ಪಿಎಂ ನರೇಂದ್ರ ಮೋದಿ ಅವರ ವಿಭಿನ್ನ ಹೆಜ್ಜೆಗಳು
ಅಭಿಪ್ರಾಯ
ಗಣೇಶ್ ಭಟ್, ವಾರಣಾಸಿ
ಭಾರತ ದೇಶ ಇದುವರೆಗೆ 15 ಪ್ರಧಾನಿಗಳನ್ನು ಕಂಡಿದೆ. ಆದರೆ ಇವರಲ್ಲಿ ಭಾರತದ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಪ್ರಧಾನಿಗಳು ಕೆಲವರು ಮಾತ್ರ. ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಸ್ವತಂತ್ರ ಭಾರತದ ವಿದೇಶಾಂಗ ನೀತಿ ಹಾಗೂ ಕೈಗಾರಿಕಾ ನೀತಿಯನ್ನು ರೂಪಿಸಿದರು.
ನಂತರ ಬಂದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಕಡಿಮೆ ಅವಧಿಗೆ ಪ್ರಧಾನಿಯಾಗಿ ಇದ್ದರೂ ಸರಳ ಮತ್ತು ಸೌಜನ್ಯಯುತವಾದನಡವಳಿಕೆಯಿಂದಾಗಿ ಭಾರತೀಯರಿಗೆ ತೀರಾ ಆತ್ಮೀಯವಾದರು. ತುರ್ತು ಪರಿಸ್ಥಿತಿ ಯಂತಹ ಸರ್ವಾಧಿಕಾರದ ಪ್ರದರ್ಶನವನ್ನು ಮಾಡಿದ್ದರೂ ಬಾಂಗ್ಲಾ ವಿಮೋಚನೆಯ ಕೆಲಸಗಳು ಇಂದಿರಾ ಗಾಂಧಿಗೆ ಉಕ್ಕಿನ ಮಹಿಳೆ ಎನ್ನುವ ಬಿರುದನ್ನು ತಂದಿತ್ತು. ದೇಶದ ಆರ್ಥಿಕತೆಯನ್ನು ಸಮಾಜವಾದಿ ನಿಲುವುಗಳಿಂದ ಹೊರ ತಂದು ಜಾಗತೀಕರಣಕ್ಕೆ ತೆರೆದ ಕೀರ್ತಿ ಸಲ್ಲುವುದು ಪಿ.ವಿ ನರಸಿಂಹ ರಾಯರಿಗೆ.
ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ತೋರಿದ ನಡವಳಿಕೆ ಹಾಗೂ ಅವರ ನಿರ್ಣಯಗಳು ಇತರ ಪ್ರಧಾನಿ ಗಳಿಂದ ಅವರನ್ನು ವಿಭಿನ್ನವಾಗಿ ನಿಲ್ಲಿಸುತ್ತದೆ. ನರೇಂದ್ರ ಮೋದಿ ದೆಹಲಿಯ ರಾಜಕಾರಣದ ಪಡಸಾಲೆಗಿಂತ ಹೊರಗಿನವರು. ಬಿಜೆಪಿ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿಯವರು ದೆಹಲಿಯ ರಾಜಕಾರಣದ ಒಳಹೊರಗಳನ್ನು ಚೆನ್ನಾಗಿ ಆರಿತವರು. ಇವರು ತಮ್ಮ ರಾಜಕೀಯವಿರೋಧಿಗಳಾದ ಕಾಂಗ್ರೆಸ್‌ನ ನಾಯಕರಾದ ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬದ ಜತೆಗೆ ತಕ್ಕಮಟ್ಟಿನ ಸೌಹಾರ್ದ ಸಂಬಂಧವನ್ನು ಇಟ್ಟುಕೊಂಡಿ ದ್ದರು.
