ಆತ ಎಂಬತ್ತು ಬಿಲಿಯನ್‌ ಗಳಿಸಿದ್ದು ಇಪ್ಪತ್ತೈದು ಡಾಲರ್‌ನಿಂದ!
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
@.
ಅಮಾನ್ಸಿಯೊ ಒರ್ಟೆಗಾ ಹೆಸರು ನೀವು ಕೇಳಿರಬಹುದು. ಇಲ್ಲವಾದರೆ ಪ್ರಸಿದ್ಧ ಸಿದ್ಧ ಉಡುಪಿನ ಮಳಿಗೆ  ಹೆಸರನ್ನಂತೂ ಕೇಳಿರುತ್ತೀರಿ ಅಥವಾ ನೋಡಿ ರುತ್ತೀರಿ. ಇಂದು ಪೋಷಾಕು ಪ್ರಪಂಚದ ಉತ್ತುಂಗದಲ್ಲಿ ನಿಂತಿರುವ ಸಂಸ್ಥೆ ಅದು. ಈ ಝಾರಾ ಎಂಬ ಜವಳಿ ಉದ್ಯಮದ ಜವ್ವನೆಯ ಜನಕ ಅಮಾನ್ಸಿಯೊ. ವಿಶ್ವದ ಅತಿದೊಡ್ಡ ಬಟ್ಟೆ ವ್ಯಾಪಾರದ ಮಳಿಗೆಯನ್ನು ಹುಟ್ಟು ಹಾಕಿದವ, ಒಂದು ಕಾಲದಲ್ಲಿ ಘಟಾನು ಘಟಿಗಳಾದ ಬಿಲ್ ಗೇಟ್ಸ್, ವಾರೆನ್‌ಬಫೆಟ್, ಮಾರ್ಕ್ ಜುಕರ್‌ಬರ್ಗ್, ಇಲಾನ್ ಮಸ್ಕ್‌ನಂಥವರನ್ನೂ ಹಿಂದಿಕ್ಕಿ ವಿಶ್ವದ ಶ್ರೀ ಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದವ, ಹೈಸ್ಕೂಲ್ ಓದನ್ನೂ ಪೂರ್ಣಗೊಳಿಸಲಾಗದೇ ಬಿಟ್ಟವ ಎಂದರೆ ಆಶ್ಚರ್ಯ ಪಡಬೇಡಿ.
ಅಮಾನ್ಸಿಯೊ ಎಂಬ ಅದ್ಭುತ ವ್ಯಕ್ತಿಗೆ ಈಗ ಭರ್ತಿ ಎಂಬತ್ತೈದು ವರ್ಷ. ಆತ ಹುಟ್ಟಿದ್ದು ಸ್ಪೇನ್‌ದೇಶದಲ್ಲಿ. ಆತನ ತಂದೆ ರೈಲ್ವೆ ಇಲಾಖೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದವ. ನಾಲ್ಕು ಜನ ಮಕ್ಕಳಲ್ಲಿ, ಎಲ್ಲರಿಗಿಂತ ಕಿರಿಯವ ಅಮಾನ್ಸಿಯೊ. ಮನೆಯಲ್ಲಿ ಬಡತನ ಹೇಗಿತ್ತು ಎಂದರೆ, ಆತನ ತಾಯಿ ಕೆಲವೊಮ್ಮೆ ಮಕ್ಕಳಿಗೆ ಊಟಕ್ಕೆ ಬೇಕಾಗಿ ಅಂಗಡಿಗಳಿಂದ ಕೆಲವೊಮ್ಮೆ ಬೇಡಿ, ಕೆಲವೊಮ್ಮೆ ಸಾಲದ ರೂಪದಲ್ಲಿ ದಿನಸಿ ತರುತ್ತಿದ್ದಳು. ಅದೇ ಕಾರಣಕ್ಕೆ ಆಕೆ ಆಗಾಗ ಅಂಗಡಿ ಯವರಿಂದ ಅವಮಾನಕ್ಕೂ ಒಳಗಾಗುತ್ತಿದ್ದಳು.
