ನವರಾತ್ರಿಯಲ್ಲಿ ಕರಾವಳಿಯ ಹುಲಿಗೆ ಸಾಥ್ ನೀಡಿದ ಆನೆ, ಕರೋನಾ ವೈರಸ್
ತನ್ನಿಮಿತ್ತ
ಚಂದ್ರಶೇಖರ ಬೇರಿಕೆ
ಈ ಬಾರಿ ನವರಾತ್ರಿ ಆರಂಭವಾಗಿ ಒಂದೆರಡು ದಿನ ಕಳೆಯುವಷ್ಟರಲ್ಲಿ ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಕಟವಾದ ಒಂದು ದೃಶ್ಯ ಬಹಳವಾಗಿ ಆಕರ್ಷಿಸಿತ್ತು. ಆ ದೃಶ್ಯವನ್ನು ದೂರದಿಂದ ನೋಡಲು ಅದು ಥೇಟ್ ಮರಿ ಆನೆಯಂತೆ ಕಾಣುತ್ತಿತ್ತು. ಹಾಗೆಯೇ ಆ ಆನೆಯ ಜತೆಗಿದ್ದ ಮಾವುತ ಕೈಯಲ್ಲೊಂದು ದೊಣ್ಣೆಯನ್ನುಹಿಡಿದುಕೊಂಡು ಆ ಆನೆಯನ್ನು ನೇರವಾಗಿ ಒಂದು ಮನೆಗೆ ಕರೆದುಕೊಂಡು ಹೋಗಿ ತುಳು ಭಾಷೆಯಲ್ಲಿ ಕೆಲವೊಂದು ಸೂಚನೆಗಳನ್ನು ಕೊಡುತ್ತಿದ್ದ.
ಆನೆ ಸೂಚನೆಯನ್ನು ತಪ್ಪದೇ ಪಾಲಿಸುತ್ತಿತ್ತು. ಇನ್ನೂ ಎರಡು ದಿನಗಳು ಕಳೆಯುವಷ್ಟರಲ್ಲಿ ಮತ್ತೊಂದು ಅತ್ಯಾಕರ್ಷಕ ದೃಶ್ಯ ಕಣ್ಣಿಗೆ ಬಿತ್ತು. ಆ ದೃಶ್ಯದಲ್ಲಿ ಕರೋನಾ ವೈರಸ್ ಅನ್ನು ಪ್ರತ್ಯಕ್ಷವಾಗಿ ಕಂಡಂತೆ ಭಾಸ ವಾಗುತ್ತಿತ್ತು. ಹಾಗೆಯೇ ಒಬ್ಬ ವ್ಯಕ್ತಿ ತುಳುವಿನಲ್ಲಿ ಆ ಕರೋನಾ ವೈರಸ್ ಬಗ್ಗೆ ಮಾತನಾಡುತ್ತಾ ಒಂದು ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದಂತೆ ಆ ಕರೋನಾ ವೈರಸ್ ಆತನನ್ನು ಹಿಂಬಾಲಿಸುತ್ತಿತ್ತು. ನೋಡಲು ಇದೊಂದು ದೊಡ್ಡ ಗಾತ್ರದ ಕರೋನಾ ವೈರಾಣುವೇ ಆಗಿರಬೇಕು ಎನ್ನುವಷ್ಟರ ಮಟ್ಟಿಗೆ ಹೋಲಿಕೆಯಿತ್ತು. ಕರೋನಾ ವೈರಸ್ ಜನರ ಮಧ್ಯೆ ಕಣ್ಣಿಗೆ ಕಾಣುವಂತೆ ಒಡಾಡಲು ಆರಂಭಿಸಿತ್ತೇನೋ ಎನ್ನುವಂತೆ ಭಾಸವಾ ಗುತ್ತಿತ್ತು. ಇದು ಈ ಬಾರಿಯ ನವರಾತ್ರಿ ಸಮಯದಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಜನರ ಕಣ್ಮನ ಸೆಳೆದ ಎರಡು ವೇಷಗಳು ಎಂಬುದು ವಿಶೇಷ.