ರಾಜಕೀಯ ಭಾಷಣಗಳಲ್ಲಿ ಈ ಗಾಂಧಿ ಕುಟುಬದ ಭ್ರಷ್ಟತೆಯ ಬಗ್ಗೆ ನೇರವಾಗಿ ಮಾತನಾಡಲು ಅವರಿಗೆ ದಾಕ್ಷಿಣ್ಯ ಅಡ್ಡ ಬರು ತ್ತಿತ್ತು. ಆದರೆ ದೆಹಲಿಯ ರಾಜಕಾರಣದ ಅಪರಿಚಿತತೆ ಮೋದಿಯವರಿಗೆ ವರದಾನವಾಯಿತು. ಹೀಗಾಗಿ ಮೋದಿಗೆ ಸೋನಿಯಾ ಗಾಂಧಿ ಕುಟುಂಬದ ಬಗ್ಗೆ ನೇರ ಟೀಕೆ ಮಾಡಲು ಯಾವ ದಾಕ್ಷಿಣ್ಯವೂ ಇರಲಿಲ್ಲ. ಮೋದಿ ಭಾರತೀಯ ರಾಜ ಕಾರಣದ ಕಟ್ಟು ಕಟ್ಟಲೆಗಳನ್ನು ಒಂದೊಂದಾಗಿ ಮುರಿಯುತ್ತಾ, ಹೊಸ ಹೆಜ್ಜೆಗಳನ್ನು ಹಾಕುತ್ತಾ ಮುನ್ನಡೆಯುತ್ತಿದ್ದಾರೆ. ಉದಾ ಹರಣೆಗೆ ದೇಶದ ಹಿಂದಿನ ಎಲ್ಲಾ ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರರು ಇದ್ದರು. ಆದರೆ ನರೇಂದ್ರ ಮೋದಿ ಮಾಧ್ಯಮ ಸಲಹೆಗಾರನನ್ನು ನೇಮಿಸಿಕೊಂಡೇ ಇಲ್ಲ.
ಮೋದಿ ಅಂದು ಇಂದು ಎಂಬಂತೆ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರೂ ಅವರು ಮಾಧ್ಯಮಗಳಿಂದ ಒಂದಿಷ್ಟು ಅಂತರ ವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಈ ಹಿಂದಿನ ಸರಕಾರದ ಅವಧಿಯಲ್ಲಿ ನೀರಾ ರಾಡಿಯಾ ಟೇಪ್ ಹೊರಬಿದ್ದಾಗ ಪತ್ರಕರ್ತೆ ಬರ್ಕಾ ದತ್ 2ಜಿ ಹಗರಣದ ಆರೋಪಿ ಎ ರಾಜಾಗೆ ಟೆಲಿಕಾಂ ಮಂತ್ರಿ ಪದವಿ ಕೊಡಿಸಲು ಗುಲಾಂ ನಬಿ ಆಜಾದ್ ಜತೆ ಮಾತುಕತೆ ನಡೆಸುತ್ತೇನೆ ಎಂದು ನೀರಾ ರಾಡಿಯಾಗೆ ಭರವಸೆ ಕೊಟ್ಟದ್ದು ಬಯಲಾಗಿತ್ತು. ಮಾಧ್ಯಮ ಮಂದಿಗಳು ಲಾಬಿದಾರರಾಗಿ ನಡೆದು ಕೊಳ್ಳುತ್ತಿದ್ದುದಕ್ಕೆ ಈ ಪ್ರಕರಣ ಒಂದು ಉದಾಹರಣೆ ಅಷ್ಟೇ.
