ಜನವರಿ 30ರಂದು ಆ ವಿದೇಶಿ ವ್ಯಕ್ತಿ ಅಲ್ಲಿಗೇಕೆ ಬಂದಿದ್ದ ?
ಶಶಾಂಕಣ
ಶಶಿಧರ ಹಾಲಾಡಿ
.@.
ಅವರು ನಂಬಿದ ತತ್ತ್ವಗಳಿಗೆ ಅವರೇ ಬಲಿಪಶುವಾದರು, ಅಹಿಂಸೆಯನ್ನು ನಂಬಿ ದೇಹತ್ಯಾಗ ಮಾಡಿದರು. ದೇಶದಲ್ಲಿ ತೀವ್ರ ಗಲಭೆಗಳಿದ್ದರೂ, ತನಗೆ ಶಸಧಾರಿ ಅಂಗರಕ್ಷಕರು ಬೇಡವೇ ಬೇಡ ಎಂದು ಹಠ ಹಿಡಿದಿದ್ದರಿಂದಾಗಿ ಅವರ ಹತ್ಯೆಯಾಯಿತು’ ಎಂದು ಉದ್ಗರಿಸಿದವರು ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್.
ಅಂದರೆ, ಗಾಂಧೀಜಿಯವರ ಜೀವಕ್ಕೆ ಅಪಾಯವಿತ್ತು ಎಂಬ ಖಚಿತ ವರದಿಗಳಿದ್ದವಾದರೂ, ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸರಕಾರ ಯೋಚಿಸಿದ್ದರೂ,ಅಂತಹ ರಕ್ಷಣೆ ತನಗೆ ಬೇಕಾಗಿಲ್ಲ ಎಂದು ಗಾಂಧೀಜಿ ಬಲವಾಗಿ ಹೇಳಿದ್ದರಿಂದ ಮತ್ತು ಆ ಹೇಳಿಕೆಯನ್ನು ಸರಕಾರ ಪಾಲಿಸಿದ್ದರಿಂದ, ಒಬ್ಬ ಬಂದೂಕುಧಾರಿಯುಸುಲಭವಾಗಿ ಬಳಿಗೆ ಬಂದು, ಹತ್ತಿರದಿಂದ ಗುಂಡು ಹಾರಿಸಲು ಸಾಧ್ಯವಾಯಿತು ಎಂಬರ್ಥ ತಾನೆ! ಆದರೆ, ಗಾಂಧೀಜಿಯಂತಹ ಮಹಾತ್ಮರನ್ನು, ದೇಶಕ್ಕೆಸ್ವಾತಂತ್ರ್ಯ ತಂದು ಕೊಟ್ಟವರನ್ನು, ಅದಾಗಲೇ ತಮ್ಮ ಅಹಿಂಸಾ ತತ್ತ್ವದಿಂದಾಗಿ ಜಗತ್‌ಪ್ರಸಿದ್ಧರಾಗಿದ್ದ ಅವರನ್ನು ರಕ್ಷಿಸುವುದು ಸರಕಾರದ ಕರ್ತವ್ಯವಾಗಿತ್ತು, ಅಲ್ಲವೆ? ಗಾಂಧೀಜಿಯವರು ತನಗೆ ಹೆಚ್ಚಿನ ರಕ್ಷಣೆ ಬೇಡ ಎಂದಿದ್ದರೂ, ಬಂದೂಕುಧಾರಿಯೊಬ್ಬ ಅವರ ಹತ್ತಿರಕ್ಕೆ ನಡೆದು ಬರದಂತೆ ತಡೆಯುವುದು ಪೊಲೀಸರ, ಸರಕಾರದ ಆದ್ಯ ಕರ್ತವ್ಯವಾಗಬೇಕಿತ್ತು.
ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಮಹಾತ್ಮನನ್ನು, ಸಂತನನ್ನು, ಎಲ್ಲರ ಎದುರಿನಲ್ಲಿ, ದಿನನಿತ್ಯದ ಪ್ರಾರ್ಥನಾ ಸಭೆಯಲ್ಲಿ, ಹಗಲು ಹೊತ್ತಿನಲ್ಲಿ, ಒಬ್ಬ ವ್ಯಕ್ತಿ ನೇರವಾಗಿ ಬಂದು ಗುಂಡು ಹಾರಿಸಿ ಸಾಯಿಸುವುದೆಂದರೆ, ನಿಜಕ್ಕೂ ಅದೆಷ್ಟು ಘೋರ ಮತ್ತು ಅದೆಂತಹ ಭದ್ರತಾವೈಫಲ್ಯ! ಮಹಾತ್ಮಾ ಗಾಂಧೀಜಿಯವರ ಹತ್ಯೆಯ ಸನ್ನಿವೇಶ ವನ್ನು ಗಮನಿಸುತ್ತಾ ಹೋದರೆ, ಆಶ್ಚರ್ಯಕರ ಮತ್ತು ಕೆಲವು ಆಘಾತಕಾರಿ ವಿದ್ಯಮಾನಗಳು ಬಯಲಾಗುತ್ತವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ಕೇವಲ ಐದು ತಿಂಗಳುಗಳಲ್ಲಿ, ಅವರನ್ನು ಗುಂಡು ಹಾರಿಸಿ ಸಾಯಿಸ ಲಾಯಿತು ಎಂಬ ವಾಸ್ತವವೇ ಬಹು ಆಘಾತಕಾರಿ.
