ಪಾಕ್ ಅನ್ನು ಕ್ಷಮಿಸಿದ ಗಂಗಾರಾಮ್ ನೆನಪು…
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
@.
ಆತ ಕಣ್ಣು ಬಿಟ್ಟಾಗ ಮೊದಲು ಕಂಡದ್ದು, ತನ್ನ ಎದೆಯ ಮೇಲೆ ಚಾಕು ಹಿಡಿದು ನಿಂತ ವ್ಯಕ್ತಿಯನ್ನು. ಮೊದಲು ಕೇಳಿಸಿಕೊಂಡ ಮಾತು, ’ನಿನ್ನನ್ನು ಏಕೆ ಕೊಲ್ಲ ಬಾರದು?’ ಹೇಳಿದ ವ್ಯಕ್ತಿ ಪಾಕಿಸ್ತಾನಿ, ತಾನು ವಿರೋಧಿಗಳ ಕೈಯಲ್ಲಿ ಸಿಲಿಕಿಕೊಂಡಿದ್ದೇನೆ ಎಂದು ತಿಳಿಯಲು ಆತನಿಗೆ ಹೆಚ್ಚು ಸಮಯ ಬೇಕಾಗಲಿಲ್ಲ.ಅದು ರಾಜಸ್ಥಾನದ ಪಶ್ಚಿಮ ಭಾಗದ ಮೂಲೆಯಲ್ಲಿರುವ ಒಂದು ಕುಗ್ರಾಮ.
ಆ ಭಾಗದಲ್ಲಿ ಶಿಕ್ಷಣ ಇಂದಿಗೂ ಕೈಗೆಟುಕದ ಮಾವಿನ ಹಣ್ಣು ಎಂದಾದರೆ, ಇನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಅಥವಾ ಸ್ವಾತಂತ್ರ್ಯ ಸಿಕ್ಕ ಕೆಲವೇ ವರ್ಷದ ನಂತರಹೇಗಿದ್ದಿರಬೇಕು ಎಂಬುದು ಊಹೆಗೆ ನಿಲುಕದ್ದೇನೂ ಅಲ್ಲ. ಬರಗಾಲ, ಕ್ಷಾಮವೆಲ್ಲ ಆ ಊರಿಗೆ ವಿಶೇಷವೇ ಅಲ್ಲ. ಅಂತಹ ಹಳ್ಳಿಯ ಮೂಲೆಯಲ್ಲಿರುವ ಒಂದುಬಡವರ ಮನೆಯಲ್ಲಿ ಆರು ಜನ ಮಕ್ಕಳು. ಅವರಲ್ಲಿ ಒಬ್ಬ ಗಂಗಾರಾಮ್ ಚೌಧರಿ. ಆತ ಹುಟ್ಟುವಾಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಮೂರು ವರ್ಷ ಮಾತ್ರ ಆಗಿತ್ತು. ಶಾಲೆಗೆ ಹೋಗಬೇಕು, ಕಲಿಯಬೇಕು ಎಂಬ ಉತ್ಕಟ ಅಭಿಲಾಷೆ ಇದ್ದರೂ, ಆತನ ಮನೆಗೆ ಹತ್ತಿರದ ಶಾಲೆ ಹತ್ತು ಕಿಲೋಮೀರ್ಟ ದೂರದಲ್ಲಿತ್ತು. ಕಲಿಯಬೇಕೆಂಬ ತತ್ಪರತೆಯ ಮುಂದೆ ಆತನಿಗೆ ಹತ್ತು ಕಿಲೋಮೀಟರ್ ತೀರಾ ಸಣ್ಣ ಲೆಕ್ಕವಾಗಿತ್ತು.
