ವ್ಯಕ್ತಿಚಿತ್ರ ಬರೆಯುವುದೊಂದು ಕಲೆ
ಅಭಿಪ್ರಾಯ
ಹೃತಿಕ್ ಕುಲಕರ್ಣಿ
ಮಹಾನ್ ವ್ಯಕ್ತಿಗಳ ಜೀವನ ಚಿತ್ರವನ್ನು ಒಂದು ಪುಸ್ತಕ ರೂಪದಲ್ಲಿ ಬಹಳ ಚಂದವಾಗಿ ಕಟ್ಟಿಕೊಡಬಹುದು. ಅಲ್ಲಿ ಅವರ ಒಳಹೊರಗನ್ನೂ, ಬಾಲ್ಯ-ಯೌವನ-ವೃದ್ಧಾಪ್ಯಗಳ ಭರಪೂರ ವಿವರಣೆಗಳನ್ನೂ, ಅವರ ಸಾಧನಾ ಹಾದಿಯ ಬೀಳು ಏಳುಗಳನ್ನೂ ಆಳಕ್ಕಿಳಿದು ತೋರಿಸಿಕೊಡುವ ಅವಕಾಶವುಂಟು.
ಪುಸ್ತಕ ಬರೆಯಲು ಕುಳಿತವನು ತನ್ನ ವಿಷಯವ್ಯಕ್ತಿಯ ಬಗ್ಗೆ ಸ್ವಲ್ಪ ಬಹಳವೇ ಅಧ್ಯಯನ ಮಾಡಿದ್ದರೆ, ಆ ಅಧ್ಯಯನ ಅವನ ಮನಃಹೃದಯಗಳಲ್ಲಿಸೂರ್ತಿರಸ ಚಿಮ್ಮಿಸಿದ್ದರೆ ಅವನ ವಿಷಯವ್ಯಕ್ತಿ ಪುಸ್ತಕದ ಪದಪದ ಗಳನ್ನೂ ಅಲಂಕರಿಸಿ ಕೂಡಲು ಸಿದ್ಧನಾಗಿರುತ್ತಾನೆ. ಒಂದು ಪುಸ್ತಕದಲ್ಲಿ ಒಬ್ಬ ಮಹಾನ್ ವ್ಯಕ್ತಿ ಜೀವನವನ್ನು ತುಂಬಿಕೊಡುವುದೂ ಸವಾಲೇ ಸರಿ. ಆದರೂ ಒಬ್ಬ ಸಾಹಸಿ ಲೇಖಕ ಈ ಸವಾಲು ಸ್ವೀಕರಿಸದೆ ಹಿಂಜರಿಯಲಾರ.
ಆದರೆ ಒಂದು ಲೇಖನದಲ್ಲಿ/ಅಂಕಣದಲ್ಲಿ ಒಂದು ವ್ಯಕ್ತಿಚಿತ್ರ ತೋರಿಸುವುದು ಕಷ್ಟ ಮತ್ತು ಪ್ರಯಾಸಪೂರ್ಣ ಕಾರ್ಯ. ಒಂದು ಲೇಖನಕ್ಕೆ ಇಂತಿಷ್ಟೇ ಪದಗಳೆಂಬ ನಿರ್ಬಂಧ. ಈ ನಿರ್ಬಂಧದ ನಡುವೆ ಚೂರುಪಾರು ಲೇಖನ ಅತ್ತಿತ್ತಾದರೂ ವಿಷಯ ಸಂಬಂಧ ಕೆಡುವುದೆಂಬ ಕಾಳಜಿ. ಜಾಗ್ರತೆ  ತಪ್ಪಿ ಪದಗಳೆನಾದರೂ ಮಿತಿಮೀರಿದವೋ ಮತ್ತೆ ತಡಕಾಡಿ ಹುಡುಕಿ ಪದ ಕಡಿತಮಾಡಬೇಕ ಎಂಬ ಭಯ. ಇಷ್ಟೆ ಭಾರಿ ಬಂಧನಗಳ ನಡುವೆಯೂ ಲೇಖಕ ಮಹಾನ್ ವ್ಯಕ್ತಿಗಳ ವ್ಯಕ್ತಿ ಚಿತ್ರವನ್ನು ಬರೆಯಲು ನಿಷ್ಕರ್ಷೆ ಮಾಡಿದರೆ ಆ ಮಹಾನ್ ವ್ಯಕ್ತಿಯ ಮಹಾನತೆಯನ್ನು ಕುಗ್ಗಿಸಿಬಿಟ್ಟಿಯೋ ಎಂಬ ಅಂತರ್ ಧ್ವನಿಯ ಕುಹುಕ, ಎಚ್ಚರಿಕೆಯ ಸಂದೇಶ.
