ಕೋವಿಡ್‌ನಿಂದ ಜೀವಿತಾವಧಿ ಕುಸಿಯಿತೇ ?
ಸಕಾಲಿಕ
ಎಸ್‌.ಜಿ.ಹೆಗಡೆ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿರುವುದು ಅತ್ಯಂತ ವಿಷಾದದ ಸಂಗತಿ. ನಲವತ್ತಾರರ ಹರೆಯದ ಪುನೀತ್ ಅಗಲಿಕೆ ಜನಕೋಟಿ ಯನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ. ಆಕ್ರಂದನ ಆಕಾಶಕ್ಕೇರಿದೆ. ಅವರ ಸಾಧನೆ, ಸಮಾಜಸೇವೆ ಮತ್ತು ವಿನಮ್ರ ವ್ಯಕ್ತಿತ್ವದ ಗುಣಗಾನ ಎಡೆ ನಡೆದಿರು ವಾಗ ಅನೇಕ ಸಂದಿಗ್ಧ ಪ್ರಶ್ನೆಗಳು ನಮ್ಮ ಮುಂದಿವೆ.
ಅತಿ ಒಳ್ಳೆಯತನದ ಮಾದರಿಯನ್ನು ದೇವರು ಬೇಗ ಕರೆಸಿಕೊಂಡು ತಮ್ಮ ಮಂಡಲದಲ್ಲಿ ಸ್ಥಾನಮಾನ ನೀಡುವ ಕುರಿತು ಅಲಲ್ಲಿ ಹೇಳಲಾಗುವ ಇನ್ನೊಂದುಉದಾಹರಣೆ ಇದೇ? ಅತಿ ವ್ಯಾಯಾಮ ಮಾಡುವಿಕೆ ಮಾರಕವೇ ? ವಿಧಿಯ ದಯಾಹೀನ ಸಂಕಲ್ಪಗಳಲ್ಲಿ ಇದು ಒಂದು ಘಟನೆಯೇ, ಹೀಗೆಲ್ಲ ಸಾಕಷ್ಟು ಚಿಂತನ ಮಂಥನವು ಮಾಧ್ಯಮಗಳಲ್ಲಿ ಮತ್ತು ಜನಸಾಮಾನ್ಯರ ಮನಸ್ಸನ್ನು ಕಾಡುತ್ತಿವೆ. ಇವೆಲ್ಲದರ ಜತೆ ನನ್ನಲ್ಲಿ ಹಲವಾರು ಜನರು ಕೇಳಿದ್ದು ಪುನೀತ್‌ಗೆ ಮೊದಲು ಕರೋನಾ ಬಾಧೆ ತಗಲಿ ಹೋಗಿತ್ತೇ ಅನ್ನುವದು.
ಕೆಲವರಂತೂ ಅವರಿಗೆ ಅರಿಯದ ಪ್ರಮಾಣದಲ್ಲಿ ಕೋವಿಡ್ ತಗಲಿ ಹೋಗಿರಬೇಕು, ಅಲ್ಲದೇ ಇಂತಹ ಅನಿರೀ ಕ್ಷಿತ ಸಾವು ಇಷ್ಟು ಅರೋಗ್ಯವಂತನಿಗೆ ಬರಲು ಸಾಧ್ಯವೇ ಇಲ್ಲ ಅನ್ನುವ ತೀರ್ಮಾನ ಸ್ವರೂಪದ ಅಭಿಪ್ರಾಯ ನೀಡಿದವರು ಇದ್ದಾರೆ. ಅಂತಹ ಊಹೆಯು ಪವರ್ ಸ್ಟಾರ್ ನಿಧನದ ಕುರಿತು ‘ಆತ್ಮೀಯ ಅನ್ಯಥಾ ಸ್ಪಂದನ’ ವೆಂದು ಅಂದುಕೊಳ್ಳುವಾಗಲೂ ಇಂದಿನ ಕೋವಿಡ್ ಸಾಮಾಜಿಕ ಪರಿಸ್ಥಿತಿಯಲ್ಲಿ ಎದ್ದಿರುವ ಗಂಭೀರ ವಿಚಾರವೆಂದು ಪರಿಗಣಿಸಬೇಕಿದೆ.