ಈ ಎಲ್ಲಾ ರಗಳೆಯೇ ಬೇಡವೆಂದು ನರೇಂದ್ರ ಮೋದಿ ಜನಸಾಮಾನ್ಯರ ಸಂಪರ್ಕವನ್ನಿಟ್ಟುಕೊಳ್ಳಲು ಸಾಮಾಜಿಕ ಮಾಧ್ಯಮ ವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿರುವ ಕಾರಣ ಅವರಿಗೆ ಮುಖ್ಯ ವಾಹಿನಿ ಮಾಧ್ಯಮಗಳ ಸಂದರ್ಶನಗಳ ಹಂಗಿಲ್ಲ. ಜನರ ಅಲೋಚನಾ ವಿಧಾನಕ್ಕೇ ಒಂದು ತಿರುವನ್ನು ಕೊಡುವಲ್ಲಿ ನರೇಂದ್ರ ಮೋದಿ ಸಫಲರಾಗಿದ್ದಾರೆ. ಉದಾಹರಣೆಗೆ ಈ ಮೊದಲು ಭಾರತೀಯರು ಉದ್ಯೋಗಾವಕಾಶಕ್ಕೆ ವಿದೇಶಗಳಿಗೆ ಹೋಗುತ್ತಿರುವುದನ್ನು ಪ್ರತಿಭಾ ಪಲಾಯನ(ಬ್ರೈನ್ ಡ್ರೈನ್) ಎಂಬುದಾಗಿ ವಿಶ್ಲೇಷಿಸಲಾಗುತ್ತಿತ್ತು. ಆದರೆ ನರೇಂದ್ರ ಮೋದಿ ಇದನ್ನು ಧನಾತ್ಮಕವಾಗಿ ಸ್ವೀಕರಿಸಿ ಭಾರತೀಯರು ವಿದೇಶಗಳಲ್ಲಿ ನೆಲೆಸುವು ದನ್ನು ಪ್ರತಿಭಾ ಪಲಾಯನವೆಂದು ಕರೆಯದೆ ಅದನ್ನು ಪ್ರತಿಭಾ ಸಂಚಯನ ಎಂದು ಕರೆದರು.
ವಿದೇಶಗಳಿಗೆ ಉದ್ಯೋಗಕ್ಕಾಗಿ ತೆರಳುವ ಭಾರತೀಯರು ಸ್ವದೇಶಕ್ಕೆ ಮರಳುವಾಗ ಹೊಸ ಜ್ಞಾನ ಹಾಗೂ ತಂತ್ರಜ್ಞಾನವನ್ನು ತರು ತ್ತಾರೆ ಎನ್ನುವುದು ಬ್ರೈನ್ ಗೈನ್ ಅನ್ನುವ ಮಾತಿನ ಅರ್ಥ. ನರೇಂದ್ರ ಮೋದಿ ಯಾವ ದೇಶಕ್ಕೆ ಹೋದರೂ ಆ ದೇಶಗಳಲ್ಲಿ ನೆಲೆಸಿ ರುವ ಅನಿವಾಸಿ ಭಾರತೀಯರ ಜತೆಗೆ ಸಂವಹನ ನಡೆಸುತ್ತಾರೆ. ಅನಿವಾಸಿ ಭಾರತೀಯರ ಸಭೆಗಳನ್ನುದ್ದೇಶಿಸಿ ಮಾತನಾಡುವುದೂ ಅವರ ವಿದೇಶ ಪ್ರಯಾಣದ ಕಾರ್ಯಕ್ರಮದ ಪಟ್ಟಿಯ ಅವಿಭಾಜ್ಯ ಅಂಗ. ಪರಿಣಾಮವಾಗಿ ಭಾರತೀಯ ದೂತಾವಾಸ ಕಚೇರಿಗಳೂ ಹೆಚ್ಚು ಜನಸ್ನೇಹಿಯಾಗಿ ಪರಿವರ್ತನೆ ಗೊಂಡು ಆಯಾ ದೇಶಗಳಲ್ಲಿರುವ ಭಾರತೀಯರ ಹಿತ ಹಾಗೂ ಕ್ಷೇಮವನ್ನು ಕಾಯುವ ಕೆಲಸವನ್ನು ಮಾಡುತ್ತಿವೆ.
