ಬ್ಯಾಡ್ ಬ್ಯಾಂಕ್ ಗುಡ್ ಐಡಿಯಾ ಆಗಬಹುದೇ ?
ಅಭಿಮತ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
@.
ಬ್ಯಾಡ್ ಬ್ಯಾಂಕ್ ಹೊಸ ಪರಿಕಲ್ಪನೆಯೇನಲ್ಲ. ಚೀನಾ, ಜಪಾನ್ ಮತ್ತು ಕೆಲವು ಯುರೋಪ್ ದೇಶಗಳಲ್ಲಿ ಪ್ರಚಲಿತದಲ್ಲಿದೆ. ಕೆಟ್ಟ ಸಾಲ ವಸೂಲಿಯಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಬಣ್ಣಿಸಿದರೂ. ಇದು ಬ್ಯಾಂಕಿನ ದಿನನಿತ್ಯದ ತಲೆನೋವನ್ನು ಕಡಿಮೆ ಮಾಡುವುದನ್ನು ಬಿಟ್ಟರೆ ಏನನ್ನು ಸಾಧಿಸಲಾಗದು ಎನ್ನುವ ಮಾತು ಹಲವಾರು ಹಣಕಾಸು ತಜ್ಞರಿಂದ ಕೇಳಿಬರುತ್ತಿದೆ. ಸಾಲ ನೀಡಿದ ಮೂಲ ಬ್ಯಾಂಕ್‌ಗಳ ತಲೆನೋವು ಇನ್ನೊಂದು ಬ್ಯಾಂಕ್‌ಗೆ ವರ್ಗಾವಣೆಯಷ್ಟೇ ಎಂಬ ವ್ಯಾಖ್ಯಾನಗಳಿವೆ ಮತ್ತು ಇದನ್ನು ಅಲ್ಲಗಳೆಯಲಾಗದು.
ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಬ್ಯಾಡ್ ಬ್ಯಾಂಕನ್ನು ಸ್ಥಾಪಿಸಲಿದೆ. ಇನ್ನು ಕೆಲವೇ ವಾರಗಳಲ್ಲಿ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಬ್ಯಾಡ್ ಬ್ಯಾಂಕ್ ಎಂದೇ ಕರೆಯಲಾಗುವ ರಾಷ್ಟ್ರೀಯ ಆಸ್ತಿ ಪುನರ್ ರಚನಾ ಕಂಪನಿಯ (ಎನ್‌ಎಆರ್‌ಸಿಎಲ್) ಸ್ಥಾಪನೆಯ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಕೆಟ್ಟ ಸಾಲಗಳ(ಎನ್‌ಪಿಎ) ಖಾತೆಗಳನ್ನು ನಿರ್ವಹಿಸಲು ಇದೊಂದು ಬ್ಯಾಂಕ್ ಶುರು ಮಾಡುವ ಪ್ರಸ್ತಾವನೆಗೆ ಇದೀಗ ಕೇಂದ್ರ ಸಚಿವ ಸಂಪುಟವು 5 ವರ್ಷಗಳಿಗೆ 30600ಕೋಟಿ ರು. ಗ್ಯಾರಂಟಿ ನೀಡುವ ಮುಖಾಂತರ ಬ್ಯಾಂಕಿಂಗ್ ಕ್ಷೇತ್ರದ ವಸೂಲಾಗದ ಎನ್‌ಪಿಎ ಸಮಸ್ಯೆಯನ್ನು ಬಗೆಹರಿಸಲು ಒಪ್ಪಿಗೆ ನೀಡಿದೆ.
ವಸೂಲಾಗದ ಸಾಲದ ಖಾತೆಗಳು ಈ ಬ್ಯಾಂಕಿಗೆ ವರ್ಗಾವಣೆಯಾಗುತ್ತವೆ. ಈ ಬ್ಯಾಂಕಿನಲ್ಲಿರುವ ಸಾಲಗಳೆಲ್ಲಾ ಅನುತ್ಪಾದಕ ಸಾಲಗಳಾಗಿರುವುದರಿಂದ ಈ ಬ್ಯಾಂಕನ್ನು ಬ್ಯಾಡ್ ಬ್ಯಾಂಕ್ ಎಂದು ಕರೆಯಲಾಗುವುದು. ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದ್ದು ಇದರಿಂದ ಬ್ಯಾಂಕ್‌ಗಳ ಲೆಕ್ಕಪತ್ರವನ್ನು ಶುಚಿಗೊಳಿಸಲು ಸಾಧ್ಯವಾಗಲಿದೆ ಎಂಬುದು ಸರಕಾರದ ನಿಲುವು. ಕೇಂದ್ರ ಸರಕಾರ ಈ ಬ್ಯಾಡ್ ಬ್ಯಾಂಕ್ ಯೋಜನೆಯಿಂದ ಕುಂಟಿತವಾಗಿ ಸಾಗುತ್ತಿರುವ ಆರ್ಥಿಕತೆಗೆ ಉತ್ತೇಜನಕಾರಿಯಾಗಲಿದೆ ಎಂಬ ನಿರೀಕ್ಷೆಯನ್ನು ಹೊಂದಿದೆ.