ಒಂದು ದಿನ ಅಂಗಡಿಯವನೊಬ್ಬ ತಾಯಿಗೆ ದಿನಸಿ ನೀಡಲು ನಿರಾಕರಿಸಿದ್ದಲ್ಲದೆ, ಅವಮಾನಿಸಿ ಕಳಿಸಿದ ವಿಷಯ ಅಮಾನ್ಸಿಯೊಗೆ ತಿಳಿಯಿತು. ಆಗ ಆತನಿಗಿನ್ನೂ ಹದಿನಾಲ್ಕು ವರ್ಷ. ಪ್ರೌಢಶಾಲೆಯಲ್ಲಿ ಓದುತ್ತಿದ್ದ ಅಮಾನ್ಸಿಯೊ ತನ್ನ ಓದಿಗೆ ಎಳ್ಳು ನೀರು ಬಿಟ್ಟು, ಒಬ್ಬ ದರ್ಜಿಯ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡ. ಮೊದಲಿಗೆ ಅಂಗಡಿಯಲ್ಲಿ ತಯಾರಾದ ವಸ್ತುಗಳನ್ನು ಸಗಟು ವ್ಯಾಪಾರಿಗಳಿಗೆ ವಿತರಿಸಿವುದು ಆತನ ಕೆಲಸವಾಗಿತ್ತು. ಕಾಲ ಕ್ರಮೇಣ ಆತ ಉಡುಪು ತಯಾರಿಸುವುದನ್ನೂ ಕಲಿತ. ಉಡುಪು ಸಿದ್ಧಗೊಳ್ಳು ವಾಗ ಕತ್ತರಿಸಿ ಉಳಿದ ಬಟ್ಟೆಯನ್ನು ಎಸೆಯುವುದಕ್ಕಿಂತ, ಅದರಿಂದ ಏನನ್ನಾದರೂ ತಯಾರಿಸುವ ಕುರಿತು ಯೋಚಿಸುತ್ತಿದ್ದ.
ಕೆಲಸದ ನಡುವೆ ಸವುಡು ಸಿಕ್ಕಾಗ ಆ ಬಟ್ಟೆಯೊಂದಿಗೆ ತನ್ನ ಸಹೋದರಿಯ ಮನೆಗೆ ಹೋಗುತ್ತಿದ್ದ. ಹೊಲಿಗೆ ಕೆಲಸ ಬಲ್ಲ ಆಕೆಯಿಂದ ಜನಪ್ರಿಯ ವಸ್ತ್ರ ವಿನ್ಯಾಸ ವನ್ನು ಮಾರ್ಪಾಡಿಸಿ ಸಣ್ಣ ಪುಟ್ಟ ಸ್ಥಳೀಯ ಅಂಗಡಿಗಳಿಗೆ ಮಾರುತ್ತಿದ್ದ. ದಿನದಿಂದ ದಿನಕ್ಕೆ ಆತ ಮಾರ್ಪಡಿಸಿ ಮಾರುತ್ತಿದ್ದ ಉಡುಪುಗಳಿಗೆ ಬೇಡಿಕೆ ಹೆಚ್ಚತೊಡ ಗಿತು. ಆಗ ಒಂದಷ್ಟು ಸ್ಥಳೀಯ ಮಹಿಳೆಯರನ್ನು ಸೇರಿಸಿಕೊಂಡು    ಹೆಸರಿನ ಸಣ್ಣ ಕಂಪನಿ ಆರಂಭಿಸಿದ. ಆಗ ಆತನಿಗೆ ಇನ್ನೂಇಪ್ಪತ್ತೇಳು ವರ್ಷ, ಅವನ ಬಳಿ ಇದ್ದದ್ದು ಕೇವಲ ಇಪ್ಪತ್ತೈದು ಡಾಲರ್.
