ರಶೀದ್, ನೀವು ಭಾರತದ ಭಾಗವಾಗಿದ್ದವರೇ ?
ಸಕಾಲಿಕ
ವಿಜಯ್ ದರ್‌’ಡ
ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಅಧ್ಯಕ್ಷರು, ಲೋಕಮತ್ ದೈನಿಕ
ಆಟದ ಮೈದಾನ ಧರ್ಮಯುದ್ಧದ ರಣಾಂಗಣ ಅಲ್ಲವಲ್ಲ? ಮತ್ತು ಬಹಳ ಮುಖ್ಯವಾಗಿ ಶೇಕ್ ರಶೀದ್ ಭಾರತದ ಮುಸ್ಲಿಮರ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ? ನಮ್ಮ ದೇಶದಲ್ಲಿ ವೈರತ್ವದ ಬೀಜ ಬಿತ್ತುವುದಕ್ಕೆ ಅವರು ಯತ್ನಿಸುತ್ತಿದ್ದಾರೆ ಎಂಬುದು ನಿಚ್ಚಳವಾದ ಸತ್ಯ. ನಿಮ್ಮ ಸ್ವಯಂ-ವಿನಾಶಕಾರಿ ಗುಣದಿಂದ ನೀವು ಬೌದ್ಧಿಕ ವಾಗಿ ನಾಶವಾಗುತ್ತಿದ್ದೀರಿ. ಇಂಥ ಪ್ರವೃತ್ತಿಯಿಂದ ನೀವು ಹೊರಬರುವಂತಾಗಲಿ.
ಇಂತಹದೊಂದು ಉಪೇಕ್ಷಾರ್ಹ ಹೇಳಿಕೆ ಕೊಟ್ಟಿರುವ ಪಾಕಿಸ್ತಾನದ ಸಚಿವ ಶೇಕ್ ರಶೀದ್ ಬಗ್ಗೆ ಅನುಕಂಪವಿದೆ. ಒಂದು ದೇಶದ ಸಚಿವ ಹೇಗೆ ಇಷ್ಟೊಂದುಅಸೂಕ್ಷ್ಮನಾಗಬಲ್ಲ? ಧರ್ಮದ ಕಾರಣಕ್ಕಾಗಿ ನಮ್ಮ ದೇಶದ ಜನರೇ ಒಬ್ಬ ಕ್ರಿಕೆಟ್ ಆಟಗಾರರನ್ನು ಟ್ರೋಲ್ ಮಾಡಿ ವಿಲಕ್ಷಣ ಖುಷಿ ಅನುಭವಿಸುತ್ತಾರೆಂದರೆ, ಅವರ ಮನಃಸ್ಥಿತಿಯ ಬಗ್ಗೆ ಏನು ಹೇಳಲಿ? ಈ ಎರಡೂ ಪ್ರಕರಣಗಳು ಅಪಮಾನಕರ.
ಭಾರತ ಮತ್ತು ಪಾಕಿಸ್ತಾನದ ನಡುವಣ ಕ್ರಿಕೆಟ್ ಆಟವನ್ನು ಒಂದು ಪಂದ್ಯದಂತೆ ಪರಿಗಣಿಸದೇ, ವೈರಿರಾಷ್ಟ್ರ ಗಳ ನಡುವಿನ ಯುದ್ಧದಂತೆ ಯಾಕೆ ಪರಿಗಣಿಸುತ್ತಾರೋ ನನಗಿನ್ನೂ ಅರ್ಥವಾಗಿಲ್ಲ. ಎರಡೂ ಟೀಮ್‌ನಲ್ಲಿ ಅದ್ಭುತ ಆಟಗಾರರಿದ್ದಾರೆ, ಅವರ ನಡುವಿನ ಆಟವನ್ನು ಪಂದ್ಯದಂತೆ ನೋಡಬೇಕೇ ವಿನಃ ಅಲ್ಲಿ ಬೇರಿನ್ನೇನೂ ಇರಬಾರದು. ಯಾವ ತಂಡ ಚೆನ್ನಾಗಿ ಆಡುತ್ತದೆಯೋ ಅದು ಗೆಲ್ಲುತ್ತದೆ. ಆದರೆ ಪಾಕ್ ಸಚಿವ ಶೇಕ್ ರಶೀದ್ ನಂತಹ ಕೆಲವು ಮತಾಂಧರು ಮತ್ತು ನಮ್ಮ ದೇಶದ ಕೆಲವರು ಈ ವಿಚಾರದಲ್ಲಿ ಧರ್ಮ ಬೆರೆಸಿ ವಿಕೃತ ಮನಸ್ಥಿತಿ ತೋರುತ್ತಿದ್ದಾರೆ.