ತನಗೆ ಸಿಕ್ಕಿರುವ ಎಲ್ಲಾ ಉಡುಗೊರೆ ಹಾಗೂ ಸ್ಮರಣಿಕೆಗಳನ್ನು ಹರಾಜು ಹಾಕಿ ಅದರಿಂದ ಬರುವ ಆದಾಯವನ್ನು ಯಾವುದೋ ಜನಕಲ್ಯಾಣ ಯೋಜನೆಗೆ ಬಳಸುವುದು ನರೇಂದ್ರ ಮೋದಿ ಆರಂಭಿಸಿರುವ ಅತ್ಯುತ್ತಮ ಸಂಪ್ರದಾಯ. ಪ್ರಧಾನಿಯನ್ನು ಭೇಟಿಮಾಡುವ ವಿದೇಶಿ ಗಣ್ಯರು, ಉದ್ಯಮಿಗಳು, ಅತಿಥಿಗಳು ಪ್ರಧಾನಿಗೆ ಸ್ಮರಣಿಕೆಗಳನ್ನು ಕೊಟ್ಟಿರುತ್ತಾರೆ. ಇತ್ತೀಚೆಗೆ ಟೋಕಿಯೋ ಒಲಿಂಪಿಕ್ಸ್’ನಲ್ಲಿ ಜ್ಯಾವೆಲಿನ್ ಎಸೆತದಲ್ಲಿ ಚಿನ್ನದ ಮೆಡಲನ್ನುಗಳಿಸಿದ್ದ ನೀರಜ್ ಚೋಪ್ರಾ ತಾನು ಒಲಿಂಪಿಕ್ಸ್’ನಲ್ಲಿ ಎಸೆದಿದ್ದ ಜ್ಯಾವೆಲಿನ್ ಅನ್ನು ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು.
ಇದೀಗ ಮೂರನೆಯ ಬಾರಿಗೆ ನರೇಂದ್ರ ಮೋದಿಯವರ ಸ್ಮರಣಿಕೆಗಳ ಹರಾಜು ನಡೆಯುತ್ತಿದ್ದು ನೀರಜ್ ಚೋಪ್ರಾ ಅವರು ಕೊಟ್ಟಿದ್ದ ಜ್ಯಾವೆಲಿನ್ ದಾಖಲೆಯ 1.5 ಕೋಟಿ ರುಪಾಯಿಗಳಿಗೆ ಹರಾಜಾಗಿದೆ. ಈ ಬಾರಿಯ ಹರಾಜಿನಲ್ಲಿ ಒಟ್ಟಾದ ಮೊತ್ತವನ್ನು ಗಂಗಾ ನದಿಯ ಸ್ವಚ್ಛತಾ ಯೋಜನೆ ನಮಾಮಿ ಗಂಗೆಗೆ ಅರ್ಪಿಸಲಾಗುವುದು. ಈ ಹಿಂದೆ ಎರಡು ಬಾರಿ ಹರಾಜಾಗಿ ಬಂದ ಮೊತ್ತ ವನ್ನು ಹೆಣ್ಣು ಮಕ್ಕಳ ಶಿಕ್ಷಣ ಯೋಜನೆಯಾದ ಬೇಟೀ ಬಚಾವೋ ಬೇಟಿ ಪಡಾವೋಗೆ ಸಮರ್ಪಿಸಲಾಗಿದೆ.