ನಾಲ್ಕಾರು ದಶಕಗಳಿಂದ ಅಹಿಂಸೆಯನ್ನು ಪ್ರತಿಪಾದಿಸುತ್ತಾ, ಪ್ರೀತಿಯಿಂದಲೇ ಬ್ರಿಟಿಷರನ್ನು ಗೆಲ್ಲಬೇಕೆಂದು ಉಪದೇಶಿಸುತ್ತಾ, ಬ್ರಿಟಿಷರ ಬಂದೂಕಿನ ಎದುರು ಅಹಿಂಸೆಯನ್ನೇ ಅಸವನ್ನಾಗಿ ಬಳಸಿದ ಗಾಂಧೀಜಿ ಯವರನ್ನು, ವ್ಯಕ್ತಿಯೊಬ್ಬ ಹಾರಿಸಿದ ಪಿಸ್ತೂಲಿನ ಗುಂಡುಗಳು ಸಾಯಿಸಿದವು ಎಂಬ ಸತ್ಯವನ್ನು ಪೂರ್ತಿಯಾಗಿ ಅರಗಿಸಿಕೊಳ್ಳಲು ಭಾರತಕ್ಕೆ ಇನ್ನೂ ಸಾಧ್ಯ ವಾಗಿಲ್ಲ. 1948ರ ಜನವರಿ 30ರಂದು, ಸಂಜೆ ಸುಮಾರು 5 ಗಂಟೆಗೆ ದೆಹಲಿಯ ಬಿರ‍್ಲಾ ಭವನದಲ್ಲಿ ನಡೆದ ಗಾಂಧೀಜಿ ಯವರ ಕೊಲೆಯ ಆಘಾತದಿಂದ ನಾವಿನ್ನೂ ಪೂರ್ತಿಯಾಗಿ ಹೊರಬಂದಿಲ್ಲ,. ಅಂದು ನಡೆದ ಆ ಕೊಲೆ, ಅದಕ್ಕಾಗಿ ನಡೆದ ಸಂಚು, ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿದ್ದು, ನಂತರ ನಡೆದ ವಿಚಾರ ಣೆ, ಎಲ್ಲವನ್ನೂ ಮುಕ್ತವಾಗಿ, ತೆರೆದ ಮನದಿಂದ ಚರ್ಚಿಸಲು ನಮಗೆ ಇನ್ನೂ ಸಾಧ್ಯವಾಗುತ್ತಿಲ್ಲ.
