ದ್ವೇಷ, ಬೇಧದಿಂದ ಅಭಿವೃದ್ದಿ, ಶಾಂತಿ ಸಾಧ್ಯ
ಅಭಿಪ್ರಾಯ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ನಮ್ಮ ದೇಶವು ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕವಾಗಿ ಶ್ರೀಮಂತಗೊಂಡಿದೆ. ರಾಜಕೀಯವಾಗಿ ವಿವಿಧ ಪಕ್ಷಗಳ ರಾಜಕಾರಣಿಗಳು ವರ್ಣರಂಜಿತ ರಾಜಕಾರಣವನ್ನು ನಡೆಸಿದ ಇತಿಹಾಸವೂ ಕೂಡ ಇದೆ. ಜತೆಗೆ ರಾಜಕಾರಣದ ಮೌಲ್ಯಕ್ಕೆ ಅಪಚಾರವೆಸಗುವ, ಕೀಳು ಮಟ್ಟದ ರಾಜಕಾರಣ ನಡೆಸಿದ, ರಾಜಕಾರಣಕ್ಕೆ ಕಳಂಕ ತಂದ ರಾಜಕಾರಣಿಗಳ ಮಧ್ಯೆ ರಾಜಕಾರಣದಲ್ಲಿ ಅಜರಾಮರ ವಾಗಿ ಶಾಶ್ವತವಾಗಿ ನೆನಪಿಟ್ಟುಕೊಳ್ಳುವಂತಹ ಆದರ್ಶ ರಾಜಕಾರಣ ವನ್ನು ನಡೆಸಿದ ಮುತ್ಸದ್ದಿಗಳು ಕೂಡ ನಮ್ಮ ರಾಷ್ಟ್ರದ ಇತಿಹಾಸದಲ್ಲಿದೆ.
ಸಾವಿರಾರು ವರ್ಷಗಳ ಕಾಲ ದೂರದೃಷ್ಟಿತ್ವ ದ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ ಅಟಲ್ ಬಿಹಾರಿ ವಾಜಪೇಯಿ, ರಾಮಕೃಷ್ಣಹೆಗಡೆ, ದೇವರಾಜ ಅರಸು,ಎಸ್ ಬಂಗಾರಪ್ಪ, ಎಸ್ಆರ್ ಬೊಮ್ಮಾಯಿ, ಎಸ್‌ಎಂ ಕೃಷ್ಣ, ಉಳ್ಳಾಲ ಶ್ರೀನಿವಾಸ ಮಲ್ಯರಂತಹ ರಾಜಕಾರಣಿಗಳ ಹೆಸರು ಇಂದಿಗೂ ಜನಮಾನಸ ದಲ್ಲಿ ಅಚ್ಚಳಿಯದೆ ಉಳಿದಿದೆ.
ಆದರೆ ಸಾಮಾಜಿಕವಾಗಿ ಅಸಮತೋಲನ, ಅಸಮಾನತೆ ಎಂಬುವುದು ಒಂದು ದೇಶದ ಪ್ರಗತಿಗೆ ಮಾರಕವಾಗಬಲ್ಲದು. ಜಾತಿ, ಧರ್ಮ, ಭಾಷೆ, ಪಂಥ, ವರ್ಣ ಎಂಬುದು ಇಂತಹ ಸಾಮಾಜಿಕ ಮತ್ತು ಮಾನವ ಸಂಬಂಧ, ಮಾನವೀಯತೆ ಸಹಬಾಳ್ವೆ, ಸಾಮ ರಸ್ಯಕ್ಕೆ ಇಂದು ಅಡ್ಡಿಯಾಗಿದೆ. ಹಸಿದವನಿಗೆ ತುತ್ತು ಅನ್ನ ನೀಡುವ, ವಾಸಕ್ಕೆ ಸೂರು ಕಲ್ಪಿಸುವ, ನೊಂದವರ ಕಷ್ಟಕ್ಕೆ ಮಿಡಿ ಯುವ ಮಾನವ ಗುಣ ಸಮಾಜದಲ್ಲಿ ವೃದ್ಧಿಯಾಗಬೇಕು. ಶಾಂತಿ ಸಾಮರಸ್ಯಕ್ಕೆ ಇಂದು ರಾಜಕಾರಣ ಎಂಬುವುದು ಎಳ್ಳುನೀರು ಬಿಟ್ಟಿದೆ. ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಾಜದ ಯುವಕರ ಹಾದಿ ತಪ್ಪಿಸಿ ವಿವಿಧ ವ್ಯವಸ್ಥೆಗಳಡಿ ವಿಭಜಿಸಿ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡುವಂತೆ ರಾಜಕಾರಣ ಎಂಬ ವ್ಯವಸ್ಥೆ ಪ್ರೇರಣೆ ನೀಡಿದೆ.