ತಾನು ವೈದ್ಯನಾಗಬೇಕೆಂಬ ಕನಸು ಕಂಡಿದ್ದ ಗಂಗಾರಾಮ್ಗೆ ಪ್ರತಿನಿತ್ಯ ಇಪ್ಪತ್ತು ಕಿಲೋಮೀಟರ್ ನಡೆದರೂ ದಣಿವಾಗುತ್ತಿರಲಿಲ್ಲ. ಅಥವಾ ಹೆತ್ತವರ ಪ್ರೋತ್ಸಾಹದ ನುಡಿಯಿಂದ ದಣಿವಿನ ಅರಿವಾಗುತ್ತಿರಲಿಲ್ಲ. ಗಂಗಾ ರಾಮ್ ಹತ್ತನೆಯ ತರಗತಿಯಲ್ಲಿದ್ದ ವರ್ಷ ಬರಗಾಲ ತೀವ್ರವಾಗಿತ್ತು. ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾದಾಗ ತಂದೆ ಆತಂಕಕ್ಕೊಳಗಾಗಿದ್ದರು. ವಿದ್ಯಾಭ್ಯಾಸಕ್ಕೆ, ಬಟ್ಟೆಗೆ ಹಣ ಹೊಂದಿಸುವುದು ಇರಲಿ, ಒಂದು ಹೊತ್ತಿನ ಊಟಕ್ಕೇ ತತ್ತರವಾದಾಗ ವೈದ್ಯನಾಗುವ ಕನಸಿಗೆ ತಿಲಾಂಜಲಿ ಬಿಟ್ಟ ಗಂಗಾ ರಾಮ್ ಉದ್ಯೋಗ ಅರಸಿ ಹೊರಟಿದ್ದ. ಆಗ ಭಾರತದ ಜಲಸೇನೆಗೆ ಜನರನ್ನು ಭರ್ತಿ ಮಾಡಿ ಕೊಳ್ಳುತ್ತಿದ್ದರು.
ತನ್ನ ಸ್ನೇಹಿತರೊಂದಿಗೆ ಜೋಧಪುರದಲ್ಲಿ ರುವ ಜಲಸೇನೆ ನೇಮಕಾತಿ ಕೇಂದ್ರಕ್ಕೆ ತೆರಳಿ, ಅವರು ನಡೆಸುವ ಇಂಗ್ಲಿಷ್, ಸಾಮಾನ್ಯ ಜ್ಞಾನ ಮತ್ತು ಗಣಿತದ ಪರೀಕ್ಷೆಯಲ್ಲಿ ಉತ್ತೀರ್ಣನೂ ಆದ. ವೈದ್ಯನಾಗುವ ಎಲ್ಲಾ ಲಕ್ಷಣಗಳನ್ನೂ ಹೊಂದಿದ್ದ, ಬುದ್ಧಿವಂತ ಹುಡುಗನೊಬ್ಬ ಸೇನೆಗೆ ಸೇರಿಕೊಳ್ಳುತ್ತೇನೆ ಎಂದಾಗ ಪಾಲಕರಾಗಲಿ, ಶಿಕ್ಷಕರಾಗಲಿ ನಂಬುವ ಸ್ಥಿಯಲ್ಲಿರಲಿಲ್ಲ. ಆದರೆ ಮನೆಯ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದ ಆತ, ಹೆತ್ತವರಿಗೆ ವಾಸ್ತವಿಕತೆ ತಿಳಿಹೇಳಿ ಜೋಧಪುರದ ಕೇಂದ್ರ ಸೇರಿಕೊಂಡ. ಆಗ ವಿಶಾಖಪಟ್ಟಣದಲ್ಲಿ ತರಬೇತಿ ನಡೆಯುತ್ತಿತ್ತು.
ಗಂಗಾರಾಮ್ ಸ್ನೇಹಿತರೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡಿ ವಿಶಾಖಪಟ್ಟಣ ತಲುಪಿದ್ದೇನೋ ಸರಿ, ಪ್ರಯಾಣದಲ್ಲಿ ಆತನ ಚೀಲ ಕಳುವಾಗಿತ್ತು. ಖಾಲಿಕೈಯಲ್ಲಿ ತರಬೇತಿ ಕೇಂದ್ರ ತಲುಪಿದ ಆತನಿಗೆ ಅದೇ ದಿನ ಸಮವಸ ನೀಡಿದ್ದರಿಂದ ತೊಡುವುದಕ್ಕೆ ತೊಂದರೆಯಾಗಲಿಲ್ಲ, ಉಳಿದ ಸಣ್ಣ ಪುಟ್ಟ ವಸ್ತುಗಳಿಗೆ,ಖರ್ಚಿಗೆ ಸ್ವಲ್ಪ ದಿನ ಸ್ನೇಹಿತರು ಸಹಕರಿಸಿದರು. ಕೆಲವು ದಿನಗಳ ಮೂಲ ತರಬೇತಿಯ ನಂತರ ಯಂತ್ರಗಳ, ರಾಡಾರ್‌ಗಳ ರಿಪೇರಿ ಮಾಡುವುದನ್ನು ಕಲಿತುಮೇಲಾಽಕಾರಿಗಳ ಮೆಚ್ಚುಗೆಗೆ ಪಾತ್ರನಾದ. ಜಲಸೇನೆಯಲ್ಲಿ ನೌಕರಿ ಮಾಡುವಾಗ ಹನ್ನೆರಡನೆ ತರಗತಿ (ಪಿಯುಸಿ) ಮುಗಿಸಿದರೆ ಒಳ್ಳೆಯದು ಎಂದುಮೇಲಧಿಕಾರಿಗಳು ಹೇಳಿದಾಗ, ಅದನ್ನೂ ಓದಿ ಮುಗಿಸಿದ.
