ದೀಪಗಳಿಗೆ ಕವಿದಿದೆಯೇ ಮಸುಕು ?
ಶಶಾಂಕಣ
ಶಶಿಧರ ಹಾಲಾಡಿ
.@.
ಅಮೆರಿಕದಲ್ಲಿ ನನ್ನ ಚಡ್ಡಿ ದೋಸ್ತ್ ಒಬ್ಬನಿದ್ದಾನೆ. ಆಗಾಗ ನಾವು ಫೋನ್ ಮೂಲಕ ಮಾತನಾಡುವುದುಂಟು. ಪ್ರತಿ ವರ್ಷ ದೀಪಾವಳಿ ಹತ್ತಿರ ಬಂದಾಗ, ನಮ್ಮಿಬ್ಬರ ಮಧ್ಯೆ ಹಬ್ಬದಾಚರಣೆಯ ಕುರಿತು ಬಾಲ್ಯದ ನೆನಪುಗಳ ಸುದೀರ್ಘ ಮೆಲುಕುಗಳ ಚರ್ಚೆ ನಡೆಯುವು ದುಂಟು. ಆ ನೆನಪುಗಳಲ್ಲಿ ಹಬ್ಬದ ಸಂಭ್ರಮಕ್ಕೆ ಪೂರಕವಾಗಿ ಅವನು ಅಮೆರಿಕದಲ್ಲಿ ನಡೆಯುವ ಹಬ್ಬದ ಸಂಭ್ರಮವನ್ನು ವರ್ಣಿಸುವಪರಿಯನ್ನು ಕೇಳಲು ಮುದವೆನಿಸುತ್ತದೆ.
‘ಅಮೆರಿಕದಲ್ಲಿ ಹಬ್ಬಗಳ ದಿನಗಳು ಬಂದವೆಂದರೆ, ವಾರಗಟ್ಟಲೆ ಸಂಭ್ರಮ. ಹಬ್ಬಕ್ಕೆ ಇನ್ನೂ ಎರಡು ವಾರ ಇರುವಾಗಲೇ ಬೀದಿ ತುಂಬಾ ಜಗಮಗಿಸುವ ದೀಪಗಳ ಸಾಲು, ಸೀರಿಯಲ್ ಸೆಟ್. ಒಂದು ಬೀದಿಯವರು ಮಾಡಿದ ಅಲಂಕಾರಕ್ಕೆ ಪೈಪೋಟಿಯಂತೆ ಮತ್ತೊಂದು ಬೀದಿಯವರು ಅಲಂಕಾರ ಮಾಡುತ್ತಾರೆ. ತಿಂಗಳ ಆರಂಭದಲ್ಲೇ ಕೆಲವು ಮನೆಯಿಂದ ಗೂಡು ದೀಪಗಳು ಮಿನುಗುತ್ತಾ, ಹಬ್ಬದ ಆಗಮನ ವನ್ನು ವಾರಗಳ ಮುಂಚೆಯೇ ಉದ್ಘೋಷಿಸುತ್ತವೆ!
