ವಿಶ್ವ ಸುದ್ದಿ ದಿನ: ಏನಿದರ ಮಹತ್ವ ?
ತನ್ನಿಮಿತ್ತ
ಡಾ.ಎ.ಎಸ್‌.ಬಾಲಸುಬ್ರಮಣ್ಯ
balasubramanya52@.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ ಸುದ್ದಿಯ ಜತೆಗೆ ದೀರ್ಘ ವಿಶ್ಲೇಷಣೆಯನ್ನು ಸಹ ನೀಡುತ್ತಿದೆ. ಡಿಜಿಟಲ್ ಮಾಧ್ಯಮದ ಇನ್ನೊಂದು ಅನುಕೂಲತೆ ಯೆಂದರೆ ವೈಯಕ್ತಿಕಗೊಳಿಸಿದ ಸುದ್ದಿಗಳನ್ನು ನೀಡುವ ಸಾಮರ್ಥ್ಯ ಹೊಂದಿರು ವುದು. ನಿಮಗೆ ರಾಜ್ಯ ಇಲ್ಲವೇ ರಾಷ್ಟ್ರ, ರಾಜಕೀಯ ಇಲ್ಲವೇ ಕ್ರೀಡೆ, ಸಿನಿಮಾ ಇಲ್ಲವೇ ಕ್ರಿಕೆಟ್ – ಹೀಗೆ ವಿಶೇಷ ಸುದ್ದಿಗಳನ್ನು ಪ್ರತ್ಯೇಕವಾಗಿ ನಿಮಗೆ ನೀಡಬಲ್ಲವು. ನಿಖರ ಹಾಗೂ ನಿಷ್ಪಕ್ಷಪಾತ ಸುದ್ದಿಯ ಮಹತ್ವ ಎಂದಿಗಿಂತ ಇಂದು ಅಗತ್ಯವಾಗಿದೆ. ಸುದ್ದಿ ಕೇವಲ ಸುದ್ದಿಯಲ್ಲ. ಅದು ನಮ್ಮ ಚಿಂತನೆಯ ತಳಹದಿ ಮತ್ತು ಮಾರ್ಗದರ್ಶಿ. ನಾವು ವಿಶ್ವಾಸಾರ್ಹ ಸುದ್ದಿಯನ್ನೇ ಸ್ವೀಕರಿಸಬೇಕು.
ಸುದ್ದಿ ಎಂದರೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಘಟನೆಗಳ ವಿವರಗಳು ಎಂದಷ್ಟೇ ವ್ಯಾಖ್ಯಾನಿಸಲಾಗುತ್ತಿತ್ತು. ಏಕೆಂದರೆ ಸುದ್ದಿ ಪ್ರಕಟಣೆಯೇ ಪತ್ರಿಕೆಯ ಮೂಲ ಉದ್ದೇಶ. ಪತ್ರಿಕೆ ಅದಕ್ಕಾಗಿಯೇ ಸಜ್ಜಾಗಿದೆ. ಸುದ್ದಿಗಳನ್ನು ಸಂಗ್ರಹಿಸುವ ವರದಿಗಾರರ ಪಡೆ ಹಾಗೂ ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಸತ್ಯಾಸತ್ಯತೆ ಗಳನ್ನು ಒರೆಗಲ್ಲಿಗೆ ಹಚ್ಚಿ, ಸಂಪಾದಿಸಿ, ಮುದ್ರಿಸುವ ಗುರುತರ ಕೆಲಸವನ್ನು ಪತ್ರಿಕೆಗಳು ಓದುಗರಿಗಾಗಿ ಪ್ರತಿನಿತ್ಯ ಮಾಡುತ್ತವೆ.
