗಿ ಯರಂತೆ ಕಾಣಲು   ನ ಹಿಂದೆ ಬಿದ್ದ ಆಂಟಿಯರು ಡಯಟ್ ಅಂತ ಹೇಳಿ  ,  , , sproutsಅಂತ ಒಲೆ ಹತ್ತಿಸುವು ದನ್ನೇ ಮರೆತಿರುವಾಗ ಗ್ಯಾಸ್ ಸಿಲಿಂಡರಿನ ಬೆಲೆ ಗಗನಕ್ಕೇರಿದ್ದು ಯಾಕೆ ಅನ್ನೋದು ಮಾತ್ರ ದೊಡ್ಡ ಯಕ್ಷ ಪ್ರಶ್ನೆ!
ಲಂಗ-ರವಿಕೆಯಿಂದ ಸಲ್ವಾರ್ ಕಮೀಜ್ ಗೆ ಬದಲಾಗಿ ಜೀನ್ಸು-ಶಾರ್ಟ್ಸು ಅಂತಾಗಿರುವ ಈಗಿನ ಕಾಲದ ಹುಡುಗಿಯರಿಗೆ ಅಡುಗೆ ಮನೆ ಅಂದರೆ ಜಿರಳೆಯಷ್ಟೇ ಅಲರ್ಜಿ. ಇನ್ನು ಮಕ್ಕಳಿಗಂತೂ ಮನೆಯ ಅಡುಗೆಗಿಂತ ಪಾಶ್ಚಾತ್ಯ ಶೈಲಿಯ ಆಹಾರವಾದ ಪಿಜ್ಜಾ-ಬರ್ಗರ್, ಡೋನಟ್ಸ್, ಪೇಸ್ಟ್ರಿ KFCಫುಡ್ಡುಗಳೇ ಫೇವರಿಟ್! ಹೀಗಾಗಿ ಕುರುಕಲು, ಚಕ್ಕುಲಿ, ಕೋಡುಬಳೆ, ಕರಿಗಡುಬು, ತೇಂಗೊಳಲು, ಶಂಕರಪೋಳಿ, ಕೊಬ್ಬರಿ ಮಿಠಾಯಿ, ಕಡಲೆ ಉಂಡೆಗಳು ಮರೆತೇ ಹೋದಂತಾಗಿವೆ. ಮೊದಲೆಲ್ಲ ಸಮಯ ಸಿಕ್ಕರೆ ಗೆಳತಿ-ಸಂಬಂಧಿಕರಮನೆಗೆ ಹೋದರೆ ಮಾತಾಡುತ್ತಲೇ ಘಮಘಮಿಸುವ ಕಾಫಿ ಕೊಟ್ಟು, ಅಡುಗೆ ತಯಾರಿಸುತ್ತಿದ್ದ ಅಪ್ಪಟಗೃಹಿಣಿಯರೂ ಇಂದು ಭೇಟಿಯಾಗೋಕೆ ಮನೆಗಿಂತ ಹೋಟೆಲ್, ಕಾಫಿಶಾಪುಗಳನ್ನು ಹುಡುಕುತ್ತಾರೆ.
ಅದಕ್ಕೇ ಈಗ ಗಲ್ಲಿಗೊಂದು ದರ್ಶಿನಿ, ಛಾನಲ್ ಗೊಂದು ಅಡುಗೆ ಕಾರ್ಯಕ್ರಮ! ಅಡುಗೆ ಮನೆ ತುಂಬ ಪಾತ್ರೆಗಳಿಗಿಂತ ಹೆಚ್ಚಾಗಿ ಹೊಸರುಚಿ ಪುಸ್ತಕಗಳು! ನಿಮಗೆ ಯಾವ ಅಡುಗೆ ಚೆನ್ನಾಗಿ ಮಾಡೋಕೆ ಬರುತ್ತೆ? ಅಂತೇನಾದರೂ ಕೇಳಿದರೆ ನೆಲ ನೋಡೋ ಜನ, ಅದೇ ಯಾವ ಹೋಟೆಲ್ ನಲ್ಲಿ ಯಾವ   ಚೆನ್ನಾಗಿರತ್ತೆ? ಯಾವ ಚಾನಲ್ ನಲ್ಲಿ ಯಾವ ಆಂಕರ್ ನಡೆಸಿಕೊಡುವ ಅಡುಗೆ ಕಾರ್ಯಕ್ರಮ ಇಂಟರೆಸ್ಟಿಂಗ್ ಆಗಿರತ್ತೆ? ಅನ್ನೋ ಪ್ರಶ್ನೆಗೆ ಥಟ್ ಅಂತ ಉತ್ತರ ಹೇಳ್ತಾರೆ.