ಹೆಚ್ಚಿನ ತರಬೇತಿ ಪಡೆಯುತ್ತಿರಿವಾಗ್ ಒಂದು ದಿನ ಪರೇಡ್‌ನಲ್ಲಿ ಗಂಗಾರಾಮ್ ಪ್ರಜ್ಞೆ ತಪ್ಪಿ ಬಿದ್ದ. ವೈದ್ಯಕೀಯ ತಪಾಸಣೆ ನಡೆಸಿದಾಗ ಆತನ ಶ್ವಾಸಕೋಶದಲ್ಲಿ ಒಂದು ಲೀಟರ್‌ಗಿಂತಲೂ ಹೆಚ್ಚು ನೀರು ಇದ್ದುದು ತಿಳಿಯಿತು. ಅನಾರೋಗ್ಯದಿಂದ ಜಲಸೇನೆಯಲ್ಲಿ ಕಾರ್ಯನಿರ್ವಹಿಸುವುದು ಸಾಧ್ಯವಾಗಲಿಲ್ಲ. ಆದರೆ ಆಗಲೇಸೈನ್ಯದ ಅರ್ಧ ತರಬೇತಿ ಆಗಿತ್ತು, ಜತೆಗೆ ಅದೇ ತನ್ನ ಬದುಕು ಎಂದು ಅರಿತಿದ್ದ ಗಂಗಾರಾಮ್ ಕೆಲವು ದಿನದ ನಂತರ ಭಾರತದ ಭೂಸೇನೆಗೆ ಆಯ್ಕೆಯಾದ.ಆ ದಿನಗಳಲ್ಲಿ ಭಾರತ ಪಾಕಿಸ್ತಾನ ಯುದ್ಧಕ್ಕೆ ಸಜ್ಜಾಗುತ್ತಿದ್ದವು. ಗಂಗಾರಾಮ್ ೧೯೭೨ ಅಗಸ್ಟ್‌ನಲ್ಲಿ ಎಲ್ಲಾ ತರಬೇತಿ ಮುಗಿಸಿ ಸಪ್ಟೆಂಬರ್ ತಿಂಗಳಿನಲ್ಲಿ ಸೇನೆ ಸೇರಿಕೊಂಡಾಗ ಆತನಿಗೆ ಇಪ್ಪತ್ತೊಂದು ವರ್ಷ.
ಸೇನೆಗೆ ಸೇರಿದ ಕೆಲವೇ ದಿನದಲ್ಲಿ, ತುಕಡಿಯೊಂದಿಗೆ ಆತ ಯುದ್ಧಭೂಮಿಗೆ ಹೋಗಬೇಕಾಯಿತು. ಭಾರತದ ಪಠಾಣ್‌ಕೋಟ, ನರುವಾ ಮತ್ತು ಪಾಕಿಸ್ತಾನದ ಮಾಧವಗಡ, ಶಕರ್‌ಗಡ್ ಸೀಮೆಯಲ್ಲಿ ಗಂಗಾರಾಮ್ ಇರುವ ತುಕಡಿಯನ್ನು ನಿಯೋಜಿಸಲಾಯಿತು. ಸಮುದ್ರಮಟ್ಟದಿಂದ ಸುಮಾರು ಇಪ್ಪತ್ತು ಸಾವಿರ ಅಡಿ ಮೇಲಿರುವ, ಮಂಜುಗಟ್ಟುವಷ್ಟು ಚಳಿ ಇರುವ ಪ್ರದೇಶ ಅದು. ಡಿಸೆಂಬರ್ ೩ ನೇ ತಾರೀಖು, ಸಾಯಂಕಾಲ ಇದ್ದಕ್ಕಿದ್ದಂತೆ ಪಾಕಿಸ್ತಾನ ತನ್ನ ಭೂಸೇನೆ ಮತ್ತು ವಾಯುಸೇನೆ ಎರಡನ್ನೂ ಒಟ್ಟಿಗೆ ಬಳಸಿ ಭಾರತದ ಮೇಲೆ ದಾಳಿ ಆರಂಭಿಸಿತು.
