ಪಾರ್ಶ್ವವಾಯು ಒಂದು ಮಾರಣಾಂತಿಕ ರೋಗ
ಇಂದು ವಿಶ್ವ ಸ್ಟ್ರೋಕ್ ದಿನ
ತನ್ನಿಮಿತ್ತ
ಡಾ.ಸೂರ್ಯನಾರಾಯಣ ಶರ್ಮ
ಇಂದು ವಿಶ್ವ ಸ್ಟ್ರೋಕ್ (ಪಾರ್ಶ್ವವಾಯು) ದಿನಾಚರಣೆ. ಪ್ರತಿ ವರ್ಷ ಅ.೨೯ರಂದು ಜಗತ್ತಿನಾದ್ಯಂತ ಈ ರೋಗದ ಬಗ್ಗೆ ಅರಿವು ಮೂಡಿಸುವ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಅಂಕಿ-ಅಂಶಗಳ ಪ್ರಕಾರ ಹೃದಯಾಘಾತದ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕೊಲ್ಲುವ ಮಾರಣಾಂತಿಕ ರೋಗಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಇದು.
ಸುಮಾರು 18 ಮಿಲಿಯನ್ ಜನ ಪ್ರಪಂಚಾದ್ಯಂತ ಈ ರೋಗಕ್ಕೆ ಪ್ರತಿವರ್ಷ ತುತ್ತಾಗುತ್ತಿದ್ದಾರೆ. 5.5 ಮಿಲಿಯನ್ ಜನ ಮೃತಪಡುತ್ತಿದ್ದಾರೆ. ಭಾರತದಲ್ಲಿ ಐಸಿಎಂಆರ್ ಅಧ್ಯಯನದ ಪ್ರಕಾರ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇದಕ್ಕ ತುತ್ತಾಗುವವರ ಸಂಖ್ಯೆ ಲಕ್ಷಕ್ಕೆ 450 ಜನರಷ್ಟು. ಪಾರ್ಶ್ವವಾಯು ಎಂದರೇನು ? ಮೆದುಳಿನ ರಕ್ತನಾಳ ಹೆಪ್ಪುಗಟ್ಟಿ ಅಥವಾ ಒಡೆದು ನರಮಂಡಲದ ಮೇಲಿನ ಪರಿಣಾಮಗಳಿಗೆ ಪಾರ್ಶ್ವವಾಯು ಎಂದು ಕರೆಯುತ್ತಾರೆ ಇದರಲ್ಲಿ ಎರಡು ಪ್ರಮುಖ ವಿಧ. ರಕ್ತನಾಳ ಹೆಪ್ಪುಗಟ್ಟಿ ಮೆದುಳಿನ ಅಂಗಾಂಶಗಳಿಗೆ ಘಾಸಿ ಆಗುವುದನ್ನು ಇಸಿ ಮಿಕ್ ಸ್ಟ್ರೋಕ್, ರಕ್ತನಾಳ ಒಡೆದು ಮೆದುಳಿನೊಳಗೆ ಉಂಟಾ ಗುವ ರಕ್ತ ಸ್ರಾವವನ್ನು ಹೆಮ ರೇಜಿಕ್ ಸ್ಟ್ರೋಕ್ ಎನ್ನುತ್ತಾರೆ.
ಇದಲ್ಲದೆ ಸಬ್ ಅರಚ್ನಾಯ್ಡ್ ಹೆಮರೇಜ್ ಮತು ಸರೆಬ್ರಲ್ ವೇನಸ್ ತ್ರಾಂಬೋಸಿಸ್ ಎಂಬ ಇನ್ನೆರಡು ವಿಧಗಳಿವೆ. ಪಾರ್ಶ್ವ ವಾಯು ಸಂಭವಿಸಿ 24 ಗಂಟೆಗಳೊಳಗೆ ರೋಗಿ ಸಂಪೂರ್ಣ ಗುಣಮುಖರಾಗಿ, ಎಮ್‌ಆರ್‌ಐ ಸ್ಕ್ಯಾನ್‌ನಲ್ಲಿ ಯಾವುದೇ ಲಕ್ಷಣ ಕಂಡು ಬರದೇ ಇದ್ದಲ್ಲಿ ಅದನ್ನು ಟ್ರನ್ಸಿಂಟ್ ಇಸ್ಕೀಮಿಕ್ ಅಟ್ಯಾಕ್ ಎಂದು ಕರೆಯುತ್ತಾರೆ.