ಕಲೆಗೆ ಕೊನೆಯಿಲ್ಲ, ಪ್ರತಿಭೆಗಳಿಗೆ ಬರವಿಲ್ಲ ಎಂದು ಹೇಳುವುದು ಇದಕ್ಕೇ ಇರಬಹುದೇನೋ? ಕರ್ನಾಟಕದ ಕರಾವಳಿ ಭಾಗ ಎಂದಾಕ್ಷಣ ಥಟ್ಟಣೆ ಹೊಳೆಯುವುದು ದೈವಾರಾಧನೆ ಮತ್ತು ನಾಗಾರಾಧನೆ ಎಂಬ ಧಾರ್ಮಿಕ ಆಚರಣೆಗಳು ಹಾಗೂ ಯಕ್ಷಗಾನ ಎಂಬ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕಲೆ. ಇವುಗಳು ಈ ಭಾಗದಲ್ಲಿ ಶ್ರೇಷ್ಠತೆ ಮತ್ತು ಶ್ರೀಮಂತಿಕೆಯನ್ನು ಗಳಿಸಿಕೊಂಡಿದೆ ಮತ್ತು ಉಳಿಸಿ ಕೊಂಡಿದೆ. ಹಾಗೆಯೇ ನವರಾತ್ರಿ, ಮಹಾನವಮಿ ಆಚರಣೆ ಎಂದಾಗ ಕರಾವಳಿಗರಿಗೆ ಕಣ್ಣ ಮುಂದೆ ಪ್ರತ್ಯಕ್ಷವಾಗುವುದು ಹುಲಿ ಕುಣಿತ (ಪಿಲಿ ನಲಿಕೆ) ದೃಶ್ಯ. ಈ ಹುಲಿ ವೇಷದ ಜತೆಗೆ ಸಿಂಹ, ಕರಡಿ, ಕುದುರೆ ಮುಂತಾದ ವೇಷಗಳು ಸಾಮಾನ್ಯವಾಗಿ ಈ ಭಾಗದಲ್ಲಿ ಕಂಡು ಬರುವ ಜಾನಪದ ವೇಷಗಳು.
ಕರಾವಳಿಯಲ್ಲಿ ವಿಭಿನ್ನ ಮತ್ತು ವಿಶಿಷ್ಟ ನವರಾತ್ರಿ ವೇಷಗಳ ಪೈಕಿ ಹಿಂದೆಯೂ ಮತ್ತು ಇಂದಿಗೂ ಹುಲಿ ವೇಷವೇ ತನ್ನ ಪ್ರಭುತ್ವ ಮತ್ತು ಪ್ರಾಬಲ್ಯವನ್ನುಸಾಽಸಿದೆಮತ್ತು ಅಗ್ರಸ್ಥಾನದಲ್ಲಿ ವಿರಾಜಮಾನವಾಗಿದೆ. ಈ ಮಧ್ಯೆ ದಿನಗಳು, ವರ್ಷಗಳು ಉರುಳಿದಂತೆ ಜನರಲ್ಲಿ ಹೊಸ ಹೊಸ ಯೋಚನೆಗಳು ಮೂಡಿದಂತೆ ಕ್ರಿಯಾತ್ಮಕತೆಯೂ ಜಾಸ್ತಿಯಾಗುತ್ತಾ ಹೋಯಿತು. ಹೊಸ ಪ್ರತಿಭೆಗಳು ಹೊಸ ಪ್ರಯೋಗಗಳಿಗೆ ಮುಂದಾದರು. ಅಂತೆಯೇ ಈ ಬಾರಿ ಈ ಎರಡು ವೇಷಗಳು ಬೆಳಕಿಗೆ ಬಂದು ವೈರಲ್ ಆಯಿತು. ಹೆಚ್ಚು ಜನಾಕರ್ಷಣೆಗೆ ಒಳಗಾದ ವೇಷಗಳು ಎನಿಸಿಕೊಂಡಿತ್ತು. ಕಾರ್ಕಳದ ಯುವಕರ ಕಲ್ಪನೆಯಲ್ಲಿ ಮೂಡಿದ ಆನೆ ಮತ್ತು ಮಾವುತನ ವೇಷಕ್ಕೆ ಒಟ್ಟು ಮೂರು ಜನ ಕೈ ಜೋಡಿಸಿದ್ದಾರೆ.