ಆ ವೇಳೆಗಾಗಲೇ ಅಮಾನ್ಸಿಯೊಗೆ ಮದುವೆಯಾಗಿತ್ತು. ಆತನ ಹೆಂಡತಿ ರೋಸಾಲಿಯಾ ಮೇರಾ ಮತ್ತು ಆತನ ಒಡ ಹುಟ್ಟಿದವರು ಅದಕ್ಕೆ ಪಾಲುದಾರರಾದರು. ಸಂಸ್ಥೆಗೆ ತನ್ನದೇ ಆದ ಅಂಗಡಿ ಇಲ್ಲವಾದದ್ದರಿಂದ, ಉಡುಪು ತಯಾರಿಸಿ ಬೇರೆ ಅಂಗಡಿಗಳಿಗೆ ಮಾರಬೇಕಾಗಿತ್ತು. ಅವರು ಸಾಕಷ್ಟು ಹೆಚ್ಚಿನ ಬೆಲೆಗೆ ಮಾರುತ್ತಿದ್ದು ದನ್ನು ತಿಳಿದ ಅಮಾನ್ಸಿಯೊ, ತನ್ನ ಹೆಂಡತಿಯ ಜತೆಗೂಡಿ ಮೊದಲ ಬಟ್ಟೆ ಅಂಗಡಿ ತೆರೆದ. ತಾನು ಹುಟ್ಟು ಹಾಕಿದ ಅಂಗಡಿಗೆ Zobraಎಂದು ನಾಮಕರಣ ಮಾಡಿದ. ಅದು ದಂಪತಿಗಳ ಅಚ್ಚು ಮೆಚ್ಚಿನ ಸಿನಿಮಾ ‘ಝೊರ್ಬಾ ದಿ ಗ್ರೀಕ್’ ನಿಂದ ಪ್ರೇರೇಪಿತರಾಗಿ ಇಟ್ಟಹೆಸರಾಗಿತ್ತು. ಆದರೆ, ಆ ಊರಲ್ಲಿ ಅದೇ ಹೆಸರಿನಮದ್ಯದ ಅಂಗಡಿಯೂ ಇದೆ ಎಂದು ತಿಳಿದಾಗ, ತನ್ನ ಅಂಗಡಿಗೆ  ಎಂದು ಮರುನಾಮಕರಣ ಮಾಡಿದ.
1975ರಲ್ಲಿ ಆರಂಭವಾದ ಈ ಮಳಿಗೆಯಲ್ಲಿ ಮೊದಲು ಮಕ್ಕಳ ಉಡುಪು, ಒಳ ಉಡುಪು ಹೀಗೆ ಮೂರು ನಾಲ್ಕು ವಿಧದ ಉಡುಪುಗಳನ್ನು ಮಾತ್ರ ಮಾರಲಾಗು ತ್ತಿತ್ತು. ಕ್ರಮೇಣ ಪರಿಧಿ, ಪ್ರಮಾಣ ಎರಡೂ ವಿಸ್ತಾರಗೊಂಡವು. ಅದಕ್ಕೆ ಕಾರಣ, ಅತ್ಯುತ್ತಮ ವಿನ್ಯಾಸ ಮತ್ತು ತೀರಾ ಹೆಚ್ಚು ಎಂದೆನಿಸದ ಸಮಂಜಸ ವಾದ ಬೆಲೆ. ಕೆಲವೇ ಸಮಯದಲ್ಲಿ ಸ್ಪೇನ್ ನ ಇತರ ಕಡೆಗಳಲ್ಲೂ ಮಳಿಗೆಗಳನ್ನು ತೆರೆದ ಅಮಾನ್ಸಿಯೊ. ಅಷ್ಟಕ್ಕೇ ನಿಲ್ಲದೆ,   ಕಂಪನಿ ಸ್ಥಾಪಿಸಿ, ಝಾರಾ ವನ್ನು ಅದರಲ್ಲಿ ಸೇರಿಸಿದ. ಕಂಪನಿ ಯ ಸುಮಾರು ಅರವತ್ತು ಪ್ರತಿಶತ ಷೇರು ಖರೀದಿಸಿ, ದೊಡ್ಡ ಭಾಗೀದಾರನಾದ. ಕೆಲವು ಇತರ ಸಣ್ಣ ಪುಟ್ಟ ಸಂಸ್ಥೆಗಳನ್ನು ಖರೀದಿಸಿ, ತನ್ನ ಸಂಸ್ಥೆಯನ್ನು ಬೆಳೆಸಿದ. ಆ ಸಂದರ್ಭದಲ್ಲಿ ಆತ ತೆಗೆದುಕೊಂಡ ಕೆಲವು ನಿರ್ಣಯಗಳು ಇತರರಿಗಿಂತ ವಿಭಿನ್ನವಾಗಿದ್ದವು.
