ಕ್ರೀಡೆಗಳನ್ನು ಸುಡುತ್ತಿರುವ ಜನಾಂಗೀಯ ದ್ವೇಷ !
ಅಭಿವ್ಯಕ್ತಿ
ಶ್ರೀನಿವಾಸ
@.
ಇತ್ತೀಚಿನ ದಿನಗಳಲ್ಲಿ ಕ್ರೀಡಾಳುಗಳ ಜಾತಿ, ಧರ್ಮವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಯಾಗಿ ದ್ವೇಷವನ್ನು ಬಿತ್ತರಿಸುವ ಪ್ರವೃತ್ತಿಗಳು ಹೆಚ್ಚಾಗುತ್ತಿವೆ. ಕ್ರೀಡಾ ಕ್ಷೇತ್ರದಲ್ಲಿ ಇಂತಹ ವಿದ್ಯಮಾನಗಳು ಪಾಶ್ಚಾತ್ಯ ದೇಶ ಗಳಲ್ಲೂ ಹೊರತಾಗಿಲ್ಲ. ಒಬ್ಬ ಆಟಗಾರನ ಕೌಶಲ್ಯಕ್ಕೆ ಮನ್ನಣೆ ನೀಡದೆ ಅವನ ಚಾರಿತ್ರಿಕ ಹಿನ್ನೆಲೆಗಳನ್ನು ಆಧರಿಸಿ ಅವಮಾ ನಿಸುವುದು ವಿಪರ್ಯಾಸ.
ಇತ್ತೀಚಿಗೆ ಭಾರತೀಯ ಕ್ರಿಕೆಟ್ ತಂಡವು ಐಸಿಸಿ ಟಿ-20 ವಿಶ್ವಕಪ್‌ಲ್ಲಿ ಪಾಕಿಸ್ತಾನದ ವಿರುದ್ಧ ಸೋತಿದೆ. ಆದ್ದರಿಂದ ತಂಡದಆಟಗಾರರಲ್ಲಿ ಒಬ್ಬರಾದ ಮೊಹಮ್ಮದ್ ಶಮಿಯವರನ್ನು ತಂಡದ ಸೋಲಿಗೆ ಕಾರಣ ವೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ ಅವಮಾನಿಸಲಾಗಿದೆ. ಭಾರತದ ಪುರುಷರ ಕ್ರಿಕೆಟ್ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಶಮಿಯವರನ್ನು ಕೇವಲ ಒಂದು ಪಂದ್ಯದಲ್ಲಿನ ವೈಫಲ್ಯಕ್ಕೆ ತೇಜೋವಧೆ ಮಾಡಲೆತ್ನಿಸಿರುವುದು ನ್ಯಾಯ ಸಮ್ಮತವಲ್ಲ.
ಅಲ್ಲದೆ, ತಾವು ಮುಸಲ್ಮಾನರಾಗಿದ್ದು ಎದುರಾಳಿ ತಂಡದವರಿಗೆ ಪರೋಕ್ಷವಾಗಿ ಸಹಕರಿಸಿ ದ್ದಾರೆ ಎಂಬಿತ್ಯಾದಿಯಾಗಿ ಅಪಾದಿಸು ತ್ತಿರುವುದು ಹುನ್ನಾರವಾಗಿದೆ. ಆದರೆ, ಹಿರಿಯ ಆಟಗಾರರು ಮೊಹಮ್ಮದ್ ಶಮಿಯವರ ಪರ ನಿಂತಿರುವುದು ಸಮಾಧಾನಕರ ಸಂಗತಿ. ಕ್ರೀಡಾ ಜಗತ್ತಿನಲ್ಲಿ ಒಬ್ಬ ಆಟಗಾರನನ್ನು ದೂಷಿಸುವ ಅಥವಾ ದ್ವೇಷಿಸುವ ವಿದ್ಯಮಾನ ಗಳು ಹೊಸತೇನಲ್ಲ.
