ವಿಶ್ವದ ಸಮಸ್ಯೆಗಳಿಗೆ ವಿಶ್ವಸಂಸ್ಥೆ ಸ್ಪಂದಿಸಬೇಡವೇ ?
ಅಭಿವ್ಯಕ್ತಿ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
@.
1945 ಅಕ್ಟೋಬರ್ 24ರಂದು ಅಧಿಕೃತವಾಗಿ ಜನ್ಮತಾಳಿದ ವಿಶ್ವಸಂಸ್ಥೆಗೆ 76 ವರ್ಷ ಗಳಾದರೂ ವಿಶ್ವಸಂಸ್ಥೆಯ ಕಾರ್ಯವೈಖರಿಯಲ್ಲಿ ರಚನಾತ್ಮಕ ಬದಲಾವಣೆಗಳಾಗದಿರುವುದು ವಿಪರ್ಯಾಸವೇ ಸರಿ. ಇಷ್ಟೊಂದು ದೊಡ್ಡ ದೀರ್ಘ ಇತಿಹಾಸವಿರುವ ವಿಶ್ವ ಸಂಸ್ಥೆ ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ಪೂರ್ತಿ ಸ್ಪಂದಿಸಿಲ್ಲ ಮತ್ತು ಸ್ಪಂದಿಸುತ್ತಿಲ್ಲ.
‘ಮೂರನೆಯ ಮಹಾಯುದ್ಧ ಸಂಭವಿಸಲಿಲ್ಲ ನಿಜ. ಆದರೆ ವಿಶ್ವದಾದ್ಯಂತ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆರ್ಥಿಕ, ಸಾಮಾಜಿಕ ಮತ್ತು ಶಾಂತಿಯನ್ನು ಕದಡುವ ಛಾಯಾ ಸಮರಗಳು ನಿರಂತರವಾಗಿದೆ. ವಿಶ್ವಸಂಸ್ಥೆಯು ಇಡೀ ವಿಶ್ವದ ಮಾನವ ಜನಾಂಗಕ್ಕೆ ಶಾಂತಿ ನೀಡುವ ಮಹತ್ವಾಕಾಂಕ್ಷೆಯ ಸಂಸ್ಥೆಯಾಗುವುದೆಂಬ ಎಲ್ಲಾ ರಾಷ್ಟ್ರಗಳ ನಿರೀಕ್ಷಿತ ಕನಸು ನನಸಾಗದಿರುವುದು ದುರಂತ. ಪ್ರತಿಯೊಂದು ದೇಶದ ಹಿತಾಸಕ್ತಿಯನ್ನು ಕಾಪಾಡುವ ವಿಶ್ವನಿಯಂತ್ರಕ ಸಂಸ್ಥೆಯಾಗಿ ಮಾನವ ಹಕ್ಕುಗಳ ರಕ್ಷಣೆ, ಗಡಿ ತಗಾದೆ ಗಳಿಗೆ ಶಾಶ್ವತ ಪರಿಹಾರಗಳನ್ನು ನೀಡಬೇಕಾಗಿರುವ ವಿಶ್ವದ ಪರಮೋಚ್ಛ ಸಂಸ್ಥೆ ಗೊಂದಲದ ಗೂಡಾಗಿದೆ. ವಿಶ್ವಸಂಸ್ಥೆ ಪ್ರಬಲ ಸಂಸ್ಥೆ ಯಾಗಿ ವಿಶ್ವದೆಲ್ಲೆಡೆ ಅದರ ನಿರ್ಧಾರವೇ ಅಂತಿಮವಾಗಬೇಕು.
ಆದರೆ ಕೆಲವೇ ಕೆಲವು ಬಲಿಷ್ಠ ರಾಷ್ಟ್ರಗಳ ಕೃಪಾಕಟಾಕ್ಷಕ್ಕೆ ಒಳಗಾದಂತೆ ಗೋಚರ ವಾಗುತ್ತಿವೆ. ವಿಶ್ವಸಂಸ್ಥೆಯ ಅಂಗ ಸಂಸ್ಥೆ ಯಾಗಿರುವ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಎದುರು ಹಲವಾರು ವಿಷಯಗಳ ಬಗ್ಗೆ ಸಂಶಯಕ್ಕೆ ಕಾರಣವಾಗಿದೆ. ಸ್ವಯಂ ನಿರ್ಧಾರ ಕ್ಕಿಂತಲೂ ಪ್ರಬಲ ರಾಷ್ಟ್ರಗಳ ಕೈವಾಡಕ್ಕೆ ಮಣಿದು ಗೌರವವನ್ನು ಕಳೆದುಕೊಂಡಿರು ವುದು ಗೋಚರವಾಗುತ್ತಿದೆ. ಸೆಕ್ಯೂರಿಟಿ ಕೌನ್ಸಿಲ್ ವಿವಿಧ ರಾಷ್ಟ್ರಗಳಿಗೆ ರಕ್ಷಣೆ ಕೊಡಲು ವಿಫಲವಾಗಿ ಅಪಕೃಪೆಗೆ ಕಾರಣವಾಗಿ ನಂಬಿಕೆ ಕಳೆದುಕೊಂಡಿದೆ.