ಪ್ರಣಬ್ ಮುಖರ್ಜಿಯವರಿಗಿಂತ ಮೊದಲು ದೇಶದ ರಾಷ್ಟ್ರಪತಿಗಳಾಗಿದ್ದ ಪ್ರತಿಭಾ ಪಾಟೀಲ್ ಅವರು ತನ್ನ ಆಡಳಿತ ಅವಧಿ ಮುಗಿದಾಗ ತನಗೆ ರಾಷ್ಟ್ರಪತಿ ಅವಧಿಯಲ್ಲಿ ಸಿಕ್ಕಿದ್ದ 150 ಸ್ಮರಣಿಕೆಗಳನ್ನು ಮನೆಗೆ ಒಯ್ದಿದ್ದರು. ನಂತರ ರಾಷ್ಟ್ರಪತಿ ಕಾರ್ಯಾ ಲಯದ ಆದೇಶದ ಮೇರೆಗೆ ಅವುಗಳನ್ನು ಪುನಃ ರಾಷ್ಟ್ರಪತಿ ಭವನಕ್ಕೆ ಮರಳಿಸಬೇಕಾಯಿತು ಎನ್ನುವುದು ಬೇರೆ ಮಾತು.ಭಾರತದ ರಾಜಕಾರಣಿಗಳು ಉದ್ಯಮಿಗಳೊಂದಿಗೆ ತಮ್ಮನ್ನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಹಿಂಜರಿಯುತ್ತಾರೆ. ತಾವು ಉದ್ಯಮಿಗಳ ಪರವೆಂದು ಜನರು ತಿಳಿದುಕೊಂಡಾರೋ ಎನ್ನುವ ಭಯ ಅವರಿಗೆ. ಆದರೆ ಮೋದಿಗೆ ಅಂತಹ ಭಯ ಇಲ್ಲ. ರೈತರನ್ನು ಅನ್ನದಾತರು ಎಂದು ಬಣ್ಣಿಸುವ ಮೋದಿ ಉದ್ಯಮಿಗಳನ್ನು ಸಂಪತ್ತಿನ ಸೃಷ್ಟಿಕರ್ತರು ಎಂದು ಕರೆದು ಗೌರವಿಸಿದ್ದಾರೆ.
ಇತ್ತೀಚೆಗೆ ನರೇಂದ್ರ ಮೋದಿ ಹಾಗೂ ಪ್ರಸಿದ್ಧ ಷೇರು ಮಾರುಕಟ್ಟೆ ಹೂಡಿಕೆದಾರ ಹಾಗೂ ಉದ್ಯಮಿ ರಾಕೇಶ್ ಜುಂಜುನ್ವಾಲಾ ನಡುವಿನ ಭೇಟಿ ನಡೆದಿತ್ತು. ಈ ಸಂದರ್ಭದಲ್ಲಿ ಕುರ್ಚಿಯಲ್ಲಿ ಕೂತಿರುವ ಜುಂಜುನ್ವಾಲಾ ಜತೆಗೆ ಮೋದಿ ನಿಂತು ಮಾತನಾಡು ತ್ತಿರುವ ಫೋಟೋಗಳು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು.
ಸರಕಾರದ ನಿರ್ಣಯಗಳು, ಸಂಪುಟ ಸಭೆಯ ರಹಸ್ಯಗಳು ಸೋರಿಕೆಯಾಗದಂತೆ ತಡೆಗಟುವುದರಲ್ಲಿ ಮೋದಿ ಎತ್ತಿದ ಕೈ. ನೋಟು ರದ್ದತಿಯ ವಿಷಯ ನರೇಂದ್ರ ಮೋದಿ ದೇಶವನ್ನು ಟಿವಿ ಮೂಲಕ ಉದ್ದೇಶಿಸಿ ಮಾತನಾಡುವ ತನಕ ಯಾರಿಗೂ ಗೊತ್ತಿರಲಿಲ್ಲ. ಸಂಪುಟ ಸಭೆಯ ವಿಸ್ತರಣೆ, ಸಚಿವ ಸ್ಥಾನ ಹಂಚಿಕೆ ಮೊದಲಾದ ವಿಚಾರಗಳು ಯಾವ ಮಾಧ್ಯಮಗಳಿಗೂ ಸಿಗುವುದಿಲ್ಲ. ಪಾಕಿ ಸ್ತಾನದ ಮೇಲೆ ನಡೆಸಲಾದ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಮೇಲಿನ ವೈಮಾನಿಕ ದಾಳಿ ಮೊದಲಾದ ಜಗತ್ತಿಗೆ ಗೊತ್ತಾದದ್ದೇ ಕಾರ್ಯಾಚರಣೆ ಮುಗಿದ ನಂತರ. ಒಳ್ಳೆಯ ಆರ್ಥಶಾಸವು ಕೆಟ್ಟ ರಾಜಕೀಯ ಎನ್ನುವ ಮಾತು ಇದೆ.