ಅದೊಂದು ಭೀಕರ, ಬಹು ಆಯಾಮದ, ಭಯಾನಕ ಘಟನೆ. ಆ ಕೊಲೆಯ ರಹಸ್ಯಗಳನ್ನು, ಒಳಸಂಚಿನ ಪದರುಗಳನ್ನು, ವಿಭಿನ್ನ ಮತ್ತು ವಿವಿಧ ಸಾಧ್ಯತೆಗಳನ್ನು ಚರ್ಚಿಸಲು ಇಂದಿಗೂ ನಮ್ಮಲ್ಲಿ ಹಿಂಜರಿಕೆಯಿದೆ, ನಾಚಿಕೆಯಿದೆ, ಸಂಕೋಚವಿದೆ, ದುಗುಡವಿದೆ ಮತ್ತು ತುಸುಮಟ್ಟಿಗೆ ಭಯವೂ ಇದೆ. ಗಾಂಧೀಜಿಯವರ ಹತ್ಯೆ ನಡೆದಾಗ, ನಮ್ಮ ದೇಶ ಐದು ತಿಂಗಳ ಹಸುಗೂಸು. ಹೊಸ ಸರಕಾರ ಸ್ಥಿರಗೊಂಡಿರಲಿಲ್ಲ. ಪ್ರಧಾನ ಮಂತ್ರಿಯಾಗಿ ನೆಹರೂ, ಗೃಹಮಂತ್ರಿಯಾಗಿ ಪಟೇಲರು ಕಾರ್ಯನಿರ್ವಹಿಸಲು ಆರಂಭಿಸಿದ್ದರೂ, ಸುಪ್ರೀಂ ಕಮಾಂಡರ್ ಆಗಿ, ಸಂಪೂರ್ಣ ಅಧಿಕಾರವನ್ನು ಹೊಂದಿದ್ದ ವಿದೇಶೀಯನಾಗಿ ಆಗ ತುತ್ತ ತುದಿಯಲ್ಲಿದ್ದದ್ದು ಮೌಂಟ್‌ಬ್ಯಾಟನ್. ಈ ಬ್ರಿಟಿಷ್ ಸೇನಾಽಕಾರಿಯು 21.2.1947 ರಂದು ವೈಸ್‌ರಾಯ್ ಆಗಿ ಅಧಿಕಾರ ಸ್ವೀಕರಿಸಿ, ಅದೇ ಅಧಿಕಾರವನ್ನು ಪ್ರಾಯೋಗಿಕವಾಗಿ 21.6.1948ರ ತನಕವೂ, ಗವರ್ನರ್ ಜನರಲ್ ಸ್ಥಾನದಲ್ಲಿದ್ದುಕೊಂಡು ಪಡೆದಿದ್ದ.
ಮುಖ್ಯವಾಗಿ ಸೇನೆಯು ಆತನ ವಶದಲ್ಲಿತ್ತು. ವೈಸ್‌ರಾಯ್ ಎಂದರೆ ಅಕ್ಷರಶಃ ರಾಜನಿಗಿಂತ ಹೆಚ್ಚಿನ ಶಕ್ತಿ ಹೊಂದಿದ ಆಡಳಿತಗಾರ. ಆ ವಿದೇಶಿ ವ್ಯಕ್ತಿ ನಮ್ಮ ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದಾಗಲೇ ಗಾಂಧೀಜಿಯವರ ಹತ್ಯೆಯಾಯಿತು. ಮಹಾತ್ಮಾ ಎಂದೇ ಜಗತ್ತಿನಾದ್ಯಂತ ಪ್ರಸಿದ್ಧರಾಗಿದ್ದ ಗಾಂಧೀಜಿಯವರ ಜೀವಕ್ಕೆ ಅಪಾಯ ಬರದಂತೆ, ಸೂಕ್ತ ರಕ್ಷಣೆ ದೊರಕುವಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಆ ಗವರ್ನರ್ ಜನರಲ್‌ನದಾಗಿತ್ತು. ಆದರೆ, ಮಹಾತ್ಮರ ಜೀವ ಉಳಿಸಲು ಮೌಂಟ್‌ಬ್ಯಾಟನ್‌ನಿಂದ ಆಗಲಿಲ್ಲ. ಒಟ್ಟಾರೆ ಪರಿಸ್ಥಿತಿಯನ್ನು ಈಗ ಅವಲೋಕಿಸಿದರೆ, ಮಹಾತ್ಮರನ್ನು ನಾವು ಕಳೆದುಕೊಳ್ಳುವಲ್ಲಿ, ಮೌಂಟ್‌ ಬ್ಯಾಟನ್‌ನ ಬೇಜವಾಬ್ದಾರಿಯೂ ಇದೆ.
ಸ್ವಾತಂತ್ರ್ಯ ದೊರಕಿದ ನಂತರವೂ ಹತ್ತು ತಿಂಗಳು ಆಡಳಿತ ನಡೆಸಿದ ಈ ಸೇನಾಧಿಕಾರಿಯ ನಿರ್ಲಕ್ಷ್ಯಗಳನ್ನು ನಮ್ಮ ದೇಶದವರು ಸರಿಯಾಗಿ ಚರ್ಚಿಸಲೇಇಲ್ಲ. ಮೌಂಟ್‌ಬ್ಯಾಟನ್ ಮತ್ತು ಬ್ರಿಟನ್ ಸರಕಾರವು ಸಂಯುಕ್ತವಾಗಿ ಮಹಾತ್ಮರ ಸಾವಿನ ಜವಾಬ್ದಾರಿಯನ್ನು ಹೊರಬೇಕು. ಏಕೆಂದರೆ, ನಮ್ಮ ದೇಶಕ್ಕೆ1947 ಡೊಮೆನಿಯನ್ (ಅಧೀನ ದೇಶ) ಸ್ಥಾನ ನೀಡಿ, ರಕ್ಷಣಾ ವ್ಯವಸ್ಥೆಯ ಒಟ್ಟೂ ಜವಾಬ್ದಾರಿಯನ್ನು ಹೊತ್ತಿದ್ದ ಬ್ರಿಟನ್ ಸರಕಾರವು ಇಂತಹ ಪ್ರಮುಖದುರ್ಘಟನೆಗಳಾಗದಂತೆ ನೋಡಿಕೊಳ್ಳಬೇಕಿತ್ತು.