ತನ್ನ ಅವೈಜ್ಞಾನಿಕ ವಿಟೋ ಪವರ್‌ನಿಂದ ಅಸಮರ್ಥ ಸಂಸ್ಥೆಯಾಗಿದೆ.’  ಇದಲ್ಲದೆ ಯುದ್ಧಾಪರಾಧ ಮತ್ತು ಮಾನವೀಯತೆಯ ನಿರ್ಣಯಗಳು ವಿಟೋ ಪವರ್ ಹೊಂದಿರುವ ದೇಶಗಳಿಂದಾಗಿ ತಡೆ ಹಿಡಿಯಲಾಗಿದೆ. ‘ವಿಶ್ವಸಂಸ್ಥೆಯು ಭಯೋತ್ಪಾದನೆಗೆ ಸ್ಪಷ್ಟ ವಾದ ವ್ಯಾಖ್ಯಾನ ಕೊಡದಿರುವುದು ದುರಂತವೇ ಸರಿ’. ಮೊದಲನೆಯ ಮಹಾಯುದ್ಧ ಕೊನೆಗೊಂಡಾ ಗ ಉದಯವಾಗಿದ್ದ ಲೀಗ್ ಆಫ್ ನೇಶನ್ ಯುದ್ಧಗಳನ್ನು ನಿಲ್ಲಿಸುವಲ್ಲಿ ವಿಫಲವಾಗಿ ದುರ್ಬಲವಾದ ಪರಿಣಾಮ 1945ರಲ್ಲಿ ಎರಡನೆಯ ಮಹಾ ಯುದ್ಧದ ಬಳಿಕ ಶಾಂತಿ ಸ್ಥಾಪನೆಯ ಸಲುವಾಗಿ ವಿಶ್ವಸಂಸ್ಥೆ ಪ್ರಾರಂಭವಾಯಿತು.
ಯುದ್ಧ ಮತ್ತು ಅಂತಾರಾಷ್ಟ್ರೀಯ ಬಿಕ್ಕಟ್ಟನ್ನು ನಿವಾರಿಸುವುದು, ರಾಷ್ಟ್ರ ರಾಷ್ಟ್ರಗಳೊಡನೆ ಬಾಂಧವ್ಯ ವೃದ್ಧಿ ಮಾಡುವುದು, ಸಾಮಾಜಿಕ ಉನ್ನತಿಗೆ ಶ್ರಮಿಸುವುದು ಇದರ ಪ್ರಮುಖ ಉದ್ದೇಶವಾದರೂ ಇತ್ತೀಚಿನ ಕೆಲವು ವರ್ಷಗಳ ವಿದ್ಯಮಾನವನ್ನು ಅವಲೋಕಿಸುವಾಗ ವಿಶ್ವಸಂಸ್ಥೆ ಮತ್ತು ಅದರ ಅಂಗ ಸಂಸ್ಥೆಗಳು ವೈಫಲ್ಯಗಳನ್ನು ಕಾಣುತ್ತಿರುವುದರಿಂದ ವಿಶ್ವದ ಕೆಲವು ರಾಷ್ಟ್ರಗಳ ನಡುವೆ ಆತಂಕ ಮತ್ತು ಅಶಾಂತಿ ಮೂಡಿವೆ.