ಕ್ರಿಸ್‌ಮಸ್ ಹಬ್ಬ ಬರುತ್ತಿರುವಂತೆಯೇ, ಹೆಚ್ಚಿನ ಎಲ್ಲರೂ ವಾರಗಟ್ಟಲೆ ರಜಾ ಹಾಕು ತ್ತಾರೆ. ಡಿಸೆಂಬರ್ ಮೂರನೆಯ ವಾರದಿಂದ ಆರಂಭವಾಗುವ ಈ ಸಂಭ್ರಮವು, ಹೊಸ ವರ್ಷದಾಚರಣೆಗೆ ಮುಗಿದರೂ, ಕೆಲವು ಬಾರಿ ಮುಂದುವರಿಯುವುದುಂಟು. ಹಬ್ಬಕ್ಕಾಗಿ, ಡಿಸೆಂಬರ್ ಕೊನೆಯ ವಾರಪೂರ್ತಿ ಹೆಚ್ಚಿನವರು ರಜೆ ಹಾಕುವುದರಿಂದ, ಕಚೇರಿ, ಆಫೀಸ್ ಎಲ್ಲಾ ಕಡೆ ಬಂದ್‌ನ ವಾತಾವರಣ. ಹ್ಯಾಲೋವಿನ್ ರೀತಿಯ ಹಿರಿಯರ ಹಬ್ಬದ ಸಂಭ್ರಮಕ್ಕೂ ಆಧು ನಿಕತೆಯ ಮೆರುಗು.. ಕುಂಬಳ ಕಾಯಿಯಲ್ಲಿ ದೆವ್ವಗಳ ಅಲಂಕಾರ.. ಮಕ್ಕಳು ದೆವ್ವಗಳ ವೇಷ ಧರಿಸಿ ಮನೆ ಮನೆಗೆ ಹೋಗಿ ವಿಶ್ ಮಾಡುವುದು..’ ಈ ರೀತಿ ವಿವರಿಸುವ ನನ್ನ ಗೆಳೆಯ ಕೊನೆಗೊಂದು ಸಾಲು ಸೇರಿಸುತ್ತಾನೆ ‘ಅದೇಕೆ ಭಾರತದಲ್ಲಿ ಪ್ರಮುಖ ಹೆಚ್ಚಿನ ಹಬ್ಬಗಳ ಸಂಭ್ರಮ ಪ್ರತಿ ವರ್ಷ ಕಡಿಮೆಯಾಗುತ್ತಿದೆ?’ ಅವನ ಈ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ನಾನು ತಡಬಡಾಯಿಸುವುದುಂಟು.
‘ಕೋವಿಡ್ – ಪೊಲ್ಯೂಷನ್ – ವಾಯು ಮಾಲಿನ್ಯ – ಜಲಮಾಲಿನ್ಯ – ರಜಾ ಇಲ್ಲವಲ್ಲ..’ ಅವನು ಎತ್ತಿದ ಬಹುವ್ಯಾಪ್ತಿಯ ಪ್ರಶ್ನೆಗೆ ಇವೆಲ್ಲ ಸರಿಯಾದ ಉತ್ತರ ಅಲ್ಲ ಎಂಬುದು ನನಗೆ ಗೊತ್ತು. ಇವೆಲ್ಲಾ ಸಮಜಾಯಿಷಿಗೆ ಆತನ ಉತ್ತರ ಒಂದೇ ‘ಸಾರಿ.. ಇದು ಸರಿಯಾದ ಉತ್ತರ ವಲ್ಲ. ನಮ್ಮ ಬಾಲ್ಯದ ದೀಪಾವಳಿ ನೆನಪಿಸಿಕೋ, ಬಾಲ್ಯದ ಗಣೇಶನ ಹಬ್ಬ ನೆನಪಿಸಿಕೋ, ಶಿವರಾತ್ರಿ ನೆನಪಿಸಿಕೋ.. ಅದೆಲ್ಲಾ ಹೋಗಲಿ ನಮ್ಮ ಹಳ್ಳಿಯಲ್ಲಿ ನಡೆಯುತ್ತಿದ್ದ ಕದಿರು ಕಟ್ಟುವ ಮತ್ತು ಹೊಸ್ತು ಆಚರಣೆಯ ಸಂಭ್ರಮ ನೆನಪಿಸಿಕೋ.. ಈಗಿನ ಜನರು ಆ ಹಬ್ಬಗಳನ್ನು ವರ್ಷದಿಂದ ವರ್ಷಕ್ಕೆ ಕ್ರಮೇಣ ತುಸುತುಸುವೇ ಕಡಿಮೆ ಆಚರಿಸುತ್ತಿದ್ದಾರೆ ಅನಿಸುವುದಿಲ್ಲವೆ?’ ಈ ರೀತಿ ವಿಚಾರ ಮಂಡಿಸಿ, ನಮ್ಮ ದೇಶ ದಲ್ಲಿ ದೀಪಾವಳಿಯಂತಹ ಕೆಲವು ಹಬ್ಬಗಳನ್ನು ನಾವು ಪೂರ್ಣ ಸಂಭ್ರಮದಿಂದ ಆಚರಿಸುತ್ತಿಲ್ಲ ಎಂದೇ ವಾದಿಸುತ್ತಾನೆ.