ಹೆಚ್ಚಿನ ಕಂಪನಿಗಳು ಅತ್ಯುತ್ತಮ ಗುಣ ಮಟ್ಟದ ಬಟ್ಟೆಯನ್ನು ಹೆಚ್ಚಿನ ಬೆಲೆ ನೀಡಿ ಖರೀದಿಸಿ, ಉಡುಪು ಸಿದ್ಧ ಗೊಳಿಸುತ್ತಿದ್ದವು. ಅಮಾನ್ಸಿಯೊ ಮಧ್ಯಮ ಗುಣ ಮಟ್ಟದ ಬಟ್ಟೆ ಖರೀದಿಸಿ ಉಡುಪು ಸಿದ್ಧಗೊಳಿಸಲು ಆರಂಭಿಸಿದ. ಅದಕ್ಕೆ ಅವನಲ್ಲಿ ಕಾರಣವಿತ್ತು. ಮೊದಲನೆಯದಾಗಿ, ಸಭೆ ಸಮಾರಂಭಗಳಲ್ಲಿ ಉಪಯೋಗಿ ಸುವ ಉಡುಪುಗಳನ್ನು ಒಂದೆರಡು ಬಾರಿ ತೊಟ್ಟ ನಂತರ ಮತ್ತೆ ಮತ್ತೆ ತೊಡುವ ಸ್ಥಿತಿಯಲ್ಲೂ ಇರುವುದಿಲ್ಲ, ಅದಕ್ಕೆ ಮನಸ್ಸೂ ಒಪ್ಪುವುದಿಲ್ಲ. ಹಾಗಾಗಿ ಆ ಉಡುಪುಗಳು ವೈಭವವಾಗಿ ಕಂಡರೆ ಸಾಕು, ಹೆಚ್ಚು ಬಾಳಿಕೆ ಬರಬೇಕೆಂದೇನಿಲ್ಲ.
ಎರಡನೆಯದಾಗಿ, ಯಾವುದೇ ಬಟ್ಟೆಕೊಂಡರೂ ಅಬ್ಬಬ್ಬಾ ಎಂದರೆ ಹತ್ತು ವರ್ಷ ಬಳಸಬಹುದು, ನಂತರ ಒಂದನ್ನೇ ಬಳಸಿ ಬೇಜಾರಾಯಿತು, ಫ್ಯಾಶನ್ ಬದಲಾ ಯಿತು ಇತ್ಯಾದಿ ಕಾರಣಗಳಿಂದ ತೊಡಬೇಕು ಅನಿಸುವುದಿಲ್ಲ. ಮೂರನೆಯದಾಗಿ, ಸಾಮಾನ್ಯವಾಗಿ ಹದಿನಾರರಿಂದ ಮೂವತ್ತು ವರ್ಷದ ಒಳಗಿನ ಯುವಕ ಯುವತಿಯರು ಬ್ರ್ಯಾಂಡ್ ಮತ್ತು ಸ್ಟೇಟಸ್‌ಗೆ ಒತ್ತು ನೀಡುತ್ತಾರೆಯೇ ಹೊರತು ಎಷ್ಟು ದಿನ ಬಾಳಿಕೆ ಬರುತ್ತದೆ ಎಂದಲ್ಲ. ಈ ಎಲ್ಲ ಕಾರಣಗಳಿಂದ, ಇಪ್ಪತ್ತೈದು ವರ್ಷ ಬಾಳಿಕೆ ಬರುವ ಬಟ್ಟೆಯನ್ನು ಹೆಚ್ಚಿನ ಬೆಲೆಗೆ ಕೊಂಡು ಕೊಳ್ಳುವುದಕ್ಕಿಂತ, ಹತ್ತು ವರ್ಷ ಬಾಳಿಕೆ ಬರುವ ಬಟ್ಟೆಯನ್ನು ಸಮಂಜಸ ಬೆಲೆ ಕೊಟ್ಟುಕೊಂಡು ಕೊಳ್ಳುವಲ್ಲಿ ಜನ ಉತ್ಸುಕರಾಗಿರುತ್ತಾರೆ ಎಂದು ಆತ ನಂಬಿದ್ದ.