ಕಾಲಕಾಲಕ್ಕೆ ಅಡುಗೆಯ ಜತೆಜತೆಗೆ ಅಡುಗೆ ಮನೆಗಳೂ ಬಹಳಷ್ಟು ಬದಲಾಗಿವೆ. ಮೊದಲೆಲ್ಲ ಅಡುಗೆ ಮನೆಯ ತುಂಬ ಏನಿದೆ ಅನ್ನುವ ರಹಸ್ಯವನ್ನೇ ಬಿಟ್ಟು ಕೊಡದ ಹಿತ್ತಾಳೆ, ಇಂಡಾಲಿಯಮ್ ಹಾಗೂ ಸ್ಟೀಲ್ ಡಬ್ಬಿಗಳೇ ತುಂಬಿಕೊಂಡಿರುತ್ತಿದ್ದ ಜಾಗವನ್ನು ಈಗ ಪಾರದರ್ಶಕವಾದ, ಗಾಳಿಗೂ ನುಸುಳಲು ಅವಕಾಶ ಕೊಡದ ಟಪ್ಪರ್ ವೇರ್ ಬಾಕ್ಸ್ ಗಳು ಅಡುಗೆ ಮನೆಯ ಖಜಾನೆಯನ್ನು ತೆರೆದಿಡುತ್ತವೆ. ಹೀಗಾಗಿ ಹುಳ-ಹುಪ್ಪಟೆಗಳಿಲ್ಲದೆ ಮನೆ ಅಂಗಳದಲ್ಲಿ ಹಕ್ಕಿಗಳಚಿಲಿಪಿಲಿಗಳೂ ಮರೆಯಾಗಿವೆ. ನಾನೆಲ್ಲೋ ಮೂಲೆಗುಂಪಾಗಿಬಿಡ್ತಿದೀನಿ ಅನ್ನುವ ಭಾವನೆಯಿಂದ ಮುಕ್ತರಾಗಿ ಎಲ್ಲರೊಡನೆ ಹರಟುತ್ತಾ, ಟೀವಿ ನೋಡುತ್ತಾ ಖುಷಿಯಿಂದ ಅಡುಗೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ; ಜತೆಗೆ ತರಕಾರಿ ಸಿಪ್ಪೆ, ತೆಂಗಿನ ನಾರು, ಈರುಳ್ಳಿಯ ದಾಸ್ತಾನು ಕಣ್ಣಿಗೆ ರಾಚದಂತೆ ಎಲ್ಲದಕ್ಕೂ   ನ ಆಕರ್ಷಕ ಬಣ್ಣದಿಂದ ಕೂಡಿದ   ಗಳದ್ದೇ ದರ್ಬಾರು ಈಗ.