ಇಬ್ಬರು ಯುವಕರು ಜತೆಗೂಡಿ ಆನೆ ಪಾತ್ರವನ್ನು ಆಕರ್ಷಕವಾಗಿ ನಿರ್ವಹಿಸಿದ್ದು, ಮಾವುತ ಪಾತ್ರಧಾರಿ ತಿಳಿಹಾಸ್ಯದ ಮೂಲಕ ಜನರ ಗಮನ ಸೆಳೆದಿದ್ದು ವಿಶೇಷವಾಗಿತ್ತು. ಮಾವುತನ ಸಂ, ಸೂಚನೆಗೆ ಅನುಗುಣವಾಗಿ ಆನೆ ತಾಳ ಹಾಕುತ್ತಿದ್ದುದು ಜನರನ್ನು ಬಹಳವಾಗಿ ಆಕರ್ಷಿಸಿತ್ತು, ನೋಡುಗರಿಗೆ ಖುಷಿ ಕೊಟ್ಟಿತ್ತು. ಒಟ್ಟಿನಲ್ಲಿ ಮಾವುತ ಮತ್ತು ಆನೆಯ ತಾಳಮೇಳ ಮನರಂಜನೆ ಒದಗಿಸಿತ್ತು. ಇದೊಂದು ಅಮೋಘ ಮತ್ತು ಹೊಸ ಪರಿಕಲ್ಪನೆಯ ಪ್ರಯತ್ನ. ಜನರು ಇವರ ಪ್ರಯತ್ನಕ್ಕೆ ತಲೆದೂಗಿ ಪ್ರಶಂಸಿದ್ದು ವೇಷಧಾರಿ ಯುವಕರಿಗೂ ಸಾರ್ಥಕ ಭಾವ ಮೂಡಿಸಿತ್ತು.
ಕರೋನಾ ವೈರಾಣುವಿನ ವೇಷ ಒಂದು ವಿನೂತನ ಪ್ರಯೋಗ. ಮಾಧ್ಯಮದವರು ಕರೋನಾ ವೈರಸ್ ಆಕಾರವನ್ನು ಚಿತ್ರಿಸಿ ತೋರಿಸುತ್ತಿದ್ದ ರೀತಿಯಲ್ಲೇ ವೇಷಭೂಷಣಗಳನ್ನು ಧರಿಸಿದ್ದ ವ್ಯಕ್ತಿ ಜನರ ಗಮನ ಸೆಳೆದಿದ್ದು ಬಹಳ ವಿಶೇಷವಾಗಿತ್ತು. ಕರೋನಾ ವೇಷಧಾರಿಯ ಜತೆ ಸಹ ವೇಷಧಾರಿ ಈ ಕರೋನಾ ಎಷ್ಟೋಲಕ್ಷ ಜನರನ್ನು ಸಾಯಿಸಿದೆ, ಜನರಿಗೆ ಕೆಮ್ಮಲು ಬಿಡುತ್ತಿರಲಿಲ್ಲ, ಯಾವುದೇ ಕಾರ್ಯಕ್ರಮ, ಸಮಾರಂಭಗಳಿಗೂ ಹೋಗಲು ಬಿಡುತ್ತಿರಲಿಲ್ಲ. ಆದರೆ ಜನರು ಎರಡು ಇಂಜೆಕ್ಷನ್ ಚುಚ್ಚಿಸಿಕೊಂಡ ಬಳಿಕ ಇದರ ಆಟ ಈಗ ನಡೆಯುತ್ತಿಲ್ಲ ಎಂದು ಹೇಳಿದಾಗ ಕರೋನಾ ವೈರಸ್‌ನ ಅಸಹಾಯಕತೆಯ ಪರಿಸ್ಥಿತಿಯನ್ನು ಆ ಕರೋನಾ ವೇಷಧಾರಿ ತನ್ನ ಅಭಿನಯದ ಮೂಲಕ ಮನೋಜ್ಞವಾಗಿ ವ್ಯಕ್ತಪಡಿಸುತ್ತಿದ್ದುದು ಬಹಳ ಮೆಚ್ಚು ಗೆಗೆ ಪಾತ್ರವಾಯಿತು. ಈ ವೇಷಧಾರಿಕೆಯಲ್ಲಿ ಇಬ್ಬರು ಯುವಕರಜುಗಲ್‌ಬಂಧಿ ಜನರ ಮನಸೂರೆಗೊಂಡಿತ್ತು.