ಕಾರಣವೆಂದರೆ ಕೊವಿಡ್ ತಗಲಿ ಹೋದವರ ಆರೋಗ್ಯದಲ್ಲಿ ಕಾಣಬರುತ್ತಿರುವ ಹಠಾತ್ ತೊಡಕುಗಳು, ಅನಿರೀಕ್ಷಿತ ಮತ್ತು ಆಕಸ್ಮಿಕ ಸಾವು. ಇಲ್ಲಿ ನಾನು ನನ್ನದೇ ಉದಾಹರಣೆಯನ್ನು ಹೇಳಿಕೊಳ್ಳಬೇಕು. ಕಳೆದ ವರ್ಷ ಸೆಪ್ಟೆಂಬರ್ ಸಮಯದಲ್ಲಿ ಬೆಂಗಳೂರಿನಲ್ಲಿದ್ದಾಗ ನನಗೆ ಮತ್ತು ಕುಟುಂಬದ ಇತರರಿಗೆ ವಾಸನಾಶಕ್ತಿ ಕಳೆದಿತ್ತು. ಅದು ತಿಳಿದಿದ್ದು ಅಡುಗೆ ಕೋಣೆಯಲ್ಲಿ ಬೇವಿನ ಸೊಪ್ಪಿನ ವಾಸನೆ ಅರಿವಾಗದಿದ್ದಾಗ. ಆಗ ನಾವೆಹೀಂಗ್ಮೂಸಿ ನೋಡಿದರೆ ವಾಸನೆ ಇರಲಿಲ್ಲ!
ನಾವು ಆ ಸಮಯದಲ್ಲಿ ನಮಗೆ ಭೇಟಿಯಾಗಿದ್ದ ಸಂಬಂಧಿಗಳಲ್ಲಿ ಹೇಳಿಕೊಂಡಾಗ ಅವರಿಗೂ ವಾಸನೆಯ ಅರಿವಿಲ್ಲದಿರುವ ವಿಷಯ ತಿಳಿದು ಗೊಂದಲ ವಾಗಿತ್ತು. ಕೆಲವರು ಹಿಂಗ್, ಇನ್ನು ಕೆಲವರು ಕಾಫಿ ಪೌಡರ್, ಮತ್ತೆ ಬೇವಿನ ಸೊಪ್ಪು , ಮೈಸೂರ್ ಸ್ಯಾಂಡಲ್ ಸೋ ಪ್ ಹೀಗೆ ಮೂಸಿದ್ದೇ ಮೂಸಿದ್ದು. ನಂತರ ನಾಲ್ಕು ದಿನಗಳಲ್ಲಿ ವಾಸನಾ ಶಕ್ತಿ ಮರಳಿ ಬಂತು.
ಅದು ಕೋವಿಡ್ ಲಕ್ಷಣವೆಂಬ ಅರಿವಲ್ಲಿ ಎಲ್ಲರೂ TPCಪರೀಕ್ಷೆ ಮಾಡಿಸಿಕೊಂಡೆವು. ಯಾರಿಗೂ ಪಾಸಿಟಿವ್ ಬಂದಿರಲಿಲ್ಲ. ಆದರೆ ಅಲ್ಲಿಗೆ ವಿಷಯ ಮುಗಿಯಲಿಲ್ಲ. ಸುಮಾರು ಮೂರು ತಿಂಗಳ ನಂತರ ನನಗೆ ಏರು ಹತ್ತಿ ಓಡಿದಾಗ ಸ್ವಲ್ಪ ಉಸಿರಿನ ತೊಂದರೆ ಕಾಣಿಸಿತ್ತು. ಕೂಡಲೇ ಕೋವಿಡ್ ಆಂಟಿಬಾಡಿ ಟೆಸ್ಟ್ ಮಾಡಿಸಿ ಕೊಂಡಾಗ ಬಲವಾದ ಪ್ರಮಾಣದಲ್ಲಿ ದೇಹದಲ್ಲಿ ಆಂಟಿಬಾಡೀಸ್ ತೋರಿದ್ದು ಆ ಮೊದಲು ಕೋವಿಡ್ ಬಂದು ಹೋಗಿದ್ದರ ಸೂಚನೆ ನೀಡಿತು. ನಂತರ ಶ್ವಾಸದ ತೊಂದರೆ ಹೆಚ್ಚಾದಾಗ ವಿವಿಧ ಮೆಡಿಕಲ್ ಪರೀಕ್ಷೆಗಳಿಗೆ ಗುರಿಯಾದೆ.