ವಿಶ್ವಸಂಸ್ಥೆಯು 193 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದರೂ ಕೆಲವೇ ಬಲಿಷ್ಠ ರಾಷ್ಟ್ರಗಳ ಬಿಗಿಮುಷ್ಠಿಗೆ ಸಿಲುಕಿದೆ. ದೇಶಗಳುತಮ್ಮ ವಿವಾದಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸಿದ್ದೇ ಆದಲ್ಲಿ ಅದು ಕೊಡುವ ತೀರ್ಪಿನ ಸಂಬಂಧಿತ ರಾಷ್ಟ್ರ ಗಳು ಬದ್ಧವಾಗಬೇಕು. ಇಷ್ಟೊತ್ತಿಗೆ ಈ ಸಂಸ್ಥೆ ಪ್ರಬಲವಾದಪರಮಾಧಿಕಾರವುಳ್ಳ ನಿಷ್ಪಕ್ಷಪಾತ ಸಂಘಟನೆಯಾಗಿ ವಿಕಾಸ ಗೊಳ್ಳ ಬೇಕಿತ್ತು. ಆದರೆ ಅದೂ ಕೂಡಾ ಗೊಂದಲದ  ಗೂಡಾಗಿದೆ. ವಿಶ್ವದ ಸೂಪರ್ ಪವರ್ ಎಂದು ಕೊಂಡಿರುವ ಯುಎಸ್‌ಎ, ರಷ್ಯಾ, ಚೀನಾ, ಜಪಾನ್, ಇಂಗ್ಲೆಂಡ್, ಫ್ರಾನ್ಸ್,ಜರ್ಮನಿ ಎಲ್ಲಾ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಹಿತಾಸಕ್ತಿಗೆ ಮಾತ್ರ ಸೀಮಿತ ವಾಗಿದೆಯೇ ಎಂಬಂತಿದೆ.
ವಿಶ್ವದ ಒಟ್ಟು ಜನಸಂಖ್ಯೆ 780 ಕೋಟಿ. ಈ ಪ್ರಬಲ ರಾಷ್ಟ್ರ ಗಳ ಜನಸಂಖ್ಯೆ 250 ಕೋಟಿ ಈ ರಾಷ್ಟ್ರಗಳ ಹಿತಾಸಕ್ತಿ ಮತ್ತು ಪ್ರಾಧಾನ್ಯತೆಯನ್ನು ಕಾಪಾಡಲೋಸುಗ ಉಳಿದ 530 ಕೋಟಿ ಜನಸಂಖ್ಯೆಯನ್ನು ಕಡೆಗಣಿಸಬಾರದು. ವಿಶ್ವಸಂಸ್ಥೆಯ ವಿಟೋ ಪವರ್ ಬಹು ಸಂಖ್ಯಾತರ ಹಿತರಕ್ಷಣೆಗೆ ಫಲಕಾರಿಯಾಗುವುದಿಲ್ಲ. ‘ವಿಶ್ವಸಂಸ್ಥೆಯು ಕೇವಲ ಬಲಶಾಲಿ ರಾಷ್ಟ್ರಗಳ ತಾಳಕ್ಕೆ ನರ್ತಿಸಿದರೆ ಅದರ ಅಸ್ಥಿತ್ವವೇ ಪರಾಭವಗೊಂಡಂತಾಗುತ್ತದೆ.’ ಆದರೆ ಕಾರಣಗಳು ಅದರ ಮೇಲೆ ಸವಾರಿ ಮಾಡುತ್ತಿರುವಪ್ರಬಲ ರಾಷ್ಟ್ರಗಳೇ ಆಗಿವೆ.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತಕ್ಕೆ ವಿಶ್ವಸಂಸ್ಥೆಯ ಖಾಯಂ ಭದ್ರತಾ ಮಂಡಳಿಯಲ್ಲಿ ಸದಸ್ಯತ್ವವಿಲ್ಲದಿರು ವುದು ಪ್ರಜಾಪ್ರಭುತ್ವಕ್ಕಾಗಿರುವ ಅನ್ಯಾಯ ಮತ್ತು ಅವಮಾನವೇ ಸರಿ. ಹಿಂದೊಮ್ಮೆ ಭಾರತದ ಪಾಲಿಗೆ ಅಂದಿನ ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಶಾಶ್ವತ ಸದಸ್ಯತ್ವ ಸ್ಥಾನ ಚೀನಾ ಪಾಲಾಯಿತು. ತದನಂತರ ಭಾರತಕ್ಕೆ ಶಾಶ್ವತ ಸದಸ್ಯತ್ವ ಕೊಡಬೇಕೆಂದಿದ್ದರೂ ಚೀನಾ ತನ್ನ ಕುತಂತ್ರವನ್ನು ಬಳಸುತ್ತಾ ಅಡ್ಡಿ ಮಾಡುತ್ತಲೇ ಇದೆ.