ಈಚಿನ ದಿನಗಳಲ್ಲಿ ವಿಚಿತ್ರ ವಾತಾವರಣ ಎಲ್ಲೆಡೆ ನಿರ್ಮಾಣವಾಗಿದೆ. ಪ್ರತಿಯೊಂದನ್ನೂ ಧರ್ಮದೊಂದಿಗೆ ತಳುಕು ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಕ್ರೀಡೆ ಕೂಡ ಇದರಿಂದ ಹೊರತಾಗಿಲ್ಲ ಎಂಬುದು ವಿಷಾದದ ಸಂಗತಿ. ಪಾಕಿಸ್ತಾನಿಗಳು ತಮ್ಮ ತಂಡದ ಗೆಲುವನ್ನು ಸಂಭ್ರಮಿಸುವುದು ಸರಿ, ಆದರೆ ಸಚಿವ ಶೇಕ್ ರಶೀದ್ ಆ ಸಂದರ್ಭದಲ್ಲಿ ಕೆಸರೆರಚುವ ಕೆಲಸ ಮಾಡಿದ್ದಾರೆ, ತನ್ನ ಹೇಳಿಕೆಗಳಿಂದಲೇ ಕುಖ್ಯಾತ ಶೇಕ್ ರಶೀದ್ ಟಿ-೨೦ ವಿಶ್ವ ಕಪ್ ಪಂದ್ಯ ಮುಗಿದ ತಕ್ಷಣ ಹೊರಡಿಸಿರುವ ಟ್ವೀಟ್ ಒಂದರಲ್ಲಿ ‘ಭಾರತದ ಮುಸ್ಲಿಮರ ಭಾವನೆಗಳು ಮತ್ತು ವಿಶ್ವದೆಲ್ಲೆ ಡೆಯ ಮುಸ್ಲಿಮರ ಭಾವನೆಗಳು ಪಾಕಿಸ್ತಾನಿ ಗಳೊಂದಿಗಿದೆ. ಇಸ್ಲಾಮಿನ ಗೆಲುವಿಗೆ ಸ್ವಾಗತ, ಪಾಕಿಸ್ತಾನ್ ಜಿಂದಾಬಾದ್’ ಎಂದಿದ್ದಾರೆ. ಮಹಾ ಸ್ವಾಮೀ, ಕ್ರಿಕೆಟ್‌ನಲ್ಲಿ ನಿಮ್ಮ ಧರ್ಮ ಯಾತಕ್ಕೆ ಬಂತು? ಮತ್ತು ದೇಶವೊಂದರ ಜನರ ಮಧ್ಯೆ ಧರ್ಮ ವನ್ನು ಮುಂದಿಟ್ಟುಕೊಂಡು ಯಾಕೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತೀರಿ?.
ನಿಮ್ಮ ದೇಶ ಇಸ್ಲಾಮಿಕ್ ದೇಶ ಎಂಬುದು ನಿಜವೇ ಹೌದು. ಆದರೆ ಆಟದ ಮೈದಾನ ಧರ್ಮಯುದ್ಧದ ರಣಾಂಗಣ ಅಲ್ಲವಲ್ಲ? ಮತ್ತು ಬಹಳ ಮುಖ್ಯವಾಗಿ ಶೇಕ್ ರಶೀದ್ ಭಾರತದ ಮುಸ್ಲಿಮರ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ? ನಮ್ಮ ದೇಶದಲ್ಲಿ ವೈರತ್ವದ ಬೀಜ ಬಿತ್ತುವುದಕ್ಕೆ ಅವರು ಯತ್ನಿಸುತ್ತಿದ್ದಾರೆ ಎಂಬುದು ನಿಚ್ಚಳವಾದ ಸತ್ಯ. ರಶೀದ್ ಸಾಹೇಬರೇ, ನಮ್ಮ ದೇಶ ಯಾವುದೇ ಧರ್ಮದ ಹಿನ್ನೆಲೆಯನ್ನಿಟ್ಟುಕೊಂಡು ಆಡಳಿತ ನಡೆಸುತ್ತಿಲ್ಲ ಎಂಬುದನ್ನು ನೀವು ಗಮನಿಸ ಬೇಕಿದೆ.