ಅತಿಥಿ ದೇವೋಭವ ಅನ್ನುವ ಮಾತನ್ನು ಅಕ್ಷರಶಃ ಪಾಲಿಸುವ ಭಾರತೀಯರು ನಾವು. ಹೆಣ್ಣು ಕುಟುಂಬದ ಕಣ್ಣು ಅನ್ನುವ ಮಾತಿದೆ. ಕಾರಣ, ಇಡೀ ಕುಟುಂಬದ ಹಸಿವು ನೀಗಿಸಿ, ಆರೋಗ್ಯದ ಕಾಳಜಿ ವಹಿಸುತ್ತಾ ಸಲಹುವ ಮಾತೃಹೃದಯಿ ಹೆಣ್ಣಲ್ಲದೆ ಬೇರಿನ್ನಾರಾಗಲು ಸಾಧ್ಯ? ಈಗಲೂ ಬಯಲುಸೀಮೆ, ಮಲೆನಾಡು ಹಾಗೂ ನಮ್ಮ ಮೈಸೂರು, ಮಂಡ್ಯದ ಕಡೆಯ ಜನ ಮೊದಲು ಹುಡುಗಿಗೆ ಅಡುಗೆ ಮಾಡಲು ಬರುತ್ತದಾ? ಅಂತ ವಿಚಾರಸಿ ತಿಳಿದುಕೊಂಡ ನಂತರವೇ ಮುಂದಿನ ಮದುವೆಯ ಮಾತುಕತೆ ನಡೆಸುತ್ತಾರೆ.
ಒಂದೊಂದು ಕಡೆ ಒಂದೊಂದು ರೀತಿಯ ವಿಶೇಷ ಅಡುಗೆಗಳು ಆಯಾ ಭೌಗೋಳಿಕ ಹವಾಮಾನಕ್ಕೆ ತಕ್ಕಂತೆ ರೂಢಿಸಿಕೊಂಡಿದ್ದಾರೆ. ಕಡುಬು, ಪತ್ರೋಡೆ, ನೀರ್ದೋಸೆ, ಪುನರ್ಪುಳಿಗಳ ಜೊತೆಗೆ ಮೀನೆಂದ ಕೂಡಲೇ ನೆನಪಾಗುವುದು ಕರಾವಳಿಯ ಜನ. ಇನ್ನು ಪಂದಿಕರಿ, ಪುಟ್ಟು, ಪುಡ್ಡಿಂಗ್,  ಗಳಿಗೆ ಹೆಸರಾ ದವರು ಕೊಡವರಾದರೆ, ಬಿರಿಯಾನಿಗೆ ಮುಸ್ಲಿಮರು! ಮಾಧ್ವ ಬ್ರಾಹ್ಮಣರ ಮನೆಗಳಲ್ಲಿ ಸದಾ ಸ್ವಲ್ಪ ಸಿಹಿ ಮುಂದು. ಹಾಗೇ ಬಯಲು ಸೀಮೆಯ ಅಡುಗೆಗಳಲ್ಲಿ ಸ್ವಲ್ಪ ಖಾರ ಮುಂದು. (ನಾವೇನಾದರೂ ಆ ರೀತಿ ಖಾರ ತಿಂದರೆ ಮಾರನೇ ದಿನವೇ ಪೈಲ್ಸು ಅಂತ ಟಾಯ್ಲೆಟ್ಟಿಗೂ ಹೋಗೋಕಾಗದಂತಾಗಿ ಬಿಟ್ಟಿರುತ್ತದೆ.) ಏನೇ ಆದರೂ ಜೋಳದ ರೊಟ್ಟಿಯೊಂದಿಗೆ ತಟ್ಟೆ ತುಂಬ ಇರುವ ನಾನಾ ಥರದ ಪಲ್ಯ, ಸೊಪ್ಪು, ತರಕಾರಿ, ಮೊಸರು, ಚಟ್ನಿಪುಡಿಗಳೊಂದಿಗೆ ಕಾಣುವ ಉತ್ತರಕರ್ನಾಟಕದ ಖಡಕ್ ಊಟ ಯಾರ ಬಾಯಲ್ಲಾದರೂ ನೀರೂರಿಸದಿರದು.