ಸುದ್ದಿಯಿಂದ ಅಭಿಪ್ರಾಯಗಳನ್ನು ಬೇರ್ಪಡಿಸುತ್ತವೆ. ನಿಖರ ಸುದ್ದಿಯಷ್ಟೇ ಸುದ್ದಿ ಅಂಕಣದಲ್ಲಿ ಪ್ರಕಟವಾಗುತ್ತವೆ. ಸುದ್ದಿ ಮೇಲಿನ ಅಭಿಪ್ರಾಯ ಬೆಳವಣಿಗೆ ಓದುಗ ರಿಗೆ ಬಿಟ್ಟದ್ದು. ಇಂತಹ ಪ್ರಕ್ರಿಯೆ ಹಲವು ಚೌಕಟ್ಟುಗಳ ನಡುವೆ ನಡೆಯುತ್ತದೆ. ಒಂದು ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಯಿತು ಎಂದರೆ ಅದು ಸತ್ಯವೇ ಆಗಿರುತ್ತದೆ. ಹಲವಾರು ಹಂತಗಳಲ್ಲಿ ಸುದ್ದಿ ಪರಿಶೀಲನೆಗೆ ಒಳ ಪಡುತ್ತದೆ. ಪತ್ರಿಕೋದ್ಯಮ ಭಾಷೆಯಲ್ಲಿ ಇದಕ್ಕೆ ‘ಗೇಟ್ ಕೀಪಿಂಗ್’ ( ) ಪ್ರಕ್ರಿಯೆ ಎನ್ನಲಾಗು ತ್ತದೆ.
ಇದರರ್ಥ ಎಲ್ಲವೂ ಪರೀಕ್ಷೆಗೆ ಒಳಪಟ್ಟನಂತರವೇ ಸುದ್ದಿ ಪ್ರಕಟವಾಗುತ್ತದೆ ಎಂದರ್ಥ. ವರದಿಗಾರನಿಗೆ ಉತ್ತಮ ತರಬೇತಿ ನೀಡಲಾಗಿರುತ್ತದೆ. ಆದುದರಿಂದಲೇ ಪತ್ರಿಕೆಗಳಿಗೆ ಪ್ರಜಾಸತ್ತೆಯ ನಾಲ್ಕನೇ ಅಂಗ ಎನ್ನುವ ಪಟ್ಟ ಲಭ್ಯವಾದದ್ದು. ಸುಮಾರು ಮೂರು ಶತಮಾನಗಳ ಕಾಲ ಸುದ್ದಿ ಪ್ರಕಟಣೆಯಲ್ಲಿ ದಿನ ಪತ್ರಿಕೆಗಳದೇ ಪಾರುಪತ್ಯ. ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದರೆ ಅದು ಸತ್ಯವೇ ಎನ್ನುವಷ್ಟು ಅಚಲ ವಿಸ್ವಾಸ ಓದುಗರಿಗಿತ್ತು. ಆದರೆ ತಂತ್ರಜ್ಞಾನ ಬದಲಾಯಿತು. ರೇಡಿಯೋ, ಟಿವಿ ಹಾಗೂ ಇತ್ತೀಚಿನ ಅಂತರ್ಜಾಲ ಆಧಾರಿತ ಯು ಟ್ಯೂಬ್, ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಹಾಗೂ ಇತರೆ ನೆಟ್‌ವರ್ಕ್ ಗಳು ಚಿತ್ರ, ವೀಡಿಯೋ ಮತ್ತು ಸುದ್ದಿಗಳನ್ನು ಕ್ಷಣ ಮಾತ್ರದಲ್ಲಿ ವಿಶ್ವದೆಲ್ಲೆಡೆ ತಲಪಿ ಸುವ ಶಕ್ತಿ ಹೊಂದಿವೆ.