ಭಾರತದ ಸೈನಿಕರೆಲ್ಲ ಸಿದ್ಧವಾಗಿದ್ದ ಕಾರಣ ಹೆಚ್ಚೇನೂ ನಷ್ಟವಾಗಲಿಲ್ಲ. ಒಂದೆರಡು ದಿನದ ಪಾಕಿಸ್ತಾನದ ಕಡೆಗೆ ನುಗ್ಗಿದ ಭಾರತೀಯ ಸೇನೆ ಒಂದು ವಾರವಾಗುವಷ್ಟರಲ್ಲಿ ಅವರ ಸೇನೆಯ ಆಶ್ರಯ ತಾಣಗಳನ್ನು ವಶಪಡಿಸಿಕೊಂಡು ಸುಮಾರು ಹನ್ನೆರಡು ಕಿಲೋಮೀರ್ಟ ಪಾಕಿಸ್ತಾನದ ಭೂಮಿಯನ್ನು ವಶಪಡಿಸಿ ಕೊಂಡಿತ್ತು.
ಡಿಸೆಂಬರ್ ೧೫ ರ ರಾತ್ರಿ ನಡೆದ ಯುದ್ಧದಲ್ಲಿ ಗಂಗಾರಾಮ್ ಮುಖಕ್ಕೆ ಎರಡು ಗುಂಡುಗಳು ತಗುಲಿ ಹೋಗಿದ್ದವಾದರೂ ಹೆಚ್ಚಿನ ಅಪಾಯ ವಾಗಲಿಲ್ಲ.ಆದರೆ ಅವನ ಜತೆಗಿದ್ದವರಲ್ಲಿ ಕೆಲವರು ಗಾಯಾಳುಗಳಾಗಿದ್ದರು. ರೇಡಿಯೋ ಮಷಿನ್ ಹೊತ್ತೊಯ್ಯು ತ್ತಿದ್ದ ಅವನ ಸಹಾಯಕ ಶವವಾಗಿ ಬಿದ್ದಿದ್ದ. ಗಂಗಾರಾಮ್ ಮುಖಕ್ಕೆ ಮ-ರ್ ಸುತ್ತಿ ರಕ್ತ ಸೋರುವುದನ್ನು ತಡೆಗಟ್ಟಿ, ರೇಡಿಯೋ ಯಂತ್ರ, ವಾಕಿ ಟಾಕಿಗಳನ್ನು ತಾನೇ ಹೊತ್ತು ಮುನ್ನಡೆದ. ಮಾರನೆಯ ದಿನಡಿಸೆಂಬರ್ ೧೬, ಪಾಕಿಸ್ತಾನದ ಕಡೆಯಿಂದ ಆದ ಗುಂಡಿನ ದಾಳಿ ಭಾರತದ ಸೈನಿಕರನ್ನು ಘಾಸಿಗೊಳಿಸಿತ್ತು. ಗಂಗಾರಾಮ್ ಸೇರಿದಂತೆ ಕೆಲವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಅವರನ್ನೆಲ್ಲ ಬಂಧಿಸಿದ ಪಾಕಿಸ್ತಾನಿ ಸೈನಿಕರು, ಕೈ ಕಾಲು ಕಟ್ಟಿ, ಸೇನೆಯ ವಾಹನದಲ್ಲಿ ಸರಕು ತುಂಬುವಂತೆ ತುಂಬಿಕೊಂಡುಹೋದರು. ಗಂಗಾರಾಮ್ ಕಣ್ಣು ತೆರೆದಾಗ ಒಬ್ಬ ಸೈನಿಕ ಎದೆಯ ಮೇಲೆ ದೊಡ್ಡ ಚಾಕು ಹಿಡಿದು ನಿಂತಿದ್ದ, ಅಕ್ಕಪಕ್ಕದಲ್ಲಿ ಇಬ್ಬರು ಸೈನಿಕರು ಆತನೆಡೆಗೆಬಂದೂಕು ಹಿಡಿದು ನಿಂತಿದ್ದರು. ಹಿಂದಿನಿಂದ ಒಬ್ಬ ಆತನ ಕತ್ತು ಹಿಸುಕಿ ಪ್ರಶ್ನೆ ಕೇಳಲು ಆರಂಭಿಸಿದ, ಉತ್ತರಿಸದಿದ್ದಾಗ ಹಿಂಸಿಸುತ್ತಿದ್ದ.