ಆದರೆ, ಕ್ರೀಡಾಳುವಿನ ವರ್ಣ, ಜಾತಿ, ಲಿಂಗ ಮತ್ತು ಧರ್ಮವನ್ನು ಆಧರಿಸಿ ದ್ವೇಷಿಸುವುದು ವಿಕಾರ ಮನಸ್ಥಿತಿಯನ್ನು ಬಿಂಬಿಸು ತ್ತದೆ. ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸಲಾಗಿದೆ. ಕ್ರೀಡೆಯಲ್ಲಿ ಈ ಎರಡು ದೇಶಗಳನ್ನು ಬಿಂಬಿಸಿರುವಷ್ಟು ಇನ್ಯಾವುದೆ ದೇಶಗಳನ್ನು ಬಿಂಬಿಸಿಲ್ಲ. ಸಾಮಾಜಿಕ, ರಾಜಕೀಯ ವೈರುಧ್ಯಗಳನ್ನು ಕ್ರೀಡೆಯಲ್ಲಿ ಬೆರೆಸಿ, ಎರಡು ರಾಷ್ಟ್ರಗಳ ಸಾಮರಸ್ಯವನು ಕಸಿಯಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು1952ರಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಯಲ್ಲಿ ಕ್ರಿಕೆಟ್ ಆಟಕ್ಕೆ ಪಾದಾರ್ಪಣೆ ಮಾಡಿದವು. ಈ ಸರಣಿಯು2-1ಪಂದ್ಯ ಗಳನ್ನು ಗೆಲ್ಲುವ ಮೂಲಕ ಭಾರತದ ಪಾಲಾಯಿತು. ಅಂದಿನಿಂದ ಇಲ್ಲಿಯ ವರೆಗೂ ಅನೇಕ ಏಕದಿನ ಪಂದ್ಯಗಳು ಟೆಸ್ಟ್ ಸರಣಿಗಳು, ವಿಶ್ವಕಪ್, ಟಿ-20 ಪಂದ್ಯಗಳನ್ನು ಎರಡು ತಂಡಗಳು ಆಡಿವೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು 200ಕ್ಕೂ ಹೆಚ್ಚು ಮುಖಾಮುಖಿ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ೫೯ ಟೆಸ್ಟ್ ಪಂದ್ಯ ಗಳಲ್ಲಿ ೯ ಪಂದ್ಯಗಳನ್ನು ಭಾರತ ಗೆದ್ದಿದ್ದರೆ, ಪಾಕಿಸ್ತಾನ ೧೨ ಪಂದ್ಯಗಳಲ್ಲಿ ಜಯಗಳಿಸಿದೆ, ೩೮ ಪಂದ್ಯಗಳು ಸಮಬಲದಿಂದ ಅಂತ್ಯಗೊಂಡಿವೆ. ಅಲ್ಲದೆ, ೧೩೨ ಏಕದಿನ ಪಂದ್ಯಗಳನ್ನು ಎದುರಿಸಿದ್ದು, ೫೫ ಪಂದ್ಯಗಳಲ್ಲಿ ಭಾರತ ಜಯಗಳಿಸಿದ್ದರೆ, ೭೩ ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿದ್ದು, ೪ ಪಂದ್ಯಗಳು ಸಮಬಲದಿಂದ ಮುಕ್ತಾಯಗೊಂಡಿವೆ.
ಟಿ-೨೦ ಪಂದ್ಯವಾಳಿಗಳ ಒಟ್ಟು ೯ ಪಂದ್ಯಗಳಲ್ಲಿ ಭಾರತ ೬ ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನವು ೨ ಪಂದ್ಯಗಳನ್ನು ಜಯಿಸಿ ೧ ಪಂದ್ಯ ಸಮಬಲದಲ್ಲಿ ಕೊನೆಯಾಗಿದೆ. ಇನ್ನು ವಿಶ್ವಕಪ್ ಪಂದ್ಯಗಳನ್ನು ಗಮಸಿಸುವುದಾದಲ್ಲಿ ೫೦ ಓವರ್‌ನ ೭ ಪಂದ್ಯಗಳಿಗೆ ೭ ಪಂದ್ಯವನ್ನು ಭಾರತ ಗೆದ್ದಿದೆ. ಟಿ-೨೦ ವಿಶ್ವಕಪ್‌ನ ೬ ಪಂದ್ಯಗಳಲ್ಲಿ ೪ ಪಂದ್ಯಗಳನ್ನು ಭಾರತ ಗೆದ್ದಿದ್ದು, ೧ ಪಂದ್ಯದಲ್ಲಿ ಪಾಕಿಸ್ತಾನ ಜಯಿಸಿದ್ದು, ೧ ಪಂದ್ಯ ಸಮಬಲ ಬಂದಿದೆ. ಹೀಗೆ ಎರಡು ತಂಡಗಳು ಸಮಬಲವನ್ನು ಪ್ರದರ್ಶಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿವೆ.