ಇದರಿಂದಾಗಿ ಹೆಸರಾಂತ ಸಂಸ್ಥೆಯ ಉಡುಪಿನ ಮೂರು ನಾಲ್ಕು ಪಟ್ಟು ಕಮ್ಮಿ ಬೆಲೆಗೆ ತನ್ನ ಉಡುಪನ್ನು ಮಾರಬಹುದು, ಅಂದರೆ, ಒಬ್ಬ ಗ್ರಾಹಕ ಒಂದುಉಡುಪು ಕೊಳ್ಳುವ ಬದಲು ನಾಲ್ಕು ಉಡುಪು ಕೊಳ್ಳುವಂತೆ ಮಾಡಿದ. ಇದರಿಂದ ಆತನಿಗೆ ಹೆಚ್ಚು ಹಣ ಕೊಟ್ಟು ದುಬಾರಿ ಬೆಲೆಯ ಬಟ್ಟೆ ಖರೀದಿಸುವುದರಲ್ಲಿ ಉಳಿತಾಯವಾಯಿತು. ಹಾಗಾದರೆ ಗ್ರಾಹಕ ಒಂದೇ ಉಡುಪನ್ನು ಕೊಂಡು ಅಂಗಡಿಯಿಂದ ಹೊರಟು ಬಿಡಬಹುದಲ್ಲ? ಅದಕ್ಕೆ ಆತನಲ್ಲಿ ಇನ್ನೊಂದು ಉಪಾಯ ವಿತ್ತು. ಉಳಿದ ಸಂಸ್ಥೆಯವರು ಅಬ್ಬಬ್ಬಾ ಎಂದರೆ ವರ್ಷಕ್ಕೆ ಮೂರು ಅಥವಾ ನಾಲ್ಕು ಸಲ ಹೊಸ ಮಾದರಿಯ ಉಡುಪುಗಳನ್ನು ಮಾರುಕಟ್ಟೆಗೆ ತರುತ್ತಿದ್ದರು.
ತನ್ನ ಸಂಸ್ಥೆಯ ಪ್ರತಿ ಹದಿನೈದು ದಿನಕ್ಕೊಮ್ಮೆ ನೂತನ ವಿನ್ಯಾಸದ ಉಡುಪನ್ನು ತಯಾರಿಸಿ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾದ. ಜತೆಗೆ, ಬಹುತೇಕಉಡುಪುಗಳೆಂದು ತಿಂಗಳಿಗಿಂತ ಹೆಚ್ಚು ಬೀರುವಿನಲ್ಲಿ ಉಳಿಯಬಾರದು ಎಂಬ ನಿಯಮ ಇಟ್ಟುಕೊಂಡ. ಅದರಿಂದ ಮಳಿಗೆಗೆ ಬರುವ ಗ್ರಾಹಕರ ಸಂಖ್ಯೆಯೂಹೆಚ್ಚುತ್ತದೆ, ಬಂದವರಲ್ಲಿ ಕೆಲವರು ತೀರಾ ಅವಶ್ಯಕತೆ ಇಲ್ಲದಿದ್ದರೂ, ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ, ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ ಎಂಬಕಾರಣಕ್ಕೆ ಬಟ್ಟೆ ಖರೀದಿಸುತ್ತಾರೆ ಎಂಬುದು ಆತನ ತರ್ಕವಾಗಿತ್ತು. ಆ ತರ್ಕದಲ್ಲಿ ಆತಗೆದ್ದಿದ್ದ.
ಆತ ಸ್ವತಃ ಜನ ನಿಬಿಡ ಸ್ಥಳದಲ್ಲಿ, ನಗರದ ಬೀದಿಗಳಲ್ಲಿ ಸುತ್ತಿ, ಬಟ್ಟೆಯ ಕುರಿತು ಜನರ ನಿಲುವು, ಅಭಿಪ್ರಾಯ ಗ್ರಹಿಸುತ್ತಿದ್ದ. ಅದಕ್ಕೆ ತಕ್ಕಂತೆ ವಸ್ತ್ರ ವಿನ್ಯಾಸ ಗೊಳಿಸುವಂತೆ ವಿನ್ಯಾಸಗಾರರಲ್ಲಿ ಹೇಳುತ್ತಿದ್ದ. ಒಂದು ವಾರದ ಒಳಗೆ ಅವರು ವಿನ್ಯಾಸ ಸಿದ್ಧಗೊಳಿಸಿಕೊಡಬೇಕು, ನಂತರದ ಎರಡು ವಾರದಲ್ಲಿ ಅದು ಮಾರು ಕಟ್ಟೆಗೆ ಬರಲು ಸಿದ್ಧವಾಗುವಂತೆ ಕಾರ್ಖಾನೆಯವರು ಕೆಲಸ ಮಾಡಬೇಕು, ಉಡುಪು ಕಾರ್ಖಾನೆಯಲ್ಲಿ ಸಿದ್ಧವಾಗಿ ಎರಡು ದಿನದ ಒಳಗೆ ಮಳಿಗೆ ತಲುಪಬೇಕು ಎನ್ನುವುದು ಅವನ ಮಂತ್ರವಾಗಿತ್ತು.