ಇಂದು ಭಾರತವು ಎದುರಿಸುತ್ತಿರುವ ಗಡಿ ರೇಖೆಯಲ್ಲಿನ ಘರ್ಷಣೆ ಹಾಗೂ ಹಲವಾರು ದೇಶಗಳ ಗಡಿ ವಿವಾದವೇ ಬಹುತೇಕ  ಯುದ್ಧಗಳಿಗೆ ಕಾರಣವಾಗಿದೆ. ಪಾಕಿಸ್ತಾನ ಮತ್ತು ಚೀನಾದೊಂದಿಗೆ ತಮ್ಮ ಗಡಿ ತಗಾದೆ ಇದ್ದೇ ಇದೆ. ಪಾಕಿಸ್ತಾನ ಭಯೋತ್ಪಾದಕರನ್ನು ಸೃಷ್ಠಿಸಿ, ಶಾಂತಿ ಭಂಗ, ಪ್ರಕ್ಷುಬ್ಧತೆ ಮತ್ತು ಗೊಂದಲವನ್ನು ಸೃಷ್ಟಿಸು ತ್ತಲೇ ಇದೆಯಾದರೆ, ಚೀನಾದೀರ್ಘಾವಧಿಯಲ್ಲಿ ಭಾರತದವಿರೋಽ, ತನ್ನ ಆರ್ಥಿಕ ಲಾಭಕ್ಕಾಗಿ ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದೆ.
ಚೀನಾ ಸಂಖ್ಯಾಧಾರದಲ್ಲಿ ದೊಡ್ಡದಿದೆ ಮತ್ತು ಆರ್ಥಿಕ ವಾಗಿ ಸಶಕ್ತವಾಗಿದೆ ಆದರೆ ಭಾರತದ ಪಡೆಯ ಮನೋಸ್ಥೈರ್ಯವುಆಗಾಧವಾದುದು. ಡ್ರ್ಯಾಗ ನ್ ಚೀನಾ ಒಂದಲ್ಲ ಒಂದು ದಿನ ಭಾರತಕ್ಕೆ ಅಪಾ ಯಕಾರಿಯಾಗಿ ಪರಿಣಮಿಸುವುದರ ಬಗ್ಗೆ ಸಂಶಯ ವಿಲ್ಲ. ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾಗಿರುವ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆಯಾಗಿ ವರ್ತಿಸುತ್ತಿದೆ. ಅದರ ಮುಖ್ಯಸ್ಥ ಟೆಡ್ರೋಸ್ ಅದಾನಂ ಚೀನಾದ ಪ್ರಭಾವದಿಂದ ಆಯ್ಕೆಯಾಗಿರುವುದರಿಂದ ಕ್ಲುಪ್ತ ಸಮಯಕ್ಕೆ ಕರೋನಾದ ವಿಚಾರ ಬಹಿರಂಗಗೊಳಿಸದಿರುವುದರಿಂದ ಈ ಸಾಂಕ್ರಾಮಿಕವು ಭೀಕರವಾಗಿ ಹರಡಿತು.
ಇದರಿಂದಾಗಿ ಕರೋನಾವು ಭೂಡಲದ ಯಾವೊಂ ದೂ ಗಡಿಯನ್ನು ಬಿಡದೆ ವಿಶ್ವವನ್ನೇ ತಲ್ಲಣಗೊಳಿಸಿವೆ. ಚೀನಾ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ಮುಖ್ಯಸ್ಥರೇ ಇದಕ್ಕೆ ಕಾರಣ. ‘ಯುದ್ಧ ಮತ್ತು ಶಾಂತಿ’ ಅಂತಾರಾಷ್ಟ್ರೀಯ ಸಂಬಂಧದ ಪ್ರಮುಖ ವಿಷಯ. ಇತ್ಯರ್ಥಕ್ಕೆ ಯುದ್ಧ ಬಳಸದಂತೆ ಮಾಡುವುದರಲ್ಲಿ ವಿಶ್ವಸಂಸ್ಥೆಯು ಪರಿಣಾಮಕಾರಿಯಾದ ಪಾತ್ರವನ್ನು ವಹಿಸಬಹುದು. ವಿಶ್ವರಕ್ಷಣೆ ವಿಶ್ವಸಂಸ್ಥೆಯ ಉದ್ದೇಶವಾಗಿರಬೇಕು. ಪ್ರಸ್ತುತ ಸನ್ನಿವೇಶವನ್ನು ಯುದ್ಧಕ್ಕೆ ಕಾರಣವಾದ ರಾಜಕೀಯ, ಸಾಮಾಜಿಕ, ಆರ್ಥಿಕ ತ್ತು ಮಾನಸಿಕ ವೈಮನಸ್ಸುಗಳನ್ನು ಬಗೆಹರಿಸಿ ಮನುಕುಲವು ಎದುರಿಸುತ್ತಿರುವ ಸಾಂಕ್ರಾಮಿಕ ಪಿಡುಗಿನ ನಿವಾರಣೆಗೆ ಪ್ರಥಮ ಆದ್ಯತೆ ನೀಡಬೇಕು. ಸಿಂಹಾವಲೋಕನ ಮಾಡಿದಲ್ಲಿ ವಿಶ್ವಸಂಸ್ಥೆ ಮತ್ತು ಅದರ ವಿಶೇಷ ದಳಗಳು ಅನೇಕ ಸಮಸ್ಯೆಗಳನ್ನು ಪರಿಹರಿಸುವುದು ತಿಳಿದು ಬರುತ್ತದೆ.