ನಮ್ಮ ದೇಶ ಹಲವು ಬಣ್ಣಗಳ ಹೂವುಗಳ ಒಂದು ಸುಂದರ ತೋಟ. ಈ ತೋಟದ ಹೂವುಗಳು ಸಹಜಸುಂದರವಾಗಿ ಅರಳಿ ಪರಿಮಳ ಚೆಲ್ಲುತ್ತವೆ. ನಾವು ಹಿಂದುಸ್ತಾನಿಗಳು ಈ ಮಣ್ಣಿನ ಭಾಗವಾಗಿ ರುವ ಪ್ರತಿಯೊಂದು ಧರ್ಮದ ಜನರನ್ನೂ ಶತಶತಮಾನಗಳಿಂದ ಸಮಾನವಾಗಿ ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಸಾಹೇಬರೇ, ಒಂದಾನೊಂದು ಕಾಲದಲ್ಲಿ ನೀವು ಕೂಡ ಈ ಭಾರತವೆಂಬ ಹೂವಿನ ತೋಟದ ಭಾಗವಾಗಿದ್ದಿರಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನಿಮ್ಮಂತಹ ಮೂರ್ಖರಿಂದಾಗಿ ಇಂದು ನಿಮ್ಮ ದೇಶ ನರಕ ಸದೃಶ್ಯವಾಗಿದೆ.
ಧರ್ಮವೆಂಬ ಆಫೀಮನ್ನು ನೆಕ್ಕುತ್ತ ನೀವು ನಿಮ್ಮ ದೇಶವನ್ನು ಉದ್ವೇಗದ ಅಮಲಿಗೆ ಒಯ್ದಿದ್ದೀರಿ. ನಿಮ್ಮ ಸ್ವಯಂ-ವಿನಾಶಕಾರಿ ಗುಣದಿಂದ ನೀವು ಬೌದ್ಧಿಕವಾಗಿ ನಾಶವಾಗುತ್ತಿದ್ದೀರಿ. ಇಂಥ ಪ್ರವೃತ್ತಿಯಿಂದ ನೀವು ಹೊರಬರುವಂತಾಗಲಿ ಎಂದು ನಾವು ಆ ದಯಾಮಯ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ, ಏಕೆಂದರೆ ವಿಶ್ವದ ಜನರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರೆಂಬ ಪರಿಕಲ್ಪನೆ ನಮ್ಮದು. ಇಡೀ ವಿಶ್ವದ ಮುಸ್ಲಿಮರ ಪ್ರತಿನಿಽತ್ವ ವಹಿಸುವ ಜಹಗೀರನ್ನು ನಿಮಗೆ ಕೊಟ್ಟವರಾರು ಸ್ವಾಮಿ? ನೀವು ನಿಮ್ಮ ದೇಶದ ಪ್ರತಿನಿಽತ್ವಕ್ಕೂ ಲಾಯಕ್ಕಾದವರಲ್ಲ.
ಗಮನಿಸಿ ವಿಶ್ವದ ಮುಸ್ಲಿಂ ಜನಸಂಖ್ಯೆಯ ೧೨.೫% ಜನ ಇಂಡೋನೇಶಿಯಾದಲ್ಲಿ ವಾಸವಿದ್ದಾರೆ. ೧೧% ರಷ್ಟು ಜನ ಪಾಕಿಸ್ತಾನದಲ್ಲಿದ್ದಾರೆ ಮತ್ತು ಅದಕ್ಕಿಂತಕೊಂಚ ಕಮ್ಮಿ ಪ್ರಮಾಣದ ಮುಸ್ಲಿಮರು ಭಾರತ ದಲ್ಲೂ ಇದ್ದಾರೆ. ಇದನ್ನು ಬಹಳ ಮುಖ್ಯವಾಗಿ ಗಮನದಲ್ಲಿಡಿ. ಭಾರತದ ಮುಸ್ಲಿಮರು ಶತಪ್ರತಿ ಶತ ತಮ್ಮ ತಾಯ್ನಾಡು ಭಾರತದೊಂದಿಗೆ ತಮ್ಮನ್ನು ಬೆಸೆದುಕೊಂಡಿದ್ದಾರೆ. ನೀವು ಅಬ್ದುಲ್ ಹಮೀದ್, ಎ.ಪಿ.ಜೆ. ಅಬ್ದುಲ್ ಕಲಾಂ ರಂತಹ ಮಹನೀಯರ ಹೆಸರುಗಳನ್ನು ಕೇಳಿರಬಹುದು. ನಾವು ಇಂದಿಗೂ ಈ ಮಹನೀಯರನ್ನು ಗೌರವಾದರಗಳಿಂದ ಸ್ಮರಿಸುತ್ತೇವೆ. ನಿಮ್ಮ ದೇಶದ ಅಣುವಿಜ್ಞಾನಿ ಖದೀರ್ ಖಾನ್ ಅಣುಬಾಂಬ್ ತಯಾರಿಕಾ ಫಾರ್ಮುಲಾವನ್ನು ಮಾರಾಟ ಮಾಡಿ ಜೀವಿತ ಕಳೆದಿದ್ದು ಕೂಡ ನಮಗೆ ಗೊತ್ತಿದೆ.