ಆತನ ಅನಿಸಿಕೆ ನಿಜವಿರಬಹುದೆ?  ಬಹುಷಃ ಹೊರದೇಶದಲ್ಲೇ ಆತ ಬಹಳ ವರುಷಗಳಿಂದ ಇರುವುದರಿಂದಾಗಿ, ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಿರುವ ನಮ್ಮ ಹಬ್ಬದಾಚರಣೆಯನ್ನು ನಿರ್ಲಿಪ್ತವಾಗಿ, ನಿಷ್ಪಕ್ಷವಾಗಿ ವಿಶ್ಲೇಷಿಸಲು ಆತನಿಂದ ಸಾಧ್ಯವಾಗಿರಬಹುದು. ನಿಜ ವಾಗಿಯೂ ನಮ್ಮವರು ಹಬ್ಬಗಳ ಸಂಭ್ರಮವನ್ನು ಆಚರಿಸುವಲ್ಲಿ ಹಿಂಜರಿಯುತ್ತಿದ್ದೇವೆಯೆ? ನಗರಗಳನ್ನು ನೋಡಿದರೆ ಮೇಲ್ನೋಟಕ್ಕೆ ಹಾಗನಿಸದೇ ಇರಬಹುದು, ಆದರೆ ಹಳ್ಳಿಗಳಲ್ಲಿ ಹಬ್ಬದ ಸೊಗಡು, ಉತ್ಸಾಹ ಮೊದಲಿಗಿಂತಲೂ ಕಡಿಮೆಯಾಗುತ್ತಿದೆ ಎಂಬುದು ನಿಜ.
ಏಕೆಂದರೆ, ಅದೆಷ್ಟೋ ಹಳ್ಳಿಗಳಲ್ಲಿ ಜನಸಂಖ್ಯೆಯೇ ಕಡಿಮೆಯಾಗುತ್ತಿದೆ! ನಮ್ಮ ಬಾಲ್ಯದ ದೀಪಾವಳಿಯು, ಈಗ ನಾವು ವೈಯಕ್ತಿಕ ನೆಲೆಯಲ್ಲಿ ಆಚರಿಸುವುದಕ್ಕಿಂತ ಬಹಳ ಭಿನ್ನವಾಗಿತ್ತು ಎಂಬುದಂತೂ ನಿಜ. ಮೂರು ಅಥವಾ ನಾಲ್ಕು ದಿನಗಳ ಅಂದಿನ ದೀಪಾವಳಿಯು, ವರ್ಷದ ಪ್ರಮುಖ ಆಚರಣೆ. ನಾವಾಗ ಹಳ್ಳಿಯಲ್ಲಿದ್ದರೂ, ಹಬ್ಬದ ಉತ್ಸಾಹಕ್ಕೆ ಕೊರತೆಯಿರಲಿಲ್ಲ. ನಮ್ಮ ನಾಡಿನ ಒಂದೊಂದು ಭಾಗದಲ್ಲಿ ತುಸು ವಿಭಿನ್ನವಾಗಿ ದೀಪಾವಳಿಯನ್ನು ಆಚರಿಸುತ್ತಿದ್ದರೂ, ಆಶಯ ಒಂದೇ – ಧನ, ಧಾನ್ಯ ಪೂಜೆ, ಬಲೀಂದ್ರನ ಪೂಜೆ, ಎತ್ತುಗಳ, ಹಸು ಕರುಗಳ ಪೂಜೆ, ಗೊಬ್ಬರ ಅಥವಾ ಕೆಲವು ಕಡೆ ತಿಪ್ಪೆಗುಂಡಿಯ ಪೂಜೆ.. ಈ ರೀತಿ ಮಣ್ಣಿನ ಜತೆ ಸಂಬಂಧ ಹೊಂದಿರುವ ಆಚರಣೆ.ಪೇಟೆಗಳಲ್ಲಿ ಹಣವನ್ನು ಪೂಜಿಸಿದರೆ, ನಮ್ಮೂರಿನಲ್ಲಿ ಬತ್ತದ ರಾಶಿಗೆ ಮತ್ತು ಬತ್ತದ ತಿರಿಗೆ ಪೂಜೆ.