ಎರಡೂ ತಂಡಗಳು ಉತ್ತಮ ಹಾಗೂ ಕಳಪೆ ಪ್ರದರ್ಶನಗಳ ಅಂಕಿ ಅಂಶಗಳನ್ನು ಗಮನಿಸುವುದಾದರೆ, ೧೯೮೯-೯೦ರಲ್ಲಿ ಲಾಹೋರ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ತಂಡವು ೫ವಿಕೆಟ್ ಕಳೆದುಕೊಂಡು ೬೯೯ ಮೊತ್ತವನ್ನು ಪೇರಿಸಿತ್ತು. ಹಾಗೆಯೇ, ೨೦೦೩-೦೪ರಲ್ಲಿ ಮುಲ್ತಾನದಲ್ಲಿ ನಡೆದ ಪಂದ್ಯದಲ್ಲಿ ಭಾರತವು ೬೭೫ ರನ್ ಗಳನ್ನು ೫ ವಿಕೆಟ್ ಕಳೆದುಕೊಳ್ಳುವ ಮೂಲಕ ಗಳಿಸಿತ್ತು.
೧೯೯೯ರಲ್ಲಿ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಜರುಗಿದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆಯವರು ೭೪ ರನ್‌ಗಳನ್ನು ನೀಡುವ ಮೂಲಕ ೧೦ ವಿಕೆಟ್‌ಗಳನ್ನು ಕಬಳಿಸಿದ್ದದ್ದು ದಾಖಲೆಯಾಗಿದೆ. ವಯಕ್ತಿಕ ಸಾಧನೆಯಲ್ಲಿ ವೀರೇಂದ್ರ ಸೆಹ್ವಾಗ್ ೩೦೯ ರನ್ ಗಳಿಸಿರುವುದು ದಾಖಲಾಗಿದೆ. ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡದ ಸಯ್ಯದ್ ಅನ್ವರ್ ರವರ ೧೯೪ರನ್ನಿನ ದಾಖಲೆ ಯನ್ನು ಕಾಣಬಹುದು.
ಟಿ-೨೦ ಪಂದ್ಯಗಳಲ್ಲಿ ಅಹಮದಾಬಾದ್ ನಲ್ಲಿ ೨೦೧೨ರಲ್ಲಿ ಜರುಗಿದ ಪಂದ್ಯದಲ್ಲಿ ೧೯೨ರನ್ನನ್ನು ಭಾರತ ತಂಡವು ಗಳಿಸಿರು ವುದು ತಂಡದ ಅತಿ ಹೆಚ್ಚು ವಯಕ್ತಿಕ ಮೊತ್ತದ ದಾಖಲಾಗಿದೆ. ಟಿ-೨೦ ವಿಶ್ವಕಪ್ ೨೦೨೧ರಲ್ಲಿ ಮೊಹಮ್ಮದ್ ರಿಜ್ವಾನ್‌ರು ಗಳಿಸಿದ ಅಜೇಯ ೭೯ ರನ್‌ಗಳು ವಯಕ್ತಿಕ ಸಾಧನೆಯ ದಾಖಲೆಯಾಗಿದೆ. ಹೀಗೆ ಎರಡು ತಂಡಗಳು ಉತ್ತಮ ಪ್ರದರ್ಶನಗಳನ್ನು ನೀಡಿರುವುದು ಕ್ರಿಕೆಟ್ ಇತಿಹಾಸದ ದಾಖಲೆಗಳಲ್ಲಿ ಕಾಣಸಿಗುತ್ತವೆ.
ಮೊಹಮ್ಮದ್ ಶಮಿಯವರು ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆಟಗಾರರಾಗಿದ್ದಾರೆ. ಸುಮಾರು ೫೪ ಟೆಸ್ಟ್ ಪಂದ್ಯಗಳಲ್ಲಿ ೧೯೫ಕ್ಕೂ ಹೆಚ್ಚು ವಿಕೆಟ್‌ಗಳನ್ನು ಗಳಿಸಿದ್ದಾರೆ, ೭೯ ಏಕದಿನ ಪಂದ್ಯಗಳಲ್ಲಿ ೧೪೮ ವಿಕೆಟ್‌ಗಳನ್ನು ೧೩ ಟಿ-೨೦ ಪಂದ್ಯಗಳಲ್ಲಿ ೧೨ ಗಳನ್ನು ಗಳಿಸಿದ್ದಾರೆ. ೨೦೨೧ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೇಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸಹ ಆಟಗಾರರಾದ ಜರ್ಪ್ಸಿತ್ ಬೂಮ್ರಾ ಜೊತೆಗೂಡಿ ೮೯ ರನ್‌ಗಳನ್ನು ಕಲೆ ಹಾಕುವ ಮೂಲಕ ತಂಡಕ್ಕೆ ಆಸರೆಯಾದುದ್ದನ್ನು ಇಂಗ್ಲೇಂಡ್‌ನ ಹಿರಿಯಆಟಗಾರ ಡೇವಿಡ್ ಗೊವೆರ್ ರವರು ಗುಣಗಾನ ಮಾಡಿರುವುದನ್ನು ಮರೆಯ ಲಾಗದು.
ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಕೇವಲ ಒಂದು ಪಂದ್ಯದ ವೈಫಲ್ಯತೆಯನ್ನುಆಧರಿಸಿ ನಿಂದಿಸುವುದು ಅಕ್ಷಮ್ಯ ವಾಗುತ್ತದೆ. ಇತ್ತೀಚೆಗೆ ಜರುಗಿದ ವಿಶ್ವ ಒಲೆಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಹಾಕಿ ತಂಡವು ಗ್ರೇಟ್ ಬ್ರಿಟನ್ ತಂಡದ ವಿರುದ್ಧರೋಚಕ ಸಂದರ್ಭದಲ್ಲಿ ಸೋತಿತು. ಇಂತಹ ಸಂದರ್ಭದಲ್ಲಿ ತಂಡದ ಆಟಗಾರ್ತಿಯಾದ ವಂದನ ಕಟಾರಿಯಾರನ್ನು ಜಾತಿ ಆಧಾರವಾಗಿ ಅವಮಾನಿಸಿದ್ದು ವರದಿಯಾಗಿತ್ತು. ಆದರೆ, ಹಾಕಿ ಪಂದ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ತಂಡವು ಸೆಮಿ-ಫೈನಲ್ ಪ್ರವೇಶಿಸಿದ್ದು ಇದೇ ವಂದನ ಕಟಾರಿಯಳ ಬಾರಿಸಿದ ಹ್ಯಾಟ್ರಿಕ್ ಗೋಲಿನಿಂದ ಎಂಬುದನ್ನು ಮರೆಯಬಾರದು.
ದೇಶದಲ್ಲಿನ ಕೆಲವು ಮೂಲಭೂತವಾದಿ ಮನಸ್ಥಿತಿಗಳು ಒಂದಲ್ಲಾ ಒಂದು ವಿಚಾರಗಳನ್ನು ಮುನ್ನೆಲೆ ತರುವ ಮೂಲಕ ತಮ್ಮ ವಿಕೃತರೂಪವನ್ನು ಹೊರಹಾಕುವುದು ಸಾಮಾನ್ಯವಾಗಿದೆ. ಕ್ರೀಡೆ ಎಂಬುದು ಕೇವಲ ಆಟವಾಗಿರದೆ ಸಂಸ್ಕೃತಿಯ ಪ್ರತೀಕ ವಾಗಿದೆ. ಪ್ರತಿಯೊಂದು ರಾಷ್ಟ್ರದ ಆಟಗಾರರು ಮತ್ತೊಂದು ದೇಶದ ಆಟಗಾರರೊಂದಿಗೆ ಸ್ಪರ್ಧಿಸುವುದರ ಜೊತೆಗೆ ತಮ್ಮ ನಾಡಿನ ಸಂಸ್ಕೃತಿಯನ್ನು ಹಂಚಿಕೊಳ್ಳುತ್ತಾರೆ. ಆಟವೆಂಬುದು ಆಹ್ಲಾದವಷ್ಟೆ ಆಗಿರದೆ ಅದು ಎರಡು ಸಂಸ್ಕೃತಿಗಳನ್ನು ಒಂದು ವೇದಿಕೆಯಲ್ಲಿ ತರುವ ಮಾಧ್ಯಮವಾಗಿರುತ್ತದೆ.