ಪಾರ್ಶ್ವವಾಯು ಉಂಟಾಗಲು ರೋಗಿಗೆ ಹಲವು ಕಾರಣ ಇರಬಹುದು. ಮುಖ್ಯವಾಗಿ ರಕ್ತದೊತ್ತಡ, ಮಧುಮೇಹ, ಹೃದಯದ ಕಾಯಿಲೆ,ಅಧಿಕಕೊಲೆಸ್ಟ್ರಾಲ್ ಪ್ರಮಾಣ ಧೂಮಪಾನ ಹಾಗೂ ಬೊಜ್ಜು. ಹತ್ತಿರದ ರಕ್ತಸಂಬಂಧಿಗಳಲ್ಲಿ ಚಿಕ್ಕ ವಯಸ್ಸಿನಲ್ಲಿ ಪಾರ್ಶ್ವವಾಯು ಸಂಭವಿಸಿದರೆ ತಪಾಸಣೆಗೆ ಒಳಪಡುವುದು ಸೂಕ್ತ. ಸ್ಟ್ರೋಕ್ ರಿಸ್ಕೊ ಮೀಟರ್ ಎಂಬ ಆಪ್‌ನಿಂದ ಸಂಭವನೀಯತೆಯ ಪ್ರಮಾಣ ಲೆಕ್ಕಹಾಕಬಹುದು.
ಇನ್ನು ಇದರ ಲಕ್ಷಣಗಳನ್ನು ನೆನಪಿಡಲು ನಾವು ಬಿ ಫಾಸ್ಟ್ ಎಂಬ ಸಂಕ್ಷಿಪ್ತ ರೂಪ ಬಳಸುತ್ತೇವೆ. ಬ್ಯಾಲೆನ್ಸ್- ದೇಹ ಸಮತೋ ಲನ, ದೃಷ್ಟಿ ಸಮಸ್ಯೆ, ಫೇಸಿಯಲ್ ಅಸಿಮ್ಮೆಟ್ರಿ ಅಂದರೆ ಮುಖದ ಒಂದು ಭಾಗ ವಕ್ರವಾಗುವುದು, ಆರ್ಮ್ ವೀಕ್ನೆಸ್- ಕೈ ಅಥವಾ ಕಾಲು ಸ್ವಾದೀನ ತಪ್ಪುವುದು, ಸ್ಪೀಚ್ ಡಿಸ್ಟರ್ಬೆನ್ಸ್-ಮಾತು ತೊದಲುವುದು. ಕೊನೆಯ ಟಿ ಎಂದರೆ ರೋಗಿ ಸಂಪೂರ್ಣ ನಾರ್ಮಲ್ ಆದ ಕ್ಷಣ, ಅಥವಾ ಪಾರ್ಶ್ವವಾಯು ಸಂಭವಿಸಿದ ಮೊದಲ 4.30 ಗಂಟೆಗಳಲ್ಲಿ (ಗೋಲ್ಡನ್ ಅವರ್) ರೋಗಿಗೆ ವೈದ್ಯ ನೆರವು ನೀಡುವ ಸಮಯ.
ಒಂದು ಅಂದಾಜಿನ ಪ್ರಕಾರ ಬೆಂಗಳೂರು ಮಹಾನಗರದಲ್ಲಿ ಪ್ರತಿ ಗಂಟೆಗೊಮ್ಮೆ ಒಬ್ಬ ವ್ಯಕ್ತಿ ಪಾರ್ಶ್ವವಾಯುವಿಗೆ ಒಳಗಾಗು ತ್ತಿದ್ದಾರೆ. ಅಮೆರಿಕನ್ ಸ್ಟ್ರೋಕ್ ಅಸೋಸಿಯೇಷನ್ 2006ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಪಾರ್ಶ್ವವಾಯು ಸಂಭವಿಸಿದ ನಂತರದ ಪ್ರತಿ ನಿಮಿಷದಲ್ಲಿ ಮೆದುಳಿನಲ್ಲಿ ಸರಾಸರಿ 1.9 ಮಿಲಿಯನ್ ನರಗಳು ಸಾಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಂಭವಿ ಸಿದ ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಲಭ್ಯವಿರದ ಕಾರಣ ಸಾರ್ವಜನಿಕರಿಗೆ ತಮ್ಮ ವಾಸಸ್ಥಳದ ಹತ್ತಿರ ಇರುವ ಸ್ಟ್ರೋಕ್ ರೆಡಿ ಆಸ್ಪತ್ರೆಯ ಬಗ್ಗೆ ಅರಿವು ಅವಶ್ಯಕ.
ಮಹಾನಗರದಲ್ಲಿರುವ ಸ್ಟ್ರೋಕ್ ರೆಡಿ ಆಸ್ಪತ್ರೆಗಳನ್ನು ಜಿಪಿಎಸ್ ತಂತ್ರಜ್ಞಾನದಿಂದ ಅಂಬುಲೆನ್ಸ್ ವ್ಯವಸ್ಥೆಗೆ ಮಾರ್ಗದರ್ಶನ ಮಾಡಿದರೆ ಉಪಕಾರ ಆಗಬಲ್ಲದು. ಪಾರ್ಶ್ವವಾಯು ಬಗ್ಗೆ ಅರಿವು ಮೂಡಿಸೋಣ, ಆರೋಗ್ಯವಂತ ಸಮಾಜ ನಿರ್ಮಿಸೋಣ.