ಜನವರಿ 1948ರಲ್ಲಿ ಅತ್ಯುನ್ನತ ಅಧಿಕಾರದಲ್ಲಿದ್ದ ಮೌಂಟ್‌ಬ್ಯಾಟನ್‌ನ ಉಪಸ್ಥಿತಿ ಒಂದು ಬಹು ಮುಖ್ಯ ವಿದ್ಯಮಾನ. ಗಾಂಧಿ ಹತ್ಯೆಗೆ ಸಂಬಂಧಿಸಿದ ಸುದ್ದಿಗಳುವರದಿಯಾಗುವ ಸ್ವರೂಪ ಮತ್ತು ಅನಽಕೃತವಾಗಿ ಯಾವ ಸುದ್ದಿಗಳನ್ನು ಸೆನ್ಸಾರ್ ಮಾಡಬೇಕು ಎಂದು ನಿರ್ಣಯಿಸುವಲ್ಲಿ ಈ ವಿದೇಶಿ ಆಡಳಿತಗಾರನ ಪಾತ್ರಬಹು ಮುಖ್ಯ. ಆಗ ನಮ್ಮ ದೇಶ ಇನ್ನೂ ಪೂರ್ತಿಯಾಗಿ ಸ್ವಂತ ಕಾಲುಗಳ ಮೇಲೆ ನಿಂತಿರಲಿಲ್ಲ,. ಸ್ವತಂತ್ರ ಪೂರ್ವದಲ್ಲಿದ್ದ ಹಲವು ವ್ಯವಸ್ಥೆಗಳು ಮತ್ತು ಅನಧಿಕೃತ ಸೆನ್ಸಾರ್ ವ್ಯವಸ್ಥೆ ಆಗಲೂ ಮುಂದುವರಿದಿತ್ತು. ಟೈಮ್ಸ್ ಆಫ್ ಇಂಡಿಯಾದಂತಹ ಪತ್ರಿಕೆಗಳು ಬ್ರಿಟಿಷ್ ಆಡಳಿತ ವ್ಯವಸ್ಥೆಯ ಪ್ರಭಾವದಿಂದ ಇನ್ನೂ ಹೊರ ಬಂದಿರಲಿಲ್ಲ. ಬ್ರಿಟಿಷರಿಗೆ ಅನುಕೂಲ ಎನಿಸುವ ಸುದ್ದಿಗಳು ಮಾತ್ರ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು.
ಜನರನ್ನು ರೊಚ್ಚಿಗೇಳಿಸಬಲ್ಲ ಸುದ್ದಿ ಹೊರಬಂದು, ಗಲಾಟೆಗಳು ಉಲ್ಬಣಗೊಂಡರೆ, ಮೌಂಟ್‌ಬ್ಯಾಟನ್ ಮತ್ತು ಬ್ರಿಟನ್ ಸರಕಾರ-ಇಬ್ಬರಿಗೂ ಕೆಟ್ಟ ಹೆಸರು ಬರುವ ಸಾಧ್ಯತೆ ಇತ್ತು. ಅದಾಗದಂತೆ ನೋಡಿಕೊಳ್ಳುವುದು ಮೌಂಟ್‌ಬ್ಯಾಟನ್‌ನ ಜವಾಬ್ದಾರಿಯಾಗಿತ್ತು. ಗಾಂಧೀಜಿ ಹತ್ಯೆಯ ಸುದ್ದಿಯು ಅಂದು ವರದಿಯಾದ ವಿಧಾನದಿಂದ, ಮಾಧ್ಯಮದ ಮೇಲೆ ಅಂದು ಸರಕಾರ ಹೊಂದಿದ್ದ ಹಿಡಿತವನ್ನು ಗುರುತಿಸಬಹುದು. ಕೊಲೆಗಾರನನ್ನು ವಶಕ್ಕೆ ಪಡೆದ ಸುದ್ದಿಯನ್ನು ನಮ್ಮದೇಶದ ಮತ್ತು ಇಂಗ್ಲೆಂಡಿನ ಪತ್ರಿಕೆಗಳು ಅಂದು ವರದಿ ಮಾಡಿದ್ದು ಹೀಗೆ – ‘ಗುಂಡು ಹಾರಿಸಿದ ಕೊಲೆಗಾರನು ಪಿಸ್ತೂಲು ಹಿಡಿದು ಅಲ್ಲೇ ನಿಂತಿದ್ದ. ತಕ್ಷಣ ಸುತ್ತಲಿದ್ದವರು ಆತನನ್ನು ಹಿಡಿದು, ರಕ್ಷಣಾ ಪಡೆಯ ವಶಕ್ಕೆ ನೀಡಿದರು.’ ನಂತರದ ದಿನಗಳಲ್ಲೂ, ಗಾಂಧಿ ಹತ್ಯೆಯ ವಿವರವನ್ನು ನಮ್ಮ ದೇಶದಲ್ಲಿ ಈ ರೀತಿ ಸಾಮಾನ್ಯ ವಾಗಿ ಬರೆಯುತ್ತಾರೆ – ‘ಕೊಲೆಗಾರನ್ನು ಸುತ್ತಲಿದ್ದವರು ಹಿಡಿದು, ಹೊಡೆದು, ಪೊಲೀಸರಿಗೆ ಒಪ್ಪಿಸಿದರು.’
