ಕನ್ನಡದಿಂದ ಸಂಸ್ಕೃತಕ್ಕೆ ತರ್ಜುಮೆಗೊಂಡ ಉತ್ತರಕಾಂಡ
ಡಾ.ವಿಶ್ವಾಸ
ಎಸ್.ಎಲ್. ಭೈರಪ್ಪನವರ ಇತ್ತೀಚಿನ ಕಾದಂಬರಿ ಉತ್ತರಕಾಂಡ ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿದ್ದು ಇದೀಗ ಅದರ ಸಂಸ್ಕೃತ ಅನುವಾದವೂ ಸಿದ್ಧವಾಗಿದೆ. ಸಂಸ್ಕೃತ ಭಾರತಿಯೇ ಅದನ್ನು ಪ್ರಕಾಶಿಸುತ್ತಿದೆ. ಸಂಸ್ಕೃತಾನು ವಾದಕ್ಕೆ ಸಂಬಂಧಿಸಿದಂತೆ ಅನುವಾದಕರ ಕೆಲವು ಅನಿಸಿಕೆಗಳು ಇಲ್ಲಿವೆ.
ಪ್ರಾಚೀನ ಸಂಸ್ಕೃತ ಸಾಹಿತ್ಯವನ್ನು ಮಾತ್ರವಲ್ಲದೆ ಆಧುನಿಕ ಸಂಸ್ಕೃತ ಸಾಹಿತ್ಯವನ್ನೂ ಓದಬಲ್ಲ ಓದುಗ ವರ್ಗವೊಂದನ್ನೂ, ಬರೆಯಬಲ್ಲ ಲೇಖಕವರ್ಗವೊಂದನ್ನೂ ಸೃಷ್ಟಿಸಬೇಕಾದ ಆವಶ್ಯಕತೆ ಇದ್ದುದರಿಂದ ಮೊದಲು ಅದಕ್ಕೆ ಮಾದರಿಯಾಗಿ ಕೆಲವು ಸಂಸ್ಕೃತ ಗ್ರಂಥಗಳನ್ನು ಹೊರತರಬೇಕೆಂದು ಸುಮಾರು ಮೂವತ್ತೈದು ವರ್ಷಗಳ ಹಿಂದೆಯೇ ಸಂಸ್ಕೃತ ಭಾರತಿ ಚಿಂತನೆ ನಡೆಸಿತ್ತು. ಆ ಚಿಂತನೆಯದ್ದೇ ಒಂದು ಭಾಗವಾಗಿ ಕನ್ನಡದ ಅತ್ಯಂತ ಜನಪ್ರಿಯ ಮತ್ತು ಮಹತ್ತ್ವದ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರ ಕೆಲವು ಕಾದಂಬರಿಗಳನ್ನಾದರೂ ಸಂಸ್ಕೃತಭಾಷೆಗೆ ಅನುವಾದಿಸಿ ಪ್ರಕಾಶಿಸಬೇಕೆಂದು ಸಂಸ್ಕೃತ ಭಾರತಿ ಅಪೇಕ್ಷೆ ಪಟ್ಟಿತ್ತು. ಅದರಂತೆ ಜನಾರ್ದನ ಹೆಗಡೆಯವರು ಧರ್ಮಶ್ರೀ ಮತ್ತು ವಂಶವೃಕ್ಷಗಳ ಅನುವಾದ ಮಾಡಿದ್ದರು.