ಹಿಂಸೆ ಅತಿಯಾದಾಗ, ತನ್ನ ಹೆಸರು, ತುಕಡಿಯ ಹೆಸರನ್ನಷ್ಟೇ ಹೇಳಿ ಸುಮ್ಮನಾಗುತ್ತಿದ್ದ ಆತನಿಗೆ ಚಾಕು ಹಿಡಿದ ಪಾಕಿಸ್ತಾನಿ ಸೈನಿಕ ಆಗಾಗ ಒಂದೇ ಪ್ರಶ್ನೆ ಕೇಳುತ್ತಿದ್ದ, ’ನಿನ್ನನ್ನು ಏಕೆ ಕೊಲ್ಲಬಾರದು?’ ಆಗಲೇ ತಾನು ವಿರೋಧಿಗಳ ಕೈಗೆ ಸಿಲುಕಿಕೊಂಡಿದ್ದೇನೆ ಎಂದು ಗಂಗಾರಾಮ್‌ಗೆ ಅರಿವಾದದ್ದು. ಕೆಲವು ಗಂಟೆಗಳ ನಂತರ ಇತರ ಭಾರತೀಯ ಸೈನಿಕರೊಂದಿಗೆ ಗಂಗಾರಾಮ್‌ನನ್ನು ರಾವಲಪಿಂಡಿಯ ಕಾರಾಗ್ರಹಕ್ಕೆ ಕರೆದೊಯ್ದರು. ಅದೇ ದಿನ ಪಾಕಿಸ್ತಾನ ಭಾರತಕ್ಕೆ ಶರಣಾಗಿತ್ತು. ಯುದ್ಧ ನಿಂತಿತು. ಭಾರತೀಯ ಸೇನೆ ತನ್ನ ಕಾಣೆಯಾದ ಸೈನಿಕರೆಲ್ಲ ಯುದ್ಧದಲ್ಲಿ ಹುತಾತ್ಮರಾದರೆಂದೇ ಪರಿಗಣಿಸಿ, ಮನೆಯವರಿಗೆ ಸಂದೇಶತಲುಪಿಸಿತ್ತು. ಗಂಗಾರಾಮ್ ಮನೆಗೂ ಆತನ ವಸ್ತುಗಳೊಂದಿಗೆ, ಮರಣ ಸಂದೇಶ ತಲುಪಿಸಿತು.
ಊರಿನಲ್ಲಿ ಶೋಕದ ವಾತಾವರಣವಿದ್ದರೂ ಮನೆಯವರು ಒಪ್ಪುವ ಸ್ಥಿತಿಯಲ್ಲಿರಲಿಲ್ಲ. ತನ್ನ ಮಗ ಹಿಂತಿರುಗಿ ಬರುತ್ತಾನೆಂಬ ನಂಬಿಕೆ, ಭರವಸೆ ತಾಯಿಯದ್ದು. ’ಒಂದು ವೇಳೆ ನನ್ನ ಮಗ ಮರಣವನ್ನಪ್ಪಿದ್ದೇ ಆದರೂ, ಅವಶ್ಯಕತೆ ಇದ್ದರೆ ನನ್ನ ಉಳಿದ ಮಕ್ಕಳನ್ನೂ ಸೇನೆಗೆ ಕಳಿಸುತ್ತೇನೆ’ ಎಂದಿದ್ದಳು ಗಂಗಾರಾಮ್ ತಾಯಿ. ತಂದೆಯಲ್ಲಿ ’ನನ್ನಮUಬದುಕಿದ್ದಾನೆ’ ಎಂಬ ಭರವಸೆ ಎಷ್ಟಿತ್ತು ಎಂದರೆ, ಆತ ಮರಣಾನಂತರ ಮಾಡುವ ಯಾವ ಕ್ರಿಯಾಕರ್ಮವನ್ನೂ ಮಾಡಲಿಲ್ಲ. ಇದೆಲ್ಲದರ ಪರಿವೆಯೇ ಇಲ್ಲದೆ, ಅತ್ತ ಗಂಗಾರಾಮ್ ಮಾತ್ರ ಬಂದಿಖಾನೆಯಲ್ಲಿ ಹಿಂಸೆ ಅನುಭವಿಸುತ್ತಿದ್ದ.