ಬೆಂಗಳೂರಿನ ನಾರಾಯಣ ಹೃದಯಾಲಯದ ಹೆಸರಾಂತ ವೈದ್ಯರಾದ ಡಾಕ್ಟರ್ ರಾಮಮೋಹನ್ ಸಲಹೆ ಮೇರೆಗೆ ಪಲ್ಮನರಿ ಎಂಜಿಯೋಗ್ರಾಮ್ ಮಾಡಿಸಿ ಕೊಂಡಾಗ ಪುಪ್ಪುಸಕ್ಕೆ ಸಾಗುವ ರಕ್ತನಾಳಗಳಲ್ಲಿ ರಕ್ತಹೆಪ್ಪು ಗಟ್ಟಿರುವ ವಿಷಯ ಬೆಳಕಿಗೆ ಬಂತು. ಶ್ವಾಸದ ತೊಂದರೆ ಮಿತಿ ಮೀರಿದ್ದಾಗ ಮುಂಬೈನ ಫೋರ್ಟಿಸ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆದೆ. ನಂತರ ಎಂಟು ತಿಂಗಳುಗಳಿಂದ ನಾರಾಯಣ ಹೃದಯಾಲಯದದಿಂದ ಚಿಕಿತ್ಸೆ ಪಡೆದು ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂತು. ಈ ಬಾಧೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಪಲ್ಮನರಿ ಎಂಬೋಲಿಸಂ ಎಂದು ಹೇಳಲಾಗುತ್ತದೆ.
ಬಾಧೆಯು ಕೋವಿಡ್ ಮೊದಲ ಮತ್ತು ಎರಡನೆಯ ಅಲೆಯಲ್ಲಿ ಅತಿರೇಕವಾಗಿತ್ತೆಂದೂ, ಬಾಧೆಯನ್ನು ಅರಿಯುವ ಮೊದಲೇ ಬಹುತೇಕ ಪೀಡಿತರು ಸಾವನ್ನಪ್ಪಿರುವ ಕುರಿತು ಅಧ್ಯಯನ ಪೂರಕ ವರದಿಗಳು ಪ್ರಕಟವಾಗಿವೆ. ಸಾವಿನ ಅಂಚಿಗೆ ಸಾಗುವ ಸ್ವಲ್ಪ ಮೊದಲು ಸರಿಯಾದ ವಿಷಯವರಿತು ಚಿಕಿತ್ಸೆ ಪಡೆದಿರುವುದರಿಂದಅನಾಹುತ ತಪ್ಪಿತೆಂದು ಭಾವಿಸಬೇಕು. ನನಗೆ ತಗಲಿದ್ದ ಸಮಸ್ಯೆ ಕೋವಿಡ್ ನಂತರದ ಶೇಷ ಪರಿಣಾಮವೆಂದು ಹೇಳಲಾಗಿದೆ.
