’ಒಟಿಟಿ’ ಎಂಬ ಮಾಯಾಜಾಲ
ಅಭಿಮತ
ಸಂದೀಪ್ ಶರ್ಮಾ
.@.
‘ಪರಿವರ್ತನೆ ಜಗದ ನಿಯಮ’ ಎಂಬುದು ಸಾಮಾನ್ಯವಾಗಿ ಎಲ್ಲಾ ವಿಚಾರಗಳಲ್ಲಿ ಬಳಕೆಯಾಗುತ್ತಿರುವ ಎಂದೆಂದಿಗೂ ಬದಲಾಗದ ಸಾಲು. ಬದಲಾವಣೆಯ ಹಾದಿಯಲ್ಲಿ ತಂತ್ರಜ್ಞಾನಗಳೂ ಬದಲಾಗುತ್ತಿವೆ ಹೊಸದಾದ ಆವಿಷ್ಕಾರಗಳು ತೆರೆದುಕೊಳ್ಳುತ್ತಿವೆ. ಇದು ಮನರಂಜನಾ ಕ್ಷೇತ್ರಗಳನ್ನೂ ವ್ಯಾಪಿಸುತ್ತಿದೆ, ಪ್ರೇಕ್ಷಕರು ಹೊಸ ಆವಿಷ್ಕಾರಗಳಿಗೆ ಶೀಘ್ರಗತಿಯಲ್ಲಿ ಒಗ್ಗಿಕೊಳ್ಳುತ್ತಿದ್ದಾರೆ.
ಸಮಾಜದಲ್ಲಿರುವ ಎಲ್ಲಾ ವರ್ಗದ ಜನರು ರೇಡಿಯೋ ಬಳಸುವ ಹೊತ್ತಿಗೆ ಕಪ್ಪು ಬಿಳುಪು ಟಿವಿಗಳು ಲಗ್ಗೆ ಇಟ್ಟಿದ್ದವು. ರಂಗಮಂದಿರ ಹಾಗೂ ನಾಟಕಗಳು ಯಥೇಚ್ಛವಾಗಿ ಹಗಲು ರಾತ್ರಿ ಎಂಬ ಸಮಯದ ಪರಿವೆಯೇ ಇಲ್ಲದೇ ಪ್ರದರ್ಶನಗಳಲ್ಲಿ ನಿರತವಾಗಿದ್ದವು ಪಟ್ಟಣಗಳಲ್ಲಿ ಸಿನಿಮಾ ಟೆಂಟ್ಗಳು ತಲೆ ಎತ್ತಿದ್ದವು. ಟಿವಿಗಳಲ್ಲಿ ದೂರದರ್ಶನದಿಂದ ವಾರಕ್ಕೊಮ್ಮೆ ಪ್ರಸಾರವಾಗುವ ಸಿನಿಮಾಗಳಿಗಾಗಿ, ನೆಚ್ಚಿನ ಕಾರ್ಯಕ್ರಮಗಳಿಗಾಗಿ ಕಾದುಕುಳಿತಿರುತ್ತಿದ್ದ ಕಾಲವದು. ಆಗ ಚಿತ್ರಮಂದಿರಗಳಲ್ಲಿ ಹಣಕೊಟ್ಟು ಸಿನಿಮಾ ನೋಡಲಾಗದವರು ಹೊಸ ಸಿನಿಮಾಗಳಿಗಾಗಿ ವರ್ಷಗಟ್ಟಲೆ ಕಾಯಬೇಕಾಗಿತ್ತು. ಇದೆಲ್ಲವೂ ಕೇವಲ ದಶಕದ ಹಿಂದಿನ ಕತೆಗಳಷ್ಟೇ. ಈ ನಡುವೆ ಟೆಕ್ನಾಲಜಿ ಬೆಳೆದಂತೆ ಪೈರಸಿಯ ಹಾವಳಿ ಶುರುವಾಯಿತು.
ಸಿನಿಮಾಗಳನ್ನು ಕದ್ದು ಮಾರುವುದು, ಕ್ಯಾಮೆರಾ ಪ್ರಿಂಟ್‌ನಲ್ಲಿ ಚಿತ್ರಿಸಿ ಹಂಚುವುದು ಬೆಳೆಯಿತು. ಮಾಲ್‌ಗಳಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು ಹುಟ್ಟಿಕೊಂಡವು, ಇದರಿಂದ ಸಾಂಪ್ರದಾಯಿಕ ಚಿತ್ರಮಂದಿರಗಳು ನೆಲಕಚ್ಚಿದವು. ಥಿಯೇಟರ್‌ಗಳಿಗೆ ಹೋಗುವಷ್ಟು ಸಮಯವೇ ಇಲ್ಲದವರ ಸಮಸ್ಯೆಗಳನ್ನು ನೀಗಿಸಿದ್ದೇ ಓಟಿಟಿ ಗಳು. ಓವರ್ ದಿ ಟಾಪ್’ ಎಂಬುದೇ ಓಟಿಟಿ. ಅಂದರೆ ನಾವು ಬಳಸುತ್ತಿರುವ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ, ವೂಟ್ ಮೊದಲಾದ ಡಿಜಿಟಲ್ ಮೀಡಿಯಾ. ಒಟಿಟಿ ಅಂದರೆ ನೇರವಾಗಿ ಕಂಟೆಂಟ್ (ಮೀಡಿಯಾ)ಗಳನ್ನು ಇಂಟರ್‌ನೆಟ್ ಮೂಲಕ ಕೇಬಲ್, ಟೆಲಿಕಮ್ಯುನಿಕೇಷನ್ ಇತರ ತಡೆಗಳಿಲ್ಲದೆ ನೇರವಾಗಿ ಗ್ರಾಹಕ ರಿಗೆ ತಲುಪಿಸುತ್ತವೆ.