ಆದರೆ ಅಮೆರಿಕದಲ್ಲಿ ಆ ಹತ್ಯೆಯನ್ನು ವರದಿ ಮಾಡಿದ್ದು ಹೀಗೆ – ‘ಅಮೆರಿಕದ ದೂತಾವಾಸದ ಉದ್ಯೋಗಿ ಹರ್ಬರ್ಟ್ ಟಾಮ್ ರೀನರ್ ಎಂಬ ಯುವಕನು ತಕ್ಷಣವೇ ಕೊಲೆಗಾರನನ್ನು ಹಿಡಿದನು. ಆತ ಇತ್ತೀಚೆಗೆ ಭಾರತಕ್ಕೆ ಬಂದಿದ್ದನು. ಕೊಲೆಗಾರನ ಭುಜವನ್ನು ಬಲವಾಗಿ ಹಿಡಿದ ರೀನರ್‌ನು, ಆತನನ್ನು ಅಲ್ಲಿದ್ದ ಹಲವು ಪೊಲೀಸರತ್ತ ತಳ್ಳಿದನು.. ಆ ನಂತರವಷ್ಟೇ ಸುತ್ತಲಿನ ಜನರಿಗೆ ಏನಾಗಿದೆ ಎಂಬ ಅರಿವಾಯಿತು ಮತ್ತು ಎಲ್ಲರೂ ಕೊಲೆಗಾರನಿಗೆ ಬಡಿಯತೊಡಗಿದರು. .’ (ನ್ಯೂಯಾರ್ಕ್ ಟೈಮ್ಸ್ 31.1.1948) ಇತರ ಹಲವು ಪಾಶ್ಚಾತ್ಯ ದೇಶಗಳೂ ಸಹ ಸಾಮಾನ್ಯವಾಗಿ ಇದೇ ರೀತಿ ವರದಿ ಮಾಡಿದವು.
ಯಾರು ಈ ಟಾಮ್ ರೀನರ್? ಅವನು ಅಲ್ಲೇಕೆ ಬಂದಿದ್ದ! ಇದಕ್ಕೆ ಉತ್ತರ ಸರಳವಾಗಿದೆ ಮತ್ತು ಅಧಿಕೃತವಾಗಿಯೇ ಇದೆ. ಅಂದರೆ, ಅದೇನೂ ರಹಸ್ಯವಲ್ಲ.ಈತ ದೆಹಲಿಯ ಅಮೆರಿಕ ದೂತಾವಾಸಕ್ಕೆ ಅದೇ ತಿಂಗಳು ಕೆಲಸಕ್ಕೆ ಸೇರಿಕೊಂಡಿದ್ದ. ಗಾಂಧೀಜಿಯವರ ಕೊಲೆಯಾದಾಗ ಹತ್ತಿರದಲ್ಲೇ ನಿಂತಿದ್ದ ಈತನು, ತಕ್ಷಣಕೊಲೆಗಾರನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ. ಇದನ್ನು ಈಗ ಚರ್ಚಿಸುವ ಅಗತ್ಯವೇನಿದೆ ಎಂದು ಕೇಳಬಹುದು. ಈ ಟಾಮ್ ರೀನರ್ ವಿಚಾರವನ್ನುಈಗ ಮಾತ್ರವಲ್ಲ, ಮುಂದೆಯೂ ಸಹಾ ಚರ್ಚಿಸಬಹುದು, ಚರ್ಚಿಸುತ್ತಲೇ ಇರಬೇಕು.