ಕರೋನಾ ಲಸಿಕೆಯ ಮಹತ್ವ ಮತ್ತು ಲಸಿಕೆಯನ್ನು ತೆಗೆದುಕೊಂಡರೆ ನಾವು ಸುರಕ್ಷಿತವಾಗಿರುತ್ತೇವೆ ಎಂಬುದನ್ನು ಅರ್ಥೈಸುವ, ತಿಳಿ ಹೇಳುವ ಪ್ರಯತ್ನವೂ ಈ ಪ್ರದರ್ಶನದಲ್ಲಿ ಆಡಗಿತ್ತು. ಕರೋನಾ ಸಾಂಕ್ರಾಮಿಕದ ಬಗ್ಗೆ ಇದಕ್ಕಿಂತ ಉತ್ತಮವಾಗಿ ಮತ್ತು ಅರ್ಥಪೂರ್ಣ ವಾಗಿ ಜಾಗೃತಿ ನೀಡಲು ಸಾಧ್ಯವಿಲ್ಲ. ವಿನಾಶಕಾರಿ ಕರೋನಾ ವೈರಾಣು ವಿಚಾರವನ್ನು ಮನರಂಜನೆಗೂ ಬಳಸಿಕೊಳ್ಳಬಹುದು ಎಂಬುದನ್ನು ಕಲಾಪ್ರಿಯ ಯುವಕರು ಸಾಬೀತು ಮಾಡಿ ದರು. ಈ ಬಾರಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸದ್ದು ಮಾಡಿದ ಈ ಎರಡೂ ವೇಷಗಳು ಕೇವಲ ಮನರಂಜನೆಗಾಗಿ ಸೀಮಿತವಾಗಿರಲಿಲ್ಲ.
ಅವುಗಳು ಸಾಮಾಜಿಕ ಸಂದೇಶ ಮತ್ತು ಜಾಗೃತಿಯನ್ನು ಸಾರುವ ವೇಷಗಳೂ ಆಗಿದ್ದವು. ಆ ಎರಡೂ ಪ್ರಕಾರದ ವೇಷಧಾರಿಗಳ ಪರಿಶ್ರಮವನ್ನು ಶ್ಲಾಘಿಸಲೇ ಬೇಕು, ಅಭಿನಂದಿಸಲೇಬೇಕು, ಕೊಂಡಾಡಲೇಬೇಕು. ಕರಾವಳಿಯ ಹುಲಿ ವೇಷ ವಿಶಿಷ್ಠ ಜಾನಪದ ಕಲೆಯ ಸೊಬಗನ್ನು ಹೊಂದಿದೆ. ತುಳುನಾಡಿನ ಸಂಸ್ಕೃತಿ ಯನ್ನು ಬಿಂಬಿಸುವ ಹುಲಿವೇಷಕ್ಕೆ ಧಾರ್ಮಿಕ ಹಿನ್ನೆಲೆಯೂ ಇದೆ. ಅಂತೆಯೇ ಕರಾವಳಿಯ ಸಂಸ್ಕೃತಿ ಯಲ್ಲಿ, ಜನ ಮಾನಸ ದಲ್ಲಿ ಹಾಸು ಹೊಕ್ಕಾಗಿದೆ. ವರ್ಷದಲ್ಲಿ ಕೆಲವೇ ದಿನಗಳ ಕಾಲ ನೋಡಲು ಸಿಗುವ ಈ ಹುಲಿ ವೇಷದ ಪ್ರದರ್ಶನಗಳು ಕರಾವಳಿ ಭಾಗದ ಜನರಲ್ಲಿ ವಿಶೇಷ ಗೌರವ ಮತ್ತು ಮನ್ನಣೆಗೆ ಪಾತ್ರವಾಗಿದೆ.
ವಿವಿಧ ವೇಷಗಳ ಪೈಕಿ ಕರಾವಳಿ ಭಾಗದ ಜನರು ಬಹಳವಾಗಿ ಇಷ್ಟಪಡುವ ವೇಷವೆಂದರೆ ಅದು ಹುಲಿ ವೇಷ. ಸಮಾಜ ಆಧುನಿಕತೆಯೆಡೆಗೆ ಸಾಗುತ್ತಿದ್ದರೂ ಅನುಭವಿ ಕಲಾಕಾರರು ಹುಲಿ ವೇಷದ ಪರಂಪರೆ, ಸಂಪ್ರದಾಯವನ್ನು ಮುಂದುವರೆಸಿ ಕೊಂಡು, ಪೋಷಿಸಿಕೊಂಡು ಬಂದಿದ್ದಾರೆ. ನವರಾತ್ರಿ ಸಮಯದಲ್ಲಿ ಮನೆಗಳು, ದೇವಾಲಯಗಳು, ನಗರಗಳು, ಸಾರ್ವಜನಿಕ ಸ್ಥಳಗಳಲ್ಲಿ ಹುಲಿ ಕುಣಿತದ ಪ್ರದರ್ಶನ ನಡೆಯುತ್ತದೆ. ಕರಾವಳಿ ಯಲ್ಲಿ ಹುಲಿ ಕುಣಿತದ ಹಲವು ತಂಡಗಳೇ ಇವೆ. ಕೆಲವೊಂದು ಕಡೆ ಹುಲಿ ಕುಣಿತದ ಸ್ಪರ್ಧೆ ಗಳನ್ನೂ ಆಯೋಜಿಸುತ್ತಾರೆ. ಇದು ಕೇವಲ ಮನರಂಜನಾ ಕಲೆಯಾಗಿ ಉಳಿದಿಲ್ಲ.