ನಮ್ಮ ಹಿರಿಯರ, ಪೂರ್ವಜರ ಕಾಲದಲ್ಲಿದ್ದ ಪರಸ್ಪರ ಸ್ನೇಹ ಸಂಬಂಧಗಳು, ಪರಸ್ಪರ ಸಹಕಾರ ಮನೋಭಾವ, ಹಂಚಿ ತಿನ್ನುವ ಗುಣ ಇಂದಿನ ಎರಡು ಮೂರು ತಲೆಮಾರಿನ ಯುವಪೀಳಿಗೆಯ ಕಾಲದಲ್ಲಿ ಧರ್ಮ ಧರ್ಮಗಳ ಮಧ್ಯೆ ಕಾದಾಟ ಗಳು, ಮತೀಯ ಅಮಲನ್ನು ತಲೆಗೇರಿಸಿಕೊಂಡು ಪರಸ್ಪರ ಬೀದಿ ಕಾಳಗಕ್ಕೆ ಮುನ್ನುಡಿ ಬರೆದಿರುವುದು ಒಂದೆಡೆಯಾದರೆ ಈ ಮಣ್ಣಿನ ಗೌರವ ರಾಷ್ಟ್ರೀಯ ಚಿಂತನೆಗಳಿಗೆ ವಿರುದ್ಧ ನಿಂತು ಅನ್ಯ ಧರ್ಮಗಳಿಗೆ ಅಪಚಾರವೆಸಗುವ, ಶ್ರದ್ಧಾ ಕೇಂದ್ರಗಳನ್ನು ಅಪವಿತ್ರ ಗೊಳಿಸುವ ಮಟ್ಟಕ್ಕೆ ಬಂದು ತಲುಪಿರುವ ವಿಚಾರ ಖೇದಕರ. ಈಎಲ್ಲಾಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಮಾಜದಲ್ಲಿ ಒಂದು ರೀತಿಯ ದ್ವೇಷ ಅಸೂಯೆ ಭಾವನೆ ಸೇರಿದಂತೆ ಒಂದು ಪ್ರದೇಶ ಹೊಂದಬೇಕಾದ ಅಭಿವೃದ್ಧಿ ಕಾರ್ಯಗಳ ಕುಂಠಿತ ಆ ಪ್ರದೇಶಕ್ಕೆ ಬರಬೇಕಾದ ಬಹುದೊಡ್ಡ ಕಂಪನಿಗಳ, ಬೃಹತ್ ಯೋಜನೆಗಳಿಗೆ ಹಿಂದೇಟು ಸೇರಿದಂತೆ ಒಂದಷ್ಟು ಹಿನ್ನಡೆ ಉಂಟಾಗುತ್ತಿರುವುದು ಸುಳ್ಳಲ್ಲ.
ಸಾಮಾಜಿಕವಾಗಿ ಸಾಮರಸ್ಯ, ಐಕ್ಯತೆ ಮೂಡಿದಾಗ ಸಮಾಜದಲ್ಲಿ ನೆಮ್ಮದಿ ನೆಲೆಸಿ ಮನುಷ್ಯನ ಪರಿಪೂರ್ಣ ಬದುಕು ಸಾಗಲು ಸಾಧ್ಯ.