ಇತ್ತ ಯುದ್ಧ ನಿಂತರೂ ಅತ್ತ ಸೈನಿಕರ ಬಿಡುಗಡೆಯಾಗಿರಲಿಲ್ಲ. ೧೯೭೨ ರಲ್ಲಿ ಶಿಮ್ಲಾ ಒಪ್ಪಂದ ಆದ ನಂತರ ಬಂಧಿಸಿದ ಸೈನಿಕರನ್ನು ಬಿಡುಗಡೆಗೊಳಿಸಲಾಯಿತು. ಆ ವೇಳೆಗೆ ಸುಮಾರು ಹತ್ತು ತಿಂಗಳುಗಳೇ ಕಳೆದಿದ್ದವು. ಆ ಹತ್ತು ತಿಂಗಳಿನಲ್ಲಿ ದೈಹಿಕ ಹಿಂಸೆಗಿಂತಲೂ ಮಾನಸಿಕವಾಗಿ ಹಿಂಸೆ ಅನುಭವಿಸಿದ್ದ ಗಂಗಾರಾಮ. ಜೈಲಿನ ಅಧಿಕಾರಿಗಳ ಕೆಟ್ಟ ಬೈಗುಳಗಳು ಹೆಚ್ಚಿನ ಹಿಂಸೆ ಕೊಡುತ್ತಿದ್ದವು. ಎಲ್ಲಿಯವರೆಗೆ ಎಂದರೆ ಊಟ ಕೊಡುವವರು, ಕೊನೆಗೆ ಪ್ರತಿನಿತ್ಯ ಕ್ಷೌರ ಮಾಡಲು ಬರುವ ಕ್ಷೌರಿಕನೂ ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಬಯ್ಯುತ್ತಿದ್ದ.
ದೇಶ, ಧರ್ಮ, ಜಾತಿಗಳ ಕುರಿತ ಬೈಗುಳ ಕೇಳುವಾಗ ಗಂಗಾರಾಮ್‌ಗೆ ತೀರಾ ಅಸಹನೆಯಾಗುತ್ತಿತ್ತು. ಆಗೆಲ್ಲ ’ಇವರೆಲ್ಲ ಇಷ್ಟು ಕೆಟ್ಟ ಪದಗಳನ್ನು ಬಳಸಿ ಹೇಗೆ ನಿಂದಿಸುತ್ತಾರೆ? ಇವರ ಸಂಸ್ಕಾರವೇ ಹೀಗಾ ಅಥವಾ ಅವರು ಪಡೆದ ಶಿಕ್ಷಣ ಅಂಥದ್ದೇ? ನಮ್ಮ ಶತ್ರುವೇ ಆದರೂ ನಾವು ಇಷ್ಟು ಕೆಟ್ಟ ಪದಗಳನ್ನು ಬಳಸುವುದಿಲ್ಲ. ನಾವು ಪಡೆದ ಶಿಕ್ಷಣದಲ್ಲಿ ಎಲ್ಲಿಯೂ ಇದನ್ನು ಹೇಳಿಕೊಟ್ಟಿಲ್ಲ.’ ಎಂದು ಮನದಲ್ಲಿಯೇ ಅಂದುಕೊಳ್ಳುತ್ತಿದ್ದ ಗಂಗಾರಾಮ. ಸುಮಾರು ಹತ್ತು ತಿಂಗಳ ನಂತರ ಕೈದಿಗಳ ಹಸ್ತಾಂತರವಾದ ನಂತರ ಗಂಗಾರಾಮ್ ತನ್ನ ಊರು ತಲುಪುವಾಗ ಹಬ್ಬದ ವಾತಾವರಣವಿತ್ತು. ಆತನ ಊರಷ್ಟೇ ಅಲ್ಲ, ಅಕ್ಕಪಕ್ಕದ ಸುಮಾರು ಐವತ್ತು ಊರುಗಳು ಸಂಭ್ರಮಿಸಿದ್ದವು. ಸುಮಾರು ಐದು ದಶಕದ ನಂತರ ಒಂದು ಸಂದರ್ಶನದಲ್ಲಿ ಕ್ಯಾಪ್ಟನ್ ಗಂಗಾರಾಮ್ ಇದೆಲ್ಲವನ್ನೂ ಹೇಳಿಕೊಂಡಿದ್ದಾರೆ.