ಬ್ಯಾಡ್ ಬ್ಯಾಂಕ್ ಶೇ.15:85 ರ ಅನುಪಾತದಲ್ಲಿ ವಸೂಲಾಗದ ಖಾತೆಗಳನ್ನು ಖರೀದಿಸುತ್ತಿದೆ. ಶೇ.15 ರಷ್ಟು ಹಣವನ್ನು ನಗದು ರೂಪದಲ್ಲಿ ಮೊದಲೇ ಬ್ಯಾಂಕ್ ಗಳಿಗೆ ನಿಡಲಾಗುತ್ತದೆ. ಉಳಿದ ಶೇ. 85ರಷ್ಟು ಹಣವನ್ನು ಸಾಲಕ್ಕೆ ಸಂಬಂಽಸಿದ ಆಸ್ತಿಗಳನ್ನು ಮಾರಿದ ನಂತರ ನೀಡಿದರೆ ಸಾಕು. ಬ್ಯಾಂಕ್‌ಗಳ ಒಟ್ಟು ಸಾಲದಿಂದ ಕೆಟ್ಟ ಸಾಲಗಳನ್ನು ಬೇರ್ಪಡಿಸುವುದರಿಂದ ಬ್ಯಾಂಕ್‌ಗಳ ಬ್ಯಾಲೆನ್ಸ್‌ಶೀಟ್ ಕ್ಲೀನ್ ಆಗುತ್ತದೆ. ಆದುದರಿಂದ ಈ ಬ್ಯಾಂಕ್‌ ಗಳಿಗೆ ಸರಕಾರದ ಹೆಚ್ಚಿನ ಕ್ಯಾಪಿಟಲ್ ಪಡೆಯಲು ಸಹಾಯಕವಾಗುತ್ತದೆ. ಕ್ಯಾಪಿಟಲ್‌ಗಾಗಿ ಈ ಬ್ಯಾಂಕ್‌ಗಳು ಕಷ್ಟಪಡಬೇಕಾಗಿಲ್ಲ.
ಬ್ಯಾಡ್ ಬ್ಯಾಂಕ್ ವಹಿವಾಟಿಗೆ ಸರಕಾರ ಕ್ಯಾಪಿಟಲ್ ಹೂಡುವುದಿಲ್ಲ. ಆದರೆ 5 ವರ್ಷಗಳವರೆಗೆ ಸಾವರಿನ್ಗ್ಯಾರಂಟಿ ನೀಡುತ್ತದೆ. ಇದನ್ನು ಬ್ಯಾಡ್ ಬ್ಯಾಂಕ್ ಸಾಲ ವರ್ಗಾಯಿಸುವ ಬ್ಯಾಂಕ್‌ಗಳಿಗೆ ಸೆಕ್ಯುರಿಟಿ ರಶೀದಿ ನೀಡಲು ಬಳಸುತ್ತದೆ. 9 ಬ್ಯಾಂಕ್‌ಗಳು ಮತ್ತು ಎರಡು ಬ್ಯಾಂಕೇತರ ಸಂಸ್ಥೆಗಳು 7000 ಕೋಟಿ ರು.ಆರಂಭಿಕ ಕ್ಯಾಪಿಟಲ್‌ನ್ನು ಬ್ಯಾಂಕಿಗೆ ಪೂರೈಸುತ್ತವೆ. ಈ ಬ್ಯಾಂಕಿನ ಧೃಡೀಕೃತ ಬಂಡವಾಳವು 100 ಕೋಟಿ ಆಗಿರುತ್ತದೆ. 74.60 ಕೋಟಿ ರು. ಪೆಯ್ಡ್‌ಆಪ್ಕ್ಯಾಪಿಟಲ್ ಆಗಿರುತ್ತದೆ. ಸಾರ್ವಜನಿಕ ಬ್ಯಾಂಕ್‌ಗಳು ಒಟ್ಟಾರೆ ಶೇ. 51 ಷೇರುಗಳನ್ನು ಹೊಂದಲಿವೆ.