ಯಾವುದೇ ರಾಷ್ಟ್ರವಿರಲಿ, ಯಾವುದೇ ಕಾರಣ ವಿರಲಿ ಶಸ್ತ್ರ ಸನ್ನದ್ಧರಾಗುವ ಮೊದಲು ಪರಸ್ಪರ ಹೊಂದಾಣಿಕೆಯ ಮೂಲಕ ಶಾಂತಿಯನ್ನು ಸಾಧಿಸಬಹುದು. ಯುದ್ಧದಿಂದಾಗುವ ಅಪಾರ ಸಾವು ನೋವು ಮತ್ತು ನಷ್ಟ ಹಾಗೂ ಆರ್ಥಿಕ ಅನಾಹುತವು ರಾಜಕೀಯ ಅಭದ್ರತೆಗೂ ನಾಂದಿಯಾಗಬಹುದು. ‘ಇಂದಿನ ಆಧುನಿಕ ಯುದ್ಧೋಪಕರಣಗಳು ಇಡೀ ಮಾನವ ಸಮುದಾಯ ಗಳನ್ನು ಕ್ಷಣಾರ್ಧದಲ್ಲಿ ನಾಶಮಾಡಬಲ್ಲಂತಹ ವಿನಾಶಕಾರಕ ಸ್ವರೂಪದ್ದಾಗಿದೆ’.
ಯುದ್ಧಗಳನ್ನುಂಟು ಮಾಡಬಹುದಾದ ವಿವಾದಗಳನ್ನು ಸಂಧಾನ, ಮಧ್ಯ ಸ್ಥಿಕೆ, ರಾಯಭಾರತ್ವ, ಅಂತಾರಾಷ್ಟ್ರೀಯ ನ್ಯಾಯಾಲಯ, ಮುಂತಾದವುಗಳ ಮೂಲಕ ಬಗೆಹರಿಸಲು ಪ್ರಯತ್ನ ನಡೆಸಬೇಕು. ವಿಶ್ವಸಂಸ್ಥೆಯು ಯಾವುದೇ ರಾಷ್ಟ್ರಕ್ಕೆಸಂಬಂಧಿಸಿದತಪ್ಪು ಒಪ್ಪು ಗಳನ್ನು ನ್ಯಾಯಯುತವಾಗಿ ಬಗೆಹರಿಸಬೇಕು. ನಾವು ನಮ್ಮ ದೇಶದ ಭೂಪಟದಲ್ಲಿ ತೋರಿಸುತ್ತಿರುವವಿಧಿವತ್ತಾದತರ್ಕಬದ್ಧವಾಗಿ ನಮೂದಿಸಿರುವ ಕಾಶ್ಮೀರದ ಉತ್ತರ ಭಾಗದ ಮತ್ತು ಪೂರ್ವ ಹಾಗೂ ಪಶ್ಚಿಮದ ಪ್ರದೇಶಗಳ ಬಗ್ಗೆ ನಮ್ಮ ನೆರೆರಾಷ್ಟ್ರಗಳ ವಿವಾದವಿದೆ.
ಗಿಲ್ಗಿಟ್ ಬಾಲ್ಟಿಸ್ತಾನ, ಆಝಾದ್ ಕಾಶ್ಮೀರ್, ಅಕ್ಸಾಯ್‌ಚಿನ್‌ನ ಹಲವಾರು ಸಾವಿರ ಚದರ ಮೀಟರ್‌ಗಳಿಗೂ ಹೆಚ್ಚಿನ ಪ್ರದೇಶದ ಬಗ್ಗೆ ಅಸಮರ್ಪಕ ವಿವಾದವಿದೆ. ಇಲ್ಲಿ ಗಡಿ ಘರ್ಷಣೆಯಾಗುತ್ತಲೇ ಇರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಬೇಡವೇ? ಯೋಧರು ಈ ಗಡಿ ಪ್ರದೇಶದಲ್ಲಿ ಹುತಾತ್ಮರಾಗುತ್ತಲೇ ಇದ್ದಾರೆ. ಯುದ್ಧಗಳಿಗೆ ಕಾರಣವಾಗಿರುವ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡ ಬೇಕಾದ ‘ವಿಶ್ವಸಂಸ್ಥೆಗೆ ಲೋಕ ಕಲ್ಯಾಣಕ್ಕೆ ಮುತ್ಸದ್ದಿಯಾದ ನಾಯಕರ ಅಗತ್ಯವಿದೆ.’ ವ್ಯಾಪಾರ ವಹಿವಾಟು ಶ್ರೀಮಂತ ರಾಷ್ಟ್ರ ವೆನ್ನುವ ಹೆಗ್ಗಳಿಕೆಗಿಂತಲೂ ಆಪತ್ಭಾಂಧವ, ಶಾಂತಪ್ರಿಯ, ವಿವಾದಾಸ್ಪದರ ಲ್ಲದ, ನಿಷ್ಪಕ್ಷಪಾತ ಜನ ನಾಯಕರು ಬೇಕಾಗಿದೆ.