ನನಗೆ ಇಂತಹ ಸಂದರ್ಭ ಬಂದಿದ್ದು ನನ್ನ ಪರಿಚಿತ ವಲಯದಲ್ಲಿ ಅತ್ಯಂತ ಅಚ್ಚರಿ ಮೂಡಿಸಿತ್ತು . ಆರೋಗ್ಯದ ಕುರಿತಂತೆ ಸದಾ ಕಾಳಜಿ ವಹಿಸಿದ, ನಿಯಮಿತ ವ್ಯಾಯಾಮ, ಯೋಗ, ಪ್ರಾಣಾಯಾಮದಲ್ಲಿ ತೊಡಗಿಕೊಂಡಿದ್ದವನಿಗೆ ಹೇಗೆ ಹೀಗೆಲ್ಲ ಆಯಿತೆಂದು. ಆದರೆ ಕೋವಿಡ್‌ಗೆ ಅಂತಹ ಪರಿಗಣನೆಯಾಗಲಿ ಅಥವಾ ವಿವೇಚನೆಯಾಗಲಿ ಇಲ್ಲವೇ ಇಲ್ಲ. ಕೋವಿಡ್ ಪರಿಣಾಮದಿಂದ ರೋಗಿ ಪೂರ್ತಿ ಮುಕ್ತನಾದ ತೀರ್ಮಾನವಿಲ್ಲ. ಅರವತ್ತು ವಯಸ್ಸಿನ ತನಕ ಯಾವುದೇ ಗಂಭೀರಖಾಯಿಲೆ ನನಗೆ ಬಂದಿರಲಿಲ್ಲ, ಔಷಧ ಕೊಂಡಿರಲಿಲ್ಲ. ಔಷಧದ ಕಂಪನಿಯ ನಿರ್ದೇಶಕನಿರುವ ನಾನು ಔಷಧ ರಹಿತ ಜೀವನದ ಕುರಿತು ಎಲ್ಲರಿಗೆ ಸಲಹೆ ನೀಡುತ್ತಿರುವೆ.
ನನಗೆ ನನ್ನ ಆರೋಗ್ಯದ ಕುರಿತಂತೆ ಗರ್ವವಿತ್ತು. ಈಗ ಅಲ್ಲಿ ಒಂದು ಕಪ್ಪು ಚುಕ್ಕೆ ತಗಲಿದೆ ಅನಿಸಿದೆ. ವಯೋಮಿತಿ ಕುಸಿದ ಭಾಸವಾಗಿದೆ. ನಮ್ಮಲ್ಲಿ ಸಮೃದ್ಧ ವಿರುವ ಸಂಗತಿಗಳ ಕುರಿತು ವಿನಮ್ರತೆ ಉಳಿಸಿಕೊ ಳ್ಳುವದು ಬದುಕಿನಲ್ಲಿ ಮಹತ್ವ ಅನ್ನಿಸುತ್ತದೆ. ಈ ಸಮಯದಲ್ಲಿ ನನಗೆ ಸಮರ್ಪಕ ಸಲಹೆ ಮತ್ತು ಚಿಕಿತ್ಸೆ ನೀಡಿದ ಡಾಕ್ಟರ್ ರಾಮಮೋಹನ್, ಡಾಕ್ಟರ್ ಭಾಷಾ ಖಾನ್ ಮತ್ತು ಸುಪ್ರಸಿದ್ಧ ಹೋಮಿಯೋಪತಿ ವೈದ್ಯ, ಡಾಕ್ಟರ್ ಬಿ.ಟಿ ರುದ್ರೇಶ್ ಅವರಿಗೆ ಮತ್ತುಹರಸಿದ ಎಲ್ಲರಿಗೆ ಋಣಿಯೆನ್ನುವ ಮಾತನ್ನು ಇಲ್ಲಿ ಹೇಳದಿದ್ದರೆ ಸರಿಯೆನ್ನಿಸದು.