ದೀಪಾವಳಿಯ ಮರುದಿನ ಹಸುಗಳಿಗೆ ಸ್ನಾನ ಮಾಡಿಸಿ, ಹೂವಿನ ಹಾರ ಹಾಕಿ, ಅವುಗಳಿಗೆ ಸಿಹಿ ತಿನಿಸನ್ನು, ಗೊಡ್ಡು ಕಡುಬನ್ನು ತಿನ್ನಿಸಿ, ಆರತಿ ಎತ್ತಿ ಪೂಜೆ. ಮಲೆನಾಡು ಗಿಡ್ಡ ತಳಿಯ ಆರೆಂಟು ದನ ಕರುಗಳನ್ನು, ಗುಡ್ಡಗಳನ್ನು ಸಾಲಾಗಿ ಗದ್ದೆ ಬಯಲಿನಲ್ಲಿ ನಡೆಸಿಕೊಂಡು ಹೋಗಿ, ಬೈಲಿನಾಚೆಯ ತೋಡಿನ ನೀರಿನಲ್ಲಿ ನಿಲ್ಲಿಸಿ, ಸೀಗೆ ಪುಡಿ ಹಾಕಿ ಮೈ ಉಜ್ಜಿ, ಮತ್ತೆ ಮನೆಗೆ ಕರೆ ತಂದು, ಮನೆ ಎದುರು ಸಿಹಿ ಕಡುಬನ್ನು ತಿನ್ನಿಸಿ, ಮನೆಯ ಮಹಿಳೆಯರು ಆರತಿ ಎತ್ತುವ ಆ ಪರಿಯನ್ನು ಪರಿಸರದ ಪೂಜೆ ಎಂದರೆ ಯಾರು ತಾನೆ ಅಲ್ಲ ಎನ್ನಲು ಸಾಧ್ಯ? ನಮ್ಮ ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಹಬ್ಬದ ಕುರಿತು ಇರುವ ವಿಭಿನ್ನ ನಂಬಿಕೆ ಮತ್ತು ಆಚರಣೆಗಳಲ್ಲಿ, ಬಲಿ ಚಕ್ರವರ್ತಿ ತಮ್ಮ ರಾಜ್ಯಕ್ಕೆ ಪ್ರತಿ ವರ್ಷ ಬರುವ ಕುರಿತಾಗಿರುವ ನಂಬಿಕೆ ಬಹಳ ಕುತೂಹಲಕಾರಿ.
ದೀಪಾವಳಿಯ ಮುಂಚಿನ ದಿನ, ಬಲಿಚಕ್ರವರ್ತಿಯು ಮೊದಲು ಕಾಸರಗೋಡು-ಮಂಗಳೂರಿಗೆ ಬರುತ್ತಾನಂತೆ. ಅಲ್ಲಿನ ಜನರಿಂದ ಪೂಜಿಸಿಕೊಂಡು, ಮರುದಿನ ಉಡುಪಿ ಸೀಮೆಗೆ ಬರುತ್ತಾನಂತೆ. ಅದರ ಮರುದಿನ ತೀರ್ಥಹಳ್ಳಿ ಹೊಸನಗರದ ಮಲೆ ನಾಡಿಗೆ ಬರುತ್ತಾ ನಂತೆ. ಈ ದಿನಗಳಿಗೆ ಸರಿಯಾಗಿ, ಮೂರು ರಾತ್ರಿ ಆಯಾ ಪ್ರದೇಶಗಳ ಜನರು ಬಲೀಂದ್ರನ ಪೂಜೆ ಮಾಡುವ ಪದ್ಧತಿ ಅಚ್ಚರಿಹುಟ್ಟಿಸುತ್ತದೆ.