ಏಕೆಂದರೆ, ಈ ಅಮೆರಿಕನ್ ಯುವಕನು ಹತ್ಯೆಯ ಪ್ರತ್ಯಕ್ಷ ದರ್ಶಿಯಾಗಿದ್ದರೂ, ಕೊಲೆಗಾರನ್ನು ಸ್ವತಃ ಹಿಡಿದಿದ್ದರೂ, ಈತನನ್ನು ಸಾಕ್ಷಿಯನ್ನಾಗಿ ಪರಿಗಣಿಸಲೇ ಇಲ್ಲ! ಅಚ್ಚರಿ ಅಲ್ಲವೆ! ಗಾಂಧೀಜಿ ಹತ್ಯೆಯಾದ ನಂತರ, ಜೂನ್ 1949ರ ತನಕ ಈತ ಭಾರತದಲ್ಲೇ ಇದ್ದರೂ, ಈತನ ಹೇಳಿಕೆಯನ್ನು ಸಾಕ್ಷ್ಯವ ನ್ನಾಗಿ ಪರಿಗ ಣಿಸದೇ ಇರುವುದರಿಂದಾಗಿಯೇ, ಇಂದು ಈತ ಒಬ್ಬ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮುತ್ತಾನೆ. ಅಂದ ಹಾಗೆ, ಕೊಲೆ ನಡೆದ ದಿನ ಈತ ಬಿರ‍್ಲಾಭವನದಲ್ಲಿದ್ದುದರ ಬಗ್ಗೆ ಅನುಮಾನವಿಲ್ಲ. ಅಮೆರಿಕದ ಹಲವು ಪತ್ರಿಕೆಗಳು ಈತ ಆ ದಿನ ನಡೆಸಿದ ಸಾಹಸ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿವೆ. ಆ ಸಂಜೆಇವನು ಅಲ್ಲಿ ಏನೇನು ಮಾಡಿದ ಎಂದು ಪಾಶ್ಚಾತ್ಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ. ಆತನೇ ಬೇರೊಂದು ಸಂದರ್ಭದಲ್ಲಿ ಹೇಳಿಕೆ ನೀಡಿದಂತೆ,‘ಬಲಗೈಯಲ್ಲಿ ಬೆರೆಟ್ಟಾ ಪಿಸ್ತೂಲನ್ನು ಹಿಡಿದಿದ್ದ ಗೋಡ್ಸೆಯು (ಗುಂಡು ಹಾರಿಸಿದ ನಂತರ) ನಿಶ್ಚಲನಾಗಿ ನಿಂತಿದ್ದ ಮತ್ತು ನನಗೆ ತಿಳಿದ ಮಟ್ಟಿಗೆ ಓಡಿಹೋಗಲುಪ್ರಯತ್ನಿಸಲಿಲ್ಲ ಅಥವಾ ತನ್ನ ಜೀವ ತೆಗೆದುಕೊಳ್ಳಲೂ ಪ್ರಯತ್ನ ಮಾಡಲಿಲ್ಲ. . . ಗೋಡ್ಸೆಯ ಹತ್ತಿರ ಸಾಗಿದ ನಾನು, ಆತನ ಪಿಸ್ತೂಲು ಪಡೆಯಲು ಬಲಗೈಯನ್ನುಚಾಚಿದೆ, ಆದರೆ ಆ ಯತ್ನದಲ್ಲಿ ಆತನ ಬಲಭುಜವನ್ನು ಹಿಡಿದು, ಅವನನ್ನು ಅಲ್ಲೇ ಇದ್ದ ರಾಯಲ್ ಇಂಡಿಯನ್ ಏರ್ ಫೋರ್ಸ್‌ನವರತ್ತ ಮತ್ತು ಜನರತ್ತ ಬಲವಾಗಿತಳ್ಳಿದೆ. ಅವರು ಅವನನ್ನುನಿಶಸ್ತ್ರೀಕರಣಗೊಳಿಸಿದರು.
