ಇಪ್ಪತ್ತು ಜಿಲ್ಲೆಗಳಲ್ಲಿ ಅಪೌಷ್ಠಿಕತೆ ಗಣನೀಯ ಇಳಿಕೆ
ಕರ್ನಾಟಕವನ್ನು ಅಪೌಷ್ಟಿಕತೆ ಮುಕ್ತ ರಾಜ್ಯ ಮಾಡಲು ರಾಜ್ಯ ಸರಕಾರ ರೂಪಿಸಿದ ಯೋಜನೆಗಳು ಫಲಪ್ರದವಾಗುತ್ತಿದೆ. 31ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 5 ವರ್ಷದೊಳಗಿನ ಮಕ್ಕಳ ಅಪೌಷ್ಟಿಕತೆ ಗಣನೀಯವಾಗಿ ಇಳಿಕೆಯಾಗಿದೆ.
ನೀತಿ ಆಯೋಗ ವರದಿ ಪ್ರಕಾರ ಕರ್ನಾಟಕದ 14 ಜಿಲ್ಲೆಗಳು ರಾಜ್ಯ ಸರಾಸರಿಗಿಂತ ಉತ್ತಮ ಸಾಧನೆ ತೋರಿದ್ದು, ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಅಪೌಷ್ಟಿಕತೆ 20.5 ರಷ್ಟು ಕಡಿಮೆಯಾಗಿದೆ. ಕರೋನಾ ಸೋಂಕಿನ ನಡುವೆಯೂ ಅಪೌಷ್ಟಿಕತೆ ಗಣನೀಯವಾಗಿ ಇಳಿಕೆಯಾಗಿರುವುದು ಗಮನಾರ್ಹ ವಿಚಾರ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಇದೀಗ ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಶೇ. 0.21 ಕುಸಿತ ಕಂಡಿದೆ. ಐದು ವರ್ಷಗಳ ಹಿಂದೆ ಶೇ. 0.51 ರಷ್ಟಿದ್ದದ್ದು, ಈ ವರ್ಷ ಶೇ. 0.30ಕ್ಕೆ ಇಳಿದಿದೆ.
ಅಂದರೆ 2015-16ರಲ್ಲಿ ಅಂಗನವಾಡಿಗಳಿಗೆ ಬರುವ 42 ಲಕ್ಷಕ್ಕೂ ಅಧಿಕ ಮಕ್ಕಳನ್ನು ತೂಕ ಮಾಡಿದಾಗ 21,652 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಂಡು ಬಂದಿತ್ತು. ಈ ವರ್ಷ (2019-20) 37 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ತೂಕ ಮಾಡಿದಾಗ 11,265ಕ್ಕೆ ಇಳಿದಿದೆ. ಅತಿ ಹೆಚ್ಚು ಅಪೌಷ್ಟಿಕತೆ ಮಕ್ಕಳನ್ನು(1249) ಹೊಂದಿರುವ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದರೆ, ಬಳ್ಳಾರಿ 1134 ಮಕ್ಕಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೇವಲ 24 ಮಕ್ಕಳಲ್ಲಿ ಅಪೌಷ್ಟಿಕತೆ ಕಾಣಿಸಿ ಕೊಂಡಿದೆ.