ಎಚ್.ವಿ. ನಾಗರಾಜರಾವ್ ಅವರು ಸಾರ್ಥವನ್ನು ಅನುವಾದಿಸಿದರೆ ಗುಂಡ್ಮಿ ಗಣಪಯ್ಯ ಹೊಳ್ಳರು ತಬ್ಬಲಿಯು ನೀನಾದೆ ಮಗನೆ ಅನ್ನು ಅನುವಾದಿಸಿದ್ದರು. ಆವರಣದ ಅನುವಾದ ನನ್ನ ಪಾಲಿಗೆ ಬಂದಿತ್ತು. ಮುಂದೆ ನ. ಕೃಷ್ಣಪ್ಪನವರ ಅಪೇಕ್ಷೆಯಂತೆ ಒಂಬತ್ತು ವರ್ಷಗಳ ಹಿಂದೆ ಪರ್ವದ ಸಂಸ್ಕೃತಾನುವಾದ ಮಾಡಿದ್ದೆ.೨೦೧೨ರಲ್ಲಿ ಅದು ಪ್ರಕಾಶಿತವಾಯ್ತು. ಅದಾದ ಮೇಲೆ ನನ್ನ ಜೀವನದಲ್ಲಿ ಘಟಿಸಿದ ಒಂದು ಅನೂಹ್ಯ ತಿರುವಿನಲ್ಲಿ ಆರು ತಿಂಗಳು ಅನಿವಾರ್ಯವಾಗಿ ಗೃಹಬಂಧನದಲ್ಲೇ ಇರಬೇಕಾದ ಪ್ರಸಂಗ ಬಂದಾಗ, ಸ್ವತಃ ಭೈರಪ್ಪನವರೇ ಅಪೇಕ್ಷೆ ಪಟ್ಟಿದ್ದರಿಂದ ದಾಟುವಿನ ಸಂಸ್ಕೃತಾನುವಾದ ಮಾಡುವ ಅವಕಾಶ ನನಗೆ ದೊರಕಿತ್ತು.2016ರಲ್ಲಿ ಅದೂ ಪ್ರಕಾಶಿತವಾಯ್ತು.
ಅನುವಾದವೆಂದರೆ ಒಂದು ಭಾಷೆಯಲ್ಲಿ ಬರೆದಿರುವ ವಾಕ್ಯಗಳನ್ನು ಮತ್ತೊಂದು ಭಾಷೆಯಲ್ಲಿ ಬರೆಯುವುದು ಮಾತ್ರವಲ್ಲ, ಅದೊಂದು ಪುನಃಸೃಷ್ಟಿಯೇ ಎಂಬಅಭಿಪ್ರಾಯದಲ್ಲಿ ನನ್ನದು ಪೂರ್ಣ ಸಹಮತ ಇದೆಯಾದರೂ ಅನುವಾದಕ್ಕೆ ಕುಳಿತುಕೊಂಡರೆ ಸ್ವಂತದ ಬರವಣಿಗೆ ನಿಂತೇ ಹೋಗಿಬಿಡಬಹುದು ಎಂಬ ಭಯ ಒಂದು ಹಂತದಲ್ಲಿ ಕಾಡಿದ್ದರಿಂದ ಕೆಲವು ವರ್ಷಗಳವರೆಗೆ ಅನುವಾದ ಕಾರ್ಯವನ್ನು ಸಂಪೂರ್ಣ ಕೈಬಿಟ್ಟಿದ್ದೆ.
ಈ ನಡುವೆ ೨೦೧೭ರಲ್ಲಿ ಭೈರಪ್ಪನವರ ಉತ್ತರಕಾಂಡ ಪ್ರಕಟವಾಯ್ತು. ಭರಾಟೆಯಿಂದ ಅದರ ಪ್ರತಿಗಳು ಮಾರಾಟವಾದವು. ಮತ್ತೆ ಮತ್ತೆ ಮರುಮುದ್ರಣಗಳಾದವು. ಬೇರೆ ಭಾಷೆಗಳಿಗೆ ಅನುವಾದವೂ ಆಯ್ತು. ನಾನೂ ಮೊದಲ ದಿನವೇ ಪ್ರತಿಯನ್ನು ಕೊಂಡು ತಂದು ಓದಿದ್ದೆ ನಾದರೂ ಅದರ ಅನುವಾದ ಮಾಡಬೇಕೆಂದು ಅಂದು ಕೊಂಡಿರಲಿಲ್ಲ. ಹೀಗಿರುವಾಗ ಒಮ್ಮೆ ಭೈರಪ್ಪನವರೊಂದಿಗೆ ಮಾತನಾಡುತ್ತಿದ್ದಾಗ ‘ಉತ್ತರಕಾಂಡದ್ದೂ ಸಂಸ್ಕೃತ ಅನುವಾದ ಮಾಡಬಹುದು’ ಎಂದು ಅವರು ತಮ್ಮ ಅಪೇಕ್ಷೆ ಯನ್ನು ಸೂಚ್ಯವಾಗಿ ತಿಳಿಸಿದ್ದರು.