ಅಲ್ಲದೆ, ದೇಶಗಳ ನಡುವಿನ ಸಾಮಾಜಿಕ ವಿಭಜನೆಯನ್ನು ಹೋಗಲಾಡಿಸಲು, ದೇಶದ ಸಂಸ್ಕೃತಿಯನ್ನು ಉತ್ಕೃಷ್ಟಗೊಳಿಸಲು, ಎರಡು ದೇಶಗಳ ಸ್ನೇಹ ಸಂಬಂಧಗಳ ಬೆಸೆಯಲು ಕಾರಣವಾಗುತ್ತದೆ. ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರವನ್ನು ಗೌರವಿಸುವ, ಒಗ್ಗಟ್ಟನ್ನು ಪ್ರದರ್ಶಿಸಲು ಹಾಗೂ ದೇಶಗಳ ನಡುವಿನ ಮೌಲ್ಯಗಳ ಅನುಸರಣೆಗೆ ಕ್ರೀಡೆ ಅನುವುಮಾಡಿಕೊಡುತ್ತದೆ.ಕ್ರೀಡಾ ಜಗತ್ತಿನಲ್ಲಿ ಗೆಲುವು ಮತ್ತು ಸೋಲು ಎಂಬುದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇದು ಸಹಜ ಪ್ರಕ್ರಿಯೆ ಯಾಗಿದ್ದು ಪ್ರೇಕ್ಷಕ ಅಥವಾ ಕ್ರೀಡಾ ಪ್ರೇಮಿಗಳು ಭಾವಪರವಶರಾಗದೆ ಪ್ರಬುದ್ಧತೆಯಿಂದ ತಮ್ಮ ತಂಡಗಳನ್ನು ಬೆಂಬಲಿಸ ಬೇಕೆಂಬುದು ಪ್ರತೀ ಕ್ರೀಡಾಳುವಿನ ಇಚ್ಛೆಯಾಗಿರುತ್ತದೆ.
ತನ್ನ ನೆಚ್ಚಿನ ತಂಡವು ಸೋತಾಗ ತಂಡದ ಆಟಗಾರನ ಮೇಲೆ ಹಲ್ಲೆಗೆ ಮುಂದಾಗುವ ಅಥವಾ ಅವರ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡುವ ಹಾಗೂ ಆಸ್ತಿ-ಪಾಸ್ತಿಗಳನ್ನು ನಾಶ ಮಾಡುವುದು ಸರಿಯಲ್ಲ. ಬದಲಿಗೆ ನೆಚ್ಚಿನ ತಂಡಗಳು ವೈಫಲ್ಯ ದಿಂದ ಕುಗ್ಗಿದಾಗ ನೈತಿಕ ಬೆಂಬಲಕ್ಕೆ ನಿಲ್ಲುವುದನ್ನು ಕ್ರೀಡಾ ಪ್ರೇಮಿಗಳು ಇರಬೇಕಾದ ಬದ್ಧತೆ ಎನ್ನಬಹುದು. ಇದಕ್ಕೆ ಸಾಕ್ಷಿ ಎಂಬಂತೆ ನಾಯಕ ವಿರಾಟ್ ಕೋಹ್ಲಿ ಹಾಗೂ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಎದುರಾಳಿ ತಂಡದ ಆಟಗಾರರನ್ನು ಅಭಿನಂದಿಸಿ ತೋರಿದ ಕ್ರೀಡಾ ಸ್ಪೂರ್ತಿಯು ಮಾದರಿಯಾಗಿದೆ.