ಎರಡನೆಯ ದಿನ ನಮ್ಮೂರಿಗೆ ಬರುವ ಬಲೀಂದ್ರನನ್ನು ಹಳ್ಳಿಯ ಜನರು ಸ್ವಾಗತಿಸುವ ರೀತಿಯಂತೂ ನಿಬ್ಬೆರಗಾಗುಷ್ಟು ಅನನ್ಯತೆಯನ್ನು ಹೊಂದಿದೆ. ಸಂಜೆಯಾಗುತ್ತಿದ್ದಂತೆ, ಒಂದು ನೆಣೆ ಕೋಲಿನ ತುದಿಗೆ ಬೆಂಕಿ ಹಚ್ಚಿ ಅದನ್ನೇ ದೀಪದ ರೀತಿ ಬೆಳಗಿ, ಗದ್ದೆಗೆ ದೀಪ ಇಡುತ್ತಾರೆ. ದೀಪದ ಪಕ್ಕದಲ್ಲಿ, ಗದ್ದೆಯ ನೆಲದ ಮೇಲೆ ಅರಶಿನದ ಎಲೆಯನ್ನು ಹಾಸಿ, ಅದರ ಮೇಲೆ ಅಕ್ಕಿಯ ಕಡುಬನ್ನು ಇಟ್ಟು, ಪಕ್ಕದಲ್ಲಿ ಎಲೆ ಅಡಿಕೆ, ಹೂವುಗಳನ್ನು ಹಾಕಿ ಆಗಸಕ್ಕೆ ಮುಖ ಮಾಡುತ್ತಾರೆ.
‘ಹೊಲಿಕೊಟ್ರೊ, ಬಲಿ ತಕಂಡ್ರೊ, ಬಲೀಂದ್ರ ದೇವರು ತಮ್ಮ ರಾಜ್ಯಕ್ಕೆ ತಾವಾಗಿ ಬಂದರೋ. ಹೊಲಿಯೇ ಬಾ’ ಎಂದು ಕೂಗಿ ಬಲೀದ್ರ ನನ್ನು ಕರೆದು, ಸಂತಸದಿಂದ ಕೂ ಕೂ ಎಂದು ಕೇಕೆ ಹಾಕುತ್ತಾರೆ. ಈ ರೀತಿ ಪ್ರತಿ ಗದ್ದೆಗೂ ದೀಪ ಇಟ್ಟು, ಬಲೀಂದ್ರನನ್ನು ಕರೆಯುವ ಹಾಡನ್ನು ಹಾಡಿ ಮನೆಗೆ ವಾಪಸಾಗುವಾಗ ರಾತ್ರಿ ಎಂಟಾಗುತ್ತದೆ. ಮನೆಯಲ್ಲಿ ಬತ್ತದ ರಾಶಿಗೆ ಪೂಜೆ, ನೈವೇದ್ಯ ಸಮರ್ಪಣೆ. ದೀಪಾ ವಳಿಯು ಕೇವಲ ಮೂರು ದಿನಕ್ಕೆ ಸೀಮಿತವಲ್ಲ, ನಾಲ್ಕೈದು ದಿನ ನಡೆಯುವ ಹಬ್ಬ.
ಮೊದಲ ದಿನ ಸಂಜೆ, ಜಾಗಟೆ ಹೊಡೆಯುತ್ತಾ, ನೀರನ್ನು ಹಂಡೆಗೆ ತುಂಬುವ ಹಬ್ಬ. ಬಚ್ಚಲನ್ನು ಚೊಕ್ಕಟ ಮಾಡಿ, ಹಂಡೆಗೆ ರಂಗೋಲಿ ಇಟ್ಟು, ಅದರ ಕುತ್ತಿಗೆಗೆ ಗುಂಬಳ ಬಳ್ಳಿಯನ್ನು ಸಿಂಗರಿಸಿ, ಬಾವಿಯಿಂದ ನೀರನ್ನು ತಂದು ತುಂಬಿದಾಗ ಮೊದಲ ದಿನದ ಹಬ್ಬ ಮುಗಿ ಯಿತು. ಎರಡನೆಯ ದಿನ, ಬೆಳಗಿನ ಜಾವ ಎದ್ದು, ಎಣ್ಣೆ ಸ್ನಾನ ಮಾಡಿಕೊಳ್ಳುವ ದಿನ. ಮೂರನೆಯ ದಿನ ಗದ್ದೆಗಳಿಗೆ ದೀಪವಿಟ್ಟು, ಸಂಜೆ ಬಲೀಂದ್ರನನ್ನು ಕೂಗಿ ಕರೆಯುವ ದಿನ. ನಾಲ್ಕನೆಯ ದಿನ ಗೋಪೂಜೆ – ಹಸು ಕರುಗಳಿಗೆ, ಕೋಣ ಎತ್ತುಗಳಿಗೆ ಸ್ನಾನ ಮಾಡಿಸಿ, ಅವಕ್ಕೆ ಇಷ್ಟವಾಗುವ ಸಿಹಿ ಕಡುಬನ್ನು ಮಾಡಿ, ತಿನ್ನಿಸಿ ಪೂಜಿಸುವ ದಿನ.