ನಾನು ಇಲ್ಲಿ ಹೇಳಬಯಸಿರುವುದು ಕೋವಿಡ್ ಬಾಧೆ ಬಂದಾಗ ನೇರವಾಗಿ ಉಂಟಾದ ಸಾವು ನೋವಿನ ಕುರಿತಾಗಲ್ಲ. ಇಲ್ಲಿ ಹೇಳುತ್ತಿರುವುದು ಕೋವಿಡ್ ಬಂದು ಹೋದ ನಂತರದ ದಿನಗಳಲ್ಲಿ ತಿಳಿಯದೆ ಉದ್ಭವಿಸಿಸುವ ಬವಣೆಗಳ ಕುರಿತು. ಕೋವಿಡ್ ಬಾಧೆಯು ಸೌಮ್ಯ ರೀತಿಯಲ್ಲಿ ತಗಲಿ ಹೋದ ಕೋಟ್ಯಂತರ ಜನರಿಗೆ ಕರೋನಾ ಪೀಡಿಸಿದ ಅರಿವೂ ಇರುವುದಿಲ್ಲ. ಆದರೆ ನಂತರ ಅನೀರಿಕ್ಷಿತ ಅನಾಹುತಗಳು ಜರುಗಿವೆ. ಇತ್ತೀಚೆಗೆ ನಮ್ಮ ಮುಂಬೈ ಹೌಸಿಂಗ್ ಕಾಂಪ್ಲೆಕ್ಸಿನಲ್ಲಿ ಐವತ್ತುಮೂರು ವಯಸ್ಸಿನ ಒಬ್ಬರು ಅಂಗಡಿಯಿಂದ ಸಾಮಾನು ತಂದು ಲಿಫ್ಟಿನಲ್ಲಿ ಇಟ್ಟು ತಾವು ಮೆಟ್ಟಿಲು ಹತ್ತಿ ಮಾಳಿಗೆಗೆ ಹೋಗುತ್ತಿದ್ದಂತೆ ಅಲ್ಲಿಯೇ ಕುಸಿದು ತೀವ್ರ ಹೃದಯಾಘಾತದಿಂದ ಮೃತರಾದರು. ಅವರು ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಮೆಟ್ಟಿಲು ಹತ್ತಿಯೇ ಹೋಗುತ್ತಿದ್ದರು.
ಇನ್ನೊಂದು ಘಟನೆಯಲ್ಲಿ ಐವತ್ತು ದಶಕ ದಲ್ಲಿರುವ ಮಹಾಶಯರಿಗೆ ಮಿದುಳಲ್ಲಿ ರಕ್ತಕಟ್ಟಿ ಆಸ್ಪತ್ರೆಗೆ ದಾಖಲಾಗುವ ಅಮಾಯಕ ಸ್ಥಿತಿ ಬಂತು. ಡೊಂಬಿವಲಿಯವಾಸಿಯೋರ್ವರು ಕಾಲುನೋವೆಂದು ತೆಂಗಿನ ಎಣ್ಣೆ ಸವರುತ್ತಿರುವಾಗ ಅಲ್ಲಿಯೇ ನಿಧನರಾದ ವಿಷಯ ಬೆಳಕಿಗೆ ಬಂದಿದೆ. ಫಿಟ್ ಇದ್ದ ಯುವಕನೊಬ್ಬ ಕೆಲದಿನಗಳ ಹಿಂದೆ ರೈಲ್ವೆ ಓವರ್ ಬ್ರಿಜ್ ಏರಲಾಗದೆ ಕುಳಿತಿದ್ದ. ವಿಚಾರಿಸಿದಾಗ ಆತನಿಗೆ ಇತ್ತೀಚೆಗೆ ಹೃದಯದಲ್ಲಿ ಬ್ಲಾಕ್ ಕಂಡುಬಂದು ಆಪರೇಷನ್ ಆಗಿರುವ ವಿವರತಿಳಿದಿದೆ. ಯುವಕರಲ್ಲಿ ಕೂಡ ಥೈರಾಯ್ಡ್ , ಸಕ್ಕರೆ ಅಂಶ, ಪ್ರೊಟೀನ್ ಮತ್ತು ವಿಟಮಿನ್, ಕೊಲೆಸ್ಟರಾಲ್ ಇತ್ಯಾದಿ ಪ್ರಮಾಣಗಳಲ್ಲಿ ಭಾರೀ ಏರುಪೇರಾಗುವ ಸಂಗತಿಗಳಿವೆ. ಅವರಿಗೆಲ್ಲ ಕೋವಿಡ್ ತಗಲಿ ಹೋಗಿತ್ತೆಂದು ತಿಳಿದಿದೆ.
ಅಂತಹ ಅನಾಹುತವು ಕೋವಿಡ್ ನಂತರದ ಆಘಾತಗಳೆಂದು ಹೇಳಲಾಗಿದೆ. ಕರೋನಾದಿಂದ ನೇರವಾದ ಸಾವು ನೋವಿನ ಅಂಕಿ ಅಂಶಗಳು ಜಾಗತಿಕವಾಗಿ ಪ್ರಸಾರವಾಗಿರುವಾಗ ಈ ಕುರಿತು ಮತ್ತೆ ಹೇಳುವ ಅವಶ್ಯಕತೆ ಇಲ್ಲ. ಕರೋನಾ ವೈರಸ್ ಪೀಡೆಯಿಂದ ಉಂಟಾಗಿರುವ ಅತ್ಯಂತ ಮಹತ್ವದ ಮತ್ತು ಇನ್ನೂಗಂಭೀರ ವಿಚಾರಗಳು ಸಂಶೋಧನೆಗಳಿಂದ ಹೊರ ಬಂದಿದೆ. ಅದು ಜಗತ್ತಿನಾದ್ಯಂತ ಜೀವಿತಾವಧಿಯ ಕುಸಿತದ ಕುರಿತು. ಕೋವಿಡ್೧೯ಪೆಂಡಮಿಕ್‌ನ ಕಾರಣದಿಂದ ಬಹುದಶಕಗಳ ನಿರಂತರ ಯತ್ನಗಳಿಂದ ಏರಿದ್ದ ಆಯಸ್ಸು ಅವಧಿಯು ಮತ್ತೆ ಇಳಿಕೆಯಾಗಿದೆ.
ಇಳಿಕೆಯ ಪ್ರಮಾಣವು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯಾಗಿದ್ದು ಒಂದು ವರ್ಷದಿಂದ ಒಂಭತ್ತು ವರ್ಷಗಳ ತನಕದ ಇಳಿಕೆಯನ್ನು ಅಂದಾಜು ಮಾಡಲಾ ಗಿದೆ. ಜೀವಿತಾವಧಿಯಲ್ಲಿನ ಕುಸಿತವು ‘ಕೋವಿಡ್ ಇನೆ ಕ್ಷನ್ ಪ್ರೆವೇಲೆನ್ಸ್’ ಪ್ರಮಾಣದ ಮೇ ಲೆ ಅವಲಂಬಿಸಿ ಹೇಳಲಾಗಿದೆ. ಅಧ್ಯಯನದ ಪ್ರಕಾರ ಹತ್ತು ಪ್ರತಿಶತ ಪ್ರಮಾಣವನ್ನು ಆಧರಿಸದರೆ ಸುಮಾರು ಒಂದು ವರ್ಷ, ಹಾಗೇ ಐವತ್ತು ಪ್ರತಿಶತ ಪ್ರಮಾಣದಲ್ಲಿ ಹೇಳಿದಾಗ ಉತ್ತರ ಅಮೆರಿಕದಲ್ಲಿ ಮೂರರಿಂದ ಒಂಭತ್ತು ವರ್ಷ, ದಕ್ಷಿಣ ಪೂರ್ವ ಏಷ್ಯಾದಲ್ಲಿ ಒಂದರಿಂದ ನಾಲ್ಕು ವರ್ಷಗಳ ಇಳಿಕೆಯ ಕುರಿತು ಹೇಳಲಾಗಿದೆ.