ನಂತರ ಆತನ ಭುಜ ಮತ್ತು ಕುತ್ತಿಗೆಯನ್ನು ನಾನು ಬಲವಾಗಿ ಹಿಡಿದುಕೊಂಡೆ, ಇತರ ಮಿಲಿಟರು ಮತ್ತು ಪೊಲೀಸರು ಅವನನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವತನಕ.’ (ಅಲ್‌ಸ್ಟನ್ ಫ್ರಾಂಕ್ಜೆ. – ದಿ ಬೈಸೆಂಟೆನಿಯಲ್ ಹಿಸ್ಟರಿ ಆಫ್ ದ ಯು.ಎಸ್.ನೇವಿ ಸಪ್ಲೈ ಕಾರ್ಪ್ಸ್. ಪುಟ 314-342) ಕೊಲೆ ನಡೆದ ಸಮಯದಲ್ಲಿ ಅಲ್ಲಿದ್ದ ಈ ರೀನರ್ ನನ್ನು ಅದೇಕೆ ಪ್ರಮುಖ ಸಾಕ್ಷಿ ಎಂದು ನಮ್ಮ ದೇಶದವರು ಪರಿಗಣಿಸಲಿಲ್ಲ? ಈತ ಅಮೆರಿಕದ ದೂತಾವಾಸದ ಸಿಬ್ಬಂದಿ ಎಂಬ ಕಾರಣದಿಂದಲೇ?ರೀನರ್‌ನ ಹಿನ್ನಲೆಯನ್ನು ನೋಡಿದರೆ, 1916ರಲ್ಲಿ ಜನಿಸಿದ ಈತ 1946ರ ತನಕ ಅಮೆರಿಕದ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ.
ಆತನ ಹುದ್ದೆ – ಇಕಾನಾಮಿಕ್ ಇಂಟೆಲಿಜೆನ್ಸ್ ಅಸಿಸ್ಟೆಂಟ್. ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಹುದ್ದೆಗೇರಿ, 1946ರಲ್ಲಿ ಸೇವಾನಿವೃತ್ತಿ ಪಡೆದು, 1947 ರಲ್ಲಿ ದೆಹಲಿಯ ದೂತಾವಾಸಕ್ಕೆ ಕೆಲಸಕ್ಕೆ ಹಾಜರಾದಾಗ, ಈತನ ಹುದ್ದೆ ಡಿಸ್ಪರ್ಸಿಂಗ್ ಅಂಡ್ ಫೈನಾನ್ಶಿಯಲ್ ಆಫೀಸರ್. (ಯು.ಎಸ್. ಸ್ಟೇಟ್ ಡಿಪಾರ್ಟ್‌ ಮೆಂಟ್). ಜೂನ್ 1949ರಲ್ಲಿ ಕೊರಿಯಾಕ್ಕೆ ಸೇವೆ ಸಲ್ಲಿಸಲು ಹೋದ ಈತ, ನಂತರ ಸಿರಿಯಾ ಲೋನ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮೊದಲಾದ ಕಡೆ ಕೆಲಸ ಮಾಡಿ, 1976ರಲ್ಲಿ ನಿವೃತ್ತನಾದ. 1999ರಲ್ಲಿ ಈತ ಮೃತನಾದಾಗ, ಆತನ ಸಾಧನೆಗಳಲ್ಲಿ ಪ್ರಮುಖ ವಾಗಿ ವರದಿಯಾದದ್ದೇ, ಗಾಂಧಿ ಹಂತಕನನ್ನು ಹಿಡಿದು ಕೊಟ್ಟ ಸಾಹಸಿ ಎಂದು.
30.1.1948ರ ಸಂಜೆ ಕೇವಲ ಕುತೂಹಲದಿಂದ ತಾನು ಪ್ರಾರ್ಥನೆ ನಡೆಯುವ ಸ್ಥಳಕ್ಕೆ ಹೋಗಿದ್ದೆ ಎಂದು ಆತ ಹೇಳಿದ್ದ. ಆದರೆ, ಆತ ಆ ದಿನ ಅಮೆರಿಕಕ್ಕೆ ಕಳಿಸಿದ ಮೂರು ವರದಿಗಳ ಪೈಕಿ, ಎರಡು ಮಾತ್ರ ಬಯಲಾಗಿವೆ, ಮೂರನೆಯ ವರದಿಯನ್ನು ಅಮೆರಿಕದವರು ‘ರಹಸ್ಯ’ ಎಂದು ಪರಿಗಣಿಸಿ, ಭದ್ರವಾಗಿಟ್ಟಿದ್ದಾರೆ ಎನ್ನಲಾಗಿದೆ. ಹತ್ಯೆ ನಡೆದ ಸಂಜೆ, ಟಾಮ್ ರೀನರ್ ಜತೆ, ಇಂಡಿಯನ್ ರಾಯಲ್ ಏರ್ಫೋರ್ಸ್ ಸಿಬ್ಬಂದಿ, ಪೊಲೀಸರು ಮತ್ತು ಇತರ ಹಲವು ವಿದೇಶೀ ವ್ಯಕ್ತಿಗಳುಇದ್ದರು. ಕೊಲೆ ನಡೆದ ದಿನವೇ ಇವರೆಲ್ಲಾ ಅಲ್ಲಿ ಅದೇಕೆ ಜಮಾಯಿಸಿದ್ದರು ಮತ್ತು ಗಾಂಧೀಜಿಯವರ ಪ್ರತಿದಿನದ ಪ್ರಾರ್ಥನೆ ಅಷ್ಟೊಂದು ಪ್ರಮುಖ ಘಟನೆಯೇ ಎಂದು ವಿಶ್ಲೇಷಿಸಲು ಇಂದು ಕಷ್ಟ. ಆದರೆ ಇವರೆಲ್ಲಾ ಅಂದು ಪ್ರತ್ಯಕ್ಷದರ್ಶಿಗಳು ಎಂಬುದಂತೂ ನಿಜ.