ಆಗ ನಾವು ‘ಆಗಬಹುದು, ಸಂಸ್ಕೃತ ಭಾರತಿಯ ಪರವಾಗಿ ಅದರ ಅನುವಾದ ಮಾಡಿಸಿ ಪ್ರಕಾಶಿಸೋಣ’ ಎಂದು ಹೇಳಿಬಿಟ್ಟೆವು. ಆದರೆ ಅನುವಾದ ಮಾಡು ವವರು ಯಾರು? ಎಂಬ ಪ್ರಶ್ನೆಗೆ ಉತ್ತರ ಹೊಳೆದಿರಲಿಲ್ಲ. ಅದರ ಮಧ್ಯದಲ್ಲಿ ಕನ್ನಡದಿಂದ ಸಂಸ್ಕೃತಕ್ಕೆ ಅನುವಾದ ಮಾಡಿ ಅನುಭವವೂ ಇದ್ದ ನಮ್ಮ ಕಾರ್ಯ ಕರ್ತ ಬಂಧುವೊಬ್ಬರಿಗೆ ಈ ಕಾರ್ಯ ವಹಿಸಲಾಯಿತು. ಅನುವಾದಕಾರ್ಯವೂ ನಡೆದಿತ್ತು. ಆದರೆ ಆ ವಿದ್ವಾಂಸರಿಗೆ ಕಾರ್ಯ ಒತ್ತಡದಿಂದ ಅನುವಾದಮುಂದುವರಿಸಲಾಗಲೇ ಇಲ್ಲ. ಇನ್ಯಾರನ್ನು ನಿಯೋಜಿಸೋಣ ? ಎಂಬ ಪ್ರಶ್ನೆ ಮತ್ತೆ ಎದುರಾಯ್ತು.
ಆ ದಿನಗಳಲ್ಲೇ ವಕ್ಕರಿಸಿದ್ದು ಕೊರೋನಾ ಮಹಾಮಾರಿ. ಅದರಫಲವಾಗಿನಮ್ಮ ಅನೇಕ ನೇರ ಚಟುವಟಿಕೆಗಳು ಬಂದ್ ಆದವು. ಸ್ವಭಾವತಃ ಜಂಗಮರಾಗಿದ್ದ ನಮ್ಮಂಥ ಕಾರ್ಯಕರ್ತರೆಲ್ಲ ಅನಿವಾರ್ಯವಾಗಿ ಎಂಬಂತೆ ಸ್ಥಾವರ ಗಳಾಗಿಬಿಟ್ಟೆವು. ಕೆಲಸ ಮಾಡುವುದೇನೇ ಇದ್ದರೂ ಅದನ್ನು ಮನೆಯಿಂದಲೇ ಮಾಡಬೇಕಾಗಿ ಬಂದದ್ದರಿಂದ ಕೆಲಸದ ಸ್ವರೂಪದಲ್ಲೇ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡೆವು. ಆದರೂ ಒಂದಷ್ಟು ಸಮಯ ಉಳಿ ಯುತ್ತಿತ್ತು. ಸಹಜವಾಗಿ ಓದಿಗೆ, ಬರವಣಿಗೆಗೆ ಹೆಚ್ಚಿನ ಅವಕಾಶ ಸಿಕ್ಕಿತು. ಅದನ್ನೇ ಮಾಡತೊಡಗಿದೆವು. ಮತ್ತೆ ಒಂದಿಷ್ಟು ಅನುವಾದದ ಕೆಲಸವನ್ನೇ ಕೈಗೆತ್ತಿಕೊಂಡೆ. ನಾನೇ ಕನ್ನಡಭಾಷೆಯಲ್ಲಿ ಬರೆದಿದ್ದ ಎರಡು ಕಾದಂಬರಿಗಳ ಅನುವಾದವನ್ನು ಈ ಸಮಯದಲ್ಲಿ ಮಾಡಿ ಮುಗಿಸಿದೆ.