ಬ್ರಾಡ್ ಬ್ಯಾಂಡ್ ಆಧಾರಿತ ಸ್ಮಾರ್ಟ್ ಫೋನ್‌ಗಳ ಲಭ್ಯತೆ ಜನತೆಗೆ ಹೊಸ ಆಯುಧಗಳನ್ನೇ ನೀಡಿದಂತಾಗಿದೆ. ಭಾರತವೂ ಸೇರಿದಂತೆ ಏಷ್ಯಾ ಖಂಡದದೇಶಗಳಲ್ಲಿ ಪತ್ರಿಕೆಗಳು ಇನ್ನೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.ಆದರೆ ಅಮೆರಿಕ ಹಾಗೂ ಯೂರೋಪಿನ ದೇಶಗಳಲ್ಲಿ ಪತ್ರಿಕೆಗಳ ಪ್ರಸಾರಕುಗ್ಗಿದೆ. ಪತ್ರಕರ್ತರಿಗೆ ಕೆಲಸವಿಲ್ಲದಂತಾಗಿದೆ. ಅಂತರ್ಜಾಲ ಮಾಧ್ಯಮಗಳೇ ಅವರ ಪ್ರಮುಖ ಸುದ್ದಿ ಮೂಲಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಪತ್ರಿಕೆಗಳು ಮತ್ತು ಪತ್ರಕರ್ತರ ಮಹತ್ವವನ್ನು ತಿಳಿ ಹೇಳುವ ಪ್ರಯತ್ನದ ಅಂಗವಾಗಿ ಕಳೆದ ಮೂರು ವರ್ಷಗಳಿಂದ ‘ವಿಶ್ವ ಸುದ್ದಿ ದಿನಾಚರಣೆ’ ( ) ಯನ್ನು ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ವಿಶ್ವ ಸಂಪಾದಕರ ವೇದಿಕೆ ಮತ್ತು ಕೆನಡಾ ದೇಶದ ಪತ್ರಿಕೋದ್ಯಮ ದತ್ತಿನಿಧಿಗಳ ನಾಯಕತ್ವ ಈ ಆಚರಣೆಗೆ ಪ್ರೇರಣೆಯಾಗಿದೆ. ಸಮಾಜದಲ್ಲಿ ಪತ್ರಕರ್ತರ ನಿರ್ಣಾಯಕ ಪಾತ್ರ ಹಾಗೂ ಮಾಧ್ಯಮ ಮತ್ತು ಪತ್ರಿಕೋದ್ಯಮದ ಬಗ್ಗೆ ಜಾಗೃತಿ ಮೂಡಿಸುವ ದಿನವಾಗಿ ಆಚರಿಸಲಾಗುತ್ತಿದೆ. ವಿಶ್ವದ ಎಲ್ಲ ಪ್ರಮುಖ ಪತ್ರಿಕೆಗಳು ಇದರಲ್ಲಿ ಪಾಲ್ಗೊಂಡು ನಿಖರ ಹಾಗೂ ನಿಷ್ಪಕ್ಷಪಾತ ಸುದ್ದಿಯ ಮಹತ್ವವನ್ನು ತನ್ನ ಓದುಗರಿಗೆ ತಿಳಿ ಹೇಳುವ ಕೆಲಸ ಮಾಡಲಿವೆ.
ಸುಳ್ಳು ಸುದ್ದಿಯ ಹರಡುವಿಕೆ ಕೋವಿಡ್ ಸಾಂಕ್ರಾಮಿಕ ಅವಽಯಲ್ಲಂತೂ ಮುಗಿಲು ಮುಟ್ಟಿತ್ತು. ಯಾರ ಮೇಲಿನ ಯಾವುದೋ ದ್ವೇಷಕ್ಕೆ ಬಗೆಬಗೆಯ ಸಂಬಂಧ ಗಳನ್ನು ಬೆರೆಸಿ ಮಾಹಿತಿಗಳನ್ನು ವಿರೂಪಗೊಳಿಸಿ ಹಲವರು ಆನಂದಿಸಿದರು. ಒಂದು ಸಮುದಾಯದವರ ಮೇಲಂತೂ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಹಲವರು ಆನಂದಿಸಿದರು. ವಾಮ ಮಾರ್ಗಗಳ ಚಿಕಿತ್ಸೆಗಳನ್ನು ಮುನ್ನೆಲೆಗೆ ತರಲಾಯಿತು. ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದ ಸುದ್ದಿಗಳನ್ನು ಯಥೇಚ್ಛವಾಗಿ ಹರಿಯಬಿಡಲಾಯಿತು. ಸುಳ್ಳು ಇಲ್ಲವೇ ನಕಲಿ ಸುದ್ದಿಗಳು, ತಪ್ಪು ಸುದ್ದಿಗಳು ಮತ್ತು ಅತಿರೇಖದ ಸುದ್ದಿಗಳ ಮಹಾಪೂರವೇ ಸಾಮಾಜಿಕ ಮಾಧ್ಯಮಗಳಲ್ಲಿ ಕುಣಿದಾಡಿದವು.