ಭಾರತವು ವಿಶ್ವಕ್ಕೆ ಅನಾದಿಕಾಲದಿಂದಲೂ ಅಪಾರ ಕೊಡುಗೆ ನೀಡಿದೆ. ಶಾಂತಿಪ್ರಿಯವಾದ ಭಾರತವು ಯಾರನ್ನೂ ವಂಚಿಸಿಲ್ಲ. ವಿಶ್ವಕ್ಕೆ ಮಾದರಿಯಾಗಿರುವ ಮಾರ್ಗದರ್ಶನ ಮತ್ತು ಮುಂದಾಳತ್ವದಿಂದ ‘ವಿಶ್ವಸಂಸ್ಥೆ ಬಲಿಷ್ಠವಾಗಬೇಕಾಗಿದೆ.’ ಗತಕಾಲದ ಬಗೆಗಿನ ನಿರರ್ಥಕ ವಾಗ್ವಾದಗಳಿಗೆ ಆಸ್ಪದ ಕೊಡದೆ ನ್ಯಾಯಸಮ್ಮತವಾಗಿ ವಿವಿಧ ದೇಶಗಳ ಗಡಿರೇಖೆಯ ವಿವಾದಗಳನ್ನು ವ್ಯವಸ್ಥಿತ ರೀತಿಯಲ್ಲಿ ಕಾರ್ಯಭಾರವನ್ನು ನೆರವೇರಿಸಬೇಕಾಗಿದೆ. ‘ವಿಶ್ವಶಾಂತಿಗೆ ಭಂಗ ತರುವ ಸಮಸ್ಯೆಗಳನ್ನು ವಿಶ್ವಸಂಸ್ಥೆ ಬಗೆಹರಿಸಬೇಕಲ್ಲವೇ?’ ಭಾರತವು ಇಂದು ಕರೋನಾದ ವಿರುದ್ಧ, ಆರ್ಥಿಕ ಹಿಂಜರಿಕೆಯ ವಿರುದ್ಧ, ಪ್ರಾಕೃತಿಕ ವಿಕೋಪಗಳ ವಿರುದ್ಧ, ಬಡತನದ ವಿರುದ್ಧ, ನಿರುದ್ಯೋಗ ಸಮಸ್ಯೆ ಯ ವಿರುದ್ಧ ಸಮರವನ್ನೇದುರಿಸುತ್ತಿರುವುದಲ್ಲದೇ ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ನ್ಯಾಯಕ್ಕಾಗಿ ಹೋರಾಡಬೇಕಾಗಿದೆ.
‘ನಮ್ಮ ದೇಶಕ್ಕೆ ಇದೊಂದು ಸತ್ವ ಪರೀಕ್ಷೆಯ ಕಾಲವೇ ಸರಿ’. ಕರೋನಾ ವಿರುದ್ಧ ಹೋರಾಟದಲ್ಲಿ ಭಾರತವು ೧೫೦ ದೇಶಗಳಿಗೆ ವೈದ್ಯಕೀಯ ಹಾಗೂ ಇತರ ನೆರವನ್ನು ನೀಡಿದೆ. ಜಾಗತಿಕ ಸಾಮ ರಸ್ಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ, ನಿಸರ್ಗ ದ ಸಮತೋಲನದ ಸಂರಕ್ಷಣೆಯಂತಹ ಬದ್ಧತೆಯ ಮೂಲಕ ವಿಶ್ವ ಸಂಸ್ಥೆಯ ಎಲ್ಲಾ ಅಜೆಂಡಾಗಳನ್ನು ಭಾರತ ಬೆಂಬಲಿಸುತ್ತಾ ಬಂದಿದೆ ಮತ್ತು ಸಹಕಾರವನ್ನು ನೀಡಿದೆ. ಭಾರತವು ಯಾವತ್ತೂ ಶಾಂತಿಯನ್ನು ಬಯಸು ತ್ತದೆ. ನೆರೆಹೊರೆಯ ರಾಷ್ಟ್ರಗಳ ನಡುವೆ ನಿಕಟ ಸಹಕಾರ ಮತ್ತು ಸ್ನೇಹದಿಂದ ಸದಾ ಕೆಲಸಮಾಡಿದೆ. ವಿವಿಧತೆ ಯಲ್ಲಿ ಏಕತೆಯನ್ನು ಕಂಡ ರಾಷ್ಟ್ರ ಭಾರತ. ಯಾವತ್ತೂ ಸತ್ಯ ಅಹಿಂಸೆ ಮತ್ತು ಶಾಂತಿ ಸೌಹಾರ್ದಗಳು ಸರ್ವ ಕಾಲಿಕ ನಿಯಮ ಎಂಬುದನ್ನು ತನ್ನ ಸ್ವಾತಂತ್ರ್ಯ ಚಳವಳಿಯ ಮೂಲಕವೇ ಜಗತ್ತಿಗೆ ತೋರಿಸಿಕೊಟ್ಟಿದೆ. ಯಾವ ರಾಷ್ಟ್ರದ ಮೇಲೂ ದಂಡೆತ್ತಿ ಹೋಗಲಿಲ್ಲ.