ನಾನು ಎರಡು ವರ್ಷದ ಹಿಂದೆ ನೋಡಿದ ಆ ಸಂದರ್ಶನದ ಕೊನೆಯಲ್ಲಿ ಗಂಗಾರಾಮ್ ಹೇಳುತ್ತಾರೆ, ’ನನಗೆ ಹಿಂಸೆ ಕೊಟ್ಟ ವರನ್ನು, ನನ್ನನ್ನು ನಿಂದಿಸಿದವರನ್ನು ನಾನು ಕ್ಷಮಿಸಿದ್ದೇನೆ’. ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸಿದ, ದೇಶಕ್ಕಾಗಿ ಪ್ರಾಣ ಕೊಟ್ಟ, ಅಂಗಾಂಗಗಳನ್ನು ಕಳೆದುಕೊಂಡ ಅನೇಕ ಯೋಧರಿದ್ದಾರೆ. ಅವರ ಸಾಧನೆಗೆ ಬೆಲೆ ಕಟ್ಟಲಾಗದು. ಖೇದಕರ ವಿಷಯವೆಂದರೆ ಅಂತರ್ಜಾಲದ ಈ ಯುಗದಲ್ಲೂ, ಹುಡುಕಿದರೂ ಇಂತಹ ಅನೇಕ ಯೋಧರ ಒಂದೇ ಒಂದು ಭಾವಚಿತ್ರವೂ ಸಿಗುವುದಿಲ್ಲ. ಯೋಧರ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದವ ಹೀರೋ ಆಗುತ್ತಾನೆ, ನಿಜವಾದ ಯೋಧ ದೇಶದ ಯಾವುದೋ ಮೂಲೆಯಲ್ಲಿ ಸಾಧಾರಣ ಜೀವನ ನಡೆಸುತ್ತಿರುತ್ತಾನೆ.
ಒಂದು ಕಾಲದಲ್ಲಿ ದೇಶಸೇವೆ ಮಾಡಿದ ಸೈನಿಕನ ಮನೆಯ ಪರಿಸ್ಥಿತಿ ಹೇಗಿದೆ ಎನ್ನುವುದರೆ ಬಗ್ಗೆಯೂ ಯಾರೂ ಯೋಚಿಸುವುದಿಲ್ಲ. ಇರಲಿ, ವರ್ಷದ ಹಿಂದೆ ನೋಡಿದ ಗಂಗಾರಾಮ್ ಸಂದರ್ಶನ ಈಗ ನೆನಪಾಗಲು ಕಾರಣವಿದೆ. ಒಂದು ವಾರದ ಹಿಂದೆ ಬಲೂಚಿಸ್ತಾನದ ಚಳುವಳಿಕಾರ, ಬಲೂಚ್ ವಾಯ್ಸ ಅಸೋಸಿಯೇಷನ್ ಅಧ್ಯಕ್ಷ ಮುನಿರ್ ಮೆಂಗಲ್ ವಿಶ್ವ ಸಂಸ್ಥೆಗೆ ನೀಡಿದ ಹೇಳಿಕೆ ಓದುತ್ತಿದ್ದೆ. ವಿಶ್ವ ಸಂಸ್ಥೆಯ ಡರ್ಬನ್ ಡಿಕ್ಲರೇಶನ್ನಲ್ಲಿ ಮಾತನಾಡುತ್ತಾ ಅವರು ಹೇಳಿದ್ದರು, ’ಹಿಂದೂಗಳು ಕಾಫಿರರು ಮತ್ತು ಯಹೂದಿಗಳು ಮುಸ್ಲಿಂ ಧರ್ಮದ ವಿರೋಧಿಗಳು. ಅವರ ಸಾವಿಗೆ ಬೇರೆ ಯಾವ ಕಾರಣವೂ ಬೇಡ, ಇದೊಂದೇ ಕಾರಣ ಸಾಕು. ನಾನು ಉನ್ನತ ಗುಣಮಟ್ಟದ ಸೈನಿಕ ಶಿಕ್ಷಣ ಸಂಸ್ಥೆಯಾದ ಕೆಡೆಟ್ ಕಾಲೇಜಿಗೆ ಸೇರಿಕೊಂಡಾಗ ಓದಿದ ಮೊದಲ ಪಾಠ ಇದು.