ಒಳ್ಳೆಯ ಆರ್ಥಿಕತೆಗಾಗಿ ಕೆಲಸ ಮಾಡುವಾಗ ಜನಪ್ರಿಯತೆ ಕುಂದುತ್ತದೆ. ವಾಜಪೇಯಿಯವರು ದೇಶದ ಆರ್ಥಿಕತೆಯನ್ನು ಸರಿ ದಾರಿಗೆ ತರುವ ಒಳ್ಳೆಯ ಕೆಲಸವನ್ನು ಮಾಡಿದ್ದರೂ 2004 ರ ಚುನಾವಣೆಯಲ್ಲಿ ಜನರು ಅವರನ್ನು ಪುನರಾಯ್ಕೆ ಮಾಡಲಿಲ್ಲ. ಬೆಂಗಳೂರನ್ನು ಐಟಿ ಹಬ್ ಮಾಡಿದ್ದ ಎಸ್ ಎಂ ಕೃಷ್ಣ ಮುಂದಿನ ಚುನಾವಣೆಯಲ್ಲಿ ಸೋತು ಹೋದರು. ಹೈದರಾಬಾದ್ ಅನ್ನು ಜಾಗತಿಕ ಮಟ್ಟದ ಐ.ಟಿ ಸಿಟಿ ಮಾಡಿದ್ದ ಚಂದ್ರಬಾಬು ನಾಯ್ಡು ಅವರೂ ಮುಂದಿನ ಚುನಾವಣೆಯಲ್ಲಿ ಸೋಲನ್ನನುಭವಿಸ ಬೇಕಾಯಿತು.
ನೋಟ್ ಬ್ಯಾನ್, ಕಪ್ಪು ಹಣದ ವಿರುದ್ಧ ಕಾರ್ಯಾಚರಣೆ, ಕಠಿಣ ಆದಾಯ ತೆರಿಗೆ ಕಾನೂನು, ಜಿಎಸ್ಟಿ ಜಾರಿ ಮೊದಲಾದ ಕಟ್ಟು ನಿಟ್ಟಿನ ಆರ್ಥಿಕ ಶಿಸ್ತು ಕ್ರಮಗಳನ್ನು ಕೈಗೊಂಡರೂ ಮೋದಿ ಸರಕಾರ 2019 ರಲ್ಲೂ ಪುನರಾಯ್ಕೆಯಾಯಿತು. ಜನಪ್ರಿಯ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹದವಾಗಿ ಬೆರೆಸಿ ಜಾರಿಗೆ ತಂದುದು ಮೋದಿ ಸರಕಾರದ ಯಶಸ್ಸಿನ ಒಂದು ಗುಟ್ಟು. ಕಳೆದ ಏಳು ವರ್ಷಗಳ ಆಡಳಿತದ ನಂತರವೂ ಅವರು ಜನರ ಅಪಾರ ವಿಶ್ವಾಸವನ್ನು ಉಳಿಸಿಕೊಂಡಿರುವುದು ಇರುವುದು ಅವರ ಜನಪ್ರಿಯತೆಯ ಇನ್ನೊಂದು ಗುಟ್ಟು. ಇತ್ತೀಚೆಗೆ ಪ್ರಕಟವಾದ ಗ್ಲೋಬಲ್ ಲೀಡರ್ಸ್ ಅಪ್ರೂವಲ್ ರೇಟಿಂಗ್( ಜಾಗತಿಕ ನಾಯಕರಅನುಮೋದನೆ) ನಲ್ಲಿ ಶೇ.70 ಜನರಿಂದ ಅನುಮೋದನೆ ಪಡೆದು 13 ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಕಾಣಿಸಿ ಕೊಂಡಿರುವ ನರೇಂದ್ರ ಮೋದಿಯ ಜನಪ್ರಿಯತೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು.