ಒಟ್ಟು 2.25 ರು. ಲಕ್ಷ ಕೋಟಿ ಕೆಟ್ಟ ಸಾಲ ಈ ಬ್ಯಾಂಕಿಗೆ ವರ್ಗವಣೆಯಾಗಲಿದೆ. ಮೊದಲ ಹಂತದಲ್ಲಿ 22 ಪ್ರಕರಣಗಳ 8300 ಕೋಟಿ ರು. ಪೈ ಸಾಲವರ್ಗಾವಣೆಯಾಗುತ್ತದೆ. ಸುಮಾರು 500 ರು. ಕೋಟಿಗೂ ಹೆಚ್ಚು ಬಾಕಿ ಇರುವ 102 ಪ್ರಕರಣಗಳ 2 ಲಕ್ಷ ಕೋಟಿ ರು. ಸಾಲವನ್ನು ಈ ಬ್ಯಾಂಕಿಗೆ ವರ್ಗಾ ಯಿಸಲು ಗುರುತಿಸಲಾಗಿದೆ. ವಂಚನೆಗೆ ಒಳಗಾದ ಮತ್ತು ಬ್ಯಾಂಕ್ ದಿವಾಳಿ ಕಾನೂನಿನ ಇತ್ಯರ್ಥಕ್ಕೆ ರೆಫರ್ ಆದ ಪ್ರಕರಣಗಳನ್ನು ಈ ಬ್ಯಾಂಕಿಗೆ ವರ್ಗಾ ಯಿಸುವುದಿಲ್ಲ.
ಬ್ಯಾಡ್ ಬ್ಯಾಂಕ್ ಈಗ ಕಾರ್ಯ ನಿರ್ವಹಿಸುತ್ತಿರುವ ಅಸೆಟ್ ರಿಕನ್‌ಸ್ಟ್ರಕ್ಷನ್ ಕಂಪನಿ (ಎಆರ್‌ಸಿ) ಮತ್ತು ಅಸೆಟ್ ಮೆನೇಜ್‌ಮೆಂಟ್ ಕಂಪನಿ (ಎಎಂಸಿ)ಯಂತೆ ಕಾಣುತ್ತಿದ್ದು ದೇಶದ ಅತಿ ದೊಡ್ಡ ಎಸೆಟ್ ರಿಕನ್‌ಸ್ಟ್ರಕ್ಷನ್ ಹೋಲ್ಡಿಂಗ್ ಕಂಪನಿ ಆಗುವ ಸಾಧ್ಯತೆ ಇದೆ. ಇದು ಸಾಲ ವರ್ಗಾವಣೆಯ ಪ್ರಕ್ರಿಯೆ ಮತ್ತು ವಸೂಲಿ ಪ್ರಕ್ರಿಯೆ. ನೂರಕ್ಕೆ ನೂರರಷ್ಟು ಸಾಲ ವಸೂಲಿ ಗುರಿಯೇ ಪ್ರಮುಖವಾಗಿರುವುದು ಈ ವ್ಯವಸ್ಥೆಯಲ್ಲಿ ಕಾಣುತ್ತದೆ. ಇದು ಸಾಲ ಮನ್ನಾ ಅಥವಾ ರೈಟ್ ಆಫ್ ಆಗಿರದೆ ಬೇರೆ ಪುಸ್ತಕಕ್ಕೆ ಬದಲಾಗುತ್ತಿದೆ.
ಕ್ಯಾಬಿನೆಟ್ ಒಪ್ಪಿಗೆ ನೀಡುತ್ತಿದ್ದಂತೆ ಷೇರು ಮಾರ್ಕೆಟ್ ನಿಫ್ಟಿ ಬ್ಯಾಂಕ್ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಗಮನಾರ್ಹ. ಬ್ಯಾಡ್ ಬ್ಯಾಂಕ್ ಹೊಸ ಪರಿಕಲ್ಪನೆ ಯೇನಲ್ಲ. ಚೀನಾ, ಜಪಾನ್ ಮತ್ತು ಕೆಲವು ಯುರೋಪ್ ದೇಶಗಳಲ್ಲಿ ಪ್ರಚಲಿತದಲ್ಲಿದೆ. ಕೆಟ್ಟ ಸಾಲ ವಸೂಲಿಯಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಬಣ್ಣಿಸಿದರೂ. ಇದು ಬ್ಯಾಂಕಿನ ದಿನನಿತ್ಯದ ತಲೆನೋವನ್ನು ಕಡಿಮೆ ಮಾಡುವುದನ್ನು ಬಿಟ್ಟರೆ ಏನನ್ನು ಸಾಧಿಸಲಾಗದು ಎನ್ನುವ ಮಾತು ಹಲವಾರು ಹಣಕಾಸು ತಜ್ಞರಿಂದ ಕೇಳಿಬರುತ್ತಿದೆ.