ಹೀಗೆ ನಾಲ್ಕಾರು ದಿನ ನಡೆಯುತ್ತಿದ್ದ ದೀಪಾವಳಿಯು ಕ್ರಮೇಣ ಕಳೆಗುಂದುತ್ತಿದೆಯೆ? ಯಾರು ಏನೇ ಹೇಳಲಿ, ಒಂದಂತೂ ಸತ್ಯ. ನಮ್ಮ ನಾಡಿನ, ದೇಶದ ಹಳ್ಳಿಗಳ ಜನರೆಲ್ಲರೂ ನಗರ, ಪಟ್ಟಣಗಳಿಗೆ ಬಂದು ಸೇರುತ್ತಿದ್ದಾರೆ. ಸಾಕಷ್ಟು ಆದಾಯವಿಲ್ಲದ, ಆಧುನಿಕ ಸೌಲಭ್ಯಗಳಿಲ್ಲದ, ಅಂತಹ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಡಿಮೆಯಿರುವ ಹಳ್ಳಿಗಳನ್ನು ತೊರೆದು, ಪಟ್ಟಣದಲ್ಲಿ ಯಾವುದಾದರೂ ಕೆಲಸ ಮಾಡುವ ಆಸೆಯಿಂದ ಹುಟ್ಟಿದ ಊರನ್ನು ಬಿಟ್ಟು ಬಂದವರು ಲಕ್ಷ ಲಕ್ಷ. ಶಾಲೆಗೆ ಹೋದ ಹಳ್ಳಿಯ ಹುಡುಗರು, ಇಂಗ್ಲಿಷ್ ಕಲಿತು, ಪೇಟೆ ಸೇರಿ ಯಾವ್ಯಾವುದೋ ಉದ್ಯೋಗ ಹಿಡಿದು, ತಮ್ಮ ಬೇರನ್ನು ಕಡಿದುಕೊಂಡು, ಎಲ್ಲಿದ್ದಾರೊ ಅಲ್ಲೇ ನೆಲೆ ಕಂಡುಕೊಳ್ಳುತ್ತಿರುವ ಪ್ರಕ್ರಿ ಯೆಯು ಹೊಸದೂ ಅಲ್ಲ, ವಿಶೇಷವೂ ಅಲ್ಲ ಎನಿಸುವಷ್ಟು ಸಾಮಾನ್ಯ ಸಂಗತಿ ಎನಿಸಿದೆ.