13 ವರ್ಷಗಳ ಮುಖ್ಯಮಂತ್ರಿ ಪದವಿಯ ಕಾಲದಲ್ಲಿ ಹಾಗೂ ಈಗಿನ ಪ್ರಧಾನ ಮಂತ್ರಿ ಪದವಿಯ 7 ವರ್ಷಗಳ ಕಾಲದಲ್ಲಿ ಅವರ ಮೇಲಾಗಲೀ ಅವರ ಸಚಿವ ಸಂಪುಟ ಸದಸ್ಯರ ಮೇಲಾಗಲೀ ಒಂದೇ ಒಂದು ಭ್ರಷ್ಟಚಾರದ ಆರೋಪವಿಲ್ಲ. ಸರಕಾರದ ಯೋಜನೆಗಳು ಬಹಳ ಪಾರದರ್ಶಕವಾಗಿದ್ದು ಪ್ರತಿ ಪೈಸೆಯೂ ಅರ್ಹ ಫಲಾನುಭವಿಗಳನ್ನು ತಲುಪುತ್ತಿದೆ. ದಿನವೊಂದಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುವ ಮೋದಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಥವಾ ಪ್ರಧಾನಿಯಾದ ಅವಧಿಯಲ್ಲಿ ಒಂದೂ ರಜೆ ಮಾಡಿಲ್ಲ. ವಿದೇಶ ಭೇಟಿಯ ಸಂದರ್ಭಗಳಲ್ಲಿಯೂ ಅವರ ವೇಳಾಪಟ್ಟಿಯಲ್ಲಿ ಕಾರ್ಯಕ್ರಮಗಳು ಕಿಕ್ಕಿರಿದಿರುತ್ತದೆ.
ಇತ್ತೀಚೆಗಿನ 60 ಗಂಟೆಗಳ ಅಮೆರಿಕ ಭೇಟಿಯ ಸಂದರ್ಭದಲ್ಲಿ ಅವರು 25 ಸಭೆ ಹಾಗೂ ಸಮಾಲೋಲೋಚನೆಗಳಲ್ಲಿ ಭಾಗ ವಹಿಸಿದ್ದರು. ಸಾಮಾನ್ಯವಾಗಿ ರಾಜಕೀಯ ನಾಯಕರು ತಮ್ಮ ಜಾತ್ಯತೀತ ಇಮೇಜ್ ಅನ್ನು ಉಳಿಸಿಕೊಳ್ಳಲು ದೇವಸ್ಥಾನಗಳ ಭೇಟಿಯಿಂದ ದೂರ ಉಳಿಯುತ್ತಿರುವ ಈ ಕಾಲದಲ್ಲಿ ಪರಮ ದೈವ ಭಕ್ತರಾದ ಮೋದಿ ಅವಕಾಶ ಸಿಕ್ಕಿದಾಗೆ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅವರಿಗೆ ತನ್ನ ಹಿಂದೂ ಅಸ್ಮಿತೆಯ ಬಗೆಗೆ ಯಾವುದೇ ಕೀಳರಿಮೆಯಿಲ್ಲ. ಅವರು ಕಾಶಿ, ಅಯೋಧ್ಯೆ, ಕೇದಾರನಾಥ, ಮಧುರೈ ಮೀನಾಕ್ಷಿ, ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನ, ವೈಷ್ಣೋದೇವಿ ಮೊದಲಾದ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.
ವಿದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲೂ ಅವರು ಅಲ್ಲಿರುವ ದೇವಸ್ಥಾನ, ಗುರುದ್ವಾರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸು ತ್ತಾರೆ. ಇಂಡಿಯಾ – ಎನ್ನುವ ಅಚಲ ಗುರಿಯೊಂದಿಗೆ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ಇತರ ನಾಯಕರಿಂದ ಭಿನ್ನವಾಗಿ ಕಾಣಿಸುತ್ತಾರೆ.