1 ರಾಬರ್ಟ್ ಟ್ರಂಬಲ್ ಎಂಬ ನ್ಯೂಯಾರ್ಕ್ ಟೈಮ್ಸ್ ವರದಿಗಾರ ಅಂದು ಪ್ರತ್ಯಕ್ಷದರ್ಶಿ. ಆತ ಟಾಮ್ ರೀನರ್‌ನ ಸಾಹಸವನ್ನು ವರದಿ ಮಾಡಿದ್ದು ಹೀಗೆ:‘ಇತ್ತೀಚೆಗೆ ಭಾರತಕ್ಕೆ ಬಂದಿರುವ ಟಾಮ್ ರೀನರ್ ಎಂಬಾತನು ಕೊಲೆಗಾರನನ್ನು ಹಿಡಿದು, ರಕ್ಷಣಾ ಸಿಬ್ಬಂದಿಯ ವಶಕ್ಕೆ ನೀಡಿದ.’
2 ಅಮೆರಿಕದ ವರದಿಗಾರ ಮತ್ತು ಕಾದಂಬರಿಕಾರ ವಿನ್ಸೆಂಟ್ ರೀನ್ ಅಂದು ಅದೇ ಆವರಣದಲ್ಲಿದ್ದ ಮತ್ತು ನಾಲ್ಕು ಗುಂಡೇಟಿನ ಸದ್ದು ಕೇಳಿದ್ದಾಗಿ ಬರೆದಿದ್ದಾನೆ.3. ಬಿಬಿಸಿ ವರದಿಗಾರ ಬಾಬ್ ಸ್ಟಿಮ್ಸನ್ ಎಂಬಾತ, ಗಾಂಧೀಜಿಯವರ ಸಂಜೆಯ ಪ್ರಾರ್ಥನೆಯ ಸಮಯದಲ್ಲಿ ಅಲ್ಲಿದ್ದ.
ಇಷ್ಟೊಂದು ಮಂದಿ ವಿದೇಶಿಯರು ಆ ಸಂಜೆ ಗಾಂಧೀಜಿಯವರ ಪ್ರಾರ್ಥನಾ ಸಭೆಯನ್ನು ನೋಡಲು ಬಂದಿದ್ದರು ಎಂಬ ವಿಷಯ ಇಂದು ಅಚ್ಚರಿ ಹುಟ್ಟಿಸುತ್ತದೆ. ಜತೆಗೆ, ವಿದೇಶಿಯರನ್ನು ಪ್ರಾರ್ಥನಾ ಸಭೆಗೆ ಆಕರ್ಷಿಸುವಷ್ಟು ಪ್ರಭಾವಶಾಲಿಯಾಗಿದ್ದ ಗಾಂಧೀಜಿಯವರಿಗೆ, ಅಂದಿನ ಸರಕಾರವು ಸೂಕ್ತ ಭದ್ರತೆಯನ್ನುಒದಗಿಸಲು ವಿಫಲವಾಯಿತು ಎಂದು ಯೋಚಿಸಲು ಸಹ ಖೇದವಾಗುತ್ತದೆ. ಜನವರಿ 20ರಂದು ಗಾಂಧೀಜಿಯವರ ಪ್ರಾರ್ಥನಾ ಸಭೆಯಲ್ಲಿ ಸಣ್ಣದೊಂದು ಬಾಂಬ್ ಸ್ಫೋಟವಾಗಿತ್ತು. ಆ ಸಂಬಂಧ, ಮದನ್‌ಲಾಲ್ ಪಾಹ್ವಾ ಎಂಬ ನಿರಾಶ್ರಿತನನ್ನು ಬಂಧಿಸಿದ್ದರು. ಅದಾಗಿ ಹತ್ತೇ ದಿನಗಳಲ್ಲಿ, ಅದೇ ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿಯವರ ಹತ್ಯೆಯಾಯಿತು. ಇದೆಂಥಾ ಘೋರ ದುರಂತವಲ್ಲವೆ?