(ಮೂಲಂ, ಸಂಘಂ ಶರಣಂ ಗಚ್ಛಾಮಿ) ಅವುಗಳ ಪ್ರಕಾಶನವೂ ಆಯ್ತು. ಅನುವಾದ ಮಾಡತೊಡಗಿದರೆ ಸ್ವಂತದ ಬರವಣಿಗೆ ನಿಂತು ಹೋಗುತ್ತೆ ಎಂಬ ಪಿಳ್ಳೆ ನೆವ ಸ್ವಲ್ಪ ಕಾಡಿದ್ದು ಸುಳ್ಳಲ್ಲ. ಆದರೆ ಕೊನೆಗೂ ನಾನೇ ಮಾಡುತ್ತೇನೆ ಎಂದು ತೀರ್ಮಾನ ಮಾಡಿ ಶುರುಮಾಡಿಯೇ ಬಿಟ್ಟೆ. ಹತ್ತೋ, ಹದಿನೈದೋ ಪುಟಗಳ ಅನುವಾದ ಮುಗಿದ ಮೇಲೆ ಒಮ್ಮೆ ದೂರವಾಣಿಯ ಮೂಲಕ ಭೈರಪ್ಪನವರಿಗೆ ವಿಷಯ ತಿಳಿಸಿದೆ. ‘ನಾನೇ ಮಾಡಬೇಕಾಗಿ ಬಂತು, ಆರಂಭ ಮಾಡಿದ್ದೇನೆ’ ಎಂದೂ ತಿಳಿಸಿದೆ. ‘ಬಹಳ ಸಂತೋಷ. ನೀವೇ ಮಾಡಿ’ ಎಂದು ಅವರೂ ಹರಸಿದರು.
ಕೆಲಸ ಮುಂದುವರಿಯಿತು ಮೂಲ ವಾಲ್ಮೀಕಿ ರಾಮಾಯಣವನ್ನು ಮಹಾಮಹೋಪಾಧ್ಯಾಯ ರಂಗನಾಥಶರ್ಮರ ಕನ್ನಡ ಅನುವಾದದ ಜತೆಗೆ ಕನಿಷ್ಠ ಪಾರಾ ಯಣದ ರೂಪದಲ್ಲಾದರೂ ಏಳೆಂಟು ಸಲ ಓದಿದ್ದ ಸಂಸ್ಕಾರವಿದ್ದುದರಿಂದ ಈ ಉತ್ತರಕಾಂಡದ ಅನೇಕ ಸನ್ನಿವೇಶಗಳು ನನ್ನ ಮಟ್ಟಿಗೆ ತೊಡಕಾಗಿ ಕಾಣಿಸಿ ಕೊಂಡವು. ಅನೇಕ ಸಂದರ್ಭಗಳಲ್ಲಿ ಭೈರಪ್ಪನವರು ವಾಲ್ಮೀಕಿಯ ಅಂತರಂಗವನ್ನು ನೂರಕ್ಕೆ ನೂರರಷ್ಟು ಗ್ರಹಿಸಿರುವಂತೆ ಕಂಡುಬಂದರೂ ಕೆಲವು ಪ್ರಸಂಗ ಗಳಲ್ಲಿ ವಿಸಂಗತಿ ಕಾಣಿಸಿಕೊಳ್ಳುವುದು ಯಾಕೆ? ಉದಾಹರಣೆಗೆ ವನವಾಸಕ್ಕೆ ತೆರಳಿದ್ದ ರಾಮನನ್ನು ಅಯೋಧ್ಯೆಗೆ ಹಿಂದೆ ಕರೆತರುವ ಉದ್ದೇಶದಿಂದ ಭರತನು ರಾಮನಿದ್ದಲ್ಲಿಗೆ ಹೋದಾಗ ಅವನೊಂದಿಗೆ ಕೌಸಲ್ಯೆ, ಸುಮಿತ್ರೆಯರ ಜತೆಗೆ ಕೈಕೇಯಿಯೂ ಹೋಗಿದ್ದಳೆಂದು ವಾಲ್ಮೀಕಿ ರಾಮಾಯಣದಲ್ಲಿ ಸ್ಪಷ್ಟ ಉಲ್ಲೇಖವಿದೆ.
ಉತ್ತರಕಾಂಡದಲ್ಲಿ ಕೈಕೇಯಿ ಹೋಗುವುದಿಲ್ಲ. ಅಯೋಧ್ಯೆಯಲ್ಲೇ ಉಳಿದಿರುತ್ತಾಳೆ. ಈ ಬಗ್ಗೆ ವಿಚಾರಿಸಿದಾಗ ‘ಇಂಥ ಕೆಲವು ಬದಲಾವಣೆಗಳನ್ನು ನಾನುಬುದ್ಧಿಪೂರ್ವಕವಾಗಿಯೇ ಮಾಡಿಕೊಂಡಿದ್ದೇನೆ. ಅದರಿಂದ ರಸಪರಿ ಪೋಷಣೆ ಸಾಧ್ಯವಾಗುತ್ತೆ’ ಎಂಬುದು ನನ್ನ ಅನುಭವ ಎಂದು ಭೈರಪ್ಪನವರು ಸಮಝಾಯಿಷಿಕೊಟ್ಟ ಮೇಲೇ ನನಗೆ ಸಮಾಧಾನವಾಗಿತ್ತು. ಇನ್ನು ಅಮಾನುಷ ಅಥವಾ ಅತಿಮಾನುಷ ಎನ್ನಬಹುದಾದ ಪ್ರತಿಯೊಂದು ಪ್ರಸಂಗವನ್ನೂ ಭೈರಪ್ಪನವರು ಇಲ್ಲಿನಿರ್ದಾಕ್ಷಿಣ್ಯವಾಗಿ ಮಾನುಷೀಕರಣ ಗೊಳಿಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಸೀತೆಯ ಅಪಹರಣದ ಪ್ರಕ್ರಿಯೆಯಲ್ಲಿ ರಾವಣ ನೇರವಾಗಿ ಭಾಗವಹಿಸು ವುದೇಇಲ್ಲ ! ಅವನ ಸೇವಕರಾದ ಕೆಲವು ರಾಕ್ಷಸರು ಸೀತೆಯನ್ನು ಹೊತ್ತು ತರುತ್ತಾರೆ. ಇನ್ನು ಸಮುದ್ರಕ್ಕೆ ಸೇತುವೆ ಕಟ್ಟುವುದಂತೂ ಇಲ್ಲವೇ ಇಲ್ಲ. ಪುಷ್ಪಕವಿಮಾನವೂ ಇಲ್ಲ.
ಇಷ್ಟಾದರೂ ಭೈರಪ್ಪನವರು ಮಾಡಿಕೊಂಡಿರುವ ಕೆಲವು ಬದಲಾವಣೆಗಳು ಓದುಗನಿಗೆ ಆಪ್ಯಾಯಮಾನವೆನಿಸಿ ಬಿಡುತ್ತವೆ. ಉದಾಹರಣೆಗೆ ಸೀತೆಯನ್ನು ಹುಟ್ಟಿನಿಂದ ವಕ್ಕಲಿಗರ ಹೆಣ್ಣನ್ನಾಗಿಸುವ ಅವರು ಅದರ ಸಮರ್ಥನೆ ಗಾಗಿ ಅಲ್ಲಲ್ಲಿ ಕಟ್ಟಿಕೊಡುವ ಸೀತೆಯ ಮಣ್ಣಿನ ಪ್ರೀತಿ, ಕೃಷಿಯ ಹಂಬಲ, ಸ್ವತಃ ನೇಗಿಲನ್ನು ಹಿಡಿದು ಉಳುವ ಪ್ರವೃತ್ತಿ, ಕೊನೆಗೆ ಅವಳನ್ನು ನೇಗಿಲಿನ ಗೆರೆಯ ಮೇಲೆ ಮಣ್ಣಿಗೆ ಮರಳಿಸುವಿಕೆ ಇವೆಲ್ಲ ಇನ್ನಷ್ಟು ಸಹಜವನ್ನಾಗಿಸುತ್ತವೆ. ವಾಲ್ಮೀಕಿ ರಾಮಾಯಣ ದಲ್ಲಿ ತೀರಾ ಗೌಣಪಾತ್ರವಾಗಿ ಕಾಣಿಸಿಕೊಳ್ಳುವ ಊರ್ಮಿಳೆ ಇಲ್ಲಿ ಮೈ ಕೈ ತುಂಬಿಕೊಂಡು ದಷ್ಟಪುಷ್ಟವಾಗಿ ಕಾಣಿಸಿಕೊಳ್ಳುತ್ತಾಳೆ.
ಅಲ್ಲಿ ಮೌನಿನಿಯೇ ಆಗಿರುವ ಅವಳು ಇಲ್ಲಿ ವಾಚಾಳಿಯಾಗಿ ಬಿಡುತ್ತಾಳೆ. ವಾಚಾಳಿಯಂತೆ ಚಿತ್ರಿತವಾಗಿದ್ದರೂ ಹೆಣ್ಣಿನ ಸಹಜ ಪಾತ್ರವಾಗಿ ವ್ಯಕ್ತಿತ್ವ ಓದುಗರ ಮನ ಗೆದ್ದು ಬಿಡುತ್ತದೆ. ಲಕ್ಷ್ಮಣನ ಪಾತ್ರವಂತೂ ಆರಂಭದಿಂದ ಕೊನೆಯವರೆಗೆ ಅದೇ ಬಿಗುವಿನಲ್ಲಿದೆ. ಆದರೆ ರಾಮಾಯಣದ ಮುಖ್ಯಭಾಗಗಳಲ್ಲೊಂದಾದ, ಭಾವುಕ ರಿಗೂ ಸಾಮಾನ್ಯ ಓದುಗರಿಗೂ ಅತ್ಯಂತ ಸಂತೋಷ ಕೊಡುವ ಸುಂದರಕಾಂಡ ಇಲ್ಲಿ ಸಂಪೂರ್ಣ ಗೌಣವಾಗಿದೆ. ಹನುಮಂತನಂತೂ ರಾಮನ ಬಳಿ ವೇದಾಧ್ಯ ಯನಕ್ಕೆ ನಿಂತ ಓರ್ವ ಬ್ರಹ್ಮಚಾರಿ. ಸೀತೆಯ ಬಳಿ ಮಾತನಾಡುವಾಗ ಅವನು ತನ್ನ ಪರಿಚಯ ಹೇಳಿಕೊಳ್ಳುತ್ತ ‘ಹನುಮಂತ ನಮ್ಮ ಕುಲದೇವರು’ ಎನ್ನುತ್ತಾನೆ. ಹನುಮಂತನೇ ಈ ಮಾತು ಹೇಳಲು ಹೇಗೆ ಸಾಧ್ಯ? ಎಂದು ಸಂಶಯವಾಗಿ ಮತ್ತೆ ಭೈರಪ್ಪನವರನ್ನೇ ಕೇಳಿದೆ.
‘ಕುಲದೇವರು ಅನ್ನೋದು ಹೌದು. ಕುಲದೇವರ ಹೆಸರನ್ನು ಆ ಕುಲದಲ್ಲಿ ಮುಂದೆ ಬಂದವರಿಗೂ ಇಡೋ ಕ್ರಮ ಇದ್ದೇ ಇದೆ. ಕುಲದೇವ ಹನುಮಂತ ಬೇರೆ. ಈ ಹನುಮಂತ ಬೇರೆಯೇ’ ಎಂದು ಭೈರಪ್ಪನವರು ತಿಳಿಸಿದ ಮೇಲಷ್ಟೇ ನನ್ನ ಮಂಕುಮತಿಗೆ ಅದು ಅರ್ಥವಾಗಿದ್ದು. ಇಂಥ ಕೆಲವು ಪ್ರಸಂಗಗಳಲ್ಲಿ ನನಗೆ ಸಂದೇಹ ಗಳೂ, ವಿಪ್ರತಿಪತ್ತಿಗಳೂ ಅನಂಗೀಕಾರಗಳೂ ಇದ್ದರೂ ಆಗಾಗ್ಗೆ ಭೈರಪ್ಪನವರೊಂದಿಗೆ ಮಾತನಾಡಿ ಅವರ ಅಭಿಪ್ರಾಯವನ್ನು ಸ್ಪಷ್ಟಪಡಿಸಿಕೊಂಡಿದ್ದರಿಂದ ಮನಃಕ್ಲೇಶವಿಲ್ಲದೆ ಅನುವಾದ ಕಾರ್ಯ ಮುಂದುವರೆಯಿತು.
ಭೈರಪ್ಪನವರು ಎಷ್ಟೇ ಬದಲಾವಣೆಗಳನ್ನು ಮಾಡಿಕೊಂಡಿರಲಿ, ರಾಮನ ಪಾತ್ರಕ್ಕಿಂತ ಸೀತೆಯ ಪಾತ್ರವನ್ನೇ ಮಿಗಿಲಾಗಿಸಿ ರಾಮಾಯಣವನ್ನು ಸೀತಾಯನವನ್ನಾಗಿ ಪರಿವರ್ತಿಸಿಕೊಂಡಿದ್ದಿರಲಿ, ಕಥನಕ್ರಿಯೆಯಲ್ಲಿ ಪ್ರಜ್ಞಾಪ್ರವಾಹ ತಂತ್ರವನ್ನು ಬಳಸಿಕೊಂಡಿದ್ದಿರಲಿ, ಏನೇ ಆದರೂ ಮೂಲಕಾವ್ಯದ ಪ್ರಬಂಧರಸ ಮುಕ್ಕಾಗಿಲ್ಲ ಎಂಬುದರಲ್ಲಿ ಮಾತ್ರ ಸಂಶಯವೇ ಇಲ್ಲ. ರಾಮಾಯಣದ ಪ್ರಬಂಧರಸ ಕರುಣರಸವೇ ಎಂಬುದು ಆನಂದವರ್ಧನನೇ ಮೊದಲಾದ ಆಲಂಕಾರಿಕರೆಲ್ಲರ ಒಕ್ಕೊರಲಿನ ಅಭಿಮತ. ಈ ಕಾದಂಬರಿಯ ಕೊನೆಯ ಮೂರು ಪುಟಗಳಲ್ಲಿ ನಿರೂಪಿಸುತ್ತಿರುವುದು ಯಾರು ಎಂಬ ಬಗ್ಗೆ ಒಂದಿಷ್ಟು ಗೊಂದಲವಾಗುವಂತೆಇರುವುದೂ ನಿಜವೇ. ಇಂಗ್ಲಿಷ್ ಅನುವಾದ ಮಾಡಿದವರಿಗೂ ಈ ಸಂಶಯ ಕಾಡಿ (ರಶ್ಮಿ ತೇರದಾಳ) ಓದುಗರಿಗೆ ಗೊಂದಲ ಬೇಡವೆಂದು ಅವರು ಕೊನೆಗೆ ಭೈರಪ್ಪನವರ ಅನುಮತಿಯನ್ನು ಪಡೆದು ಅದಕ್ಕೆ ಮೊದಲು ನಿರೂಪಿಸುವವರ ಹೆಸರನ್ನೇ ಸೂಚಿಸಿದ್ದಾರೆ.
ಅದನ್ನೇ ಅನುಸರಿಸಿ ಸಂಸ್ಕೃತದಲ್ಲೂ ತಾರಕೇಶ್ವರ ಉಪಾಧ್ಯಾಯಃ ಉವಾಚ – ಎಂದು ಸೇರಿಸಲಾಗಿದೆ. ಕನ್ನಡ ಮೂಲವಿರಲಿ, ಯಾವುದೇ ಭಾಷೆಯಲ್ಲಿ ಮಾಡಿದ ಅನುವಾದವೇ ಆಗಿರಲಿ, ಕೊನೆಯ ಈ ಮೂರು ಪುಟಗಳನ್ನು ಓದಿ ಮುಗಿಸಿದ ಮೇಲೆ ಓದುಗನ ಕಣ್ಣಾಲಿ ತುಂಬಿಕೊಂಡು ಹನಿಯಷ್ಟಾದರೂ ಕಣ್ಣೀರು ಜಿನುಗದಿದ್ದರೆ ಆತನ ಸಹೃದಯತೆಯ ಬಗೆಗೇ ನನಗೆ ಸಂಶಯ ಉಳಿದುಕೊಂಡು ಬಿಡುತ್ತದೆ. ನನ್ನ ತರುಣ ವಿದ್ವನ್ಮಿತ್ರರೊಬ್ಬರು ಗುರುತಿಸಿರುವಂತೆ ವ್ಯಾಸರು ಸಂಸ್ಕೃತದಲ್ಲಿ ಬರೆದ ಮಹಾಭಾರತ ಭೈರಪ್ಪನವರಿಂದ ಕನ್ನಡದಲ್ಲಿ ಪರ್ವವಾಗಿ, ಮತ್ತೆ ಅಲ್ಲಿಂದ ಸಂಸ್ಕೃತಕ್ಕೆ ಅನುವಾದಗೊಂಡಿದ್ದು ಒಂದು ವಿಲಕ್ಷಣ ಪ್ರಸಂಗ ವಂತೆ.
ಅದೇ ರೀತಿಯಲ್ಲೇ ವಾಲ್ಮೀಕಿ ಸಂಸ್ಕೃತದಲ್ಲಿ ಬರೆದ ರಾಮಾಯಣ ಭೈರಪ್ಪನವರಿಂದ ಕನ್ನಡದಲ್ಲಿ ಉತ್ತರಕಾಂಡವಾಗಿ ಮತ್ತೆ ಅಲ್ಲಿಂದ ಸಂಸ್ಕೃತಕ್ಕೆ ಅನುವಾದ ಗೊಂಡಿರುವುದೂ ಮತ್ತೊಂದು ವಿಲಕ್ಷಣ ಪ್ರಸಂಗವೇ ಹೌದು. ಎರಡೂ ಪ್ರಸಂಗಗಳಲ್ಲೂ ನಾನೊಂದು ನಿಮಿತ್ತಮಾತ್ರವಾಗಿದ್ದು ನನ್ನ ಭಾಗ್ಯವೇ ಇರಬಹುದೆಂದು ನಾನು ಅಂದುಕೊಳ್ಳುವೆ. ಅದಕ್ಕೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸದಿದ್ದರೆ ಕೃತಘ್ನನಾದೇನು ಎಂಬ ಅರಿವು ನನಗಿದೆ. ಹಾಗೆಂದು ಅವರೆಲ್ಲರಿಗೂ ನಮನ ಗಳನ್ನು ಅರ್ಪಿಸುತ್ತಿದ್ದೇನೆ.