ಬಟ್ಟೆಯೂ ಫಾಸ್ಟ್ ಫುಡ್ ನಂತೆಯೇ, ಚಟ ಚಟ ತಯಾರಾಗಬೇಕು, ಪಟ ಪಟ ಖಾಲಿಯಾಗಬೇಕು ಎಂಬುದು ಆತನ ನಿಲುವಾಗಿತ್ತು. ಮಹಿಳೆಯರ ಒಂದು ಸಾಮಾನ್ಯ ಉಡುಪು ತಯಾರಿಸಲು ಮೂವತ್ತೆಂಟು ನಿಮಿಷ ಬೇಕು ಎಂಬುದನ್ನು ಆತ ಪ್ರಯೋಗ ಮಾಡಿ ತಿಳಿದಿದ್ದ. ತನ್ನ ಕಾರ್ಖಾನೆಯಲ್ಲಿ ಸ್ಟಾಪ್ ವಾಚ್ ಇಟ್ಟು ಅದರಂತೆ ಕೆಲಸ ಮಾಡಲು ಹೇಳಿದ. ಒಂದು ಉಡುಪು ಸಿದ್ಧ ಪಡಿಸಲು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ತೆಗೆದು ಕೊಂಡರೆ ತನ್ನ ಹಣ ಪೋಲಾಗುತ್ತದೆ ಎಂಬುದನ್ನು ಆತ ತಿಳಿದಿದ್ದ.
ಆತ ತನ್ನ ಸಂಸ್ಥೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡುವ ವ್ಯವಸ್ಥೆಯನ್ನು ತನ್ನ ಹದ್ದುಬಸ್ತಿನಲ್ಲಿ ಇಟ್ಟುಕೊಂಡ. ಯಾವತ್ತೂ ಒಂದೇ ವಿನ್ಯಾಸದಉಡುಪನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಲಿಲ್ಲ. ಒಂದು ನಿರ್ದಿಷ್ಟ ಸಂಖ್ಯೆಯ ಉಡುಪನ್ನು ಮಳಿಗೆಗಳಲ್ಲಿ ಇಟ್ಟು, ಅದು ಹೇಗೆ ಖರ್ಚಾಗುತ್ತಿದೆ ಎಂದು ನೋಡಿಬೇಕಾದರೆ ಇನ್ನಷ್ಟು ಸಂಖ್ಯೆಯಲ್ಲಿ ತಯಾರಿಸುತ್ತಿದ್ದ. ಇಲ್ಲವಾದರೆ ಅಲ್ಲಿಗೇ ನಿಲ್ಲಿಸುತ್ತಿದ್ದ. ಒಂದು ವೇಳೆ ಬೇಡಿಕೆ ಇದ್ದಲ್ಲಿ ನಲವತ್ತೆಂಟು ಗಂಟೆಯೊಳಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಿಕೊಂಡ.
ಇದರಿಂದಾಗಿಯೂ ಸಂಸ್ಥೆಗೆ ಸಾಕಷ್ಟು ಹಣ ಉಳಿಯುತ್ತಿತ್ತು. ಅಮಾನ್ಸಿಯೊ ತಾನು ಹಾಕಿಕೊಂಡ ಎಲ್ಲಾಯೋಜನೆಗಳನ್ನೂ ಜಾರಿಗೆ ತರುವಲ್ಲಿ ಯಶಸ್ವಿಯೂ ಆದ.ಅಮಾನ್ಸಿಯೊ ಇತರರಂತೆ ಜಾಹೀರಾತಿಗೆ ಹಣ ವ್ಯಯಿಸಲಿಲ್ಲ. ತನ್ನ ಉತ್ಪಾದನೆಯನ್ನು ಅಂಗಡಿಯ ಮುಂಭಾಗದಲ್ಲಿ ಪ್ರದರ್ಶನಕ್ಕೆ ಇಡುವುದು ಮತ್ತು ಜನರ ಬಾಯಿ ಮಾತಿನಿಂದ ಸಿಗುವ ಪ್ರಚಾರವೇ ಎಲ್ಲಕ್ಕಿಂತ ಹೆಚ್ಚು ಗ್ರಾಹಕರನ್ನು ಸೆಳೆಯುತ್ತದೆ ಎಂಬ ತರ್ಕ ಅವನದ್ದಾಗಿತ್ತು. ಅದರಿಂದಾಗಿ ಆತ ಸಂಸ್ಥೆಯ ಸಾಕಷ್ಟು ಹಣ ಉಳಿಸಿದ. ಆತನ ಬಹುತೇಕ ನಿಯಮಗಳನ್ನು ಸಂಸ್ಥೆ ಇಂದಿಗೂ ಪಾಲಿಸುತ್ತಿದೆ.
