ಮಹಾರಾಜರೇ, ಇದನ್ನೆಂದಾದರೂ ಆಲೋಚಿಸುವಿರಾ ?
ಪ್ರಚಲಿತ
ಹೃತಿಕ್ ಕುಲಕರ್ಣಿ
ಪ್ರಜಾಡಳಿತವಿರುವ ಭಾರತದಲ್ಲಿ ಪ್ರಜಾಪ್ರಭುತ್ವದ ಉಳಿವಿನ ಬೆಳವಿನ ತಳಹದಿ ಚುನಾವಣೆಗಳು. ಚುನಾವಣೆಗಳ ಜೀವಂತಿಕೆಗೆ ರಾಜಕೀಯ ಪಕ್ಷಗಳ ಬೆಳವಣಿಗೆಗೆ ಪ್ರಜೆಗಳ ಚೈತನ್ಯ ಮತ್ತು ಅಳಿಯದ ಅವರ ಆಶಾಭಾವವೇ ಕಾರಣ. ಒಂದು ರಾಜ್ಯ ಕ್ಷೇತ್ರದ ಜನಸಮೂಹ ಒಂದು ಪಕ್ಷಕ್ಕೆ ಬಹುಮತವನ್ನೂ ಇನ್ನೊಂದಕ್ಕೆ ಅಲ್ಪಮತವನ್ನೂ ಕೊಟ್ಟು ಆರಿಸುವುದಕ್ಕೆ ಅಥವಾ ತಿರಸ್ಕರಿಸುವುದಕ್ಕೆ ಎರಡು ಮೂಲ ಕಾರಣಗಳುಂಟು ಎಂದು ಹೇಳಬಹುದು.
ಒಂದು ಮೇಲೆಯೇ ಬರೆದಂತೆ ಪ್ರಜೆಗಳ ಆಶಾಭಾವನೆ ಎರಡನೆಯದು ರಾಜ್ಯಜೀವನದ ಮತ್ತು ವ್ಯಕ್ತಿಜೀವನದ ಉದ್ಧಾರವಾಗಲೊಸುಗ ಮತ ಚಲಾವಣಾಗಳಿಗೆಯಲ್ಲಿ ಪ್ರಜೆಗಳ ಮನದಲ್ಲಿ ಜಾಗೃತವಾಗಿ ಕೂರುವ ‘ದೂರದಾಲೋಚನೆ’. ಪ್ರಜೆಗಳಲ್ಲಿ ಈ ಆಶಾಭಾವನೆ ಮತ್ತು ದೂರದಾಲೋಚನೆ ಅನೇಕ ಸಲ ಮೊಳಕೆಯೊಡೆಯುವುದು  ಒಂದು ಪಕ್ಷದ ಒಬ್ಬ ನಾಯಕನ ನೀರೆರೆದು ಪೋಷಿಸುವ ದೊಡ್ಡಗುಣದಿಂದ ಮತ್ತು ಅವನ ಜತೆಗಿರುವ ಅಂತಹದೇ ದೊಡ್ಡ ಗಣದಿಂದ. ಅವನನ್ನು ಜನ ಜನನಾಯಕನೆಂದು ಗುರುತಿಸಿ ತಮ್ಮೆ ಆಶೆ- ಆತಂಕ ಗಳನ್ನು, ಇಚ್ಛೆ-ಆಸಕ್ತಿಗಳನ್ನು, ಬೇಕು-ಬೇಡಗಳನ್ನು ಅವನ ಜೊಳಿಗೆಗೆ ಹಾಕುತ್ತಾರೆ.