ಯೂರೋಪಿನಲ್ಲಿ ಜೀವಿತ ಅವಧಿಯನ್ನು ಆರು ವರ್ಷಗಳಷ್ಟು ಏರಿಸಲು ಇಪ್ಪತ್ತು ವರ್ಷ ತಗಲಿತ್ತು. ೧೯೯೦ರಲ್ಲಿ ೭೨.೮ ರಿಂದ ೨೦೧೯ರಲ್ಲಿ ೭೮.೬ ತಲುಪಿತ್ತು.ಹಿಂದಿನ ಬೃಹತ್ ಸಾಂಕ್ರಾಮಿಕಗಳಾದ ೨೦೦೯ರ ಇನ್ ಫ್ಲುಯೆಂಜಾ ಮತ್ತು ೨೦೧೪ರ ಎಬೋಲಾ ವೈರಸ್ ಪೀಡೆಯು ಅಲ್ಲಿ ಜೀವಿತಾವಽಯನ್ನು ಸರಾಸರಿ೧೧.೮ ವರ್ಷಗಳಷ್ಟು ಮತ್ತು ಅಮೆರಿಕದಲ್ಲಿ ೧.೬ ರಿಂದ ೫.೬ರಷ್ಟು ಇಳಿಸಿದ್ದ ಅಂಶಗಳು ಇಲ್ಲಿ ಪ್ರಸ್ತುತವಾಗಿದೆ.
ಅಧ್ಯಯನದಿಂದ ತಿಳಿದುಬಂದ ಅಂಕಿ ಅಂಶಗಳ ನಿಖರತೆ ವಿಭಿನ್ನ ಪ್ರದೇಶಗಲ್ಲಿ, ಸೋಂಕಿನ ಪ್ರಮಾಣದ ಮೇಲೆ ಅವಲಂಬಿಸಿದೆಯಾದರೂ ಸಾಮಾನ್ಯವಾದಜೀವಿತ ಅವಽಯಲ್ಲಿನ ಕುಸಿತವು ಆರೋಗ್ಯ ಜಗತ್ತಿನಲ್ಲಿ ಗಂಭೀರ ಚಿತ್ರಣ ಮೂಡಿಸಿದೆ. ಕಳೆದಿದ್ದನ್ನು ಕೂಡಿಸಿಕೊಳ್ಳಲು ಕೋವಿಡ್ ಪೀಡೆ ಮುಗಿದ ನಂತರವೂ ದಶಕಗಳೇ ಬೇಕಿರಬಹುದಾಗಿದೆ. ವೈದ್ಯಕೀಯ ಮತ್ತು ವೈeನಿಕ ಜಗತ್ತು ಈ ಕುರಿತು ಆಳವಾದ ಚಿಂತನೆ ನಡೆಸಿದೆ. ಮಹತ್ವದ ವಿಚಾರವೆಂದರೆ ಕರೋನಾ ಬಾಧೆಯು ಕೋಟ್ಯಂತರ ಜನರನ್ನು ಸೌಮ್ಯ ರೀತಿಯಲ್ಲಿ ಸೋಂಕಿಸಿರಬಹುದಾಗಿದೆ.
ಬಹಳ ಜನರಿಗೆ ಈ ಕುರಿತು ಅರಿವಿಲ್ಲದಿರಬಹುದು. ಆದರೆ ಕೋವಿಡ್ ಸೋಂಕು ತಗಲಿರುವ ಅನುಮಾನವಿದ್ದಾಗ ಯೋಗ್ಯ ಪರೀಕ್ಷೆ ಮಾಡಿಸಿಕೊಂಡು ತಕ್ಕ ಚಿಕಿತ್ಸೆ ಪಡೆಯುವದು ಒಳ್ಳೆಯದು. ಕೋವಿಡ್ ಬಂದಿಲ್ಲವಾದರೂ ಸರಿಯಾದ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ಆಂಟಿಬಾಡೀಸ್ ಟೆಸ್ಟ್ ಮಾಡಿಸಿಕೊಳ್ಳಬಹುದು. ಆಗಕೋವಿಡ್ ಆಗಿ ಹೋದ ಸುಳಿವು ಸಿಗಬಹುದು. ಕೆಲವೊಮ್ಮೆ ಅವಶ್ಯಕತೆ ಅನುಸಾರವಾಗಿ ರಕ್ತತಿಳಿಯಾಗಿಸುವ ವಿಧಾನವನ್ನು ವೈದ್ಯರ ಸಲಹೆಯಂತೆ ಬಳಸ ಬಹುದು. ಅದರಿಂದ ಏನೂ ತಿಳಿಯದೆ ಮುಗ್ಧತೆಯಲ್ಲಿ ಕಾಡುವ ಗಂಭೀರ ಸ್ಥಿತಿಯಿಂದ ಪಾರಾಗಬಹುದು.
ಕೋವಿಡ್ ಸೋಂಕಿನ ಪರಿಣಾಮವಾಗಿ ಥೈರಾಯ್ಡ್ , ಸಕ್ಕರೆ ಖಾಯಿಲೆ, ಹೃದಯ, ಪುಪ್ಪುಸ ಮತ್ತು ಮೂತ್ರಕೋಶಗಳ ತೊಂದರೆಗೆ ಸಿಲುಕಬಹುದಾಗಿದ್ದು ಎಡೆ ಪ್ರಸಾರವಾದ ಸಂಗತಿ. ಅದರ ಅರ್ಥ ಕೋವಿಡ್ ಭಯದಲ್ಲಿಯೇ ಜೀವನ ಕಳೆಯುವುದಲ್ಲ. ನಮಗೆ ಅರಿವಿಲ್ಲದೆ ನಮ್ಮನ್ನು ಮುಗಿಸಬಹುದಾದ ಸಂಗತಿಯ ಕುರಿತು ಎಚ್ಚರ ಬೇಕು. ಪುನೀತ್ ಅವರ ಸಾವಿನಲ್ಲಿ ಹಲವಾರು ಜನರ ಮನಸ್ಸಿನಲ್ಲಿ ಹುಟ್ಟಿಕೊಂಡ ಪ್ರಶ್ನೆಗೆ ಏನೂ ಸಮರ್ಥನೆ ಸಿಗದಿರಬಹುದು. ಲವಲವಿಕೆಯ ಮೇರು ಜೀವದ ಅಂತ್ಯಕ್ಕೆ ಸಂತಾಪ ಸೂಚಿಸಿದ ಸಾರ್ಥಕತೆ ಸಿಕ್ಕಿತು.
ಅಕಾಲ ಮರಣದಿಂದ ಉಂಟಾದ ಆತಂಕದ ಮಡಿಲಲ್ಲಿ ಹುಟ್ಟಿಕೊಂಡ ಕಳಕಳಿಯ ಪ್ರಶ್ನೆಗಳಿರಬಹುದು. ಆದರೆ ಸಮಾಜದಲ್ಲಿ ಉಂಟಾಗಿರುವ ಹಲವು ಹಠಾತ್ಘಟನೆಗಳು ಎಲ್ಲ ತರ್ಕಗಳಿಗೆ ಬೀಜವಾಗುತ್ತವೆ. ನಾನು ಅಂತಹ ಸಂದಿಗ್ಧತೆಯಲ್ಲಿ ಸಿಲುಕಿ ಮರಳಿರುವೆ. ಬರೆಯುವುದಕ್ಕೂ ಕೈ ಹಾಕದೆ ವರ್ಷವಾಗಿರಬೇಕು. ಮೊದಲಿನ ಬರಹಗಳು ವರ್ಷದಿಂದ ವರ್ಷಕ್ಕೆ ಉರುಳಿ ನೆನಪಿಸುತ್ತಿವೆ. ಮತ್ತೆ ನಿಮ್ಮೆಲ್ಲರನ್ನು ತಲುಪಲು ತುಂಬಾ ಸಂತೋಷವೆನಿಸಿದೆ.