ನಗರವನ್ನು ಸೇರಿದ ಮಂದಿ – ಅವರು ವಿದ್ಯಾವಂತರಿರಲಿ, ಸಣ್ಣ ಪುಟ್ಟ ಉದ್ಯಮ ನಡೆಸುವವರಾಗಿರಲಿ, ಕೂಲಿ ಕೆಲಸ ಮಾಡಲಿ ತಮ್ಮಹುಟ್ಟೂರಿನ ಆಚರಣೆಗಳನ್ನು ನಿಧಾವಾಗಿ ಕೈಬಿಡುತ್ತಿರುವ ವಿದ್ಯಮಾನವೂ ನಡೆಯುತ್ತಿದೆ. ಇದರಿಂದಾಗಿಯೇ, ಕ್ರಮೇಣ ಹಬ್ಬಗಳುಕಳೆಗುಂದುತ್ತಿವೆಯೆ? ಹಳ್ಳಿಯಿಂದ ನಗರಕ್ಕೆ ಬಂದು, ಇಲ್ಲೇ ನೆಲೆನಿಂತ ಕುಟುಂಬವೊಂದನ್ನು ಸೂಕ್ಷ್ಮವಾಗಿ ಗಮನಿಸಿ. ತಮ್ಮೂರಿನಲ್ಲಿ ಆಚರಿಸುತ್ತಿದ್ದ ಎಲ್ಲಾ ಹಬ್ಬಗಳನ್ನು, ಅದೇ ಭಾವದಿಂದ, ಅಷ್ಟೇ ಶಿಸ್ತಿನಿಂದ ಮುಂದುವರಿಸಿಕೊಂಡು ಬಂದ ಕುಟುಂಬಗಳೆಷ್ಟು? ನಾಲ್ಕು ದಿನಗಳ ದೀಪಾವಳಿಯನ್ನೋ, ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಿ ಆಚರಿಸುತ್ತಿದ್ದ ವಿನಾಯಕ ಚೌತಿಯನ್ನೋ, ರಾತ್ರಿಯಿಡೀ ನಿದ್ರೆ ಬಿಟ್ಟು ಭಕ್ತಿಯಿಂದ ಆಚರಿಸುತ್ತಿದ್ದ  ಶಿವರಾತ್ರಿಯನ್ನೋ ತಮ್ಮೂರಿನಂತೆಯೇ ಪಟ್ಟಣದಲ್ಲೂ ಆಚರಿಸುವ ಕುಟುಂಬಗಳು ತೀರಾತೀರಾ ಕಡಿಮೆ.
ಪಟ್ಟಣದ ಬೆರಗು, ದರ್ಪ ಮತ್ತು ಕೃತಕ ಆಧುನಿಕತೆಯ ಎದುರು, ಹಳ್ಳಿಯ ಆಚರಣೆಯನ್ನು ಮುಂದುವ ರಿಸಲು ಅಳುಕು, ಹಿಂಜರಿಕೆ ಇದೆಯೆ? ಬಹುಷಃ ವಸಾಹತುಶಾಹಿ ಆಡಳಿತವು ಕಳೆದ ಶತಮಾನದಲ್ಲಿ ತನ್ನ ಇಂಗ್ಲಿಷ್ ಶಕ್ತಿಯ ದರ್ಪದಿಂದ ನಮ್ಮ ಸಮಾಜದ ಅಂತಃಶಕ್ತಿಯನ್ನೇ ಕುಗ್ಗಿಸಿದ್ದರಿಂದ, ಹಳ್ಳಿಯಿಂದ ಪೇಟೆಗೆ ವಲಸೆ ಬಂದವರು ತಮ್ಮ ಹಳೆಯ ಆಚರಣೆಗಳನ್ನು ಮುಂದುವರಿಸುವ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆಯೆ? ಇಂಗ್ಲಿಷ್ ಭಾಷೆಯ ಪ್ರಭಾವ ಮತ್ತು ನವನಾಗರಿಕತೆಯ ಕುರುಡು ಅನುಕರಣೆಯಿಂದಾಗಿ, ಹಳೆಯ ಆಚರಣೆ ಗಳೆಲ್ಲವೂ ಗೊಡ್ಡು ಸಂಪ್ರದಾಯಗಳು, ಮೂಢ ನಂಬಿಕೆಗಳ ಛಾಯೆ ಹೊಂದಿರುವಂತಹವುಗಳು ಎಂಬ ಒಂದು ಸಾರಾಸಗಟು ಭಾವನೆನಮ್ಮ ಆಧುನಿಕ ಸಮಾಜವನ್ನೇ ಕವಿದಿದೆಯಲ್ಲಾ, ಅದರಿಂದಾಗಿಯೇ ನಮ್ಮ ಹಬ್ಬಗಳು ಕ್ರಮೇಣ ಕಳೆಗುಂದುತ್ತಾ ಬಂದಿವೆಯೆ?ಬಯಲು ಸೀಮೆಯ ಗೆಳೆಯರೊಬ್ಬರು ಹೇಳುತ್ತಿದ್ದರು – ತಮ್ಮೂರಿನಲ್ಲಿ ದೀಪಾವಳಿಯ ದಿನ ಸಗಣಿಯಿಂದ ಮಾಡಿದ ಪಾಂಡವರನ್ನು ಮನೆಯ ಹೊಸ್ತಿಲಿನಲ್ಲಿ, ಮನೆಯು ಮುಂದೆ, ಒಳಗೆ ಎಲ್ಲಾ ಕಡೆ ಇಟ್ಟು, ಅವುಗಳನ್ನು ಹೂವುಗಳಿಂದ ಸಿಂಗರಿಸಿ ಪೂಜಿಸುತ್ತಿದ್ದರು, ಅದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗವಾಗಿತ್ತು ಎಂದು.