ಆರಾಧನೆ ಹಿನ್ನೆಲೆಯನ್ನೂ ಹೊಂದಿದೆ. ಹುಲಿ ವೇಷಧಾರಿಗಳ ಹೆಸರಿನ ಪೂರ್ವದಲ್ಲಿ ಪಿಲಿ (ಹುಲಿ) ಎಂಬ ಹೆಸರು ಸೇರ್ಪಡೆಯಾದರೆ ಅದು ಆ ವ್ಯಕ್ತಿಗೆ ಗತ್ತು, ಹೆಮ್ಮೆ, ಪ್ರತಿಷ್ಠೆಯ ಪ್ರತೀಕ. ಕರಾವಳಿ ಭಾಗದಲ್ಲಿ ಈ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದು ಕೆಲವೇ ಕೆಲವು ಸಾಧಕರು. ಆ ಹೆಸರು ಸಂಪಾದಿಸಲು ಕಠಿಣ ಪ್ರಯತ್ನಬೇಕು. ಹಲವು ವರ್ಷಗಳ ಕಾಲ ಹುಲಿ ನರ್ತನ ಸೇವೆ ಮಾಡಿ ಮೆಚ್ಚುಗೆಗೆ ಪಾತ್ರವಾಗಿರಬೇಕು. ಹುಲಿ ವೇಷ ತುಳುನಾಡಿನ ಬಹಳ ಶ್ರೇಷ್ಠವಾದ ಮತ್ತು ಜನಪ್ರಿಯ ಜಾನಪದ ಕಲೆ ಮತ್ತು ನೃತ್ಯ ಕಲೆಯಾಗಿ ಗುರುತಿಸಿಕೊಂಡಿದೆ.
ಇದು ಜನರ ಸಾಮಾ ಜಿಕ ಮತ್ತು ಧಾರ್ಮಿಕ ಆಚರಣೆಗಳಲ್ಲಿಯೂ ಸೇರಿಕೊಂಡವು. ಬ್ಯಾಂಡ್, ತಾಸೆ (ತಮಟೆ) ಗಳ ಲಯಬದ್ಧ ವಾದನಕ್ಕೆ ಅನುಗುಣವಾಗಿ ಹುಲಿಗಳ ನರ್ತನ ಅಮೋಘ. ಮೈನವಿರೇಳಿಸುವ ಕಸರತ್ತುಗಳು ನೋಡುಗರನ್ನು ಮತ್ತಷ್ಟು ಆಕರ್ಷಿಸುತ್ತದೆ. ನವರಾತ್ರಿ ಸಂದರ್ಭದಲ್ಲಿ ಕರಾವಳಿಯಲ್ಲಿ ತಾಸೆ ಮತ್ತು ಬ್ಯಾಂಡ್ ಶಬ್ದ ಕೇಳಿ ಬರುವ ಸಮಯದಲ್ಲಿ ಪುಟ್ಟ ಮಕ್ಕಳು ಮನೆ ಯಲ್ಲಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದರೆ ಅವರು ಹುಲಿ, ಸಿಂಹ, ಕರಡಿ ಅಥವಾ ಕುದುರೆಮುಂತಾದ ವೇಷಗಳನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ ಎಂದೇ ಅರ್ಥ. ಹಾಗೆಯೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದರ್ಶನದ ಸ್ಥಳದಲ್ಲಿ ಒಟ್ಟು ಸೇರುತ್ತಾರೆ.