ಯಾವ ದೇಶದ ಒಂದಿಂಚು ಜಾಗವನ್ನು ಕಬಳಿಸಲಿಲ್ಲ. ಅದೇ ಸಂದರ್ಭದಲ್ಲಿ ‘ತನ್ನ ನ್ಯಾಯಯುತವಾದ ಒಂದಿಂಚು ಜಾಗವನ್ನು ಬೇರೆಯವರಿಗೆ ಮುಟ್ಟಲು ಬಿಡೆವು ಎಂಬ ಮಂತ್ರಕ್ಕೆ ಬದ್ಧವಾಗಿರುವುದು ಸಮಂಜಸವಲ್ಲವೇ?’ 193 ರಾಷ್ಟ್ರಗಳಪ್ರತಿನಿಧಿ ಗಳಿಂದೊಡಗೂಡಿದ ವಿಶ್ವಸಂಸ್ಥೆ ವಿಶ್ವಶಾಂತಿಗೆ ಭಂಗ ತರುವ ಯಾವುದೇ ಸಮಸ್ಯೆ ಇರಲಿ ಅದನ್ನು ಸೆಕ್ರೆಟರಿ ಜನರಲ್ ಭದ್ರತಾ ಸಮಿತಿಗೆ ಸ್ಪಷ್ಟಪಡಿಸಿ ಹಲವು ರಾಷ್ಟ್ರಗಳಿಂದ ಆಯ್ಕೆಯಾದಅಧಿಕಾರಿಗಳ ಒಮ್ಮತವನ್ನು ಸ್ಥಾಪಿಸುವ ಜವಾಬ್ದಾರಿ ಯನ್ನು ವಹಿಸುವುದರಲ್ಲಿ ಮುಗ್ಗರಿಸುತ್ತಿದೆ. ಈ ವಿಷಯಗಳ ಪರಿಹಾರಕ್ಕೆ ಭಾರತವು ಮುಂಚೂಣಿಯಲ್ಲಿ ನಿಂತು ಎಲ್ಲಾ ದೇಶಗಳ ಸ್ನೇಹ ಸೌಹಾರ್ದದೊಂದಿಗೆ ವಿಶ್ವದ ಗುರುವಾಗ ಬೇಕಾಗಿದೆ.
ತಾಲಿಬಾನ್ ಸಮಸ್ಯೆ:ಅಫ್ಘಾನಿಸ್ತಾನದಲ್ಲಿ ತಲೆದೋರಿರುವ ಅರಾಜಕತೆ, ತಾಲಿಬಾನ್ ಬಂಡುಕೋರರ ಮೇಲುಗೈ ಬಗ್ಗೆ ವಿಶ್ವ ಸಂಸ್ಥೆ ಕಳವಳ ವ್ಯಕ್ತ ಪಡಿಸಿತೇ ವಿನಃ ಕ್ರಮ ಜರುಗಿಸಲು ಸೂಕ್ತ ಕ್ರಮಕ್ಕೆ ಮುಂದಾಗಲಿಲ್ಲ. ಇಲ್ಲಿನ ಷರಿಯಾ ಕಾನೂನು, ಮಾನವ ಹಕ್ಕುಗಳ ಉಲ್ಲಂಘನೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ಆಪ್ಘಾನಿಸ್ತಾನದಿಂದ ಹಂತ ಹಂತವಾಗಿ ನ್ಯಾಟೋ ಸೇನೆ ವಾಪಾಸಾ ಯಿತು.