ಸಾಂಕ್ರಾಮಿಕ ಕಾಯಿಲೆಯ ಸಮಸ್ಯೆ ಒಂದೆಡೆಯಾದರೆ, ’ಸುದ್ದಿ ಸಾಂಕ್ರಾಮಿಕತೆ’ ()ಇನ್ನೊಂದು ಜ್ವಲಂತ ಸಮಸ್ಯೆಯಾಗಿ ಹೊರಹೊಮ್ಮಿತು. ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇನ್ನೊಬ್ಬರಿಗೆ ಇಲ್ಲವೇ ಇನ್ನೊಂದು ಗುಂಪಿಗೆ ಫಾರ್ವರ್ಡ್ ಮಾಡುವ ಅರ್ಥಹೀನ ಪರಿಪಾಠವನ್ನು ಹಲವರುಬೆಳೆಸಿಕೊಂಡರು. ಇದೊಂದು ರೀತಿಯ ವಿಕೃತ ಆನಂದ. ನಾನು ಕಳುಹಿಸುವ ಇಲ್ಲವೇ ಫಾರ್ವರ್ಡ್ ಮಾಡುವ ಆಧಾರ ರಹಿತ ಸುದ್ದಿಯೊಂದರ ದುಷ್ಪರಿಣಾಮ ಗಳ ಬಗ್ಗೆ ಹೆಚ್ಚಿನವರಿಗೆ ವಿವೇಚನೆಯೇ ಇಲ್ಲ.
ಅದೊಂದು ತಮಾಷೆಯೆಂದೇ ಅಥವಾ ಇದು ಅಪರಾಧವೇ ಅಲ್ಲ ಎಂದು ಭಾವಿಸುತ್ತಾರೆ. ರಾಜಕೀಯ ಇಲ್ಲವೇ ಬೇರಾವುದೋ ಸೈದ್ಧಾಂತಿಕ ತರ್ಕಗಳ ಜತೆ ತಮ್ಮ ಅಭಿಪ್ರಾಯಗಳನ್ನು ಬೆರೆಸಿ ಮುಗ್ಧ ಜನರನ್ನು ದಾರಿತಪ್ಪಿಸುತ್ತಾರೆ. ಏಕೆಂದರೆ ತಾನು ಸೃಷ್ಟಿಸುವ ಅರೆಬರೆ ಸುಳ್ಳು ಸುದ್ದಿ ಯ ಕರ್ತೃ ತಾನೇ. ಅದನ್ನು ಹರಡಿಬಿಡುವವನೂ ಅವನೇ ಆಗಿರುತ್ತಾನೆ. ಇದು ಯಾರ ಪರಿಶೀಲನೆಗೂ ಒಳಪಡುವುದಿಲ್ಲ. ಆಗುವ ನಷ್ಟ ಓದುಗರಿಗೆ ಮಾತ್ರ. ಹೊಣೆಗಾರಿಕೆಯಿಲ್ಲದ ಲೇಖಕ ಮತ್ತು ಪ್ರಕಾಶಕನ ಕೈಯಲ್ಲಿ ಸಿಲುಕಿರುವ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಬದಲಾವಣೆ ಅನಿವಾರ್ಯವಾಗಿದೆ.
ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳ ಮೇಲೆ ಅಂತರ್ಜಾಲ ಹೇಗೆ ಪರಿಣಾಮಬೀರುತ್ತಿದೆ ಕುರಿತಂತೆ ಗಂಭೀರ ಚರ್ಚೆಗೆ ಇದು ಸೂಕ್ತ ಸಮಯವಾಗಿದೆ. ಅಂತರ್ಜಾಲವು ನಮ್ಮನ್ನು ಭೌಗೋಳಿಕ ಬಂಧನಗಳಿಂದ ಮುಕ್ತಗೊಳಿಸಿ, ಹೊಸ ಮನ್ವಂತರದತ್ತ ಬದಲಿಸಲಿದೆ ಎನ್ನುವ ಆಶಾಭಾವನೆಗಳನ್ನು ಆನ್‌ಲೈನ್ ಸಂವಹನ ಗಟ್ಟಿಗೊಳಿಸಬೇಕಿದೆ. ಜಾಗತೀಕರಣಗೊಂಡ ವಿಶ್ವ ಸಮುದಾಯಕ್ಕೆ, ಕೈಗಾರಿಕಾ ಯುಗದಿಂದ ಜಾಲ ಬಂಧ () ಯುಗಕ್ಕೆ ಕೊಂಡೊಯ್ಯು ತ್ತಿರುವ ಹಿನ್ನೆಲೆಯಲ್ಲಿ, ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮಗಳ ಬಳಕೆ ಅವಶ್ಯವಾಗಿದೆ.