ಬಹಳ ದೂರದಿಂದಲೇ ಜನರು ಈ ವಾದನವನ್ನು ಆಲಿಸುವಂತೆ ಮಾಡುವ ಸಾಮಾರ್ಥ್ಯ ಹುಲಿ ಕುಣಿತದ ತಾಸೆ ಮತ್ತು ಬ್ಯಾಂಡ್‌ಗೆ ಇದೆ. ಅಷ್ಟರ ಮಟ್ಟಿಗೆ ಜನರು ಈ ಕಲೆಗಳನ್ನು ಪ್ರೀತಿಸುತ್ತಿದ್ದಾರೆ. ಹುಲಿ ಕುಣಿತದ ತಾಸೆ ಮತ್ತು ಬ್ಯಾಂಡ್ ವಾದನ ಎಷ್ಟು ಪ್ರಸಿದ್ಧಿ ಎಂದರೆ ಅದು ಗೃಹ ಮತ್ತು ಸಾರ್ವಜನಿಕ ಸಮಾರಂಭಗಳಲ್ಲೂ ಅನುರಣಿಸುತ್ತದೆ. ಇದರ ಲಯಬದ್ಧ ವಾದನಕ್ಕೆ ವಯಸ್ಸಿನ ಅಡ್ಡಿಯಿಲ್ಲದೇ ಹೆಜ್ಜೆ ಹಾಕುವವರೂ ಇದ್ದಾರೆ. ಸಣ್ಣ ವಯಸ್ಕರಿಂದ ಹಿರಿಯ ವಯಸ್ಸಿನವರೆಗಿನಜನರೂ ಈ ವಾದನಕ್ಕೆ ಕುಣಿಯು ತ್ತಾರೆ, ಆನಂದಿಸುತ್ತಾರೆ. ಹಾಗಾಗಿ ಇದು ನಿರೀಕ್ಷೆಗೂ ಮಿರಿ ಜನ ಮನ್ನಣೆಯನ್ನು ಗಳಿಸುತ್ತಿದೆ. ದಶಕದ ಹಿಂದೆ ಕೊರಗ ವೇಷ ಬಹಳ ಆಕರ್ಷಣೀಯ ಕಲೆಯಾಗಿತ್ತು. ಆದರೆ ಈ ವೇಷದಿಂದ ಒಂದು ಜನಾಂಗದ ನಿಂದನೆ, ಅವಹೇಳನ ಮಾಡಿದಂvಣಗುತ್ತದೆ ಎಂಬ ಕಾರಣದಿಂದ ಅದು ನಿಷೇಽಸಲ್ಪಟ್ಟು ಕೊರಗ ವೇಷ ಈಗ ಎಲ್ಲೂ ಕಾಣ ಸಿಗುವುದಿಲ್ಲ.
ಕಪ್ಪು ಬಣ್ಣದ ತುಂಡು ಬಟ್ಟೆಯನ್ನುಟ್ಟುಕೊಂಡು ಮೈಯೆ ಲ್ಲಾ ಕಪ್ಪು ಬಣ್ಣ ಹಚ್ಚಿಕೊಂಡು ವೇಷ ಧರಿಸುತ್ತಿದ್ದರು. ತಲೆಗೆ ಅಡಿಕೆ ಮರದ ಹಾಳೆಯಿಂದ ತಯಾರಿಸಿದ ಮುಟ್ಟಾಳೆ ಎಂದು ಕರೆಯುವ ಟೊಪ್ಪಿ, ಕಾಲುಗಳಿಗೆ ಗೆಜ್ಜೆ, ಕೈಯ ಲ್ಲೊಂದು ಕೊಳಲು ಮತ್ತು ಉದ್ದನೆಯ ದೊಣ್ಣೆ ಇರುತ್ತಿತ್ತು. ಕೊಳಲು ವಾದನ ಮತ್ತು ಗೆಜ್ಜೆ ಶಬ್ದಬಹಳ ದೂರದಿಂದಲೇ ಅವರ ಆಗಮನವನ್ನು ಸೂಚಿಸುತ್ತಿತ್ತು. ಕೊರಗ ವೇಷಧಾರಿ ಮನೆಗೆ ಬಂದರೆ ಒಂದು ಬಗೆಯ ಸಂತಸ. ಮನೆಗಳಿಗೆ ತೆರಳಿ ಕುಣಿತ ಪ್ರದರ್ಶನ ನೀಡಿದಾಗ ಮನೆಯವರು ಕೊಡುತ್ತಿದ್ದ ಹಣ, ನೀಡುತ್ತಿದ್ದ ಅಕ್ಕಿ, ಕಾಯಿ ಮುಂತಾದವುಗಳನ್ನು ತುಂಬಿಸಿ ಕೊಳ್ಳಲು ಹೆಗಲಲ್ಲೊಂದು ಚೀಲ ಇರುತ್ತಿತ್ತು.ನಮ್ಮೂರಿನಲ್ಲಿ ಒಬ್ಬರು ಪ್ರತಿ ವರ್ಷ ಕೊರಗ ವೇಷ ಧರಿಸುತ್ತಿದ್ದರು ಮತ್ತು ಮನೆ ಮನೆಗೆ ಬರುತ್ತಿದ್ದರು. ಅದನ್ನು ಅವರು ಸೇವೆಯೆಂದೇ ನಂಬಿದ್ದರು. ಅವರು ವೇಷ ಧರಿಸಿದ ೨-೩ ದಿನಗಳಲ್ಲಿ ಅವರ ಆಗಮನವನ್ನು ಎಲ್ಲರೂ ನಿರೀಕ್ಷಿಸುತ್ತಿದ್ದರು.