ಇಂದಿಗೂ ಸೇನೆಯ ಸಮವಸ್ತ್ರ ಧರಿಸಿದ ಅಧಿಕಾರಿಗಳು ಇದೇ ರೀತಿಯ ಪಾಠ ಮಾಡುತ್ತಾರೆ. ಬಂದೂಕು ಮತ್ತು ಬಾಂಬುಗಳನ್ನು ನಾವು ಗೌರವಿಸಬೇಕು ಏಕೆಂದರೆ ಅವುಗಳನ್ನು ನಾವು ಹಿಂದೂ ಧರ್ಮದ ತಾಯಂದಿರೆ ಮೇಲೆ ಬಳಸಿ, ಇನ್ನಷ್ಟು ಹಿಂದೂಗಳು ಜನ್ಮತಾಳದಂತೆ ಮಾಡಬಹುದು’ ಎಂದಿದ್ದರು ಮುನಿರ್. ಮುನಿರ್ ಹೇಳಿಕೆ ಓದಿದಾಗ, ಕ್ಯಾಪ್ಟನ್ ಗಂಗಾರಾಮ್ ಚೌಧರಿಯವರ ಸಂದರ್ಶನ ನೆನಪಾಯಿತು. ಮುನಿರ್ ಹೇಳಿಕೆಯಲ್ಲಿ ಎಷ್ಟು ಸತ್ಯಾಂಶವಿದೆ ಗೊತ್ತಿಲ್ಲ. ಕೆಲವು ವರ್ಷಗಳ ಹಿಂದೆ ಬಹ್ರೈನ್ನ ದೇವಸ್ಥಾನವೊಂದರಲ್ಲಿ, ಪಾಕಿಸ್ತಾನ ಮೂಲದದ ಹಿಂದೂ ದಂಪತಿಗಳು ಭೇಟಿಯಾಗಿದ್ದರು. ಪಾಕಿಸ್ತಾನದ ಶಾಲೆಗಳಲ್ಲಿ, ’ನೆರೆ ರಾಷ್ಟ್ರ ಭಾರತ ಶತ್ರು ದೇಶ’ ಎಂದು ಪಾಠ ಮಾಡುತ್ತಾರೆ ಎಂದಿದ್ದರು. ನನಗೆ ಈಗಲೂ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ.
ಅದಕ್ಕೇ ಆ ದೇಶ ಹಾಗಿದೆಯಾ? ಏಕೆಂದರೆ, ನಾವು ಓದಿದ ಪಾಠಗಳಗಲೀ, ಕೇಳಿದ ಕಥೆಗಳಗಲೀ ಸಾರ ಒಂದೇ. ’ನೆರೆಹೊರೆಯವರನ್ನು ಗೌರವಿಸು’, ’ಅಕ್ಕಪಕ್ಕದವರನ್ನು ಪ್ರೀತಿಸು’ ಎಂಬುದು. ಭಾರತದ ಯಾವ ಶಿಕ್ಷಣ ಪದ್ಧತಿಯಲ್ಲೂ ಯಾವುದೇ ಒಂದು ಧರ್ಮ ದವರು ನಮ್ಮ ಶತ್ರುಗಳು ಎಂಬ ಪಾಠ ಇಲ್ಲ. ಯಾವ ಪಾಠಶಾಲೆಯೂ, ಯಾವ ಶಿಕ್ಷಕರೂ ಅದನ್ನು ಬೋಧಿಸುವುದಿಲ್ಲ. ಹೀಗಿರುವಾಗ, ಪಾಕಿಸ್ತಾನದ ಪಾಠವೇ ಸರಿಯೋ, ನಾವು ಓದುತ್ತಿರುವ ಪಾಠವೇ ತಪ್ರೋಎಂದು ಕೆಲವೊಮ್ಮೆ ಗೊಂದಲವಾಗುವುದಂತೂ ನಿಜ.