ಎಸ್.ಪಿ.ಬಾಲು ಎಂಬ ಮರೆಯಲಾಗದ ಮಾಣಿಕ್ಯ
ಸ್ಮರಣೆ
ರಾಘವೇಂದ್ರ ಜೋಯ್ಸ್‌
.@.
ಗಾನ ಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮಿಂದ ಭೌತಿಕವಾಗಿ ದೂರವಾಗಿ ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು.ಅವರ ಅಗಲಿಕೆ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಮತ್ತು ಸಂಗೀತ ಪ್ರೇಮಿಗಳಿಗೆ ತುಂಬಾ ನೋವುಂಟು ಮಾಡಿದೆ. ಈ ಬರಹ ಅವರನ್ನು ನೆನಪಿಸುವುದಕ್ಕೆ ಅಲ್ಲ. ಏಕೆಂದರೆ ಅವರು ಮರೆತು ಹೋಗುವವರಲ್ಲ.
ತಮ್ಮ ವ್ಯಕ್ತಿತ್ವ ಮತ್ತು ಸಾಧನೆಯಿಂದ ಸದಾ ನಮ್ಮ ನೆನಪಿನಲ್ಲಿ ಉಳಿಯುವ, ಮರೆಯಲಾಗದ ಮಾಣಿಕ್ಯ ಅವರು. ನಿರಂತರವಾಗಿ ಸುಮಾರು ಐದು ದಶಕ ಗಳಿಗೂ ಅಧಿಕ ಕನ್ನಡ, ಮಲೆಯಾಳಿ, ತಮಿಳು, ತೆಲುಗು, ಹಿಂದಿ ಸೇರಿದಂತೆ ಇನ್ನೂ ಅನೇಕ ಬಾಷೆಗಳಲ್ಲಿ ಇವರು ಹಾಡಿದ ಹಾಡಿನ ಸಂಖ್ಯೆ 40000 ಕ್ಕೂ ಹೆಚ್ಚು. ಅದರಲ್ಲಿ ಸುಮಾರು 12000 ಕ್ಕೂ ಅಧಿಕ ಹಾಡುಗಳನ್ನು ನಮ್ಮ ಕನ್ನಡದಲ್ಲಿ ಹಾಡಿದ್ದಾರೆ. ಇವರಿಗೆ ಆರು ನ್ಯಾಷನಲ್ ಅವಾರ್ಡ್ (ಅದರಲ್ಲಿ ಒಂದು ಹಂಸಲೇಖ ಅವರ ಸಂಗೀತ ನಿರ್ದೇಶನದ ಕನ್ನಡ ಚಿತ್ರ ಪಂಚಾಕ್ಷರಿ ಗವಾಯಿ ಯ ಹಾಡಿಗೆ), ಅನೇಕ ರಾಜ್ಯ ಪ್ರಶಸ್ತಿಗಳು, ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮ ಭೂಷಣ, ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿಗಳೂ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿಗಳು, ಗೌರವ ಗಳು ಸಂದಿದೆ, ದಕ್ಷಿಣ ಭಾರತದ ಬಹುತೇಕ ನಾಯಕ ನಟರಿಗೆ ಹಾಗೂ ಬಹುತೇಕ ಸಂಗೀತ ನಿರ್ದೇಶಕರ ಹಾಡುಗಳಿಗೆ ಧ್ವನಿಯಾಗಿದ್ದರು.
ಯಾವುದೇ ಭಾಷೆಯ ಹಾಡಾಗಲಿ ಅದರ ಸಾಹಿತ್ಯದ ಅರ್ಥವನ್ನು ಚೆನ್ನಾಗಿ ತಿಳಿದುಕೊಂಡು, ಹಾಡಿನ ಸಂದರ್ಭ ವನ್ನು ಮನಸ್ಸಿನಲ್ಲಿಟ್ಟು ಕೊಂಡು ಸ್ಪಷ್ಟವಾಗಿ, ಸುಲಲಿತವಾಗಿ ಹಾಡುತ್ತಿದ್ದಿದ್ದು ಇವರ ವಿಶೇಷ. ಸಂತೋಷಕ್ಕೆ, ದುಖಃಕ್ಕೆ, ಪ್ರೀತಿಗೆ, ಸರಸಕ್ಕೆ, ವಿರಸಕ್ಕೆ, ಸ್ನೇಹಕ್ಕೆ, ತಮಾಷೆಗೆ, ಕನ್ನಡಕ್ಕೆ, ದೇಶಕ್ಕೆ, ಹಬ್ಬ ಹರಿದಿನಗಳಿಗೆ… ಹೀಗೆ ಪಟ್ಟಿ ಮಾಡುತ್ತಾ ಹೋದರೆ ಎಲ್ಲಾ ಸಂದರ್ಭಗಳಿಗೂ ಬಾಲು ಅವರ ಹಾಡು ಕೇಳಲಿಕ್ಕೆ ಸಿಗುತ್ತದೆ, ಮನಸ್ಸಿಗೆ ಮುದ ನೀಡುತ್ತದೆ. ಹೊಸ ದಾಗಿ ಸಂಗೀತ ಕಲಿಯಬೇಕು ಅನ್ನುವ ಬಹುತೇಕರು ಇವರು ಹಾಡುವುದನ್ನು ಕೇಳಿ ಕೇಳಿ ಕಲಿತ್ತಿದ್ದಿದೆ.
ಇಷ್ಟೆಲ್ಲಾ ಸಾಧನೆ ಮಾಡಿದ ಮೇಲೂ ತಾನು ಇನ್ನು ಕಲಿಯ ಬೇಕಾಗಿದ್ದು ಸಾಕಷ್ಟಿದೆ ಎಂದು ವಿನಯಪೂರ್ವಕವಾಗಿ ಹೇಳುತ್ತಿದ್ದರು. ಎಲ್ಲಾ ಸಂಗೀತಗಾರರನ್ನು, ಸಹ ಗಾಯಕರನ್ನು, ಅಭಿಮಾನಿಗಳನ್ನು ತುಂಬಾ ಗೌರವದಿಂದ, ಪ್ರೀತಿಯಿಂದ ನೋಡುತಿದ್ದರು. ಎಸ್‌ಪಿಬಿ ಚಾರಿಟೇಬಲ್ ಟ್ರಸ್ಟ್ ಮೂಲಕ ಕಷ್ಟದಲ್ಲಿದ್ದ ಅನೇಕರಿಗೆ ಸಹಾಯ ಮಾಡುತ್ತಿದ್ದರು.
ಇಂತಹ ಮಹಾನ್ ಸಾಧಕ, ಸಜ್ಜನ ವ್ಯಕ್ತಿ ಕರೋನ ಎಂಬ ಮಹಾಮಾರಿಗೆ ೨೫.೦೯.೨೦೨೦ ರಂದು ಬಲಿಯಾಗಿದ್ದು ದೊಡ್ದ ದುರಂತ. ಇವತ್ತು ಎಸ್.ಪಿ.ಬಾಲ ಸುಬ್ರಮಣ್ಯ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ರೂ, ಅವರ ಉತ್ತಮ ವ್ಯಕ್ತಿತ್ವದಿಂದ, ಅವರು ಹಾಡಿದ ಸಹಸ್ರಾರು ಮಧುರ ಹಾಡುಗಳಿಂದ, ಅವರ ಅದ್ವಿತೀಯ ಸಾಧನೆಗಳಿಂದ ಎಂದೆಂದಿಗೂ ನಮ್ಮೊಂದಿಗೆ ಸದಾ ಇರುತ್ತಾರೆ.