ಇನ್ನು ತೆಳ್ಳೇವು, ಜೋನಿಬೆಲ್ಲ, ತಂಬುಳಿ, ಕರಕಲಿ, ಸಾಸಿವೆ, ಕಾಯಿರಸದಂತಹ ಸಪ್ಪೆ ಸಪ್ಪೆ ಅಡುಗೆಗಳು ಮಲೆನಾಡಿನ ವಿಶೇಷವಾದರೆ, ರಾಗಿಮುದ್ದೆ, ಬಾಡೂ ಟದ ಜತೆಗೆ ಉಪ್ಸಾರು, ಬಸ್ಸಾರು, ಹಿದುಕಿದ ಅವರೇಕಾಳು ಸಾರೆಲ್ಲ ತುಮಕೂರು, ಮಂಡ್ಯ, ಮೈಸೂರಿನವರದ್ದು. ರಾಗಿ ಅಂದರೆ ಕಪ್ಪು ಅಂತ ಮುಖ ತಿರುಗಿಸು ತ್ತಿದ್ದವರೆಲ್ಲ ಈಗ ರಾಗಿ ಎಂಥಾ ಆರೋಗ್ಯದಾಯಕ ಅನ್ನುವ ಅಂಶವನ್ನು ಕಂಡುಕೊಂಡ ಮೇಲೆ ಎಲ್ಲರ ಮನೆಯಲ್ಲೂ ರಾಗಿ ನವಿರಾಗಿ ನಗುತ್ತಿದೆ. ಸಾಲದ್ದಕ್ಕೆ ಬಣ್ಣ ಕೂಡ ಬದಲಿಸಿಕೊಂಡು ಕೆಂಪಗೆ ನಾಚಿದ ಹೆಣ್ಣಂತಾಗಿದೆ.
ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರು ಬೆಳಗೆರೆಗೆ ಕೃಷ್ಣಶಾಸ್ತ್ರಿಯವರ ಮನೆಗೆ ಬಂದಾಗ ತಾವೇ ಅಡುಗೆ ಮಾಡಿ ಸ್ವತಃ ತಾವೇ ಎಲ್ಲರಿಗೂ ಬಡಿಸು ತ್ತಿದ್ದರಂತೆ ಅನ್ನುವ ಮಾತುಗಳನ್ನು ಬೆಳಗೆರೆ ಕೃಷ್ಣಶಾಸ್ತ್ರಿಯವರಿಂದಲೇ ಕೇಳಿ ಗೊತ್ತು. ಹಾಗೆಯೇ ಅವರ ಸೋದರಳಿನಾದ ರವಿಬೆಳಗೆರೆಯವರು ನಮ್ಮಮ್ಮ ಮಾಡುತ್ತಿದ್ದ ಕೆಂಡದ ಮೊಸರನ್ನ ಅದೆಷ್ಟು ರುಚಿಯಾಗಿರುತ್ತಿತ್ತು ಎಂದು ಮಾತಿಗೊಮ್ಮೆ ತನ್ನಮ್ಮನ ಅಡುಗೆಯ ರುಚಿಯನ್ನು ನೆನಪಿಸಿಕೊಳ್ಳುತ್ತಿದ್ದುದನ್ನು ಸಾಕಷ್ಟು ಬಾರಿ ಕೇಳಿದ್ದೇನೆ. ನನಗೆ ಅಡುಗೆ ಮಾಡುವುದೂ, ನಾಟಕ ನಿರ್ದೇಶಿಸುವುದೂ ಮತ್ತು ಅಷ್ಟೇ ತೀವ್ರವಾಗಿ ಜೀವನವನ್ನು ಪ್ರೀತಿಸುವುದು, ಹಾಗೂ ನಮ್ಮ ಸುತ್ತಲಿನ ವಿದ್ಯಮಾನಗಳಿಗೆ ಸ್ಪಂದಿಸುವುದು ಎಲ್ಲವೂ ಅಷ್ಟೇ ಮುಖ್ಯ ಮತ್ತು ಅವಶ್ಯಕ” ಎಂದು ಹೇಳುವ, ನಾಟಕರಂಗದ ದಿಗ್ಗಜರಾದ ಗುಬ್ಬಿ ವೀರಣ್ಣನವರ ಮೊಮ್ಮಗಳು ಬಿ.ಜಯಶ್ರೀಯವರು ಅಡುಗೆಯನ್ನು ಧ್ಯಾನದ ಸ್ಥಿತಿಗೆ ಹೋಲಿಸುತ್ತಾರೆ.