ಇಷ್ಟು ಕಾರಣವನ್ನು ಗಮನದಲ್ಲಿರಿಸೇ ಅಂಕಣ ರೂಪದಲ್ಲಿ ವ್ಯಕ್ತಿಚಿತ್ರ ಬಿಡಿಸುವುದು ಕಷ್ಟ ಮತ್ತು ಪ್ರಯಾಸ ಪೂರ್ಣ ಕಾರ್ಯ ಅಂತ ಹಿಂದೆ ಬರೆದದ್ದು. ಇಂತಹ ಲೇಖನ ಬರೆಯುವ ‘ಕಲೆ’ಯನ್ನು ಲೇಖಕ ಕರಗತಮಾಡಿಕೊಂಡದ್ದೇ ಸತ್ಯವಾದರೆ ಮಂಜುಗಡ್ಡೆರೂಪಿ ಪ್ರಯಾಸವೆ ಕರಗಿ ನೀರಿನಂತೆ ಸಲೀಸಾಗಿ ಹರಿಯ ತೊಡಗುತ್ತದೆ. ಆಗ ಅದು ಪ್ರಯಾಸವಲ್ಲ, ಪಯಣ. ಲೇಖಕ ಈ ಪ್ರಯಾಸವನ್ನು ಮೀರಿದಾಗ ತನ್ನ ಲೇಖನಿ ಜತೆಗೂಡಿ ಪಯಣ ಶುರು ಮಾಡುತ್ತಾನೆ. ಪಯಣದಲ್ಲಿ ಸುಖ-ದುಃಖ, ಏಳು-ಬೀಳುಗಳೆ ಇರುತ್ತವೆ. ಆದರೆ ಲೇಖಕನ ಜತೆಗಾರ್ತಿ ‘ಲೇಖನಿ’ ಅವನ ಕೈಹಿಡಿದಿರುವ ಕಾರಣ ಎಲ್ಲ ದ್ವಂದ್ವಗಳಿಂದಲೂ ಅವರು ದೂರ.ಬಹುದೂರ.
ಆದರೆ ಈ ‘ಕಲೆ’ಯನ್ನು ಕರಗತ ಮಾಡಿಕೊಳ್ಳುವುದು ಹೇಗೆ? ಹಲವರಿಗೆ ಈ ಕಲೆ ದೈವದತ್ತ. ಇನ್ನೂ ಕೆಲವರಿಗೆ ಅನುವಂಶೀಯವಾಗಿ ದಕ್ಕಿದ್ದಿರಬಹುದು. ಹಾಗೆಯೇ ಇನ್ನುಳಿದ ಬಹುಜನ ಲೇಖಕರಿಗೆ ಇದು ಅಭ್ಯಾಸದಿಂದ ಸಿದ್ಧಿಸುವಂತಹದ್ದು. ಒಬ್ಬನಿಗೆ ಯಾವುದೇ ಒಂದು ಕಲೆ ಕೈಗೆಟುಕಿದೆ ಎಂದರೆ ಅದು ಅಭ್ಯಾಸ ಮತ್ತು ದೈವಕೃಪೆ, ಇವೆರಡರ ಮಿಳಿತದ -ಲ. ಇದು ಲೇಖಕನ ವಿಷಯದಲ್ಲೂ ಸತ್ಯ. ಲೇಖಕ ಓದಬೇಕು, ಓದಿದ್ದನ್ನು ವಿಚಾರ ಮುಖೇನ ಗ್ರಹಿಸುವ ಸಾಮರ್ಥ್ಯ ವನ್ನೂ ಅವನು ಗಳಿಸಬೇಕು. ಇದೇ ಲೇಖಕನ ಅಭ್ಯಾಸ. ಈ ಅಭ್ಯಾಸವೇ ಅವನ ಕಲೆಯನ್ನು ಚಿಗುರೊಡೆಸುವಂತದ್ದು. ಈ ಅಭ್ಯಾಸವೇ ಅವನ ಕಲೆಯನ್ನು ಸೃಜಿಸುವಂತದ್ದು. ಈ ಅಭ್ಯಾಸವೇ ಚಿಗುರೊಡೆದ ಕಲೆಯನ್ನು ಬೆಳೆಸಿ ಅರಳಿಸುವಂತದ್ದು. ಲೇಖಕ ಓದದೇ ಓದಿದ್ದನ್ನು ಗ್ರಹಿಸದೇ ಬರೆಯಲಾರ. ಅದರಲ್ಲೂ ವ್ಯಕ್ತಿಚಿತ್ರ ಬರೆಯಲೇಆರ. ಓದಬೇಕು, ಬಹಳ ಓದಬೇಕು, ಓದಿದ ಮೇಲೆ ಬರೆಯಬೇಕು. ಓದದೆ ಗ್ರಹಿಸದೆ ಬರೆಯಬಾರದು.