ವಾರ್ಷಿಕ ಚಂದಾ ನೀಡಿ ಚಂದಾದಾರಿಕೆ ಪಡೆದುಕೊಂಡರಷ್ಟೇ ಸಾಕು. ನಮ್ಮ ಚಿತ್ರಮಂದಿರಗಳಿಗೆ ಬಾರದೇ ಹೋಗುವ ಜಾಗತಿಕ ಸಿನಿಮಾಗಳನ್ನೂ ಈ ಒಟಿಟಿ ಗಳ ಪ್ಲಾಟ್ಫಾರ್ಮ್‌ಗಳ ಮೂಲಕ ಮನೆಯಿಂದಲೇ ವೀಕ್ಷಿಸಬಹುದಾಗಿದೆ. ಪಿಡಬ್ಲೂಸಿ ವರದಿಯ ಪ್ರಕಾರ 2018 ಮುಗಿಯುವ ವೇಳೆಗೆ ಭಾರತದಲ್ಲಿ ಓಟಿಟಿವಿಡಿಯೊ ಸೇವೆಗಳ ಮಾರುಕಟ್ಟೆ ಅಂದಾಜು 64 ಕೋಟಿ ಡಾಲರ್‌ಗಳಿಗೆ ತಲುಪಿತ್ತು. 2023ರ ಹೊತ್ತಿಗೆ ವಾರ್ಷಿಕವಾಗಿ ಶೇ.22ರಷ್ಟು ವೃದ್ಧಿಯಾಗಲಿದ್ದು, 170 ಕೋಟಿ ಡಾಲರ್ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಕಳೆದ 2೨ ದಶಕಗಳಿಂದ ಸಿನಿಮಾ ನಿರ್ಮಾಣದ ಸಂಖ್ಯೆ ಎಗ್ಗಿಲ್ಲದೆ ಸಾಗುತ್ತಿತ್ತು.
ಹೀಗಾಗಿ ಚಿತ್ರಮಂದಿರಗಳು ಹಿಟ್ ಆಗುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದು, ಸಿನಿಮಾದಿಂದ ಹೆಚ್ಚು ಲಾಭವಾಗುತ್ತಿಲ್ಲವೆಂದರೆ ಬದಲಾಯಿಸುವುದು ಸರಾಗವಾಗಿದೆ. ಚಿತ್ರಮಂದಿರ ಮಾಲೀಕರು ಮಲ್ಟಿಪ್ಲೆಕ್ಸ್‌ಗಳಿಗೆ ಅನುಮತಿ ಕೊಡಬಾರದು ಎಂದು ಪ್ರತಿಭಟಿಸಿದ್ದರು. ಆದರೆ, ಇಂದು ಮಲ್ಟಿಪ್ಲೆಕ್ ಗಳೊಂದಿಗೆ ಒಟಿಟಿಗಳು ಚಿತ್ರಮಂದಿರಗಳಿಗೆ ಎದುರಾಗಿ ಬೆಳೆದಿವೆ. ಇದರಿಂದಾಗಿ ಚಿತ್ರಮಂದಿರಗಳಿಗೆ ಹೊಡೆತ ಬೀಳುವ ಸಾಧ್ಯತೆಗಳಿವೆ.
ಮೊದಲೆಲ್ಲ ಪ್ರೇಕ್ಷಕರು ಮನರಂಜನೆಗಾಗಿ ಚಿತ್ರಮಂದಿರ ಮತ್ತು ಟಿವಿ ಮೇಲೆ ಅವಲಂಬಿತರಾಗಿದ್ದರು. ಅಲ್ಲಿ ಪ್ರದರ್ಶನಗೊಳ್ಳುವ ಸಿನಿಮಾ ಅಥವಾ ಕಾರ್ಯಕ್ರಮ ಗಳನ್ನು ನೋಡಿ ಆನಂದಿಸುತ್ತಿದ್ದರು. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದು ಒಂದು ಸಾಮೂಹಿಕ ಕ್ರಿಯೆ. ಮನೆಯಲ್ಲಿ ಟಿವಿ ನೋಡಿದರೆ ಬಹುತೇಕ ಸಂದರ್ಭದಲ್ಲಿ ಕುಟುಂಬದವರು ಇದ್ದೇ ಇರುತ್ತಾರೆ. ಆದ್ದರಿಂದ ಸೆನ್ಸಾರ್ ಪ್ರಯೋಗವಾಗಿರುತ್ತದೆ. ಆದರೆ ಓಟಿಟಿಗಳ ಕಥೆಯೇ ಬೇರೆ. ಮನರಂಜನೆ ಎಂಬುದು ಈಗ ತೀರಾ ಖಾಸಗಿ ಆಗಿದೆ. ಎಲ್ಲವೂ ಮೊಬೈಲ್ ಪರದೆಗೆ ಬಂದು ಕೂತಿದೆ. ಒಟಿಟಿಯಲ್ಲಿ ಈಗ ವೆಬ್ ಸರಣಿಗಳು ಜನಪ್ರಿಯತೆ ಪಡೆದುಕೊಂಡಿವೆ ಎಂದು ಮನೆಮಂದಿಯ ಜತೆಗೆ ಕುಳಿತು ಅವುಗಳನ್ನು ನೋಡುವ ಮುನ್ನ ಕೆಲವು ವಿಚಾರಗಳ ಬಗ್ಗೆ ಪ್ರೇಕ್ಷಕರು ಎಚ್ಚರಿಕೆ ವಹಿಸಬೇಕಿರುವುದು ಅತ್ಯಗತ್ಯವಾಗಿದೆ.