ಹತ್ತು ದಿನಗಳಲ್ಲಿ ತಾಲಿಬಾನ್ ಆಫ್ಗಾನಿಸ್ತಾನವನ್ನು ವಶಪಡಿಸಿಕೊಂಡಿತು. ಇಲ್ಲಿ ಅಮೆರಿಕದ ನಿಲುವು ಕೂಡಾ ತಪ್ಪೆಂದೆನಿಸುವು ದಿಲ್ಲವೇ?21ವರ್ಷ ಅಮೆರಿಕ ಮತ್ತು ನ್ಯಾಟೋ ಪಡೆ ಅಲ್ಲಿತ್ತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ, ಆಡಳಿತ, ಷರಿಯಾ ಕಾನೂನು ಮುಂದಿನ ದಿನಗಳಲ್ಲಿ ಭಾರತಕ್ಕೆ ಯಾವ ಮಟ್ಟದ ಅಪಾಯ ತಂದೊಡ್ಡಲಿದೆ ಎಂದು ಹೇಳಲಾಗದು. ತಾಲಿಬಾನ್ ಹುಟ್ಟಿದ್ದೇ ಹಿಂಸೆಯಿಂದ. ಕಾಶ್ಮೀರದಲ್ಲಿನ ಉಗ್ರ ಕೃತ್ಯಗಳಿಗೆ ತಾಲಿಬಾನ್ ಕುಮ್ಮಕ್ಕು ನೀಡದೇ ಇರಲಾರದು. ತಾಲಿಬಾನ್ ಗೆ ದುರದೃಷ್ಠ ನಾಯಕರು ಸಿಕ್ಕಿದರು.
ತಾಲಿಬಾನ್ ಆಡಳಿತಕ್ಕೆ ಉಗ್ರಗಾಮಿ ಚಟುವಟಿಕೆಗೆ ಚೀನಾ ಮತ್ತು ಪಾಕಿಸ್ತಾನ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿರುವುದನ್ನುವಿಶ್ವಸಂಸ್ಥೆ ಅರೆಗಣ್ಣಿನಿಂದ ನೋಡುತ್ತಿದೆ. ತಾಲಿಬಾನಿಗಳ ಮಾತಿಗೂ ಕೃತಿಗೂ ನಡವಳಿಕೆಗೂ ತಾಳೆಯಿರುವುದೇ ಇಲ್ಲ. ತಾಲಿ ಬಾನ್ ಭಯೋತ್ಪಾದನಾ ಕೃತ್ಯಕ್ಕೆ ಮತ್ತಷ್ಟು ಬೆಂಬಲ ನೀಡುವ ಅಪಾಯವಿದೆ. ಇದು ಭಯೋತ್ಪಾದಕರ ಉತ್ಪಾದನೆಯ ಪ್ರಯೋಗ ಶಾಲೆ. ಪಾಕಿಸ್ತಾನ ಸಂಪೂರ್ಣ ಸಹಕಾರ ನೀಡುತ್ತಿದೆ. ಚೀನಾವೂ ಕೈ ಜೋಡಿಸಿದೆ. ಅಲ್ಲಿನ ಹೆಣ್ಣು ಮಕ್ಕಳಿಗೆ ನೀಡುತ್ತಿ ರುವ ಹಿಂಸೆ ವಿಶ್ವಸಂಸ್ಥೆಗೆ ಗೋಚರವಾಗುತ್ತಿಲ್ಲವೇ? ಪ್ರಸಕ್ತ ಸನ್ನಿವೇಶದಲ್ಲಿ ಪ್ರಮುಖ ಜಾಗತಿಕ ಸಂಸ್ಥೆಗಳಾದ ವಿಶ್ವ ವ್ಯಾಪಾರ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ವಿಶ್ವಬ್ಯಾಂಕ್ ಶ್ರೀಮಂತ ರಾಷ್ಟ್ರಗಳ ಅಣತಿಯಂತೆ ನಡೆಯುವುದು ನಿಲ್ಲಬೇಕು.
ವಿಶ್ವಸಂಸ್ಥೆ ಖಾಯಂ ಭದ್ರತಾ ಮಂಡಳಿಯ ಸದಸ್ಯತ್ವವನ್ನು ವಿಸ್ತರಿಸಬೇಕು. ‘ವಿಟೋ ಪವರ್ ತೆಗೆಯಬೇಕು’ ಎಲ್ಲಾ 193 ಸದಸ್ಯ ರಾಷ್ಟ್ರಗಳ ಅಭಿಪ್ರಾಯವನ್ನು ಗೌರವಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀನಾದ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬೇಕು. ವೈರಸ್ ಬಗೆಗಿನ ಸತ್ಯಾಂಶಗಳು ಬಹಿರಂಗವಾಗಬೇಕು.