ಬ್ಯಾಂಕ್‌ಗಳು ಸಾಲ ನೀಡುವಲ್ಲಿ ಬದ್ಧತೆಯನ್ನು ಕಳೆದುಕೊಂಡು, ಸಾಲ ವಸೂಲಿಯಾಗದಿದ್ದರೆ ಸಾಲವನ್ನು ಬ್ಯಾಡ್ ಬ್ಯಾಂಕಿಗೆ ವರ್ಗಯಿಸಿದರಾಯಿತು ಎನ್ನುವ ಉದಾಸೀನತೆ ಸಾಲ ನೀಡುವ ಮೂಲ ಬ್ಯಾಂಕಿನಲ್ಲಿ ಬರದಂತೆ ಎಚ್ಚರ ವಹಿಸುವ ಅಗತ್ಯೆಯಿದೆ. ಬ್ಯಾಂಕ್‌ಗಳ ಮರುಪಾವತಿಯಾಗದ ಸಾಲಗಳ ಸಮಸ್ಯೆಗೆಪರಿಹಾರವಿಲ್ಲ ಎನ್ನುವ ವಿಶ್ಲೇಷಣೆಯಿದೆ. ಸಾಲ ನೀಡಿದ ಮೂಲ ಬ್ಯಾಂಕ್‌ಗಳ ತಲೆನೋವು ಇನ್ನೊಂದು ಬ್ಯಾಂಕ್‌ಗೆ ವರ್ಗಾವಣೆಯಷ್ಟೇ ಎಂಬ ವ್ಯಾಖ್ಯಾನಗಳಿವೆ ಮತ್ತು ಇದನ್ನು ಅಲ್ಲಗಳೆಯಲಾಗದು.
ಇಂತಹ ಸಾಧಕ ಭಾಧಕಗಳೇನು ಎನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ವರ್ಗಾವಣೆಯಾಗಲಿರುವ ಸಾಲಗಳ ವಸೂಲಿಗೆ ವಿವಿಧ ರೀತಿಯ ಪ್ರಕ್ರಿಯೆ ನಡೆದಿರುತ್ತದೆ. ದೇಶದಾದ್ಯಂತ ಒಂದೇ ಬ್ಯಾಂಕ್ ಇರುತ್ತದೆಯೋ ಅಥವಾ ಪ್ರತಿ ಬ್ಯಾಂಕ್ ಕೂಡಾ ಇಂತಹ ಬ್ಯಾಂಕ್ ಗಳನ್ನು ಸ್ಥಾಪಿಸುತ್ತದೆಯೋ ತಿಳಿಯದು.ಪ್ರಸ್ತುತ ಸಾಲ ವಸೂಲಾತಿ ಮತ್ತು ಕೆಟ್ಟ ಸಾಲಗಳ ನಿರ್ವಹಣೆಗಾಗಿ ಬ್ಯಾಂಕ್‌ಗಳು ಗಮನಾರ್ಹ ಮಾನವ ಸಂಪನ್ಮೂಲವನ್ನು ವ್ಯಯಿಸುತ್ತಿದ್ದು ಕೆಟ್ಟ ಸಾಲಗಳೂ ಬ್ಯಾಡ್ ಬ್ಯಾಂಕಿಗೆ ವರ್ಗಾವಣೆಯಾದರೆ ತಮ್ಮ ಅಮೂಲ್ಯ ಸಮಯವನ್ನು ಕೋರ್ ಬಿಸಿನೆಸ್ ವೃದ್ಧಿಸಲು ಉಪಯೋಗಿಸಬಹುದು. ಸಾಲ ವಸೂಲಿಯ ಪರಿಣಿತ ರನ್ನು ನೇಮಿಸಬಹುದು.