ಇನ್ನು ಜಗಳವಾಡಿ ಮುನಿಸಿಕೊಂಡ ದಂಪತಿಗಂತೂ ರಾಜಿಯಾಗಲಿಕ್ಕೆ ಬೆಡ್ ರೂಮಿಗಿಂತ ಅಡುಗೆ ಮನೆ ಹೇಳಿ ಮಾಡಿಸಿದಂತಹ ಸ್ಥಳ. ಅಲ್ಲಿ ಮೌನಕ್ಕೆ ಕೆಲಸ ವಿಲ್ಲ. ಕಾಫಿಗೆ ಡಿಕಾಕ್ಷನ್ನು ಇಷ್ಟು ಸಾಕಾ? ತರಕಾರಿ ಎಷ್ಟು ಹೆಚ್ಚಿಡಲಿ? ಉಪ್ಪು ಇಷ್ಟು ಸಾಕಾ? ನೀರು ಮೂರು ಗೆರೆ ಅಳತೆ ಇದ್ದರೆ ಸರಿಯಾಗುತ್ತಾ? ಖಾರಕ್ಕೆ ಇಷ್ಟು ಮೆಣಸಿನಕಾಯಿ ಸಾಕಾ? ವಗ್ಗರಣೆಗೆ ಸೌಟಿಡಲಾ? ಅಂತ ಕೇಳುತ್ತಾ ಮಾತಿಗೆಳೆಯುವ ಸದವಕಾಶ ಬಳಸಿಕೊಂಡವರೇ ಬಲ್ಲರು!
ಟೀವಿ, ,  , ಪುಸ್ತಕ ನೋಡಿ ಮಾಡುವ ಅಡುಗೆಗಳಲ್ಲಿ ಅಳತೆ, ಬಣ್ಣ ಕಾಣಬಹುದೇ ಹೊರತು ರುಚಿ ಹಾಗೂ ಘಮವಲ್ಲ! ಹಾಗೆಯೇ ಹೊಟೇಲುಗಳಲ್ಲಿ ಕೊಡುವ ಊಟಕ್ಕೆ ಪ್ರತಿಯಾಗಿ ಹಣ ಕೊಟ್ಟು ಕೈ ತೊಳೆದು ಎದ್ದು ಬರುತ್ತೇವೆ. ಆದರೆ ಮನೆಯಲ್ಲಿ ಅಮ್ಮ, ಹೆಂಡತಿ, ಅಕ್ಕ, ಅತ್ತಿಗೆ, ನಾದಿನಿ, ತಂಗಿಯರ ಬಾಂಧವ್ಯದ ನಡುವೆ ಬಡಿಸಿಕೊಂಡು ಹರಟುತ್ತಾ ಮಾಡುವ ಊಟದಲ್ಲಿ ಆರೋಗ್ಯದ ಜೊತೆಗೆ ನೆಮ್ಮದಿ, ತೃಪ್ತಿ, ಪ್ರೀತಿ, ಹಾರೈಕೆಗಳೂ ತುಂಬಿರುತ್ತದೆ.ಪ್ರತಿಮನೆಯ ಪ್ರಮುಖ ಆಧಾರಸ್ತಂಭದಂತಿರುವ ಅಡುಗೆ ಮನೆಯೆಂಬುದು ಒಂದು ಸಂಸ್ಕೃತಿಯ, ಜನಾಂಗದ ಪ್ರತಿಬಿಂಬ.
ಹೀಗಾಗಿ ನಿಮ್ಮ ಮನೆ ಜೀವಂತಿಕೆಯಿಂದಿರಬೇಕೆಂದರೆ ನಿಮ್ಮ ಅಡುಗೆ ಮನೆಯಲ್ಲಿ ಸದಾ ಕಲರವ ತುಂಬಿರಬೇಕು.