ಅವರು ಆಗಮಿಸಿಲ್ಲವೆಂದಾದರೆ ಅವರ ಬಗ್ಗೆ ನೆರೆಹೊರೆಯವರ ಬಳಿ ವಿಚಾರಿಸಿ ಅವರ ಬರುವಿಕೆಯನ್ನು ಖಾತರಿ ಪಡಿಸಿಕೊಳ್ಳುತ್ತಿದ್ದರು. ಒಂಬತ್ತು ದಿನ ಊರೆಲ್ಲಾ ತಿರುಗಿ ಪ್ರದರ್ಶನ ನೀಡಿ ನವರಾತ್ರಿಯ ಕೊನೆಯ ದಿನ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ವೇಷ ಕಳಚಿ ಬರುತ್ತಿದ್ದರು. ಜನರು ಭಕ್ತಿಯಿಂದ ನೀಡಿದ ಹಣ ಕೊರಗ ವೇಷ ಧಾರಿಯ ಮೂಲಕ ದೇವರಿಗೆ ತಲುಪಿಸಿದ ಸಂತೃಪ್ತ ಭಾವ ಜನರಿಗೆ ಇರುತ್ತಿತ್ತು. ಕೊರಗ ವೇಷಕ್ಕೆ ಧಾರ್ಮಿಕ ಹಿನ್ನೆಲೆಯಿತ್ತು ಮತ್ತು ಭಾವನಾತ್ಮಕ ನಂಟೂ ಇತ್ತು. ಅದನ್ನು ಜನರು ಬಹಳ ಪೂಜ್ಯ ಭಾವನೆಯಿಂದ ನೋಡುತ್ತಿದ್ದರು.
ನಮ್ಮ ಬಾಲ್ಯದ ಕೊರಗ ವೇಷದ ದೃಶ್ಯ ಗಳು ಈಗಲೂ ನಮ್ಮ ಮುಂದೆ ಬರುತ್ತಿದೆಯಾ ದರೂ ಆ ವೇಷಗಳು ಈಗ ಕಾಣಿಸುತ್ತಿಲ್ಲ ಎಂಬ ಕೊರಗು ಪ್ರತಿ ವರ್ಷ ನವರಾತ್ರಿಯ ಸಂದರ್ಭದಲ್ಲಿ ನಮ್ಮನ್ನು ಕಾಡುತ್ತಲೇ ಇದೆ. ಜಾನಪದ ಕಲೆಗಳು ಮಾನವನೊಂದಿಗೇ ಉಗಮಿಸಿದವು. ಇದು ಗ್ರಾಮೀಣ ಭಾರತದ ಜೀವಾಳ. ಯಾವುದೇ ಪ್ರಕಾರದ ಕಲೆಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಜನರ ಆಸಕ್ತಿ, ಅಭಿರುಚಿ ಯಿಂದ ಅದು ಇನ್ನಷ್ಟು ಬೆಳೆಯಬಹುದು. ಜಾನಪದ ಕಲೆಗಳನ್ನು ಉಳಿಸುವುದು, ಪೋಷಿಸುವುದು ಎಲ್ಲರ ಜವಾಬ್ದಾರಿ. ಈ ಹೊಣೆಯನ್ನು ಅರಿಯೋಣ.