ಅವರ ಕಳಕಳಿ ಏನೆಂದರೆ, ನಗರಕ್ಕೆ ವಲಸೆ ಬಂದಿರುವ ಅವರ ಕುಟುಂಬವು ಆ ಸಗಣಿಯಿಂದ ಮಾಡಿದ ಪಾಂಡವರನ್ನು ಮರೆತೇಬಿಟ್ಟಿದೆ, ಏಕಿರಬಹುದು ಎಂದು. ನಗರದ ನಾಗರಿಕತೆಯ ಮುಂದೆ ತಮ್ಮ ಹಳ್ಳಿಯ ಅರ್ಥಪೂರ್ಣ ಸಗಣಿ ಉಂಡೆಗಳು ತಮ್ಮ ಸ್ಥಾನವನ್ನೇ ಕಳೆದುಕೊಂಡು ಮೂಲೆ ಗುಂಪಾಗಿವೆ. ನಮ್ಮ ಗೆಳೆಯರ ಪ್ರಶ್ನೆ ಎಂದರೆ, ನಗರಕ್ಕೆ ಬಂದ ತಮ್ಮಂತಹ ನೂರಾರು ಕುಟುಂಬಗಳು, ಇಲ್ಲಿನಕಾಂಕ್ರೀಟು -ಟ್‌ಗಳಲ್ಲೂ ಸಗಣಿ ಉಂಡೆ ಮಾಡಿ, ದೀಪಾವಳಿ ದಿನ ಪಾಂಡವರನ್ನು ಪೂಜಿಸಬೇಕಿತ್ತಲ್ಲವೆ, ನಾವೇಕೆ ಅದನ್ನು ಬಿಟ್ಟೆವು, ನಾವೆಲ್ಲಿ ಕಳೆದುಹೋದೆವು! ಎಂದು. ಅವರ ಕಳಕಳಿ ಅರ್ಥಪೂರ್ಣ.
ಅಮೆರಿಕದಲ್ಲಿರುವ ನನ್ನ ಚೆಡ್ಡಿ ದೋಸ್ತನ ಕಳಕಳಿಯೂ ಇದೇ ರೀತಿಯದು. ಅವ್ಯಾವ್ಯಾವೋ ಕಾರಣಗಳನ್ನಿಟ್ಟುಕೊಂಡು, ನಾವೇಕೆ ನಮ್ಮ ಹಬ್ಬಗಳನ್ನು ವರ್ಷದಿಂದವರ್ಷಕ್ಕೆ ಸರಳಗೊಳಿಸುತ್ತಾ ಹೋಗುತ್ತಿದ್ದೇವೆ? ಮೊದಲಿನಂತೆಯೇ ನಮ್ಮ ಸಂಪ್ರದಾಯ ಗಳನ್ನು, ಹಬ್ಬಗಳನ್ನು ಮುಂದುವರಿಸಿಕೊಂಡು ಹೋಗದಂತೆ ನಮ್ಮ ಮಾನಸವನ್ನು ತಡೆಯುತ್ತಿರುವ ಶಕ್ತಿಯಾದರೂ ಏನು? ಬಹುಷಃ, ಮುಂದಿನ ವಾರದದೀಪಾವಳಿಯ ದಿನಗಳಂದು ಈ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳಲು ಪ್ರಯತ್ನಿಸುವುದರಲ್ಲಿ ಅರ್ಥವಿದೆ.