ಆರಂಭವಾಗಿ ಐದು ವರ್ಷಗಳ ಅವಽಯಲ್ಲಿ ಸಂಸ್ಥೆ ಯುರೋಪ್‌ನ ಇತರ ಭಾಗಗಳಲ್ಲಷ್ಟೇ ಅಲ್ಲದೆ, ಅಮೆರಿಕ ಮತ್ತು ಇತರ ದೇಶಗಳಲ್ಲೂ ತನ್ನ ಕಾಲೂರಿತು.(ಝಾರಾ ಭಾರತಕ್ಕೆ ಬರಲು ಇಪ್ಪತ್ತೈದು ವರ್ಷಗಳು ಬೇಕಾಯಿತು ಎನ್ನುವುದು ಬೇರೆ ವಿಚಾರ) ಇಂದು ವಿಶ್ವದಾದ್ಯಂತ ತೊಂಬತ್ತಾರು ದೇಶಗಳಲ್ಲಿ, ಸುಮಾರುಎರಡು ಸಾವಿರದ ಮುನ್ನೂರ ರಷ್ಟು ಝಾರಾ ಮಳಿಗೆಗಳಿವೆ. ಕರೋನಾ ಕಾಲದಲ್ಲಿ ದೊಡ್ಡ ದೊಡ್ಡ ಹೆಸರಿನ ಸಂಸ್ಥೆಗಳು ತಮ್ಮ ಶಾಖೆಗಳನ್ನು ಶಾಶ್ವತವಾಗಿಮುಚ್ಚುತ್ತಿದ್ದ ಸಂದರ್ಭದಲ್ಲಿ, ಝಾರಾ ಸುಮಾರು ಒಂದು ಸಾವಿರ ಮಳಿಗೆಗಳನ್ನು ಮೂರು ತಿಂಗಳು ತಾತ್ಕಾಲಿಕವಾಗಿ ಮುಚ್ಚಿತ್ತು.
ಇಂದು ಸುಮಾರು ತೊಂಬತ್ತೆರಡು ಸಾವಿರ ಜನ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆ ಪ್ರತಿವರ್ಷ ಹನ್ನೆರಡು ಸಾವಿರಕ್ಕೂ ಹೆಚ್ಚು ವಿಧದ, ಸುಮಾರು ಒಂದೂವರೆ ಬಿಲಿಯನ್‌ಗಿಂತ ಹೆಚ್ಚು ಉಡುಪುಗಳನ್ನು ತಯಾರಿಸುತ್ತದೆ. ಬಹುತೇಕ ಕಂಪನಿ ಗಳು ಇಂದು ತಮ್ಮ ಹೆಸರಿನ ಉಡುಪುಗಳನ್ನು ಭಾರತ, ಬಾಂಗ್ಲಾ ದೇಶ, ಇಂಡೋನೇಷ್ಯಾದಂತಹ ದೇಶಗಳಲ್ಲಿ ಸಿದ್ಧಪಡಿಸುತ್ತಿವೆ. ಆದರೆ ಕೆಲವು ಬಹುಕಾಲ ಅಂಗಡಿಯ ಬೀರುವಿನಲ್ಲಿ ಇಡಬೇಕಾದಂತಹ ಬೆಲೆಯ ಟಿ-ಶರ್ಟ್, ಟ್ರ್ಯಾಕ್ ಪ್ಯಾಂಟ್ ನಂಥವುಗಳನ್ನು ಹೊರತುಪಡಿಸಿ, ಹೆಚ್ಚಿನ ಉತ್ಪಾದನೆಯನ್ನು ಝಾರಾ ಸಂಸ್ಥೆ ತಾನೇ ಮಾಡುತ್ತದೆ.
ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಬಟ್ಟೆಗಳನ್ನು ಮಾತ್ರ ತಯಾರಿಸುತ್ತಿದ್ದ ಸಂಸ್ಥೆ ಇಂದು ಪುರುಷರ ಪೋಷಾಕುಗಳನ್ನೂ ತಯಾರಿಸುತ್ತಿದೆ. ಸಂಸ್ಥೆ ಈಗಕೇವಲ ಬಟ್ಟೆಗೆ ಸೀಮಿತವಾಗಿರದೆ, ಪಾದರಕ್ಷೆ, ಚೀಲ, ಸುಗಂಧ ದ್ರವ್ಯಇತ್ಯಾದಿಗಳನ್ನೂ ತಯಾರಿಸುತ್ತಿದೆ. ಸಂಸ್ಥೆಯ ಸಿದ್ಧ ಪಡಿಸಿದ ಉಡುಪುಗಳನ್ನು ಇಡುವಗೋದಾಮಿನ ವಿಸ್ತೀರ್ಣ ಐದು ಮಿಲಿಯನ್ ಚದರ ಫೀಟ್‌ನಷ್ಟಿದ್ದು, ಇದು ಅಮೆಜಾನ್ ಗೋದಾಮಿಗಿಂತಲೂ ಒಂಬತ್ತು ಪಟ್ಟು ದೊಡ್ಡದಾಗಿದೆ.
ಇಂದು ಸಂಸ್ಥೆಯ ಆದಾಯ ಪ್ರತಿ ವರ್ಷ ಸುಮಾರು ಇಪ್ಪತ್ತೆರಡು ಬಿಲಿಯನ್ ಡಾಲರ್‌ನಷ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಥೆ ಇಂದು ಪರಿಸರ ಪ್ರೇಮಿ ಬಟ್ಟೆಯನ್ನುಬಳಸಿ ಉಡುಪು ಸಿದ್ಧಪಡಿಸುತ್ತಿದೆ. ಅಮಾನ್ಸಿಯೊ ಇಂದು ಅರವತ್ತಾರು ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಹನ್ನೆರಡನೆಯ ಸ್ಥಾನದಲ್ಲಿದ್ದಾನೆ.2015ರ ಅಕ್ಟೋಬರ್‌ನಲ್ಲಿ ಕೆಲವು ಸಮಯ ಆತ ಎಂಬತ್ತು ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದು (ಆ ಸಮಯದಲ್ಲಿ ಬಿಲ್ ಗೇಟ್ಸ್ ಮೌಲ್ಯ ಎಪ್ಪತ್ತೈದು ಬಿಲಿಯನ್ ಇತ್ತು) ಕೆಲವು ದಿನಗಳ ವರೆಗೆ ಅತಿದೊಡ್ಡ ಶ್ರೀಮಂತ ಎಂದು ಕರೆಸಿಕೊಂಡಿದ್ದ. ಅಮಾನ್ಸಿಯೊ ಈಗ ನಿವೃತ್ತನಾಗಿದ್ದಾನೆ. ಯುರೋಪ್ ಮತ್ತು ಅಮೆರಿಕದ ಹಲವು ನಗರಗಳಲ್ಲಿ ಆಸ್ತಿ ಹೊಂದಿದ್ದರೂ, ತನ್ನ ದೇಶವಾದ ಸ್ಪೇನ್‌ನಲ್ಲಿ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಉಳಿದು ಕೊಂಡಿದ್ದಾನೆ. ಆತ ಎಂದೂ ಪ್ರಚಾರ ಬಯಸಿದವನಲ್ಲ, ಸಭೆ ಸಮಾರಂಭ ಗಳಲ್ಲಿ ಕಾಣಿಸಿಕೊಂಡ ವನಲ್ಲ. ಆತ ಸಂಸ್ಥೆ ಆರಂಭಿಸಿದಾ ಗಿನಿಂದ ನಿವೃತ್ತನಾಗಿ ಒಂದು ವರ್ಷದ ವರೆಗೆ ಸುದ್ದಿಗೋಷ್ಠಿ ನಡೆಸಿದ್ದು ಕೇವಲ ಮೂರು ಬಾರಿ ಮಾತ್ರ.
ತನ್ನನ್ನು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂದಿದ್ದಾನೆ. ಒಬ್ಬ ಅಮಾನ್ಸಿಯೊ ಒರ್ಟೆಗಾ ನಿಂದ ನಾವು ಕಲಿಯಬಹುದಾದ ಪಾಠಗಳು ಎಷ್ಟು? ಲೆಕ್ಕಹಾಕಿ!