ಈಗಿರುವ ಕಾನೂನು, ನಿಯಮಗಳ ಪ್ರಕಾರ ಸಾಲ ವಸೂಲಾತಿ ಕ್ರಮಗಳು ಹಲವು ಅಡೆತಡೆಗಳನ್ನು ಎದುರಿಸುತ್ತಿದ್ದು ನಿರೀಕ್ಷಿತ ಫಲ ನೀಡುತ್ತಿಲ್ಲವಾದುದರಿಂದ ಈ ಕೆಟ್ಟ ಸಾಲಗಳಿಗಾಗಿ ಬ್ಯಾಂಕ್ ತನ್ನ ಲಾಭದಲ್ಲಿ ಪ್ರತೀ ವರ್ಷ ಗಣನೀಯ ಪ್ರಮಾಣವನ್ನು ಅನುತ್ಪಾದಕ ಸಾಲಕ್ಕೆ ವರ್ಗಾಯಿಸುವುದರಿಂದ ಬ್ಯಾಂಕ್‌ಗಳ ನಿವ್ವಳಲಾಭದಲ್ಲಿ ಕಡಿತವಾಗುತ್ತದೆ. ಹಲವಾರು ಬ್ಯಾಂಕ್ ಗಳು ನಷ್ಟ ಹೊಂದುತ್ತವೆ. ಕೆಟ್ಟ ಸಾಲ ಹೆಚ್ಚಿದಷ್ಟೂ ಸರಕಾರದಿಂದ ಪಡೆಯುವ ಕ್ಯಾಪಿಟಲ್ ಕಡಿಮೆಯಾಗುತ್ತಾ ಹೋಗುತ್ತದೆ.
ನಾರ್ಮಲ್ ವಸೂಲಿಗೆ ಸಮಯ ಹಿಡಿಯುವುದರಿಂದ ಬ್ಯಾಂಕಿಂಗ್ ಪರಿಣಿತರು ಮತ್ತು ಆರ್ಥಿಕ ತಜ್ಞರು ಮಾಡಿದ ಹೊಸ ಅವಿಷ್ಕಾರದ ಫಲವೇ ಬ್ಯಾಡ್ ಬ್ಯಾಂಕ್.ಭಾರತೀಯ ಬ್ಯಾಂಕ್‌ಗಳ ಒಟ್ಟಾರೆ ವಸೂಲಾಗದ ಸಾಲ (ಎನ್‌ಪಿಎ) 2022ರ ಮಾರ್ಚ್ ವೇಳೆಗೆ 10 ಲಕ್ಷ ಕೋಟಿ ರು. ಗೆ ವೃದ್ಧಿಸುವ ಸಾಧ್ಯತೆ ಇದೆ ಎಂದುಅಸೊಚೆಮ್ ಮತ್ತು ಕ್ರಿಸಿಲ್ ಸಂಸ್ಥೆಯ ವರದಿ ತಿಳಿಸಿದೆ. ರಿಟೇಲ್, ಎಂಎಸ್‌ಎಂಇ ಮತ್ತು ಇತರ ಕೆಲವು ವಲಯಗಳಲ್ಲಿ ಎನ್‌ಪಿಎ ಏರಿಕೆ ನಿರೀಕ್ಷಿಸಲಾಗಿದೆ. ಬ್ಯಾಡ್ ಬ್ಯಾಂಕ್ ನಿರ್ಧಾರದಿಂದ ಉದ್ದೇಶಪೂರ್ವಕ ಸಾಲಗಾರರ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ.
ಬ್ಯಾಂಕ್ ಅಽಕಾರಿಗಳ ಮತ್ತು ನೌಕರರ ಸಂಘಟನೆಗಳು ಉದ್ದೇಶಪೂರ್ವಕ ಸಾಲಗಳನ್ನು ಕ್ರಿಮಿನಲ್ ಅಪರಾಧಗಳೆಂದು ಪರಿಗಣಿಸಬೇಕು. ಸಾಲ ವಸೂಲಾತಿಗೆ ಇನ್ನೂ ಕಟ್ಟುನಿಟ್ಟಿನ ಮತ್ತು ಸಮಯ ಪರಿಮಿತಿಯ ಕಾನೂನು ತರಬೇಕೆಂದು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಈ ಅನುತ್ಪಾದಕ ಆಸ್ತಿ ಗಳಲ್ಲಿ ಹೈ ಪ್ರೊಪೈಲ್, ಹೈವಾಲ್ಯೂ ಸಾಲಗಳೇ ಹೆಚ್ಚು ಮತ್ತು ಬ್ಯಾಂಕ್‌ಗಳ ಬೋರ್ಡ್ ಅಜೆಂಡಾಗಳಲ್ಲಿಯೇ ಮಂಜೂರಾದ ಸಾಲಗಳಾಗಿರುತ್ತವೆ. ಈ ಬ್ಯಾಡ್ಬ್ಯಾಂಕ್ ಗುಡ್ ಐಡಿಯಾವೇ ಎಂಬುದನ್ನು ಕಾದು ನೋಡಬೇಕಾಗಿದೆ.