ಜಾಲತಾಣಗಳ ನಿರ್ವಹಣೆಯಲ್ಲಿ ಮತ್ತಷ್ಟು ಬಿಗಿ ಹಿಡಿತದ ಅಗತ್ಯತೆ ಇದೆ. ಸೈಬರ್ ಕಾನೂನುಗಳು ಮತ್ತಷ್ಟು ವ್ಯಾಪಕವಾಗಿ ಜಾರಿಗೊಳ್ಳಬೇಕಾಗಿದೆ. ಅಲ್ಲದೆ ಶಿಕ್ಷೆಯ ಪ್ರಮಾಣವೂ ಹೆಚ್ಚಬೇಕಿದೆ. ಇವುಗಳ ಬಳಕೆಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಸಹ ಮೂಡಿಸಬೇಕಿದೆ. ಡಿಜಿಟಲಿಕರಣದ ಹಿನ್ನೆಲೆಯಲ್ಲಿ ಪತ್ರಿಕೋ ದ್ಯಮ ವೃತ್ತಿಯು ಗಣನೀಯವಾಗಿ ಬದಲಾಗಿದೆ. ಅಂತರ್ಜಾಲ ಮಾಧ್ಯಮ ಪರಿಸರದ ಪ್ರಭಾವದಲ್ಲಿ ಪತ್ರಿಕಾ ವೃತ್ತಿ ಮಹತ್ತರ ಮಾರ್ಪಾಡುಗಳನ್ನು ಕಾಣುತ್ತಿದೆ. ಡಿಜಿಟಲ್ ಪ್ರಕಟಣೆಗಳು ಹಾಗೂ ಜನಪ್ರಿಯ ಸಾಮಾಜಿಕ ಮಾಧ್ಯಮ ಖಾತೆಗಳೊಂದಿಗೆ ಇಂದು ಪತ್ರಿಕೆಗಳು ಸ್ಪರ್ಧೆಯಲ್ಲಿವೆ.
ಸ್ಪರ್ಧೆ ಮುಗಿದು ಈಗಾಗಲೇ ಅವುಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಹಂತ ತಲುಪಿವೆ. ಕಳೆದೆರಡು ದಶಕಗಳಲ್ಲಿನ ವ್ಯಾಪಕ ಬದಲಾವಣೆಗಳ ಪ್ರಭಾವ ಗಳಿಂದ ರಾಜಕೀಯ ಪತ್ರಿಕೋದ್ಯಮ ತೀವ್ರವಾಗಿ ಧ್ರುವೀಕರಣಗೊಂಡಿದೆ ಎಂದು ಮಾಧ್ಯಮ ತಜ್ಞರು ವಾದಿಸುತ್ತಿದ್ದಾರೆ. ಪತ್ರಿಕೆಗಳು ದಿನದಲ್ಲಿ ಒಮ್ಮೆ ಮಾತ್ರ ಪ್ರಕಟವಾಗುತ್ತವೆ. ಸಾಮಾಜಿಕ ಮಾಧ್ಯಮಗಳ ಮೂಲಕ ತ್ವರಿತವಾಗಿ ಬೇಕೆನಿಸಿದಾಗ ಜನತೆ ಸುದ್ದಿ ಪಡೆಯುತ್ತಿದ್ದಾರೆ. 24X7 ಟಿ ವಿ ಮಾಧ್ಯಮಗಳಲ್ಲಿ ಸುದ್ದಿ ವೀಕ್ಷಿಸಿ ನಾಳೆ ಅದನ್ನು ಪತ್ರಿಕೆಗಳಲ್ಲಿ ಓದುವ ಮೂಲಕ ಖಚಿತ ಪಡಿಸಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ ಸುದ್ದಿಯ ಜತೆಗೆ ದೀರ್ಘ ವಿಶ್ಲೇಷಣೆಯನ್ನು ಸಹ ನೀಡುತ್ತಿದೆ. ಡಿಜಿಟಲ್ ಮಾಧ್ಯಮದ ಇನ್ನೊಂದು ಅನುಕೂಲತೆಯೆಂದರೆ ವೈಯಕ್ತಿಕಗೊಳಿಸಿದ ಸುದ್ದಿಗಳನ್ನು ನೀಡುವ ಸಾಮರ್ಥ್ಯ ಹೊಂದಿರುವುದು. ನಿಮಗೆ ರಾಜ್ಯ ಇಲ್ಲವೇ ರಾಷ್ಟ್ರ, ರಾಜಕೀಯ ಇಲ್ಲವೇ ಕ್ರೀಡೆ, ಸಿನಿಮಾ ಇಲ್ಲವೇ ಕ್ರಿಕೆಟ್ – ಹೀಗೆ ವಿಶೇಷ ಸುದ್ದಿಗಳನ್ನು ಪ್ರತ್ಯೇಕವಾಗಿ ನಿಮಗೆ ನೀಡಬಲ್ಲವು. ಆದರೆ ಪತ್ರಿಕೆಗಳಿಗೆ ಇದು ಸಾದ್ಯವಾಗದು. ಸುದ್ದಿಗಾಗಿ24ಗಂಟೆ ಕಾಯುವ ಪ್ರಮೇಯ ಈಗ ಇಲ್ಲವೇ ಇಲ್ಲ. ಇದೆಲ್ಲದರ ಜತೆಗೆ ನಕಲಿ ಸುದ್ದಿಗಳ ಹಾವಳಿಯಲ್ಲಿ ಓದುಗ ಸಿಲುಕಿದ್ದಾನೆ.
ಈ ಹಿನ್ನೆಲೆಯಲ್ಲಿ ನಿಖರ ಹಾಗೂ ನಿಷ್ಪಕ್ಷಪಾತ ಸುದ್ದಿಯ ಮಹತ್ವ ಎಂದಿಗಿಂತ ಇಂದು ಅಗತ್ಯವಾಗಿದೆ. ಸುದ್ದಿ ಕೇವಲ ಸುದ್ದಿಯಲ್ಲ. ಅದು ನಮ್ಮ ಚಿಂತನೆಯ ತಳಹದಿ ಮತ್ತು ಮಾರ್ಗದರ್ಶಿ. ಆದುದರಿಂದಲೇ ನಾವು ವಿಶ್ವಾಸಾರ್ಹ ಸುದ್ದಿಯನ್ನೇ ಸ್ವೀಕರಿಸಬೇಕು. ಸುದ್ದಿಯ ಸಮಗ್ರತೆಯನ್ನು ಪತ್ರಿಕೆಗಳು ಮಾತ್ರ ನೀಡ ಬಲ್ಲವು. ಸಂಪಾದಕೀಯಗಳ ಮೂಲಕ ಓದುಗರಿಗೆ ಸಮರ್ಥ ಮಾರ್ಗದರ್ಶನ ಒದಗಿಸಬಲ್ಲವು. ಜನರ ದುಃಖ ದುಮ್ಮಾನಗಳನ್ನು ಸವಿವರವಾಗಿ ಕಲೆ ಹಾಕಿ ಜನತೆ ಮತ್ತು ಆಡಳಿತಗಾರರ ಮುಂದೆ ಪ್ರಭಾವಯುತವಾಗಿ ಮಂಡಿಸಬಲ್ಲವು.
ಪತ್ರಿಕೆ ನಮ್ಮ ಸಮಾಜದ ಕೈಗನ್ನಡಿ. ಸುದ್ದಿ, ಸಮಾಚಾರ ಜತೆಗೆ ಹಿನ್ನೆಲೆ ವಿವರಗಳು, ಶಿಕ್ಷಣ, ಮನರಂಜನೆಗಳನ್ನು ಸಮಚಿತ್ತವಾಗಿ ನೀಡಬಲ್ಲ ಏಕೈಕ ಮಾಧ್ಯಮ ಮುದ್ರಿತ ಪತ್ರಿಕೆಗಳು. ನೀವೂ ಓದಿ ಮಕ್ಕಳಲ್ಲೂ ಪತ್ರಿಕೆ ಓದುವ ಹವ್ಯಾಸ ಬೆಳೆಸಿ.
(ಲೇಖಕರು ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು)