ವಾಹ್…ವಾಹ್‌…ಪ್ರೇಮ್‌ಜಿ !
ವಿದೇಶವಾಸಿ
ಕಿರಣ್ ಉಪಾಧ್ಯಾಯ ಬಹ್ರೈನ್
@.
ಕೆಲವರು ಇವರನ್ನು ‘ಜಿಪುಣ ಶ್ರೀಮಂತ’ ಎಂದರೆ ಇನ್ನು ಕೆಲವರು ‘ಲೆಕ್ಕಾಚಾರದ ಶ್ರೀಮಂತ’ ಮತ್ತೆ ಕೆಲವರು ’ವ್ಯವಹಾರಸ್ಥ ಶ್ರೀಮಂತ’ ಎನ್ನುತ್ತಾರೆ. ಅಷ್ಟು ದೊಡ್ಡ ಸಂಸ್ಥೆಯಕೋಟ್ಯಾಧಿಪತಿಒಡೆಯನೊಬ್ಬ ಜಿಪುಣನಾಗಲು ಸಾಧ್ಯವೇ? ಒಬ್ಬ ಉದ್ಯಮಿ ಜಿಪುಣನೋ, ಲೆಕ್ಕಾಚಾರಸ್ಥನೋ ಅಥವಾ ವ್ಯವಹಾರಸ್ಥನೋಆಗಿರುವುದು ತಪ್ಪು ಎಂದು ಯಾವ ಕಾನೂನೂ ಹೇಳುವುದಿಲ್ಲ.
ಬದಲಾಗಿ, ಲೆಕ್ಕಾಚಾರ ಗೊತ್ತಿಲ್ಲದವ, ವ್ಯವಹಾರ ಬಾರದವ ಯಶಸ್ವೀ ಉದ್ಯಮಿ ಆಗಲಾರ ಎನ್ನುವುದು ಸತ್ಯ. ವಾಸ್ತವ ಏನೆಂದರೆ, ಉದ್ಯಮದ ಮೂಲ ಧಾತುವೇ ಲೆಕ್ಕಾಚಾರ, ವ್ಯವಹಾರ. ಇದು ಉದ್ಯಮಕ್ಕೆ ಸಂಬಂಧಪಟ್ಟ ವಿಷಯವಾದರೆ, ಜಿಪುಣ, ಶ್ರೀಮಂತಿಕೆ ಎನ್ನುವುದು ವ್ಯಕ್ತಿಗೆ ಸಂಬಂಧಿಸಿದ ವಿಷಯ. ಇಂದುಪ್ರಪಂಚದಾದ್ಯಂತ ವ್ಯಕ್ತಿಯ ಶ್ರೀಮಂತಿಕೆಯನ್ನು ಹಣದಿಂದ ಅಳೆಯುವವರೇ ಹೆಚ್ಚು. ಆದರೆ ಅದಕ್ಕಿಂತಲೂ ದೊಡ್ಡದಾದ ಶ್ರೀಮಂತಿಕೆ ಒಂದಿದೆ. ಅದು ಹೃದಯ ಶ್ರೀಮಂತಿಕೆ. ಅಂಥವರಲ್ಲಿ ಅಜಿಮ್ ಪ್ರೇಮ್‌ಜಿ ಒಬ್ಬರು. ಅಷ್ಟೇ ಅಲ್ಲ, ಇವರು ಕಳೆದ ಎರಡು ವರ್ಷದಿಂದ, ಭಾರತದಲ್ಲಿ ಈ ಪಟ್ಟಿಯಲ್ಲಿರುವ ಮೊದಲಿಗರೂ ಹೌದು. ಅವರು ಜಿಪುಣರೂ ಹೌದು, ಅವರ ಜಿಪುಣತನ ಒಳ್ಳೆಯದೂ ಹೌದು!
ಮೊನ್ನೆ ಎಡೆಲ್‌ಗಿವ್ ಹುರುನ್ ಸಂಸ್ಥೆ 2021 ನೇ ಸಾಲಿನ ಫಿಲಾಂತ್ರಫಿ ಲಿಸ್ಟ್ ಬಿಡುಗಡೆ ಮಾಡಿತು. ಕಳೆದ ನೂರಕ್ಕೂ ಹೆಚ್ಚು ವರ್ಷದಿಂದ ಈ ಸಂಸ್ಥೆ ವಿಶ್ವ ದಾದ್ಯಂತ ಮತ್ತು ಬೇರೆ ಬೇರೆ ದೇಶಗಳಲ್ಲಿ ಪರೋಪಕಾರ ಮಾಡಿದ ದಾನಿಗಳ ಪಟ್ಟಿ ಮಾಡುತ್ತಿದೆ. ಈ ವರ್ಷ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವವರು ಅಜಿಮ್ ಪ್ರೇಮ್‌ಜಿ. ಕಳೆದ ವರ್ಷ ಪ್ರತಿನಿತ್ಯ ಇಪ್ಪತ್ತೆರಡು ಕೋಟಿ ರುಪಾಯಿ ದಾನ ಮಾಡಿ ಮೊದಲನೆಯ ಸ್ಥಾನದಲ್ಲಿದ್ದ ಪ್ರೇಮ್‌ಜಿ ಈ ವರ್ಷ ಪ್ರತಿನಿತ್ಯ ಇಪ್ಪತ್ತೇಳು ಕೋಟಿ ರುಪಾಯಿ ದಾನ ಮಾಡಿದ್ದಾರೆ.
ಒಮ್ಮೆ ಚಿವುಟಿ ನೋಡಿಕೊಂಡು ಓದಿ. ಸರಿಯಾಗೇ ಇದೆ, ಪ್ರತಿನಿತ್ಯ ಇಪ್ಪತ್ತೇಳು ಕೋಟಿ ರೂಪಾಯಿ! ಈ ಜಿಪುಣ ಉದ್ಯಮಿ, ಭಾರತದ ಉದಾರಿ ಉದ್ಯಮಿಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನ ಅಲಂಕರಿಸಿದ್ದಾರೆ. ಉದ್ಯಮಿಗಳಾದ ಶಿವ್ ನಡಾರ್, ಮುಖೇಶ್ ಅಂಬಾನಿ, ಕುಮಾರಮಂಗಲಮ್ ಬಿರ್ಲಾ ಕ್ರಮವಾಗಿ ಎರಡ ರಿಂದ ನಾಲ್ಕನೆಯ ಸ್ಥಾನದಲ್ಲಿದ್ದರೆ, ಕರ್ನಾಟಕದ ನಂದನ್ ನೀಲೆಕಣಿ ಐದನೆಯ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ ಎಂಟನೆಯ ಸ್ಥಾನದಲ್ಲಿದ್ದಾರೆ.ವಿಶ್ವದಾದ್ಯಂತ ಇರುವ ಉದಾರ ದಾನಿಗಳ ಪಟ್ಟಿ ನೋಡುವುದಾದರೆ, ಸುಮಾರು ಐವತ್ತು ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ದೇಣಿಗೆ ನೀಡಿದ ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಷನ್ ಮೊದಲನೆಯ ಸ್ಥಾನದಲ್ಲಿದೆ.
ಎರಡು, ಮೂರು ಮತ್ತು ನಾಲ್ಕನೆಯ ಸ್ಥಾನದಲ್ಲಿ ಕ್ರಮವಾಗಿ, ಐಕಿಯಾ ಫೌಂಡೇಶನ್, ವೆಲ್ಕಮ್ ಟ್ರಸ್ಟ್, ಹೋವರ್ಡ್ ಹ್ಯೂಸ್ ಮೆಡಿಕಲ್ ಇನ್ಸ್ಟೀಟ್ಯೂಟ್ ಸಂಸ್ಥೆಗಳಿವೆ. ಐದನೆಯ ಸ್ಥಾನದಲ್ಲಿ ಸುಮಾರು ಇಪ್ಪತ್ತೆರಡು ಬಿಲಿಯನ್ ಡಾಲರ್ ಗಿಂತಲೂ ಅಧಿಕ ಮೊತ್ತವನ್ನು ದಾನ ಮಾಡಿದ ಅಜಿಮ್ ಪ್ರೇಮ್‌ಜಿ ಫೌಂಡೇಷನ್ ಇದೆ. ಎಡೆಲ್ ಗಿವ್ ಹುರುನ್ ಸಂಸ್ಥೆಯ ಪ್ರಕಾರ, ಕಳೆದ ನೂರು ವರ್ಷಗಳ ಇತಿಹಾಸದಲ್ಲಿ, ವಿಶ್ವದಾದ್ಯಂತ ಇರುವ ದಾನಿಗಳಲ್ಲಿ, ನೂರ ಎರಡು ಬಿಲಿಯನ್ ಡಾಲರ್ ದೇಣಿಗೆ ನೀಡಿ, ಮೊದಲ ಸ್ಥಾನದಲ್ಲಿರುವುದು ಟಾಟಾ ಮನೆತನ. ಕಳೆದ ನೂರ ಮೂವತ್ತು ವರ್ಷಗಳಿಂದಲೂ ದೇಣಿಗೆ ನೀಡುತ್ತಿರುವ ಈ ಮನೆತನದವರು ಭಾರತೀಯರು ಎನ್ನುವುದು ಹೆಮ್ಮೆ ಪಡಬೇಕಾದ ಸಂಗತಿ.
ದಾನ ಎನ್ನುವುದು ಭಾರತೀಯರಿಗೆ ಹೊಸತಲ್ಲ. ಅದು ತಲೆತಲಾಂತರಗಳಿಂದಲೂ ಸಹಜವಾಗಿ ಬಂದದ್ದು. ವೃತಾಸುರನ ವಧೆಗೆ ವಜ್ರಾಯುಧ ತಯಾರಿಸಲು ತನ್ನ ಬೆನ್ನು ಮೂಳೆ ನೀಡಿದ ದಧಿಚಿ ಮಹರ್ಷಿ, ಪಾರಿವಾಳದ ಪ್ರಾಣ ಉಳಿಸಲು ತನ್ನ ತೊಡೆಯ ಮಾಂಸವನ್ನು ನೀಡಿದ ಶಿಬಿ ಚಕ್ರವರ್ತಿ, ಮಹಾಭಾರತದ ಕರ್ಣ ಮೊದಲಾದವರೆಲ್ಲ ದಾನಕ್ಕೆ ಹೆಸರಾದವರು. ಭಾರತೀಯ ಸೇನೆ ನೀಡುವ ಪರಮವೀರ ಚಕ್ರದಲ್ಲಿರುವ ವಜ್ರಾಯುಧದ ಲಾಂಛನ ಅದೇ ತ್ಯಾಗದ ದ್ಯೋತಕ. ಇಂಥವರ ಕಥೆಗಳನ್ನು ಕೇಳಿ, ಓದಿ ಬೆಳೆದವರು ನಾವಾದುದ್ದರಿಂದ ದಾನದ ಕುರಿತು ನಮಗೆ ಹೆಚ್ಚೇನೂ ಹೇಳಬೇಕಿಲ್ಲ. ಅಂದಿನಿಂದ ಇಂದಿನವರೆಗೂ ಇದು ಮುಂದುವರಿಯುತ್ತಲೇ ಇದೆ.
ದಿನ ಕಳೆದಂತೆ, ಸಮಯ ಸಂದರ್ಭಕ್ಕೆ ತಕ್ಕಂತೆ ವಿಧಾನ, ಸಾಧನ ಬೇರೆಯಾಗಿರಬಹುದು ಆದರೆ ಧಾತು ಒಂದೇ. ದಾನಿಗಳ ಪಟ್ಟಿಯಲ್ಲಿ ಆಗಾಗ ಒಂದಿಷ್ಟು ಹೆಸರುಗಳು ಸೇರಿಕೊಳ್ಳುತ್ತಲೇ ಇರುತ್ತದೆ. ಅಂತಹ ಹೆಸರುಗಳಲ್ಲಿ ಅಜಿಮ್ ಪ್ರೇಮ್‌ಜಿ ಹೆಸರೂ ಸೇರಿದೆ. ಅವರು ಮೊದಲಿನಿಂದಲೂ ದೇಣಿಗೆ ನೀಡುವುದಕ್ಕೆ ಒಲವು ತೋರಿಸಿದವರು, ದೇಣಿಗೆ ನೀಡುತ್ತಲೇ ಬಂದವರು. ಕಳೆದ ಎರಡು ದಶಕದಿಂದ ಅದು ರಾಕೆಟ್ ವೇಗದಲ್ಲಿ ಮುನ್ನಡೆಯುತ್ತಿದೆ. ಅಂಥವರು ಜಿಪುಣ ಎಂದರೆ ನಂಬಬೇಕೆ? ಅದು ಎರಡನೆಯ ಪ್ರಶ್ನೆ. ಪ್ರೇಮ್‌ಜಿ ಮತ್ತು ವಿಪ್ರೋ ಸಂಸ್ಥೆಯ ಕುರಿತು ನಮಗೆಷ್ಟು ಗೊತ್ತು ಎನ್ನುವುದು ಮೊದಲನೆಯ ಪ್ರಶ್ನೆ.
ಅಜಿಮ್ ಹುಟ್ಟಿದ್ದು 1945 ರಲ್ಲಿ, ಮುಂಬೈನಲ್ಲಿ. ಅವರ ತಾಯಿ ವೈದ್ಯರಾಗಿದ್ದು, ಸಾಕಷ್ಟು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದವರು. ತಂದೆ ಮೊಹಮ್ಮದ್ ಹಶಿಮ್ ಪ್ರೇಮ್‌ಜಿ ಉದ್ಯಮಿ. ಮಹಾರಾಷ್ಟ್ರದ ಜಲಗಾವ್ ಜಿಲ್ಲೆಯ ಅಮಲ್ನೇರ್ ಎಂಬ ಊರಿನಲ್ಲಿ, ವೆಸ್ಟರ್ನ್ ಇಂಡಿಯಾ ಪಾಮ್ ರಿಫೈನ್ಡ್ ಅಯಿಲ್ಸ್ ಹೆಸರಿನಕಾರ್ಖಾನೆ ನಡೆಸುತ್ತಿದ್ದರು. ಅವರು ತಯಾರಿಸುತ್ತಿದ್ದ ಅಡುಗೆ ಎಣ್ಣೆ, ಸಾಬೂನುಗಳು ಕ್ಯಾಮಲ, ಕಿಸಾನ್, ಸನ್ ಫ್ಲವರ್ ಹೆಸರಿನಲ್ಲಿ ಜನಪ್ರಿಯವಾಗಿದ್ದವು.
ಅಜಿಮ್ ಇಪ್ಪತ್ತೊಂದು ವರ್ಷದವರಾಗಿದ್ದಾಗ ಅವರ ತಂದೆ ತೀರಿಹೋದರು. ಅಮೆರಿಕದ ಸ್ಟ್ಯಾನ್‌ಪೋರ್ಡ್ ವಿಶ್ವವಿದ್ಯಾಲಯದಲ್ಲಿ ಇಲೆಕ್ಟ್ರಿಕಲ್ ಇಂಜನಿಯರಿಂಗ್ ಓದುತ್ತಿದ್ದ ಅಜಿಮ್ ಹಿಂತಿರುಗಿ ಬರಬೇಕಾಯಿತು. ಕೆಲವು ವರ್ಷಗಳ ನಂತರ ಅವರು ತಮ್ಮ ಇಂಜನಿಯರಿಂಗ್ ಶಿಕ್ಷಣವನ್ನು ಪೂರೈಸಿದರು. 1977 ರಲ್ಲಿ ಪ್ರೇಮ್‌ಜಿ ತಮ್ಮ ಸಂಸ್ಥೆಯ ಹೆಸರನ್ನು ವಿಪ್ರೋ ಪ್ರಾಡಕ್ಟ್ಸ್ ಲಿಮಿಟೆಡ್ ಎಂದು ಬದಲಾಯಿಸಿದರು. ಐದು ವರ್ಷದ ನಂತರ ಪುನಃ ಅದನ್ನು ವಿಪ್ರೋ ಲಿಮಿಟೆಡ್ ಎಂದು ಬದಲಾಯಿಸಿದರು. ಹೊಸತನದ ಸಂಕೇತವಾಗಿ ಹೊಳೆಯುವ ಹಳದಿ ಬಣ್ಣದ ಸೂರ್ಯಕಾಂತಿ ಹೂವಿನ ಲಾಂಛನ ಅಳವಡಿಸಿಕೊಳ್ಳಲಾಯಿತು. ಆ ಸಂದರ್ಭ ದಲ್ಲಿ ಕಂಪನಿ ‘ತುಳಸಿ’ ಮತ್ತು ‘ಜಾಸ್ಮಿನ್’ ಸಾಬೂನು ತಯಾರಿಸುತ್ತಿತ್ತು. 1982 ರ ಹೊತ್ತಿಗೆ ಸರಕಾರಿ ನಿಯಮದದ ಬದಲಾವಣೆಯಿಂದ ಕಂಪ್ಯೂಟರ್ ತಯಾರಿಸುವ ಸಂಸ್ಥೆ ‘ಐಬಿಎಮ’ ಭಾರತ ಬಿಟ್ಟು ಹೋಗಬೇಕಾಯಿತು. ಆ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡ ಪ್ರೇಮ್‌ಜಿ ಕಂಪ್ಯೂಟರ್ ವ್ಯಾಪಾರಕ್ಕಿಳಿದರು.
ವಿದೇಶದಿಂದ ಕಂಪ್ಯೂಟರ್ ಆಮದು ಮಾಡಿಕೊಂಡು ಭಾರತದಲ್ಲಿ ವಿತರಿಸುವುದರಿಂದ ಆರಂಭಿಸಿ, ಇಲ್ಲಿಯ ಸಂಸ್ಥೆಗಳಿಗೆ ತಂತ್ರಜ್ಞಾನ ಒದಗಿಸುವವರೆಗೆ ವಿಪ್ರೋ ಬೆಳೆಯಿತು. 1988 ರ ನಂತರ ವಿಪ್ರೋ ಬೇರೆ ವಸ್ತುಗಳ ಉತ್ಪಾದನೆ ಆರಂಭಿಸಿತು. ಮೊಬೈಲ್ ಮತ್ತು ಭಾರಿ ಗಾತ್ರದ ಹೈಡ್ರೋಲಿಕ್ ಸಿಲಿಂಡರ್, ಪೀಠೋ ಪಕರಣ, ಟಾಲ್ಕಮ್ ಪೌಡರ್, ಬೇಬಿ ಟಾಯ್ಲೆಟರಿ, ಫೆರೊಸೆಂಟ್ ಬಲ್ಬ್‌ಗಳು, ಅಮೆರಿಕದ ‘ಜಿಇ’ ಕಂಪನಿಯೊಂದಿಗೆ ಸೇರಿ ಆರಂಭಿಸಿದ ಆರೋಗ್ಯ ಮತ್ತುವೈದ್ಯಕೀಯಕ್ಕೆ ಸಂಬಂಧಿಸಿದ ಉಪಕರಣಗಳು ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಬಗೆಯ ಉತ್ಪಾದನೆಯಲ್ಲಿ ಸಂಸ್ಥೆ ತೊಡಗಿಸಿಕೊಂಡಿತು.
ಮೈಕ್ರೊಸಾಫ್ಟ್ನೊಂದಿಗೆ ಭಾರತದ ಪಾಲುದಾರರಾಗಿ, 2010 ರಲ್ಲಿ    ಕೂಡ ಪಡೆಯಿತು. ಇಂದು ಸಂಸ್ಥೆ ಆರು ಖಂಡಗಳ ನೂರಕ್ಕೂಹೆಚ್ಚು ದೇಶಗಳಲ್ಲಿರುವ ಆರು ನೂರಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ವಹಿವಾಟು ನಡೆಸುತ್ತಿದೆ. ಸುಮಾರು ಏಳೂವರೆ ಸಾವಿರಕ್ಕೂ ಹೆಚ್ಚು ಅಂತರ್ಜಾಲ, ಮಾಹಿತಿ ತಂತ್ರeನಕ್ಕೆ ಸಂಬಂಧಿಸಿದಂತೆ ಭದ್ರತೆ ಒದಗಿಸುತ್ತಿದೆ. ಸುಮಾರು ಎರಡು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಸಿಕೊಟ್ಟಿದೆ. ಭಾರತದ ಅತಿ ಹೆಚ್ಚು ನೌಕರರನ್ನು ಹೊಂದಿದ ಸಂಸ್ಥೆಗಳ ಪಟ್ಟಿಯಲ್ಲಿ ಒಂಬತ್ತನೆಯ ಸ್ಥಾನದಲ್ಲಿದೆ. ದೇಶದ ಅತಿ ಹೆಚ್ಚು ಒಟ್ಟೂ ಆದಾಯ ಹೊಂದಿದ ಸಂಸ್ಥೆಗಳ ಪಟ್ಟಿಯಲ್ಲಿ ಇಪ್ಪತ್ತೊಂಬತ್ತನೆಯ ಸ್ಥಾನದಲ್ಲಿದೆ.
ಇನ್ನು ಪ್ರೇಮ್‌ಜಿ ಜಿಪುಣರೇ ಎನ್ನುವ ಪ್ರಶ್ನೆಗೆ ಬರೋಣ. ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡ ದಿನಗಳಲ್ಲಿ ರಾತ್ರಿ ಊಟದ ನಂತರ ಅವರು ವಾಕ್ ಹೋಗು ತ್ತಿದ್ದರು. ಕಚೇರಿ ಮನೆಗೆ ಹತ್ತಿರವಾಗಿ ದ್ದರಿಂದ ರಾತ್ರಿಯ ನಡಿಗೆ ಕಂಪನಿಯ ಕಟ್ಟಡದ ಕಡೆಗೆ ಇರುತ್ತಿತ್ತು. ಹಾಗೆ ಹೋದಾಗ ಕಚೇರಿಯಲ್ಲಿ ಎಲ್ಲಿ ಅನಾವಶ್ಯಕ ವಿದ್ಯುತ್ ದೀಪ ಉರಿಯುತ್ತಿದೆ ಎಂದು ನೋಡಿ ಅದನ್ನೆಲ್ಲ ಆರಿಸಿ ಬರುತ್ತಿದ್ದರು. ಆ ದಿನಗಳಲ್ಲಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಕಪ್‌ನಲ್ಲಿ ಚಹಾ, ಕಾಫಿ ನೀಡಲಾಗುತ್ತಿತ್ತು. ತಮ್ಮ ಸಹೋದ್ಯೋಗಿಗಳು ಅನೇಕ ಬಾರಿ ಕಪ್ ಖಾಲಿ ಮಾಡದೆ, ಅದರಲ್ಲಿ ಪಾನೀಯ ಬಿಟ್ಟು ಹಾಳು ಮಾಡುತ್ತಿದ್ದುದನ್ನು ಗಮನಿಸಿದ ಅವರು, ಸಣ್ಣ ಗಾತ್ರದ ಕಪ್ ತರಿಸಿಟ್ಟರು. ತನ್ನ ಕಂಪನಿಯಲ್ಲಿ ಎಷ್ಟು ಟಾಯ್ಲೆಟ್ ಪೇಪರ್ ಬಳಕೆಯಾಗುತ್ತದೆ, ಎಷ್ಟು ಟಿಶ್ಯೂ ಪೇಪರ್ ಪೋಲಾಗುತ್ತದೆ, ಇತ್ಯಾದಿ ಎಲ್ಲ ಲೆಕ್ಕವೂ ಅವರ ಬಾಯ ತುದಿಯಲ್ಲಿರುತ್ತಿತ್ತು.
ಇನ್ನು ವೈಯಕ್ತಿಕವಾಗಿಯೂ ಅಷ್ಟೇ, ಎಷ್ಟೇ ದೂರದ ವಿಮಾನ ಪ್ರಯಾಣವಾದರೂ, ಅನಿವಾರ್ಯವಲ್ಲದಿದ್ದರೆ ಮೊದಲನೆಯ ದರ್ಜೆಯಲ್ಲಿ ಪ್ರಯಾಣಿಸುತ್ತಿರಲಿಲ್ಲ. ಸಾಮಾನ್ಯ ದರ್ಜೆಯಲ್ಲಿ ಕುಳಿತು ಸಾಮಾನ್ಯ ಜನರೊಂದಿಗೆ ಪ್ರಯಾಣ ಮಾಡುತ್ತಿದ್ದರು. ಮೊದಲೆಲ್ಲ ಫಿಯಟ್ ಕಾರ್ ಬಳಸುತ್ತಿದ್ದ ಅವರು ನಂತರದ ದಿನಗಳಲ್ಲಿ ಸ್ಕೋಡಾ, ಟೊಯೋಟಾ ಕೊರೊಲಾ ಕಾರ್ ಬಳಸಿದರು. ತೀರಾ ಇತ್ತೀಚೆಗೆ, ಮನೆಯವರ ಒತ್ತಾಯಕ್ಕೆ ಮಣಿದು ಮರ್ಸಿಡೀಸ್ಬೆಂಜ-ಎಸ್ ಸಿರೀಸ್ ಕಾರುಕೊಂಡುಕೊಂಡರು. ತಮ್ಮ ಹಳೆಯ ಕಾರನ್ನು ಮಾರಿ, ಬಂದ ಹಣದಿಂದ ಅಥವಾ ಅದಕ್ಕೆ ಸ್ವಲ್ಪ ಸೇರಿಸಿ ಇನ್ನೊಂದು ಕಾರು ಕೊಳ್ಳುತ್ತೇನೆ ಎನ್ನುತ್ತಿದ್ದರುಪ್ರೇಮ್‌ಜಿ. ಕಾರು ಕಂಪನಿಯ ಲೆಕ್ಕದಲ್ಲಿರದೆ, ತನ್ನ ಸ್ವಂತದ ಲೆಕ್ಕದಲ್ಲಿ ಇರಬೇಕೆಂದು ಎನ್ನುವುದು ಅವರ ಇರಾದೆಯಾಗಿತ್ತು.
ಇವೆಲ್ಲ ಜಿಪುಣತನವಾದರೆ, ಇಂತಹ ಜಿಪುಣತನ ಒಳ್ಳೆಯದೇ ಅಲ್ಲವೇ? ವಿಪ್ರೋ ಸಂಸ್ಥೆಯ ಚುಕ್ಕಾಣಿಯನ್ನು ಮಗನಿಗೆ ಹಸ್ತಾಂತರಿಸಿ ಇಂದು ಪ್ರೇಮ್‌ಜಿ ವಿಶ್ರಾಂತರಾಗಿದ್ದಾರೆ. ಅಜಿಮ್ ಪ್ರೇಮ್‌ಜಿ ಫೌಂಡೇಷನ್ ಮುಖೇನ ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಕಾರ್ಯನಿರತರಾಗಿದ್ದಾರೆ. ಭಾರತದ ಹದಿನೈದು ರಾಜ್ಯಗಳಲ್ಲಿ ಸುಮಾರು ಮೂರು ಸಾವಿರದ ಐದುನೂರಕ್ಕೂ ಹೆಚ್ಚು ಸರಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು, ಶಿಕ್ಷಕರಿಗೆ ತರಬೇತಿ ನೀಡಲು, ಮಕ್ಕಳಿಗೆಪೌಷ್ಠಿಕ ಆಹಾರ ನೀಡಲು ಮುಂದಾಗಿದ್ದಾರೆ. ಬೀದಿ ಬದಿಯಲ್ಲಿರುವ ಮಾಕ್ಕಳ, ಅಂಗಹೀನರ ಅಭಿವೃದ್ಧಿಗಾಗಿ ದುಡಿಯುವ ಸುಮಾರು ನೂರ ಐವತ್ತಕ್ಕೂ ಹೆಚ್ಚು ಸಂಸ್ಥೆಗಳಿಗೆ ಪ್ರತಿ ವರ್ಷ ಐದು ನೂರು ಕೋಟಿ ರುಪಾಯಿ ದೇಣಿಗೆ ನೀಡುತ್ತಿದ್ದಾರೆ.
ಪ್ರೇಮ್‌ಜಿ ವೃತ್ತಿಯಿಂದ ನಿವೃತ್ತರಾಗಿದ್ದಾರೆ ವಿನಃ ದಾನ ಧರ್ಮಾದಿಗಳಿಂದ ಅಲ್ಲ. ‘ದಾನ’ ಎನ್ನುವುದು ಎಲ್ಲಾ ಒಳ್ಳೆಯ ಕೆಲಸಗಳಿಗೂ ಮೂಲ ಎಂಬ ಮಾತಿದೆ. ಕಳೆದ ಕೆಲವು ತಿಂಗಳಿನಿಂದ ವುಹಾನ್ ವೈರಸ್‌ನ ಆರ್ಭಟಕ್ಕೆ ಸಿಲುಕಿ ಸಾಕಷ್ಟು ಜನ ಒದ್ದಾಡಿದ್ದಾರೆ. ಲಾಕ್‌ಡೌನ್‌ನಿಂದ ಒಂದು ಕಡೆ ವ್ಯಾಪಾರ, ವಹಿವಾಟು ಕುಂಟುತ್ತ, ತೆವಳುತ್ತ ಸಾಗುತ್ತಿದ್ದರೆ, ಇನ್ನೊಂದು ಕಡೆ ಕೆಲವು ಬಡವರು ತೀರಾ ಬಡತನಕ್ಕೆ ಇಳಿದುಬಿಟ್ಟಿದ್ದಾರೆ. ಉದ್ಯೋಗ ಕಳೆದುಕೊಂಡವರು, ಸಣ್ಣ ಪುಟ್ಟ ಸ್ವಂತ ಉದ್ಯೋಗ ಮಾಡಿಕೊಂಡಿದ್ದವರ ಬಾಯಿ, ಕೈಯಿಗೆ ಬೀಗ ಬಿದ್ದಿತ್ತು. ಅಂತಹ ಸಂದರ್ಭದಲ್ಲಿ ಉದಾರ ಹೃದಯದ ದಾನಿಗಳು ನೀಡಿದ ದೇಣಿಗೆ ಸಾಕಷ್ಟು ಜನರ ಹೊಟ್ಟೆ ತಣ್ಣಗಾಗಿಸಿದೆ. ಅಂತಹ ಉದಾರಿಗಳಲ್ಲಿ ಮುಂಚೂಣಿಯಲ್ಲಿದ್ದವರು ಪ್ರೇಮ್‌ಜಿ. ಈ ಪ್ರಪಂಚದಲ್ಲಿ ಮನುಷ್ಯನ ಒಳ್ಳೆಯ ತನವೇ ಆತನ ನಿಜವಾದ ಸಂಪತ್ತು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ತಮ್ಮ ಆದಾಯದ ಶೇ. ಮೂವತ್ತನಾಲ್ಕರಷ್ಟನ್ನು ದಾನ ಮಾಡುತ್ತಿದ್ದಾರೆ. ಕೊನೆಯದಾಗಿ,’’      ..’ಅದಕ್ಕೆ ಉತ್ತಮ ಉದಾಹರಣೆ, ’’ ’!’