2014 ಮತ್ತು 2019 ರ ಚುನಾವಣೆಗಳಲ್ಲಿ ನರೇಂದ್ರ ಮೋದಿಯವರ ಮತ್ತವರ ಪಕ್ಷದ ವಿಷಯದಲ್ಲಿ ಆದದ್ದು ಇದೇ ಅಲ್ಲವೆ. ಹೀಗೆ ಆಗುವುದರಲ್ಲಿ ಆಶ್ಚರ್ಯವೇನು ಇಲ್ಲ. ಆದರೆ ಇದೇ ರಾಷ್ಟ್ರೀಯ ಪಕ್ಷಗಳು ಪ್ರಜಾ ಆದೇಶವನ್ನು ಎದುರಿಸಿ ನಿಂತಾಗ ಆಶ್ಚರ್ಯವಾಗದೆಯಿರುವುದುಂಟೆ? ಹೌದು, ಸರಕಾರ ನಿರ್ಮಾತೃಗಳಾದ ಪ್ರಜೆಗಳ ಭಾವನೆಯೊಟ್ಟಿಗೆ ಆಟವಾಡುವ ರಾಷ್ಟ್ರೀಯ ಪಕ್ಷಗಳ ಧಾರ್ಷ್ಟ್ಯ ಧೋರಣೆ ಈಗೀಗ ಎಲ್ಲಾ ಮೀರುತ್ತಿದೆ. ದಕ್ಷಿಣ ಭಾರತದಲ್ಲಿ ದಿಕ್ಕು ಕಾಣದೆ ಪರಿತಪಿಸು ತ್ತಿರುವ ಬಿಜೆಪಿಗೆ ಕೇವಲ ದಣಿವಾರಿಸಿಕೊಳ್ಳಲಷ್ಟೇ ಅಲ್ಲ ಖಾಯಂ ವಾಸಕ್ಕೆ ನೆಲೆಕೊಟ್ಟ ಕನ್ನಡ ಜನತೆಗೆ ಬಿಜೆಪಿ ಕೊಟ್ಟಿದ್ದೇನು? ಕಳೆದ ಚುನಾವಣೆಯಲ್ಲಿ ಯಾರ ನಾಯಕತ್ವದ ಮೇಲೆ ಭರವಸೆ, ವಿಶ್ವಾಸ ಮತ್ತು ಆಶಾಭಾವನೆಯಿಟ್ಟು ಬಹುಮತ ಆದೇಶವನ್ನು ಜನ ಕೊಟ್ಟರೊ ಆ ನಾಯಕನನ್ನೇ ನೆಪವೊಡ್ಡಿ ಕೆಳಗಿಳಿಸಿದರಲ್ಲ, ಇದು ಜನಾದೇಶದೊಟ್ಟಿಗೆ ಆಡಿದ ಆಟವಲ್ಲವ? ಕರ್ನಾಟಕದ ಮಹಾಜನತೆ ಇದನ್ನೆಂದಾದರೂ ಯೋಚಿಸಬೇಕು. ಯೋಚಿಸಿ ಯೋಜನೆ ರೂಪಿಸಬೇಕು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ನಿಷ್ಕ್ರಿಯತೆ ಒಂದೋ ಅರಾಜಕತೆಯನ್ನು ಇಲ್ಲವೋ ಏಕಚಕ್ರಾಧಿಪತ್ಯವನ್ನು ಸೃಷ್ಟಿಸುವುದು ಎಂದಾದರೊಂದು ದಿನ ಖಂಡಿತ. ಆದ್ದರಿಂದ ಎದ್ದೇಳಿ! ಬಿಜೆಪಿ ಸಮುದ್ರದ ಪ್ರಕ್ಷುಬ್ಧ ಅಲೆಗಳ ನಡುವಲ್ಲೂ ನಿರಾಯಾಸವಾಗಿ ತೇಲುತ್ತ ಸಾಗುತ್ತಿದೆ. ಆದರೆ ಕಾಂಗ್ರೆಸ್ ಮುಳುಗಿರುವ ಅಥವಾ ಮುಳುಗುತ್ತಿರುವ ಹಡಗು. ಆದರೂ ಜನಾದೇಶವನ್ನು