ಇನ್ನೊಬ್ಬ ಪಾಕಿಸ್ತಾನಿ ನಾಯಕ ಅಸಾದ್ ಉಮರ್ ಒಂದು ಆಕ್ಷೇಪಾರ್ಹ ಟ್ವೀಟನ್ನು ಮಾಡಿದ್ದಾರೆ. ಆತ ಬರೆಯುತ್ತಾರೆ ‘ನಾವು ಮೊದಲು ಅವರನ್ನು ಸೋಲಿಸುತ್ತೇವೆ ಮತ್ತು ಅವರು ಮೈದಾನದಲ್ಲಿ ಬಿದ್ದಾಗ ನಾವು ಚಹಾ ಕೊಡುತ್ತೇವೆ’. ಅತಿಸೂಕ್ಷ್ಮವಾದ ಇಂತಹ ಹೇಳಿಕೆ ಮತ್ತು ಅಭಿಪ್ರಾಯಗಳಿಗೆ ಏನೆನ್ನೋಣ. ಪಾಕಿಸ್ತಾನ ಈ ಮೊದಲೂ ಇಂತಹ ಅಸಂಬದ್ಧ ಪ್ರತಿಕ್ರಿಯೆಗಳನ್ನು ಮಾಡಿದೆ. ೨೦೦೭ರ ಟಿ-೨೦ ವಿಶ್ವಕಪ್ ಆಟದಲ್ಲಿ ಭಾರತ ಪಾಕಿಸ್ತಾನ ವನ್ನು ಸೋಲಿಸಿತ್ತು. ಆ ಸಂದರ್ಭದಲ್ಲಿ ಪಾಕಿಸ್ತಾನ್ ತಂಡದ ನಾಯಕ ಶೋಯಬ್ ಮಲಿಕ್ ವಿಶ್ವದ ಮುಸ್ಲಿಮ್ ಸಮುದಾಯದಲ್ಲಿ ಕ್ಷಮಾಪಣೆ ಕೇಳಿದ್ದ ರು. ಯಾಕೆ? ವಿಶ್ವದ ಮುಸ್ಲಿಮರೆಲ್ಲರಿಗೆ ಪಾಕಿಸ್ತಾನ ನಾಯಕ ಸ್ಥಾನದಲ್ಲಿದೆಯೇ? ಆ ಪಂದ್ಯದಲ್ಲಿ ಭಾರತದ ಬೌಲರ್ ಇರ್ಫಾನ್ ಪಠಾಣ್ ಪಾಕಿಸ್ತಾವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆತನಿಗೆ ಪಂದ್ಯಶ್ರೇಷ್ಠ ಮನ್ನಣೆ ಕೂಡ ಸಿಕ್ಕಿತ್ತು. ಇದೊಂದೇ ಅಲ್ಲ ಪಾಕಿಸ್ತಾನ ತಂಡದ ನಾಯಕ ಶೋಯಬ್ ಮಲಿಕ್‌ನನ್ನು ಪೆವಿಲಿಯನ್ ಗೆ ಅಟ್ಟುವ ಕೆಲಸವನ್ನು ಆತ ಮಾಡಿದ್ದ. ಭಾರತದ ತಂಡದಲ್ಲಿ ಆಟಗಾರರ ಆಯ್ಕೆ ನಡೆಸುವಾಗ ಅವರ ಜಾತಿ-ಧರ್ಮ ಗಳ ಪರಿಗಣನೆ ಮಾಡುವುದಿಲ್ಲ.
ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿರುವ ದೇಶ. ಪಾಕಿಸ್ತಾನಿಗಳೇ ನೆನಪಿಡಿ, ಅಜರುದ್ದೀನ್ ನಾಯಕತ್ವದಲ್ಲಿ ಭಾರತ ಅನೇಕ ಬಾರಿ ನಿಮ್ಮ ತಂಡವನ್ನು ಸೋಲಿಸಿದೆ. ಆದರೆ ಪಾಕಿಸ್ತಾನಿಗಳು ಇಷ್ಟೊಂದು ಸಂಕುಚಿತ ಮನಃಸ್ಥಿತಿಯವರಾಗಿ ನಡೆದುಕೊಂಡಿದ್ದನ್ನು ನಾನು ಹಿಂದೆಂದೂ ಕಂಡಿಲ್ಲ. ರಶೀದ್ ಹೇಳಿಕೆ ಹಲವು ಆಕ್ರೋಶಗಳಿಗೆ ಕಾರಣವಾಗಿದೆ. ಬಹಳ ಹಿಂದೆ ಪಾಕಿಸ್ತಾನದ ಲಾಹೋರಿನಲ್ಲಿ ಕ್ರಿಕೆಟ್ ಪಂದ್ಯವೊಂದು ನಡೆದಾಗ ಭಾರತ ಗೆದ್ದಿತ್ತು. ಆಗ ಅಲ್ಲಿ ಹಮೀದ್ ರೆಹಮಾನಿ ಮತ್ತು ಸಾದಿಯಾ ಎಂಬವರು ಪಾಕಿಸ್ತಾನದವರಾಗಿದ್ದರೂ ಸಹ ಭಾರತವನ್ನು ಬೆಂಬಲಿಸಿ ಅಲ್ಲಿ ತ್ರಿವರ್ಣಧ್ವಜವನ್ನು ಹಾರಿಸಿದ್ದರು ಎಂಬುದು ನನಗಿನ್ನೂ ನೆನಪಿದೆ.. ಕ್ರೀಡಾ ಮನೋಭಾವವೆಂದರೆ ಇದು. ನಮ್ಮ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಅಂತಹ ಕ್ರೀಡಾಮನೋಭಾವವನ್ನು ಮೆರೆದಿದ್ದಾರೆ.
ಆದರೆ ಕೆಲವು ಮತಾಂಧರು ಭಾರತ ತಂಡದ ಆಟಗಾರ ಮಹಮದ್ ಶಮಿಯನ್ನು ಟ್ರೋಲ್ ಮಾಡಿದ್ದಾರೆ. ಇದರಿಂದ ದೇಶಕ್ಕೆ ಇರುಸುಮುರುಸಾಗಿದೆ. ಟ್ರೋಲಿಗರ ವಿರುದ್ಧ ಈ ಕಾರಣಕ್ಕಾಗಿಯೇ ಭಾರತೀಯ ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಮದ್ ಶಮಿಯನ್ನು ಬೆಂಬಲಿಸಿದ ಎಲ್ಲರೂ ಇಂತಹ ಅಸಂಬದ್ಧಗಳು ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ. ಆತನನ್ನು ಯಾತಕ್ಕೆ ದೂಷಿಸಬೇಕು? ಒಂದೊಮ್ಮೆ ಬ್ಯಾಟಿಂಗ್ ವೈಫಲ್ಯವಾದರೆ ಬೇರೆ ಆಟಗಾರರನ್ನಾದರೂ ಯಾತಕ್ಕೆ ನಿಂದಿಸಬೇಕು? ಇಂತಹ ಪ್ರಕರಣಗಳಿಂದ ದೇಶದ ಅಲ್ಪಸಂಖ್ಯಾತರ ಮನಕ್ಕೆ ಘಾಸಿಯಾಗುತ್ತದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವಿಷಕಾರುವ ಕೆಲಸವನ್ನು ಯಾರಾದರೂ ಮಾಡುತ್ತಿದ್ದರೆ ಅದನ್ನು ಸಹಿಸುವುದಾದರೂ ಹೇಗೆ? ‘ವಸುಧೈವ ಕುಟುಂಬಕಂ’ಎಂಬ ವಿಶಾಲ ಮನೋಭಾವದ, ಆದರ್ಶ ಚಿಂತನೆಯನ್ನು ಹೊಂದಿರುವ, ಇಡೀ ವಿಶ್ವದಲ್ಲಿಯೇ ಅದ್ವಿತೀಯವೆನಿಸಿರುವ ದೇಶದವರು ನಾವು. ನಮ್ಮಲ್ಲಿ ದ್ವೇಷಕ್ಕೆ ಜಾಗವೇ ಇಲ್ಲ. ಪ್ರತಿಯೊಂದು ಧರ್ಮವೂ ಗೌರವಕ್ಕೆ ಅರ್ಹವಾಗಿದೆ. ಧರ್ಮಕ್ಕೆ ಅದರದೇ ಆದ ಸ್ಥಾನವಿದೆ ಮತ್ತು ಕ್ರೀಡೆ ಅದೆಲ್ಲಕ್ಕಿಂತ ಪ್ರತ್ಯೇಕವಾದುದು. ಕ್ರೀಡಾಸೂರ್ತಿಯನ್ನು ಮೈಗೂಡಿಸಿಕೊಂಡು ಬಾಳುವುದನ್ನು ಇನ್ನಾದರೂ ಕಲಿಯಿರಿ.