ಽಕ್ಕರಿಸುವ ನಿರ್ಣಯ ಮಾಡುತ್ತಾರಲ್ಲ ಅವರಿಗೇನು ಹುಚ್ಚೆ? ಅಥವಾ ಅಪ್ರಬುದ್ಧ ನಾಯಕತ್ವದ ಅರ್ಧಂ ಬರ್ಧ ವಿಚಾರಗಳೇ ಅವು? ಅದೆನೇ ಇದ್ದಿರಲಿ ಪಂಜಾಬ್ ಕಾಂಗ್ರೆಸನ ಕ್ಯಾಪ್ಟನ್ ಅಮರಿಂದರ್ ಸಿಂಗ್‌ರನ್ನು ಸಿ.ಎಂ ಸ್ಥಾನದಿಂದ ಇಳಿಯಲು ಪ್ರೇರೆಪಿಸಿದ್ದು ಪಂಜಾಬ್ ಪ್ರಜೆಗಳಿಗೆ ಮಾಡಿದ ಅವಮಾನ ಎನ್ನುವುದು ಒಂದೆಡೆಯಾದರೆ ಅವರನ್ನು ನಡೆಸಿಕೊಂಡ ಪರಿ ಪಂಜಾಬ್ ಜನತೆಗೆ ಕಾಂಗ್ರೆಸ್ ಮಾಡಿದ ಕಪಾಳಮೋಕ್ಷ. ಈಗ ಛತ್ತೀಸಘಡದಲ್ಲೂ ಅದೇ ಆಗಬಹುದು ಎನ್ನುವುದು ಕಿವಿಗೆ ಬಿಳುತ್ತಿರುವ ಸುದ್ದಿ.
ಈ ಮೇಲಿನ ಎರಡ್ಮೂರು ಉದಾಹರಣೆಗಳು ಪ್ರಜಾಪ್ರಭುತ್ವ ತತ್ವಗಳ ಬಗ್ಗೆ ಮಾತನಾಡುವ ೨ ದೊಡ್ಡ ರಾಷ್ಟ್ರೀಯ ಪಕ್ಷಗಳ ಪ್ರಜಾಪ್ರಭುತ್ವ ತತ್ವಪರಿಪಾಲನೆಯ ನಿದರ್ಶನಗಳು. ಪ್ರಜಾ ಆದೇಶವೇ ಆಕ್ಸಿಜನ್. ಆ ಆಕ್ಸಿಜನ್‌ನಿಂದ ಬದುಕುತ್ತಿರುವ ದೇಹಗಳೇ ರಾಜಕೀಯ ಪಕ್ಷಗಳು, ಸಂಸದರು, ಶಾಸಕರು. ಆಕ್ಸಿಜನ್ಪೂರೈಕೆದಾರರು ಪ್ರಜೆಗಳಾದ್ದರಿಂದ ಅವರಿಗೆ ಸರಕಾರಗಳನ್ನು, ಪಕ್ಷಗಳನ್ನು ಪ್ರಶ್ನಿಸುವ ಒಳ್ಳೆಯ ಕಾರ್ಯಗಳಿಗೆ ಪ್ರಚಾರಕೊಡುವ ದೋಷವೆತ್ತಿ ತೋರಿಸುವ ಎಲ್ಲ ಅಧಿಕಾರ ಮತ್ತು ಹಕ್ಕುಂಟು. ಸರಕಾರ ಮತ್ತು ಪಕ್ಷಗಳ ಸತ್ಕಾರ್ಯಗಳಿಗೆ ಬೆನ್ನುತಟ್ಟುವುದು ದುಷ್ಕಾರ್ಯ ಕಂಡಲ್ಲಿ ಬೆನ್ನಿಗೆ ಬಾರಿಸುವುದು ಪ್ರಜೆಗಳ ಪ್ರಜಾಧರ್ಮ. ಇದನ್ನು ನಿಭಾಯಿಸದೆ ಧರ್ಮಭ್ರಷ್ಟರಾದವರೇ ಅನೇಕರಿದ್ದಾರೆ, ಪ್ರಜಾಧರ್ಮವನ್ನೂ ಸ್ವಧರ್ಮವನ್ನೂ ಪಾಲಿಸದೆ ರಾಜ್ಯಜೀವನವೂ ಇಲ್ಲ ವ್ಯಕ್ತಿ ಜೀವನವೂ ಇಲ್ಲ. ಎಚ್ಚರ!